ತೇಜಾವತಿ ಎಚ್ ಡಿ ಓದಿದ ‘ದಿಗ್ವಿಜಯ’

ಬದುಕಿದರೆ ಸ್ವಾತಂತ್ರ್ಯ, ಸತ್ತರೆ ವೀರ ಸ್ವರ್ಗ – ಅಹಿಲ್ಯಾಬಾಯಿ ಹೋಳ್ಕರ್ 

ತೇಜಾವತಿ ಎಚ್ ಡಿ

ಹಿರಿಯ ಕವಿಗಳಾದ ದ್ವಾರನಕುಂಟೆ ಪಾತಣ್ಣನವರು ಬರೆದ ‘ದಿಗ್ವಿಜಯ’ ಒಂದು ಐತಿಹಾಸಿಕ ನಾಟಕ. ಹದಿನೆಂಟನೆಯ ಶತಮಾನದಲ್ಲಿ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದ ಕೆಲವು ಭಾಗಗಳು ಪೇಶ್ವೆಗಳಿಂದ ಆಳಲ್ಪಡುತ್ತಿದ್ದವು. ಆ ಸಂದರ್ಭದಲ್ಲಿ ಇಂದಿನ ಮಧ್ಯ ಪ್ರದೇಶದ ಮಾಳ್ವ ಪ್ರಾಂತ್ಯದ ಸುಭೇದಾರ್ ಆಗಿ ಮಲ್ಹಾರರಾವ್ ಕಾರ್ಯ ನಿರ್ವಹಿಸುತ್ತಿದ್ದರು. ಮಲ್ಹಾರರಾವ್ ರ ಸೊಸೆಯಾಗಿ ಬಂದ ಅಹಿಲ್ಯಾಬಾಯಿ ಬಾಲ್ಯ ವಿವಾಹವಾಗಿ ಆ ಮನೆಗೆ ಮಗನೂ ಮಗಳೂ ಸೊಸೆಯೂ ಆಗಿ ತನ್ನ ಕೊನೆಯ ಉಸಿರಿನವರೆಗೂ ತನ್ನ ಪ್ರಾಂತ್ಯದ ರಕ್ಷಣೆಗಾಗಿ ಶ್ರಮಿಸಿದ ದಿಟ್ಟ ಆಡಳಿತಗಾರ್ತಿ.

ಅಹಿಲ್ಯಾಬಾಯಿಯ ತಂದೆ ಮಾಣಕೋಜಿ ಸಿಂಧೆ ಹಾಗೂ ತಾಯಿ ಸುಶೀಲಬಾಯಿಯ ನಿರೂಪಣೆಯೊಂದಿಗೆ ಆರಂಭವಾಗುವ ನಾಟಕವು ಪೇಶ್ವೆಯ ಬಲಗೈ ಭಂಟನಾಗಿದ್ದ ಮಲ್ಹಾರರಾವ್ ಉತ್ತರ ಭಾರತದ ದಂಡಯಾತ್ರೆ ಮುಗಿಸಿ ಪೂನಾಕ್ಕೆ ಹಿಂದಿರುಗುವ ವೇಳೆ ಶಂಕರನ ದೇವಸ್ಥಾನದ ನದಿ ದಡದಲ್ಲಿ ಮೊದಲ ಬಾರಿಗೆ ಅಹಿಲ್ಯಾಬಾಯಿಯ ಭೇಟಿಯಾಗುತ್ತದೆ. 8 ರ ವಯಸ್ಸಿನ ಅಹಿಲ್ಯಾಬಾಯಿ ಮರಳಿನಲ್ಲಿ ಶ್ರಮದಿಂದ ಕಟ್ಟಿದ ಶಿವಲಿಂಗಡೊಡನೆ ಸಂಗಡಿಗರೊಂದಿಗೆ ಆಡುತ್ತಿರುವಾಗ ಮಲ್ಹಾರರಾಯ ಕುದುರೆಯ ಮೇಲೆ ಬಂದದ್ದನ್ನು ಕಂಡ ಗೆಳತಿಯರು ಚೆಲ್ಲಾಪಿಲ್ಲಿಯಾಗಿ ಓಡಿದರೂ ಅಹಿಲ್ಯಾ ತಾನೊಬ್ಬಳೇ ನಿಂತಿರುತ್ತಾಳೆ.

“ಒಂದು ವೇಳೆ ಕುದುರೆ ತುಳಿದಿದ್ದರೆ?” ಎಂದು ಮಲ್ಹಾರರಾಯ ಪ್ರಶ್ನಿಸಿದಾಗ “ಪರಿಶ್ರಮದಿಂದ ಕಟ್ಟಿದ ಈ ಶಿವಲಿಂಗವನ್ನು ರಕ್ಷಿಸುವುದು ನನ್ನ ಹೊಣೆ” ಎನ್ನುವ ದಿಟ್ಟೆಯ ಭಕ್ತಿ- ಭಾವದ ಉತ್ತರಕ್ಕೆ ಮಾರುಗೋಗುವ ಮಲ್ಹಾರರಾಯ ಕೂಡಲೇ ಅವಳ ತಂದೆ ಮಣಕೋಜಿಯನ್ನು ತನ್ನ ದ್ವಾರಪಾಲಕರ ಮೂಲಕ ಕರೆಸಿ ಅಹಿಲ್ಯಾಳನ್ನು ತನ್ನ ಮಗ ಖಂಡೇರಾವ್ ಗೆ ಮದುವೆ ಮಾಡುವ ಪ್ರಸ್ತಾಪವಿಡುತ್ತಾನೆ. ಆಗ ಮಣಕೋಜಿ ಸುಭೇದಾರರಾದ ನೀವೆಲ್ಲಿ, ಕಂಬಳಿ ನೇಯುವ ನಾವೆಲ್ಲಿ ಎನ್ನುತ್ತ ಮಲ್ಹಾರರಾಯರ ಧೈರ್ಯದ ಮೇರೆಗೆ ಕೊನೆಗೆ ಪರಮೇಶ್ವರನನ್ನು ನೆನೆದು ಅನುಮತಿಸುತ್ತಾನೆ. ವೈಭವದಿಂದ ಮನೆ ತುಂಬಿಸಿಕೊಂಡ ಮಲ್ಹಾರರಾಯ ಹಾಗೂ ಗೌತಮಿಬಾಯಿ ಸಾಕ್ಷಾತ್ ಸೊಲ್ಲಾಪುರದ ಲಕ್ಷ್ಮಿಯೆಂದೇ ಭಾವಿಸುತ್ತಾರೆ.

ಮಾಳ್ವ ಪ್ರಾಂತ್ಯಕ್ಕೆ ಸಮರ್ಥ ವಾರಸುದಾರನನ್ನಾಗಿ ಮಾಡಲು ಖಂಡೇರಾವ್ ನಿಗೆ ಹಾಗೂ ರಾಜನೀತಿ, ರಾಜ್ಯಡಳಿತದ ಶಿಕ್ಷಣವನ್ನು ಅಹಿಲ್ಯಾಳಿಗೆ ನೀಡುತ್ತಾರೆ. ಆದರೆ ಭಾಂಗ, ಫುಟಿ, ಮದ್ಯವ್ಯಸನಗಳಿಗೆ ದಾಸನಾಗಿದ್ದ ಮಗನನ್ನು ಸರಿದಾರಿಗೆ ತರುವ ಪ್ರಯತ್ನಗಲೆಲ್ಲ ವಿಫಲವಾಗಿ ಮಗನ ಧೈರ್ಯವನ್ನು ಸೊಸೆಯಲ್ಲಿ ಗುರುತಿಸಿದ್ದ ಮಲ್ಹಾರರಾವ್ ಅವಳಿಗೆ ಎಲ್ಲ ರೀತಿಯ ಯುದ್ಧ ಕಲೆಗಳಲ್ಲಿ ತರಬೇತಿ ಕೊಡಿಸುತ್ತಾರೆ. ಅದರಲ್ಲಿ ದುಪ್ಪಟ್ಟು ಆಸಕ್ತಿ ತೋರಿ ಎಲ್ಲವನ್ನೂ ಕರಗತ ಮಾಡಿಕೊಂಡ ಅಹಿಲ್ಯಾ ಇಂಧೂರಿನ ಭಾವಿ ಸುಭೇದಾರನಾಗಬೇಕಿದ್ದ ತನ್ನ ಗಂಡನನ್ನು ದುಶ್ಚಟಗಳಿಂದ ದೂರ ಮಾಡಿ ಅವನಲ್ಲಿದ್ದ ಕೀಳರಿಮೆ, ಅಸೂಯೆ ಗುಣಗಳನ್ನು ಬಿಡಿಸಿ ಪ್ರಾಂತ್ಯದ ಶ್ರೇಯೋಭಿವೃದ್ಧಿ, ಶೌರ್ಯ, ಸಾಹಸದೆಡೆಗೆ ಪ್ರೇರೇಪಿಸುತ್ತಾಳೆ. ಅದಾಗಲೇ ಮದಿರೆ ಮಾನಿನಿಯರ ಚಟಕ್ಕೆ ಬಿದ್ದ ಖಂಡೇರಾವ್ ನಿಗೆ ಮನೆಯಲ್ಲಿ ತನಗಿಂತ ಹೆಚ್ಚು ಪ್ರಾಶಸ್ತ್ಯ ಅಹಿಲ್ಯಾಗೆ ಸಿಕ್ಕಿದ್ದರ ಬಗ್ಗೆ ಅಸಮಾಧಾನ ಉಂಟಾಗಿ ಸಂಬಳಕ್ಕಾಗಿ ಘರ್ಜಿಸಿ ಲೆಕ್ಕಪತ್ರದ ಪುಸ್ತಕ ಎಸೆದಾಗ ಆಸ್ಥಾನದ ರಾಣಿಯರಾಗಿ ಅತ್ತೆ ಸೊಸೆ ಕಠಿಣ ನಿರ್ಧಾರ ತೆಗೆದುಕೊಂಡು 25 ನಾಣ್ಯಗಳ ದಂಡ ವಿಧಿಸುವುದು ನಿಜಕ್ಕೂ ಆದರ್ಶನೀಯ.

ತೆರಿಗೆಯ ಹಣ ಪ್ರಜೆಗಳ ಅಭ್ಯುದಯಕ್ಕೇ ಬಳಕೆಯಾಗಬೇಕೆಂಬ ಬಯಕೆ ಅಹಿಲ್ಯಾದ್ದು. ಮಲ್ಹಾರರಾಯ ದಿಗ್ವಿಜಯಕ್ಕಾಗಿ ಹೋದಾಗ ಮಂಡಲೀಕರ ಸಮಸ್ಯೆಗಳಿಗೆ ತಾವೇ ಖುದ್ದು ಸ್ಪಂದಿಸಿ, ಪರಿಶೀಲಿಸಿ ಪರಿಹರಿಸುವ ಗೌತಮಿಬಾಯಿ ಗಂಡನಿಗೆ ತಕ್ಕ ಹೆಂಡತಿ. ತಂದೆಯ ಕೆಟ್ಟ ಚಟಗಳನ್ನೇ ಅಳವಡಿಸಿಕೊಳ್ಳುವ ಮಗ ಮಾಲೇರಾವ್ ಮಾಂಡಲೀಕರ ಪಾದರಕ್ಷೆಯೊಳಗೆ ಚೇಳು ಬಿಟ್ಟು ಕಚ್ಚಿಸಿ ಅವರ ನೋವಿನಲ್ಲಿ ತನ್ನ ಖುಷಿ ಕಾಣುವ ಕ್ರೂರ ಮನಸ್ಕನಾಗಿ ಕಾಣುತ್ತಾನೆ.

ಅತ್ತ ಮಲ್ಹಾರರಾಯ ದಿಗ್ವಿಜಯದಿಂದ ಮರಳಿ ಬ್ರಿಟೀಷರ ಆಕ್ರಮಣವಾದಿ ನೀತಿಯ ಬಗ್ಗೆ ಎಲ್ಲರನ್ನು ಎಚ್ಚರಿಸುತ್ತ ಒಗ್ಗಟ್ಟಿನ ಮಹತ್ವವನ್ನು ತಿಳಿಸಿಕೊಡುತ್ತಾನೆ. ತನ್ನ ವರ್ತನೆಗಳನ್ನು ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡ ಖಂಡೇರಾವ್ ಮರಾಠಿಗರ ಪರ ಯುದ್ಧ ಮಾಡುವಾಗ ಕುಂಭೇರು ಕೋಟೆಯ ಮೇಲೆ ಚಾಟರ ಸೂರಜಮಲ್ಲನ ಗುಂಡಿಗೆ ಬಲಿಯಾಗುತ್ತಾನೆ. ಆಗಿನ ಪದ್ಧತಿಯಂತೆ ಸತಿಧರ್ಮ ಪಾಲನೆಗಾಗಿ ಸಹಗಮನಕ್ಕೆ ಮುಂದಾದ ಅಹಿಲ್ಯಾಳನ್ನು ಮನವೊಲಿಸುವಲ್ಲಿ ಯಶಸ್ವಿಯಾದ ಅತ್ತೆ ಮಾವ ಮಕ್ಕಳಾದ ಮಾಲೇರಾವ್ ಹಾಗೂ ಮುಕ್ತಾಳ ಲಾಲನೆ ಪೋಷಣೆಯ ಜೊತೆಗೆ ಮಾಳ್ವ ಪ್ರಾಂತ್ಯದ ಸಂಪೂರ್ಣ ಜವಾಬ್ದಾರಿ ವಹಿಸುತ್ತಾರೆ.

ಸತಿಪದ್ಧತಿಯಿಂದಲೇ ಸತಿಗೆ ಮೋಕ್ಷವೆಂಬ ಆ ಸಮಯದಲ್ಲಿ ಅಹಿಲ್ಯಾಳ ಸತಿ ಹೋಗುವುದನ್ನು ತಪ್ಪಿಸಿದದಾಗ ತಮ್ಮ ಸಂಬಂಧಿಕರು, ಅಸ್ಥಾನಿಕರೇ ವಿರೋಧ ವ್ಯಕ್ತಪಡಿಸಿದಾಗ  ಜೀಜಾಬಾಯಿ ಮೊದಲಾದ ಉದಾಹರಣೆ ಕೊಟ್ಟು ಸಮರ್ಥಿಸಿಕೊಂಡ ಮಲ್ಹಾರರಾಯನ  ಜೀವನಪ್ರೀತಿ ಮೆಚ್ಚುವಂತದ್ದು. ಮುಂದೆ ಪುತ್ರಶೋಕ ಹಾಗೂ ತೀವ್ರ ಅಸ್ತಮಾದಿಂದ ಗೌತಮಿಬಾಯಿ ಮಡಿದರೆ ಗ್ವಾಲಿಯರ್ ಬಳಿ ಆಲಂಪುರದಲ್ಲಿ ಮಾಲೇರಾವ್ ನನ್ನು ತುಕ್ಕೋಜಿಯ ಕೈಗಿಟ್ಟು ಕೊನೆಯುಸಿರೆಳೆಯುತ್ತಾನೆ.

ಮಾಲೇರಾವ್ ನಿಗೆ ನೆಪಮಾತ್ರದ ಪಟ್ಟಭಿಷೇಕವಾಗಿ ಅಹಿಲ್ಯಾ ಆಡಳಿತ ನಡೆಸುತ್ತಾಳೆ. ಕ್ರೂರ ಮನಸ್ಥಿತಿ ಹೊಂದಿದ್ದ ಮಾಲೇರಾವ್ ನೃತ್ಯಗಾತಿಯಾಗಿದ್ದ ಹೀರಾಳಿಗೆ ಮಾರುಹೋಗಿ ಅವಳನ್ನು ಮಾತನಾಡಿಸಿದ ಪರಿಚಿತನನ್ನು ಸಂಶಯದಿಂದ ಕೊಲೆಗೈದ. ಕೊಲೆಯಾದ ವ್ಯಕ್ತಿಯ ದೆವ್ವವಾಗಿ ಕಾಡಿದಾದ ಮಾನಸಿಕ ಅಸ್ಸ್ವಸ್ಥ ತೆಗೆ ಬಲಿಯಾದ ಮಾಲೇರಾವ್ ನನ್ನು ನೋಡಿದ ಅಹಿಲ್ಯಾ ತಾನೇ ಎಲ್ಲ ಜವಾಬ್ದಾರಿ ವಹಿಸಿಕೊಂಡಳು.

ಪ್ರಾಂತ್ಯ ರಕ್ಷಣೆಗಾಗಿ ತನ್ನ ಏಕೈಕ ಪುತ್ರಿಯನ್ನು ಒಬ್ಬ ಸಾಮಾನ್ಯ ವೀರ ಯಶವಂತರಾವ್ ಫಣಸೆಯೊಂದಿಗೆ ವಿವಾಹ ಮಾಡಿಸಿದ್ದು ಒಂದು ಇತಿಹಾಸ. ” ನಾನು ಜಾತಿಯನ್ನು ಮನ್ನಿಸುವುದಿಲ್ಲ, ವ್ಯಕ್ತಿಯ ಕರ್ತವ್ಯವನ್ನು ನೋಡುತ್ತೇನೆ. ಮಾನವ ಕುಲ ಒಂದೇ. ವೀರತ್ವವೇ ಅವನ ಜಾತಿ ಶೌರ್ಯವೇ ಅವನ ಕುಲ” ಈ ಮಾತು ಅಹಿಲ್ಯಾಳ ಮಾನವಪ್ರಜ್ಞೆಗೆ ಸಾಕ್ಷಿ. ಆದರೆ ಯಶವಂತರಾವ್ ಕೆಲವೇ ಸಮಯದಲ್ಲಿ ಕಾಲರಾ ಬೇನೆಗೆ ತುತ್ತಾಗಿ ಮುಕ್ತಾಬಾಯಿ ಸತಿಹೋದಳು.

ಎಲ್ಲರನ್ನೂ ಕಳೆದುಕೊಂಡ ಅಹಿಲ್ಯಾ ಒಂಟಿಯಾದಾಗ ಅಲ್ಲಿಯವರೆಗೂ ನಂಬಿಕಸ್ಥ ಸೇನಾಧಿಪತಿಯಾಗಿದ್ದ ತುಕ್ಕೋಜಿರಾವ್ ಕುತಂತ್ರಿಯಾದ. ರಾಣಿಯ ಅನುಮತಿಯಿಲ್ಲದೆ ಅರಮನೆಯ ಬೊಕ್ಕಸವನ್ನು ಖರ್ಚು ಮಾಡಿದ್ದ. ನಂಬಿಕಸ್ಥ ಗೋಪಾಲಕರ ವರ್ಗಾವಣೆ, ದತ್ತು ಪದ್ದತಿಯ ವಿರೋಧ, ರೈತರ ಮೇಲೆ ಹೆಚ್ಚಿನ ತೆರಿಗೆ ಹೀಗೆ ಎಲ್ಲವನ್ನೂ ಅಸ್ಥವ್ಯಸ್ತಗೊಳಿಸಿದ್ದ ತುಕ್ಕೋಜಿಗೂ ಅಹಿಲ್ಯಾಗೂ ನಡೆದ ತೀಕ್ಷ್ಣ ಮಾತುಕತೆಯನ್ನು ಗಮನಿಸಿದ ಮಹಾದಾಜೀ ರಾಣಿಗೆ “ಪುರುಷರು ವಿರುದ್ಧ ಬಂದರೆ ಏನು ಮಾಡುವಿರಿ” ಎನ್ನುವನು.

ಮಾರ್ನುಡಿಯಾಗಿ ಅಹಿಲ್ಯಾ “ಧೈರ್ಯವಿದ್ದರೆ ಇಂದೂರ್ ಮೇಲೆ ಆಕ್ರಮಣ ಮಾಡಿ. ಅದೇ ದಿನ ನಿಮ್ಮ ಕಾಲುಗಳಿಗೆ ಸರಪಳಿ ತೊಡಿಸದಿದ್ದರೆ ನಾನು ಸುಭೇದಾರರ ಸೊಸೆಯೇ ಅಲ್ಲ” ಎಂದಳು. ಇಂಥ ದಿಟ್ಟ ಮಹಿಳೆ ಅಹಿಲ್ಯಾ ತನ್ನ ಸ್ವಂತ ಖಜಾನೆಯಿಂದ ಸೈನ್ಯಕ್ಕಾಗಿ 3 ಲಕ್ಷ ವ್ಯಯಿಸುತ್ತಿದ್ದಳು. ಇಂಗ್ಲೀಷರ ಅಧಿಕಾರ ದಾಹವನ್ನು ಗಮನಿಸಿದ್ದ ಅಹಿಲ್ಯಾ ಸೌಹಾರ್ದತೆಯಿಂದ ಇರುವಂತೆ ನಾನಾ ಫಡನವೀಸನಿಗೆ ಪತ್ರ ಬರೆಯುವುದಾಗಿ ತಿಳಿಸಿದಳು.

ನಾಡ ರಕ್ಷಣೆಗಾಗಿ ಸಾಕಷ್ಟು ಮದ್ದುಗುಂಡು ತಯಾರಿಸಿದ್ದರು. ಆದರೆ ವಾರಸುದಾರರಿಲ್ಲದ ಗದ್ದಿಗೆ ಮೇಲೆ ಕಣ್ಣಿಟ್ಟು ದಿವಾನ್ ಗಂಗಾಧರನು ಪೇಶ್ವೆ ರಘುನಾಥರಿಗೆ ರಹಸ್ಯ ಪತ್ರ ರವಾನಿಸಿದ್ದನು. ದಿಕ್ಕಿಲ್ಲದ ಸಿಂಹಾಸನಕ್ಕಾಗಿ ರಾಘೋಬಾ ರ ಕುತಂತ್ರದಿಂದ ಮಾಳ್ವ ಪ್ರಾಂತ್ಯ ಕಬಳಿಕೆಗಾಗಿ ಹುನ್ನಾರ ಹೂಡಿದ್ದ ಗಂಗೋಬಾ ತಾತ್ಯಾನ ವಿರುದ್ಧ ಹೋರಾಡಲು ಪ್ರಜೆಗಳ ಸಭೆಕರೆದು ತಾನೇ ದಂಡಾಧಿಕಾರಿಯಾಗಿ ಧುಮುಕುವುದಾಗಿ ತೀರ್ಮಾನಿಸಿ ಪ್ರತಿ ಪ್ರಜೆಯನ್ನೂ ಯೋಧರಾಗಿ ನಿಲ್ಲಿರಿ ಎಂದು ಕರೆ ನೀಡಿದಳು. “ಬದುಕಿದರೆ ಸ್ವಾತಂತ್ರ್ಯ, ಸತ್ತರೆ ವೀರ ಸ್ವರ್ಗ” ವೆಂಬ ಘೋಷಣೆಯೊಂದಿಗೆ ಹರಹರ ಮಹಾದೇವ್ ಮುಗಿಲುಮುಟ್ಟಿತ್ತು. ಕೊನೆಗೆ ಅಹುಲ್ಯಾಳ ಯುದ್ಧ ಸನ್ನದ್ಧತೆಗೆ ಹೆದರಿದ ರಾಘೋಬಾ ಯುದ್ಧದಿಂದ ಹಿಂದೆ ಸರಿದನು. 

ಹೀಗೆ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯ ನಡುವೆ ಹದಿನೆಂಟನೆ ಶತಮಾನದಲ್ಲೇ ಒರ್ವ ಮಹಿಳೆಯಾಗಿ ಆಡಳಿತದಲ್ಲಿ ತೋರಿದ ಜಾಣ್ಮೆ, ಕೌಟುಂಬಿಕ ನಿರ್ವಹಣೆ, ಕೈಗೊಂಡ ಸುಧಾರಣಾ ಕ್ರಮಗಳೆಲ್ಲವೂ ಸವಾಲುಗಳೇ. ಅಹಿಲ್ಯಾಳ ನಂತರದ ಕಾಲಘಟ್ಟದಲ್ಲಿ ಕಿತ್ತೂರು ಚೆನ್ನಮ್ಮ, ಅಬ್ಬಕ್ಕ, ಝಾನ್ಸಿರಾಣಿ ಲಕ್ಷ್ಮಿಬಾಯಿಯಂತಹ ಹೆಸರುಗಳನ್ನು ಈ ಸಾಲಿನಲ್ಲಿ ಹೆಸರಿಸಬಹುದು.

ಎರಡು ಶತಮಾನದ ಹಿಂದೆಯೇ ಅಹಿಲ್ಯಾ ಪಾನ ನಿಶೇಧ, ಭ್ರಷ್ಟಾಚಾರ, ವರದಕ್ಷಿಣೆ, ಸತಿಸಹಗಮನ ಪದ್ಧತಿ, ಬಾಲ್ಯವಿವಾಹದ ವಿರುದ್ಧ ಹೋರಾಡಿ ದತ್ತು ಸ್ವೀಕಾರ ಪದ್ಧತಿ, ಪತ್ನಿಗೆ ಪತಿಯ ಆಸ್ತಿಯ ಹಕ್ಕು, ಅಂತರ್ಜಾತಿಯ ವಿವಾಹಗಳನ್ನು ಪ್ರೋತ್ಸಾಹಿಸುತ್ತಾಳೆ. ಧರ್ಮಾತೀತವಾಗಿ ದೇವಸ್ಥಾನಗಳ ನಿರ್ಮಿಸಿ, ಕೆರೆಕಟ್ಟೆ ಬಾವಿ ತೋಡಿಸಿ ನೀರಿನ ವ್ಯವಸ್ಥೆ ಮಾಡಿದ್ದಳು.

ಮರತೋಪು, ರಸ್ತೆ-ಸೇತುವೆ, ಸಾಹಿತ್ಯ, ಧರ್ಮಶಾಲೆ, ಅನ್ನಸತ್ರಗಳು, ಪಶುಪಕ್ಷಿಗೆ ಆಹಾರ, ಗೋಮಾಳ ಮತ್ತು ಮುಖ್ಯವಾಗಿ ಜ್ಯೋತಿರ್ಲಿಂಗ ಪ್ರತಿಷ್ಠಾಪನೆ ಮಾಡಿದ ಕೀರ್ತಿ ಇವಳದ್ದು. ಲಭ್ಯವಿದ್ದ ಸೀಮಿತ ಆಕರಗಳ ಜಾಡು ಹಿಡಿದು ಒಂದು ಐತಿಹಾಸಿಕ ನಾಟಕವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿರುವ ಪಾತಣ್ಣನವರು ಐತಿಹ್ಯ ಕತೆಗಳನ್ನು ಒಳಗೊಂಡಂತೆ ಕ್ಷೇತ್ರಕಾರ್ಯದ ಮೂಲಕವೂ ಮಾಹಿತಿ ಕಲೆಹಾಕುವ ಪ್ರಯತ್ನ ಮಾಡಿದ್ದಾರೆ. ನಿರೂಪಣೆಯಲ್ಲಿ ಸೂತ್ರಧಾರನ ಸಿದ್ದ ಮಾದರಿಯನ್ನು ಬಿಟ್ಟು ಪಾತ್ರಗಳ ಮೂಲಕ ನಿರೂಪಿಸುವ ಹೊಸತಂತ್ರ ಹೆಣೆದಿದ್ದಾರೆ.

‍ಲೇಖಕರು Admin

February 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: