ಲತಾ ಮತ್ತು ಅಮೀರಬಾಯಿ…

ರಹಮತ್‌ ತರೀಕೆರೆ

ನಾನು ಅಮೀರ್‌ಬಾಯಿ ಕರ್ನಾಟಕಿ ಕುರಿತ ಸಂಶೋಧನೆಗೆಂದು ಮುಂಬೈಗೆ ಹಲವಾರು ಸಲ ಎಡತಾಕಬೇಕಾಯಿತು. ಆಗ ಅಮೀರಬಾಯಿ ಒಡನಾಟದ ನೆನಪುಗಳನ್ನು ಪಡೆಯಲು ಲತಾ ಮಂಗೇಶ್ಕರ್ ಅವರನ್ನೂ ಕಾಣಲೆತ್ನಿಸಿದೆ. ಕಾರಣ, ಲತಾ ತಮಗಿಂತ ಹಿರಿಯರಾದ ಅಮೀರ್‌ಬಾಯಿಯವರ ಜತೆಗೂಡಿ `ಗೋರೆಗೋರೆ ಭಾಂಕೆಚೋರೆ ಮೇರೆ ಗಲಿಯಾಮೆ ಆನಕರೊ’ ಹಾಡನ್ನು ಹಾಡಿದ್ದರು. ಆದರೆ ಅವರ ಕಾರ್ಯದರ್ಶಿ ಭೇಟಿಸಾಧ್ಯವಿಲ್ಲ ಎಂದರು.

ಇವತ್ತು ಪತ್ರಿಕೆಗಳಲ್ಲಿ ಲತಾ ಅವರ ಚಿತೆಯ ಮುಂದೆ ಶಾರುಖ್‌ಖಾನ್ ದುವಾ ಮಾಡುತ್ತಿರುವ ಅವರ ಮಡದಿ ಗೌರಿ ಕೈಮುಗಿದು ನಿಂತಿರುವ ಚಿತ್ರ ನೋಡಿದೆ. ಇದನ್ನು ಇಬ್ಬರೂ ಸಹಜವಾಗಿ ಮಾಡಿದರೊ, ಆಲೋಚನೆ ಮಾಡಿದರೊ ತಿಳಿಯದು. ಆದರೆ ಇದು ಸಾಂಕೇತಿಕವಾಗಿದೆ ಮತ್ತು ಮುಂಬೈ ಸಿನಿಮಾಲೋಕದಲ್ಲಿ ಅಂತಸ್ಥವಾಗಿರುವ, ಅಲ್ಲಿ ಮತೀಯ ಆಲೋಚನೆ ನುಸುಳಿವೆಯಾದರೂ ಅವನ್ನು ಮೀರಿದಂತೆ ಉಳಿಸಿಕೊಂಡಿರುವ, ವಿಶಿಷ್ಟ ಜಾತ್ಯತೀತ ಪರಂಪರೆಯ ಚಹರೆಯಾಗಿದೆ.

ಇವತ್ತು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಲತಾ ಕುರಿತ ಬರೆಹಗಳಲ್ಲೂ ಇದಕ್ಕೆ ಸಾಕ್ಷ್ಯಗಳಿವೆ. ಅವರ ಸಂಗೀತಯಾನದಲ್ಲಿ ನೆರವಾದ ಹಲವಾರು ವ್ಯಕ್ತಿಗಳ ಹೆಸರುಗಳಿವೆ. ಅವರಲ್ಲಿ ಲತಾ ಸಶಧರ್ ಮುಖರ್ಜಿ `ತೆಳುವಾದ ದನಿ’ ಎಂದು ತಿರಸ್ಕರಿಸಿದಾಗ ತಮ್ಮ `ಮಜಬೂರ್’ ಚಿತ್ರದಲ್ಲಿ ಹಾಡಿಸಿ ಆತ್ಮವಿಶ್ವಾಸ ತುಂಬಿದ ಅವರ ಗಾಡ್‌ಫಾದರ್ ಗುಲಾಮ್ ಹೈದರ್, ಉರ್ದು ಹಾಡಿನ ಉಚ್ಛಾರಣೆ ಸರಿಯಿಲ್ಲ ಎಂಬ ಆಪಾದನೆ ಬಂದಾಗ, ಅವರಿಗೆ ಉರ್ದು ಕಲಿಸಿದ ಶಫಿ, ಹಿಂದೂಸ್ತಾನಿ ಸಂಗೀತದ ಗುರು ಉಸ್ತಾದ್ ಅಮಾನಲಿಖಾನ್, ಸಿನಿಮಾ ಹಾಡಿಕೆಯ ಕಸುಬುದಾರಿಕೆಯ ಗುಟ್ಟುಗಳನ್ನು ಹೇಳಿಕೊಟ್ಟ ನೂರ್‌ಜಹಾನ್ ಮುಂತಾದವರಿದ್ದಾರೆ.

ಇದೇ ಬಗೆಯ ಧರ್ಮಾತೀತ ನೆರವನ್ನು ಅಮೀರ್‌ಬಾಯಿ, ದಿಲೀಪಕುಮಾರ್, ಮಹಮದ್ ರಫಿಯವರ ಕಲಾಬದುಕಿನ ಚರಿತ್ರೆಯಲ್ಲಿಟ್ಟು ನೋಡಿದರೂ ಗೋಚರಿಸುವುದು. ಇದು ಭಾರವು ಬ್ರಿಟಿಶರ ಗುಲಾಮಗಿರಿಯೊಳಗಿದ್ದಾಗ ಆರಂಭಗೊಂಡ, ಎಲ್ಲ ಧರ್ಮದವರೂ ಭಾಷೆಯವರೂ ಕೂಡಿ ಹೋರಾಡಿದರೆ ಬಿಡುಗಡೆ ಸಾಧ್ಯ ಎಂಬ ನಮ್ಮ ರಾಷ್ಟ್ರೀಯ ಹೋರಾಟದ ಭಾಗವಾಗಿಯೇ ರೂಪುಗೊಂಡ ಮುಂಬೈ ಚಿತ್ರರಂಗದ ಅಂತಸ್ಥ ಗುಣವಾಗಿದೆ.

ಗಾಂಧಿಯವರಿಗೆ ಪ್ರಿಯವಾದ ಗಾಯಕಿಯಾಗಿದ್ದ ಅಮೀರ್‌ಬಾಯಿಯವರು `ದೂರ್ ಹಟೋ ದುನಿಯಾವಾಲೊ ಏ ಹಿಂದೂಸ್ತಾನ್ ಹಮಾರಹೈ’ (ಕಿಸ್ಮತ್-೧೯೪೪) ಹಾಡನ್ನು ರಾಗವಾಗಿ ಹಾಡಲಿಲ್ಲ. ಘೋಷಿಸುವಂತೆಯೇ ಹಾಡಿದರು.ಆಯಾ ಊರಿನ ಹಿರಿಯರು ಪಾಲಕರು ಶಿಕ್ಷಕರು ಒಟ್ಟಿಗೆ ಕೂತು ಚರ್ಚಿಸಿ ಬಗೆಹರಿಸಿಕೊಳ್ಳಬಹುದಾದ ಬಾಲೆಯರ ಶಿರವಸ್ತ್ರದ ಸಂಗತಿಯು, ಮತೀಯ ದ್ವೇಷ ಹಬ್ಬಿಸಲು ನೆಪವಾಗುತ್ತಿರುವ ಈ ಕೆಟ್ಟ ಗಳಿಗೆಯಲ್ಲಿ ಚಿತ್ರರಂಗದ ಚರಿತ್ರೆ ಕುರಿತ ಟಿಪ್ಪಣಿ ಬರೆಯಬೇಕಿನಿಸಿತು.

ಇದೇ ಹೊತ್ತಲ್ಲಿ ಒಬ್ಬ ಮಹಾಶಯರು `ಉರ್ದು ಬೇಕಾದವರು ಪಾಕಿಸ್ತಾನಕ್ಕೆ ಹೋಗಲಿ’ ಎಂದೂ ಅಪ್ಪಣೆ ಕೊಟ್ಟಿದ್ದಾರೆ. ಉರ್ದು ಭಾರತದಲ್ಲಿ ಹುಟ್ಟಿದ ಭಾಷೆ. `ಅಯ್ ಮೇರೆ ವತನ್‌ಕೆ ಲೋಗ್ ತುಂ ಆಂಖೊಮೆ ಭರಲೊ ಪಾನಿ, ಜೊ ಶಹೀದ್ ಹುವೇ ಉನಕೀ ಝರ ಯಾದ್ ಕರೋ ಖುರಬಾನಿ’ ಒಳಗೊಂಡಂತೆ ಲತಾ ಹಾಡಿರುವ ಬಹುತೇಕ ಹಾಡುಗಳಲ್ಲಿ ಉರ್ದುಶಬ್ದಗಳು ತುಂಬಿವೆ. ಇವನ್ನೆಲ್ಲ ಬರೆದವರು ಎಲ್ಲ ಹಲವು ಮತಧರ್ಮಗಳಿಗೆ ಸೇರಿದ ಉರ್ದು ಕವಿಗಳು.

ಒಬ್ಬ ಲೈಟ್‌ಬಾಯ್ ಕವಿ ಗಾಯಕರು ನಿರ್ದೇಶಕರು ನಟರು ಬಂಡವಾಳ ಹಾಕಿದವರು ಎಲ್ಲ ಒಗ್ಗೂಡಿಯೇ ಸಿನಿಮಾವೊಂದು ನಿರ್ಮಾಣವಾಗುತ್ತದೆ. ಹಲವರ ಖುರ್ಬಾನಿಗಳಿಂದ ರೂಪುಗೊಂಡಿರುವ ಭಾರತದಂತಹ ಬಹುತ್ವದ ನಾಡನ್ನು ಕಟ್ಟುವುದಕ್ಕೆ ರಂಗಭೂಮಿ ಮತ್ತು ಸಿನಿಮಾ ರೂಪಕವೆಂದು ನನಗೆ ಸದಾ ಅನಿಸುತ್ತದೆ. ಲತಾ ಮಂಗೇಶ್ಕರರ ಪ್ರತಿಭೆ ಕೂಡ ಹೀಗೆ ರೂಪುಗೊಂಡಿದ್ದು.

‍ಲೇಖಕರು Admin

February 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: