-ರಾಜೀವ ನಾರಾಯಣ ನಾಯಕ
ಜಯಂತ ಕಾಯ್ಕಿಣಿಯವರು ರೂಪಾಂತರಿಸಿದ “ಜತೆಗಿರುವನು ಚಂದಿರ” ನಾಟಕವು ಇತ್ತೀಚೆಗೆ ಬೆಂಗಳೂರಿನ ರಂಗಶಂಕರದಲ್ಲಿ ತುಂಬಿದ ಸಭಾಗ್ರಹದಲ್ಲಿ ಯಶಸ್ವಿ ಪ್ರದರ್ಶನ ಕಂಡಿತು. ಕನ್ನಡ ರಂಗಭೂಮಿಯ ಖ್ಯಾತ ಕಲಾವಿದ ಮತ್ತು ನಿರ್ದೇಶಕ ಹುಲುಗಪ್ಪ ಕಟ್ಟಿಮನಿಯವರು ಈ ನಾಟಕವನ್ನು ಸಮರ್ಥವಾಗಿ ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. ಸಾಮಾಜಿಕ ತಲ್ಲಣಗಳು ಕೌಟುಂಬಿಕ ಸಂಘರ್ಷಗಳಿಗೆ ಕಾರಣವಾಗುವ ಬಗೆಯನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಈ ನಾಟಕದ ಬಗ್ಗೆ ಸಾಕಷ್ಟು ಕೇಳಿದ್ದರೂ, ನೋಡುವುದು ಸಾಧ್ಯವಾಗಿರಲಿಲ್ಲ. ಮುಂಬೈನ ತುಳು-ಕನ್ನಡ ರಂಗಭೂಮಿಯ ಖ್ಯಾತ ನಿರ್ದೇಶಕ ಡಾ. ಭರತಕುಮಾರ ಪೊಲಿಪುರವರಿಂದ ಉತ್ತಮ ನಾಟಕಗಳು ಬರಹಗಾರನ ಸಂವೇದನೆಗಳನ್ನು ಹೇಗೆ ವಿಸ್ತರಿಸಬಲ್ಲವು ಎಂಬುದನ್ನು ಅರಿತಿದ್ದರಿಂದ ಮತ್ತು ಆದಿನ ನಾನು ಬೆಂಗಳೂರಲ್ಲಿಯೇ ಇದ್ದುದರಿಂದ ನಾಟಕ ನೋಡುವ ಅವಕಾಶವನ್ನು ತಪ್ಪಿಸಿಕೊಳ್ಳಲಿಲ್ಲ. ರಂಗಶಂಕರದಲ್ಲಿ ಸೀಟುಗಳಿಗೆ ನಂಬರು ಇರಲಿಲ್ಲವಾದ್ದರಿಂದ ನಾಟಕ ನೋಡಲು ಬಂದವರೆಲ್ಲರೂ ಅನುಕೂಲದ ಸೀಟು ಹಿಡಿಯಲು ಪ್ರವೇಶಕ್ಕೆ ಕಾಯುತ್ತಾ ತಳಮಹಡಿಯಲ್ಲಿ ಸಾಲುಮಾಡಿದ್ದರು. ಅವರಲ್ಲಿ ಯುವಜನರು ಸಾಕಷ್ಟು ಸಂಖ್ಯೆಯಲ್ಲಿದ್ದರು. ರಂಗಭೂಮಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವ ಹೊಸತಲೆಮಾರನ್ನು ಹೆಮ್ಮೆಯಿಂದ ಗಮನಿಸುತ್ತಾ ಒಂಟಿಯಾಗಿ ನಿಂತಿದ್ದೆ. ಅಷ್ಟೊತ್ತಿಗೆ ಜಯಂತರ ಅನಿರೀಕ್ಷಿತ ಆಗಮನವಾಯಿತು!
ಜಯಂತರನ್ನು ಕಂಡದ್ದೇ ಸರತಿ ಸಾಲಿನಲ್ಲಿ ವಿದ್ಯುತ್ ಸಂಚಾರ ಉಂಟಾಯಿತು. ಜಯಂತರು ಪರಿಚಿತರನ್ನು ಹೆಸರಿಂದ ಮಾತಾಡಿಸುತ್ತಾ, ಅಪರಿಚಿತರಲ್ಲೂ ಸ್ನೇಹಭಾವ ಮೂಡಿಸುತ್ತಾ ರಂಗಶಂಕರದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದರು. ಸೆಲ್ಫಿ ಕೇಳಿದವರಿಗೆ ಪ್ರೀತಿಯಿಂದಲೇ ಸಮ್ಮತಿಸಿ ಅವರೊಂದಿಗೆ ಆಪ್ತ ನಗು, ಸಣ್ಣ ಜೋಕು, ಕಚಗಳಿಯಿಡುವ ಮಾತಿನ ಮೂಲಕ ಸೆರೆಹಿಡಿದ ಸೆಲ್ಫಿಗೆ ನಲ್ಮೆಯ ಚೌಕಟ್ಟು ನಿರ್ಮಿಸುತ್ತಿದ್ದರು. ರಾತ್ರಿ ಹನ್ನೊಂದಕ್ಕೆ ಶೋ ಮುಗಿದು ಹೊರಬಂದ ನಂತರವೂ “ಜಯಂತೋತ್ಸಾಹ” ಮುಂದುವರಿದಿತ್ತು
ಸಾಹಿತ್ಯಲೋಕದಲ್ಲಿ ಖ್ಯಾತಿಯನ್ನೂ, ಗೌರವವನ್ನೂ ಪಡೆದವರು ಅನೇಕರು ಇದ್ದಾರೆ. ಆದರೆ ಜಯಂತರಷ್ಟು ಜನಪ್ರಿಯತೆಯನ್ನು ಕಂಡವರು ಅಪರೂಪ ಎನ್ನಬೇಕು. ನಮ್ಮ ತಲೆಮಾರು ಅಥವಾ ನಂತರದ ತಲೆಮಾರು ಹಾಗಿರಲಿ, ಜೆನ್ ಜಿ ಕೂಡ ಜಯಂತರ ಮೋಹಕತೆಗೆ ಒಲಿದಿರುವುದು ವಿಶೇಷ. ಜಯಂತರೆಂದೊಡನೆ ಇಂಥ ಸಂಭ್ರಮಕ್ಕೆ ಕಾರಣವೇನು? ಅವರ ಸ್ಪುರದ್ರೂಪಿ ವ್ಯಕ್ತಿತ್ವವೆ? ಲವಲವಿಕೆಯ ಒಡನಾಟವೆ? ಮಾತಿನ ಮೋಡಿಯೇ? ಸೂಕ್ಷ್ಮ ಗ್ರಹಿಕೆಯ ಮನಸ್ಸೇ? ಚಿತ್ರಕ ಶಕ್ತಿಯ ಕತೆಗಳೇ? ಅಥವಾ ಕಳೆದೆರಡು ದಶಕಗಳಿಂದ ಭಾಷೆ ಮತ್ತು ಭಾವದಲ್ಲಿ ತಾಜಾತನದ ಮಳೆ ಸುರಿಸಿದ ಅವರ ಸಿನಿಮಾ ಹಾಡುಗಳೇ?

ಕನ್ನಡದ ಖ್ಯಾತ ಕತೆಗಾರ ಮತ್ತು ಕಾದಂಬರಿಕಾರರಾದ ವಿವೇಕ ಶಾನಭಾಗ ಹೇಳುವಂತೆ ಒಬ್ಬ ವ್ಯಕ್ತಿ ಜನಪ್ರಿಯನಾಗಲು ಅದಕ್ಕೆ ಬೇರೆಯದೇ ಒಂದು ಸಂಬಂಧ, ಒಂದು ಶಕ್ತಿ ಇರಬೇಕು. ಇವರು ನಮ್ಮವರು ಅನ್ನಿಸಬೇಕು. ಇವರ ಜೊತೆ ಏನೋ ಹಂಚಿಕೊಂಡ ಭಾವ ಬರಬೇಕು. ಅಂಥ ಏನೋ ಒಂದು ಜಯಂತರಲ್ಲಿದೆ. ಜಯಂತರೇ ಹೇಳಿದ ಹಾಗೆ ಎಲ್ಲಾ ಕಲೆಗಳ ಮೂಲ ಉದ್ಧೇಶ ಮಮತೆಯ ವಲಯವನ್ನು ವಿಸ್ತರಿಸುವುದು. ಅದನ್ನವರು ಅಕ್ಷರಶ: ಪಾಲಿಸಿಕೊಂಡು ಬಂದಿದ್ದಾರೆ.
ಯುವ ಪೀಳಿಗೆಯ ಹೃದಯದ ಕಾರ್ಡಿಯೋಗ್ರಾಂ ಬಿಂಬಿಸುವ ಸಿನಿಮಾ ಹಾಡುಗಳಿಂದ ಜಯಂತರಿಗೆ ಸ್ಟಾರ್ ಗಿರಿ ದಕ್ಕಿದರೂ, ಆ ಫೇಮ್‌ಅನ್ನು ಅವರು ತಲೆಗೇರಿಸಿಕೊಂಡಿಲ್ಲ. ಅವರು “ನಾನು” ಎಂಬ ಸ್ಥಾವರವಾಗದೇ “ಆನು” ಎಂಬ ಜಂಗಮನಾಗಿಯೇ ಉಳಿದಿದ್ದಾರೆ (ಗೋಕರ್ಣದ ರಥಬೀದಿಯ ಬಾಲ್ಯದ ಗೆಳೆಯರು ಜಯಂತರನ್ನು ”ಆನು” ಎಂದೇ ಕರೆಯುವುದು). ಸಂವೇದನಾಶೀಲ ಸಾಹಿತಿಯಾದ ಅವರಿಗೆ ಒಣಪ್ರತಿಷ್ಠೆಯ ನಿರರ್ಥಕತೆಯ ಅರಿವಿದೆ. ಸಾಧನೆ ಮತ್ತು ಜನಪ್ರಿಯತೆಯ ನಡುವೆಯೂ ಅವರು ಸರಳ ಸಹಜ ಮನುಷ್ಯನಾಗಿ ಉಳಿದಿದ್ದಾರೆ. ಈ ಕಾರಣಕ್ಕಾಗಿ ಅವರೊಂದಿಗೆ ಸೆಲ್ಫಿ ಪಡೆದವರಿಗೂ ತಾವೊಬ್ಬ ಸ್ಟಾರ್ ಜೊತೆಗಿರುವ ಅಭಿಮಾನಕ್ಕಿಂಥ ಗೆಳೆಯನಂಥ ಆಪ್ತತೆಯೇ ಉಂಟಾಗುತ್ತದೆ.
ಜಯಂತರ ಜೀವನಪ್ರೀತಿ ಅಪಾರವಾದದ್ದು. ಬದುಕಿನ ದು:ಖ ನೋವುಗಳು, ಪರಿತಾಪ ಪಶ್ಚಾತ್ತಾಪಗಳ ಅರಿವಿದ್ದೂ ತಮ್ಮ ಬರಹಗಳಲ್ಲಿ ಅದೆಲ್ಲವನ್ನು ಗೋಳಾಗಿಸುವುದಿಲ್ಲ. ಚಿಕ್ಕಚಿಕ್ಕ ಖುಷಿಗಳನ್ನು ಬೆರಗುಗಣ್ಣುಗಳಿಂದ ತೋರುತ್ತಾ ಬಂದವರು. ಮನುಷ್ಯನ ಕೇಡು, ವ್ಯಸನ, ಸಣ್ಣತನಗಳ ನಡುವೆಯೂ ಒಸರುವ ಪ್ರೀತಿ ವಿಶ್ವಾಸವನ್ನು ಬೊಗಸೆಯಲ್ಲಿ ಹಿಡಿದು ಕೊಟ್ಟವರು. ಹೀಗಾಗಿ ಅವರ ಕತೆಗಳಿಂದ ಹೊಮ್ಮುವ ಚೈತನ್ಯ ಅನನ್ಯವಾದದ್ದು. ಕವಿ, ಕಥೆಗಾರ ಮತ್ತು ಪತ್ರಕರ್ತರಾಗಿರುವ ರಘುನಾಥ ಚ ಹ ಅವರು ಹೇಳುವಂತೆ ಕಾಡಿನ ಬಣ್ಣಗಳಂತೆ, ನದಿಯ ಹರಿವಿನಂತೆ, ಪಕ್ಷಿಗಳ ಇಂಚರದಂತೆ ಜಯಂತ ಕಾಯ್ಕಿಣಿ ಅವರ ಕತೆಗಳಿಗೂ ಮನಸ್ಸಿಗೆ ಉಲ್ಲಾಸ ತುಂಬುವ ಔಷಧ ಗುಣವಿದೆ; ಬದುಕಿನ ದಣಿವು ನೀಗಿ ಹೊಸ ಹುರುಪು ತುಂಬುವ ಶಕ್ತಿಯಿದೆ.
ಒಂದು ಕಾಲದಲ್ಲಿ ಮುಂಬೈ ಮಹಾನಗರಿಯ ಪರಕೀಯತೆ, ಯಾಂತ್ರಿಕತೆ, ಕ್ರೌರ್ಯಗಳನ್ನು ವೈಭವೀಕರಿಸಲಾಗುತ್ತಿತ್ತು. ಅದನ್ನು ನಾವು ನಂಬಿದೆವು ಕೂಡ. ಜಯಂತರು ತಮ್ಮ ಕತೆಗಳಲ್ಲಿ ಆಂಥ ಮಿತ್ ಅನ್ನು ಮುರಿದು ಅದೊಂದು ಬಿಡುಗಡೆಗೊಳಿಸುವ ಯೋಗ ಶಹರ ಎಂಬಂತೆ ಕಾಣಿಸಿದರು. ಮುಂಬೈನಂಥ ಅನಾಮಿಕ ಆವರಣದಲ್ಲೂ ಅರಳುವ ಮನುಷ್ಯ ಪ್ರೀತಿಯ ದರ್ಶನ ಮಾಡಿಸಿದರು. ಮುಂದೆ ನಾನೂ ಉದ್ಯೋಗ ನಿಮಿತ್ತ ಅದೇ ಮುಂಬೈ ನಗರಿಗೆ ವಲಸೆ ಹೋದಾಗ, ಜಯಂತರು ಮತ್ತು ಚಿತ್ತಾಲರು ಚಿತ್ರಿಸಿದ ಆರ್ದ್ರ ಕಣ್ಣುಗಳ ಕತೆಗಳಿಂದಲೇ ಮಹಾನಗರಿಯನ್ನು ಕಾಣುವಂತಾಯಿತು.
ಫ್ಲ್ಯಾಟಫಾರ್ಮುಗಳ ಮೆಟ್ಟಿಲುಗಳಡಿ ನಿಂತ ಪಿಸುಮಾತಿನ ಯುವ ಜೋಡಿಗಳು “ನೋ ಪ್ರೆಸೆಂಟ್ ಪ್ಲೀಸ್” ಕತೆಯ ಅಸಾವರಿ ಮತ್ತು ಪೋಪಟ್ ಎಂಬ ಹುಡುಗ ಹುಡುಗಿಯರನ್ನು ನೆನಪಿಸಿದ್ದವು. ದೂರದ ಉಪನಗರಿಯಿಂದ ಬಾಳೆಹಣ್ಣು ಹೊತ್ತುತಂದು ಮಧ್ಯಾಹ್ನದ ಹಸಿವು ನೀಗಿಸುವ ತಾಯಂದಿರು “ಅಮೃತಬಳ್ಳಿ ಕಷಾಯ” ಕತೆಯ ಮಾಯಿಯಂತೆ ಕಂಡಿದ್ದರು. ಫುಟಪಾತುಗಳ ಮೇಲೆ ತಿರುಗಾಡುವ ಒಂಟಿ ಬಾಲಕರು, ಅಕ್ಕನೊಂದಿಗೆ ಮುನಿಸಿಕೊಂಡು ಮನೆ ಬಿಟ್ಟು ಹೋದ “ಕಣ್ಮರೆಯ ಕಾಡು” ಕತೆಯ ಛೋಟೂ ಇರಬಹುದು ಅನಿಸಿತ್ತು. ಅಷ್ಟರಮಟ್ಟಿಗೆ ಜಯಂತರ ಕತೆಗಳು ಭಾವತೀರದಲ್ಲಿ ಅಚ್ಚೊತ್ತಿದ್ದು ನಿಜ.
ಜಯಂತರ ಹೆಚ್ಚಿನ ಕತೆಗಳಲ್ಲಿ ಮಹಾನಗರಿಯಲ್ಲಿ ಬದುಕು ಕಟ್ಟಿಕೊಂಡ ಅನಾಮಿಕರು, ಚಾಳುಗಳಲ್ಲಿ ವಾಸಿಸುವ ಬಡ ಮತ್ತು ಕೆಳಮಧ್ಯಮ ವರ್ಗದ ಜನರೇ ಪಾತ್ರಗಳಾಗಿವೆ. ಅವಜ್ಞೆಗೆ ಒಳಗಾದ ಅಂಥ ವ್ಯಕ್ತಿಗಳು, ಅಂಥವರ ದೈನಿಕಗಳು, ಅವರ ನೋವು ಸಂಕಟಗಳು ಜಯಂತರ ಚಿತ್ರಕ ಶಕ್ತಿಯಿಂದಾಗಿ ಮನಲ್ಲಿ ಉಳಿಯುತ್ತವೆ. ಮುಂಬೈನ ಶ್ರೀಮಂತ ಇಮಾರತುಗಳ ಬದುಕಿನೊಳಗೆ ಅವರು ಇಣುಕಿದ್ದು ಕಡಿಮೆ. ಬಹುಮಹಡಿಗಳ ಗತ್ತು, ಒಣ ಅಹಂಕಾರ ಅಥವಾ ಅಲ್ಲಿಯ ನಿಟ್ಟುಸಿರನ್ನು ಕಟ್ಟಿಕೊಡುವಲ್ಲಿ ಅವರು ಅಷ್ಟಾಗಿ ಆಸಕ್ತಿ ತೋರಿಸಿಲ್ಲ.
ನಾನು ಮುಂಬೈಗೆ ಬಂದ ಮೇಲೆ ಬರೆದ ಕತೆಗಳು ಅಥವಾ ಹೆಚ್ಚಿನ ಬರಹಗಳಲ್ಲಿ ಕೂಡ ನಿತ್ಯ ದಾಟಾಡುವ ಫುಟಪಾತುಗಳ, ಭಾಗದೌಡ್ ಫ್ಲ್ಯಾಟಫಾರ್ಮುಗಳ, ಒನ್ ಬಿಎಚ್ಕೆ ಅಪಾರ್ಟಮೆಂಟುಗಳ ಬದುಕೇ ಇದೆ. ಈ ಕಾರಣಕ್ಕೋ ಏನೋ ಯಾರಾದರೂ ನಿಮ್ಮ ಕತೆಗಳಲ್ಲಿ ಜಯಂತರ “ಛಾಪು” ಕಾಣಿಸುತ್ತದೆ ಎಂದರೆ ಸಾಮಾನ್ಯ ಕತೆಗಾರನಾದ ನನ್ನನ್ನು ಕನ್ನಡದ ಅನನ್ಯ ಕತೆಗಾರನೊಂದಿಗೆ ಹೋಲಿಸುವುದು ಖುಷಿಯೆನಿಸಿದರೂ, ಅದು ಅನುಕರಣೆಯ ಆರೋಪವೆಂಬ ಅರಿವಾದೊಡನೆ ಅವರ ಕತೆಗಳನ್ನು ಓದುವುದನ್ನು ಬಿಟ್ಟಿದ್ದೂ ಉಂಟು. ಪರಿಚಯವಿದ್ದರೂ ಜಯಂತರೊಂದಿಗೆ ಹೆಚ್ಚಿನ ಸಲಿಗೆ ಅಥವಾ ಸ್ನೇಹವನ್ನು ಇಟ್ಟುಕೊಳ್ಳಲಿಲ್ಲ. ಮುಂಬೈನ ಮತ್ತು ಗೋಕರ್ಣ ಸೀಮೆಯ ಸ್ಥಳನಾಮಗಳಿಂದಲೂ ಓದುಗರ ಚಿತ್ತವು ಜಯಂತರ, ಚಿತ್ತಾಲರ ಕತೆಗಳತ್ತ ಚಲಿಸುವುದನ್ನು ತಪ್ಪಿಸಲು, ನಾನು ಚಿತ್ರಿಸುವ ಕಥಾಪಾತ್ರಗಳನ್ನು ಅಪರಿಚಿತ ಊರುಗಳಲ್ಲಿ ನೆಲೆಗೊಳಿಸುವುದು, ಸ್ಟಾಪಿಲ್ಲದ ಸ್ಟೇಶನ್ನುಗಳಲ್ಲಿ ಹತ್ತಿಳಿಸುವುದು ಅನಿವಾರ್ಯವೇ ಆಗಿದೆ!
ಹಾಗೆ ನೋಡಿದರೆ, ಜಯಂತರದು ಅನುಕರಿಸಲಾಗದ ಅನನ್ಯ ಕಥನ ಶೈಲಿ. ಬದುಕಿಗೆ ಮುಖಾಮುಖಿಯಾಗುವ ಮನುಷ್ಯನ ಅಂತ:ಸತ್ವವನ್ನು ಗ್ರಹಿಸುವ ಅವರ ನೋಟ ಅತಿಸೂಕ್ಷ್ಮ ಮತ್ತು ವಿಶಿಷ್ಟವಾದದ್ದು. ಶ್ರೀಸಾಮಾನ್ಯರ ದಿನನಿತ್ಯದ ಸಣ್ಣಪುಟ್ಟ ಸಂಗತಿಗಳು, ಅವರ ಆಸೆ ಆತಂಕಗಳು ಒಲವು ಗೆಲುವುಗಳು ಕನಸು ನನಸುಗಳೇ ಜಯಂತರ ಕತೆಗಳ ಪ್ರಧಾನ ಕಥಾವಸ್ತು. ಅದನ್ನು ತಮ್ಮ ವಿಶಿಷ್ಟ ಶೈಲಿ ನವಿರಾದ ಹಾಸ್ಯಪ್ರಜ್ಞೆ ಮತ್ತು ನಿರುದ್ವಿಗ್ನತೆಯಿಂದ ಸುಂದರವಾಗಿ ಕಟ್ಟಿಕೊಡುತ್ತಾರೆ. ಸಮಾಜದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಜಾತಿಮತಗಳು ಮತ್ತು ಶ್ರೇಣೀಕೃತ ವ್ಯವಸ್ಥೆಯ ಕರಾಳ ಮುಖಗಳು ಅವರ ಕತೆಗಳಲ್ಲಿ ಅಷ್ಟಾಗಿ ಕಾಣುವುದಿಲ್ಲ. ಕಣ್ಣೆದುರಿನ ಅಂಥ ಸಾಮಾಜಿಕ ತಲ್ಲಣಗಳು ಕಥಾಹಂದರದಿಂದ ಹೊರಗೇ ಉಳಿಯುತ್ತವೆ. ಕೋಟಿತೀರ್ಥವನ್ನು ಅವರು ಅದ್ಭುತ ರೂಪಕವನ್ನಾಗಿಸಿದರೂ, ಅದೇ ತೀರ್ಥಕ್ಕೆ ಕರೆದೊಯ್ಯುವ ಕಿರು ಓಣಿಗಳನ್ನು ಸಾರಿಸಿ ರಂಗೋಲಿಯಿಡುವ ಹಾಲಕ್ಕಿಗಳ ಸಂತಸ ಮತ್ತು ಸಂಕಟಗಳು ಕತೆಗಳೊಳಗೆ ಬರಬೇಕಾದಷ್ಟು ಬಂದಿಲ್ಲ. ಮೋಡ ಮುಸುಕಿದ ಸಮುದ್ರವು ಅವರನ್ನು ಕಾಡಿದಷ್ಟು, ಪಾತಿದೋಣಿಯಲ್ಲಿ ಹೊಯ್ದಾಡುವ ಮೀನುಗಾರರ ಬದುಕಿನ ಅನಿಶ್ಚಿತತೆಗಳು ಕತೆಗಳಾಗಿಲ್ಲ. ಇಂಥ ಕಣ್ಣೆದುರಿನ ಕಟು ವಾಸ್ತವಗಳು ಜಯಂತರಿಂದ ಕತೆಗಳಾಗಲು ಕಾಯುತ್ತಿವೆ ಅನಿಸುತ್ತದೆ.
ಜಯಂತರು ನಿರೂಪಣೆಯಲ್ಲಿ ಸಂವಹನಕ್ಕೆ ಸುಲಭವಾಗುವ ನವಿರುತನದ ಭಾಷೆಯನ್ನು ರೂಪಿಸಿಕೊಂಡಿದ್ದಾರೆ. ಗೋಕರ್ಣ ಸೀಮೆಯ ಕಥಾಪಾತ್ರಗಳ ಸಂಭಾಷಣೆಯಲ್ಲಿ ಕೂಡ ಪ್ರಾದೇಶಿಕ ಆಡುನುಡಿ ಮಿತವಾಗಿಯೇ ಇದೆ. ಉತ್ತರ ಕನ್ನಡದ ಭಾಷೆಯ ಬಹುರೂಪತೆ ವಿಶಿಷ್ಟವಾದದ್ದು. ಜಯಂತರಂಥ ಸಾರಸ್ವತಲೋಕದಲ್ಲಿ ಜನಪ್ರಿಯರಾದವರು ಅದನ್ನು ಇನ್ನಷ್ಟು ಬಳಸಿದ್ದರೆ, ಹಾಲಕ್ಕಿಗಳ, ಹವ್ಯಕರ, ಆಗೇರರ, ನಾಡವರಂಥ ಸಮುದಾಯದವರ ನುಡಿಗಟ್ಟುಗಳು ವಿಶಾಲ ಕರ್ನಾಟಕಕ್ಕೆ ಪರಿಚಿತವಾಗುತ್ತಿತ್ತು ಎಂಬುದು ನನ್ನ ಭಾವನೆ. ಅಪ್ಪಟ ಜಾತ್ಯಾತೀತ ಮನುಷ್ಯನಾಗಿರುವ ಜಯಂತರಿಗೆ ಸಾಮಾಜಿಕ ಉಪಭಾಷೆಗಳು ಜಾತಿ ಸೂಚಕವಾಗುವ ಆತಂಕವಿರಬಹುದು. ಸ್ವಲ್ಪ ಮಟ್ಟಿಗೆ ಅದು ನಿಜವೂ ಕೂಡ. ಅದೂ ಅಲ್ಲದೇ, ಹೊರಗಿನವರಿಗೆ ಸಂವಹನಕ್ಕೆ ತೊಡಕಾಗುವುದೂ ನಿಜ. ಆದರೆ ಅವನ್ನು ಭಾಷಾ ಸಮುದಾಯದ ಅಭಿವ್ಯಕ್ತಿಯಾಗಿ ಪರಿಗಣಿಸಿ, ಆ ನುಡಿಗಳ ಸಾಂದ್ರ ಮತ್ತು ಕಾವ್ಯಮಯ ಅಂಶಗಳನ್ನು ಕಾದಿಡುವ ಅಗತ್ಯವಿದೆ ಎಂಬುದು ನನ್ನ ಕಾಳಜಿ, ಅಷ್ಟೇ. “ಗುರ್ಬಾಣಕ್ಕಿ”, ”ಜಕ್ಕುಂ ಜಂಗುಂ ಜೋಹೋಚೋ” ಮುಂತಾದ ನನ್ನ ಕತೆಗಳ ನಿರೂಪಣೆಯಲ್ಲಿ ಅಂಕೋಲೆಯ ಆಡುನುಡಿಯನ್ನು ಸ್ವಲ್ಪ ಧಾರಾಳವಾಗಿಯೇ ಬಳಸಿರುವುದಕ್ಕೆ ಅದರ ಸೊಗಡು ಕಾರಣವಾದರೂ, ಜಯಂತರ ಚಿತ್ತಾಲರ ಶೈಲಿಯಿಂದ ಭಿನ್ನವಾಗುವ ಅಪ್ರಜ್ಞಾಪೂರ್ವಕ ಪ್ರಯತ್ನವೂ ಇರಬಹುದು ಅನಿಸುತ್ತದೆ.
ಜಯಂತರು ಎಂದೂ ತಮ್ಮ ಖಾಸಗಿ ಅನುಭವಗಳನ್ನು ವೈಯಕ್ತಿಕ ಬದುಕಿನ ನೋವು ನಲಿವುಗಳನ್ನು ಕತೆಯನ್ನಾಗಿಸುವುದಿಲ್ಲ. ಅಷ್ಟರಮಟ್ಟಿಗೆ ಅವರ ಭಾವಪ್ರಪಂಚವು ನಿಗೂಢವೇ! ಹಾಗಿದ್ದೂ ಜಯಂತರ ಜತೆಗಿರುವಾಗ ತೆರೆದ ಪುಸ್ತಕದಂತೆ ಆಪ್ತವಾಗುವುದಕ್ಕೆ ಅವರ ಮಮಕಾರವಿಲ್ಲದ ಮಮತೆ ಮತ್ತು ಒರತೆಯಂಥ ಪ್ರೀತಿಯೇ ಕಾರಣ ಎಂದು ನನ್ನ ಅನಿಸಿಕೆ. ಅವರೆಂದೂ ತಮ್ಮ ಬಗ್ಗೆ ಬಿಡಿ, ತಮ್ಮ ಸಾಹಿತ್ಯದ ಬಗ್ಗೂ ತಾವೇ ಮಾತಾಡಿದವರಲ್ಲ. ತಮ್ಮ ಕೃತಿಗಳ ಬಿಡುಗಡೆ ಸಂದರ್ಭವನ್ನೂ ಅವರು ಅದೇ ಪ್ರಧಾನ ಕಾರ್ಯಕ್ರಮವಾಗದ ಹಾಗೆ ಸಂಗೀತಗಾರರನ್ನೂ, ಕಲಾವಿದರನ್ನೋ ಅಥವಾ ವಿಶೇಷ ಉಪನ್ಯಾಸಕರನ್ನೋ ಕರೆಸುವ ವ್ಯವಸ್ಥೆ ಮಾಡುತ್ತಾರೆ. ಜಯಂತರಿಗೆ ಕಲೆಯ ಮೂಲ ಉದ್ಧೇಶವೇ ಎಲ್ಲರೂ ಒಟ್ಟಿಗೆ ಪ್ರಯಾಣ ಮಾಡುವುದು ಮತ್ತು ಒಟ್ಟಿಗೆ ಬೆಳೆಯುವುದು.
ಇಪ್ಪತೈದು ವರ್ಷಗಳ ಹಿಂದೆ ಕನ್ನಡದ ಇನ್ನೊಬ್ಬ ಸೂಕ್ಷ್ಮ ಕತೆಗಾರ್ತಿ ಉಮಾ ರಾವ್ ಜತೆಗಿನ ಮಾತುಕತೆಯಲ್ಲಿ “ಸುತ್ತಮುತ್ತ ಇಷ್ಟೊಂದು ಕ್ರೌರ್ಯ ಹಿಂಸೆ ಇದೆ. ಬರವಣಿಗೆಯಿಂದ ಏನು ಮಾಡಬಹುದು?” ಎಂಬ ಪ್ರಶ್ನೆಗೆ ಜಯಂತರು “ಬರವಣಿಗೆಯೆಂದರೆ ಅಹಂಕಾರವನ್ನು ಕಳೆದುಕೊಂಡು ಸೆನಿಟಿ ಕಾದುಕೊಳ್ಳುವುದು, ನಿಲುಕಬಹುದಾದಷ್ಟು ಜೀವಿಗಳು ಮಕ್ಕಳೊಂದಿಗೆ ಸಂತಸವನ್ನು ಹಂಚಿಕೊಳ್ಳುವುದು ಮತ್ತು ಮಮತೆಯ ವಲಯವನ್ನು ವಿಸ್ತರಿಸುವುದು” ಎಂದಿದ್ದರು. ಹದಿನೆಂಟರ ಹರೆಯಕ್ಕೇ ಪ್ರಬುದ್ಧ ಕತೆ ಕವನಗಳನ್ನು ರಚಿಸಿದ್ದ ಜಯಂತರು, ಎಪ್ಪತ್ತು ತುಂಬಿದ ಈ ಸಂದರ್ಭದಲ್ಲೂ ಅದೇ ನಿಲುವು ಮತ್ತು ಲವಲವಿಕೆಯಿಂದ ಕ್ರಿಯಾಶೀಲರಾಗಿದ್ದಾರೆ. ದುಗುಡ ತುಂಬಿದ ಮನಸುಗಳಲ್ಲಿ, ಬಿರುಕುಬಿಟ್ಟ ಸಾಮಾಜದ ಇಂದಿನ ಪರಿಸ್ಥಿತಿಗಳಲ್ಲಿ ಸಣ್ಣ ತಂಗಾಳಿಯಾಗಿ ಸುಳಿದಾಡುತ್ತಿದ್ದಾರೆ.
ಕತೆಗಾರನಾಗಿ ನಾನೆಂದೂ ಮುನ್ನುಡಿಗಾಗಲಿ ಬೆನ್ನುಡಿಗಾಗಲಿ ಜಯಂತರನ್ನು ಕೇಳಿದ್ದಿಲ್ಲ. ನನ್ನ ಕತೆಗಳ ಬಗ್ಗೂ ಅವರ ಅಭಿಪ್ರಾಯ ಅನಿಸಿಕೆ ಕೇಳಿದ್ದಿಲ್ಲ. ಅವರಾಗಿಯೂ ಹೇಳಿದ್ದಿಲ್ಲ. ಸಹಜವಾಗಿಯೇ ಆ ಒಂದು ಅಸಮಾಧಾನ ಇರುವುದು ನಿಜ. ಆದರೆ ಕೆಲವರಲ್ಲಿ ನನ್ನ ಕತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಕೇಳಿದ್ದೇನೆ. ಹಿರೇಗುತ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮತ್ತು ಸಂವೇದನಾಶೀಲ ಕತೆಗಾರರೂ ಆದ ರಾಜೀವ ಕೋನಳ್ಳಿ ಅವರು ಜಯಂತರು ನನ್ನ ಕತೆಗಳ ಕುರಿತು ಅವರೊಡನೆ ಆಡಿದ ಪ್ರಶಂಸೆಯ ಮಾತುಗಳನ್ನು ಇತ್ತೀಚೆಗೆ ಹಂಚಿಕೊಂಡರು. ಅಂಥ ಮೆಚ್ಚುಗೆಯ ಮಾತುಗಳನ್ನು ಕೇಳಿದಾಗ ಹೆಮ್ಮೆಯ ಭಾವ ಮೂಡಿವುದು ಸಹಜ. ಆದರೂ ಕತೆಗಾರನಾಗಿ ಜಯಂತರ ವ್ಯಕ್ತಿತ್ವ ಮತ್ತು ಪರವಶಗೊಳಿಸುವ ಕತೆಗಳ ಪ್ರಭಾವದಿಂದ ದೂರವುಳಿಯಲು ಪ್ರಯತ್ನಿಸುತ್ತೇನೆ;ಅದು ಕಷ್ಟದ ಕೆಲಸ ಎಂಬ ಅರಿವಿದ್ದರೂ.
ರಂಗಶಂಕರದಲ್ಲಿ “ಜತೆಗಿರುವನು ಚಂದಿರ” ಶೋನಲ್ಲಿ ಎದುರಾದಾಗ ಊರು ಮತ್ತು ಮುಂಬೈ ನಮಗಿಬ್ಬರಿಗೂ ಕಾಮನ್ ಆಗಿರುವುದರಿಂದ ಆಡಲು ಮಾತುಗಳಿದ್ದವು. ಆದರೆ ಆ “ಜಯಂತಜಂಗುಳಿ”ಯ ನಡುವೆ ನಮ್ಮ ಮಾತುಕತೆ ಅಪೂರ್ಣವಾಗುಳಿಯಿತು. ತಡರಾತ್ರಿ ವರೆಗೂ ಸುತ್ತುವರಿದಿದ್ದ ಅಭಿಮಾನಿಗಳ ನಡುವೆ ಅವರನ್ನು ಬಿಟ್ಟು ಹೇಳದೇ ಹೊರಟುಬಿಟ್ಟಿದ್ದೆ. ನಡುರಾತ್ರಿಯಲ್ಲಿ ಮರಳುವಾಗ ಆಕಾಶದಲ್ಲಿ ಚಂದ್ರನ ಗೈರು ಹಾಜರಿಯಿದ್ದರೂ, “ಜತೆಗಿರುವನು ಚಂದಿರ” ನಾಟಕದ ಚಂದಿರನ ರೂಪಕವು ದಾರಿಯನ್ನು ಬೆಳಗುತ್ತಿತ್ತು. ರಷ್ಯಾದ ಕಥೆಗಳ ಆಧಾರದ ಮೇಲೆ ರಚಿಸಿದ ಫಿಡ್ಲರ್ ಆನ್ ದಿ ರೂಫ್ ನಾಟಕವನ್ನು ಜಯಂತರು ಕನ್ನಡದ ಗುಣಕ್ಕೆ ರೂಪಾಂತರಿಸಿರುವ ರೀತಿ, ಕಾವ್ಯಮಯ ಮಾತಿನ ಸಂಭಾಷಣೆ ಮನಸ್ಸನ್ನು ಆವರಿಸಿಕೊಂಡಿತ್ತು. ಅವರ ಬರವಣಿಗೆಯ ಅದಮ್ಯ ಚೈತನ್ಯದ ಬಗ್ಗೆ ಆರಾಧನೆಯ ಭಾವ ಉಕ್ಕುತ್ತಿತ್ತು. ಆದರೆ ಜಯಂತರ ಮೋಹನ ಮುರಳಿಯಿಂದ ದೂರವುಳಿ ಕತೆಗಾರನೆ ಎಂದು ಬುದ್ಧಿ ಎಚ್ಚರಿಸುತ್ತಿತ್ತು.
ನಾನುಳಿದುಕೊಂಡ ತಾಣ ತಲುಪಿದಾಗ ಜಯಂತರಿಂದ ಮೆಸೇಜು! “ನಿನ್ನನ್ನು ನೋಡಿ ರಾಶಿ ಖುಶಿ ಆಯ್ತು. ಚಿಪ್ಪಿಕಲ್ಲು ಬಸಳೆ ಬೆರಕೆ ಜೊತೆ ಗಂಜಿ ಉಂಡಂಗೆ ಆಯ್ತು….ನಾಳೆ ಮುಂಬೈಗೆ ಹೊರಟಿದ್ದೇನೆ” ಎಂದಿತ್ತು. ಇದು ಟಿಪಿಕಲ್ ಜಯಂತ ಗುಣ. ಇಂಥ ಗುಣದಿಂದಾಗಿಯೇ ಅವರ ಮಮತೆಯ ವಲಯದಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ!






0 Comments