ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಳಿಗಾಲದಲ್ಲಿ ಮಳೆಕವಿಯ ದಿನ..

-ಸದಾಶಿವ ಸೊರಟೂರು

ಜನ ಅವರ ಬೇಲ್ ಅನ್ನು ಸದಾ ನಿರಾಕರಿಸಲಿ…

ನನಗಷ್ಟೇ ನೀನು ಕೊಡುವಾಗ ಪಾಠ
ಹೃದಯಾನೇ ನನ್ನ ಗುರುದಕ್ಷಿಣೆ
ತುಟಿ ಕಚ್ಚಿ ಆಹಾ ಬರೆವಾಗ ನೀನು
ನನಗಂತು ಬೇಕು ಹಿತರಕ್ಷಣೆ..

ಹಿತವಾದ ಸಂಗೀತದೊಂದಿಗೆ ಈ ಸಾಲುಗಳನ್ನು ಕೇಳಿಸಿಕೊಂಡವರು ತಾವು ಹಾಯ್ದು ಬಂದ ಪ್ರೀತಿ ನೆನಪಿಸಿಕೊಂಡು ತುಂಟ ನಗೆ ಬೀರುತ್ತಾರೆ. ಪ್ರೀತಿಸುವವರು ತಮ್ಮ‌ ಪ್ರೀತಿಯ ಪ್ರಾರ್ಥನೆ ಗೀತೆಯಂತೆ ಗುನುಗಿ ಕೊಳ್ಳುತ್ತಾರೆ. ಪ್ರೀತಿಸದ ಮನಸುಗಳು ಒಂದು ಹಿಡಿ ಪ್ರೀತಿಗಾಗಿ ಎದ್ದು ನಿಲ್ಲುತ್ತವೆ.

ಇಂತಹ ನೂರೆಂಟು ಸಾಲುಗಳಲಿ ನೀವು ನುಗ್ಗಿ ಹೋದರೆ ಕ್ಷೇಮವಾಗಿ ಖಾಲಿ ಹೃದಯದಿಂದ ವಾಪಸು ಬರಲು ಸಾಧ್ಯವಿಲ್ಲ. ಇಂತಹ ನೂರೆಂಟು ಸಾಲುಗಳನು ಕೊಟ್ಟು ಅಪಾಯಕ್ಕೆ ತಳ್ಳಿದವರು ನಮ್ಮ‌ ಕನ್ಮಡದ ಹೆಮ್ಮೆಯ ಮಳೆ ಕವಿ ಜಯಂತ್. ಅದಿರಲಿ ಈ ಮುಂದಿನ ಸಾಲುಗಳನು ಓದಿಕೊಳ್ಳಿ.‌

ಕಂಗಳಲಿ ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ
ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೋ ಹೋಗಿದೆ ಮರೆತು
ನಾನ್ಯಾರು ಹೇಳು ಆದರೆ..

ಇದನ್ನು ಸಿನೆಮಾದಲ್ಲಿ ನೋಡಿದರೆ ಅದೊಂದು ಚಿತ್ರಗೀತೆ. ಚಿತ್ರನೋಡದೆ ಕೇಳಿದರೆ ಭಾವಗೀತೆ. ಹೇಳದೆ ಕೇಳದೆ ಓದಿದರೆ ಪ್ರಿಯಕರ ಬರೆದ ಪ್ರೇಮಪತ್ರ. ಅವನು ಅವಳು‌ ಪಕ್ಕ ಪಕ್ಕ ಕೂತು ಆಡಿಕೊಂಡರೆ ಅದು ಹೃದಯದ ಪಿಸು ಮಾತು. ಪ್ರೀತಿಯನು ಇಷ್ಟೊಂದು ಚೆಂದವಾಗಿ, ಒಪ್ಪವಾಗಿ, ನವಿರಾಗಿ, ಅತೀ ಸರಳವಾಗಿ, ಎದೆಯೊಳಗೆ ನಮ್ಮ ಅರಿವಿಗೆ ಬಾರದಂತೆ ಉಳಿದು ಹೋಗಲು ಬರೆಯಲು ಸಾಧ್ಯವೇ ಅನಿಸಿದಾಗ ನೀವು ಜಯಂತ್ ನೆನಪಿಸಿಕೊಂಡರೆ ಅದೇ ಉತ್ತರ.

ಸರ್, ಮಧುರಗೀತೆಗಳ ಯುಗ ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್ ಅವರ ಕಾಲಕ್ಕೇ ಮುಗಿದುಹೋಯ್ತು ಅಲ್ಲವಾ’ ಎಂದು ಒಮ್ಮೆ ಯಾರೊ ಗೀತಪ್ರಿಯ ಅವರನ್ನು ಪ್ರಶ್ನಿಸಿದಾಗ ಗೀತಪ್ರಿಯ ತಕ್ಷಣವೇ ಹೇಳಿದರು: `ಈಗಲೂ ಒಳ್ಳೊಳ್ಳೆಯ ಹಾಡುಗಳು ಬರ್ತಾ ಇವೆ. ಅದರಲ್ಲೂ ಜಯಂತ್ ಕಾಯ್ಕಿಣಿ ಬರೀತಾರಲ್ಲ? ಅವರ ಹಾಡುಗಳು ವೆರೀ ಗುಡ್ ಅನ್ನುವಷ್ಟು ಚನ್ನಾಗಿರ್ತವೆ. ಅವರು ಬಳಸುವ ಒಂದೊಂದು ಪದದಲ್ಲೂ ಜೀವ ಇರುತ್ತೆ. ತೂಕ ಇರುತ್ತೆ. ಪ್ರೀತಿ ಇರುತ್ತೆ. ಬೆರಗಿರುತ್ತೆ. ಲಾಲಿತ್ಯ ಇರುತ್ತೆ. ಇಡೀ ಸನ್ನಿವೇಶದ ತೀವ್ರತೆಯನ್ನು ಹೆಚ್ಚಿಸುವಂಥ ಶಕ್ತಿ ಜಯಂತ್ ಕಾಯ್ಕಿಣಿಯವರ ಹಾಡುಗಳಿಗಿರುತ್ತೆ. ಅನುಮಾನವೇ ಬೇಡ. ಕನ್ನಡ ಸಿನಿಮಾ ಸಾಹಿತ್ಯಕ್ಕೆ ಒಂದು ಹೊಸ ಉಡುಗೆ ತೊಡಿಸಿದವರು ಜಯಂತ ಕಾಯ್ಕಿಣಿ. ಗೀತ ಸಾಹಿತ್ಯಕ್ಕೆ ಹೊಸತು ಎಂಬಂಥ ಪದಗಳನ್ನೂ, ಸಾಲುಗಳನ್ನೂ ಬಳಸಿ ಗೆದ್ದದ್ದು ಕಾಯ್ಕಿಣಿಯವರ ಹೆಚ್ಚುಗಾರಿಕೆ’ ಎಂದಿದ್ದರು.

ಜಯಂತ್ ಅವರದು ಕುಸುರಿ ಕೆಲಸ. ದೊಡ್ಡದು ಕೆತ್ತುವುದು ಸುಲಭ. ಕುಸುರಿಯೇ ಕಷ್ಟ. ಅವರು ಪ್ರೀತಿಯನ್ನು ವರ್ಣಿಸಲು ಹೋಗುವುದಿಲ್ಲ ಅದರ ಮೇಲೆ ಚೆಂದದ ಕಸೂತಿ ಹಾಕುತ್ತಾರೆ. ಅಲ್ಲಿ ನಿಮಗೊಂದು ಹೊಸ ನೋಟ ದಕ್ಕುತ್ತದೆ. ಥಟ್ಟನೆ ಹೇಳಿದಂತೆ ಕಂಡರು ತಡೆದು ಹೇಳುವುದು ಅವರ ಶೈಲಿ. ಆಗಷ್ಟೇ ಮಿಂದು ಬಂದ ಹಸಿ ತರುಣಿಯಂತಹ ಅವರ ಸಾಲುಗಳಿಗೆ ವಶವಾಗದೆ ಉಳಿಯುವುದಾದರೂ ಹೇಗೆ?

ಅವರ ಹಾಡಿನಲ್ಲಿ ಧೋರಣೆಗಳಿಲ್ಲ. ವಾದಗಳಿಲ್ಲ, ವಿಚಾರದ ಹೇರಿಕೆ ಇಲ್ಲ. ಪ್ರೀತಿಯ ವ್ಯಾಖ್ಯಾನಗಳಿಲ್ಲ. ಒಪ್ಪಿಸಿಕೊಳ್ಳಿ ಎಂಬ ಹಠವಿಲ್ಲ. ಬರೀ ಪ್ರೀತಿ ತನ್ನ ಪಾಡಿಗೆ ತಾನಿದ್ದು ನಿಮ್ಮನ್ನು ಆಕ್ರಮಿಸುತ್ತದೆ. ಗಾಳಿಯೊಂದು ಮೆಲ್ಲಗೆ ಬೀಸಿ ನೆಲಕ್ಕೆ ಬಿದ್ದ ಹೂವೊಂದುನ್ನು ಮಾತಾಡಿಸಿ ನವೀರಾಗಿ ಬೆನ್ನು ಸವರಿ ಹೋಗುವಂತೆ ಅವರ ಹಾಡಿನ ಸಾಲುಗಳು ಎದೆಯನು ಸವರಿ ಹೋಗುತ್ತವೆ. ಮರದಿಂದ ಕಳಚಿದ ಎಲೆಯೊಂದು ಗಾಳಿಯೊಂದಿಗೆ ಪಿಸುಗುಡುತ್ತಾ ನೆಲಸೇರುವಂತೆ ಕಾಡುತ್ತವೆ. ಪ್ರೇಮದ ನವಿರು ಮಾತ್ರವಲ್ಲದೆ ಅದರ ವಿರಹ ಚಡಪಡಿಕೆ, ತುಂಟತನ, ಏಕಾಂತ, ಒಂಟಿತನವು ಅವರ ಕೈಯಲ್ಲಿ ಚಮತ್ಕಾರ ಪಡೆಯುತ್ತವೆ.

ಅವರ ಹಾಡಿನ ಸಾಹಿತ್ಯದಲ್ಲಿ ಗಂಭೀರತೆಯೇ ಇಲ್ಲ ಎನ್ನುವವರಿದ್ದಾರೆ. ಅವರ ಶೈಲಿ ಗದರಿಸಿ ತಿನ್ನಿಸುವ ಊಟವಲ್ಲ ಅದೇ ಊಟವನ್ನು ಅಮ್ಮನಂತೆ ಮುದ್ದಿಸಿ ತಿನ್ನಿಸುವ ಪುಶ್ಕಳ ಭೋಜನ. ಖಾತ್ರಿಗೆ ಬೇಕಾದರೆ ಈ ಕೆಳಗಿನ ಸಾಲುಗಳನ್ನು ಗುನುಗಿಕೊಳ್ಳಿ.

ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲಿ ಬೆಳಕಾದರೆ ಅದು ಪ್ರೇಮವೇ

ಏಕಾಂತದಿ ಕೈಗನ್ನಡಿ ಹಿಡಿದಾಗ ನೀನು
ಆಗಂತುಕ ಎದುರಾಗುವ
ಕಂದೀಲಿನ ಬೆಳಕಲ್ಲಿ ಸರಿಯಾಗಿ ನೋಡು
ನಿನ್ನಾಳದ ಬಹುರೂಪವ

ನಮಗೇನು ಅಲ್ಲ ಇದು ಅನಿಸಿದ್ದರಲ್ಲಿ ಮತ್ತೇನು ವಿಶೇಷವಾದದ್ದನ್ನು ತೋರಿಸಿ ಸದ್ದಿಲ್ಲದೆ ನಮ್ಮ ಎದೆಗೆ ದಾಟಿಸಿ ಸುಮ್ಮನೆ ಕೂತು ಬಿಡುವ ಅವರು ಪ್ರೀತಿಯನ್ನು ಮನಸಿನೊಳಗಿನ‌ ಧ್ಯಾನದ ಮೂಲಕ ನೋಡುತ್ತಾರೆ. ಅವರ ಯಾವ ಸಾಲುಗಳಲ್ಲೂ ಬಲವಂತವಿಲ್ಲ. ಅವು ದುಂಬಾಲು ಬೀಳುವುದಿಲ್ಲ.

ಸರಳ ರೂಪಕಗಳಿವೆ, ಸಂಕೀರ್ಣತೆ ಇಲ್ಲ.‌ ಹೊಸ ಭಾವವಿದೆ ಹಳೆಯದರ ಗೊಡವೆ ಇಲ್ಲ. ಅವೇ ಅವೇ ಉಪಮೆಗಳು ಬಂದು ಕಾಡುವುದಿಲ್ಲ. ಅದು ಸತ್ವದ ಬಗ್ಗೆ ತಕರಾರು ಎತ್ತುವುವುದಿಲ್ಲ, ತತ್ವದ ಭಾಷಣಗಳಿಲ್ಲ.. ಹುಡುಗಿಯೊಬ್ಬಳ ಥಟ್ಟನೆ ಕೊಡುವ ಮುತ್ತಿನಂತಿರುತ್ತದೆ. ಅವರ ಹಾಡುಗಳಲ್ಲಿ ಮೆಲೊಡಿ ಬರೀ ನಾದದ್ದಲ್ಲ ಅರ್ಥದ್ದೂ‌ ಕೂಡ. ಈಗಿನ ಕಾಲದ ಅಬ್ಬರ ಸಂಗೀತದ ನಡುವೆ ಕಳೆದುಹೋಗುತ್ತಿರುವ ಸಿನೆಮಾ ಸಾಹಿತ್ಯದ ಮಧ್ಯೆ‌ ನಿಮ್ಮನ್ನು ಸಾವಕಾಶವಾಗಿ ಕೂರಿಸಿ ಎದೆಯೊಳಗೆ ಹಿತವಾಗಿ ಪ್ರತಿ ಅಕ್ಷರವನ್ನು ನುಗ್ಗಿಸುತ್ತವೆ ಅವರ ಹಾಡುಗಳು.‌ ಪದಪದವೂ ಸ್ವಚ್ಛ, ಸಮೃದ್ಧ ಮತ್ತು ಸುಂದರ.

ಹಾಡಿಗೆ ಕೇವಲ ವೇದನೆ, ಸಂವೇದನೆ ಇದ್ದರಷ್ಟೆ ಸಾಲದು. ಅದು ನಿಮ್ಮನ್ನು ಗುನುಗಲು ಹಚ್ಚಬೇಕು. ಅದಕ್ಕೆ ಸ್ವರಜ್ಞಾನ, ಲಯಬದ್ಧತೆ, ಅಂತ್ಯಪ್ರಾಸ ಮತ್ತು ಅರ್ಥ ಕೂಡಿಸುವ ಪ್ರತಿಭೆ ಅತೀ ಮುಖ್ಯ. ಎಷ್ಟೊ ಹಾಡುಗಳ ಮೊದಲ ಸಾಲಿಗೆ ಎರಡನೆ ಸಾಲಿಗೆ ಸಂಬಂಧವೇ ಇರುವುದಿಲ್ಲ. ಆದರೆ ಜಯಂತ್ ಅವರು ಇಡೀ ಒಂದು ಹಾಡು ಕೂಡು ಕುಟುಂಬದಂತೆ ಅಲ್ಲಿ ಎಲ್ಲವೂ ಸಿಕ್ಕುತ್ತದೆ. ಕಿವಿಗೂ ಇಂಪು ಮನಸ್ಸಿನ ತಣ್ಣನೆಯ ಅನುಭವ, ಎದೆಯೊಳಗೆ ಸಣ್ಣಗೆ ಮಳೆ.

ಕವಿಯೂ ಚಿತ್ರಗೀತೆ ರಚನೆಕಾರರೂ ಆಗಿಹೋದವರಲ್ಲಿ ಬಹಳ ಕಡಿಮೆ ಜನ. ಬೇಂದ್ರೆ, ಕುವೆಂಪು ಅವರ ಒಳ್ಳೆಯ ಹಾಡುಗಳಿವೆ ಅವು ಸಿನೆಮಾಕ್ಕೆ ಬರೆದ ಹಾಡುಗಳಲ್ಲ. ಜಯಂತ್ ಅದ್ಬುತ ಸಾಹಿತಿ‌ ಕೂಡ ಆಗಿರುವುದು ಅವರ ಸಿನೆಮಾ ಹಾಡುಗಳಿಗೆ ಮತ್ತಷ್ಟು ಚೆಂದ ಕಂಡಿವೆ. ಅದ್ಬುತ ಕವಿತೆಗಳಂತಿವೆ.

ಚಿಗುರಿದ ಕನಸು ಚಿತ್ರ ಓ ಆಜಾರೆ ಹಾಡಿನಿಂದ ಶುರುವಿಟ್ಟುಕೊಂಡು ಇಂದಿಗೂ ನಿರಂತರವಾಗಿ ಹೃದಯದ ಮೇಲೆ ಹಿತವಾದ ದಾಳಿ ಮಾಡುತ್ತಾ ಹಾಡು ಕೇಳುವ ಕ್ಷಣಗಳನ್ನು ಮಧುರವಾಗಿರಿಸಿರುವ ಜಯಂತ್ ಅವರ ಈ ಸಿಹಿದಬ್ಬಾಳಿಕೆ ಸದಾ ಜಾರಿಯಲ್ಲಿರಲಿ ಎಂದು ಕೇಳುಗರು ಆಶಿಸುತ್ತಾರೆ. ಕನ್ನಡ ಪ್ರೇಮಗೀತೆಗಳಿಗೆ ಒಂದು ಹೊಸ ಆಯಾಮ ಕೊಟ್ಟ ಜಯಂತ್ ಅವರ ಈ ಕುರಿತಾದ ವಿನಮ್ರತೆ ಅವರ ಹಾಡಿನಷ್ಟೇ ಮಧುರ ಮತ್ತು ಸರಳ ‘ನನ್ನದೇನು‌ ಇಲ್ಲ, ಹಾಡು ಬರೆಯಲು ನಿರ್ಧೇಶಕ ಸಿನೆಮಾದಲ್ಲಿ ಒಂದು ಸನ್ನಿವೇಶ ಕೊಡ್ತಾನೆ, ಸಂಗೀತಗಾರ ಟ್ಯೂನ್ ಕೊಡ್ತಾನೆ. ನನ್ನದೇನು ನಾಲ್ಕು ಸಾಲು ಸೇರಿಸುವುದಷ್ಟೆ’ ಅನ್ನುವ ಅವರ ಈ ಮಾತು ಅವರ ಹಾಡಿನಷ್ಟೇ ನಮಗೆ ಇಂಪು.

ಚೆಂದದ ರೂಪಕಗಳ ದಂಡಕಾರಣ್ಯದಲ್ಲಿ ನಿಮ್ಮನ್ನು ನುಗ್ಗಿಸಿ, ಅಲೆಲ್ಲಾ ಅಲೆದಾಡಿಸಿ, ಪ್ರೇಮದ ಮಳೆ ಸುರಿಸಿ ನಿಮ್ಮನ್ನು ನೆನೆಸಿ, ನೀವು ಗಡಗಡ ನಡುಗುವಾಗ ಮತ್ತೊಂದು ತುಂಟ ಸಾಲುಗಳಿಂದ ನಿಮ್ಮನ್ನು ಬೆಚ್ಚಗಾಗಿಸಿ, ಪ್ರೇಮದ ಹುಚ್ಚನ್ನು ಸದಾ ಜಾರಿಯಲ್ಲಿಡುವ ಅವರ ಈ ಮೋಡಿಗೆ ಪ್ರೇಮಿಗಳೆಂದೂ ಅವರನ್ನು ಕ್ಷಮಿಸುವುದಿಲ್ಲ.

ಈ ವಿಷಯದಲ್ಲಿ ಸದಾ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದ ಜಯಂತ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.. ಜನ ಅವರ ಬೇಲ್ ಅನ್ನು ಸದಾ ನಿರಾಕರಿಸಲಿ.

‍ಲೇಖಕರು Admin

24 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading