-ಬಸವರಾಜ ಸಾದರ
ಶಹರದ ಮನೆಗಳು
ಎಲ್ಲಿ ನೋಡಿದಲ್ಲೆಲ್ಲ
ಮುಚ್ಚಿದ ಬಾಗಿಲುಗಳೇ ಈ ಶಹರಗಳಲ್ಲಿ!
ಹೇಗೆ ಬರಬೇಕು ಹೊರಗಿನ ತಿಳಿಗಾಳಿ ಒಳಗೆ,
ಹೇಗೆ ಹೋಗಬೇಕು ಒಳಗಿನ ಕೊಳೆಗಾಳಿ ಹೊರಗೆ?
ಭಿನ್ನವಲ್ಲ ಬಾಗಿಲಿಗಿಂತ ಕಿಟಕಿಗಳ ಮಾತೂ,
ಕಾಣಿಸಬಹುದು ಆಚೀಚಿನ ದೃಶ್ಯ
ಹಣಕದು ಹವೆ ಮಾತ್ರ, ಗಾಜಿನ ಪಡಕುಗಳ ದಾಟಿ,
ಗೆರೆ ಬಿರುಕುಗಳೂ ಇರದ ಚೌಕಟ್ಟುಗಳ ಬಂಧ
ಸುಳಿಗಾಳಿಯ ಪ್ರವೇಶ ಇನ್ನೆಲ್ಲಿಂದ?
ಜಗಳಗಳ ಮಾತಿರಲಿ, ಪಾತ್ರೆ-ಪಡಗ ಬೀಳುವ
ಸದ್ದೂ ಕೇಳಿಸದು ಹೊರಗೆ,
ಅನುಮಾನ, ಇದ್ದಾವೆಯೇ ಇಲ್ಲಿ ಜೀವಂತ ಪ್ರಾಣಿಗಳು?
ಮಾತು ಮೀರಿ, ಕೈ ಕೈ ಮಿಲಾಯಿಸುವ
ಹಂತ ತಲುಪಿದರೂ ಒಳಗೆ, ಪಂಚರೂ ಇಲ್ಲ-
ಪಂಚಾಯತಿಯೂ ಇಲ್ಲ,
ನೇರ ಪೋಲೀಸ್ ಸ್ಟೇಶನ್ನೇ ಗತಿ
ಒಳಗಿನವರೇ ಹೊರಹೋಗಿ,
ಇಲ್ಲ, ಫೋನಿನಲ್ಲಿ ದೂರು ಸಲ್ಲಿಸುವ ವರೆಗೂ.
ಹಿತ್ತಿಲ ಬಾಗಿಲಗಳದಂತೂ ಪುಟ್ಟಪೂರ ಗೈರುಹಾಜರಿ!
ಗೋಡೆಗಳಲ್ಲಿ ಬಂದಿಯಾದ ಮನುಷ್ಯರಷ್ಟೇ ಅಲ್ಲ,
ಪಿಸು ಮಾತು, ಮೌನದ ರೋದನ, ಯಾವುದೂ
ಕಾಣದು ಕೇಳದು ಆಚೆ-
ಮನೆ-ಮನ ಎಲ್ಲದರೊಳಗೂ ಕುದಿ ಈಚೆ.
ಕಂಪೌಂಡುಗಳದೋ, ಮತ್ತೊಂದೇ ಅಧ್ಯಾಯ!
ಗೆರೆ ಕೊರೆದ ಬೌಂಡರಿಗಳ ಮೇಲೆ ಪಾಯ ತೋಡಿ
ಕಟ್ಟಿದ ಕಲ್ಲಿನ ಬುನಾದಿ ಮೇಲೆದ್ದ ಗೋಡೆಗಳ ನಡುವೆ
ಹಾಯಲೂ ಅಸಾಧ್ಯ ಇರುವೆ, ಹಲ್ಲಿ- ಹಾವರಾಣಿ.
ಮೇಲೆ ಕಬ್ಬಿಣದ ಕಟಾಂಜನದ ಬಲೆ,
ಬರಬಹುದು ಅಲ್ಲಿ ಗಾಳಿ ಮಾತ್ರ;
ಹಾಕಿದ್ದರೆ ಅಲ್ಲೂ, ಅಕ್ರೆಲಿಕ್ ಶೀಟ್ ಅಥವಾ ಗಾಜು
ಸಂಪೂರ್ಣ ತಡೆ ಅದಕ್ಕೂ; ಕಂಡೀತು
ಒಳಗಿನವರ ಮಸಕು ಮಸಕು ಪೋಜು.
ಜಗತ್ತೆಂದರೆ ಅಷ್ಟೇ,
ನಾಲ್ಕು ಗೋಡೆಗಳ ಒಳಗಿನ ಗುಪ್ತ ಸಮಾಚಾರ!
ಹುಟ್ಟಿದಾಗ ಹೊರಡುವ ಸಂತಸದ ಅಳು,
ನೊಂದು-ಬೆಂದಾಗಿನ ನೋವಿನ ನರಳು
ಸತ್ತಾಗ ಕರುಳು ಕಿತ್ತು ಬರುವ ಆಕ್ರಂದನ- ಇದ್ದರೆ
ಯಾವುದಕ್ಕೂ ಇಲ್ಲಿಲ್ಲ ಹೊರಹೋಗುವ ದಾರಿ,
ಒಳಗೊಳಗೇ ಕುದ್ದು, ಕುದಿಸುವುದು ಸೋಜಿಗವಲ್ಲ,
ಬೆವರ ಜೊತೆ ರಕ್ತವನ್ನೂ ಇಳಿಸುವ ಪರಿ.
ನರಳು ಅರಳು ಕೆರಳು
ಯಾವ ಸದ್ದೂ ಕೇಳದ ಬರೀ ಲೆಕ್ಕಾಚಾರದ ಗೂಡು,
ಜಗತ್ತಿಗೆ ತೆರೆದುಕೊಳ್ಳದ,
ಜಗತ್ತಿನೊಂದಿಗೆ ಬೆರೆಯದ ಈ ಮನೆಯೊಳಬಂಧಿಗರಿಗೆ,
ಅದೆಂಥ ಅನಾಥರ ಪಾಡು!!






0 Comments