ಜಗತ್ತನ್ನು‌ ಪೊರೆವ ತಾಯ್ತನ…

ಕಂ ಕ ಮೂರ್ತಿ

ಆ ಬಾಡಿದ ಮುಖ ನೋಡಿ ನನಗೆ ಬೇಸರವಾಯಿತು. ಗಾಬರಿಯೂ ಆಯಿತು. ಜತೆಯಲ್ಲಿ ಪುಟಿಯುವ ಎರಡು ಮಕ್ಕಳಿದ್ದರೂ ಆಕೆಗೆ ಖುಷಿಯಿಲ್ಲ. ಹತ್ತಿರ ಹೋದರೂ ಬಾಲ ಅಲ್ಲಾಡಿಸಿ ಕೂಯ್ಗುಡುವ ಉತ್ಸಹಾಹವಿಲ್ಲ. ಅದು ಹಸಿದಿರಬಹುದು ಅಂತ ಅನಿಸಿತು. ಹೀಗೆ ಬಿಟ್ಟರೆ ನಾಳೆ ಬೆಳಿಗ್ಗೆ ಹೊತ್ತಿಗೆ ಅದು ಸತ್ತು ಹೋಗಬಹುದು. ಮಕ್ಕಳಿಗೆ ಊಡಿಸಲೂ ಮೊಲೆಯಲ್ಲಿ ಹಾಲಿಲ್ಲದಿರಬಹುದು.

ಅದು ನನ್ನ ಮಲೆನಾಡಿನ ಕೆರೆ. ನಾನು ಸೀದಾ ಪಕ್ಕದ ಅಂಗಡಿಗೆ ಓಡಿದೆ‌. ನಾಕಾರು ಬನ್ ಖರೀದಿಸಿ ತಂದು ಆ ನಾಯಿಯ ಬಾಯಿಗೆ ಹಿಡಿದೆ. ಅದಕ್ಕೆ ಜೀವ ಕಳೆ ಬಂತು. ಕಣ್ಣಿನಲ್ಲಿ ಜೀವ ಸಂಚಾರ. ಶಕ್ತಿ ಸಂಚಯ ಮಾಡಿಕೊಂಡು ಉತ್ಸಾಹದಿಂದ ಎದ್ದು ನಿಂತು ಪಕಪಕ ಓಡಿ ಮರಿಗಳನ್ನು‌ ಮೂಸಿ ನೋಡಿತು. ಬನ್ ಒಂದನ್ನು ಬಾಯಲ್ಲಿ ಕೊಚ್ಚಿಕೊಂಡು ಓಡಿ ಹೋಯಿತು. ನಾನು‌ ಕುತೂಹಲದಿಂದ ನೋಡುತ್ತಲೇ ಇದ್ದೆ. ಒಂದು ಜಾಗವನ್ನು ಮೂಸಿ ನೋಡಿ ಅಲ್ಲಿ ನೆಲ ಕೆರೆಯಿತು. ಅದರೊಳಗೆ ಬನ್ ಇಟ್ಟು ದರಗೆಲೆಗಳಿಂದ ಅದನ್ನು‌ಮುಚ್ಚಿತು. ಅದು ನಾಳೆಯ ಆಹಾರ. ಮನುಷ್ಯನಿಗೆ ಇರುವಂತೆ ಪ್ರಾಣಿಗಳಿಗೂ ಸಂಗ್ರಹಣಾ ಬುದ್ಧಿ ಇದೆ. ಏಕೆಂದರೆ ಅದಕ್ಕೊಂದು ಸಂಸಾರವಿದೆ. ಅದನ್ನು ಪೊರೆಯುವ ಹೊಣೆಯಿದೆ.

ಮತ್ತೊಂದು ಬನ್ ಅನ್ನು ಗಬಗಬ ತಿಂದು ಹಸಿವು ಇಂಗಿಸಿಕೊಂಡಿತು. ಈಗ ಅದರ ಮುಖದ ಕಳೆ ನೋಡಬೇಕು. ಓಡೋಡಿ ಬಂದು ನನ್ನ ಪಾದ‌ ಮೂಸಿತು. ಎರಡು ‌ಮರಿಗಳು ಮೊಲೆಗೆ ಜೋತು ಬಿದ್ದು ಜೀವರಸ ಹೀರತೊಡಗಿದವು. ಆ ಕ್ಷಣ ತಾಯ್ತನದ‌ ಹಿಗ್ಗು ಅಲ್ಲಿ ಕಾಣಿಸಿತು. ಎಲ್ಲ ಜೀವಿಗಳು ತಮ್ಮ‌ ಕರುಳ ಬಳ್ಳಿಯನ್ನು ಪೊರೆಯುವುದು ಈ ಹಿಗ್ಗು ಅನುಭವಿಸಲಿಕ್ಕೆ ಅಂತ ಕಾಣುತ್ತೆ. ಪ್ರೀತಿಯನ್ನು ಉಣಿಸುವುದರಲ್ಲಿ ಎಂತ ಸುಖವಿದೆ!

ಕೆರೆಯ ಪಾತ್ರದಲ್ಲಿ ಹಬ್ಬಿದೆ ಜೀವಜಾಲ. ನವಿಲುಗಳು, ಪಾರಿವಾಳಗಳು, ಬಾತುಕೋಳಿಗಳು, ಕೆಂಭೂತಗಳು, ದೇವರ ಕೈಚಳಕದಲಿ ಸ್ರಷ್ಟಿಯಾದಂತಿರುವ ಕಿಂಗ್ ಫಿಶರ್. ನನ್ನ ಮಲೆನಾಡಿಗೆ ಭೂಷಣವಾದ ಕೆರೆ. ಕರೆಯ ಮೇಲೆ ಹಾರಾಡುವ ಬೆಳ್ಳಕ್ಕಿಯೊಂದು ಥಟ್ಟನೆ‌ ನೀರಿಗೆ ಹಾರುತ್ತದೆ. ಕ್ಷಣಾರ್ಧದಲ್ಲಿ ‌ಮೀನ‌ ಮರಿ ಕಚ್ಚಿಕೊಂಡು‌ ಮೇಲೇರುತ್ತದೆ. ಕಾಗೆ, ಪಾರಿವಾಳ, ಗುಬ್ಬಚ್ಚಿ ಹೀಗೆ ಎಲ್ಲಕ್ಕೂ ಅವುಗಳದೇ ಆದ ಅನ್ನವಿದೆ. ಇಡೀ ಪ್ರಕ್ರತಿ ಎನ್ನುವುದು ತಾಯಿಯ ಹಾಗೆ ಎಲ್ಲರನ್ನೂ ಪೊರೆಯುತ್ತದೆ. ಇಲ್ಲಿ ಎಲ್ಲರಿಗೂ ತಕ್ಕಷ್ಟು ಆಹಾರವಿದೆ. ಆದರೆ ಮನುಷ್ಯನ ದುರಾಸೆಗೆ ಅದು ಸಾಕಾಗುವುದಿಲ್ಲ. ಅವನು ವಸುಂಧರೆಯ ಒಡಲನ್ನು ಬಗೆಯುತ್ತಾನೆ. ತನಗೆ, ತನ್ನ ಕುಟುಂಬಕ್ಕೆ, ‌ಮುಂದಿನ ತನ್ನ ತಲೆಮಾರಿಗೆ ಸಂಗ್ರಹಿಸಿಡಲು ದೋಚುತ್ತಾನೆ. ಇದರಿಂದ ಕೆಲವರಿಗೆ ತಿಂದು ತೇಗುವಷ್ಟು ಆಹಾರವಾದರೆ ಇನ್ನು ಕೆಲವರ ಹೊಟ್ಟೆಗೆ ತಣ್ಣೀರ ಬಟ್ಟೆ.
ಪುಟ್ಟ ಹಕ್ಕಿಯಲಿ
ಜೀವವನಿಟ್ಟೆ
ದೊಡ್ಡ ಆನೆಯಲಿ ‌ಜೀವವನಿಟ್ಟೆ
ಬೆಟ್ಟದ ಮೇಲೆ ಪಶುಪಕ್ಷಿಗಳಿಗೆ ಆಹಾರವನಿಟ್ಟೆ
ನಿನ್ನ‌ ಕರುಣೆಯನೆಂತು ಕಾಣಲಿ?.
ಪ್ರಕ್ರತಿ ಎನ್ನಿ, ದೇವರೆನ್ನಿ ಅದು ಇಡೀ ಜಗತ್ತನ್ನು ಪೊರೆಯುತ್ತಿದೆ. ಎಲ್ಲರಿಗೂ ಬದುಕುವ, ಬದುಕಿಸುವ, ಸಂಭ್ರಮಿಸುವ ಹಕ್ಕು‌ನೀಡಿದೆ. ಆದರೆ ಒಂದು‌ ಜೀವಿ ತನ್ನ ದುರಾಸೆಗಾಗಿ ಇನ್ನೊಂದು ಜೀವಿಯ ಬದುಕುವ ಹಕ್ಕು‌ ಕಸಿದುಕೊಂಡಿತೋ, ಆ ಸಂಕಟದುರಿ ಇಡೀ‌ ಜೀವಜಾಲಕ್ಕೆ ತಾಕುತ್ತದೆ. ಪ್ರೀತಿ, ಕಾರುಣ್ಯದ ಜಾಗದಲ್ಲಿ ಸ್ವಾರ್ಥ, ನೀಚತನ ಮೇಳೈಸಿದಾಗ ಅನ್ಯಾಯ ಸ್ರಷ್ಟಿ ಆಗುತ್ತದೆ. ಮನುಷ್ಯ ಸ್ರಷ್ಟಿಸುವ ಈ ಪಾಪಕ್ಕೆ ಪ್ರಕೃತಿಯ ತಾಯ್ತನ ಮರುಗುತ್ತದೆ.

ಮತ್ತೊಂದು ದಿನ‌ ಅದೇ ಜಾಗದಲ್ಲಿ ದಿವ್ಯತೆಯೊಂದನ್ನು‌ ನಾನು‌ ಕಂಡೆ. ದಂಪತಿ‌ ಒಂದು ಪಾತ್ರೆಗೆ ಹಾಲು ಬಗ್ಗಿಸಿ ನಾಯಿ ಮರಿಗಳ ಮೂತಿಗೆ ಹಿಡಿಯುತ್ತಿದ್ದರು. ಸಾಕಷ್ಟು ಆಹಾರವಿಲ್ಲದೆ ಹೊಟ್ಟೆ ಅಳಕ್ಕಾದ ಮರಿಗಳ ಕಂಡು ಆ ತಾಯ‌ ಹೊಟ್ಟೆಯಲ್ಲಿ ಸಂಕಟದ ಉರಿಕಂಡೆ. ಯಾವಾಗ ಆ ಮಕ್ಕಳ ಮುಖ ಹಿಗ್ಗಿತೋ, ಆಗ ತಾಯ ಮುಖದಲ್ಲಿ ಧನ್ಯತೆಯ‌ ಮಿಂಚು ಹರಿದಾಡಿತು. ಒಂದು ತಾಯಿ ಇನ್ನೊಂದು ತಾಯಿಯ ಸಂಕಟ ಅರ್ಥಮಾಡಿಕೊಂಡು ತನ್ನ ಕರುಳ ಪ್ರೀತಿಯನ್ನು ಚಾಚಿದಂತಿತ್ತು ಆ ದ್ರಶ್ಯ. ಇಡೀ ಪ್ರಕೃತಿಯೇ ತಾಯಿಯಾಗಿದೆ.

ಒಂದು ವಸಂತ. ಮನೆಯ ಎದುರಿನ‌ ಹೊಂಗೆ‌ ಮರದ‌ ತುಂಬಾ ಎಳೆ ಚಿಗುರು. ಕೆಂಪಾನೆ‌ಚಿಗುರು. ನಿನ್ನೆ ಬೋಳಾಗಿದ್ದ ಮರ ಇಂದು ನವ ಚೈತನ್ಯದಿಂದ ಪುಟಿಯುತ್ತಿದೆ‌ ಅದು‌ ನಿಸರ್ಗದ ಒಡಲ ತಾಯ್ತನ. ತಾಯ್ತನ ಇರುವವರೆಗೆ ಸಾವಿಲ್ಲ. ಏಕೆಂದರೆ ಅದು ಕರುಳ ಬಳ್ಳಿಯ ಸಂಬಂಧದಿಂದ ಬೆಸೆದಿದೆ. ಇನ್ನೊಂದೆರಡು ದಿನ. ಮತ್ತೊಂದು ವಿಸ್ಮಯ ಕಣ್ಮುಂದೆ ಅರಳಿತು. ಮರದ ತುಂಬಾ ದ್ರಷ್ಟಿ ಬೊಟ್ಟು ಇಟ್ಟಂತೆ ಕಪ್ಪು ಚಿಟ್ಟೆಗಳು. ಒಂದಲ್ಲ ಸಾವಿರಾರು. ಪ್ರಕ್ರತಿಯಲ್ಲಿ‌ ಇಂತಹ ವಿಸ್ಮಯ ತಣ್ಣಗೆ ನಡೆಯುತ್ತದೆ. ಅಲ್ಲಿ ಗಡಿಬಿಡಿ ಇಲ್ಲ. ಮನುಷ್ಯ ಲೋಕದಲ್ಲಿ ಮಾತ್ರ ಗಡಿಬಿಡಿ. ಎಲ್ಲಿ ಅಪರಿಮಿತ ಸ್ವಾರ್ಥ ಇದೆಯೋ ಅಲ್ಲಿ ಆತಂಕ. ತತ್ವಜ್ಞಾನಿ ಒಬ್ಬನ ಮಾತು ನೆನಪಾಯಿತು. ಒಂದು ಹಸು ಅಥವಾ ಮೇಕೆಯ ಕಣ್ಣು ನೋಡಿ ಅದು ತಂಪಾಗಿರುತ್ತದೆ. ಮನುಷ್ಯನ ಕಣ್ಣು ನೋಡಿ ಎಷ್ಟು ಕಾತುರ, ಕಳವಳ. ಸ್ವಾರ್ಥವೇ ಇದಕ್ಕೆಲ್ಲ ಕಾರಣ.

ಕೆಲವರಿಗೆ ಆ ಚಿಟ್ಟೆಗಳು ನಿಸರ್ಗದ ವಿಸ್ಮಯವಾಗಿ ಕಾಣಲಿಲ್ಲ. ಅವು ಇನ್ನಷ್ಟು ಬೆಳೆದು ತೋಟಕ್ಕೆ ಲಗ್ಗೆ ಇಟ್ಟರೆ ಎಂಬ ಆತಂಕ. ಒಂದೆರಡು ದಿನ ಅವು ರೂಪಾಂತರಗೊಂಡು‌ ಕಂಬಳಿ ಹುಳುಗಳಾದವು. ಹೊಂಗೆ ಮರದ ಚಿಗುರೆಲೆಗಳನ್ನೆಲ್ಲ ಕಬಳಿಸಿದವು. ಮರುದಿನ ಮತ್ತಷ್ಟು ವಿಸ್ಮಯ. ಕಾಗೆ, ಕೆಂಭೂತಗಳಿಗೆ ಅವು ಪುಷ್ಕಳ ಭೋಜನವಾಗುತ್ತಿರುವುದನ್ನು‌ ಕಂಡೆ. ಸತ್ತು ಬಿದ್ದ ಕಾಗೆ ಯೊಂದನ್ನು ‌ಮರುದಿನ ಮುಂಗುಸಿ ಎತ್ತಿ ಕೊಂಡು ಓಡುತಿತ್ತು.

ಈ ಸರಪಣಿಗೆ‌ ಕೊನೆಯೆಂದು? ಇಡೀ ಜೀವ ಲೋಕದಲ್ಲಿ ತಾಯ ಕರುಳಬಳ್ಳಿ ಹಬ್ಬದ ಜಾಗ ಎಲ್ಲಿದೆ?
‘ಯಾದೇವಿ ಸರ್ವ ಭೂತೇಶು ಮಾತ್ರರೂಪೇಣ ಸಂಸ್ಥಿತಾ…..ದೇವಿಯು ಎಲ್ಲಾ ಜೀವಿಗಳಲ್ಲಿ ತಾಯಿ ಸ್ವರೂಪದಲ್ಲಿ ನೆಲೆಯಾಗಿದ್ದಾಳೆ ಎಂಬ ಮಾತು ಮನಸ್ಸನ್ನು ಆವರಿಸಿ ನಿಂತಿತು. ಜಗತ್ತಿನ ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂಬ ಭಾವದಿಂದ ನಾವು ನಮ್ಮ ಅಪರಿಮಿತ ಸ್ವಾರ್ಥವನ್ನು‌ ನಿಗ್ರಹಿಸಿಕೊಂಡು ಪ್ರೀತಿ, ಕಾರುಣ್ಯದಿಂದ ಬದುಕಿದರೆ ತಾಯ್ತನದ ಸ್ರಷ್ಟಿಯ ಸಂಭ್ರಮಕೆ‌ ಕೊರತೆ ಆಗದು. ಏಕೆಂದರೆ ತಾಯ್ತನದ‌ ಮೂಲಕ ಜಗತ್ತನ್ನು ‌ಪೊರೆಯುವುದು ಸೃಷ್ಟಿಯ ಒಂದು ನಿಯತಿ.

‍ಲೇಖಕರು Admin

May 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: