ಅವಧಾನಿಯವರನ್ನು ನೆನಪಿಸುವಂತೆ ಮಾಡಿದ ಪುಸ್ತಕ…

ಸುಧಾ ಆಡುಕಳ

ನಾನು ಓದುವ ಕಾಲಕ್ಕೆ ಉತ್ತರಕನ್ನಡದಲ್ಲಿ ಇದ್ದುದು ತಾಲೂಕಿಗೊಂದೇ ಡಿಗ್ರೀ ಕಾಲೇಜು. ಪಿ. ಯು. ಸಿ. ತರಗತಿಗಳು ಕೂಡಾ ಅಲ್ಲಿಯೇ ನಡೆತ್ತಿದ್ದುದು. ಪಿ. ಯು. ಸಿ. ಗಾಗಿ ಹೊನ್ನಾವರದ ಎಸ್. ಡಿ. ಎಂ. ಕಾಲೇಜಿಗೆ ಕಾಲಿಟ್ಟಾಗ ಬಾವಿಯ ಕಪ್ಪೆ ಸಮುದ್ರಕ್ಕೆ ಜಿಗಿದ ಅನುಭವ.

ಆಗ ಕಾಲೇಜಿನಲ್ಲಿ ಕಲಾವಿಭಾಗ ವಿಜೃಂಭಿಸುತ್ತಿದ್ದ ಸಮಯ. ಅವರ ಚಟುವಟಿಕೆಗಳೇನು? ಕಾರ್ಯಕ್ರಮಗಳ ಅಬ್ಬರಾಟವೇನು? ಸಾಲು, ಸಾಲು ಕೈಬರಹ ಪತ್ರಿಕೆಗಳ ಪ್ರಕಟಣೆಯೇನು? ಉಪನ್ಯಾಸಕರ ಬಗೆಗೆ ಅವರು ಹೇಳುವ ಬಣ್ಣಬಣ್ಣದ ಕಥೆಗಳೇನು? ಉಫ್…. ಹೊರಲಾರದ ಪುಸ್ತಕದ ಹೊರೆ ಹೊತ್ತು, ಪ್ರಯೋಗಾಲಯಗಳಲ್ಲಿ ಹೈರಾಣಾಗಿ ಕಳೆದುಹೋಗುವ ನನ್ನಂತಹ ವಿಜ್ಞಾನದ ವಿದ್ಯಾರ್ಥಿಗಳಿಗೆ ಅವರೆಲ್ಲ ಸ್ವಚ್ಛಂದ ಬಯಲಲ್ಲಿ ಹಾರುವ ಹಕ್ಕಿಗಳಂತೆ ಕಾಣುತ್ತಿದ್ದರು. ಅಂತದೊಂದು ಶ್ರೀಮಂತ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಲು ಹೆಚ್ಚಿನಮಟ್ಟಿಗೆ ಕಾರಣರಾಗಿರುತ್ತಿದ್ದವರು ಅಲ್ಲಿಯ ಕನ್ನಡ ಉಪನ್ಯಾಸಕರು. ಅವಧಾನಿ ಸರ್ ಅಂಥದೊಂದು ಅದ್ಭುತವಾಗಿ ನಮಗೆ ಕಾಣುತ್ತಿದ್ದರು.

ನಮ್ಮೂರಿನವರೇ ಆದರೂ ಧಾರವಾಡದಲ್ಲಿ ಓದಿದ್ದಕ್ಕೆ ಹೌದು ಕಣ್ರೀ, ಅಲ್ಲ ಕಣ್ರೀ ಎಂದು ಮಾತನಾಡುವ ಕಣ್ಣಿ ಸರ್, ಸದಾ ತರಗತಿಗಳಲ್ಲಿ ರಾಜಕೀಯ ವಿಡಂಬನೆಗಳನ್ನು ಮಾಡುವ ಎಸ್. ಡಿ. ಹೆಗಡೆ ಸರ್, ಬಾಯಲ್ಲೊಂದು ಕರ್ಚೀಪನ್ನು ಕಚ್ಚಿಕೊಂಡೇ ತರಗತಿಗೆ ಬರುವ ವೀಣಾಕರರು, ಕೆಲವೇ ಸಮಯವಿದ್ದರೂ ತಮ್ಮ ಚುರುಕಾದ ಮಾತಿನಿಂದ ನಮ್ಮನ್ನು ಪ್ರಭಾವಿಸಿದ ವಿಠ್ಠಲ ಭಂಡಾರಿ ಸರ್, ಉತ್ತರಪತ್ರಿಕೆಯಲ್ಲೂ ಬರವಣಿಗೆಯ ಶೈಲಿಯನ್ನು ಹೊಗಳುವ ಜಿ. ಎಸ್. ಹೆಗಡೆ ಸರ್… ಹೀಗೆ ಘಟಾನುಘಟಿಗಳೇ ಅಂದು ಕಾಲೇಜಿನಲ್ಲಿದ್ದರು. ಆದರೆ ಕನ್ನಡ ಮೇಜರ್ ಓದುವ ಮತ್ತು ಸಾಹಿತ್ಯಾಸಕ್ತ ವಿದ್ಯಾರ್ಥಿಗಳ ಕಣ್ಮಣಿಯೆಂದರೆ ಅವಧಾನಿ ಸರ್. ಅವರ ಪಾಠಕ್ಕೆ ಕೇವಲ ಅವರ ತರಗತಿಯ ವಿದ್ಯಾರ್ಥಿಗಳು ಮಾತ್ರವಲ್ಲ, ಬೇರೆ ವಿದ್ಯಾರ್ಥಿಗಳು ಬಂದು ಸೇರುತ್ತಿದ್ದರು. ಅವರು ಕಾರಿಡಾರಿನಲ್ಲಿ ನಡೆದುಹೋಗುತ್ತಿದ್ದರೆ ಜೊತೆಯಲ್ಲಿ ಒಂದು ವಿದ್ಯಾರ್ಥಿಗಳ ಗುಂಪು ಸದಾ ಇರುತ್ತಿತ್ತು.

ಸಾಹಿತ್ಯವೆಂದರೆ ಜೀವಬಿಡುತ್ತಿದ್ದ ನಾನು ಅದನ್ನೆಲ್ಲ ಆಸೆಗಂಗಳಿಂದ ನೋಡುತ್ತಿದ್ದೆ. ಐದು ವರ್ಷಗಳಲ್ಲಿ ಕೆಲವು ಪಾಠಗಳನ್ನು ಅವರು ನಮಗೆ ಮಾಡಿದ್ದರು. ವಿಜ್ಣಾನದ ವಿದ್ಯಾರ್ಥಿಗಳಿಗೆ ಭಾಷಾವಿಷಯದ ಬಗೆಗೊಂದು ಅಸಡ್ಡೆಯಿರುವುದರಿಂದ ಅವರ ಪಾಠವನ್ನು ಅಷ್ಟೇನೂ ಉತ್ಸಾಹದಿಂದ ಕೇಳುತ್ತಿರಲಿಲ್ಲ. ಕೆಲವೊಮ್ಮೆ ಅವರಿಗೆ ಬೇಸರವಾಗುವುದೂ ಇತ್ತು. ಅವರು ಮಾಡಿದ ಹರಿಶ್ಚಂದ್ರ ಕಾವ್ಯದ ಪಾಠ ಇನ್ನೂ ಮನಸ್ಸಲ್ಲಿ ಅಚ್ಚೊತ್ತಿದೆ.

ಕನ್ನಡ ಓದುವ ವಿದ್ಯಾರ್ಥಿಗಳನ್ನು ಮನೆಗೆ ಕರೆದುಕೊಂಡು ಹೋಗಿ, ಪುಸ್ತಕಗಳನ್ನು ನೀಡಿ, ನಾಟಕವಾಡಿಸಿ, ಸೆಮಿನಾರ್ ಗಳನ್ನು ಏರ್ಪಡಿಸಿ, ಹೊರಸಂಚಾರಕ್ಕೆ ಕರೆದುಕೊಂಡು ಹೋಗಿ ಕಥೆ ಕವನ ಬರೆಯಿಸಿ, ಬೆಳೆಸುತ್ತಿದ್ದ ಅಪ್ಪಟ ಗುರು ಅವರು. ಅವರಿಂದ ಪ್ರಭಾವಿತರಾದ ಅನೇಕ ವಿದ್ಯಾರ್ಥಿಗಳು ನಾಡಿನ ತುಂಬಾ ಇದ್ದಾರೆ.

ಶಿಕ್ಷಣ ಅಭಿಯಾನ, ವಿಜ್ಣಾನ ಪ್ರಸರಣ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅವಧಾನಿಯವರ ಹೆಜ್ಜೆಗುರುತುಗಳಿವೆ. ತನ್ನ ೫೨ನೇ ವಯದಲ್ಲಿಯೇ ಮರೆಯಾದ ಅವರನ್ನು ಮತ್ತೆ ನೆನಪಿಸಿದ್ದು ಶ್ರೀಪಾದಣ್ಣನ ಪುಸ್ತಕ ಸಂಗ್ರಹದಲ್ಲಿ ಸಿಕ್ಕಿದ ಈ ಪುಸ್ತಕ.

ಅವರು ಬರೆಯುತ್ತಿದ್ದುದು ತೀರ ವಿರಳ ಎಂದು ಬಲ್ಲವರು ಹೇಳುತ್ತಿದ್ದರು. ಒಮ್ಮೆ ಸಾಕ್ಷರತಾ ಆಂದೋಲನಕ್ಕೊಂದು ನಾಟಕ ಬರೆಸಲು ಅವರನ್ನು ಬಲವಂತವಾಗಿ ಕೋಣೆಗೆ ತಳ್ಳಿ ಬಾಗಿಲನ್ನೂ ಹಾಕಿಬಿಟ್ಟಿದ್ದರಂತೆ. ಆಗೊಂದು ಅತ್ಯುತ್ತಮ ನಾಟಕವನ್ನು ಅನಿವಾರ್ಯವಾಗಿ ಬರೆದಿದ್ದರು ಎಂಬುದು ದಂತಕತೆಯಾಗಿತ್ತು. ಹೀಗೆ ಬರೆದ ಅವಧಾನಿಯವರ ಎಲ್ಲ ಕವಿತೆಗಳನ್ನು ಅವರ ಮರಣದ ನಂತರ ಒಟ್ಟಿಗೆ ಪ್ರಕಟಿಸಿದ್ದಾರೆ.

ಬೆಂಕಿಬಳ್ಳಿಯ ರೋಮ್ಯಾನ್ಸ್ ಕವಿತೆಗಳು ಹೊಸಬಗೆಯವು.
ನೀ ಬರುವ ಮುಂಚೆ ಈ ಇಲ್ಲಿ
ಏನಿತ್ತೆ? ಬರೇ ಬೈಂಡ್ ಮಾಡಿದ ಅಲ್ಬಮ್ಮು;
ಎನ್ನುವ ಕವಿ ಪ್ರಿಯತಮೆಯ ನೆನಹಿನಲ್ಲಿ ಕಳೆದುಹೋಗುತ್ತಾರೆ.
ಗಾಂಧಿ ಬಂದರೂ ಗುಂಡಿಕ್ಕುವ ಗೋಡ್ಸೆಗಳಿಗೇನೂ ಕಮ್ಮಿಯಿಲ್ಲ
ಎನ್ನತ್ತಲೇ ಭಾಷಣಕ್ಕೆ ಗಾಂಧಿಯನ್ನು ಕರೆಯುತ್ತಾರೆ.
ಎಣ್ಣೆಯೇತಕೆ ಹುಡುಗಿ?
ಹೆಣ್ಣ ಮೈ ಎಣ್ಣೆ ಕಣೇ ಎಂದು ಅಭ್ಯಂಗಕ್ಕೆ ಕರೆವ ಹೆಣ್ಣನ್ನು ಹಾಸಿಗೆಗೆಳೆಯುವ ರಸಿಕತೆ ತೋರುತ್ತಾರೆ .
ಹೊತ್ತು ಮುಳುಗುವ ಮುನ್ನ ಕವನ ಸಂಕಲನದ ಕವನಗಳು ಸಮಾಜಮುಖಿಯಾಗಿವೆ.
ಕುದುರೆ ಕತ್ತೆಯಾಯಿತೆಂದರೆ ನಂಬುತ್ತೀರಿ
ಕತ್ತೆ ಕುದುರೆಯಾಗುವುದನ್ನು ಖಂಡಿಸುವ
ನಿಮಗೆ
ಕವಿತೆ ಎಂದರೆ ಬರೇ ಕವಿತೆ ಅಷ್ಟೆ
ಎನ್ನುವ ಕವಿ ತಾನು ಉತ್ತರಾಯಣಕೆ ಕಾಯುವುದಿಲ್ಲ ಎಂಬ ದಿಟ್ಟ ಉತ್ತರವನ್ನೂ ನೀಡುತ್ತಾರೆ. ಎಲ್ಲರೊಂದಿಗೆ ಹೊಂದಾಣಿಕೆಯಿಂದಿರುವ ಸಂಭಾವಿತರಿಗೆ
ನಿಮ್ಮೊಡನಿದ್ದೂ ನಿಮ್ಮಂತಾಗುವುದಕ್ಕೆ
ಸಾಧ್ಯವಾಗುವುದಿಲ್ಲ
ಯಾಕೆಂದರೆ ನಾನು ಸಂಭಾವಿತನಲ್ಲ
ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ.
ಗಂಗೋತ್ರಿಯ ಹಕ್ಕಿಗಳು ಕವನ ಸಂಕಲನದ ಕವಿತೆಗಳೆಲ್ಲವೂ ತುಂಬ ಅರ್ಥಪೂರ್ಣವಾಗಿವೆ.
ಸ್ವಾತಿ ಹನಿ ಮುತ್ತಾಗಿ ಚಿಪ್ಪೊಡೆವ ಗಳಿಗೆ
ನೆಲನೆಲದ ಪುಲಕ ಕರೆ ಗಂಗೋತ್ರಿ ಬಳಿಗೆ
ಲಕ್ಷ ನಕ್ಷತ್ರಗಳ ಬಾಚಿ ನೆಲಮನೆಯ
ಹರಿದ ನಕಾಶೆಗೆ ಬಣ್ಣ ಹಚ್ಚದ ತನಕ
ದಕ್ಕದು ಪದಕ
ಚರಿತ್ರೆಗೆಲ್ಲಿದೆ ಹೇಳು ಅಗುಳಿ ಚಿಲಕ?
ಉರಿವ ಪಲ್ಲಂಗದಲಿ ಹನಿ ಹನಿಯಾಗಿ ಇಂಗಿದಳು
ಗಾಂಧಾರಿಯ ಬದುಕ ಹೇಳಲು ಈ ಒಂದೇ ಸಾಲು ಸಾಕು.
ಮುಂದಿನ ಭಾಗದಲ್ಲಿ ಅವರ ಅಪ್ರಕಟಿತ ಕವನಗಳು ಸೇರಿವೆ. ಅದರಲ್ಲೊಂದು ಪದ್ಯದಲ್ಲಿ ಪುಟ್ಟ ಹುಡುಗಿ ಹೊನ್ನಾವರಕ್ಕೆ ಹೋಗುವ ಎನ್ನುತ್ತಾಳೆ. ಯಾಕೆಂದು ಕೇಳಿದಾಗ
“ಇಲ್ಲಿ ಕೋಗಿಲೆ ಕೂಗ್ತೇ ಇಲ್ಲೆ”
ಎಂದು ಮುಗ್ಧಳಾಗಿ ಉತ್ತರಿಸುತ್ತಾಳೆ. ಮಲೆನಾಡಿನಲಿ ಕೋಗಿಲೆ ಕೂಗದಿರುವ ಸೋಜಿಗಕ್ಕೆ ಕವಿಗೆ ಎಂದೂ ಇಲ್ಲದ ದಿಗಿಲಾಗುತ್ತದೆ! ಪಶ್ಚಿಮಘಟ್ಟಕ್ಕೆ ಮಾತುಕೊಟ್ಟ ಕುಸುಮಾ ಸೊರಬ ಅವರು ತೀರಿಕೊಂಡಾಗ ಬರೆದ ಕವಿತೆ ಅವರ ಇಡೀ ಬದುಕಿನ ಭಾಷ್ಯದಂತಿದೆ.
ಹಾಗೆಯೇ ಅವರ ಕವಿತೆಗೂ ಒಂದು ಭಾಷ್ಯವನ್ನು ಕವಿ ಬರೆಯುವುದು ಹೀಗೆ
ಹೊಂಗದಿರ ಕುಡಿ ತುಂಬ ಸಿಡಿವ
ರಾಗ ರಸದೊರತೆಯ ಪುಟ್ಟ ಕೋಗಿಲೆ
ಕೊರಳು-ನನ್ನ ಗೀತೆ
ಕೊನೆಯ ಭಾಗದಲ್ಲಿರುವ ಕಿರುಗವಿತೆಗಳು ತುಂಬಾ ಸೊಗಸಾಗಿವೆ.
ಕವಿ
ಫಿನಿಕ್ಸಿನ ಹಾಗೆ
ಸುಟ್ಟುಕೊಂಡು
ಮತ್ತೆ ಹುಟ್ಟುತ್ತಾನೆ
ನೆನಪುಗಳೆ ಹಾಗೆ
ಸೂಟಕೇಸಿನಲಿ ಮಡಿಸಿಟ್ಟ
ಗರಿ ಮುರಿಯದ
ಸೀರೆ
ನಿನ್ನ ಕಣ್ಣ
ಕ್ಯಾಂಪಸ್ಸಿನಲಿ
ಸೂರ್ಯ ಚಂದ್ರರ ಶಿಬಿರ
ಪ್ರೇಮ
ನಿನ್ನ ಕಣ್ಣಂಚಲಿ
ನಾನು ಕರಗಿದ್ದೇನೆ
ಪಾಠದ ನಡುವೆಯೊಮ್ಮೆ ಎಲ್ಲೋ ಕಳೆದುಹೋಗುತ್ತಾ, ಮತ್ತೆ ಹ್ಹಾ… ಎಂದು ಉದ್ಘಾರ ತೆಗೆದು ವಾಸ್ತವಕ್ಕೆ ಮರಳುವ ಅವರನ್ನು ಒಂದಿಡೀದಿನ ನೆನಪಿಸುವಂತೆ ಮಾಡಿದ ಪುಸ್ತಕವಿದು.

ಕನ್ನಡ ಸಂಘದ ಕಾರ್ಯಕ್ರಮಗಳಿಗೆ ತರಗತಿಗಳನ್ನು ಬಿಟ್ಟು ಓಡುತ್ತಿದ್ದ ದಿನಗಳು ನೆನಪಾದವು. ಅಪರೂಪಕ್ಕೆ ಕ್ಲಾಸಿಗೆ ಬರುವ ನನ್ನನ್ನು ನೋಡಿ ಫಿಸಿಕ್ಸ್ ಕಾರಂತ ಸರ್, “ಏನಿವತ್ತು ಕಪಿಗಳು ಕ್ಲಾಸಿನಲ್ಲಿದ್ದಾರೆ?” ಎಂದು ಅಣಕಿಸುತ್ತಿದ್ದುದು ನೆನಪಾಗಿ ನಗು ಬಂತು. ವಿದ್ಯಾರ್ಥಿಗಳೊಂದಿಗೆ ಪರಿಚಯವೇ ಇಲ್ಲದಂತೆ ವರ್ತಿಸುವ ವಿಜ್ಞಾನದ ಉಪನ್ಯಾಸಕರ ನಡುವೆ ಹಳ್ಳಿಯಿಂದ ಕನ್ನಡ ಮಾಧ್ಯಮದಲ್ಲಿ ಓದಿ ಬಂದ ನಮಗೆ ಅವಧಾನಿ ಸರ್ ಪ್ರೀತಿಯ ಒರತೆಯಂತೆ ಕಾಣುತ್ತಿದ್ದರು. ಈಗ ಕಲಾವಿಭಾಗವೇ ಅದರಲ್ಲೂ ಕನ್ನಡ ಮೇಜರ್ ವಿಷಯವೇ ಮಾಯವಾಗುತ್ತಿರುವುದು ಅತ್ಯಂತ ವಿಷಾದನೀಯ.

ಅವಧಾನಿ ಸರ್ ಗೆ ಅವರದೇ ಭಾಷೆಯಲ್ಲೊಂದು ನಮನ.

ಇಕಾ, ಅಡ್ಡಬಿದ್ದೆ, ನಮಸ್ಕಾರ…

‍ಲೇಖಕರು Admin

May 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಎಂಥಾ ಸೊಗಸಾದ ಕವಿತೆಗಳು! ಅವಧಾನಿ ಸರ್ ಅವರನ್ನು ಮನಂಬುಗುವಂತೆ ಕಟ್ಟಿ ಕೊಟ್ಟಿರಿ. ಥ್ಯಾಂಕ್ಯೂ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: