‘ರಾಕಿಂಗ್’ ಅಮ್ಮಂದಿರು:

ಪ್ರಸಾದ್ ನಾಯ್ಕ್

ಮೂಲ: ವಿಲ್ ಸ್ಮಿತ್ ಆತ್ಮಕಥನ “WILL” ಕೃತಿಯಿಂದ

(ಚಿತ್ರ: ಅಮ್ಮ ಕ್ಯಾರೋಲಿನ್ ಸ್ಮಿತ್ ಮತ್ತು ಮಗ ವಿಲ್ ಸ್ಮಿತ್ ಅಮ್ಮನ 85 ನೇ ವಯಸ್ಸಿನ ಸಂಭ್ರಮಾಚರಣೆಯ ಖುಷಿಯಲ್ಲಿ ಕುಣಿಯುತ್ತಿರುವುದು)

ಖ್ಯಾತ ಅಮೆರಿಕನ್ ನಟ ವಿಲ್ ಸ್ಮಿತ್ ನ ಅಮ್ಮ ಕ್ಯಾರೋಲಿನ್ ಗೆ ತಿರುಗುವ ಹುಚ್ಚು. ಅದರಲ್ಲೂ ಮಗ ಹಾಲಿವುಡ್ ನಲ್ಲಿ ಯಶಸ್ವಿ ನಟನಾದ ನಂತರ, ತನ್ನ ಗೆಳತಿಯರೊಂದಿಗೆ ಜಗತ್ತಿನ ಹಲವು ತಾಣಗಳಿಗೆ ನಿರಂತರವಾಗಿ ಹೋಗಿದ್ದೇ ಹೋಗಿದ್ದು. ಇಂಥದ್ದೇ ಒಂದು ಪ್ರವಾಸದ ಗುಂಗಿನಲ್ಲಿ ಮುಳುಗಿಹೋಗಿದ್ದ ಕ್ಯಾರೋಲಿನ್ ಗೆ ಆಕಸ್ಮಿಕವಾಗಿ ಒಮ್ಮೆ ಎಡವಟ್ಟಾಯಿತು.

ಕ್ಯಾರೋಲಿನ್ ಆಗ ಟರ್ಕಿಯಲ್ಲಿದ್ದರು. ಕ್ರೂಸ್ ಪ್ರಯಾಣವನ್ನು ಮುಗಿಸಿ ಹೋಟೇಲಿಗೆ ಮರಳುವ ಸಂದರ್ಭದಲ್ಲಿ, ಅವರ ಕಾಲು ಹಲಗೆಯಂಥಾ ಸಂದಿನೆಡೆಗೆ ಸಿಲುಕಿ ಕುಸಿದು ಬೀಳುವಂತಾಯಿತು. ಅಂದು ಅವರು ನಡೆಯುವ ಸ್ಥಿತಿಯಲ್ಲಿರದಿದ್ದ ಪರಿಣಾಮವಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕ್ಯಾರೋಲಿನ್ ಗೆ ಮಧುಮೇಹದ ಸಮಸ್ಯೆ ಇದ್ದ ಪರಿಣಾಮವಾಗಿ ಚಿಕಿತ್ಸೆಯೂ ಸವಾಲಾಗಿತ್ತು ಎಂದರಡ್ಡಿಯಿಲ್ಲ.

ಅಪಘಾತ ಚಿಕ್ಕದಾದರೂ ಚೇತರಿಕೆಯು ಸುಲಭದ್ದಲ್ಲ ಎಂದು ಲೆಕ್ಕಹಾಕಿತು ವೈದ್ಯರ ತಂಡ. ಅಂತಿಮವಾಗಿ ವೈದ್ಯರು ಮಾಡಿದ ನಿರ್ಧಾರವೆಂದರೆ ಅವರ ಕಾಲನ್ನು ಕತ್ತರಿಸದೆ ಬೇರೆ ವಿಧಿಯಿಲ್ಲ ಎಂದು!
ವಿಲ್ ಸ್ಮಿತ್ ಮತ್ತು ಕುಟುಂಬವು ಈ ದೊಡ್ಡ ಸುದ್ದಿಯನ್ನು ಕ್ಯಾರೋಲಿನ್ ಗೆ ಇನ್ನೂ ತಿಳಿಸಿರಲಿಲ್ಲ. ಸ್ಮಿತ್ ಕುಟುಂಬದ ಸದಸ್ಯರು ಅವರಿಗೆ ಧೈರ್ಯ ತುಂಬುತ್ತಿದ್ದರು, ಗುಣವಾಗುತ್ತದೆ ಬಿಡು ಎಂದು ಸಾಂತ್ವನ ಹೇಳುತ್ತಿದ್ದರು, ಒಂದೆರಡು ವಾರಗಳ ಕಾಲ ಹೀಗೆ ಕಾಲಹರಣ ಮಾಡಿದ್ದೂ ಆಯಿತು.

ಇದು ಬಹುಷಃ ಸುಲಭಕ್ಕೆ ಸರಿಹೋಗುವಂಥದ್ದಲ್ಲ ಎಂದು ಕ್ಯಾರೋಲಿನ್ ಗೆ ಮನದಟ್ಟಾಗುತ್ತಿತ್ತೋ ಏನೋ… ಮಗ ವಿಲ್ ನನ್ನು ಕರೆದು ಏನಯ್ಯಾ ಸಮಸ್ಯೆ ಎಂದು ಕೇಳಿದರು. ವಿಲ್ ಎಂದಿನಂತೆ ಏನೂ ಚಿಂತೆ ಮಾಡಬೇಡಮ್ಮಾ ಎಂದು ಸಾಗಹಾಕಿದ. ಮುಂದೆ ನಡೆಯುವ ಸಂಭಾಷಣೆ ಮತ್ತು ಸಂದರ್ಭಗಳು ಕ್ಯಾರೋಲಿನ್ ಎಂಥಾ ‘ರಾಕಿಂಗ್ ಅಮ್ಮ’ ಎನ್ನುವುದನ್ನು ಸಾಬೀತು ಪಡಿಸುವಂತಿತ್ತು ನೋಡಿ…

ಅಮ್ಮ: ನನಗೇನು prosthetic leg (ಕೃತಕ ಕಾಲು) ಜೋಡಿಸುವ ಪ್ಲಾನ್ ಮಾಡುತ್ತಿದ್ದಾರೋ ಈ ವೈದ್ಯರು?
ಮಗ: ಇನ್ನೂ ಏನೂ ನಿರ್ಧರಿಸಿಲ್ಲ. 50-50 ಚಾನ್ಸು ಅನ್ನಿಸುತ್ತೆ…
ಅಮ್ಮ: ಕಾಲು ಕತ್ತರಿಸಲೇ ಬೇಕು ಎಂದಿಟ್ಟುಕೊಳ್ಳೋಣ; ಯಾವಾಗ ಮಾಡ್ತಾರಂತೆ?
ಮಗ: ಮೂರು ತಿಂಗಳಾಗಬಹುದು…
ಅಮ್ಮ: ಹೇಯ್… ಮೂರು ತಿಂಗಳ ನಂತರ ನನಗೆ ಮತ್ತೊಂದು ಕ್ರೂಸ್ ಪ್ರವಾಸ ಮಾಡಲಿಕ್ಕಿದೆ. ಅದೇನು ಮಾಡೋದಿದ್ದರೂ ಆದಷ್ಟು ಬೇಗ ಮಾಡಿ. ಕಾಲು ಕತ್ತರಿಸುವುದೇ ಆದಲ್ಲಿ ಬೇಗ ತೆಗೆದುಬಿಡಿ. ಈ ನೆಪದಲ್ಲಿ ನಾನು ನನ್ನ ಟ್ರಿಪ್ ಮಿಸ್ ಮಾಡಿಕೊಳ್ಳಲಾರೆ.
ಮಗ (ಮನದೊಳಗಿನ ಸ್ವಗತದ ಮಾತು): ಇಂಥಾ ಗ್ಯಾಂಗ್ ಸ್ಟರ್ ಡೈಲಾಗ್ ನೈಜಜೀವನದಲ್ಲಿ ಬಿಡಿ, ಸಿನಿಮಾದಲ್ಲೂ ನನಗೆ ಸಿಕ್ಕಿಲ್ಲಪ್ಪಾ!!

ಮುಂದೆ ಕ್ಯಾರೋಲಿನ್ ಬಯಸಿದಂತೆಯೇ ಎಲ್ಲವೂ ನಡೆಯಿತು. ವಾರದೊಳಗೆ ಆಕೆಯ ಕಾಲೊಂದರ ಮೊಣಗಂಟಿನ ಕೆಳಗಿನ ಭಾಗವನ್ನು ವೈದ್ಯರು ದೇಹದಿಂದ ಬೇರ್ಪಡಿಸಿದರು. ನೋವು ಇರಲಿಲ್ಲವೆಂದಲ್ಲ. ಆದರೆ ಬಹುಷಃ ಆಕೆಯ ಮನೋಸ್ಥೈರ್ಯ ಅದಕ್ಕೂ ಮಿಗಿಲಾದ ಸಂಗತಿಯಾಗಿತ್ತು. ಹೀಗೆ ನೋಡನೋಡುತ್ತಿದ್ದಂತೆ ಕೃತಕ ಕಾಲೂ ಬಂದುಬಿಟ್ಟಿತು. ವೈದ್ಯರ ನಿರೀಕ್ಷೆಗೂ ಮೀರಿದ ವೇಗದಲ್ಲಿ ಚೇತರಿಸಿಕೊಂಡ ಕ್ಯಾರೋಲಿನ್ ತಮ್ಮ ಕನಸಿನಂತೆ ಮುಂದಿನ ಪ್ರವಾಸಕ್ಕಾಗಿ ಸಿದ್ಧರಾಗಿ ನಿಂತಿದ್ದರು. ಈ ಬಾರಿ ತಮ್ಮ ಕೃತಕ ಕಾಲಿನೊಂದಿಗೆ!

ಈ ಕತೆಯ ಮತ್ತೊಂದು ವಿಚಿತ್ರವೆಂದರೆ ಕ್ಯಾರೋಲಿನ್ ಟರ್ಕಿಯಿಂದ ಮರಳಿದ ಕೆಲವೇ ದಿನಗಳಲ್ಲಿ ಟರ್ಕಿಯಲ್ಲಿ ದೊಡ್ಡದೊಂದು ಭೂಕಂಪ ಸಂಭವಿಸಿತು. ಸಾವಿರಾರು ಮಂದಿ ಭೂಕಂಪದ ಹೊಡೆತಕ್ಕೆ ಸಿಕ್ಕಿ ದಾರುಣ ಸಾವಿಗೀಡಾದರು. ಸ್ವತಃ ಕ್ಯಾರೋಲಿನ್ ಇದ್ದ ಆಸ್ಪತ್ರೆಯು ಹೇಳಹೆಸರಿಲ್ಲದಂತೆ ನೆಲಸಮವಾಗಿತ್ತು.
ಮರಳಿ ತಮ್ಮ ಅಮೆರಿಕಾ ನಿವಾಸವನ್ನು ತಲುಪಿದ್ದ ಕ್ಯಾರೋಲಿನ್ ಅಂದು ತಮ್ಮ ಪ್ರಾರ್ಥನೆಯಲ್ಲಿ, ದೇವರೆದುರು ತಲೆಬಾಗುತ್ತಾ ಹೀಗಂದರಂತೆ: “ದೇವರು ದೊಡ್ಡವನು… ನಾನು ಕಳೆದುಕೊಂಡಿದ್ದು ಕಾಲು ಮಾತ್ರ… Thank you God…”

ಅಮ್ಮಂದಿರ ದಿನದ ಸುಸಂದರ್ಭದಲ್ಲಿ ನಮ್ಮ ನಡುವಿನ ಎಲ್ಲಾ ‘ರಾಕಿಂಗ್’ ಅಮ್ಮಂದಿರಿಗೂ ಈ ಪುಟ್ಟ ಸತ್ಯಕತೆಯು ಅರ್ಪಣೆ…

‍ಲೇಖಕರು Admin

May 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಕಾಲು ಕತ್ತರಿಸಿದ ಮೇಲೆ ಹೌ ಡಿಡ್ ಶೀ ರಾಕ್ ಇಟ್? ಎಂದು ವಿವರವಾಗಿ ಅರಿಯಲು ಪ್ರಸಾದ್ ರ ‘ ವಿಲ್’ ಗಾಗಿ ಕಾದಿರುವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: