ಜಂಗಲ್ ಬುಕ್ : 3-D ಕನ್ನಡಕ ಕಳಚಿಟ್ಟು ನೋಡಿದರೆ..

ಜಂಗಲ್ ಬುಕ್ ಎಂಬ ಹೊಸ ವಸಾಹತುಶಾಹಿ

Harish kera

ಹರೀಶ್ ಕೇರ

ಈ ವಾರದ ತೆರೆಗೆ ಬಂದ ಡಿಸ್ನಿ ಸಂಸ್ಥೆಯ `ಜಂಗಲ್ ಬುಕ್’ ಸಿನಿಮಾ ನೋಡುಗರಿಗೆ ಅದ್ಭುತ ಅನುಭವ ನೀಡುತ್ತದೆ. ಮೌಗ್ಲಿ ಎಂಬ ಕಾಡಿನ ಹುಡುಗನ ಜೀವನ, ಹೋರಾಟಗಳನ್ನು ಕಟ್ಟಿಕೊಡುವ ಈ ಚಿತ್ರದ ಸ್ಕ್ರಿಪ್ಟ್ ಬಿಗಿಯಾಗಿದೆ; ಅನಗತ್ಯ ಅಂಶಗಳೇ ಇಲ್ಲ. ಎರಡುವರೆ ಗಂಟೆಯ ಭರ್ತಿ ಮನರಂಜನೆಯನ್ನು ನೀಡುವ ಈ ಚಿತ್ರಕ್ಕೆ ನೀಡುವ ಕಾಸಿಗೆ ಮೋಸವಿಲ್ಲ. ಇಷ್ಟನ್ನು ಒಪ್ಪಿಕೊಂಡು ಮುಂದಿನ ಚರ್ಚೆಯನ್ನು ಬೆಳೆಸಬಹುದು.

rudyard kiplingಇಂಗ್ಲಿಷ್ ನ ಖ್ಯಾತನಾಮ ಸಾಹಿತಿಗಳಲ್ಲೊಬ್ಬನಾದ ರುಡ್ಯಾರ್ಡ್ ಕಿಪ್ಲಿಂಗ್, `ಜಂಗಲ್ ಬುಕ್’ ಕೃತಿಯನ್ನು ಬರೆದದ್ದು 1892ರಲ್ಲಿ. ಆ ಹೊತ್ತಿಗೆ ಇನ್ನೂ ಮೋಹನದಾಸ ಕರಮಚಂದ ಗಾಂಧಿ ದಕ್ಷಿಣ ಆಫ್ರಿಕದಿಂದ ಭಾರತಕ್ಕೇ ಬಂದಿರಲಿಲ್ಲ. ಭಾರತದಲ್ಲಿ ಅಲ್ಲಲ್ಲಿ ಬ್ರಿಟಿಷರ ಆಡಳಿತದಿಂದ ಬಿಡುಗಡೆ ಪಡೆಯಬೇಕು ಎಂಬ ಪ್ರಜ್ಞೆ ಜಾಗೃತಗೊಳ್ಳುತ್ತಿದ್ದ, ಹಲಕೆಲವು ಕಡೆ ಹೋರಾಟಗಾರರು ರೂಪುಗೊಳ್ಳುತ್ತಿದ್ದ ಕಾಲ ಅದು. ಬಲವಾಗಿ ಊರಿದ್ದ ಬ್ರಿಟಿಷ್ ಸಾಮ್ರಾಜ್ಯದ ಬೇರುಗಳು ಅಲುಗಾಡಲು ಇನ್ನೂ ಆರಂಭವಾಗಿರಲಿಲ್ಲವಾದರೂ, ಕೊಂಬೆಗಳಿಗೆ ಕಾಳ್ಗಿಚ್ಚಿನ ಸೂಚನೆ ಮುಟ್ಟಲಾರಂಭಿಸಿತ್ತು.

1865ರಲ್ಲಿ ಮುಂಬೈಯಲ್ಲಿ ಹುಟ್ಟಿದ ಕಿಪ್ಲಿಂಗ್, ಭಾರತದಲ್ಲಿ ಸುತ್ತಾಡಿದ್ದು ನಿಜ. ಆತ ಇಲ್ಲಿ ಸಿವಿಲ್ ಆಂಡ್ ಮಿಲಿಟರ್ ಗೆಝೆಟ್ ನ ಪತ್ರಕರ್ತನಾಗಿದ್ದ. ಆದರೆ ಎಂದೂ ಭಾರತದ ಆಳದ ಕಾಡುಗಳಿಗೆ ಭೇಟಿ ಕೊಟ್ಟವನಲ್ಲ. ಭಾರತದ ಕಾಡುಗಳ ಬಗ್ಗೆ ಆತ ಇತರ ಬ್ರಿಟಿಷರಿಂದ ಕೇಳಿದ ಸಂಗತಿಗಳನ್ನೆಲ್ಲ ತನ್ನ ಕೃತಿಯಲ್ಲಿ ಬರೆದ. ಜಂಗಲ್ ಬುಕ್ ಅನ್ನು ಆತ ಬರೆದದ್ದು 1894ರಲ್ಲಿ ಅಮೆರಿಕದಲ್ಲಿದ್ದಾಗ. ಆಗ ತನ್ನ ದುಡ್ಡಿಟ್ಟಿದ್ದ ಬ್ಯಾಂಕೊಂದು ಮುಳುಗಿಹೋಗಿ ಅಕ್ಷರಶಃ ದಿವಾಳಿಯಾಗಿದ್ದ.

ಅದು, ಭಾರತದ ಜನಜೀವನ ಮತ್ತು ಕಾಡುಗಳ ಬಗ್ಗೆ ಪಾಶ್ಚಾತ್ಯರಲ್ಲಿ ವಿಚಿತ್ರ ಕುತೂಹಲ ಮೊಳಕೆಯೊಡೆಯುತ್ತಿದ್ದ ಕಾಲ ಕೂಡ ಆಗಿತ್ತು. ಅದೇ ಕಾಲಕ್ಕೆ ಭಾರತದ ಕಾಡುಗಳಲ್ಲಿದ್ದ ಹುಲಿ, ಆನೆ ಮುಂತಾದ ದೊಡ್ಡ ಪ್ರಾಣಿಗಳನ್ನು ಬ್ರಿಟಿಷ್ ಬೇಟೆಗಾರರು ಸಿಕ್ಕಸಿಕ್ಕಂತೆ ಬೇಟೆಯಾಡಿ ಅವುಗಳ ಚರ್ಮಗಳನ್ನು ತಮ್ಮ ಮನೆಯ ದಿವಾನಖಾನೆಯಲ್ಲಿ ಟ್ರೋಫಿಗಳಂತೆ ಪ್ರದರ್ಶಿಸುತ್ತ, ತಮ್ಮ ಬೇಟೆಯ ಅನುಭವಗಳನ್ನು ಅತಿರಂಜಿಸಿ ಬರೆಯುತ್ತ ಮನರಂಜನೆ ಕೊಡುತ್ತಿದ್ದರು. ಹೀಗಾಗಿ ಕಿಪ್ಲಿಂಗ್ ನ ಕೃತಿ ಬ್ರಿಟಿಷ್ ಆಡಳಿತವಿದ್ದ ಕಡೆಗಳಲ್ಲೆಲ್ಲ ದಿಡೀರ್ ಜನಪ್ರಿಯತೆ ಗಳಿಸಿದ್ದರಲ್ಲಿ ಆಶ್ಚರ್ಯವಿಲ್ಲ.

`ಜಂಗಲ್ ಬುಕ್’ನ ಪರಿಚಯವಿರದ ಓದುಗರಿಗೆ ಅದರ ಕಥೆ ಸೂಕ್ಷ್ಮವಾಗಿ ಇಂತಿದೆ: ಇದು ಹಲವಾರು ಕಾಡಿನ ಕಥೆಗಳ ಗುಚ್ಛ. ಮುಖ್ಯವಾಗಿ ಮೌಗ್ಲಿ ಎಂಬ ಕಾಡಿನ ಹುಡುಗನ ಕಥೆ. ಮನುಷ್ಯ ಶಿಶುವೊಂದು ಎಳೆವರೆಯದಲ್ಲೇ ಕಾಡುಪಾಲಾಗುತ್ತದೆ. ಅದನ್ನು ತೋಳಗಳ ಗುಂಪೊಂದು ಸಾಕುತ್ತದೆ. ಮನುಷ್ಯರಂತೆ ಮಾತನಾಡಲು ಬರದ, ತೋಳಗಳಂತೆ ಕೂಗಿ ಸಂಭಾಷಿಸುವ ಈತನಿಗೆ ಭಗೀರಾ ಎಂಬ ಕಪ್ಪು ಚಿರತೆ ಮತ್ತು ಬಾಲೂ ಎಂಬ ಕರಡಿ ಸ್ನೇಹಿತರು. ಶೇರ್ಖಾನ್ ಎಂಬ ಹೆಬ್ಬುಲಿ, ಕಾ ಎಂಬ ಹೆಬ್ಬಾವು, ಕಿಂಗ್ ಲೂಯಿ ಎಂಬ ಉರಾಂಗುಟಾನ್ ಕೋತಿಗಳು ಈತನ ಶತ್ರುಗಳು. ಈತನ ಸಾಹಸಗಳೇ ಕೃತಿಯ ವಸ್ತು. ಒಮ್ಮೆ ಈತ ಜನರ ನಡುವೆ ಗ್ರಾಮದಲ್ಲೂ ಬದುಕಬೇಕಾಗುತ್ತದೆ. ಆದರೆ ಆ ಬದುಕಿನ ರೀತಿ ಅವನಿಗೆ ಸರಿಹೋಗದೆ ಕಾಡಿಗೆ ಮರಳುತ್ತಾನೆ. ಇದಲ್ಲದೆ ಅಪ್ರಧಾನವಾದ ಕೆಲವು ಇತರ ಕತೆಗಳು, ಪದ್ಯಗಳು ಈ ಕೃತಿಯಲ್ಲಿವೆ.

ಕಿಪ್ಲಿಂಗ್ ನ ಪುಸ್ತಕದಲ್ಲಿ, ಭಾರತದ ಬಗ್ಗೆ ಆತ ಕಂಡುಕೇಳಿದ ಸಂಗತಿಗಳೆಲ್ಲ ದಾಖಲಾಗಿವೆ. ಉದಾಹರಣೆಗೆ, ತೋಳಗಳು ಸಾಕಿ ಬೆಳೆಸುವ ಮನುಷ್ಯ ಹುಡುಗ ಎಂಬುದು ಸ್ವಂತ ಆತನ ಕಲ್ಪನೆಯೇನಲ್ಲ. ಆತ ಇದನ್ನು ಬರೆಯುವುದಕ್ಕೆ ಮೊದಲೇ `ಭಾರತದ ಹಳ್ಳಿಗೆ ಕಾಡಿನಿಂದ ಭೇಟಿ ನೀಡಿದ ಕಾಡಹುಡುಗ’ `ತೋಳಗಳು ಸಾಕಿದ ಶಿಶುವೊಂದು ಪತ್ತೆಯಾಗಿದೆ’ ಎಂಬೆಲ್ಲ ಸುದ್ದಿಗಳು ಅತಿರಂಜಿತವಾಗಿ ಬ್ರಿಟನ್ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದವು. ಹಳ್ಳಿಗಳಲ್ಲೂ ಇಂಥ ಕತೆಗಳು ಸಾಕಷ್ಟು ಹರಿದಾಡುತ್ತಿದ್ದವು. ಈಗಲೂ ನಾವು `ಪಾವಗಡದ ತೋಳಗಳು ಮಕ್ಕಳನ್ನು ಹೊತ್ತೊಯ್ಯುತ್ತವೆ’ ಎಂದೆಲ್ಲ ಮಾತಾಡಿಕೊಳ್ಳುತ್ತೇವಲ್ಲ! ಅದರದೇ ಹಳೆಯ ವರ್ಷನ್ ಇದು. ಆದರೆ ಕಿಪ್ಲಿಂಗ್ ಈ ಊಹಾಪೋಹವನ್ನು ಎತ್ತಿಕೊಂಡು ಅದಕ್ಕೊಂದು ಕಲಾತ್ಮಕ ಸ್ಪರ್ಶ ನೀಡಿದ.

jungle book8ಈಗ ಈ ಕಿಪ್ಲಿಂಗ್ ನ ರಾಜಕೀಯ ನಿಲುವನ್ನೂ ಸ್ವಲ್ಪ ನೋಡಿ. 1899ರಲ್ಲಿ ಈತ `ಮೆಕ್ಕ್ಲೂರ್ಸ್ ಮ್ಯಾಗಜೈನ್’ಗೆ ಒಂದು ಕವನ ಬರೆದ. ಅದರ ಶೀರ್ಷಿಕೆ `ವೈಟ್ ಮ್ಯಾನ್ಸ್ ಬರ್ಡನ್’. `ಶ್ವೇತವರ್ಣೀಯನ ಹೊರೆ’ ಎಂದು ಅರ್ಥೈಸಬಹುದಾದ ಈ ಪದ್ಯದಲ್ಲಿ ಆತ, ಕರಿಯರು ಇರುವ ದೇಶಗಳನ್ನು ವಶಪಡಿಸಿಕೊಂಡು ಅವನ್ನು ಆಳುವುದು, ಅಲ್ಲಿರುವವರಿಗೆ ಶಿಕ್ಷಣ, ಶಿಸ್ತು ಕಲಿಸುವುದು ಬಿಳಿಯರ ಅರ್ಥಾತ್ ಬ್ರಿಟಿಷರ ಹೊಣೆಯೆಂದೂ ಪ್ರತಿಪಾದಿಸಿದ್ದ. ಅಂದಿನ ಮೇಲ್ವರ್ಗದ ಬ್ರಿಟಿಷ್ ಮನಸ್ಥಿತಿ ಹೇಗಿತ್ತೆಂಬುದಕ್ಕೆ ಇದು ಸಾಕ್ಷಿ. ಕಿಪ್ಲಿಂಗ್ ಇಂಥ ವಸಾಹತುಶಾಹಿಯ ಪ್ರತಿನಿಧಿಯಾಗಿದ್ದ, ಅದರ ಮುಖವಾಣಿಯಾಗಿದ್ದ. ಅದೇ ಕಾಲದ ಇನ್ನೊಬ್ಬ ಸಂವೇದನಶೀಲ ಸಾಹಿತಿ ಜಾರ್ಜ್ ಆರ್ವೆಲ್ ಈತನನ್ನು `ಬ್ರಿಟಿಷ್ ವಸಾಹತುಶಾಹಿಯ ಪ್ರವಾದಿ’ ಎಂದು ಬಣ್ಣಿಸಿದ್ದ.

ಈ ಸಂಗತಿಗಳ ಬೆಳಕಿನಲ್ಲಿ ಕಿಪ್ಲಿಂಗ್ ನ `ಜಂಗಲ್ ಬುಕ್’ ಕೃತಿಯನ್ನು ನೋಡಿದರೆ ನಮಗೆ ಹಲವಾರು ಸಂಗತಿಗಳು ಹೊಳೆಯಲಾರಂಭಿಸುತ್ತವೆ. ಪ್ರಾಣಿಗಳಿರುವ ಕಾಡನ್ನು ಅರಣ್ಯನ್ಯಾಯದ ಸಂಕೇತವಾಗಿಯೂ, ಕಾಡಿನ ಸುತ್ತಮುತ್ತಲಿರುವ ಗ್ರಾಮಗಳಲ್ಲಿರುವ ಜನರನ್ನು ಸ್ವಾರ್ಥಪರರಾಗಿಯೂ ಆತ ಚಿತ್ರಿಸಿದ್ದಾನೆ. ಇವರ ನಡುವೆ ಪ್ರತ್ಯೇಕಜೀವಿಯಾಗಿ ಬಂದು ನೆಲೆಸುವ ಮೌಗ್ಲಿಯೊಬ್ಬನೇ ಇಲ್ಲಿ ಸೂಕ್ಷ್ಮ ಮನಸ್ಸಿನವನು; ಸಾಮಾನ್ಯವಾಗಿ ಒಂದಾಗಲಾರದ ಕಾಡುಪ್ರಾಣಿಗಳು ಆತನಿಂದಾಗಿ ಒಂದಾಗಿರುವಂತಾಗುತ್ತದೆ. ಅಂದರೆ ತನ್ನನ್ನೂ ತಾನು ಪ್ರತಿಪಾದಿಸುವ ಬ್ರಿಟಿಷ್ ಸಮಾಜವನ್ನೂ ಇಲ್ಲಿ ಭಾರತದ ಜನಜೀವನದ ನಡುವೆ ತಂದಿಟ್ಟು ಕಥೆ ಬರೆದಿದ್ದಾನೆ ಕಿಪ್ಲಿಂಗ್.

ಇದನ್ನು ಆತ ಪ್ರಜ್ಞಾಪೂರ್ವಕವಾಗಿಯೇ ಮಾಡಿದ್ದಾನೆಂದಲ್ಲ. ಲೇಖಕನ ಸುಪ್ತ ಮನಸ್ಸಿನಲ್ಲಿರುವ ನಿಲುವುಗಳು ಆತನ ಸೃಜನಶೀಲ ಕೃತಿಗಳನ್ನೂ ಹೇಗೆ ಆವರಿಸಿಕೊಳ್ಳುತ್ತವೆ ಎಂಬುದಕ್ಕೆ ಇದು ಸಾಕ್ಷಿ. ಹೀಗಾಗಿಯೇ ಬ್ರಿಟಿಷ್ ಸಾಮ್ರಾಜ್ಯವನ್ನು ವಿರೋಧಿಸುವ ಬಂಡಾಯಗಾರರು ಈತನ ಚಿತ್ರಣದಲ್ಲಿ ಶೇರ್ಖಾನ್ ಹುಲಿ, ಕಿಂಗ್ ಲೂಯಿ ಕೋತಿಗಳಾಗುತ್ತಾರೆ. ವಸಾಹತುಶಾಹಿ ಕೆಲಸ ಮಾಡುವ ರೀತಿಯನ್ನು ಅಧ್ಯಯನ ಮಾಡಿದ ಹಲವಾರು ಚಿಂತಕರು, ವಿಮರ್ಶಕರು ಇಂದು `ಜಂಗಲ್ ಬುಕ್’ ಕೃತಿಯನ್ನು ರೆಫರೆನ್ಸ್ ಪಠ್ಯವಾಗಿಟ್ಟುಕೊಂಡು ಚರ್ಚಿಸುತ್ತಾರೆ.

ಮೈಕೆಲ್ ಫೂಕಾಲ್ಟ್, ಎಡ್ವರ್ಡ್ ಸೈದ್ ಮುಂತಾದವರು ಇಂಥ `ಟೆಕ್ಸ್ಟ್’ಗಳಲ್ಲಿರುವ `ಸಬ್ಟೆಕ್ಸ್ಟ್’ಗಳನ್ನು ಬಿಡಿಸಿಟ್ಟಿದ್ದಾರೆ. ಇಂಥ ವಿಮರ್ಶೆಗಳು ಕೆಲವೊಮ್ಮೆ ಪಠ್ಯದ `ಅತಿ ಓದು’ವಿಕೆಯ ಪರಿಣಾಮವೆಂಬಂತೆಯೂ ಕಾಣಿಸಿದ್ದಿದೆ. ಬರೆದಾತನ ರಾಜಕೀಯ ನಿಲುವು ಆತನ ಸೃಜನಶೀಲ ಕೃತಿಯ ಚರ್ಚೆಗೂ ಮಾನದಂಡವಾಗಬೇಕೆ ಎಂಬ ಚರ್ಚೆ ಯಾವತ್ತಿಗೂ ಸ್ವಾರಸ್ಯಕರವಾದದ್ದು.

jungle book7ಈ ಜಂಗಲ್ ಬುಕ್, ಹಾಲಿವುಡ್ ನಲ್ಲಿ ತಳೆದ ನಾನಾ ರೂಪಗಳನ್ನು ಅಧ್ಯಯನ ಮಾಡಿದರೂ ಅದೊಂದು ವಿಶಿಷ್ಟ ಒಳನೋಟ ನೀಡಬಹುದು. 1942ರಲ್ಲಿ, ಭಾರತದ ಸ್ವಾತಂತ್ರ್ಯ ಹೋರಾಟ ತೀವ್ರ ಕಾವೇರಿದ್ದಾಗ, ಇದರ ಮೊದಲ ಸಿನಿಮಾ ಆವೃತ್ತಿ ಬಂತು. ಭಾರತೀಯ ಸಾಬು ದಸ್ತಗೀರ್ ಇದರಲ್ಲಿ ಮೌಗ್ಲಿಯಾಗಿ ನಟಿಸಿದ್ದ. ಇಲ್ಲಿನ ಗ್ರಾಮಸ್ಥರು ಲಂಪಟರಾಗಿ, ದುರಾಶೆಯುಳ್ಳವರಾಗಿ, ಕಾಡುಪ್ರಾಣಿಗಳು ಯಥಾವತ್ ಕಾಡುಪ್ರಾಣಿಗಳಾಗಿ ಕಾಣಿಸಿಕೊಂಡಿವೆ. 1967ರಲ್ಲಿ ಇದರದೇ ಆನಿಮೇಶನ್ ಆವೃತ್ತಿ ಬಿಡುಗಡೆಯಾಯಿತು. ಮಕ್ಕಳ ಮನರಂಜನೆಯ ಆಧುನಿಕ ಮಾಧ್ಯಮವಾಗಿ ಆಗಷ್ಟೆ ಚಾಲ್ತಿಗೆ ಬಂದಿದ್ದ, ಭಾರತದಲ್ಲಿ ನಿಧಾನವಾಗಿ ಕಾಲೂರುತ್ತಿದ್ದ ಆನಿಮೇಶನ್ ಇದರಲ್ಲಿ ಪ್ರಧಾನ ಪಾತ್ರ ವಹಿಸಿತು.

1994ರಲ್ಲಿ, ಸ್ಯಾಟಲೈಟ್ ಟಿವಿ ಹಾಗೂ ಮನರಂಜನೆ ವೇಗ ಪಡೆಯುತ್ತಿದ್ದ ದಿನಗಳಲ್ಲಿ ಇನ್ನೊಂದು ಆವೃತ್ತಿ ಬಂತು. ಮತ್ತೀಗ, ಡಿಜಿಟಲ್ ಕ್ರಾಂತಿ ನಡೆಯುತ್ತಿರುವ 2016ರಲ್ಲಿ ಇನ್ನೊಂದು ಆವೃತ್ತಿ ಬಂದಿದೆ. ಎಲ್ಲವೂ ಆ ಕಾಲಕ್ಕೆ ತಕ್ಕಂತೆ ಮೂಲ ಕೃತಿಯಿಂದ ಸಾಕಷ್ಟು ಬದಲಾವಣೆ ಮಾಡಿಕೊಂಡು ಬಂದಿವೆ. ಹಾಗೆ ನೋಡಿದರೆ ಇದು ಮಹಾಭಾರತದಂತೆ ಪುರಾಣ (ಮಿಥ್) ಸ್ಥಾನ ಪಡೆದಿದೆ. ಯಾರು ಬೇಕಾದರೂ ತಮಗೆ ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.
ಅಂದಿನ ಕಿಪ್ಲಿಂ ಗ್ ನ ಪುಸ್ತಕ ಒಂದು ಬಗೆಯ ವಸಾಹತುಶಾಹಿಯನ್ನು ಸೂಚಿಸಿದಂತೆ, ಇಂದಿನ ಈ ಚಿತ್ರವೂ ಇನ್ನೊಂದು ಬಗೆಯ ವಸಾಹತುಶಾಹಿಯನ್ನು ಹೇಳುತ್ತಿದೆ.

jungle book5ದೇಸಿ ಚಿತ್ರ ತಯಾರಿಕೆಯ ಮೇಲೆ ಸವಾರಿ ನಡೆಸಲಿರುವ ಹಾಲಿವುಡ್ ಮೇಕಿಂಗ್ ನ ವಸಾಹತುಶಾಹಿ ಅದು. ಅದಕ್ಕೆ ಅತ್ಯಾಧುನಿಕ ತಂತ್ರಜ್ಞಾನ, ಅಂತಾರಾಷ್ಟ್ರೀಯ ಮಾರುಕಟ್ಟೆ, ಫ್ಯಾಂಟಸಿ ಜಗತ್ತಿನ ಕೂರುಗುರುಗಳಿವೆ. ಅಂಗೈಯಲ್ಲಿ ಲಭ್ಯವಿರುವ ಮನರಂಜನಾ ಜಗತ್ತಿನ ಆಟಿಕೆಗಳು ಅದರ ಪಂಜಾಗಳಾಗಿವೆ. ಇನ್ನು ಮುಂದೆ ಮಕ್ಕಳ ಚಿತ್ರ ನಿರ್ಮಿಸುವವರು ಈ ಅದ್ದೂರಿತನದ ಹುಲಿಸವಾರಿ ಮಾಡದೆ ಗತ್ಯಂತರವಿಲ್ಲ. ಹೀಗಿದ್ದೂ ಚೆಲುವಾದ ಕತೆ, ಸಂಭಾಷಣೆ, ದೇಸಿತನದಲ್ಲೇ ಮಕ್ಕಳನ್ನು ಗೆಲ್ಲುತ್ತೇನೆ ಎಂದು ಹೊರಡುವವರು ಇದ್ದರೆ, ಅವರು ಅಭಿಮನ್ಯುಗಳಾಗದಂತೆ ನಾವು ನೋಡಿಕೊಳ್ಳಬೇಕು

‍ಲೇಖಕರು admin

April 17, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಋತಊಷ್ಮ

    ಇತಿಹಾಸ ಕೆದಕಿ ನೋಡುವುದಕ್ಕಿಂತ ಮನೋರಂಜನೆಯಾಗಿ ತೆಗೆದುಕೊಂಡು ಹೋಗಬೇಕು. ಈ ವಿಷಯದಲ್ಲಿ ಅಷ್ಟಕ್ಕೂ ದೇಸಿತನದ ಮಕ್ಕಳ ಚಿತ್ರಗಳು ಇಂದಿಗೂ ಜನಮಾನಸಕ್ಕೆ ಮುಟ್ಟಿದ್ದು ಅಪರೂಪ ಅಂತಲೇ ಹೇಳಬೇಕು.

    ಪ್ರತಿಕ್ರಿಯೆ
  2. NA DIVAKAR

    One more funny but serious issue here. When this serial was telecast in India in late 80s and early 90s there was a message in its title song : CHADDI PEHAN KE PHOOL KHILA HAI PHOOL KHILA HAI
    At this time BJP was coming up as a major force with the strong base of Sangh parivar whose cadres wear CHADDI and BJPs symbol was a PHOOL (LOTUS).
    ANY POLITICS HERE ? OPEN FOR DEBATE

    ಪ್ರತಿಕ್ರಿಯೆ
  3. Shyamala Madhav

    ಎಲ್ಲ ರಾಜಕೀಯ, ವಸಾಹತುಶಾಹಿ ಎಂಬ ಊಹೆಗಳ ಹೊರತಾಗಿ, ರಾಡ್ಯಾರ್ಡ್ ಕಿಪ್ಲಿಂಗ್ ಹಾಗೂ ಆವನ ಕೃತಿಯನ್ನು ಮಕ್ಕಳ ಲೋಕದ ಶುಡ್ಡ ಸಾಹಿತ್ಯ ಕೃತಿಯಾಗಿಯೇ ನೋಡಲು ನನಗಿಷ್ಟ.

    – Shyamala Madhav

    ಪ್ರತಿಕ್ರಿಯೆ
  4. Sushrutha Dodderi

    ಒಂದು ಸಿನೆಮಾ ಹಿಂದೆ ಏನೇನೆಲ್ಲ ಇರುತ್ತೆ… ಈ ತರಹದ ಬರಹಗಳನ್ನ ಓದಿದಾಗೆಲ್ಲಾ ನನಗೆ ಒಂದು ಕಥೆಯನ್ನ ಕಥೆಯನ್ನಾಗಿ ಮಾತ್ರ ಓದ್ತೇನಲ್ಲಾ, ಒಂದು ಸಿನೆಮಾವನ್ನು ಸಿನೆಮಾವಾಗಿ ಮಾತ್ರ ನೋಡ್ತೇನಲ್ಲಾ, ಈ ತರಹದ ಸೂಕ್ಷ್ಮಗಳೆಲ್ಲ ನಂಗೆ ಹೊಳೆಯೋದೇ ಇಲ್ವಲ್ಲ ಅಂತ ಪೆಚ್ಚಾಗ್ತೇನೆ.. ಎಸ್.ಆರ್. ವಿಜಯಶಂಕರ್ ಅವರು, ಮಹಾಭಾರತದ ಹೊಸ ಅವತರಿಣಿಕೆ ಸ್ಟಾರ್ ಪ್ಲಸ್‌ನಲ್ಲಿ ಕಳೆದ ವರ್ಷ ಶುರುವಾದಾಗಲೂ ಈ ಹಿಂದಿನ ಅವತರಿಣಿಕೆ ಬಂದಾಗ ಇದ್ದ ರಾಜಕೀಯ ಮತ್ತು ಸಾಮಾಜಿಕ ವಾತಾವರಣಗಳಿಗೆ ಇರುವ ಸಾಮ್ಯತೆ-ವ್ಯತ್ಯಾಸ ಇತ್ಯಾದಿಗಳ ಕುರಿತು ಬರೆದಿದ್ದರು.. ಆಗಲೂ ನಂಗೆ ‘ವ್ಹಾವ್’ ಎನಿಸಿತ್ತು. “ಕರ್ತೃವಿನ ರಾಜಕೀಯ ನಿಲುವು ಆತನ ಸೃಜನಶೀಲ ಕೃತಿಯ ಚರ್ಚೆಗೂ ಮಾನದಂಡವಾಗಬೇಕೇ?” -ಎಂಬ ಈ ಬರಹದಲ್ಲಿರುವ ವಾಕ್ಯ ನನ್ನ ಪ್ರಶ್ನೆಯೂ.

    ಪ್ರತಿಕ್ರಿಯೆ
  5. ಜಾಂಪಣ್ಣ ಆಶೀಹಾಳ್

    ಸರಿ ಚಾಳೀಸು ತೆಗೆದು ಹೀಗೆ ಕಾಣುತ್ತದೆಯೆಂದರೆ ಆಶ್ಚರ್ಯ. ನಾನು ೨ಡಿ ನೋಡಿದ್ದೀನಂತ ಒಬ್ಬ ಮಿತ್ರ ಹೇಳಿದಾಗಲೇ ನನಗೆ ಗೊತ್ತಾಗಿದ್ದು ಇದು ೩ಡಿ ಅಂತ. ಪೋಸ್ಟರ ನೋಡಿಯೇ ಸಿನಿಮಾ ಹೋಗುವ ಕಾಲ ಇನ್ನೂ ಹೋಗಿಲ್ಲ ಅಂದುಕೊಳ್ಳಬಹುದು. ಈಗ ಚಿತ್ರಕ್ಕೆ, ನನಗೂ ಬಹಳ ಹಿಡಿಸಿದ ಚಿತ್ರ ಇದು. ಅದ್ಬುತ ತಂತ್ರಜ್ಜಾನ ಉತ್ತಮ ನಟನೆ ಹಾಸ್ಯ, ಚಿತ್ರೀಕರಣ ಎಲ್ಲ. ಮನುಷ್ಯ ಎಷ್ಟೇ ದುರಾಸೆಯವನಾದರೂ ಕಾಡಿನ ರಕ್ಷಣೆ ಆಗ್ತಿದೆ

    ಪ್ರತಿಕ್ರಿಯೆ
  6. Tejaswini Hegde

    ಸ್ಕೂಲಿನಲ್ಲಿದ್ದಾಗ ಮೋಗ್ಲೀ ಅನಿಮೇಶನ್ ಅನ್ನು ಬಹುವಾಗಿ ಮೆಚ್ಚಿದ್ದೆ.. ಈಗಲೂ ಅದು ನಮ್ಮ ಬಾಲ್ಯದ ಸುಮಧುರ ಸ್ಮೃತಿಗಳಲ್ಲೊಂದು! ನನ್ನ ಮಗಳಿಗೂ ಮೊನ್ನೆ ಈ 3D ಚಿತ್ರವನ್ನು ತೋರಿಸಿದೆ. “ಪ್ರಾಣಿಗಳನ್ನು ಪ್ರೀತಿಸಬೇಕು.. ಕಾಡು ಕಡಿಯಬಾರದು.. ಮರಗಳನ್ನು ಸಂರಕ್ಷಿಸಬೇಕು. ಬೆಂಕಿಯನ್ನು ಹಾಕಬಾರದು.” ಇವು ಅವಳು ಕಲಿತ ಮೆಸ್ಸೇಜ್ ಈ ಚಿತ್ರದಿಂದ! ಅಷ್ಟರ ಮಟ್ಟಿಗೆ ಇದು ಯಶಸ್ವಿಯೇ ಆಗಿದೆ. ವಸಾಹತುಶಾಹಿತನ ನನಗೆ ಕಾಣಿಸಲಿಲ್ಲ. ಮೋಗ್ಲಿ ಈ ಚಿತ್ರದಲ್ಲಿ ಭಾರತೀಯನೋರ್ವನ ಮಗನನ್ನಾಗೇ ಕಾಣಿಸಿದ್ದಾರೆ. ಕಾಡಿನಲ್ಲಿ ಹೋಗುವಾಗ ಅಚಾನಕ್ಕಾಗಿ ಹಳ್ಳಿಯೋರ್ವನ ಮಗು ಕಾಡಲ್ಲಿ ಕಳೆದು ಹೋಗುವ ಚಿತ್ರಣವಿದೆ. ಮನುಷ್ಯನ ನಿರ್ಲಕ್ಷ್ಯತನ, ದುರಾಸೆ, ಬೇಜವಾಬ್ದಾರಿತನಕ್ಕೆ ಕನ್ನಡಿ ಹಿಡಿಯುತ್ತದೆ ಈ ಚಿತ್ರ. ಅಂತೆಯೇ ಪ್ರಕೃತಿಯನ್ನು, ಕಾಡಿನ ಪ್ರಾಣಿಗಳನ್ನು ಗೌರವಿಸಿ ನಡೆದರೆ ಅವು ಒಲಿದು ಒಳಿತು ಮಾಡುತ್ತವೆ ಎಂಬ ಉತ್ತಮ ಸಂದೇಶಯವೂ ಇದೆ. ಒಂದೊಳ್ಳೆ ಸದಭಿರುಚಿಯ.. ಉತ್ತಮ ಸಂದೇಶವಿರುವ.. ಮಕ್ಕಳ ಮನಸೊಳಗೆ ಅದ್ಭುತ ರಮ್ಯ ಕಲ್ಪನೆಯನ್ನು ಹುಟ್ಟುಹಾಕುವಲ್ಲಿ ಚಿತ್ರ ಯಶಸ್ವಿಯಾಗಿದೆ ಎಂದೆನಿಸಿತು. ಆದ್ರೂ, ಈಗಲೂ ನಮಗೆ ಹಳೆಯ ಮೋಗ್ಲಿ ಅನಿಮೇಶನ್ನೇ ಮತ್ತೂ ಪ್ರಿಯ.. ಚಡ್ಡಿ ಪೆಹನ್ಕೆ ಫೂಲ್ ಕಿಲಾ ಹೈ ಅನ್ನೋ ಹಾಡು ಈಗಲೂ ಫೇವರೇಟ್!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: