ಛೇ..ಅದೇ ಕೊನೆಯ ಭೇಟಿಯಾಯಿತೇ..

ಡಾ. ರಾಮಚಂದ್ರ ದೇವ ..ನಾನು ಕಂಡಂತೆ…

ಮಮತಾ ದೇವ

ಬಹಳ ಹಿಂದಿನ ನೆನಪಾಗುತ್ತಿದೆ. ನಾನು ಪದವಿ ಕಾಲೇಜಿನಲ್ಲಿರುವಾಗ ಡಾ.ರಾಮಚಂದ್ರ ದೇವ ಅನುವಾದಿತ ,ಮೂಲ. ವಿಲಿಯಂ ಷೇಕ್ಸಪಿಯರ್ ರಚಿತ “ಮ್ಯಾಕ್ ಬೆತ್” ನಾಟಕ ಪದವಿ ತರಗತಿಗೆ ಕನ್ನಡ ಪಠ್ಯವಾಗಿದೆ ಎಂದು ಗೆಳತಿಯರ ಪುಸ್ತಕ ನೋಡಿ ತಿಳಿದಿದ್ದೆ. ಮುಂದೊಂದು ದಿನ ನನ್ನ ಹೆಸರೂ ಈ ದೇವ ಮನೆತನದೊಡನೆ ಸೇರಬಹುದೆಂಬ ಕಲ್ಪನೆಯೇ ಇರಲಿಲ್ಲ. ಕಾಲೇಜು ವಿದ್ಯಾಭ್ಯಾಸದ ನಂತರ ಮನೆಗೆ ಬಂದಾಗ ಮದುವೆಯ ಸಿಧ್ಧತೆಯಾಗತೊಡಗಿತ್ತು. ನನ್ನ ಪತಿ ರಾಮಚಂದ್ರ ದೇವ ಅವರದ್ದೇ ಕುಟುಂಬದವರು. ಪತಿಯೊಡನೆ ನೀನಾಸಂ ತಂಡದ “ಮ್ಯಾಕ್ಬೆತ್ ” ನಾಟಕ ಪ್ರದರ್ಶನ ನೋಡಿದ್ದೆ. ಅದಕ್ಕೂ ಮೊದಲೇ ಇಂಗ್ಲೀಷ್ನಲ್ಲಿ ಮ್ಯಾಕ್ ಬೆತ್ ಸುಮಾರಾಗಿ ಓದಿದ್ದೆ. ನಾಟಕದ ಸಂಭಾಷಣೆ ಕೇಳಿ ಸಂತೋಷವಾಗಿತ್ತು…ಮನೆಗೆ ಬಂದು ಅದೇ ಡೈಲಾಗ್ ..ಜಕ್ಕಿಣಿಯರ ಮಾತಿನಿಂದ ಹಿಡಿದು.. ಮ್ಯಾಕ್ಬೆತ್ ಮೊದಲಾದ ಪಾತ್ರದವರೆಗೆ.. “ಗಿರಗಿಟ್ಟಿ,ಗಿಟ್ಟಿಗಿರ ಆದಲ್ಲಿ ಸೋತಲ್ಲಿ ಕದನದಲ್ಲಿ”…….”ನೆಪ್ಚೂನನ ಸಮುದ್ರಗಳು ತೊಳೆಯವುವೆ ಈ ನೆತ್ತರನು ಕೊಳೆಯುಳಿಯದಂತೆ ನನ್ನ ಕೈಯಿಂದ ..” .ಬದುಕೊಂದು ನಡೆಯುವ ನೆರಳು ; ರಂಗದ ಮೇಲೆ,ಅತ್ತಿಂದ ಇತ್ತ ಅರೆಗಳಿಗೆ ಬೀಗಿ ಬಡಬಡಿಸಿ ಆಮೇಲೆ ಗುರುತಿರದೆ ಮರೆಯಾದ ನಟ….” ಇತ್ಯಾದಿ..

ಪದೇ ಪದೇ ಹೇಳುವಷ್ಷು ಇಷ್ಟವಾಗಿತ್ತು. ನನ್ನ ಪತಿಗೂ ಡಾ.ದೇವ ಅವರಿಗೂ ಪತ್ರ ವ್ಯವಹಾರವಿತ್ತು. ನಂತರ ಮ್ಯಾಕ್ ಬೆತ್ ಪುಸ್ತಕದ ಪ್ರತಿಯೊಂದನ್ನೂ ಅವರಿಗೆ ಕಳಿಸಿದ್ದರು. ನಂತರ ಹಲವಾರು ವರುಷ ತಮ್ಮ ವೃತ್ತಿಯಲ್ಲಿ ತೊಡಗಿ ಬೇರೆ ಬೇರೆ ಊರುಗಳಲ್ಲಿ ವಾಸವಿದ್ದ ಡಾ.ದೇವರನ್ನು ಭೇಟಿಯಾಗುವುದು ಸಾಧ್ಯವಾಗಿರಲಿಲ್ಲ. 2001ರಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. “ಒಳ್ಳೆಯ ಸಾಹಿತ್ಯ ನಮ್ಮ ಅಂತಸ್ಸಾಕ್ಷಿಯನ್ನು ಎಚ್ಚರವಾಗಿಡುತ್ತದೆ. ಅನಿಸಿದ್ದನ್ನು ಹೇಳುವ ಧೈರ್ಯ ಕೊಡುತ್ತದೆ . ಅಂತಸ್ಸಾಕ್ಷಿ ಎಚ್ಚೆತ್ತು ಸತ್ಯದ ಬಗ್ಗೆ ಹಸಿವುಳ್ಳ ,ಸತ್ಯವನ್ನು ಕಂಡು ಹೇಳುವ ಧೈರ್ಯ ಹಾಗೂ ಭಾಷಾ ಸೂಕ್ಮತೆ ಇರುವ ಜನ ಸಮುದಾಯ ಬೆಳೆಯ ಬೇಕಾದರೆ ಒಳ್ಲೇಯ ಸಾಹಿತ್ಯ ಇರಬೇಕು .ಜನರ ಅಂತರಂಗದ ಒಳಗೆ ಅವು ಸೇರುತ್ತಿರಬೇಕು “ಎಂಬುದು ಅವರ ಸಂದೇಶವಾಗಿತ್ತು.
ನಾನು ಮದುವೆಯಾಗಿ 20 ವರುಷದ ನಂತರ ಕುಟುಂಬದ ಸದಸ್ಯರಾಗಿದ್ದವರನ್ನು ಭೇಟಿಯಾಗಿದ್ದು ಅಚ್ಚರಿಯ ವಿಷಯವೇ, ಸಾಹಿತ್ಯ ಪರಿಷತ್ತಿನ ಸಮಾರಂಭವೊಂದರಲ್ಲಿ ಪಂಜದಲ್ಲಿ ನಾನು ಡಾ.ದೇವರನ್ನು ಪ್ರಥಮವಾಗಿ ಭೇಟಿಯಾಗಿದ್ದೆ.ಅವರ ಭಾಷಣವನ್ನು ಕೇಳಿದ್ದೆ. ಫೋಟೋ ತೆಗೆದಿದ್ದೆ. ನನ್ನ ಹೆಸರನ್ನು ಕರೆದು ಮಾತನಾಡಿಸಿದ್ದರು. ನಿಮ್ಮ ಚಟುವಟಿಕೆ ಹೀಗೆ ಮುಂದುವರೆಯಲಿ ಎಂದಿದ್ದರು. ಅವರು ಅಲ್ಲಿ ಕೆಲವರಿಗೆ ನನ್ನ ಕಸಿನ್,ತಮ್ಮನ ಪತ್ನಿ ಎಂದು ಪರಿಚಯಿಸಿದರು. ನನಗೆ ಅದಕ್ಕೆ ಮೊದಲೇ ದೂರವಾಣಿಯಲ್ಲಿ ಮಾತನಾಡಿ ಪರಿಚಯವಿತ್ತು.ಮೊದ ಮೊದಲು ಬಹಳ ಹೆದರಿ ಮಾತನಾಡುತ್ತಿದ್ದೆ. ಅವರ ಆತ್ಮೀಯತೆ ನನ್ನ ಭಯವನ್ನು ಕಡಿಮೆ ಮಾಡಿತು. ಇವರನ್ನು ಮೊದಲೇ ಭೇಟಿಯಾಗುವ ಅವಕಾಶವಾಗದುದಕ್ಕೆ ಬೇಸರವೆನಿಸಿತ್ತು.ಬಹಳ ಆಲೋಚಿಸಿ ಮಾತನಾಡುತ್ತಿದ್ದರು. ಅವರು ಸ್ನೇಹಮಯಿ ಹಗೂ ಸಹೃದಯಿ.
ಮನೆಗೆ ಕೆಲವೊಮ್ಮೆ ನನ್ನ ಪತಿಗೆ ಫೋನ್ ಮಾಡುತ್ತಿದ್ದರು. ನಾನು ಇಂಗ್ಲೀಷ್ ಎಂ. ಎ. ವ್ಯಾಸಂಗ ಮಾಡುವಾಗ ಕೆಲವೊಂದು ಅನುಮಾನಗಳನ್ನು ಅವರಲ್ಲಿ ಕೇಳಿದ್ದೆ. ಕೆಲವು ಪುಸ್ತಕಗಳನ್ನು ಸೂಚಿಸಿದ್ದರು. ನನಗೆ ಅವರ ಬ್ಲಾಗ್ ನ ಲಿಂಕ್ ಕಳಿಸುತ್ತಿದ್ದರು. ಕೆಲವೊಮ್ಮೆ ಗಂಭೀರವಾಗಿ ಚರ್ಚಿಸುತ್ತಿದ್ದರು. ಉತ್ತಮ ವಿಚಾರಗಳ ಚರ್ಚೆಯಾಗುತ್ತಿತ್ತು. ಮನೆಗೆ ಬಂದಾಗ ಎಲ್ಲರನ್ನೂ ನಗಿಸುತ್ತಿದ್ದರು.ತುಂಬ ನೇರವಾಗಿ ತಮಗನ್ನಿಸಿದ್ದನ್ನು ಹೇಳುತ್ತಿದ್ದರು. ಗೋ.ಕೃ.ಅಡಿಗ, ಡಾ.ಯು.ಆರ್.ಅನಂತಮೂರ್ತಿ, ಬೈರಪ್ಪ, ಮಾಸ್ತಿ, ವೈದೇಹಿ ಮೊದಲಾದ ಸಾಹಿತಿಗಳ ಬರಹಗಳ ಬಗ್ಗೆ ಮಾತು ಕತೆ ಸಾಗುತ್ತಿತ್ತು. ನಾವು ಬರೆದ ಪ್ರೊ. ಜಿ.ವಿ ಯವರ ಸಂದರ್ಶನ ಲೇಖನವನ್ನು ಓದಿ ತಮ್ಮ ಅನುಭವಗಳನ್ನೂ, ಅನಿಸಿಕೆಯನ್ನೂ ಹಂಚಿಕೊಂಡಿದ್ದರು.
ಸುಲಭವಾಗಿ ಮಕ್ಕಳೊಡನೆ ಬೆರೆಯುತ್ತಿದ್ದರು. ಒಮ್ಮೆ ಅವರನ್ನು ನಾನು ಬಸ್ ನಿಲ್ದಾಣದವರೆಗೆ ಕಾರಿನಲ್ಲಿ ಬಿಡುವ ಅವಕಾಶ ನನ್ನದಾಗಿತ್ತು.
ದಾರಿಯುದ್ದಕ್ಕೂ ಕೆಲವು ಉತ್ತಮ ವಿಚಾರಗಳನ್ನು ಹೇಳುತ್ತಿದ್ದರು. ಫೋನ್ ಮಾಡಿ ಮುಂಚಿತವಾಗಿ ತಿಳಿಸಿ ಮನೆಗೆ ಬರುತ್ತಿದ್ದರು. ಬಂದಾಗ ಮಕ್ಕಳೊಡನೆ ಸಂತೋಷವಾಗಿ ಫೋಟೋ ತೆಗೆಸಿಕೊಂಡಿದ್ದರು. ಅವರು ಪ್ರಥಮ ಬಾರಿಗೆ ಮನೆಗೆ ಬಂದಾಗ ನನ್ನ ಹಿರಿಯ ಮಗಳು ಇಲ್ಲದ ಕಾರಣ .”ಛೆ! ಐ ಮಿಸ್ಡ್ ಹರ್.ಒಮ್ಮೆ ಮನೆಗೆ ಎಲ್ಲರೂ ಬನ್ನಿ “ಎಂದಿದ್ದರು.
ನಂತರ ಒಂದು ದಿನ ಫೋನ್ ಮಾಡಿ , “ಶಂಕರ್ ಇದ್ದಾನ..?ನೀವಿದ್ದರೆ ಇವತ್ತು ಬರುತ್ತೇನೆ ” ಎಂದರು. ಮಗಳ ಹುಟ್ಟುಹಬ್ಬದ ದಿನವಾಗಿತ್ತು. ಬನ್ನಿ ಇದ್ದೇವೆ ಎಂದಿದ್ದೆ. ಮಗಳಿಗೆ ಸಂಗೀತದ ಸಿ.ಡಿ.ಯೊಂದನ್ನು ಉಡುಗೊರೆಯಾಗಿ ನೀಡಿದರು.ನನಗೆ ಅಚ್ಚರಿಯೆನಿಸಿತು..ಅದರ ಕವರ್ ನಲ್ಲಿ ನನ್ನ ಮಗಳ ಹೆಸರು ಬರೆದು ಹ್ಯಾಪಿ ಬರ್ಥ್ ಡೇ..ಶುಭಾಶಯಗಳನ್ನೂ ಬರೆದಿದ್ದರು.! ಹರಸಿದರು. ನಮಗಿದು ಅನಿರೀಕ್ಷಿತ. ನನ್ನ ಆರೋಗ್ಯ ಸ್ಪಲ್ಪ ಹದಗೆಡುತ್ತಿದೆ ಎಂದಿದ್ದರು. ಏನಾದರೂ ಸಹಾಯ ಬೇಕಾದರೆ ತಿಳಿಸಿ ಎಂದಿದ್ದೆವು. ನಾನು ಆದಷ್ಟು ಬೇಗ ಇಲ್ಲಿಂದ ತೋಟ ,ಮನೆ ಮಾರಾಟವಾದ ನಂತರ ಬೆಂಗಳೂರಿಗೆ ಹೋಗಿ ಮಗಳೊಂದಿಗೆ ನೆಲೆಸುತ್ತೇನೆ ಎಂದಿದ್ದರು.
ನಂತರ ಇವತ್ತು ಸರಿಯಾದ ಒಂದು ಫ್ಯಾಮಿಲಿ ಫೋಟೋ ಆಗುತ್ತದೆ ಎಂದು ಬಹಳ ಉಲ್ಲಾಸದಿಂದ ನಮ್ಮೊಡನೆ ಕುಳಿತರು.
ಮತ್ತೆ ಮೇಲ್ ಮಾಡಿ ಎಂದರು. ತಿಂಡಿ ತಿನ್ನುವಾಗ ನಗೆ ಚಟಾಕಿ ಹಾರಿಸಿ, ಯಾವುದೋ ಅಜ್ಜನ ಕಾಲದ ಕತೆ,ನೆನಪುಗಳನ್ನು ಬಿಚ್ಚಿಟ್ಟರು.ಎಲ್ಲರೂ ಮನಸಾರೆ ನಕ್ಕಿದ್ದೆವು.ಹಲವಾರು ಸಂಗತಿಗಳನ್ನು ಮಾತನಾಡಿದರು. ಆದರೆ..ನನಗೆ ಅದು ಕೊನೆಯ ಭೇಟಿಯಾಗಬಹುದಂದೆನಿಸಿರಲಿಲ್ಲ. ಗೆಳತಿ ಸುಧಾ ಅವರ ಬರಹಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅವರು ಹೊರಡುವ ಮೊದಲು ಶೇಕ್ಸ್ ಪಿಯರ್ ನ ಸಾನೆಟ್ ನ್ನು ಅನುವಾದಿಸಿದ್ದೇನೆ ಅಂದಾಗ..ಎಲ್ಲಿದೆ, ನನಗೆ ನೋಡಬೇಕು ಎಂದರು.ನಾನು ಬರೆದುದನ್ನು ನೋಡಿ ಚೆನ್ನಾಗಿದೆ ,ಸ್ವಲ್ಪ ಬದಲಾವಣೆ ಬೇಕಾದರೆ ಮಾಡಬಹುದು. ಕೊನೆಯ ಸಾಲು .. ಬ್ಯುಟಿಫುಲ್..! ಎಂದಿದ್ದರು. ನನ್ನ ಬಳಿಯಿದ್ದ ಶೇಕ್ಸ್ ಪಿಯರ್ ನ ಫೋಟೋ ಒಂದನ್ನು ನೋಡಿ ,”ಬಹಳ ಚೆಂದ ಇದ್ದು” ಎಂದು ಸಂತೋಷಪಟ್ಟರು. ನಾವು ಅವರ ಕಣ್ಣುಗಳಲ್ಲಿ ವಿಶಿಷ್ಟ ಕಾಂತಿಯನ್ನು ,ಅವರ ಮುಖದಲ್ಲಿ ವಿಶೇಷ ಸಂತಸದ ನಗುವನ್ನು ನೋಡಿ ಬೆರಗಾದೆವು. ಕೆಲವು ನಿಮಿಷ ಆ ಚಿತ್ರವನ್ನೇ ದಿಟ್ಟಿಸಿ ನೋಡಿದರು. ನಂತರ ಅನುವಾದದ ಬಗ್ಗೆ ಒಂದಿಷ್ಟು ಚರ್ಚಿಸಿದೆವು. ನಮಗಾಗಿ ಕೊಡಲು ಒಂದು ಪುಸ್ತಕವನ್ನು ತಂದಿದ್ದರು. ಇದು ನಿಮಗೆ ಅನುವಾದ ಮಾಡಲು ಸಹಕಾರಿಯಾಗಬಹುದು .ಓದಿ ನೋಡಿ ಎಂದರು. ಇನ್ನೂ ಕೆಲವು ಪುಸ್ತಕ ಬರೆಯುತ್ತಿದ್ದೇನೆ ಎಂದಿದ್ದರು. ನನಗೆ ಕೆಲವು ಕಿವಿಮಾತನ್ನೂ ಹೇಳಿದ್ದರು. “ಬೇಗ ಪುಸ್ತಕ ಒಂದನ್ನು ಬರೆಯಿರಿ..ಅದನ್ನು ತಿದ್ದಿ,ಮುನ್ನುಡಿ. ಬರೆದುಕೊಡುತ್ತೇನೆ ” ಎಂದಿದ್ದರು. ನಾನು ಸಾಹಿತಿಯೋರ್ವರ ಸ್ಮರಣಾರ್ಥ ಆಯೋಜಿಸಿದ ಕಥಾ ಸ್ಪರ್ಧೆಯಲ್ಲಿ ಬಹುಮಾನ ಬಂದಿದೆ ಎಂದಾಗ ಅದೇನು ಬರೆದದ್ದು ನನಗೆ ನೋಡಬೇಕಿತ್ತು ಎಂದಿದ್ದರು. ಸ್ಥಳದಲ್ಲೇ ಕುಳಿತು ಬರೆಯುವ ಸ್ಪರ್ಧೆಯಾದ ಕಾರಣ ನನ್ನಲ್ಲಿ ಪ್ರತಿ ಇರಲಿಲ್ಲ.ಪ್ರತಿ ಪಡೆದುಕೊಂಡು ತಿದ್ದಿ ಕಳಿಸಿ ಎಂದು ಸಲಹೆ ಇತ್ತರು.
ಬಹಳ ಸಮಯದ ನಂತರ ಟೈಪ್ ಮಾಡಿ ಈಮೇಲ್ ಮಾಡಿದ್ದೆ. ಅದನ್ನು ನೋಡಿ ಉತ್ತರಿಸಿದ್ದು ಹೀಗೆ..: ” ಕಥೆ ಪರವಾ ಇಲ್ಲ. ಇನ್ನೂ ಹೆಚ್ಚು ವಿವರ ಸೇರಿಸಿ ಕಥೆಯನ್ನು ದೊಡ್ಡ ಮಾಡಬಹುದು. ಒಂದು ಕಾದಂಬರಿಗಾಗುವಷ್ಟು ಮೂಲ ಸಾಮಗ್ರಿ ಇದೆ. ಘಟನೆ ನಡೆಯುವ ಕ್ಷೇತ್ರಗಳ ಹೆಚ್ಚು ವಿವರಗಳನ್ನು ಒಳಗೊಂಡು ವಿಸ್ತರಿಸಿ ಬರೆದರೆ ಪರಿಣಾಮಕಾರಿ ನೀಳ್ಗತೆ ಅಥವಾ ಕಾದಂಬರಿ ಆಗಬಹುದು.” ನಿಮ್ಮ ಪುಸ್ತಕ ಬೇಗ ಹೊರ ಬರಲಿ ಎಂದು ಫೋನ್ ಮಾಡಿ ಹಾರೈಸಿದ್ದರು. ಕೆಲವೊಂದು ಪುಸ್ತಕಗಳನ್ನು ಓದಲು ಸಲಹೆ ನೀಡಿದ್ದರು.ನಾನು ಯಾವತ್ತೂ ನನ್ನ ಬರಹಗಳನ್ನು ಮರು ಪರಿಶೀಲನೆ ಮಾಡುತ್ತಿರಲಿಲ್ಲ.ತಿದ್ದಬೇಕು ಎಂದು ತಿಳಿಸಿದ್ದರು. ಬಹಳಷ್ಟು ಸಲ ಮನೆಗೆ ಆಹ್ವಾನಿಸಿದ್ದರು. ಹೋಗಲು ಸಾಧ್ಯವಾಗದುದಕ್ಕೆ ಬಹಳ ವೇದನೆಯಾಗುತ್ತಿದೆ.ಕೊನೆಯ ಸಲ ಫೋನ್ನಲ್ಲಿ ನನ್ನ ಪತಿಯೊಡನೆ ಮಾತನಾಡಿದಾಗಲೂ “ಮನೆಗೆ ಬನ್ನಿ,ನಾನೂ ಬರುತ್ತೇನೆ “ಎಂದಿದ್ದರು. ನನ್ನ ಆಸಕ್ತಿಯನ್ನು ಗುರುತಿಸಿ ಕೊನೆಯ ಬಾರಿಗೆ ನನಗೆ ಪುಸ್ತಕ ನೀಡಿ ಬರೆಯಲು ಪ್ರೋತ್ಸಾಹಿಸಿ ಹೋದಾಗ ಅವರ ಕಾರಿನವರೆಗೂ ಹೋಗಿ ಬೀಳ್ಕೊಟ್ಟು ಥ್ಯಾಂಕ್ಸ್ ಹೇಳಿದ್ದೆ. ಯೂ ಆರ್ ವೆಲ್ಕಂ,… ನೀವು ಬರೆಯಿರಿ “ಎಂದು ಹೇಳಿದ್ದರು. ಆ ಕ್ಷಣಗಳನ್ನು ನಾನೆಂದಿಗೂ ಮರೆಯಲಾರೆ.!ನಮ್ಮಲ್ಲಿಂದ ಹೊರಡುವಾಗ ನನಗೆ ಈದಿನ ಬಹಳ ಸಂತಸವಾಗಿದೆ..ಈ ಸಂಬಂಧ ಯಾವಾಗಲೂ ಹೀಗೆ ಇರಲಿ ..ಪರಸ್ಪರ ನಾವೆಲ್ಲರೂ ಆಗಾಗ್ಗೆ ಸಿಗೋಣ ಎಂದಿದ್ದರು. ಕೆಲವೇ ಕೆಲವು ವರುಷಗಳಿಂದ ಆತ್ಮೀಯರಾದರೂ, ,ಕೆಲವೇ ಸಲ ಭೇಟಿಯಾದರೂ ಅಚ್ಚಳಿಯದ ನೆನಪು..! ಮಕ್ಕಳಿಗೂ ದೊಡ್ಡಪ್ಪ ಎಂದರೆ ಬಹಳ ಇಷ್ಡ ಇತ್ತು. ಛೇ..ಅದೇ ಕೊನೆಯ ಭೇಟಿಯಾಯಿತೇ..! ಬಹಳ ಸೀಮಿತ ಅವಧಿಯಾಯಿತು…
ಸಮಯ ಎಂದಿಗೂ ನಮಗೆ ಕಾಯುವುದಿಲ್ಲವಲ್ಲವೇ? ಪಶ್ಚಾತ್ತಾಪವಾಗುತ್ತಿದೆ. ನನಗಿಂತ ನನ್ನ ಬಗ್ಗೆ ಭರವಸೆ ಹೊಂದಿದ್ದ ಉತ್ತಮ ಕನಸು ಕಾಣಲು ಪ್ರೇರೇಪಿಸಿದವರನ್ನು ಸದಾ ಸ್ಮರಿಸುತ್ತಾ,..ಕ್ಷಮೆ ಕೇಳುತ್ತಾ ಅಗಲಿದ ಡಾ. ರಾಮಚಂದ್ರ ದೇವರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸುತ್ತಾ ನನ್ನ ಮನದಾಳದ ನಮನಗಳನ್ನು ಸಲ್ಲಿಸುತ್ತೇನೆ. ಆತ್ಮಕ್ಕೆಂದೂ ಸಾವಿರಲಾರದು… ನಮ್ಮ ಮನಸ್ಸಿನಲ್ಲಿ,ನೆನಪಿನಲ್ಲಿ ಸದಾ ಜೀವಂತವಾಗಿರುತ್ತಾರೆ.

‍ಲೇಖಕರು G

September 13, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. ನ.ರವಿಕುಮಾರ

    E barah odi avare nmmodane maatanaaduttiddareno ennisitu…adestu nenapugalirabahudu…tumba nera sahaja nishturavaadi manushya…
    matte deva avara athmeeyateya kshanagalannu nenapu maadikottiddakkagi danyavaadagalu
    Ravi, Abhinava

    ಪ್ರತಿಕ್ರಿಯೆ
    • ಮಮತಾ ದೇವ

      ಧನ್ಯವಾದಗಳು ರವಿಕುಮಾರ್ ಅವರಿಗೆ.

      ಪ್ರತಿಕ್ರಿಯೆ
  2. USHA RAI

    ಮಮತಾ ಚೆನ್ನಾಗಿ ಶೃದ್ದಾಂಜಲಿ ಸಮರ್ಪಿಸಿದ್ದೀರಿ. ನಾನು ಬಹಳ ಹಿಂದೆ ಅವರನ್ನೊಮ್ಮೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದೆ. ಅವರು ಹನುಮಂತನಗರದಲ್ಲಿ ವಾಸವಾಗಿದ್ದರು. ಆಗ ಅವರ ಅಂಕಣಗಳು ಉದಯವಾಣಿಯಲ್ಲಿ ಪ್ರಕಟವಾಗುತ್ತಿದ್ದುವು. ಅವರು ಸತ್ತ ಸುದ್ದಿ ತಿಳಿದಾಗ ಅವೆಲ್ಲಾ ನೆನಪಿಗೆ ಬಂದಿದ್ದವು. ಸಾವಿನಿಂದ ತಪ್ಪಿಸಿಕೊಂಡವರು ಯಾರೂ ಇಲ್ಲ ಅಲ್ಲವೇ?

    ಪ್ರತಿಕ್ರಿಯೆ
    • Anonymous

      ಧನ್ಯವಾದಗಳು ಉಷಾ ಮ್ಯಾಮ್.ಹೌದು.ವಿಜಯ ಕರ್ನಾಟಕದಲ್ಲೂ ಅಂಕಣ ಬರೆಯುತ್ತಿದ್ದರು. ತಮ್ಮ ಬರಹಗಳ ಮೂಲಕ ಜೀವಂತವಾಗಿದ್ದಾರೆ.

      ಪ್ರತಿಕ್ರಿಯೆ
  3. Anonymous

    Triveni Rao : Mamatha Deva ಈ ಬರಹದ ಮೂಲಕ ಡಾ.ರಾಮಚಂದ್ರ ದೇವ ಅವರಿಗೆ ನೆನಪಿನ ಶ್ರದ್ದಾಂಜಲಿ ಸಲ್ಲಿಸಿದ್ದೀರಿ. ನೀವು ಹೇಳಿದಂತೆ, ಅವರ ಸವಿನೆನಪು ನಿಮ್ಮ ಮನದಲ್ಲೆಂದೂ ಜೀವಂತವಿರುತ್ತದೆ. ಅವರಿಗೆ ಸದ್ಗತಿ ದೊರಕಲಿ.

    ಪ್ರತಿಕ್ರಿಯೆ
  4. Anonymous

    Jayalakshmi Shekar says ಆಪ್ತ ಬರಹ…ಸಾಹಿತ್ಯದ ಬಗ್ಗೆ ಅವರಿಗಿದ್ದ ನಿಲುವು,ಅವರೊಂದಿಗೆ ನಿಮ್ಮ ಒಡನಾಟ ಓದಿ ಸಂತೋಷವಾಯಿತು…ಜೊತೆಗೇ ಹೋಗಿಬಿಟ್ರಲ್ಲ ಎಂಬ ನೋವೂ ಕೂಡ.ಅವರ ಅಂಕಣ ಬರಹ ಬರ್ತಾ ಇತ್ತು(ಬಹುಶಃ ಉದಯವಾಣಿಯಲ್ಲಿ ಎಂದು ನೆನಪು)..ಸಾಧ್ಯ ಆದಾಗೆಲ್ಲ ಓದ್ತಾ ಇದ್ದೆ.

    ಪ್ರತಿಕ್ರಿಯೆ
  5. Anonymous

    Aparna Rao says… nimmade annuva kannadiyolagina gantu … kaige sikkiruva sambhrama poortiyaagi anubhavisuvashtaralle … jaari hodaddu namagU besara tanditu… ashtaadaru nimage labhyavaadaralla endu samaadhaana padi…

    ಪ್ರತಿಕ್ರಿಯೆ
  6. Anonymous

    Vijayashree Nataraj says ಆಪ್ತವಾಗಿ ಬರೆದಿದ್ದೀರಿ ಮಮತಾ .. ಅವರ ಒಡನಾಟದ ಬಗೆಗಿನ ವಿವರ ಓದಿ ಖುಷಿಯಾಯಿತು.. ಈಗ ಇಲ್ಲ ಅನ್ನುವುದರ ಕುರಿತು ಖೇದವೂ ಆಯಿತು..

    ಪ್ರತಿಕ್ರಿಯೆ
  7. Anonymous

    Anuradha B Rao says..ನಿಮ್ಮ ಶ್ರಧ್ಧಾಂಜಲಿ ಬರಹ ಭಾವಪೂರ್ಣವಾಗಿದೆ . ‘ನಮ್ಮ ಮನಸ್ಸಿನಲ್ಲಿ,ನೆನಪಿನಲ್ಲಿ ಸದಾ ಜೀವಂತವಾಗಿರುತ್ತಾರೆ.’ ನಿಜ ನಿಮ್ಮ ಮಾತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: