ಸಂಬಂಧ ಜಾಗ್ರತೆ
ಚಲಂ
ಆದಷ್ಟು ಜಾಗ್ರತೆಯಿಂದ
ಕಾಪಾಡಿಕೊಂಡ ಸಂಬಂದ
ಮಾತನಾಡಿಕೊಂಡ
ಅದೆಷ್ಟೋ ದಿನಗಳ ನಂತರ
ಈ ಕಳಂಕಿತ ಸಮಾಜದ ಕಣ್ಣಿಗೆ ಬಿದ್ದಿದೆ
ವಿಕಾರಗೊಂಡ ಸಮಾಜ,ಮಸಿಮೆತ್ತಿಕೊಂಡ
ಗಣ್ಯರುಗಳು ಒಟ್ಟಿಗೆ ಸಾಗುತ್ತಾರೆ.
ಆಗಾಗ ಗಣ್ಯರು
ಉದ್ದದ ನಾಲಗೆಯನ್ನು
ಝಳಪಿಸುತ್ತಾರೆ
ಮಾತಿನ ಭರಕ್ಕೆ ಹತ್ತಿರವಿದ್ದವರಿಗೆ
ಎಂದೂ ಮಾಸದ ಮಸಿ ಸಿಡಿಯುತ್ತದೆ
ಕರೆದು ಕೂರಿಸಿ
ಮಾತನಾಡಿಸಿಕೊಂಡು ಕೆಡವಿ
ಮುಗ್ದ ಹೃದಯಗಳ ಮೂಲಕ
ತಮ್ಮ ಮಸಿಯ ರಕ್ತವನ್ನು
ರವಾನಿಸುವಾಗ ಮತ್ತಷ್ಟು
ಗಣ್ಯರಾಗುತ್ತಾರೆ
ಅವರಿಗೆಂದೂ ಅರ್ಥವಾಗದ ಧರ್ಮದ
ಒಳಗಿಟ್ಟುಕೊಂಡ ಜಾತಿಯ
ಆಗಾಗ ಬದಲಿಸುವ ತಮ್ಮ
ನಿಲುವುಗಳ ಮೇಲೆ ನಿಂತು
ಸಮಾಜದ ಬಗ್ಗೆ ಮಾತನಾಡುತ್ತಾರೆ
ಮತ್ತಂಚೂರು ಕಳಂಕಿತರಾಗುವಂತೆ
ಆದಷ್ಟೂ ಜಾಗ್ರತೆಯ
ಸಂಬಂದಗಳ ಮೇಲೆ ಕಣ್ಣು ಬಿದ್ದಿರುವಾಗ
ಎರಡೇ ಹಳಿ ಸಾಕು
ನಮ್ಮ ಬಂಡಿ ಸಾಗಿಸಿಬಿಡೋಣ
ಗಣ್ಯರಿಲ್ಲದ, ಮಸಿಯಿಲ್ಲದ
ಹಲವು ಬಣ್ಣಗಳ ಸಮಾಜ
ನಮಗೆ ಸಿಕ್ಕೇ ಸಿಗುತ್ತದೆ.
ಇನ್ನೇನು ಬೇಕು ಹೇಳು
ಮುದ್ದಾದ ಮಗುವಿನ ಚಿತ್ರ ಬಿಡಿಸೋಕೆ







Well written. It is the wish of many a people to be simpletons. But is it ever possible to be aloof from the system?