ಚೈತ್ರಾ ಶಿವಯೋಗಿಮಠ ಅನುವಾದಿತ ಕವಿತೆ- ಪ್ರೀತಿ…

ಮೂಲ: ಖಲೀಲ್ ಗಿಬ್ರಾನ್

ಕನ್ನಡಕ್ಕೆ: ಚೈತ್ರಾ ಶಿವಯೋಗಿಮಠ

ಪ್ರೀತಿ ನಿಮ್ಮನ್ನು ಕರೆಯುವಾಗ
ಸುಮ್ಮನೆ ಹಿಂಬಾಲಿಸಿ ಬಿಡಿ
ಹಾದಿ ಅದೆಷ್ಟೇ ಜಟಿಲವಾಗಿರಲಿ, ಕುಟಿಲವಾಗಿರಲಿ
ತೋಳುಗಳಲ್ಲಿ ಅಡಗಿರುವ ಕತ್ತಿ ನಿಮ್ಮನ್ನು ಇರಿದರೂ
ಆ ಬಾಹುಗಳು ಭದ್ರವಾಗಿ ಬಂಧಿಸುವಾಗ ಶರಣಾಗತರಾಗಿಬಿಡಿ
ಎಲ್ಲಿಂದಲೋ ಬೀಸಿ ಬರುವ ಮಾರುತ
ತೋಟದ ತುಂಬಾ ತರಗೆಲೆಗಳ ಚದುರುವಂತೆ
ಅದರ ಧ್ವನಿ ನಿಮ್ಮ ಕನಸುಗಳನ್ನೂ ಚದುರಿಸಬಹುದು
ಆದರೂ ಪ್ರೀತಿ ಮಾತನಾಡುವಾಗ ಅದನ್ನು ನಂಬಿ

ಪ್ರೀತಿ ಗೆಲ್ಲಿಸಲೂಬಹುದು ಗಲ್ಲಿಗೇರಿಸಲೂಬಹುದು
ನಿಮ್ಮನ್ನು ಬೆಳಸಲೂ ಬಹುದು, ಸಮರಿಬಿಡಲೂ ಬಹುದು
ಸೂರ್ಯರಶ್ಮಿ ಚುಂಬಿಸುವ ಎತ್ತರದ ಕೊಂಬೆಯವರೆಗೂ
ಮುಟ್ಟಿ ಮೃದುವಾಗಿ ಮೈದಡವಬಹುದು
ಆಳವಾಗಿ ಬೇರುಗಳ ತುದಿಗೆ ಇಳಿದು
ನಿಮ್ಮ ಬುಡವನ್ನೇ ಅಲುಗಾಡಿಸಬಹುದು

ಒಣಗಿದ ಜೋಳದ ತೆನೆಗಳನ್ನು ಕಿತ್ತು
ಒಟ್ಟುಗೂಡಿಸುವಂತೆ ನಿಮ್ಮನ್ನು ಹಿಡಿದು
ಬೆತ್ತಲೆಯಾಗಿಸಲು ಬಡಿದು
ನಿಮ್ಮ ಹೊಟ್ಟುಗಳನ್ನು ತೂರಿ
ಶುಭ್ರ ಬಿಳಿಯಾಗಿಸಲು ಕುಟ್ಟಿ ಪುಡಿ ಮಾಡಿ
ವಿಧೇಯರಾಗುವವರೆಗೂ ನಿಮ್ಮನ್ನು ಮಿದ್ದುವುದು
ನಂತರ ಪವಿತ್ರವಾದ ಅಗ್ನಿಗೆ ನಿಮ್ಮನ್ನು ಒಡ್ಡಿ
ದೇವರ ನೈವೇದ್ಯಕ್ಕೆ ಯೋಗ್ಯ ರೊಟ್ಟಿಯನ್ನಾಗಿ ಮಾಡುವುದು

ಪ್ರೀತಿ ಇಷ್ಟೆಲ್ಲವನ್ನು ಮಾಡುವುದು ನೀವು ನಿಮ್ಮನ್ನು
ತಿಳಿಯಲು, ತಿಳಿದು ಬದುಕಿನ ಪರಮಾರ್ಥ ಸಾಧಿಸಲು
ಆದರೆ ನಿಮ್ಮ ಭಯಗಳ ನಡುವೆ ನೀವು ಪ್ರೀತಿಯ
ನಲಿವು ಮತ್ತು ನೆಮ್ಮದಿಗಳನ್ನ ಮಾತ್ರ ಅರಸುವಿರಿ
ಹಾಗಿದ್ದರೆ ನಿಮ್ಮ ಬೆತ್ತಲನ್ನು ಮುಚ್ಚಿಕೊಂಡು ಪ್ರೀತಿಯ ಗಿರಣಿಯಿಂದ ಸುಮ್ಮನೆ ಹೊರನಡೆದುಬಿಡಿ

ಪ್ರೀತಿ ತನ್ನನ್ನೇ ಅರ್ಪಿಸಿಕೊಳ್ಳುವುದು ಹೊರತಾಗಿ
ತನಗಾಗಿ ಏನನ್ನೂ ಪಡೆಯದು
ಪ್ರೀತಿ ಏನನ್ನೂ ನಿರ್ಬಂಧಿಸುವುದಿಲ್ಲ
ಮತ್ತೆ ಯಾರ ನಿರ್ಬಂಧನೆಗೂ ಒಳಗಾಗುವುದಿಲ್ಲ
ಪ್ರೀತಿಗೆ ಪ್ರೀತಿಯೇ ಸಾಕು

ನೀವು ಪ್ರೀತಿಸುವಾಗ ದೇವರು ನಿಮ್ಮ ಹೃದಯದಲ್ಲಿ
ನೆಲೆಸಿದ್ದಾನೆ ಎಂದು ಹೇಳಬೇಡಿ
ನೀವು ದೇವರ ಹೃದಯದಲ್ಲಿದ್ದೀರಿ ಎಂದು ಹೇಳಿ
ಪ್ರೀತಿಯ ಹರಿವನ್ನು ನೀವು ನಿರ್ದೇಶಿಸಬಹುದೆಂದು
ತಿಳಿಯಬೇಡಿ, ನೀವು ಯೋಗ್ಯರಾಗಿದ್ದರೆ ಪ್ರೀತಿಯೇ
ನಿಮ್ಮ ಹರಿವನ್ನು ನಿರ್ದೇಶಿಸುವುದು

ಮತ್ತೇನಿಲ್ಲ, ಪ್ರೀತಿಗೆ ಇರುವ ಬಯಕೆ
ಒಂದೇ
ತನ್ನನ್ನು ತಾನು ಕಂಡುಕೊಳ್ಳುವುದು
ಆದರೆ ನಿಮ್ಮ ಪ್ರೀತಿಗೆ ಅಪೇಕ್ಷೆಗಳಿದ್ದರೆ ಅವು ಹೀಗಿರಲಿ

ರಾತ್ರಿಗಳಿಗೆ ಹಿತವಾಗಿ ಪಾಡುವ
ಕರಗಿ ಹರಿಯುವ ಹಳ್ಳವಾಗುವುದು
ಅತಿಯಾಗಿ ಮೃದುವಾಗಿರುವುದರ
ನೋವಿನ ಅರಿವಿರುವುದು
ಪ್ರೀತಿಯ ಬಗೆಗಿನ ನಿಮ್ಮದೇ ವ್ಯಾಖ್ಯಾನಗಳಿಂದಾಗಿ
ಗಾಯಗೊಳ್ಳುವುದು
ಮತ್ತು ಸ್ವ-ಇಚ್ಛೆಯಿಂದ ಖುಷಿಯಿಂದ ಸ್ರವಿಸುವುದು

ಮುಂಬೆಳಗಿಗೆ ಹಗುರ ಗರಿಗೆದರಿ
ಮೃದುವಾಗಿ ಮೈಮುರಿದು ಎದ್ದು
ಪ್ರೀತಿಸಲು ಮತ್ತೊಂದು ದಿನದ
ಭಾಗ್ಯಕ್ಕೆ ಧನ್ಯವಾಗುವುದು!
ನಡುಹಗಲಿನ ವಿಶ್ರಾಂತಿಗೆ ಪ್ರೀತಿಯ
ಭಾವಪರವಶತೆಯಲಿ ಧ್ಯಾನಸ್ತವಾಗುವುದು
ಬೈಗಿಗೆ ಕೃತಜ್ಞರಾಗಿ ಗೂಡು ಸೇರಿ
ಮನದಲ್ಲಿ ಒಲಿದವರಿಗಾಗಿ ಪ್ರಾರ್ಥಸಿ
ತುಟಿಯ ಮೇಲೆ ಅವನ ಸ್ತುತಿಯೊಂದಿಗೆ
ನಿರುಮ್ಮಳರಾಗುವುದು

‍ಲೇಖಕರು Admin

January 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: