ಶ್ರೀನಿವಾಸ ಪ್ರಭು ಅಂಕಣ- ಎಕ್ಸ್ ಪ್ರೆಸ್ ಹತ್ತಿ ಹೊರಟೇಬಿಟ್ಟೆವು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

33

ದಿಗ್ಭ್ರಮೆಯಿಂದ ಕುಳಿತಿದ್ದ ನನ್ನನ್ನು ನೋಡುತ್ತಾ ನಿರ್ದೇಶಕರು ಕೇಳಿದರು:”ಅಬ್ ಖುಷ್ ಹೋ? ಚಲೋ…ತಯ್ಯಾರಿ ಶುರು ಕರೋ” ಎಂದರು. ಅವರ ಮುಖದಲ್ಲಿ ಕುಹಕದ ನಗು ಇಣುಕುತ್ತಿತ್ತು. ‘ಹೇಗೆ ನಿನ್ನನ್ನು ಸಿಕ್ಕಿಹಾಕಿಸಿದ್ದೇನೆ ನೋಡು’ ಎನ್ನುವ ಗೆಲುವಿನ ಭಾವ ಹೊಡೆದು ಕಾಣುತ್ತಿತ್ತು. ನಾನು ಮತ್ತೂ ಒಂದಿಷ್ಟು ಅಲವತ್ತುಕೊಂಡೆ: “ನಾನು ಮಾತಾಡಿದ್ದು ನನಗಾಗಿ ಅಲ್ಲವೇ ಅಲ್ಲ.. ನಟನೆಯನ್ನು ಗಂಭೀರವಾಗಿ ಸ್ವೀಕರಿಸಿರುವ ನನ್ನ ಕೆಲ ಸಹಪಾಠಿಗಳ ಮುಖವಾಣಿಯಾಗಿ ನಾನು ಮಾತಾಡಿದ್ದೇನಷ್ಟೇ.. ನನಗೆ ಪಾತ್ರ ವಹಿಸಲು ನಿಜಕ್ಕೂ ಯಾವ ಆಸಕ್ತಿಯೂ ಇಲ್ಲ.. ಆಸಕ್ತಿ ಇರುವವರಿಗೆ ಅವಕಾಶ ಕೊಡಿ” ಎಂದು ಇನ್ನಿಲ್ಲದಂತೆ ಕೇಳಿಕೊಂಡೆ.

ನಾನು ಕೇಳಿಕೊಂಡಷ್ಟೂ ಅವರ ಸಿಟ್ಟು ಸೆಡವು—ಪ್ರತೀಕಾರ ಮನೋಧರ್ಮ ಹೆಚ್ಚುತ್ತಲೇ ಹೋಯಿತು! “ಅಚ್ಛಾ! ಹೀರೋ ಬನನೇ ನಿಕಲೇ ಥೇ ಕ್ಯಾ? ಹೀರೋ ಬನ್ ನಾ ಇತನಾ ಆಸಾನ್ ನಹೀ ಮಿಯಾ.. ಅಬ್ ಡರ್ ಗಯಾ ಕ್ಯಾ? ಡರ್ ಪೋಕ್ ಕಹೀ ಕಾ” ಎನ್ನುತ್ತಾ ಕೊನೆಯದಾಗಿ ಒಂದು ಬಾಂಬ್ ಸಿಡಿಸಿದರು: “ಅಗರ್ ತುಮ್ ರೋಲ್ ನಹೀ ಕರೋಗೇ ತೋ ತುಮ್ಹಾರೇ ಗ್ರೂಪ್ ಮೇ ಕೋಯೀ ನಹೀ ಕರೇಗಾ..second team ಕೋ cancel ಕರದೂಂಗಾ” ಎಂದುಬಿಟ್ಟರು! ಅರೆ! ಇದೆಂಥಾ ಭಾವನಾತ್ಮಕವಾಗಿ ಕಟ್ಟಿಹಾಕುವ ಬೆದರಿಕೆ! ನನಗೂ ಯಾಕೋ ಅವರ ಅತಿರೇಕದ ವರ್ತನೆ ಕಂಡು ಸಿಟ್ಟು ನೆತ್ತಿಗೇರಿತು! “ಮುಝೇ ಕೋಈ ಡರ್ ನಹೀ ಹೈ ಸರ್…ಮೈ ಡಾಕ್ಟರ್ ಕಾ ರೋಲ್ ಕರೂಂಗಾ” ಎಂದು ಘೋಷಿಸಿಯೇ ಬಿಟ್ಟೆ. ಅಲ್ಲಿಗೆ ಅಂದಿನ ಕಲಾಪ ಮುಕ್ತಾಯವಾಯಿತು.

ನನ್ನ ಟೀಮ್ ನ ಉಳಿದ ಕಲಾವಿದರೆಲ್ಲಾ ನನಗೆ ಅಭಿನಂದನೆ ಹೇಳುತ್ತಿದ್ದರೆ ನನಗೆ ಎದೆಯಲ್ಲಿ ಭತ್ತ ಕುಟ್ಟುತ್ತಿತ್ತು! ‘Enemy of the people ‘ಐದು ಅಂಕಗಳ ದೊಡ್ಡ ನಾಟಕ; ನಾಟಕದಲ್ಲಿ ಮೊದಲಿನಿಂದ ಕೊನೆಯತನಕ ವ್ಯಾಪಿಸಿಕೊಂಡಿರುವ ಪಾತ್ರ ಡಾಕ್ಟರನದು; ಸಾಲದೆಂಬಂತೆ ನಾಲ್ಕನೆಯ ಅಂಕದಲ್ಲಿ 14—15 ಪುಟಗಳಷ್ಟು ದೀರ್ಘವಾದ ಭಾಷಣ! ತಲೆ ಗಿರ್ರೆಂದಿತು. ನನಗೆ ಸಾಧ್ಯವೇ? ನನ್ನದಲ್ಲದ ಭಾಷೆಯಲ್ಲಿ ಇಷ್ಟು ಮಹತ್ವದ ಪಾತ್ರವನ್ನು ನಿರ್ವಹಿಸುವಷ್ಟು ಸಾಮರ್ಥ್ಯ ನನಗಿದೆಯೇ? ಒಪ್ಪಿಕೊಂಡಿದ್ದು ಹುಚ್ಚುತನವಾಯಿತೇ?.. ಹೀಗೆ ನೂರು ಪ್ರಶ್ನೆಗಳು ಕಾಡತೊಡಗಿದವು.

ಕೊನೆಗೆ, ‘ಆದದ್ದಾಯಿತು… ರಿಹರ್ಸಲ್ಸ್ ಮಾಡುತ್ತಾ ಹೋಗುವುದು… ಪಾತ್ರ ನಿಭಾಯಿಸಬಲ್ಲೆ ಎಂಬ ಆತ್ಮ ವಿಶ್ವಾಸ ಮೂಡದೇ ಹೋದರೆ ಪ್ರದರ್ಶನದ ದಿನ ‘ಭೇದಿ ಕಿತ್ತುಕೊಂಡಿದೆ.. ಪಾತ್ರ ಮಾಡಲಾರೆ’ ಎಂದು ಬಿಟ್ಟರೆ ಮತ್ತೊಂದು ತಂಡದ ಡಾಕ್ಟರ್ ಪಾತ್ರಧಾರಿಯೇ ನನ್ನ ಬದಲಿಗೆ ಮಾಡುತ್ತಾನೆ” ಎಂದೆಲ್ಲಾ ಯೋಚಿಸಿ ಪ್ರಾಥಮಿಕ ಸಿದ್ಧತೆ ಮಾಡಿಕೊಂಡೆ! ಮರುದಿನದಿಂದ ತಾಲೀಮು ಪ್ರಾರಂಭವಾಯಿತು. ನಾಲ್ಕಾರು ದಿನಗಳ ನಾಟಕದ ಓದಿನ ಹಂತ ಮುಗಿಸಿ ಬ್ಲಾಕಿಂಗ್ —ಅಂದರೆ ರಂಗದ ಮೇಲಿನ ಚಲನವಲನಗಳ ಅಭ್ಯಾಸ ಶುರು ಮಾಡಿದರು. ಒಟ್ಟಾರೆಯಾಗಿ ನನಗೆ ಆ ವಾತಾವರಣದಲ್ಲಿ ಅನುಭವಕ್ಕೆ ಬರುತ್ತಿದ್ದುದು ಅನ್ಯಭಾಷಿಕರ—ಅದರಲ್ಲೂ ದಕ್ಷಿಣ ಭಾರತದವರ ಬಗೆಗೆ ಒಳಗೊಳಗೇ ಹರಿಯುತ್ತಿದ್ದ ಒಂದು ಸಣ್ಣ ತಾತ್ಸಾರ—ತಿರಸ್ಕಾರದ ಭಾವ.ಅಂದ ಮಾತ್ರಕ್ಕೆ ಎಲ್ಲರೂ ಹಾಗೆಯೇ ವರ್ತಿಸುತ್ತಿದ್ದರೆಂಬಂತಹ ಉಡಾಫೆಯ ಬೇಜವಾಬ್ದಾರಿ ಹೇಳಿಕೆಯನ್ನು ನಾನು ನೀಡಲಾರೆ..ಅದು ಸಾಧುವೂ ಅಲ್ಲ. ಇರಲಿ.

Enemy of the people ನಾನು ಹಿಂದೆಯೇ ಹೇಳಿರುವಂತೆ ವಾಸ್ತವವಾದಿ ಪಂಥಕ್ಕೆ (realistic) ಸೇರಿದ ನಾಟಕ. ಇಲ್ಲಿ ಅಳವಡಿಸಿಕೊಂಡಿದ್ದು ಪ್ರಸಿದ್ಧ ನಟ—ನಿರ್ದೇಶಕ—ಚಿಂತಕ ಸ್ಟ್ಯಾನ್ ಸ್ಲಾವ್ ಸ್ಕಿಯ ‘Method acting’ ಅಭಿನಯ ಶೈಲಿ. ಹಾಗಾಗಿ ಮೊದಲೇ ಪಠ್ಯದಲ್ಲಿದ್ದ ಈ ಅಭಿನಯ ಶೈಲಿಯನ್ನು ಈಗ ವಿಶೇಷವಾಗಿ ಅಭ್ಯಸಿಸತೊಡಗಿದೆ. Stanislavski ಯ ‘an actor prepares’ ಕೃತಿ ನನ್ನ ಸದಾಕಾಲದ ಸಂಗಾತಿಯಾಗಿ ಹೋಯಿತು. ಓದುತ್ತಾ ಓದುತ್ತಾ ಮನನ ಮಾಡಿಕೊಳ್ಳುತ್ತಾ ಹೋದಂತೆ ಈ ಕೃತಿಯನ್ನು ಕನ್ನಡಕ್ಕೆ ತರಬೇಕೆಂದು ತೀವ್ರವಾಗಿ ಅನ್ನಿಸಿಬಿಟ್ಟಿತು. ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಲೇ ಅನುವಾದ ಕಾರ್ಯವನ್ನೂ ಜೊತೆಜೊತೆಯಲ್ಲೇ ಮಾಡುತ್ತಾ ಹೋದೆ.

ಮುಂದೆ ನಾನು ನನ್ನ ಅನುವಾದ ಕಾರ್ಯ ಮುಗಿಸುವ ವೇಳೆಗೆ ಸರಿಯಾಗಿ ನಮ್ಮ ನಾಡಿನ ಶ್ರೇಷ್ಠ ಚಿಂತಕ, ರಂಗಕರ್ಮಿ ಕೆ.ವಿ.ಸುಬ್ಬಣ್ಣ ಅವರು ಆ ಕೃತಿಯನ್ನು ಅನುವಾದಿಸಿ “ರಂಗದಲ್ಲಿ ಅಂತರಂಗ” ಎಂಬ ಹೆಸರಿನಲ್ಲಿ ಪ್ರಕಟಿಸಿಯೇ ಬಿಟ್ಟರು! ನನಗೆ ವೈಯಕ್ತಿಕವಾಗಿ ನಿರಾಸೆಯಾದರೂ ಒಂದೂ ಅಪೂರ್ವ ಕೃತಿಯ ಸಮರ್ಥ ಅನುವಾದ ಕನ್ನಡಕ್ಕೆ ದಕ್ಕಿತಲ್ಲಾ ಎಂಬ ಸಂತಸ ಆ ನಿರಾಸೆಯನ್ನು ಮರೆಸಿಬಿಟ್ಟಿತು. ಇರಲಿ. ತಾಲೀಮಿಗೆ ಮರಳುತ್ತೇನೆ. ತಾಲೀಮಿನಲ್ಲಿ ನಿರ್ದೇಶಕರು ಅಲೋಕನಾಥ್ ಅವರ ತಂಡಕ್ಕೆ ಎಲ್ಲಾ ಸೂಚನೆಗಳನ್ನೂ ಕೊಟ್ಟು ಚಲನವಲನಗಳನ್ನು ನಿರ್ದೇಶಿಸುತ್ತಿದ್ದರು.ಜೊತೆಗೇ ಸಂಭಾಷಣೆಗಳನ್ನು ಹೇಳುವ ಕ್ರಮವನ್ನೂ ಕಲಿಸುತ್ತಾ ತಿದ್ದುತ್ತಿದ್ದರು.

ಎರಡನೆಯ ತಂಡದವರಾದ ನಾವು ಅದೆಲ್ಲವನ್ನೂ ಗಮನಿಸಿಕೊಂಡು ನಮ್ಮ ತಾಲೀಮಿಗೆ ಸಿದ್ಧರಾಗಬೇಕಿತ್ತು. ನಮ್ಮ ಸರದಿ ಬರುವ ವೇಳೆಗೆ ಅನಿವಾರ್ಯವಾಗಿ ನಮ್ಮ ನಿರ್ದೇಶಕರಿಗೆ ಏನಾದರೂ ಕೆಲಸದ ಒತ್ತಡ ಬಂದುಬಿಡುತ್ತಿತ್ತು! ‘ನೀವು ರಿಹರ್ಸಲ್ ಮಾಡುತ್ತಿರಿ..ನಾನು ಹತ್ತು ನಿಮಿಷದಲ್ಲಿ ಬಂದು ಬಿಡುತ್ತೇನೆ..ಅಲೋಕ್, ನೀನು ಇವರಿಗೆ ಸಹಾಯ ಮಾಡು’ ಎಂದು ನುಡಿದು ಅವರ ದೊಡ್ಡ ಬ್ಯಾಗ್ ಅನ್ನು ಕುರ್ಚಿಯ ಮೇಲೆ ಅವರ ಪ್ರತಿನಿಧಿಯಾಗಿ ಪ್ರತಿಷ್ಠಾಪಿಸಿ ಹೊರಟುಬಿಡುತ್ತಿದ್ದರು.

ನಮ್ಮ ತಾಲೀಮಿನ ಸಮಯ ಮುಗಿಯುವ ವೇಳೆಗೆ ಮತ್ತೆ ಹಾಜರಾಗಿ, ‘ಸಬ್ ಠೀಕ್ ಹೈ? ಕೋಯೀ ಪ್ರಾಬ್ಲಮ್ ನಹೀ?..’ ಎಂದು ಔಪಚಾರಿಕವಾಗಿ ಕೇಳಿ ‘ಕಲ್ ಮಿಲೇಂಗೇ’ ಎಂದು ಹೊರಟುಬಿಡುತ್ತಿದ್ದರು. ‘ಕಲ್’ ಕೂಡಾ ಇದೇ ಕಥೆ! ಒಂದು ದಿನವಂತೂ ಅಶೋಕನಿಗೆ ತೀರಾ ರೋಸಿಹೋಗಿ ಕುರ್ಚಿಯ ಮೇಲೆ ವಿರಾಜಮಾನವಾಗಿದ್ದ ನಿರ್ದೇಶಕರ ಬ್ಯಾಗ್ ಬಳಿ ಹೋಗಿ ಕೈ ಕಟ್ಟಿಕೊಂಡು ನಿಂತುಕೊಂಡು,”ಕ್ಯಾ ಸಾಬ್ , ಹಮ್ ಠೀಕ್ ಕರ್ ರಹೇ ಹೈ ಕ್ಯಾ? ಆಪ್ ಕುಛ್ ಬೋಲೋ ತೋ ಸಹೀ” ಎಂದು ತಮಾಷೆ ಮಾಡಿದ್ದ!

Stanislavski ಯ method acting ಸಿದ್ಧಾಂತದ ಒಂದು ಮುಖ್ಯ ಅಂಗವೆಂದರೆ ಕಲಾವಿದ ತನ್ನ ಪಾತ್ರದೊಂದಿಗೆ ಸಾಧಿಸಬೇಕಾದ ತಲ್ಲೀನತೆ— ತನ್ಮಯತೆ. ಪರಕಾಯ ಪ್ರವೇಶವೆಂಬಂತೆ ತಾನೇ ಪಾತ್ರವಾಗುವ ಈ ಒಂದು ವಿಸ್ಮಯಕರ ಪ್ರಕ್ರಿಯೆಯ ವಿವಿಧ ಹಂತಗಳನ್ನು ಸ್ಟಾನ್ ಸ್ಲಾವಸ್ಕಿ ವಿಶದವಾಗಿ ನಿರೂಪಿಸುತ್ತಾ ಹೋಗುತ್ತಾನೆ. ಆತ ಪ್ರಾರಂಭದಲ್ಲಿ ಹೇಳುವ ಒಂದು ಪ್ರಸಂಗವಂತೂ ಇಂದಿಗೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ.

ಈ ಪ್ರಸಂಗ ತನ್ಮಯತೆಯ ಮೊದಲ ಪಾಠವನ್ನು ಬೋಧಿಸುವುದರ ಜತೆಗೆ ಬದುಕನ್ನು ಕುರಿತಾದ ನಮ್ಮ ಮನೋಧರ್ಮವನ್ನು ರೂಪಿಸಿಕೊಳ್ಳಬೇಕಾದ ಪರಿಯನ್ನೂ ಅಂತರಂಗದಲ್ಲಿ ಧ್ವನಿಸುತ್ತಿದೆ ಎಂಬುದು ನನ್ನ ನಂಬಿಕೆ. ಆ ಕಾರಣಕ್ಕೇ ನಾನು ಭಾಗವಹಿಸುವ ಎಷ್ಟೋ ಕಾರ್ಯಕ್ರಮಗಳಲ್ಲಿ—ವಿಶೇಷವಾಗಿ ಅದು ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದಾಗ—ಈ ಕಥೆಯ ಪ್ರಸಂಗವನ್ನು ತಪ್ಪದೇ ಹೇಳಿ ಅದರ ಅಂತಃಸತ್ವವನ್ನು ಮನವರಿಕೆ ಮಾಡಿಕೊಡುತ್ತೇನೆ. ನನ್ನ ಜೊತೆ ವಿವಿಧ ಸಂದರ್ಭಗಳಲ್ಲಿ ವೇದಿಕೆ ಹಂಚಿಕೊಂಡ ಪರ್ವತವಾಣಿಯವರಿಂದ ಮೊದಲುಗೊಂಡು ಟಿ.ಎನ್. ಸೀತಾರಾಂ ರವರೆಗೆ ಅನೇಕರು ಈ ಕಥೆಯನ್ನು ಕೇಳಿ ಮೆಚ್ಚಿಕೊಂಡಿದ್ದಾರೆ. ಹಾಗಾಗಿ ನಿಮಗೂ ಈ ಕಥಾಪ್ರಸಂಗದ ಪರಿಚಯ ಮಾಡಿಕೊಟ್ಟೇ ಬಿಡುತ್ತೇನೆ!

ಅದೊಂದು ನಾಟಕಶಾಲೆ. ಸ್ಫೂರ್ತ ವಿಸ್ತರಣದ (improvisation) ತರಗತಿ. ಹುಡುಗಿಯೊಬ್ಬಳಿಗೆ ಮೇಷ್ಟ್ರು ಸನ್ನಿವೇಶವೊಂದನ್ನು ವಿವರಿಸುತ್ತಾರೆ: ‘ಮನೆಯಲ್ಲಿ ಬಡತನ.. ತಾಯಿ ಕೆಲಸ ಕಳೆದುಕೊಂಡಿದ್ದಾಳೆ. ಆಕೆಗೆ ಜಡ್ಡು ಬೇರೆ. ಆ ಸಮಯದಲ್ಲಿ ನಿನ್ನ ಮನೆಗೆ ಬಂದ ಗೆಳತಿಯೊಬ್ಬಳಿಗೆ ವಿಷಯ ಗೊತ್ತಾಗುತ್ತದೆ. ಆದರೆ ನೆರವಾಗಲು ಅವಳ ಬಳಿಯೂ ಹಣವಿಲ್ಲ. ಕೊನೆಗೆ ಆಕೆ ತನ್ನ ತಲೆಯಲ್ಲಿದ್ದ ಚಿನ್ನದ ಬ್ರೂಚ್ ಅನ್ನು ತೆಗೆದು ನಿನಗೆ ಕೊಡಬರುತ್ತಾಳೆ. ನೀನು ಖಡಾಖಂಡಿತವಾಗಿ ಅವಳ ಈ ನೆರವನ್ನು ನಿರಾಕರಿಸುತ್ತೀಯಾ. ಕೊನೆಗವಳು ನಿನ್ನ ಮನೆಯ ಒಂದು ಪರದೆಗೆ ಆ ಬ್ರೂಚ್ ಅನ್ನು ಸಿಕ್ಕಿಸಿ ‘ಬೇಕಾದರೆ ಬಳಸಿಕೋ’ ಎಂದು ನುಡಿದು ಹೊರಡುತ್ತಾಳೆ. ಅವಳನ್ನು ಬಾಗಿಲ ತನಕ ಕಳಿಸಿ ಬಂದ ನೀನು ಕೊಂಚ ಯೋಚಿಸಿ ಆ ಬ್ರೂಚ್ ಅನ್ನು ತೆಗೆದುಕೊಳ್ಳಲು ನಿರ್ಧರಿಸುತ್ತೀಯಾ. ಈಗ ನಾನು ನಿನ್ನ ಗೆಳತಿಯಂತೆ ಬ್ರೂಚ್ ಅನ್ನು ಪರದೆಯಲ್ಲಿ ಸಿಕ್ಕಿಸಿ ಬರುತ್ತೇನೆ. ನೀನು ಕೊಂಚ ಚಿಂತಿಸಿ ಆ ಬ್ರೂಚ್ ಅನ್ನು ಪರದೆಯಲ್ಲಿ ಹುಡುಕಿ ತರಬೇಕು. ಆಗಬಹುದೇ?” ಎನ್ನುತ್ತಾರೆ ಮೇಷ್ಟ್ರು.

ಹುಡುಗಿ ಉತ್ಸಾಹದಿಂದ ಸಿದ್ಧಳಾಗುತ್ತಾಳೆ. ಮೇಷ್ಟ್ರು ಪರದೆಯಲ್ಲಿ ಬ್ರೂಚ್ ಸಿಕ್ಕಿಸಿ ಬರುತ್ತಾರೆ. ನಂತರ ಹುಡುಗಿಯ ಹುಡುಕಾಟ ಪ್ರಾರಂಭವಾಗುತ್ತದೆ. ರಂಗದ ಮೇಲೆ ಸರಸರನೆ ಹೋದ ಹುಡುಗಿ ವಿಚಿತ್ರ ಉದ್ವೇಗದಿಂದ ಅತ್ತಿಂದಿತ್ತ ಸರಸರನೆ ಓಡಾಡಿ ಪರದೆಯ ನಿರಿಗೆಗಳಲ್ಲಿ ಸರಸರ ಬ್ರೂಚ್ ಹುಡುಕಿ ಆಗಾಗ್ಗೆ ಮುಖದ ಬೆವರೊರೆಸಿಕೊಳ್ಳುತ್ತಾ ತನ್ನ ಗಾಬರಿ ಆತಂಕಗಳನ್ನು ಪ್ರದರ್ಶಿಸುತ್ತಾ ಕೊನೆಗೆ ಕೆಳಗಿಳಿದು ಬರುತ್ತಾಳೆ. ತನ್ನ ಅಭಿನಯಕ್ಕೆ ಭಾರೀ ಮೆಚ್ಚುಗೆಯನ್ನೇ ನಿರೀಕ್ಷಿಸುತ್ತಾ, “ಹೇಗಿತ್ತು ಸರ್ ನನ್ನ ಅಭಿನಯ?” ಎಂದು ಕೇಳುತ್ತಾಳೆ. ಗಂಭೀರವದನರಾಗಿ ಮೇಷ್ಟ್ರು, “ಬ್ರೂಚ್ ಎಲ್ಲಿ? ಮೊದಲು ˌಕೊಡು” ಅನ್ನುತ್ತಾರೆ! “ಅದು…ಅದು…ಸರ್..ಬ್ರೂಚ್ ಸಿಗಲಿಲ್ಲ” ಅನ್ನುತ್ತಾಳೆ. “ಸಿಗಲಿಲ್ಲ ಎಂದರೇನರ್ಥ? ಹುಡುಕಿ ತರಬೇಕಾಗಿದ್ದದ್ದೇ ನಿನಗೆ ವಹಿಸಿದ್ದ ಕೆಲಸವಲ್ಲವೇ? ಬ್ರೂಚ್ ತರದೇ ನೀನು ಶಾಲೆಗೆ ಬರುವಂತಿಲ್ಲ” ಎನ್ನುತ್ತಾರೆ ಮೇಷ್ಟ್ರು! ಹುಡುಗಿಗೆ ನಿಂತ ನೆಲವೇ ಕುಸಿದಂತಾಗುತ್ತದೆ.

ನಿಧಾನವಾಗಿ ಮತ್ತೆ ರಂಗದ ಮೇಲೆ ಹೋದವಳು ಪರದೆಯಲ್ಲಿ ಬ್ರೂಚ್ ಗಾಗಿ ಹುಡುಕತೊಡಗುತ್ತಾಳೆ. ಈಗ ಮೊದಲಿನ ರಭಸ ಉದ್ವೇಗಗಳ, ಆತಂಕದ ತೋರಾಣಿಕೆಯಿಲ್ಲ. ಅವಳ ಗಮನವೆಲ್ಲಾ ಪರದೆಯ ಮೇಲೆ…ಒಂದೊಂದೂ ನಿರಿಗೆಯನ್ನು ಬಿಡಿಸಿ ಬಿಡಿಸಿ ತಡವಿ ಸಾವಧಾನವಾಗಿ ನೋಡುತ್ತಾಳೆ.. ಕೊನೆಗೆ ನಿರಾಸೆಯಿಂದ ಕೆಳಗಿಳಿದು ಬಂದು ಸಪ್ಪಗೆ ನಿಲ್ಲುತ್ತಾಳೆ. ಮೇಷ್ಟ್ರು ಕೇಳುತ್ತಾರೆ: “ಈಗ ನನ್ನ ಪ್ರಶ್ನೆಗೆ ಉತ್ತರ ಕೊಡು:ನೀನು ಎರಡು ಬಾರಿ ಬ್ರೂಚ್ ಗಾಗಿ ಹುಡುಕಾಟ ನಡೆಸಿ ಬಂದಿದ್ದೀಯಾ.ಯಾವುದು ನಿಜವಾದ ಹುಡುಕಾಟ… ಯಾವುದು ಕೃತಕ?” ಅವರ ಮಾತು ಕೇಳುತ್ತಿದ್ದಂತೆ ಹುಡುಗಿಗೆ ಜ್ಞಾನೋದಯವಾದಂತಾಗುತ್ತದೆ! ಮೇಷ್ಟ್ರು ಮುಂದುವರಿಸುತ್ತಾರೆ:

“ಮೊದಲ ಬಾರಿಯ ಹುಡುಕಾಟದಲ್ಲಿದ್ದದ್ದು ಕ್ರಿಯೆಗಾಗಿ ಕ್ರಿಯೆಯಷ್ಟೇ.. ಅಲ್ಲಿ ನೀನು ‘ಹುಡುಕುತ್ತಿದ್ದೀಯಾ’ ಎಂದು ನಮ್ಮನ್ನು ನಂಬಿಸಲು ಒಂದಷ್ಟು ಕ್ರಿಯೆಗಳಲ್ಲಿ ತೊಡಗಿಕೊಂಡೆ.. ನಿಜ ಹೇಳಬೇಕೆಂದರೆ ಉದ್ದೇಶರಹಿತ ನೀರಸ ಪ್ರದರ್ಶನವಾಗಿತ್ತು ಅದು… ಎರಡನೆಯ ಬಾರಿಯ ಹುಡುಕಾಟದಲ್ಲಿ ನೀನು ಸಂಪೂರ್ಣವಾಗಿ ತೊಡಗಿಕೊಂಡಿದ್ದೆ. ಪರದೆ-ಬ್ರೂಚ್ ಗಳ ಹೊರತಾಗಿ ಮತ್ತೊಂದು ಯೋಚನೆ ನಿನ್ನ ಬಳಿ ಸುಳಿಯಲೂ ಇಲ್ಲ.. ಅದು ‘ನಿಜ’ವಾದ ಹುಡುಕಾಟ…ಮೈಮನಗಳೆಲ್ಲವುಗಳ ಗಮನ ಕೇಂದ್ರೀಕೃತವಾಗಿದ್ದ ಹುಡುಕಾಟ…ರಂಗದ ಮೇಲೆ ನೀವು ಸಾಧಿಸಬೇಕಾಗಿರುವುದು ಇಂತಹ ನಿಜ ಕ್ರಿಯೆಗಳನ್ನು..ನಿಜ ಭಾವಗಳನ್ನು…”

ನನಗಂತೂ ಈ ಒಂದು ಪ್ರಸಂಗವನ್ನು ನಮ್ಮ ಬದುಕಿನ ಜತೆಗೇ ಸಮೀಕರಿಸಿಕೊಳ್ಳಬಹುದೇನೋ ಅನ್ನಿಸಿಬಿಟ್ಟಿತು. ಬದುಕಿನ ಗುರಿಯಾಗಲೀ ಮಾರ್ಗವಾಗಲೀ ಸಾಧನೆಯ ಪಥವಾಗಲೀ ಹೀಗೆ ‘ನಿಜ’ದ ತೆಕ್ಕೆಗೆ ಬಂದಾಗ ಮಾತ್ರ ಹರಳುಗಟ್ಟಿಕೊಂಡು ಫಲಿಸುತ್ತಾ ಹೋಗುವುದಲ್ಲವೇ ಅನ್ನಿಸಿಬಿಟ್ಟಿತು! ಆ ಕಾರಣಕ್ಕೇ ಈ ಕಥೆಯನ್ನು ನಾನು ಎಲ್ಲೆಡೆ ಹೇಳುವುದು..ನಿಮಗೂ ಹೇಳಿದ್ದು!!

ನಿರ್ದೇಶಕರು ನಮ್ಮ ತಂಡವನ್ನು ಸಂಪೂರ್ಣವಾಗಿ ಕಡೆಗಣಿಸಿದರೂ ನಾವು ಹತಾಶರಾಗದೆ ನಮ್ಮದೇ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆವು. ಆ ಸಮಯದಲ್ಲಿ ನನಗೆ ವಿಶೇಷವಾಗಿ ನೆರವಾದವರು—ಅದರಲ್ಲೂ ಹಿಂದಿ ಭಾಷೆ ಹಾಗೂ ಸಂಭಾಷಣೆಗಳಿಗೆ ಸಂಬಂಧ ಪಟ್ಟಂತೆ—ಕೆಲ ಹಿರಿಯ ವಿದ್ಯಾರ್ಥಿಗಳು. ಯುವರಾಜ ಶರ್ಮ—’ಅಂತಿಮಯಾತ್ರೆ’ ನಾಟಕಕ್ಕೆ ಸಂಬಂಧಪಟ್ಟಹಾಗೆ ನನಗೆ ನೆರವಾಗಿದ್ದವನು—ಈಗಲೂ ನನ್ನ ಸಹಾಯಕ್ಕೆ ನಿಂತ. ಸಂಭಾಷಣೆಗಳನ್ನು ಹೇಳುವ ಕ್ರಮವನ್ನು ಕಲಿಸಿ ನನ್ನ ಉಚ್ಚಾರಣಾ ದೋಷಗಳನ್ನು ತಿದ್ದಿ ಪರಿಷ್ಕರಿಸಿ ನೆರವಾದವರು ಆಗ ರೆಪರ್ಟರಿಯಲ್ಲಿದ್ದ ಪ್ರಸಿದ್ಧ ನಟ ಅನುಪಮ್ ಖೇರ್ ಹಾಗೂ ಪ್ರಸಿದ್ಧ ನಿರ್ದೇಶಕ ರಣಜೀತ್ ಕಪೂರ್ ಅವರು.ರಣಜೀತ್ ಕಪೂರ್ ಅವರು ರೆಪರ್ಟರಿಯಲ್ಲಿದ್ದುದರಿಂದ ಅವರು ಹಾಸ್ಟಲ್ ರೂಂನಲ್ಲಿ ಬಾಡಿಗೆಗೆ ಇರುವಂತಿರಲಿಲ್ಲ.ಅವರು ಪ್ರತ್ಯೇಕವಾಗಿ ಮಾಡಿಕೊಂಡಿದ್ದ ಮನೆ ತುಂಬಾ ದೂರದಲ್ಲಿದ್ದುದರಿಂದ ಪ್ರತಿನಿತ್ಯ ಓಡಾಡುವುದೇ ಅವರಿಗೆ ಕಷ್ಟವಾಗಿತ್ತು.

ಒಮ್ಮೆ ನನ್ನ ಕೋಣೆಗೆ ಬಂದಿದ್ದ ಅವರಿಗೆ ನಾನು ಮನೆಯಿಂದ ತಂದಿದ್ದ ಪುಟ್ಟ-ತೆಳ್ಳನೆಯ ಹಾಸಿಗೆ ಕಾಣಿಸಿತು. ‘ರಿಹರ್ಸಲ್ಸ್ ಮುಗಿಯುವುದು ತಡವಾದ ದಿನಗಳಲ್ಲಿ ನಾನು ನಿನ್ನ ಕೋಣೆಯಲ್ಲಿ ನೆಲದ ಮೇಲೆ ಈ ಪುಟ್ಟ ಹಾಸಿಗೆ ಹಾಸಿಕೊಂಡು ಮಲಗಬಹುದೇ?’ ಎಂದು ನನ್ನನ್ನು ಕೇಳಿದರು! ನಾನು ಪರಮ ಸಂತೋಷದಿಂದ ನನ್ನ ಮಂಚವನ್ನು ಅವರಿಗೆ ಬಿಟ್ಟುಕೊಟ್ಟು ಕೆಳಗೆ ನನ್ನ ಪುಟ್ಟ ಹಾಸಿಗೆಯ ಮೇಲೆ ಮಲಗತೊಡಗಿದೆ! ಹಾಗೆ ಅವರು ನನ್ನ ಕೋಣೆಯಲ್ಲಿ ತಂಗಿದಾಗಲೆಲ್ಲಾ ನನ್ನ ಸಂಭಾಷಣೆಗಳಿಗೆ ಸಂಬಂಧ ಪಟ್ಟಹಾಗೆ ಅವರಿಂದ ವಿಶೇಷ ತರಬೇತಿ ಪಡೆಯತೊಡಗಿದೆ.

ಒಂದು ದಿನ ನನ್ನ ಮನಸ್ಸಿಗೆ ತೀರಾ ಗಾಸಿಯಾಗುವಂತಹ, ನನ್ನ ಆತ್ಮ ವಿಶ್ವಾಸವನ್ನೇ ಕದಲಿಸುವಂತಹ ಒಂದು ಘಟನೆ ನಡೆಯಿತು.
ನಮ್ಮ ನಾಟಕದ ತಾಲೀಮು ನಡೆಯುತ್ತಿದ್ದುದು circulation unit ಎಂಬೊಂದು ಕೊಠಡಿಯ ಆವರಣದಲ್ಲಿ. ಅಂದು ಕರೆಂಟ್ ಇಲ್ಲದ ಕಾರಣಕ್ಕೆ ಹೊರಗಡೆ ಇದ್ದ ಲಾನ್ ನಲ್ಲಿ ತಾಲೀಮು ಮುಂದುವರೆಸಿದೆವು. ಅಪರೂಪಕ್ಕೆ ನಮ್ಮ ನಿರ್ದೇಶಕರು ನಮ್ಮ ತಂಡಕ್ಕೂ ರಿಹರ್ಸಲ್ ಮಾಡಿಸಲು ಬಂದು ಬಿಟ್ಟಿದ್ದರು. ಅನೇಕ ಹಿರಿಯ-ಕಿರಿಯ ವಿದ್ಯಾರ್ಥಿಗಳು ಸುತ್ತ ನಿಂತು ಕುತೂಹಲದಿಂದ ನಮ್ಮ ತಾಲೀಮಿನ ಪ್ರಕ್ರಿಯೆಯನ್ನು ಗಮನಿಸುತ್ತಿದ್ದರು. ನನಗೆ ಎಲ್ಲರೂ ತಾಲೀಮನ್ನು ಹಾಗೆ ಗಮನಿಸುತ್ತಿದ್ದುದು ಕೊಂಚ ಮುಜುಗರವನ್ನೇ ತಂದಿತ್ತಾದರೂ ಅದನ್ನು ತೋರಗೊಡದೆ ನನ್ನ ಪಾಡಿಗೆ ತಾಲೀಮಿನಲ್ಲಿ ತೊಡಗಿದ್ದೆ.

ಒಂದು ದೊಡ್ಡ ಸಂಭಾಷಣೆಯ ನಡುವೆ ಇದ್ದ ಪುಟ್ಟ ವಾಕ್ಯ-‘ವೋ ಕುಛ್ ಔರ್ ಹೀ ಥಾ’ ಎಂಬುದು. ಸಂಭಾಷಣೆಯನ್ನು ಹೇಳುವ ರಭಸದಲ್ಲಿ ನಾನು,’ಕುಛ್ ಹೌರ್ ಹೀ ಥಾ’ ಎಂದು ಮಹಾಪ್ರಾಣವನ್ನು ಬಳಸಿ ಹೇಳಿಬಿಟ್ಟೆ. ಸರಿ,ನಮ್ಮ ನಿರ್ದೇಶಕರಿಗೆ ನನ್ನನ್ನು ಚುಚ್ಚಿ ಟೀಕಿಸಲು ಸುವರ್ಣಾವಕಾಶವೇ ದೊರಕಿಬಿಟ್ಟಿತು! “ಏನಂದೆ? ಏನಂದೆ?.. ಕುಛ್ ಹೋರ್..! ಹೋರ್ ಶಬ್ದದ ಅರ್ಥವಾದರೂ ಗೊತ್ತೋ ನಿನಗೆ?ಹೋರ್ ಅಂದರೆ ವೇಶ್ಯೆ! ಬಂಡೇಳುವಷ್ಟು ಸುಲಭವಲ್ಲ ಅಭಿನಯಿಸುವುದು… ಮೈಮೇಲೆ ಎಚ್ಚರ ಇರಬೇಕು ಸಂಭಾಷಣೆ ಹೇಳುವಾಗ…” ಎಂದು ಮುಂತಾಗಿ ಟೀಕಿಸತೊಡಗಿದರು.

ನಡುನಡುವೆ “ಮದ್ರಾಸಿಗಳ ಬಾಯಲ್ಲಿ ಹಿಂದಿ ಹೇಗಾದರೂ ಹೊರಳೀತು?” ಎಂದು ಬೇರೆ ಚುಚ್ಚು ಮಾತು!ಸುತ್ತ ನಿಂತ ಕೆಲ ವಿದ್ಯಾರ್ಥಿಗಳ ಮುಖದಲ್ಲಿ ಕುಹಕದ ನಗು ಅರಳುತ್ತಿದ್ದರೆ ಮತ್ತೆ ಕೆಲವರ ಮುಖದಲ್ಲಿ ಅನುಕಂಪ—ಸಹಾನುಭೂತಿಗಳು ಮನೆ ಮಾಡಿದ್ದವು. ಅಯ್ಯೋ ದೇವಾ! ಒಂದೇ ಒಂದು ಮಾತನ್ನು ತಪ್ಪಾಗಿ ಉಚ್ಚರಿಸಿದ್ದಕ್ಕೆ ಈ ಪಾಟಿ ಚುಚ್ಚುವುದೇ! ಆ ಕ್ಷಣದಲ್ಲಿ ಅದೆಂಥಾ ಹತಾಶೆ-ನಿರಾಸೆಗಳು ಮುತ್ತಿಕೊಂಡು ಬಿಟ್ಟವೆಂದರೆ ಭೂಮಿಯಾದರೂ ಬಿರಿಯಬಾರದೇ ಅನ್ನಿಸಿಬಿಟ್ಟಿತು. ಅವರ ಟೀಕೆಗಿಂತ ಆ ಟೀಕೆಯ ಹಿಂದಿದ್ದ ಅವರ ಸೇಡಿನ ಮನೋಧರ್ಮ—ತಿರಸ್ಕಾರಗಳು ನನ್ನನ್ನು ಕಂಗೆಡಿಸಿಬಿಟ್ಟವು.

ಅಂದು ಸಂಜೆ ಗೆಳೆಯ ಯುವರಾಜಶರ್ಮನ ಹೆಗಲ ಮೇಲೆ ತಲೆಯಿಟ್ಟು ಬಿಕ್ಕಿಬಿಕ್ಕಿ ಅತ್ತುಬಿಟ್ಟೆ. ‘ಕಾರಂತರ ಬಳಿ ಹೋಗಿ ನಡೆದದ್ದೆಲ್ಲವನ್ನೂ ವಿವರಿಸಿ ತಂಡದಿಂದ ಹೊರನಡೆಯಲು ಅನುಮತಿ ಪಡೆದು ಈ ರಗಳೆಗೆ ಮಂಗಳ ಹಾಡಿಬಿಡುತ್ತೇನೆ,ಇಂಥ ಅವಮಾನಗಳನ್ನು ಅರಗಿಸಿಕೊಂಡು ನಟನೆಯನ್ನು ಮುಂದುವರೆಸುವುದು ನನಗೆ ಸಾಧ್ಯವೇ ಇಲ್ಲ’ ಎಂದು ಅವನ ಬಳಿ ತೋಡಿಕೊಂಡೆ. “ನೀನು ಹಾಗೊಂದು ವೇಳೆ ಮಾಡಿದರೆ ಆ ನಿರ್ದೇಶಕ ಬಯಸಿದ್ದನ್ನೇ ಮಾಡಿದಂತಾಯಿತು! ಅವನ ಉದ್ದೇಶವೇ ನಿನ್ನ ತೇಜೋವಧೆ,ನಿನ್ನ ಕುಸಿತ. ಸಿಡಿದೆದ್ದು ಅವನಿಗೆ ಸರಿ ಉತ್ತರ ಕೊಡಬೇಕು ನೀನು..ಅವನ ಕೃತ್ಯಕ್ಕೆ ಅವನಿಗೇ ನಾಚಿಕೆಯಾಗುವಂತೆ ಮಾಡಬೇಕು ನೀನು..ತಂಡ ಬಿಡುವ ಮಾತು ಇನ್ನೊಮ್ಮೆ ನಿನ್ನ ಬಾಯಲ್ಲಿ ಬರಬಾರದು. ನಾನು ನಿನಗೆ ತರಬೇತಿ ಕೊಟ್ಟು ತಾಲೀಮು ಮಾಡಿಸುತ್ತೇನೆ..ಕಾಕಾಜೀ ಸಂಭಾಷಣೆ ತಿದ್ದುತ್ತಾರೆ..ಈ ಮದ್ರಾಸಿಯ ತಾಕತ್ತೇನು ಎಂಬುದನ್ನು ಅವನ ಮುಖಕ್ಕೆ ಹೊಡೆದ ಹಾಗೆ ತೋರಿಸಿಕೊಡಬೇಕು ನೀನು” ಎಂದೆಲ್ಲಾ ಯುವರಾಜ ಧೈರ್ಯ ತುಂಬಿದ.ಅವನ ಸಾಂತ್ವನದ ಮಾತುಗಳಿಂದ ನನಗೂ ಎಷ್ಟೋ ಸಮಾಧಾನವಾಗಿ ಮತ್ತಷ್ಟು ದೃಢ ಮನಸ್ಸಿನಿಂದ ತಾಲೀಮಿನಲ್ಲಿ ತೊಡಗಿಕೊಂಡೆ.

ನಾನು ನಿರ್ವಹಿಸಬೇಕಿದ್ದ ಡಾಕ್ಟರನ ಪಾತ್ರ ಅರುವತ್ತರ ಆಜುಬಾಜಿನ ವಯಸ್ಸಿನ ಪಾತ್ರ. ನನಗೋ ಆಗ 24—25 ರ ಪ್ರಾಯ. ಪ್ರಬುದ್ಧ,ಹಿರಿಯ ಡಾಕ್ಟರನ ಪಾತ್ರದ ಶರೀರ ಭಾಷೆಯನ್ನು(body language) ಅಭ್ಯಸಿಸಿ ರೂಢಿಸಿಕೊಳ್ಳಬೇಕಾಗಿತ್ತು. ಜೊತೆಗೆ ಡಾಕ್ಟರನದು ಮಹಾ ಚಡಪಡಿಕೆಯ ಸ್ವಭಾವದ, restless ಅನ್ನಬಹುದಾದಂತಹ ಸ್ವಭಾವದ ಪಾತ್ರ. ಸ್ಟಾನ್ ಸ್ಲಾವಸ್ಕಿ ತಾನೇ ಆ ಪಾತ್ರವನ್ನು ನಿರ್ವಹಿಸಬೇಕಾದ ಸಂದರ್ಭದಲ್ಲಿ ತಾನೊಮ್ಮೆ ಟ್ರಾಮ್ ನಲ್ಲಿ ಕಂಡ ಅಂಥದೇ ಒಬ್ಬ ಚಡಪಡಿಕೆಯ ಸ್ವಭಾವದ ಹಿರಿಯನ ಶರೀರಭಾಷೆಯನ್ನು ಗಮನಿಸಿ ಅಭ್ಯಸಿಸಿ ಅಳವಡಿಸಿಕೊಂಡಿದ್ದರ ಬಗ್ಗೆ ಬರೆದುಕೊಂಡಿದ್ದು ನೆನಪಿಗೆ ಬಂದು ಅದು ನನಗೆ ದಾರಿದೀಪವಾಯಿತು. ಯುವರಾಜನೂ ಸಹಾ ಈ ಪಾತ್ರದ ಆಂಗಿಕ ಅಭಿನಯದ ಅಳವಡಿಕೆಗೆ ನೆರವಾದ. ಕಾಕಾಜೀ—ರಣಜೀತ್ ಕಪೂರ್—ವಾಚಿಕವನ್ನು ತಿದ್ದಲು ನೆರವಾಗುತ್ತಲೇ ಇದ್ದರು. ಹೀಗೆ ಒಟ್ಟಾರೆ ಪಾತ್ರದ ಬಹಿರಂಗ-ಅಂತರಂಗಗಳನ್ನು ಅಭ್ಯಸಿಸುತ್ತಾ ತಯಾರಿಯನ್ನು ನಡೆಸಿದೆ.

ತಯಾರಿ ಒಂದು ತೃಪ್ತಿಕರ ಹಂತಕ್ಕೆ ಬರುತ್ತಿದ್ದಂತೆ ಪ್ರದರ್ಶನದ ದಿನಾಂಕ ನಿಗದಿಯಾಯಿತು. ಎರಡು ದಿನ ಮಧ್ಯಾಹ್ನ 3 ಗಂಟೆಗೆ ಹಾಗೂ ಮತ್ತೆರಡು ದಿನ ಸಂಜೆ 6.30ಕ್ಕೆ ಒಟ್ಟು ನಾಲ್ಕು ಪ್ರದರ್ಶನಗಳು ನಿಗದಿಯಾದವು. ಇಲ್ಲಿ ಮತ್ತೊಂದು ಎಡವಟ್ಟಾಯಿತು. ಮಧ್ಯಾಹ್ನದ ಎರಡು ಪ್ರದರ್ಶನಗಳು ನಮ್ಮ ತಂಡಕ್ಕೆ ಹಾಗೂ ಸಂಜೆಯ ಎರಡು ಪ್ರದರ್ಶನಗಳು ಮೊದಲ ತಂಡಕ್ಕೆ ಎಂದು ಸನ್ಮಾನ್ಯ ನಿರ್ದೇಶಕರು ಆದೇಶ ಹೊರಡಿಸಿಬಿಟ್ಟರು! ನಮ್ಮ ತಂಡದ ಎಲ್ಲರಿಗೂ ಈ ನಿರ್ಧಾರದಿಂದ ತುಂಬಾ ನೋವಾಯಿತು.

ಮಧ್ಯಾಹ್ನ ಹಾಗೂ ಸಂಜೆಯ ಪ್ರದರ್ಶನಗಳನ್ನು ಎರಡೂ ತಂಡಕ್ಕೆ ಸಮನಾಗಿ ಹಂಚಬಾರದೇಕೆ? ಸಂಜೆಯ ಪ್ರದರ್ಶನಕ್ಕೆ ನಿಮಗೆ ಅವಕಾಶ ಮಾಡಿಕೊಡಲಾರೆ ಎಂದರೆ ನಿಮ್ಮ ಅರ್ಥ ನಾವು ಕಳಪೆಯೆಂದೇ?ಎಂದು ನಾವು ಒಕ್ಕೊರಲಿನಿಂದ ಪ್ರಶ್ನಿಸತೊಡಗಿದೆವು. ನಿರ್ದೇಶಕರದು ಒಂದೇ ಹಠ: “ನನ್ನ ತೀರ್ಮಾನ ಆಗಿಹೋಗಿದೆ; ಬೇಕಾದರೆ ಮಾಡಿ. ಇಲ್ಲವಾದರೆ ಬಿಡಿ… ನೀವು ಮಾಡದಿದ್ದರೆ ನಾಲ್ಕೂ ಪ್ರದರ್ಶನಗಳನ್ನು ಮೊದಲ ತಂಡದವರೇ ನೀಡುತ್ತಾರೆ!” ನನಗಂತೂ ತೀರಾ ರೋಸಿಹೋಯಿತು.

ಮಧ್ಯಾಹ್ನದ ಪ್ರದರ್ಶನ ಎಂದಲ್ಲ ನನಗೆ ಅಸಮಾಧಾನವಾಗಿದ್ದು… ನಮ್ಮ ನಿರ್ದೇಶಕನ ಮನೋಧರ್ಮ ಹಾಗೂ ನಮ್ಮ ತಂಡದ ಕುರಿತಾಗಿ ಅವರಿಗಿದ್ದ ಅಸಡ್ಡೆ—ತಾತ್ಸಾರಗಳನ್ನು ಕಂಡು ಮನಸ್ಸು ಮುದುಡಿತು. ಕಾರಂತರ ಹತ್ತಿರ ಚರ್ಚಿಸೋಣವೆಂದರೆ ಆ ಸಮಯಕ್ಕೆ ಸರಿಯಾಗಿ ಅವರು ಕಾರ್ಯನಿಮಿತ್ತ ಭೋಪಾಲ್ ಗೆ ಹೊರಟುಹೋಗಿದ್ದರು. ತಂಡದವರೆಲ್ಲರೂ ಬರೀ ಮಧ್ಯಾಹ್ನದ ಪ್ರದರ್ಶನಗಳೇ ಆದರೆ ನಾವು ಮಾಡುವುದೇ ಬೇಡ ಎಂದು ಒಮ್ಮತದಿಂದ ತೀರ್ಮಾನಿಸಿಬಿಟ್ಟೆವು. ನಿರ್ದೇಶಕನಿಗಂತೂ ಖುಷಿಯೋ ಖುಷಿ! “ನೀವಾಗಿಯೇ ಹಿಂದೆ ಸರಿದದ್ದು ಒಳ್ಳೆಯದೇ ಆಯಿತು ಬಿಡಿ..” ಎಂದು ಹುಸಿನಕ್ಕು ಉರಿಯುವ ಬೆಂಕಿಗೆ ತುಪ್ಪ ಸುರಿದರು. ಒಳಗೆ ಎಷ್ಟೇ ಕುದಿಯುತ್ತಿದ್ದರೂ ತೋರಗೊಡದೆ ನಾಲ್ಕೂ ಪ್ರದರ್ಶನಗಳಲ್ಲಿ ಗುಂಪಿನ ದೃಶ್ಯಗಳಲ್ಲಿ ಭಾಗವಹಿಸಿ ನೇಪಥ್ಯದಲ್ಲಿಯೂ ಕೆಲಸ ಮಾಡಿ ನಮ್ಮ ಕರ್ತವ್ಯವನ್ನು ಪೂರೈಸಿದೆವು.

ಅಲೋಕ್ ನಾಥ್ ತಂಡದವರೂ ಸೊಗಸಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪ್ರದರ್ಶನಗಳು ಮುಗಿಯುತ್ತಿದ್ದಂತೆ ನಾನು ಹಾಗೂ ಅಶೋಕ ಒಂದು ತೀರ್ಮಾನಕ್ಕೆ ಬಂದೆವು: ‘ಇಲ್ಲಿಯೇ ಇದ್ದರೆ ಒಂದಷ್ಟು ಕುಹಕ—ಲೇವಡಿಯ ಮಾತುಗಳನ್ನು ಕೇಳುತ್ತಲೇ ಇರಬೇಕಾಗುತ್ತದೆ.. ನಾಲ್ಕಾರು ದಿನಗಳ ಮಟ್ಟಿಗೆ ಊರಿಗೆ ಹೋಗಿ ಮನಸ್ಸು ಕೊಂಚ ನಿರಾಳವಾದ ಮೇಲೆ ದೆಹಲಿಗೆ ಮರಳಿ ಬಂದರಾಯಿತು.’

ಸರಿ, ಅಂದೇ ಇದ್ದಬದ್ದ ದುಡ್ಡನ್ನೆಲ್ಲಾ ಗುಡ್ಡೆ ಹಾಕಿಕೊಂಡು ಹೋಗಿ ಬೆಂಗಳೂರಿಗೆ ಟಿಕೆಟ್ ಕಾದಿರಿಸಿ ಜಿ.ಟಿ. ಎಕ್ಸ್ ಪ್ರೆಸ್ ಹತ್ತಿ ಹೊರಟೇಬಿಟ್ಟೆವು. ಎರಡು ದಿನಗಳಷ್ಟು ದೀರ್ಘ ಪ್ರಯಾಣದಲ್ಲೂ ಅಶೋಕ ಒಂದೂ ಮಾತಾಡಲಿಲ್ಲ. ಸಿಗರೇಟು… ನಿದ್ದೆ… ಶೂನ್ಯದಲ್ಲಿ ನೆಟ್ಟ ಹತಾಶ ದೃಷ್ಟಿ.. ಇಷ್ಟರಲ್ಲೇ ಪ್ರಯಾಣ ಕಳೆದುಹೋಯಿತು. ಬೆಂಗಳೂರಿಗೆ ಬಂದಿಳಿದ ದಿನವೇ ಅಶೋಕ ಬಿಜಾಪುರಕ್ಕೆ ಹೊರಟುಬಿಟ್ಟ.

ಬಂದು 3-4 ದಿನಗಳಷ್ಟೇ ಕಳೆದದ್ದು… ದೆಹಲಿಯ ಶಾಲೆಯಿಂದ ಟೆಲಿಗ್ರಾಂ: “come immediately. other wise serious action will be taken”!.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: