ಚೆಲುವೆಯರು ಹೊರಟು ಹೋಗಿದ್ದಾರೆ ದೂರ ಕನಸುಗಳ ಕುದುರೆ ಏರಿ..

ದಮನ್ ಪದ್ಯಗಳು

g p basavaraju

ಜಿ.ಪಿ.ಬಸವರಾಜು

ದಮನ್
ಎಲ್ಲಿ ಹರಿದರೂ ಹೆಸರು ಅದೇ
ತಡೆದು ನಿಲ್ಲಿಸಲಾಗುವದಿಲ್ಲ ಗಂಗೆಯನ್ನು
ಹರಿದಂತೆ ಕಾಲ ನೀರು ನಿರಂತರ

ದಂಡೆತ್ತಿ ಬಂದವರು, ಗೆದ್ದು ನೆಲೆ ನಿಂತವರು
ಉಳಿದಿಲ್ಲ ಇಲ್ಲಿಯೇ ಎಲ್ಲ ಕಾಲಕ್ಕೂ
ಸೋಲು-ಗೆಲುವಿನ ಆಟದಲ್ಲಿ ಸೋತು
ಓಡಿದ್ದಾರೆ ತಾವು ಬಂದ ನಾಡನ್ನು ಹುಡುಕಿ

ಮುರಿದು ಬಿದ್ದಿವೆ ಕೋಟೆಗಳು, ಮನೆಗಳು
ಗಟ್ಟಿಗಾರೆ ಕಲ್ಲುಗಳು ಮೈತೆರೆದು ನೋಡುತ್ತಿವೆ
ದಮನ್ಗಂಗಾ ಹರಿಯುತ್ತಿದ್ದಾಳೆ ಪಾತ್ರ ಬದಲಿಸದೆ
ಕರೆದುಕೊಂಡಿದೆ ಕಡಲು ನಾಲ್ಕು ಮಾರು ದೂರದಲ್ಲಿ

river designಯುದ್ಧದ ಮಾತಿಲ್ಲ ಈಗ ಶತ್ರುಗಳೂ ಇಲ್ಲ
ಸೆಣಸಾಟ ನಡೆದೇ ಇದೆ ಕಡಲ ಜೊತೆ
ಮಳೆ ಗಾಳಿ ಜೊತೆ ರೋಗ ರುಜಿನಗಳ ಜೊತೆ,
ಹುಟ್ಟುತ್ತಾನೆ ಸೂರ್ಯ, ಮುಳುಗುತ್ತಾನೆ ದಿನದ
ಆಟದಲ್ಲಿ, ಬೆವರು ಹರಿಯುತ್ತಿದೆ ಹಗಲಿನಲ್ಲಿ
ರಾತ್ರಿಯಲ್ಲಿ; ಚಡಪಡಿಸುತ್ತಿವೆ ಮೀನು ಬಲೆಯಲ್ಲಿ

ನೆಲೆ ಹುಡುಕಿ ಹೊರಟವರಿಗೆ ವಿದಾಯ ಹೇಳಿದೆ
ದಮನ್; ಹೊಸ ತಲೆಮಾರು ಅಡಿ ಇಟ್ಟಿದೆ ಹೊರಗೆ
ಎಲ್ಲಿಂದ ಎಲ್ಲಿಗೋ; ಗಡಿರೇಖೆಗಳಿಲ್ಲ, ತಡೆಗೋಡೆಗಳಿಲ್ಲ
ಎಲ್ಲಿಯೂ ಚಿಗುರಬಹುದು; ಮೂಲಾಧಾರ ಬೇರು
ಆಕಾಶದಲ್ಲೂ ಇರಬಹುದು, ಹೊಸ ಕಾಲ ಹೊಸ
ಭಾಷೆ, ಅಲ್ಲೆಲ್ಲ ಹೂವು ಹಣ್ಣು ಸಮೃದ್ಧಿ ಫಸಲು

ಸುರಿಸುತ್ತಿದೆ ಕಂಬನಿ ದಮನ್. ಒರೆಸುವವರಿಲ್ಲ
ಅವಶೇಷಗಳ ಮೇಲೆ ಕುಂತು ನಿಂತು ನೆಗೆದು
ಫೋಟೋಕ್ಕೆ ಪೋಸ್ ಕೊಟ್ಟವರೆಲ್ಲ ಕ್ಯಾಮೆರಾ-
ಕ್ಲಿಕ್ಕಿನೊಂದಿಗೇ ಹೊರಟು ಹೋಗುತ್ತಾರೆ ನಿತ್ಯ ಯಾತ್ರಿಗಳು

ಬೀಸುವುದು ಗಾಳಿ, ಮೊರೆಯುವುದು ಕಡಲು
ಬೆಳದಿಂಗಳೂ ಇಲ್ಲಿ ಕಾಡುಪಾಲು, ಯಾವ
ಹಾಡೊ ಯಾವ ರಾಗವೊ, ಎಲ್ಲಿಂದ ಹೊಮ್ಮುವುದೊ
ಹಮ್ಮು ಬಿಮ್ಮುಗಳಿಲ್ಲದ ದಮನ್ ನವೆಯುವುದು ಒಂಟಿ

ಅಲ್ಲಲ್ಲಿ ನಡುಗಡ್ಡೆಗಳು, ಮುದಿತನದ ನೆಲೆಗಳು
ನಿಟ್ಟುಸಿರುಗಳು, ಹಳೆಯ ನೆನಪುಗಳಲ್ಲಿ ಹೊಸ
ನೋವುಗಳು; ಖಾಲಿ ಬಾನಲ್ಲಿ ತೇಲುತ್ತಾರೆ
ಸೂರ್ಯ ಚಂದ್ರರು ಹೊಟ್ಟೆ ಮೇಲಾಗಿ, ಆಗಾಗ
ಒಂದೋ ಎರಡೋ ವಿಮಾನಗಳು, ಬರಬಹುದು
ಅಲ್ಲಿಂದ ತಮ್ಮವರು, ತರಬಹುದು ಬೆಚ್ಚನೆಯ
ನೆನಪುಗಳ; ಕಾಯುತ್ತಾರೆ ಆಸೆಗಣ್ಣಲ್ಲಿ, ಮಂದ
ಬೆಳಕಲ್ಲಿ-ಈ ಕುಸಿದ ಕೋಟೆಗೋಡೆಗಳ ಜೊತೆ
ಮುರುಕು ಮನೆಗಳ ಜೊತೆ, ಆಮೆ ನಡಿಗೆಯಲ್ಲಿ
ಚಲಿಸುವ ಕಾಲದ ಜೊತೆ, ನಿಂತ ನೆಲದ ಜೊತೆ
ಆ ಜಗತ್ತು
ಎಳೆದು ತರಲೇ ಆ ಜಗತ್ತನ್ನು ನನ್ನೊಳಕ್ಕೆ :
ನಿಂತ ದೋಣಿಗಳು, ತೇಲುವ ಅಲೆಗಳು,
ಮಳೆ ಗಾಳಿ ಮಿಂಚು ಗುಡುಗು ಸಿಡಿಲುಗಳಿಗೆ
ಎದೆಕೊಟ್ಟು ನಿಂತರೂ ಕೆಚ್ಚು ಕಳೆದುಕೊಳ್ಳದ
ಗಟ್ಟಿಮುಟ್ಟು ಕೋಟೆ ಗೋಡೆಗಳು, ಎದೆಯಾಳದ
ಮುದ ತುಂಬಿದ ಹೊಚ್ಚ ಹೊಸ ಹಾಡುಗಳು;

ಇತಿಹಾಸವೆನ್ನುವುದೊಂದು ಏರು ಇಳುವಿನ ಅಲೆ
ಕೊಲ್ಲುವ ಗೆಲ್ಲುವ ಮೆರೆಯುವ ಕಿರೀಟದಾಟ,
ಕೋಟೆ ಕುಸಿದು, ಸಿಂಹಾಸನ ಮಣ್ಣಾಗಿದ್ದರೂ
ಇನ್ನೂ ಭದ್ರವಾಗಿವೆ ಸೆರೆಮನೆಯ ಕಂಬಿಗಳು

boat2
ದಮನ್ಗಂಗಾ ಹರಿಯುತ್ತಲೇ ಇದೆ, ಕಡಲ ತಬ್ಬುತ್ತಲೇ ಇದೆ,
ಉಪ್ಪುನೀರಲ್ಲಿ ಸಿಹಿನೀರು ಬೆರೆತು ಆಡುತ್ತಲಿವೆ ಮೀನು, ಅಲ್ಲಲ್ಲಿ
ತೇಲುತ್ತಲಿವೆ ದೋಣಿ ನೀರಿನಾಳಕ್ಕೆ ಬಲೆಯ ಬೀಸುತ್ತ ಬೀಸುತ್ತ,
ಬದುಕಿಗೊಂದು ಬಲೆ, ಸಾವಿಗೊಂದು ಬಲೆ, ಬೆನ್ನಹಿಂದಣ ಬಲೆ
ಬೀಸುತ್ತಲೇ ಇರುತ್ತದೆ ಎಲ್ಲ ಜೀವಿಗಳಿಗೂ ಎಲ್ಲ ಕಾಲಕ್ಕೂ

3

ಅಲೆ ಏರಿ ಬಂದಾಗ ದಡ ಕಂಪಿಸುವುದು, ನೆಗೆದ ಉಮೇದಿಗೆ
ನೀರು ಚೂರು ಚೂರು, ತಬ್ಬಿಬ್ಬಾಗುವುದು ಅಬ್ಬರಿಸುವ ಕಡಲು
ಮರಳ ಹಾಸೆಂಬುದು ಮರೆಯಾಗಿ ಬುರುಗೊಂದೆ ಉಳಿಯುವುದು
ಮತ್ತೆ ಆ ಬುರುಗೂ ಹರಿದು ಫಳಫಳ ಹೊಳೆಯುವುದು ಮರಳ-
ಹಾಸು, ನಡೆದು ಹೋಗಲು ಎಷ್ಟೊಂದು ಸಲೀಸು ಈ ದಾರಿಯಲ್ಲಿ
ಹಗುರ ಹೆಜ್ಜೆ ಊರಿದರೂ ಉಳಿಯುವುದು ಗುರುತು, ದಿಕ್ಕು ದೆಸೆ,
ಆ ಕ್ಷಣದ ಮಂದಹಾಸ; ಅದೂ ಉಳಿಯುವುದಿಲ್ಲ; ಮತ್ತೆ ಬರುವವು
ಅಲೆಯ ಹಿಂದೆ ಅಲೆ, ಅಳಿಸುತ್ತ ಅಳಿಸುತ್ತ ಎಲ್ಲ ಹೆಜ್ಜೆ ಗುರುತುಗಳನ್ನು
ನಾವು ಕಟ್ಟಿದ ಕನಸುಗಳನ್ನು, ಬಿಟ್ಟ ಗುರುತುಗಳನ್ನು; ಆದರೂ ಮತ್ತೆ
ತೆರೆಯುವುದು ಮರಳ ದಾರಿ, ಕರೆಯುತ್ತ ಹೊಸಬರನ್ನು, ಕನಸಿಗರನ್ನು
ಉಕ್ಕುವ ಉಮೇದಿನವರನ್ನು, ಮೂಡಿಸಲು ಹೊಸ ಹೆಜ್ಜೆ ಗುರುತುಗಳನ್ನು
ಮೀನು ಮಾರುಕಟ್ಟೆಯಲ್ಲಿ
ಮೀನು ಮಾರುಕಟ್ಟೆಯಲ್ಲಿ ಮುದುಕಿಯರೆ ಎಲ್ಲ
ಬುಟ್ಟಿಗಳಲ್ಲಿ ಹೊಳೆಯುತ್ತಿವೆ ತಾಜಾ ತಾಜಾ
ಮೀನುಗಳು; ಮಿಡುಕುತ್ತಿವೆ ಜೀವ ಭಾವಗಳು

ಸಂಜೆ ಸೂರ್ಯನ ಬಣ್ಣಗಳಲ್ಲಿ ಕಟ್ಟುತ್ತವೆ
ಬಣ್ಣಬಣ್ಣದ ಕನಸು; ಬೆರಗು ಕಣ್ಣಲ್ಲಿ ಮೀನ
ಬಿಂಬಗಳು; ಕಾಸು ಕಾಸಿಗೂ ಚೌಕಾಸಿ

ಬುಟ್ಟಿ ಖಾಲಿಯಾಗುವುದಿಲ್ಲ
ಖಾಲಿ ಕೈ ತುಂಬುವುದಿಲ್ಲ
ಮೆಲ್ಲಗಿಳಿಯುವುದು ಕತ್ತಲು

designಈ ಊರ ಚೆಲುವೆಯರು
ಹೊರಟು ಹೋಗಿದ್ದಾರೆ ದೂರ
ಕನಸುಗಳ ಕುದುರೆಗಳನ್ನೇರಿ

ನಿಟ್ಟುಸಿರು, ಒಂಟಿತನ, ವೃದ್ಧಾಪ್ಯ
ಕತ್ತಲಲ್ಲಿ ತಡಕುವರು, ಹೆಜ್ಜೆ
ನಡುಗುವುವು ಚೂರುಪಾರು ಬೆಳಕಲ್ಲಿ

ನಗುವೊಂದು ಭ್ರಮೆ, ಬದುಕೊಂದು ಗುಳ್ಳೆ
ಹರಿಯುವುದು ಬೆವರು ಹಗಲು ರಾತ್ರಿಗಳ
ಹೊಳೆಯಲ್ಲಿ, ದಮನ್ಗಂಗಾ ನದಿಯಲ್ಲಿ

ಉಪ್ಪುಪ್ಪು ಕಡಲ ನೀರು ಕುಡಿಯಲಾಗುವುದಿಲ್ಲ
ಪೂರ್ಣವಾಗುವುದಿಲ್ಲ ಉಳಿದುಹೋದ ಕತೆಗಳು
ಎಲ್ಲೆಲ್ಲೂ ಹಾಯುತ್ತಿವೆ ನೋವಿನ ಅಲೆಗಳು

ಕಾಯುತ್ತಿದೆ ಕಡಲು ಬರುವವರಿಗಾಗಿ
ಅಲೆಅಲೆಗಳಲ್ಲಿ ಹೊಳೆಯುತ್ತಿವೆ ಸಾವಿರ
ಕನ್ನಡಿ; ಕಾಣುತ್ತಿಲ್ಲ ಒಂದೂ ಹೊಸ ಮುಖ

‍ಲೇಖಕರು admin

April 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: