ಚೆನ್ನೈ ಮತ್ತು ಮಂಗಳೂರುಗಳ ನಡುವಿನ ಅಂತರ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ಯನ್ನು ‘ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ‘ವಿಜಯ ಕರ್ನಾಟಕ’ದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ 

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

“ಅವನಿಗಾಗಿ ಕಾಯುವುದೆಂದರೆ ತಪ್ಪಿಸಿಕೊಂಡ ಅಲೆಯೊಂದನ್ನು ಮತ್ತೆ ಹಿಡಿಯಲು ದಡದಲ್ಲಿ ಕಾಯುತ್ತಾ ಕೂರುವುದು” ಎಂಬ ವಾಕ್ಯವನ್ನು ಓದಿದ ಕೂಡಲೇ ಪತ್ರಿಕೆಯ ಪುರವಣಿ ಸಂಪಾದಕರಿಗೆ ಕೆಲ ಸಮಯದ ಹಿಂದೆ ಇಂಥದ್ದೇ ಸಾಲೊಂದನ್ನು ಓದಿದ ನೆನಪಾಯಿತು. 

ತಮ್ಮ ಟೇಬಲ್ ಮೇಲಿದ್ದ ಬರಹಗಳ ರಾಶಿಯಲ್ಲಿ ಅದನ್ನೀಗ ಮತ್ತೆಲ್ಲಿಂದ ಹುಡುಕುವುದು? ಯಾವುದೋ ಕವಿಯ ಸಾಲನ್ನು ಇಬ್ಬರು ಕತೆಗಾರರು ಬಳಸಿರಬಹುದು ಎಂದುಕೊಂಡು ಮುಂದೆ ಓದಲಾರಂಭಿಸಿದ. ನಾಲ್ಕಾರು ವಾಕ್ಯಗಳನ್ನು ಓದಿದ ಮೇಲೆ ‘ನೀರು ಮತ್ತು‌ ಗಾಳಿಯನ್ನು ಹಿಡಿದಿಡಲಾಗದು. ಅವು ಹೊರಹೋಗುವ ತಮ್ಮ ಜಾಗವನ್ನು ಹುಡುಕಿಕೊಳ್ಳುತ್ತವೆ’ ಎಂಬ ಮತ್ತೊಂದು ಸಾಲು ಓದಿದ ಮೇಲೆ ಸಂಪಾದಕರಿಗೆ ಸ್ವಲ್ಪ ಗಲಿಬಿಲಿಯಾಯಿತು. ಆ ಸಾಲನ್ನೂ ತಾನು ಹಿಂದಿನ ಬರಹದಲ್ಲಿ ಓದಿದ ನೆನಪಾಯಿತು. ಆ ನಂತರ ಸರಿಯಾಗಿ ಗಮನಕೊಡಲಾಗಿ ಈ ಬರಹದ ಯಥಾವತ್ ಬರಹವನ್ನೇ ತಾನು ಓದಿದ್ದು‌ ಎಂಬುದೂ ಖಾತರಿಯಾಯಿತು.

ಆಗ ಆ ಬರಹವನ್ನೂ ತೆಗೆದುಕೊಂಡು ಕೈಯಲ್ಲಿದ್ದ ಈ ಬರಹವನ್ನೂ ಅದರೊಂದಿಗೆ ಹೋಲಿಕೆ ಮಾಡುತ್ತಾ ಹೋದರು. 

ಆಶ್ಚರ್ಯ! 

ಎರಡೂ ಕೈಬರಹದಲ್ಲೇ ಇದ್ದವು. ಅವುಗಳ ಕೈಬರಹದಲ್ಲಿ ಸಾಕಷ್ಟು ವ್ಯತ್ಯಾಸವಿತ್ತೇ ವಿನಃ ಎರಡೂ ಬರಹಗಳಲ್ಲಿ ಒಂದೇ ಒಂದು ಪದವೂ ವ್ಯತ್ಯಾಸವಾಗಿರಲಿಲ್ಲ. ಸಂಪಾದಕರು ಇದನ್ನು ಮತ್ತೆ ಮತ್ತೆ ಪದಗಳ ಆಧಾರದಲ್ಲಿಯೂ ಪರೀಕ್ಷಿಸಿ ನೋಡಿದರು. ತಮ್ಮ ಸಹಾಯಕನಿಗೆ ಹೇಳಿ ಆ ಎರಡೂ ಕಥೆಗಳು ಬಂದ ಲಕೋಟೆಗಳನ್ನು ತರಲು ಹೇಳಿದರು. ಅಂತೆಯೇ ಅವುಗಳನ್ನು ತಂದ ಸಹಾಯಕ ಒಂದು ಲಕೋಟೆ ಮಂಗಳೂರಿನಿಂದಲೂ ಮತ್ತೊಂದು ಲಕೋಟೆ ಚೆನ್ನೈ ನಿಂದಲೂ ಬಂದಿರುವುದಾಗಿ ಹೇಳಿ ತನ್ನ ಪತ್ತೇದಾರಿಕೆಯನ್ನು ಮಾಡಿ ಮುಗಿಸಿದ್ದ.



ದೀಪಾವಳಿ ಕಥಾ ಸ್ಪರ್ಧೆಗೆಂದು ಬಂದಿದ್ದ ಕತೆಗಳನ್ನು ತೀರ್ಪುಗಾರರಿಗೆ ಕಳಿಸುವುದಕ್ಕಿಂತ ಮೊದಲಿನ ಸುತ್ತಿನ ಆಯ್ಕೆಗಾಗಿ ಪರಿಷ್ಕರಣೆ ಮಾಡುತ್ತಿದ್ದ ಸಂಪಾದಕರಿಗೆ ಈ ಕತೆಗಳು ಇಷ್ಟವಾಗಿದ್ದರೂ ಅವು ಎರಡೂ ಕತೆಗಳು ನೂರಕ್ಕೆ ನೂರರಷ್ಟು ಸಾಮ್ಯತೆ ಹೊಂದಿದ್ದರಿಂದ ಕೃತಿಚೌರ್ಯವಾಗಿದ್ದರೂ ಆಗಿರಬಹುದು ಎಂದುಕೊಂಡು ಗೊಂದಲವೇ ಬೇಡ ಎಂಬ ಕಾರಣಕ್ಕೆ ಅವುಗಳನ್ನು  ಒಂದು ಚಿಕ್ಕ ಟಿಪ್ಪಣಿಯೊಂದಿಗೆ ಆಯಾ ಕತೆಗಾರರಿಗೆ ಕಳುಹಿಸಲು ತೀರ್ಮಾನಿಸಿದರು. 

ಆಗಷ್ಟೇ ಮರೀನಾ ಬೀಚ್ ನ ವಿಹಾರ ಮುಗಿಸಿ ಮನೆಗೆ ಬಂದ ಆ ಕತೆಗಾರ ಪತ್ರಿಕೆಯ ಲಕೋಟೆ ನೋಡುತ್ತಲೇ ಆಶ್ಚರ್ಯದಿಂದ ಬಹುಮಾನ ಏನಾದರೂ ಬಂದಿರಬಹುದೆ ಎಂದು ಕುತೂಹಲದಿಂದ ತೆಗೆದು ನೋಡಿದ. ಅವನು ಕಳಿಸಿದ್ದ ಕೈಬರಹದ ಹಾಳೆಗಳೊಂದಿಗೆ ಪತ್ರಿಕೆಯ ಲೆಟರ್ ಹೆಡ್ ನಲ್ಲಿ, “ನಿಮ್ಮ ಕತಾಪ್ರೀತಿಗೆ ಅಭಿನಂದನೆಗಳು. ಆದರೆ ನಿಮ್ಮ ಕತೆಯ ಯಥಾವತ್ತಾದ ಕತೆಯನ್ನು ಮಂಗಳೂರಿಂದ ಕೂಡ ಒಬ್ಬರು ಕಳಿಸಿದ್ದರು. ಒಂದಕ್ಷರವೂ ವ್ಯತ್ಯಾಸವಿಲ್ಲದೆ ನೀವಿಬ್ಬರೂ ಒಂದೇ ಕತೆಯನ್ನು ಬರೆಯಲು ಹೇಗೆ ಸಾಧ್ಯ? ಇದೊಂದು ಸ್ವತಂತ್ರ ಕಥೆಗಳ ರಚನೆಯ ಸ್ಪರ್ಧೆಯಾಗಿದ್ದು, ಎರಡೂ ಕತೆಗಳ ಮೂಲ ನಮಗೆ ಸಂಶಯಾಸ್ಪದವಾಗಿರುವುದರಿಂದ ಇದನ್ನು ಸ್ಪರ್ಧೆಗೆ ಪರಿಗಣಿಸಿಲ್ಲ” ಎಂದು ಬರೆಯಲಾಗಿತ್ತು. ಇದನ್ನೋದಿದ ಆತನಿಗೆ ದಿಗ್ಭ್ರಮೆಯಾಯಿತು. ತಕ್ಷಣ ಪತ್ರಿಕೆಯ ಆಫೀಸಿಗೆ ಕಾಲ್ ಮಾಡಿ ಮಂಗಳೂರಿನಿಂದ ಇದೇ ಕತೆ ಕಳಿಸಿದವರ ವಿವರ ನೀಡಲು ಸಾಧ್ಯವೆ ಎಂದು ಕೇಳಿ ಪಡೆದುಕೊಂಡ. 

ಮಂಗಳೂರಿನ ತಣ್ಣೀರಭಾವಿ ಬೀಚ್ ನ ರೆಸಾರ್ಟ್ ನಲ್ಲಿ ಪಿಆರ್ ಓ ಆಗಿದ್ದ ಅವಳಲ್ಲಿ ಓರ್ವ ಕತೆಗಾರ್ತಿ ಹುಟ್ಟಿ ಅನೇಕ ವರ್ಷಗಳೇ ಕಳೆದಿದ್ದರೂ ಸ್ಪರ್ಧೆಯೊಂದಕ್ಕೆ ಆಕೆ ಕತೆ ಕಳಿಸಿದ್ದು ಅದೇ ಮೊದಲು. ಆದರೀಗ ಅದು ಈ ರೀತಿ ಹಿಂದಿರುಗಿ ಬಂದಿತ್ತು. ಕತೆ ಹಿಂದಿರುಗಿದ್ದನ್ನು ತಿಳಿದಾಗ ಬೇಸರಗೊಂಡಿದ್ದ ಆಕೆ ಜೊತೆಯಲ್ಲಿದ್ದ ಟಿಪ್ಪಣಿಯನ್ನು ಕೆಲಸದ ಒತ್ತಡದಲ್ಲಿ ಓದಿರಲಿಲ್ಲ. ಮನೆಗೆ ಬಂದವಳು ಅದನ್ನೋದಿ ಖುಷಿ ಪಡಬೇಕೋ ಬೇಡವೋ ಎಂದು ಯೋಚಿಸುತ್ತಿರುವಾಗಲೇ ಮೊಬೈಲ್ ರಿಂಗಾಯಿತು. 

‘ನಾನು ಚೆನ್ನೈನಿಂದ ಮಾತಾಡ್ತಿದೀನಿ. ನೀವು ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಿರಾ?’ 

‘ಹೌದು. ನೀವೂ?’ 

‘ನಿಮಗೆ ಪತ್ರಿಕೆಯವರಿಂದ ಏನಾದರೂ ಮಾಹಿತಿ ಬಂದಿದೆಯಾ?’ 

‘ಬಂದಿದೆ. ನಿಮಗೂ ಬಂದಿದೆಯಾ?’ 

‘ಹೌದು. ನಮ್ಮಿಬ್ಬರ ಕತೆಗಳು ಒಂದೇ ಆಗಿವೆ ಎಂದು ಬರೆದಿದ್ದಾರೆ. ಒಂದು ಅಕ್ಷರವೂ ತಪ್ಪದೆ ನಾವಿಬ್ಬರೂ ಒಂದು ಕತೆ ಬರೆದಿದ್ದೇವೆ ಎಂದಾದರೆ ನಾವ್ಯಾಕೆ‌ ಒಮ್ಮೆ ಭೇಟಿ ಮಾಡಬಾರದು ಅಲ್ಲವೆ?’ 

‘ಏನಂದ್ರಿ?’ ಸ್ವಾಭಾವಿಕವಾಗಿ ಕೇಳಿದಳಾಕೆ. 

‘ಕ್ಷಮಿಸಿ. ನಿಮಗಿಷ್ಟವಿಲ್ಲದಿದ್ರೆ ಬೇಡ. ನನ್ನ ಥರಾನೆ ಕತೆ ಬರೆದಿರೋ ನಿಮ್ಮನ್ನ ಒಮ್ಮೆನಾದ್ರೂ ಭೇಟಿ ಮಾಡಬೇಕು ಅನ್ನಿಸಿತು. ಅದಕ್ಕೆ ಕೇಳಿದೆ.’ 

‘ಇಲ್ಲ. ನನಗೇನೂ ಅಭ್ಯಂತರವಿಲ್ಲ. ನಾವು ಭೇಟಿ ಆಗೋಣ. ಈ ಕತೆಗಳ ಹಿನ್ನೆಲೆ ಇಬ್ಬರು ತಿಳಿದುಕೊಳ್ಳುವುದು ಬಹುಮುಖ್ಯ.’  ವಿಧಾನ ಸೌಧದ ಎದುರಿರುವ ಮೆಟ್ರೋ ಸ್ಟೇಶನ್ ಬಳಿ ಇಬ್ಬರೂ ನಿಗದಿತ ಸಮಯಕ್ಕಿಂತ ಆಚೀಚೆ ಬಂದು ಪರಸ್ಪರ ಕುಶಲೋಪರಿ ಮಾತುಗಳನ್ನು ಮುಗಿಸಿ ಮಾತನಾಡಲು ಅನುಕೂಲವಾಗುತ್ತದೆಂದು ಕಬ್ಬನ್ ಪಾರ್ಕ್ ಗೆ ಪ್ರವೇಶಿದರು. 

‘ಅವನಿಗಾಗಿ ಕಾಯುವುದೆಂದರೆ ತಪ್ಪಿಸಿಕೊಂಡ ಅಲೆಯೊಂದನ್ನು ಮತ್ತೆ ಹಿಡಿಯಲು ದಡದಲ್ಲಿ ಕಾಯುತ್ತಾ ಕೂರುವುದು’

-ಇಂಥ ಮಾತುಗಳನ್ನ ಒಬ್ಬ ಹುಡುಗಿಯಾಗಿ ನಾನು ಬರೆದಿದ್ದೇನೆ. ಆದರೆ ನೀವೂ ಅವನಿಗಾಗಿ… ಅಂತ ಬರೆದಿರುವಿರಲ್ಲ? ಎಂದು ಆಕೆ ನಕ್ಕಳು. 

‘ಹೌದು, ಅದನ್ನು ಬರೆವಾಗ ನಾನು ಅವಳಾಗಿದ್ದೆ.’ 

‘ನಾನು ಮಾತ್ರ ಇದನ್ನ ಬರೆವಾಗ ನಾನಾಗಿರಲಿಲ್ಲ. ಅವಳೂ ಆಗಿರಲಿಲ್ಲ.’ 

‘ಹಾಗಿದ್ದರೆ ಮಂಗಳೂರು ಬೀಚಿನಲ್ಲಿ ಇಂಥ ಯಾವ ಕತೆಯನ್ನೂ ನೀವು ಕಂಡಿಲ್ಲವೆ?’ 

‘ಅಂದರೆ ನೀವು ಮರೀನಾ ಬೀಚ್ ನಲ್ಲಿ ಕಂಡದ್ದನ್ನೇ ಬರೆದಿರಾ?’ 

‘ಇಲ್ಲ …ನಾನೂ ಕೂಡ ಇದನ್ನು ಸೃಷ್ಟಿಸಿದೆ.’ 

‘ಆಶ್ಚರ್ಯ ಅಲ್ವಾ? ಇಬ್ಬರೂ ಹೀಗೆ ಕಾಯುವ, ನೋಯುವ ಕತೆಯನ್ನೇ ಸೃಷ್ಟಿಸಿದ್ದೇವೆ.’ 

‘ಕಷ್ಟದಲ್ಲೇ ಕತೆಯಿದೆ ಅಂತಾರಲ್ಲ ಹಾಗೆ. ಟ್ರಾಜಿಡಿಯನ್ನು ಸೃಷ್ಟಿಸೋದರಲ್ಲೇ ಬಹುತೇಕರಿಗೆ ಆನಂದ.’ 

‘ಅದೇನೇ ಆದ್ರೂ ನಾವಿಬ್ಬರೂ ಹೀಗೆ ಒಂದೇ ಒಂದು ಪದ ಬದಲಿಲ್ಲದ ಕತೆಗಳನ್ನು ಸೃಷ್ಟಿಸೋದು ಇದೆಯಲ್ಲ. ಅದು ಮಾತ್ರ ವಂಡರ್. ಇದಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. ಅದು ಪರಸ್ಪರ ಪರಿಚಯವೂ ನಮಗಿಲ್ಲ.’ 
‘ಅಂದರೆ ನಮ್ಮ ಅಂತರಂಗಗಳ ಅಂತರ ತೀರ ಕಡಿಮೆಯಿರಬೇಕು ಅಲ್ಲವೆ?’ 

‘ಒಮ್ಮೆಯೂ ಭೇಟಿಯಾಗದ, ಪರಿಚಯವೂ ಇರದ ನಮ್ಮ ನಡುವೆ ಎಂಥ ಅಂತರಂಗದ ಮಾತುಗಳಿರುತ್ತವೆ ಅಲ್ಲವೆ?’ 

‘ಚೆನ್ನೈ ಮತ್ತು ಮಂಗಳೂರುಗಳ ನಡುವಿನ ಅಂತರ ಎಷ್ಟು?’ 

‘ಸುಮಾರು ಏಳುನೂರು ಕಿಲೋಮೀಟರ್ ಗಳು.’ 

‘ಏಳು ನೂರು ಕಿ.ಮೀ., ಗಳ ದೂರದಲ್ಲಿರುವ ಎರಡು ನಗರಗಳ ನಡುವಿನ ಒಂದೇ ಸಾಮ್ಯತೆ ಎಂದರೆ ಸಮುದ್ರ… ಅಲೆ… ಬೀಚ್…’ 

‘ಎಸ್. ಅಷ್ಟೆ… ‌ಸಮುದ್ರ… ಅಲೆ… ಬೀಚ್…’

‘ಎರಡು ಬೀಚ್ ಗಳ ನಗರದ ನಾವು ಭೇಟಿಯಾಗಲು ಆಯ್ಕೆ ಮಾಡಿಕೊಂಡ ಸ್ಥಳ ಮಾತ್ರ ಉದ್ಯಾನನಗರಿ.’ 

‘ಇಬ್ಬರಿಗೂ ಸಮಾನ ದೂರವಾಗುವ ಸ್ಥಳ ಇರಲಿ‌ ಎಂದು ತಾಕೀತು ಮಾಡಿದ್ದು ನೀವೇ.’ 

‘ಹೌದು. ಆದರೆ ಈಗೇಕೋ ನಾವು ನಮ್ಮದೇ ಯಾವುದಾದರೂ ಒಂದು ಊರಿನಲ್ಲಿ ಭೇಟಿಯಾಗಬಹುದಿತ್ತೇನೋ ಅನ್ನಿಸುತ್ತಿದೆ.’ 

‘ಆಗಲಾದರೂ ನಮ್ಮ ಕತೆಗಳು ಏಕರೂಪವಾಗಿರಲು ಕಾರಣ ಏನು ಎಂಬುದು ಪತ್ತೆಯಾಗುತ್ತಿತ್ತೇನೋ.’ 

‘ಏಳುನೂರು ಕಿಲೋಮೀಟರ್ ಎಂಬುದು ಬಹು ದೊಡ್ಡ ದೂರವೇನಲ್ಲ ಅಲ್ಲವೆ?’ 

‘ಇರಬಹುದು. ಆದರೆ ಅಂತರಂಗಗಳ ಅಂತರ ಇದೆಯಲ್ಲ? ಅದನ್ನು ಬಲ್ಲವರ್ಯಾರು?’ 

ಹೀಗೆ ಮಾತನಾಡುತ್ತಲೇ ಒಬ್ಬರನ್ನೊಬ್ಬರು ಬೀಳ್ಕೊಟ್ಟರು.

ಹೊರಡುವಾಗ ಇಬ್ಬರೂ ಒಂದು ನಿಯಮ ಮಾಡಿಕೊಂಡರು. ತಮ್ಮ ಮುಂದಿನ ಕತೆಯನ್ನು ಇಬ್ಬರೂ ಪರಸ್ಪರರಿಗೆ ಕಳಿಸಿಕೊಡಬೇಕು ಮತ್ತು ಅವೂ ಕೂಡ ಹೀಗೇ ಇರುತ್ತವಾ ಎಂಬ ಕುತೂಹಲ ಇಬ್ಬರಲ್ಲೂ ಇತ್ತು. 

ಅಂತೆಯೇ ಮೆಜೆಸ್ಟಿಕ್ ನಲ್ಲಿ ಒಬ್ಬರನ್ನೊಬ್ಬರು ಬೀಳ್ಕೊಟ್ಟರು.

ಕೆಲ ದಿನಗಳ ನಂತರ ಇಬ್ಬರಿಗೂ ಪೋಸ್ಟ್ ನಲ್ಲಿ ಕತೆಗಳು ಬಂದವು. ಆದರೆ ಒಂದು ವಾಕ್ಯವೂ ತಾಳೆಯಾಗುವಂತೆ ಇರಲಿಲ್ಲ. ಮತ್ತೊಂದು ಕತೆ ಬರೆದುಕೊಂಡು ನೋಡಿದರು. ಇಲ್ಲ ತಾಳೆಯಾಗಲಿಲ್ಲ. ಹೀಗೆ ನೂರಾರು ಕತೆಗಳನ್ನು ಬರೆಯುತ್ತಲೇ ಹೋದರು. ಒಂದು ವೇಳೆ ಬೀಚಿನೂರಿನ ಆ ಇಬ್ಬರು ಉದ್ಯಾನನಗರಿಯಲ್ಲಿ ಭೇಟಿ ಮಾಡದೇ ಹೋಗಿದ್ದರೆ ಇಬ್ಬರ ಕತೆಗಳು ತಾಳೆಯಾಗುತ್ತಿದ್ದವೋ ಏನು? ಖಚಿತವಾಗಿ ಹೇಗೆ ಹೇಳುವುದು? 

ಈಗೀಗ ಅವರು ಕತೆ ಬರೆಯುವುದನ್ನು ನಿಲ್ಲಿಸಿದ್ದಾರೋ ಏನೂ ತಿಳಿಯದು. ಆದರೆ ಇಬ್ಬರಿಗೂ ಪೋಸ್ಟ್ ನಲ್ಲಿ ಕತೆಗಳು ಬರುತ್ತಿಲ್ಲ.

ಆದರೆ…

ಚೆನ್ನೈ ಮತ್ತು ಮಂಗಳೂರುಗಳ ನಡುವಿನ ಅಂತರ ಮಾತ್ರ ಸುಮಾರು ಏಳು ನೂರು ಕಿಲೋಮೀಟರ್ ಗಳಾಗಿಯೇ ಉಳಿದಿದೆ… 

August 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ರೇಣುಕಾ ರಮಾನಂದ

    ಅರೆ..ಮಜಾ ಇದೆ ಒಂದೇ ನಮೂನೆಯ ಕಥಾ ಪುರಾಣ..ಹೊಸ ಬಗೆ ಎಂದಿನಂತೆ

    ಪ್ರತಿಕ್ರಿಯೆ
  2. Peter C Seravo

    Mavali sir,
    ನಿಮ್ಮ imagination ಗೆ….ನನ್ನದೊಂದು…

    ಪ್ರತಿಕ್ರಿಯೆ
  3. ಲವ ಜಿ.ಆರ್

    ಓದಿಸುವ ಗುಣ ಸಿದ್ದಿಸಿದೆ ಇನ್ನಷ್ಟು ನಿರೀಕ್ಷೆಯಲ್ಲಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: