ಅವರು ಬಾಡಿಗೆ ಗಂಡಂದಿರ ಮೊರೆ ಹೋದರು..

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ಸಪ್ತಪದಿ ಇಲ್ಲ! ಗಟ್ಟಿಮೇಳವಿಲ್ಲ! ಹಾರ ಬದಲಿಸಲಿಲ್ಲ! ಉಂಗುರ ಧರಿಸಲಿಲ್ಲ! ಪ್ರೇಮವೂ ಅಲ್ಲ! ಗಾಂಧರ್ವ ವಿವಾಹವೂ ಅಲ್ಲ! ಮದುವೆಯ ಯಾವ ಪರಿಧಿಗೂ ಸಿಲುಕದಂತೆ ಆತ ಗಂಡನಾಗಿ ಬಿಡುತ್ತಾನೆ! ತನ್ನದೇ ಒಂದು ಮನೆ, ಸಭ್ಯ ಗೃಹಿಣಿಯ ಪಟ್ಟ, ಮಧ್ಯಮ ವರ್ಗದ ಮುತ್ತೈದೆಯ ಹಂಬಲ, ಆರಂಭವಾಗುತ್ತದೆ.

ಬದುಕು ಕಟ್ಟಿಕೊಳ್ಳುವ ಸಾಹಸಕ್ಕೆ ಹೊರಟಾಗ ಯಾರೂ ನಮಗೆ ಮನೆ ಕೊಡುವುದಿಲ್ಲ. ನಿಮ್ಮ ಯಜಮಾನರು ಎಲ್ಲಿ? ಪ್ರಶ್ನೆಗಳು ಎದುರಾಗುತ್ತವೆ, ಉತ್ತರ ಬಾರದಾಗ ಮನೆಬಾಗಿಲು ಮುಚ್ಚಿಕೊಳ್ಳುತ್ತವೆ.

ಈ ಸಂದರ್ಭಗಳನ್ನು ಎದುರಿಸಲು ನಮ್ಮ ಬಳಿಗೆ ಬರುವ ಗಿರಾಕಿಗಳಲ್ಲಿಯೇ ವಿಶ್ವಾಸಾರ್ಹ ಎನ್ನಿಸಿದ ಒಬ್ಬ ಗಿರಾಕಿಯನ್ನು, ಒಂದು ಸಾರಿ ಮನೆಯವರಿಗೆ ನೀನೇ ನನ್ನ ಗಂಡ ಅಂತ ಮುಖ ತೋರಿಸಿ ಬಂದ್ಬಿಡು ಅಂತ ಗೋಗರೆದು ಒಪ್ಪಿಸಿ ಬಿಡ್ತೇವೆ. 

ಸರಿ; ಗಂಡನೆಂದು ಒಪ್ಪಿ ಮನೆಯೊಳಗೆ ಬಂದು ಸೇರಿದ ಇಂತಹ ಬಾಡಿಗೆ ಗಂಡಂದಿರು ಮನೆ ಬಿಟ್ಟು ಹೊರಗೆ ಕಾಲಿಡುವುದೇ ಇಲ್ಲ. ಹಗಲಿಡೀ ದುಡಿದು ಹೈರಾಣಾಗಿ ಮನೆಗೆ ಬಂದವಳನ್ನು ರಾತ್ರಿಯಿಡೀ ಪೀಡಿಸುವುದು, ಬಿಟ್ಟಿಯಾದ ದೇಹ, ನಾವು ಸಂಪಾದಿಸಿದ ದುಡ್ಡು, ಬಿಟ್ಟಿ ಊಟ, ಉಳಿಯುವುದಕ್ಕೆ ಮನೆ, ಕುಡಿಯೋಕೆ ಹಣ, ಬೀಡಿ, ಸಿಗರೇಟು, ಪಾನ್ ತಂದು ಕೊಡೋಕೆ ನಮ್ಮ ಕಂದಮ್ಮಗಳು…

ಎಲ್ಲರಂತೆ ಗೃಹಸ್ಥರಾಗಿ ಬದುಕಿನ ಆನಂದದ ಭ್ರಮೆಯಲ್ಲಿ ನನ್ನಂತಹ ಸಾವಿರಾರು ಲೈಂಗಿಕ ವೃತ್ತಿ ಮಹಿಳೆಯರು ಇಂತಹ ಬಾಡಿಗೆ ಗಂಡಂದಿರ ಮೊರೆ ಹೋಗ್ತಾರೆ.

ಬಾಡಿಗೆ ಮನೆ ಹಿಡಿಯುವುದರಿಂದ ಹಿಡಿದು, ಬೀದಿ ನಲ್ಲಿಯಲ್ಲಿ ಬಿಂದಿಗೆ ಇಟ್ಟು ಕಾಯುವಾಗ, ಸೀಮೆ ಎಣ್ಣೆಗಾಗಿ ಕ್ಯೂ ನಿಂತಾಗ,  ಮಕ್ಕಳನ್ನು ಶಾಲೆಗೆ ಸೇರಿಸುವ ಕನಸು ಹೊತ್ತಾಗ, ಅಪ್ಪನ ಹೆಸರಿನ ಕಾಲಂ ತುಂಬುವಾಗ…

ಈ ಸಮಾಜಕ್ಕೆ ತಾನೊಬ್ಬ ಗರತಿಯೆಂದು ನಂಬಿಸಲು ನಮಗೆ ಬಾಡಿಗೆ ಗಂಡಂದಿರು ಬೇಕಾಗುತ್ತಾರೆ.

ಬೀದಿ ಬದಿಯ ನನ್ನಂತಹ ಹೆಣ್ಣುಗಳ ಬದುಕೇ ನೋವಿನದ್ದು… ಆ ನೋವಿನ ಒಂದು ಎಸಳು ಈ ಬಾಡಿಗೆ ಗಂಡಂದಿರು. ಒಮ್ಮೆ ಬಾಡಿಗೆಗೆ ಬಂದ ಗಂಡಂದಿರು ಬೆಂಬಿಡದ ಪೀಡಕರಾಗುತ್ತಾರೆ.  ಹೋದಲ್ಲೆಲ್ಲ ಕಾಡುತ್ತಾರೆ. ತಲೆಹಿಡುಕರಂತೆ ವರ್ತಿಸತೊಡಗುತ್ತಾರೆ.

ಹೆಜ್ಜೆ ಹೆಜ್ಜೆಗೂ ನೀನು ಸೂಳೆ ಎಂದು ಹೇಳಿ ಬಿಡುತ್ತೇನೆ ಅಂತ  ಬ್ಲಾಕ್ ಮೇಲ್ ಮಾಡ್ತಾನೇ ಇರ್ತಾರೆ. ಹಣ ಕೊಟ್ಟು ದೇಹ ಸುಖ ಪಡೆಯುವವರಿಗಿಂತ ಹಣ ಕಿತ್ತುಕೊಂಡು ದೇಹದಲ್ಲಿ ಪಾಲು ಕೇಳುವ ಇವರುಗಳೇ ಭಯಾನಕವಾಗುತ್ತಾರೆ.

ಎಲ್ಲವೂ ಮುಗಿದ ಮೇಲೆ ಮರೆಯಾಗಿ ಬಿಡುತ್ತಾರೆ. ತನಗೂ ಒಂದು ಮಗು ಬೇಕು ಎಂದು ತನ್ನ ವಂಶವೃಕ್ಷದ ಸ್ಥಾನವನ್ನು ಈ ಮಗುವಿಗೇ ಕೊಡುವವನಂತೆ ಪೋಸ್ ಕೊಟ್ಟು ನಂಬಿಸಿ ಬಿಡುತ್ತಾರೆ.

ತಾತ್ಕಾಲಿಕವಾಗಿ ನನ್ನೊಂದಿಗಿದ್ದು ಯಾವುದೇ ಕ್ಷಣದಲ್ಲಾದರೂ ಓಡಿ ಹೋಗುವ ಇವರುಗಳ ಬಗ್ಗೆ ಅರಿವಿದ್ದರೂ, ಭ್ರಮೆಯಲ್ಲಿ ಹಡೆಯುತ್ತಲೇ ಹೋಗ್ತೀವಿ….

ಬಾಡಿಗೆ ಮನೆಯಲ್ಲಿ ಬಾಡಿಗೆ ಗಂಡನ ಜೊತೆಗಿನ ಬದುಕು, ಕನಸುಗಳೂ ಬಾಡಿಗೆಯವೇ…

ಇಂತಹವರಿಂದಲೇ ನಾನು ಹಡೆದಿದ್ದು ನಾಲ್ಕು ಮಕ್ಕಳನ್ನು!

ನಾಲ್ವರೂ ಬಣ್ಣದಲ್ಲಿ, ಗುಣದಲ್ಲಿ ಸ್ವಲ್ಪ ಭಿನ್ನವೇ…

ನನ್ನ ಕನಸುಗಳೇನು ಕಮ್ಮಿಯಿರಲಿಲ್ಲ, ಆಕಾಶಕ್ಕೆ ಏಣಿ ಹಾಕುವಷ್ಟು ಆತ್ಮವಿಶ್ವಾಸ ನನ್ನಲ್ಲಿತ್ತು… ಬಹುಶಃ ನನ್ನ ಅಪ್ಪನಿಂದ ಬಂದದ್ದೇ ಇರಬೇಕು, ಎಷ್ಟೇ ಆದರೂ ಪೊಲೀಸ್ ಇಲಾಖೆಯ, ಖಾಕಿಯ ಖದರ್ ನಿಂದ ಇರಬಹುದು…

ಹೌದು; ನಾನೊಬ್ಬ ಹೆಡ್ ಕಾನ್ ಸ್ಟೇಬಲ್ ಮಗಳು. ಆದರೆ ನನ್ನ ಆ ಬದುಕನ್ನು ಇನ್ನೊಮ್ಮೆ ಹೇಳುವೆ, ಈಗ ನನ್ನ ಈಗಿನ ಬದುಕಿನ ಕನಸಾಗಿದ್ದ ನನ್ನ ಕೂಸಿನ ಕನಸನ್ನು ಕೊಂದ ಬಗ್ಗೆ ನಿಮ್ಮ ಜೊತೆ ಹಂಚಿಕೊಳ್ತೀನಿ…

(ಕೊಂದವರು ಯಾರು? ಏಕೆ? ಅಂತ ನೀವು ಯೋಚಿಸಿದರೂ ಸಾಕು.)

ಅದೊಂದು ಬೆಳಗ್ಗೆ ಎದ್ದಾಗಿನಿಂದಲೂ ಮಂಜ ಮಂಕಾಗಿದ್ದ. ಜಗಲಿಯಲ್ಲಿ ಮಲಗಿದ್ದವನು ಎದ್ದು ಕಣ್ಣುಜ್ಜಿಕೊಂಡು ಬಂದು ಕುಂತಿದ್ದ. ನಾನು ಯಾಕೋ ಮಗ, ಏನಾಗ್ತಿದೆ ಅಂತ ಅವನ ತಲೆಯನ್ನು ನೇವರಿಸಿದೆ. ಬೆಳೆದು ನಿಂತ ಮಗ ಸದಾ ಮೌನಿ, ಒಳಗೊಳಗೇ ನನ್ನ ಮಗನ ನಡವಳಿಕೆಗಳ ಬಗ್ಗೆ ಕಾರಣ ಯೋಚಿಸಿದೆ. 

ಅಮ್ಮಾ, ಯಾರಮ್ಮ ಒಳಗೆ ಮಲಗಿರೋದು? ತಣ್ಣಗೆ ಕೇಳಿದ. ‘ನಿಮ್ಮ ಅಪ್ಪ’ ಅಂದೆ. ಯಾರ ಅಪ್ಪ ಅಂದ. ನನ್ನ ಅಪ್ಪನೋ? ನಾಗನ ಅಪ್ಪನೋ? ಶಾಂತಿಯ ಅಪ್ಪನೋ? ಮುನ್ನಿಯ ಅಪ್ಪನೋ? 

ನನಗೆ ಬರಸಿಡಿಲು ಬಡಿದಂತಾಯ್ತು. ಎಂದೂ ಪ್ರಶ್ನಿಸದ ಮಗನ ಒಡಲ ಜ್ವಾಲಾಮುಖಿ ಉಕ್ಕಿತ್ತು. ಎಲ್ಲರ ಅಪ್ಪನೂ ಅವನೇ; ಎಲ್ಲರೂ ನಾನು ಹೆತ್ತ ಮಕ್ಕಳೇ ಅಲ್ವೇನೋ… ಅಂದೆ.

ನಮ್ಮನ್ನೆಲ್ಲ ಹೆತ್ತ ಅಮ್ಮ ನೀನೇ, ಆದರೆ ನನಗೂ ಎಲ್ಲ ಗೊತ್ತಾಗುತ್ತೆ, ಇನ್ನು ನೀನು ನನಗೆ ಯಾರು ಯಾರನ್ನೋ ನಿಮ್ಮ ಅಪ್ಪ ಅಂತ ಅನ್ಬೇಡ ಅಂತಲೇ  ಬುಸುಗುಟ್ಟಿದ ಮಂಜ. ನನಗೋ ಇಕ್ಕಟ್ಟಿನ ಪರಿಸ್ಥಿತಿ. ಪ್ರತಿಸಾರಿಯೂ ಮನೆ ಬದಲಾಯಿಸಿದಾಗ ಅಥವಾ ಗಂಡನಂತೆ ಯಾರಾದರೂ ಬಂದಾಗ ಇವನು ಹೀಗೇ ಸ್ವಾಗತಿಸುವುದು. 

ಮಗ ಬೆಳಿತಾ ಇದಾನೆ ಅಂತ ಅನ್ನಿಸ್ತು. ಬೇರೆ ದಿಕ್ಕು ಕಾಣದೆ ಮೌನವಾಗಿ ಅಲ್ಲಿಂದ ಎದ್ದು ಹೋದೆ. ಮಂಜ ಚಿಕ್ಕವನಾಗಿದ್ದಾಗನಿಂದಲೂ ನಾಗನನ್ನು, ಶಾಂತಿಯನ್ನು, ಮುನ್ನಿಯನ್ನೂ ಜೊತೆಯಲ್ಲಿ ಕಟ್ಟಿಕೊಂಡು ನನಗೆ ಆಸರೆಯಾಗಿದ್ದವನು, ತನಗೂ ಓದಬೇಕೆಂದು ಆಸೆಯಾದಾಗಲೆಲ್ಲಾ ನಾನು ಅವನನ್ನು ಶಾಲೆಗೆ ಸೇರಿಸುವ ಪ್ರಯತ್ನ ಮಾಡುತ್ತಲೇ ಇದ್ದೆ. 

ಅಂತರ್ಮುಖಿಯಾಗಿರುತ್ತಿದ್ದ ಮಂಜ ಆ ವಾತಾವರಣಕ್ಕೆ ಹೊಂದಿಕೊಳ್ಳುತ್ತಲೇ ಇರಲಿಲ್ಲ. ಒಮ್ಮೊಮ್ಮೆ ಹೊಂದಿಕೊಂಡರೂ ಆ ಏರಿಯಾದಲ್ಲಿ ನಾನು ಹೆಚ್ಚು ದಿನ ಇರುತ್ತಿರಲಿಲ್ಲ. ಮಂಜ ಹುಟ್ಟು ಸ್ವಾಭಿಮಾನಿ, ಸದಾ ಕಿಚ್ಚು ಹಚ್ಚುವಷ್ಟು ಸಿಟ್ಟನ್ನು ತನ್ನೊಳಗೆ ತುಂಬಿಕೊಂಡೇ ಇರ್ತಾನೆ.  

ವಯಸ್ಸು15-16 ಆದರೂ ಅವನು ನನ್ನ ಜೊತೆ ಅನುಭವಿಸಿರುವ ಯಾತನೆ ಕಡಿಮೆಯೇನಲ್ಲ. ಬದಲಾಯಿಸಿದ ಸ್ಥಳಗಳು ಎಷ್ಟು, ಮನೆಗಳು ಎಷ್ಟು, ನನ್ನೊಂದಿಗೆ ಬಂದು ಗಂಡಂದಿರ ವೇಷ ತೊಟ್ಟ ಗಂಡಸರೆಷ್ಟು, ತಂಗಿ ತಮ್ಮನಿಗೆ ಬಂದ ಕಾಯಿಲೆಗಳು ಎಷ್ಟು,

ನಾನು ಬಾರದ ರಾತ್ರಿಗಳೆಷ್ಟು, ನಲ್ಲಿ ನೀರಿಗೆ ಕಾಯುತ್ತಾ ಆಡಿದ ಜಗಳಗಳು ಎಷ್ಟು, ನನ್ನಂತೆಯೇ ಇದ್ದ ನನ್ನ ಗೆಳತಿಯರ ಸಾವುಗಳು ಎಷ್ಟು, ಪೊಲೀಸರಿಂದ ಒದೆ ತಿಂದು ಬಂದ ನನ್ನ ಹೆಪ್ಪುಗಟ್ಟಿದ ನೋವುಗಳಿಗೆ ನನ್ನ ಬಳಿ ಕುಳಿತು ನೋವಿನೆಣ್ಣೆ ಹಚ್ಚುತ್ತಾ ಮೂಕವಾಗಿ ರೋಧಿಸಿದ್ದೆಷ್ಟು,

ರಾತ್ರಿಯೆಲ್ಲಾ ಮನೆಗೆ ಬಾರದ ನನ್ನನ್ನು  ಕೋರ್ಟಿನ ಆವರಣದಲ್ಲೇ ಕಾದ ದಿನಗಳೆಷ್ಟು, ಯಾವನೋ ಪರ್ಕಿ ಹಾಕಿದ ಬ್ಲೇಡಿನಿಂದ ರಕ್ತಸಿಕ್ತವಾದ ನನ್ನ ಮೈ ಮೇಲಿನ ಗೀರುಗಳ ನೋಡಿ ಬೆಚ್ಚಿದ್ದೆಷ್ಟು, ನನ್ನ ಬಗ್ಗೆ ಅನುಮಾನ ಬಂದಾಗಲೆಲ್ಲಾ ಏನೋ ನೆಪ ಹೇಳಿ ಕ್ಯಾತೆ ತೆಗೆದು ಹೊರಹಾಕಿದ ಮನೆಯ ಮಾಲೀಕರುಗಳ ಕೊಂಕುಗಳೆಷ್ಟು…

ಅಯ್ಯೋ ನನ್ನ ಕಂದ ಅನುಭವಿಸಿದ ಅವಮಾನಗಳು ಅಷ್ಟಿಷ್ಟಲ್ಲ, ಲೆಕ್ಕವಿಲ್ಲ ನನ್ನ ಜೋಳಿಗೆಯಲ್ಲಿ. ತನ್ನ ಶಕ್ತಿಯನ್ನು ಮೀರಿ ಒಡಲ ತುಂಬೆಲ್ಲ ನೋವು, ಸಂಕಟ, ಆಕ್ರಂದನ, ಸಿಟ್ಟನ್ನು ತುಂಬಿಕೊಂಡು ಕೆಂಡವಾಗಿ ಬಿಟ್ಟಿದ್ದಾನೆ. 

ಬೆಳಗ್ಗೆಯೇ ಎದ್ದು ಮೆಜೆಸ್ಟಿಕ್ ಕಡೆ ನಡೆದೆ. ಮನಸ್ಸಿನ ತುಂಬೆಲ್ಲಾ ಮಂಜನ ಪ್ರಶ್ನೆಗಳೇ ತಿವಿಯುತ್ತಿದ್ದವು. ಚಿಕ್ಕಪೇಟೆ ದಾರಿಯ ಆ ಕಟ್ಟೆ ಮೇಲೆ ಕೂತ್ಕೊಂಡೆ, ಜೊತೆಗೆ ಗೆಳತಿ ಸರಸೂನೂ ಬಂದಳು. ರಸ್ತೆಯ ಆ ಕಡೆ ನೋಡಿದೆ, ಪಿಂಪ್ ಮಾದಣ್ಣನಿಗೆ ಗಿರಾಕಿ ಗಿಟ್ಟಿಸೋಕೆ ಹೇಳೋಣ ಅಂತ.

ಮಾದ ಏನೋ ಗೊಣಗಿಕೊಂಡು ಕೈಯ್ಯಲ್ಲಿದ್ದ ಏಣಿಯನ್ನು ಎತ್ತಿ ಸುಮಾರು ವರ್ಷಗಳಿಂದ ತಾನು ನಿಲ್ಲಲು ಆಸರೆಯಾಗಿದ್ದ ಆ ಲೈಟು ಕಂಬಕ್ಕೆ ಒರಗಿಸಿ ನಿಲ್ಲಿಸೋ ಪ್ರಯತ್ನ ಮಾಡ್ತಿದ್ದ. ಕೈಯ್ಯಲ್ಲಿ ಕಲ್ಲು ಹಿಡ್ಕೊಂಡಿದ್ದ. ಬೆಳಗ್ಗೆ ಬೆಳಗ್ಗೆಯೇ ಕುಡಿದು ತಟ್ಟಾಡ್ತಿದ್ದ ಮಾದಣ್ಣನ ನಡವಳಿಕೆ ವಿಚಿತ್ರವಾಗಿತ್ತು.

ನಾನೂ, ಸರಸೂ ಇಬ್ಬರೂ ರಸ್ತೆ ದಾಟಿ ಅಲ್ಲಿಗೆ ಹೋದೆವು… ಮಾದ ಏಣಿ ಹಿಡ್ಕೊಂಡು ತಟ್ಟಾಡ್ತಾನೇ ಇದ್ದ.

ಈ ಮಾದಣ್ಣನದ್ದು ಅಥವಾ ಇವನಂತವರದ್ದೂ ನಮ್ಮ ಬದುಕಿನಲ್ಲಿ ಮುಖ್ಯ ಪಾತ್ರವೇ ಇರುತ್ತದೆ. ಇಲ್ಲಿಗೆ ಬರೋ ಗಿರಾಕಿಗಳನ್ನು ಸಂಭಾಳಿಸಿ, ಒಂದು ದರ ನಿಗದಿ ಮಾಡಿ ಸಾಗಿ ಹಾಕೋಕೆ ಈ ಮಾದ ಎತ್ತಿದ ಕೈ.

ಅದಕ್ಕಾಗಿ ಹತ್ತೋ, ಇಪ್ಪತ್ತೋ ಕೈಗಿಟ್ಟರೆ ಅಷ್ಟೇ ಸರಿ, ಅವನ ಹೆಂಡಕ್ಕೆ ದಾರಿಯಾಗುತ್ತೆ. ಇವನೇನು ಪ್ರೊಫೇಷನಲ್ ಪಿಂಪ್ ಅಲ್ಲ… ಒಂಥರಾ ದೇಸೀ ಪಿಂಪ್, ನಾವು ಕಣ್ಣೀರಿಟ್ಟರೆ ಇವನೂ ಕಣ್ಣೀರಿಡ್ತಾನೆ, ನಾವು ನಕ್ಕಾಗ ಇವನೂ ನಗ್ತಾನೆ, ತಂದ ತಿಂಡಿ ಪೊಟ್ಟಣಗಳ ಬಿಚ್ಚಿದಾಗ ಇವನೂ ಕೈ ಹಾಕ್ತಾನೆ.

ಇವನ ಹತ್ತಿರ ನಮ್ಮೆಲ್ಲರ ಬಯೋಡಾಟ ಇರುತ್ತೆ. ಪರಸ್ಪರ ತೀರಾ ಪರಿಚಿತರು ನಾವು. ಯಾಕೋ ಆ ಕಡೆ ತಿರುಗಿದೆ, ದೂರದಲ್ಲಿ ಮಂಜ ನಿಂತಿದ್ದ. ಹನ್ನೊಂದು ದಿನದ ಮಗುವಿನಿಂದಲೂ ಅವನಿಗೆ ಈ ಮೆಜೆಸ್ಟಿಕ್ ಒಂಥರಾ ಮೈದಾನ ಇದ್ದಂಗೆ. ಕಂಡರೂ ಕಾಣದವಳ ಥರಾ ಸುಮ್ಮನಾದೆ. ಯಾಕೆ ಮಾದಣ್ಣ ಹುಷಾರಿಲ್ವಾ ಅಂದೆ.

ಅವನ ದುಃಖದ ಕಟ್ಟೆಯೊಡೆದಿತ್ತು, “ನೀನು ನೋಡ್ದಾಗಿಂದಲೂ ಈ ಲೈಟು ಕಂಬಕ್ಕೆ ಒರಗೀನೇ ಅದೆಷ್ಟು ಕಚ್ಚೆ ಹರುಕರಿಗೆ ನಿಮ್ಮನ್ನ ಕುದಿರಿಸಿ ಕೊಟ್ಟಿದ್ದೇನೋ ಲೆಕ್ಕವಿಲ್ಲ, ಯಾರ್ಯಾರ ಮನೆ ದೀಪಗಳನ್ನ ಆರಿಸಿದ್ದೇನೋ, ಯಾವ್ಯಾವ ಹೆತ್ತ ಹೊಟ್ಟೆಗಳ ಉರಿಸಿದ್ದೇನೋ, ಅದೆಷ್ಟು ಸಂಕಟದ ಒಡಲುಗಳನ್ನು ಸುಟ್ಟಿದ್ದೇನೋ, ನನಗೂ ಸುಖವಿಲ್ಲ, ನಿಮಗೂ ಸುಖವಿಲ್ಲ…” ಒದರ್ತಾನೇ ಇದ್ದ.

‘ಯಾಕೆ? ಏನಾಯ್ತು ನಿಂಗೆ ಈವತ್ತು?’ ಸರಸೂ ಅವನ ತಲೆ ಮೆಟ್ಟಿ ಕೇಳಿದ್ಲು. ಅದ್ಯಾರೋ ಟಿವಿಯವರು, ‘ಇದೇ ರೆಡ್ ಲೈಟ್, ಇದೇ ರೆಡ್ ಲೈಟ್’ ಅಂತ ಈ ಲೈಟ್ ಕಂಬಾನೂ, ನನ್ನನ್ನೂ ತೋರಿಸ್ತಿದ್ರಂತೆ, ಎದುರುಗಡೆ ವೈನ್ ಷಾಪ್ ನೋನು ಹೇಳಿದ, ಅದಕ್ಕೇ ಈ ಲೈಟನ್ನೇ ಕಿತ್ತು ಹಾಕ್ಬಿಡೋಣ ಅಂತ ಏಣಿ ತಂದೆ…’ ಅಂದ ಮಾದ ತೂರಾಡ್ತಾ.

ಮತ್ತೆ ಏಣಿ ತೊಗೊಂಡ, ಕುಡಿದು ಕುಡಿದು ಕಡ್ಡಿ ಅಂತಿದ್ದ ಮಾದಣ್ಣ ಆ ಏಣಿ ಭಾರಾನೂ ಹೊರೋಕಾಗ್ದೆ ಕಂಬಕ್ಕೆ ಒರಗಿದ. ಬಾಯಿಗೆ ಬಂದಂಗೆ ಬಯ್ಕೊಳ್ತಿದ್ದ. ನನಗೆ ಸಂಕಟ, ಸಿಟ್ಟು ಎರಡೂ ಒಮ್ಮೆಲೇ ಬಂದ್ವು…

ನಾವ್ಯಾರು ಅನ್ನೋ ಪರಿವೆಯೂ ಇಲ್ಲದೆ ಕೈಲಾಗದ್ದನ್ನ ಮಾಡೋಕ್ಕೆ ಹೋಗ್ತೀಯ! ಎಂತೆಂಥಾ ದೇವರುಗಳು, ರಾಜಮಹಾರಾಜರುಗಳು, ಸಾರ್ವಭೌಮರು, ಮಂತ್ರಿಮಹೋದಯರು, ಸಮಾಜ ಉದ್ಧಾರಕರು, ಬಣ್ಣಬಣ್ಣದ ಖಾವಿ ತೊಟ್ಟವರು, ಶ್ವೇತ ವಸ್ತ್ರಧಾರಿಗಳು, ಖಾಕಿಗಳು, ಬಂದೂಕು ಹಿಡಿದವರು, ಕೆಂಪು ದೀಪವನ್ನೇ ತಮ್ಮ ಕಾರುಗಳಿಗೆ ಸಿಕ್ಕಿಸಿಕೊಂಡವರು… ಯಾರೂ ಮಾಡಲಾಗದ್ದನ್ನ ಯಕಶ್ಚಿತ್ ನೀನು ಮಾಡ್ತೀಯಾ? ಕಿರುಚಾಡ್ದೆ. ಅಸಹಾಯಕತೆಯಿಂದ ಕಣ್ಣುಗಳು ತುಂಬಿಕೊಂಡವು.

ಮಾದಣ್ಣ ಮಾತ್ರ ತನ್ನ ಪ್ರಯತ್ನ ಬಿಡಲೇ ಇಲ್ಲ, ಮತ್ತೆ ಮತ್ತೆ ಕಂಬಕ್ಕೆ ಒರಗಿದ ಏಣಿಯನ್ನು ಹತ್ತೋ ಪ್ರಯತ್ನ ಮಾಡ್ತಾನೇ ಇದ್ದ. ‘ಬಾರಕ್ಕ, ನಾವಿಲ್ಲಿದ್ರೆ ಈ ಕುಡುಕ ಇನ್ನೂ ಜಾಸ್ತಿ ಮಾಡ್ತಾನೆ, ಹೋಗೋಣ ಬಾ’ ಅಂತ ಸರಸೂ ನನ್ನನ್ನೂ ಎಳ್ಕೊಂಡು ಹೊರಟಳು. ಮತ್ತೆ ಅದೇ ಕಟ್ಟೆ ಮೇಲೆ ಕುಳಿತು ಅತ್ತಿತ್ತ ಕಣ್ಣಾಯಿಸೋಕೆ ಶುರು ಮಾಡಿದ್ವು. 

ಇದ್ಯಾವುದರ ಗೊಡವೆಯೇ ಇರದ ಮಾದ, ಆ ಲೈಟ್ ಕಂಬಕ್ಕೆ ಕಲ್ಲು ಹೊಡೆದು ಇಡೀ ಕಳಂಕವನ್ನೇ ನೆಲಸಮ ಮಾಡಿಬಿಡುವ ಹಟಕ್ಕೆ ಬಿದ್ದಿದ್ದ.

ಅರ್ಧ ಏಣಿ ಹತ್ತಿದ್ದ ಮಾದ ಹಾಗೇ ಏಣಿ ಸಮೇತ ಕ್ಷಣಾರ್ಧದಲ್ಲಿ ಬಿದ್ದು ಮಣ್ಣಾಗುತ್ತಿದ್ದವನನ್ನು ಅಚಾನಕ್ ಆಗಿ ಓಡಿ ಬಂದ ಮಂಜ ಆತುಕೊಂಡ. ಅನಾಮತ್ತಾಗಿ ತಂದು ಅಲ್ಲೇ ಪಕ್ಕದಲ್ಲಿ ಮಲಗಿಸಿದ. ಆ ಏಣಿಯನ್ನು ತೆಗೆದು ಆ ಕಡೆ ಎಸೆದ, ಮುದುಡಿ ನಿಸ್ತೇಜವಾಗಿದ್ದ ಮಾದ ಹಾಗೇ ಕಣ್ಮುಚ್ಚಿದ.

ಮಂಜ ಬಂದು ಆ ಲೈಟ್ ಕಂಬದ ಕೆಳಗೆ ನಿಂತ ಮಾದಣ್ಣನಂತೆ.

ನನ್ನ ಕಣ್ಣುಗಳು ಮಂಜಾದವು, ಬದುಕಿನ ಎಲ್ಲಾ ಹೋರಾಟಗಳಿಗೂ ಬರಸಿಡಿಲು ಬಡಿದಿತ್ತು.

‍ಲೇಖಕರು ಲೀಲಾ ಸಂಪಿಗೆ

August 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. N.Ravikumar telex

    ಕರುಳು ಕಿವುಚಿತು ಲೀಲಾ ಮೇಡಂ. ಈ ಬರಹವನ್ನು ಅರಗಿಸಿಕೊಳ್ಳುವುದು ಸುಲಭ ಮಾತಲ್ಲ.

    ಪ್ರತಿಕ್ರಿಯೆ
  2. Prajna Mattihalli

    very touching Leela madam. You have very nice style of poetic writing

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: