ಕುಂತಿ ಬಂದಳು…

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. 

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. 

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಮೌಖಿಕ ಸಂಪ್ರದಾಯದಿಂದ ಪ್ರಾಚೀನ ಪರಂಪರೆಯ ಪ್ರತಿರೂಪವಾಗಿ ಉಳಿದು ಬೆಳೆದು ಜೀವಂತ ಮನ್ನಣೆಗೆ ಪಾತ್ರವಾದದ್ದು ಜನಪದ.

ಜಾನಪದದಲ್ಲಿ ದೇಶಿಯತೆ ಎಂದರೆ ಒಂದು ಜನಪದಕ್ಕಿರುವ ನಿರ್ದಿಷ್ಟ ಸಾಮಾಜಿಕ ಚರಿತ್ರೆ ಭೌಗೋಳಿಕವಾಗಿ ಒಂದು ಪ್ರದೇಶದಲ್ಲಿ ನಂಬಿಕೆನಡತೆಆಚರಣೆಉಡುಗೆ ತೊಡುಗೆಯಂತಹ ಅಂಶಗಳಲ್ಲಿ ದಾಖಲಾಗಿರುತ್ತದೆ. ಅದು ಆಯಾ ಜನಪದಕ್ಕೆ ಭಾವನಾತ್ಮಕ ಸೋಪಜ್ಞ ಮತ್ತು ಜೀವನ ದೃಷ್ಟಿಕೋನವಾಗಿರುತ್ತದೆ.

ಸಮುದಾಯದ ಪ್ರೀತಿ ಎನ್ನುವುದು ತರ್ಕಗಳ ಜೊತೆಗೆ ಬದುಕಲು ಇಚ್ಛಿಸಬಾರದು ಅದರ ಬಲ ಯಾವಾಗಲೂ ತಣ್ಣನೆಯ ಸ್ಥಿತಿಯನ್ನು ಬಯಸುವಂತಿರಬೇಕು. ಸಣ್ಣ ಕಲಹಗಳನ್ನು ಒಪ್ಪಿ ಸುಮ್ಮನಿರಲಾಗದ ಈ ಪ್ರೀತಿಗೆ ಅರಳಿ ಚಲಿಸುತ್ತಲೇ ಇರಲು ವಿಶಾಲ ನೆಲ ಬೇಕು.

ಗಿಬ್ರಾನ್ ಹೇಳುವಂತೆ ಕಾಲ ಅಳತೆ ಇಲ್ಲದ್ದುಅಳೆಯಲಾರದ್ದು. ಗಂಟೆಗಳು ಋತುಗಳಿಗೆ ತಕ್ಕಂತೆ ನಮ್ಮ ನಡತೆಯನ್ನು ಚೇತನವನ್ನು ಅನುಗೊಳಿಸಿಕೊಳ್ಳಬೇಕು. ಕಾಲವನ್ನು ಒಂದು ಪ್ರವಾಹ ಮಾಡಿ ಅದರ ದಡದಲ್ಲಿ ಕುಳಿತು ಅದು ಹರಿಯುವುದನ್ನು ನೋಡಬೇಕು. ಅದಕ್ಕೆ ಗೊತ್ತು ನೆನ್ನೆ ಎಂಬುದು ಇಂದಿನ ನೆನಪಲ್ಲದೆ ಬೇರೆ ಅಲ್ಲ. ಇದನ್ನು ಓದುವಾಗಲೆಲ್ಲಾ ನನ್ನೊಳಗಿನ ನೆನಪಿನ ಕಾಲವನ್ನು ನವಿರಾಗಿ ಬಿಡಿಸುತ್ತಲೇ ಇರಬೇಕೆನ್ನಿಸುತ್ತದೆ.

ಕಾಲ ಮತ್ತು ಪ್ರೀತಿ ಚೇತನದ ಆಳವನ್ನು ಕೊರೆದು ತಾವು ಮಾಡಿಕೊಂಡು ವಾಸಿಸಲು ಬಿಡಬೇಕು. ಬಿರಿದ ಹೂವಿನ ಘಮಲನ್ನು ಹೀರಲು ಕಲಿಯದವರು ಹುಣ್ಣಿಮೆಯಲ್ಲಿ ಮುಳಗಲಾರರು. ಈ ಪರಿಮಳಕ್ಕೆ ಜೊತೆಯಾದವರು ಸಂಜೆಯ ನಸು ಬೆಳಕಿನಲಿ ಅರಳಿ ಸೆಳೆಯುವ ದೀಪದ ಕಣಗೆಲೆಯ ಮಡಿಲಲ್ಲಿ ಗಾಢವಾಗಿ ಮೈಮರೆಯಬೇಕು. ಇಲ್ಲವಾದಲ್ಲಿ ನದಿಯ ನಡಿಗೆಬೇರಿಗೆ ಆಸರೆಯಾದ ನೆಲ ಅನಂತಗಳನ್ನು ಧರಿಸಿದ ಮಹತ್ತುಗಳೆಂದು ಅರಿವಾಗಲ್ಲ.

ಜನಪದ ಜಗತ್ತು ತನ್ನದೇ ರೂಪಿನಲ್ಲಿ ಹಲವು ಪ್ರಕಾರಗಳಾಗಿ ನನ್ನೂರಿನಲ್ಲಿ ನಮ್ಮ ಜೊತೆಯೇ ನೆಲೆಸಿದೆ. ಇಲ್ಲಿ ಕುಂತಿಯು ಆಚರಿಸಿದ ಗಜಗೌರಿವ್ರತ ನಮ್ಮದೇ ವ್ರತದಂತಾಗಿಬಿಟ್ಟಿದೆ. ಕಾರ್ತಿಕ ಮಾಸದ ಅಮಾವಾಸ್ಯೆಯಂದು ಈ ಕುಂತಿ ಗೌರಿಯ ಪರ್ವಕ್ಕೆ ಸಿದ್ಧತೆಗಳಾಗುತ್ತವೆ.

ಊರಿನ ಹಿರಿಯರು ದಿನ ಗೊತ್ತು ಮಾಡ್ರೆ ಮಾತಾಡ್ಕೊಂಡುಸಿರಾ ಸಂತೆಗೆ ತಳ್ವಾರ್ ರಂಗನನ್ನು ಕಳ್ಸಿ ಗೌರಮ್ಮನ್ನ ತರುಸ್ರಿ ಹೊತ್ತಿ ಮುಂಚೆ ನೆಲಕರಣೆ ಮಾಡಿ ನೀರುನಿಡಿ ಓಯ್ಕೊಂಡು ಗುಂಡ್ಕಲ್ ಕುಟ್ರಿ ಎಂಬುದಾಗಿ ಹೇಳುತ್ತಾರೆ.

ಊರಿನ ಎಲ್ಲಾ ಮನೆಯ ಹೆಣ್ಣುಮಕ್ಕಳು ಅಮಾವಾಸ್ಯೆಯ ದಿನ ಒಂದು ಕರಿಯ ಕಲ್ಲನ್ನು ತೊಳೆದು ಪೂಜಿಸಿ ಒಳಕಲ್ಲಿನಲ್ಲಿಟ್ಟು ಕುಟ್ಟುವಾಗ ಅಲ್ಲೊಂದು ಭಾವಜಗತ್ತು ಮೂಡುತ್ತದೆ.

ಗೌರಿ ಗೌರಿ ಗಾಣಾದೇವಿ
ಅವ್ರೆ ಅಂತಾ ಅಣ್ಣುನ್ ಕೊಡು
ತೊಗ್ರಿ ಅಂತಾ ತಮ್ಮುನ್ ಕೊಡು
ಮಾಳ್ಗೆ ಉದ್ದ ಮಾವುನ್ ಕೊಡು
ಇಟ್ಗೆರ್ಸೆ ಅಗ್ಲ ಅತ್ತೆ ಕೊಡು
ಗುಂಡ್ಕಲ್‍ನಂತ ಗಂಡುನ್ ಕೊಡು…
ಹೀಗೆ ಹಾಡುತ್ತಾರೆ. ಇಡೀ ಹಾಡು ಬೆಳೆಗಳ ಜೊತೆ ಬೆಸೆದುಕೊಂಡು ಮನೆಯ ವಿಕಾಸವನ್ನೆ ಬಯಸಿ ಧ್ಯಾನಿಸಿದಂತಿದೆ.

ನಮ್ಮ ಊರಿನಲ್ಲಿ ನಡೆಯುವ ಈ ಹಬ್ಬ ಕುಂತೀ ಮಾಡಿದ ಗೌರಿಯಂತೆ. ಯುದ್ಧದ ಪೊರೆ ಕಳಚಿ ಅರಮನೆಯಿಂದ ಆಚೆ ಬಂದ ಕುಂತಿ ನನ್ನ ಊರಿನ ಹೆಣ್ಣು ಮಕ್ಕಳಿಗೆ ಹಿರಿಯಕ್ಕನಂತೆ ಜೊತೆಯಾಗಿದ್ದಾಳೆ.

ಇಲ್ಲಿರುವ ಹಿರಿಯರು ಹೀಗೊಂದು ಕಥೆ ಹೇಳುತ್ತಾರೆ. ಗಾಂಧಾರಿ ಅರಮನೆಯಲ್ಲಿ ಗಜಗೌರಿ ವ್ರತ ಮಾಡಿ ಕುಂತೀ ದೇವಿಯನ್ನು ಆಹ್ವಾನಿಸದೆ ಮುಖಭಂಗ ಮಾಡಿದಳಂತೆ. ಈ ವಿಚಾರ ತಿಳಿದ ಅರ್ಜುನ ಸ್ವತಃ ತಾನೆ ಅಂಬುಗಳಿಂದ ಸೋಪಾನ ಕಟ್ಟಿ ದೇವಲೋಕದಿಂದಲೇ ಐರಾವತಕಾಮಧೇನುಕಲ್ಪವೃಕ್ಷಗಳನ್ನು ಆಹ್ವಾನಿಸಿಮಾತೆ ಕುಂತೀದೇವಿಯ ಗೌರೀ ವ್ರತಕ್ಕೆ ನೆರವಾದನೆಂಬ ಪ್ರತೀತಿ ಇದೆ. ವ್ಯಾಸರು ಆಚರಣೆಯ ಸಂದರ್ಭದಲ್ಲಿ ಕುಂತೀದೇವಿಗೆ ಮಡಿವಂತಿಕೆಯ ಆಚೆಗಿನ ಪ್ರೇರಣೆ ನೀಡಿದ್ದಾಗಿ ಹೇಳುತ್ತಾರೆ.

ಜನಪದ ಜಗತ್ತು ನದಿಯಂತೆ. ಅಲ್ಲಲ್ಲಿ ಸಿಕ್ಕ ಮಳೆಯನ್ನು ತನ್ನೊಳಗೆ ತುಂಬಿಕೊಂಡು ಹರಿಯುತ್ತಲೇ ಇರುತ್ತದೆ. ಕಡೆಗೆ ಏನೋ ಒಂದು ಅಗಾಧ ಅಗಲವನ್ನು ಕಾಣಿಸಿ ನೈಜವಾದ ಅನುಭೂತಿಯನ್ನೆ ಒಳಗು ಮಾಡಿಕೊಂಡು ಸೃಜನಾತ್ಮಕ ಪರಿಶೀಲನೆಗೆ ಯೋಗ್ಯವಾಗಿ ಗುಣಾತ್ಮಕವಾಗಿ ಬಿಡುತ್ತದೆ. ಕಾರ್ತಿಕ ಮಾಸದ ಅಮಾವಾಸ್ಯೆಯಲ್ಲಿ ಗುಡ್ಕಲ್ ಕುಟ್ಟುವ ಕ್ರಿಯೆ ಮುಗಿದು ಮರುದಿವಸ ತಳವಾರರನ್ನು ಕಳಿಸಿ ಗೌರಿ ತರಿಸುತ್ತಾರೆ.

ಗೊತ್ತು ಮಾಡಿದ ಜಾಗದಲ್ಲಿ ಕೂರಿಸಿ ನಿತ್ಯವು ಐದಾರು ಮನೆಯವರು ಸೇರಿ ಮುಂದಿನ ಹುಣ್ಣಿಮೆಯವರೆಗೆ ಪೂಜಿಸುವುದು ಸಿಹಿಖಾದ್ಯಗಳನ್ನು ಮಾಡಿ ಹಂಚುವುದು ಸಡಗರದಿಂದ ನಡೆಯುತ್ತದೆ.

ಪ್ರತಿ ದಿನವೂ ಹೆಣ್ಣುಮಕ್ಕಳು ಊರಿನಲ್ಲಿ ಹಾದು ಹೋಗುವ ವಾಹನಗಳನ್ನು ತಡೆದು ಅರಿಶಿನ ಕುಂಕುಮ ಇರುವ ಹರಿವಾಣ ಹಿಡಿದು ಅಡ್ಡಹಾಕಿ ನಿಲ್ಲುತ್ತಾರೆ. ಅವರು ಹಣ ಹಾಕುವವರೆಗೆ ಮುಂದೆ ಹೋಗುವಂತಿಲ್ಲ. ಇದನ್ನು ಕೋಲು ಹೊಯ್ಯುವುದೆಂದು ಹೇಳಲಾಗುತ್ತದೆ.

ಹುಣ್ಣಿಮೆಯ ಹಿಂದಿನ ದಿನ ‘ಉಸಿ’ ಬಿಡುವ ಪದ್ಧತಿ ಅವತ್ತು ಗೌರಿಗೆ ಪೂಜೆ ಇಲ್ಲ. ಎಲ್ಲರ ಹೊಲಮಾಳಗಳಲ್ಲಿಯೂ ಬೆಳೆದ ಕಾಯಿಪಲ್ಲೆಗಳನ್ನು ತಂದು ಗೌರಿ ಗುಡಿಯ ಮುಂದೆ ಹೊಲೆದು ಕಟ್ಟುತ್ತಾರೆ. ಮರು ದಿವಸ ‘ಬಾನ’ ಹಿಂದಿನ ದಿನದ ತರಕಾರಿಗಳನ್ನೆಲ್ಲಾ ಸೇರಿಸಿ ಅಡುಗೆ ಮಾಡಿ ಊರ ಮಂದಿಯೆಲ್ಲಾ ಒಟ್ಟಾಗಿ ಒಂದೇ ಕಡೆ ಸೇರಿ ತಿಂದುಂಡು ನಲಿಯುತ್ತಾರೆ. ಮ

ರುದಿವಸ ಲಗ್ನವಾದ ಎಲ್ಲಾ ಹೆಣ್ಣುಮಕ್ಕಳನ್ನು ತವರಿಗೆ ಕರೆಸಿಕೊಳ್ಳುತ್ತಾರೆ. ಹಿತ್ತಲು ತಡಿಕೆಯ ಬಳ್ಳಿಗಳಲ್ಲಿ ಅರಳಿ ನಿಂತ ಹೂಗಳು ಬರುವ ಮನೆಮಗಳ ಮುಡಿಗೇರಲು ಕಾತರಿಸುತ್ತವೆ. ಇವತ್ತಿಗೂ ಹಲವು ಮನೆಗಳಲ್ಲಿ ಹಬ್ಬಕ್ಕೆ ಬೇಕಾಗುವ ಹಿಟ್ಟುಗಳನ್ನು ಕಲ್ಲಿನಲ್ಲಿಯೇ ಬೀಸುತ್ತಾರೆ. ನಸುಕಿನ ಮೌನಕ್ಕೆ ಜೊತೆಯಾದರೆ…

ಬೀಸಾಕ ಕುಂತ್ರ ಬ್ಯಾಸರಿಕಿ ನಮಗಿಲ್ಲ,
ಸೂಸಿ ಹರವಾದ ತವರಿಗೂ ನಮ್ಮ ಪದ
ಕೂಸಿಗೂ ಬಂತು ಸವಿನಿದ್ದೆ… ಎಂಬ ಮಧುರ ಹಾಡುಗಳು ಕೇಳುತ್ತಲೇ ಇರುತ್ತವೆ ಹೊತ್ತು ಹುಟ್ಟುವವರೆಗೂ.

ಹುಣ್ಣಿಮೆಯ ದಿನ ಇಡೀ ಊರು ಶೃಂಗಾರಗೊಂಡು ಹೋಳಿಗೆಯ ಗಮಲಿನೊಳಗೆ ಮುಳುಗಿ ಬಿಡುತ್ತದೆ. ರಾತ್ರಿ ಊರ ತುಂಬಾ ಗೌರಿಯ ದಿಬ್ಬಣಪೂಜೆ ಮುಗಿದ ಮೇಲೆ ದೊಡ್ಡಳ್ಳಕ್ಕೆ ಗೌರಿಯನ್ನು ಸಾಗಾಕಲು ಜನದಂಡು. ಎಲ್ಲಾ ಮುಗಿವ ವೇಳೆಗೆ ಅರ್ಧ ರಾತ್ರಿಯೇ ಕಳೆಯುತ್ತದೆ.

ಮಾರನೆಯ ದಿನ ನೀಲಣ್ಣ ಜೇಡಿಮಣ್ಣಿನಲ್ಲಿ ಕುಂತಿಯನ್ನು ಮಾಡಿ ಅರಳೀ ಮರದ ಬುಡದಲ್ಲಿಟ್ಟು ಸಪ್ಪೆರಾಗಿ ರೊಟ್ಟಿಯನ್ನು ಎಡೆ ಮಾಡಿ ಪೂಜಿಸುತ್ತಾರೆ. ಈ ಕ್ರಿಯೆ ಕೊಂತಮ್ಮನ ಹಬ್ಬವೆಂದೇ ಪ್ರಸಿದ್ಧಿ. ಅವತ್ತು ಕುರಿ ಕೋಳಿಗಳಿಂದ ಊರಿನ ತುಂಬಾ ಮಸಾಲೆಯ ಅಮಲು.

ಸಾಂಸ್ಕೃತಿಕ ಸಂಚಲನ ಎನ್ನುವುದು ಅನೇಕಗಳನ್ನು ಜೊತೆಗೂಡಿಸಿಕೊಂಡು ವಿಸ್ತರಿಸುತ್ತದೆ. ವರ್ಷಕ್ಕೆ ಒಮ್ಮೆ ಇಡೀ ಊರು ಗೌರಿ ಕುಂತಿಯರ ಜೊತೆ ಬೆರೆತು ಹದಿನೈದು ದಿನಗಳ ಕಾಲ ಸಂಭ್ರಮಿಸುತ್ತದೆ.

ಮನುಷ್ಯನ ಪ್ರಜ್ಞೆಗೆ ಬೆರಗುಗಳನ್ನು ಸ್ವಾಗತಿಸಿ ಮುದಗೊಳ್ಳುವ ತುಡಿತಗಳಿರಬೇಕು. ಹೀಗೆ ಒಂದಷ್ಟು ಕಾಲ ಪ್ರತಿ ಮನೆಯ ಜಗಲಿಗಳು ಮನೆಮಂದಿಯನ್ನೆಲ್ಲಾ ತುಂಬಿಕೊಂಡು ನಗುತ್ತವೆ. ಜಾನಪದದ ಪ್ರಕ್ರಿಯೆಯನ್ನು ಗ್ರಹಿಸಲು ನಮ್ಮ ಜನರು ತಾವೇ ಸೃಷ್ಟಿಸಿದ ಜನಪದದ ಆಚರಣೆಗಳನ್ನು ಕುರಿತು ಗಾಢವಾದ ಭಾವನೆ ಹೊಂದಿರುವುದನ್ನು ಅರಿಯಲು ತಣ್ಣಗೆ ಖಗಗಳಂತೆ ತೇಲಬೇಕು. ಚಲನಶೀಲವಾದ ಊರಿನ ಬದುಕಿನ ವಿವಿಧ ಆಯಾಮಗಳಲ್ಲಿ ಜನಪದದ ಮೌಖಿಕ ಶಕ್ತಿಗಳು ಬೆರೆತುಹೋಗಿವೆ.

ಅಂಗೀಯ ತೊಟ್ಟಾರೆ ರಂಗಾನ ಸರಿಯೆಂಬೆ
ಚುಂಗು ಬಿಟ್ಟಾರೆ ನವಿಲೆಂಬೆ
ಶೃಂಗಾರವಾಗೆ ದೊರೆಯೆಂಬೆ…
ಎಂಬ ತೊಟ್ಟಿಲ ಹಾಡುಗಳು ಹೆಣ್ಣುಮಕ್ಕಳು ಮರಳಿ ಹೋಗುವವರೆಗೆ ಪ್ರತಿ ಮನೆಯ ಪಡಸಾಲೆಯಲ್ಲಿ ತೊಟ್ಟಿಲೊಳಗೆ ತೂಗುತ್ತವೆ.

ಜನಪದವೆಂಬ ಬೆಳ್ಳಿ ಬೆಳಕಿನಲ್ಲಿ ಹಕ್ಕಿ ಆಗಸಕ್ಕೇರುತ್ತದೆ
ಏರಿ ದೂರಕೆ ಕೇರಿಯಾಚಗೆ ಮೌನಗೀತೆಯ ಹಾಡುತ್ತದೆ.

August 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಶೈಲಜಾ

    ಎಷ್ಟು ಚಂದ ಕಟ್ಟಿ ಕೊಟ್ಟಿದ್ದೀರಾ ಮೇಡಂ, ನಿಮ್ಮೂರಿನ ಆತ್ಮವನ್ನು?

    ಪ್ರತಿಕ್ರಿಯೆ
  2. ಗೀತಾ ಎನ್ ಸ್ವಾಮಿ

    ಒಲುಮೆಯ ಗೌರವಗಳು ಶೈಲಜ ಮೇಡಂ. ಥ್ಯಾಂಕ್ಸ್.

    ಪ್ರತಿಕ್ರಿಯೆ
  3. Vishwas

    ಕುಂತಿ ಗೌರಿಯ ವ್ರತಕತೆಯ ಓದಿ, ಆ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುವ ಮಹದಾಸೆ ಉಂಟಾಯಿತು ನನಗೆ‌.‌
    ಹೇಗೆ ಮುತ್ತುಗಳನ್ನು ಒಂದೊಂದಾಗಿಯೇ ಜೋಡಿಸುತ್ತಾ ಹೋದಾಗ ಒಂದು ಸುಂದರವಾದ ಮುತ್ತಿನ ಹಾರ ರೂಪುಗೊಳ್ಳುತ್ತದೆಯೋ, ಹಾಗೆಯೇ ಅಕ್ಕನ ಜಾನಪದದ ಬಗೆಗಿನ ವಿವರಣೆ, ಲೇಖನ ಶುರುವಾಗಿ, ಅದು ಮುಗಿಯುವಷ್ಟರಲ್ಲಿ ಅಲ್ಲಿ ಸಿಕ್ಕ ಚಿತ್ರಣ, ‘ಜಾನಪದದ ಸೊಗಡು’. ಲೇಖನ ಓದಿದ ಮೇಲೆ, ಅಲ್ಲಿನ ಪದಗಳನ್ನು ತಿಂದುಂಡು ತೃಪ್ತನಾದಂತೆ ಎನಿಸಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: