ಆಹ್ವಾನಿತ ಕವಿತೆ : ಮಂಜುಳಾ ಹಿರೇಮಠ ಕವಿತೆಗಳ ಗುಚ್ಛ

ದಾಂಪತ್ಯ

ನಾನು ನಿನ್ನೊಡನೆ
ಬೆಳದಿಂಗಳ ಬಿಳುಪಿನ ಬಗೆಗೆ
ಮಾತನಾಡುತ್ತಿದ್ದೆ.
ನೀನು ಸೌರವ್ಯೂಹಗಳ ಕುರಿತು
ಉಪಗ್ರಹಗಳ ಕುರಿತು ಕಲಿಸಿದೆ.

ನಾನು ನಿನಗೆ
ನದಿಯ ನಿರ್ಮಲತೆಯನ್ನು ತೋರಿಸಿದೆ.
ನೀನು ನನಗೆ ನದಿಗಳು ಎದುರಿಸುವ
ಸಮಸ್ಯೆಗಳ ಕುರಿತ
ಪ್ರಬಂಧವನ್ನು ವಾಚಿಸಿ ಕೇಳಿಸಿದೆ.

ನಾನು ನಿನ್ನೊಡನೆ
ಕಡಲ ಉಸುಕಿನ ನೈರ್ಮಲ್ಯದ ಬಗೆಗೆ
ಮಾತನಾಡುತ್ತಿದ್ದೆ.
ನೀನು ನನಗೆ ಆಳ ಕಡಲಿನ
ಅಂತರ್ಗತಗಳ
ಕಾಪಟ್ಯಗಳನ್ನು ಮನವರಿಕೆ ಮಾಡಿದೆ.

ಒಂದೇ ಗುರಿಯೆಡೆಗೆ
ವಿರುದ್ಧ ಧ್ರುವಗಳಿಂದ
ನಾವು ಹರಿಯುತ್ತಿದ್ದೆವು;
ನನಗೆ ಒಮ್ಮೆಯಾದರೂ ನಿನ್ನ ಜೊತೆಗೊ
ನಿನಗೆ ಒಮ್ಮೆಯಾದರೂ ನನ್ನ ಜೊತೆಗೊ
ಸೇರಲಾಗದಿದ್ದರೂ….

ಬೇಸಿಗೆಯ ಬೇಗೆಯಲ್ಲಿ ಬಳಲಿ
ಬಸವಳಿದು ನಾನು
ಕೆಲ ಹಳ್ಳಗಳಲ್ಲಿ ಉರುಳಿದ್ದಾಗ
ನಿನ್ನ ಚೈತನ್ಯ ನನಗಿತ್ತು ಕಾಪಾಡಿದೆ.
ಭೀಕರ ಬಿರುಮಳೆಯಲ್ಲಿ ನೀನು
ಗುರಿತಪ್ಪಿ ದಿಕ್ಕರಿಯದಾದಾಗ
ನಿನಗಾಗಿ ನಾನು ಸರಿದಾರಿ ಅಣಿಮಾಡಿದೆ

ಪರಸ್ಪರ ಜೊತೆಗೂಡುತ್ತ,
ದಾಂಪತ್ಯ ಮಹಾನೌಕೆ
ಯೌವನದ ಗೃಹಸ್ಥಾಶ್ರಮದಿಂದ
ವಾರ್ಧಕ್ಯದ ವಾನಪ್ರಸ್ಥದೆಡೆಗೆ….

ನಾನು ಬರೆಯುವಾಗ

ನಾನು ಬರೆಯುವಾಗಲೆಲ್ಲಾ
ಒಬ್ಬಳು ವಸಂತದೊಡನೆ
ಮಾತನಾಡುವ ಹಾಗೆ
ಕಣ್ಣುಗಳನ್ನು ಅರಳಿಸಿ
ನಾಸಿಕವನ್ನು ಮೇಲೇರಿಸಿ
ನನಗೊತ್ತರಿಸಿ ಕೂರುತ್ತಾಳೆ.
ಅವಳ ಪ್ರೇಮದ ಹೊತ್ತಿಗೆಯನ್ನು
ತೆರೆದಿಡುತ್ತಾಳೆ.

ಅದರೊಳಗಿನಿಂದ
ನಿಶೆಯೇರಿಸಿ
ಸ್ವಪ್ರಜ್ಞೆಯನ್ನು ಕಳೆದುಕೊಂಡಂಥ
ಉನ್ಮಾದಿನಿಯೊಬ್ಬಳು
ನನ್ನ ಬೆರಳತುದಿಯಲ್ಲಿ
ಜೋತು ಬಿದ್ದಿರುತ್ತಾಳೆ.

ಗದರಿಸಿ ಓಡಿಸಿದರೂ ಬಿಡದೆ
ನನಗಂಟಿಯೇ ಇರುತ್ತಾಳೆ.
ಅವಳ ಕಿರಿಕಿರಿಯಿಂದ ಸೋತ ನಾನು
ಬಹಳಷ್ಟು ಸಲ ನನ್ನ ಪೆನ್ನನು
ಬೀಸಿ ಒಗೆದಿದ್ದೇನೆ
ಹೊತ್ತಿಗೆಯ ಹಾಳೆಗಳನ್ನು ಹರಿದು ಬಿಸಾಡಿದ್ದೇನೆ.

ಅತ್ತು ಕರೆದು ಹೋಗುವವಳನ್ನು
ಬಾಚಿ ತಬ್ಬಿಕೊಂಡು
ಎದೆಗೊತ್ತಿ ಸಾಂತ್ವನ ಹೇಳುತ್ತೇನೆ.
‘ನೀನು ನನ್ನ ಜೀವ ಕಣೇ’ ಎಂದಂದು
ಹಣೆಯ ಮೇಲೊಮ್ಮೆ ಚುಂಬಿಸುತ್ತೇನೆ.
ಬಿಸುಟ ಪೆನ್ನನ್ನೆತ್ತಿಕೊಂಡು
ಪುನಃ ಬರೆಯತೊಡಗುತ್ತೇನೆ.

ಗಾಯಗೊಂಡವರಿಗೆ

ಯಾರಿಗೂ ಕಾಣದಂಥ
ಆದರೆ ನಿಮಗೆ ಮಾತ್ರ ಕಾಣಬಹುದಾದ
ಗಾಯಗಳಿಗೆ ಮದ್ದು ಹಚ್ಚಿ ಕಟ್ಟಬಾರದು
ಬೀಸುಗಾಳಿಗೆ ಒಡ್ಡಿ ಒಣಗಿಸಬಾರದು;
ಕಂಡಕಂಡವರಲ್ಲಿ ಅರುಹಿಕೊಂಡು
ಸ್ವತಃ ಸಾಂತ್ವನಗೊಳ್ಳಬಾರದು

ನಿಮಗೆ ಮಾತ್ರ ಕಾಣಬಹುದಾದ ಕಡೆಯಲ್ಲಿ
ತಣ್ಣಗೆ ಕೂತು ಅದನ್ನು ಬಿಡಿಸಿಡಿ
ಸಮಯವಾಗಿರದಿದ್ದರೂ
ರೈಲೊಂದು ನಿಮ್ಮೆಡೆಗೆ
ದೌಡಾಯಿಸಿ ಬರಬಹುದು
ಹಳಿಯ ಮೇಲೆ ತಲೆಇಡಬಾರದು
ಹರಿತ ಚೂರಿ, ಪಾಶ, ಪಾಷಾಣಗಳೊಡನೆ
ಹಾವುಗಳು ಬಾಗಿಲು ತಟ್ಟಬಹುದು
ಮೇಲೆದ್ದು ತೆರೆಯಬಾರದು.

ಬಗೆಯಲಾಗದ ಬದುಕಿನಂತೆ
ಸಾವಿನಾಚೆಗೂ ನಿಗೂಢತೆಗಳಿವೆ
ಬೇಧಿಸಲೆತ್ನಿಸಬಾರದು.
ಜೀವ ತಿನ್ನುವ
ಅಗಾಧ ನೋವಿನ ಗಾಯದೊಂದಿಗೆ
ಹಾಗೆಯೇ ಸಹನೆಯಿಂದಿದ್ದುಬಿಡಿ

ಉರಿವ ಸೂರ್ಯಎಷ್ಟು ಸುಟ್ಟರೂ
ಭೂಮಿ ತನ್ನ ಗರ್ಭದೊಳಗೆ ವಸಂತದ ಬೀಜಗಳನ್ನು ಬಚ್ಚಿಟ್ಟುಕೊಂಡಿರುತ್ತದೆ;
ಬೇರುಗಳೊಡನೆ ಮಳೆಗಾಗಿ ಕಾಯುತ್ತಿರುತ್ತದೆ.

ಋತುಗಳು ಹೀಗೆಯೇ ಬದಲಾಗುತ್ತಿರುತ್ತವೆ
ಹೊಳೆಗಳು ತುಂಬಿ ಹರಿಯುತ್ತವೆ
ಹೂವುಗಳು ನಳನಳಿಸುತ್ತವೆ
ಎಲೆಗಳು ಗೆಲ್ಲುಗಳಲ್ಲಿ ತುಂಬಿಕೊಳ್ಳುತ್ತವೆ

ಗಾಯಗಳಿಗೆ ‘ಉರಿ’ತಾಕಿಸಿದವರು
ಒಮ್ಮೆ ಮರುಕಳಿಸಿದ ವಸಂತವನ್ನು ಕಂಡು
ಬೆಗಡುಗೊಳ್ಳುವರು..!

‍ಲೇಖಕರು Avadhi

August 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಚೈತ್ರಾ ಶಿವಯೋಗಿಮಠ

    ವಾಹ್.. ಮನದಾಳದ ಮಾತುಗಳು ಒಂದೊಂದು ಕವಿತೆಯೂ ಮುತ್ತು.. ಭಾಳ ಚಂದ ಬರದೀರಿ ಮೇಡಂ!! ಮನಸಿಗೆ ನಾಟಿದ್ವು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: