ಚೆಗೆವಾರ ಬಾರತಕ್ಕೆ ಬಂದರು..

ನಮಸ್ಕಾರ, ಚೆಗೆವಾರ..

ಜಿ ಎನ್ ಮೋಹನ್

 

‘ನಮಸ್ಕಾರ’-

ಏನೋ ಬರೆಯುವುದರಲ್ಲಿ ತಲ್ಲೀನರಾಗಿದ್ದ ನೆಹರೂ ತಲೆ ಎತ್ತಿ ನೋಡಿದರು. ನೋಡಿದರು ಅಷ್ಟೇ ಮಾತು ಹೊರಡಲಿಲ್ಲ. ಅದೇ ಹಸಿರು ಪ್ಯಾಂಟ್, ಹಸಿರು ಶರ್ಟ್, ಹಸಿರು ಬೂಟು, ಅದೇ ಗಡ್ಡ, ಅದೇ ಹೊಂಗೂದಲು, ಅದೆಲ್ಲಕ್ಕಿಂತ ಹೆಚ್ಚಾಗಿ ಸದಾ ನಗು ತುಳುಕಿಸುವ ಅದೇ ಮುಖ. ಮಾತಿಲ್ಲದೆ ನಿಂತ ನೆಹರೂ ನಂತರ ತಮ್ಮ ಎದುರಿಗಿದ್ದ ಆ ಎತ್ತರದ ನಿಲುವಿನ ಹುಡುಗನ ಕೈ ಕುಲುಕಿ- ‘ನಮಸ್ಕಾರ, ಚೆಗೆವಾರ’ ಎಂದರು.

ನಂತರ ನೆಹರೂ, ಚೆಗೆವಾರ ಮಧ್ಯೆ ಸೇತುವೆಯಾಗಿ ನಿಂತದ್ದು ಆ ಅದೇ ಸಿಗಾರ್. ಕ್ಯೂಬನ್ ಸಿಗಾರ್. ಕ್ಯೂಬಾದ ಜನತೆ ತಮ್ಮ ಎದೆ ಹೊಲಗಳಲ್ಲಿ ಬೆಳೆಸಿದ್ದ ತಂಬಾಕನ್ನು ಸುರುಳಿ ಸುತ್ತಿ ಭಾರತಕ್ಕೆ ಪ್ರೀತಿಯಿಂದ ಕಳಿಸಿದ ಸಿಗಾರ್. ಒಂದು ಪೆಟ್ಟಿಗೆಯ ತುಂಬಾ ಸಿಗಾರ್ ಕಂತೆಯನ್ನೇ ಹೊತ್ತು ತಂದಿದ್ದ ಚೆಗೆವಾರ ಅದನ್ನು ನೆಹರೂ ಕೈಗಿತ್ತರು. ‘ಕ್ಯೂಬಾದಿಂದ, ಪ್ರೀತಿಯಿಂದ’ ಎಂದರು. ಒಂದು ಸಿಗಾರ್, ಒಬ್ಬ ಚೆಗೆವಾರ ಭಾರತ ಮತ್ತು ಕ್ಯೂಬಾದ ನಡುವಿನ ನಂಟಿಗೆ ಪ್ರತೀಕವಾಗಿ ನಿಂತಿದ್ದರು.

ಅವತ್ತು ಮೇ ದಿನಾಚರಣೆ. ಇಡೀ ಸಂಜೆ ಹಾಡಿ ಕುಣಿದು, ಗತ್ತು ಗಮ್ಮತ್ತಿನಿಂದ ಸಂಭ್ರಮದ ಹುಡಿ ಹಾರಿಸಿ ಹಿಂದಿರುಗುವಾಗ ಕಲಾವಿದ ಜಾನ್ ದೇವರಾಜ್ ಸ್ಕ್ರೀನ್ ಪ್ರಿಂಟ್ ನ ಒಂದು ಮುದ್ದಾದ ಪೋಸ್ಟರ್ ನನ್ನ ಕೈಗಿತ್ತರು. ಅದರಲ್ಲಿಯೂ ಅದೇ ಕಳೆ ಹೊತ್ತ ಮುಖ, ಎದುರಿಗಿದ್ದವರನ್ನು ಸಮ್ಮೋಹಿನಿಗೆ ಈಡು ಮಾಡುವ ಕಣ್ಣುಗಳು, ಅದೇ ಹರಕಲು ಗಡ್ಡ, ಕೆಳಗೆ ‘ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸಿಡಿದೆದ್ದರೆ ನೀನು ನನ್ನ ಸಂಗಾತಿ’ ಎನ್ನುವ ಸಾಲುಗಳು. ಆ ಸಾಲುಗಳನ್ನು ನಾನು ಮತ್ತೆ ಮತ್ತೆ ಕಂಡೆ. ಅದೇ ಜಾನ್ ದೇವರಾಜ್ ಅವರ ಕಲಾತ್ಮಕ ಅಕ್ಷರಗಳಲ್ಲಿ, ಬೆಂಗಳೂರಿನ ಬೀದಿ ಬೀದಿಯ ಗೋಡೆಗಳ ಮೇಲೆ. ನಾನೂ ಸಹಾ ‘ ನಮಸ್ಕಾರ, ಚೆಗೆವಾರ’ ಎಂದೆ.

ನಾನು ಹಾಗೆ ಚೆಗೆವಾರಾನಿಗೆ ನಮಸ್ಕಾರ ಎಂದು ವಿಶ್ ಮಾಡುವ ಮೊದಲೇ, ಹಾಗೆ ಆತನನ್ನು ಎದೆಗೂಡಿನೊಳಗೆ ಎಳೆದುಕೊಳ್ಳುವ ದಶಕಗಳ ಮೊದಲೇ ನೆಹರೂ ಚೆಗೆವಾರನಿಗೆ ನಮಸ್ಕಾರ ಹೇಳಿಬಿಟ್ಟಿದ್ದರು. ಆದರೆ ಆಗ ಅವರ ಎದುರು ನಿಂತದ್ದು ಭಾರತಕ್ಕೆ ಬರುವ ಮೊದಲು ಮ್ಯಾಡ್ರಿಡ್ ನಲ್ಲಿ ತನ್ನ ೩೧ ನೆಯ ಹುಟ್ಟುಹಬ್ಬ ಆಚರಿಸಿಕೊಂಡು ಬಂಡ ಪಡ್ಡೆ ತರುಣ ಚೆ. ಜಗತ್ತನ್ನು ಬೆಕ್ಕಸ ಬೆರಗಾಗುವಂತೆ ಮಾಡಿದ ‘ಡಾಕ್ಟರ್’. ಇಡೀ ಅಮೆರಿಕಾದ ಎದೆಯಲ್ಲಿ ಅವಲಕ್ಕಿ ಕುಟ್ಟುವಂತೆ ಮಾಡಿದ ‘ಮಹಾನ್ ಚತುರ’. ಇಡೀ ಜಗತ್ತಿನ ಬೀದಿಗಳಲ್ಲಿ,  ಗಲ್ಲಿಗಳಲ್ಲಿ ಹುಚ್ಚರಂತೆ ಜನ ಪ್ರೀತಿಸಿದ ‘ಚೆ’. ಎದೆಯಲ್ಲಿ ಕಾವ್ಯ, ಕೈಯಲ್ಲಿ ಖಡ್ಗ.. ಅಲ್ಲಲ್ಲ.. ಕೋವಿ ಹಿಡಿದ ‘ಚೆ’. ಎಂದೆಂದೂ ಕವಿಯಾಗದ ಬಂಡಾಯಗಾರ ಎಂದು ನೋವಿನಿಂದ ತನ್ನನ್ನು ಬಣ್ಣಿಸಿಕೊಂಡ ‘ಚೆ’.

***

ಚೆಗೆವಾರ ಭಾರತಕ್ಕೆ ಬಂದಿದ್ದರು ಎಂದು ಗೊತ್ತಾದದ್ದೇ ನಾನು ಒಂದು ಕ್ಷಣ ಮಾತಿಲ್ಲದವನಾದೆ. ನಾನು ಆ ಚೆಗೆವಾರ ಪ್ರೀತಿಗೆ ಬಿದ್ದು, ಆ ಕಾರಣಕ್ಕಾಗಿಯೇ ಕ್ಯೂಬಾಕ್ಕೆ ಹೋಗಿ ಬಂದು, ಇದ್ದ ನೂರೆಂಟು ಮಾಹಿತಿಗಳನ್ನು ಗುಡ್ಡೆ ಹಾಕಿಕೊಂಡು, ನನ್ನೊಳಗಿನ ಎಲ್ಲಾ ಪ್ರೀತಿ ಧಾರೆ ಎರೆದು ‘ನನ್ನೊಳಗಿನ ಹಾಡು ಕ್ಯೂಬಾ’ ಎನ್ನುವ ಪ್ರವಾಸ ಕಥನ ಬರೆದಿದ್ದೆ. ಆಗಲೂ ಸಿಗದಿದ್ದ ಈ ಒಂದು ಮಾಹಿತಿ ಈಗ ಥಟ್ಟೆಂದು ನನ್ನೆದುರು ನಿಂತಿತ್ತು.

ಹಾಗೆ ಚೆಗೆವಾರ ಭಾರತಕ್ಕೆ ಬಂದದ್ದನ್ನು ಬಿಡಿಸಿಟ್ಟವರು ಓಂ ತನ್ವಿ, ಹೆಸರಾಂತ ಪತ್ರಕರ್ತ. ‘ಜನಸತ್ತಾ’ ದೈನಿಕದ ಸಂಪಾದಕರಾಗಿದ್ದ ಓಂ ತನ್ವಿ ಅವರಿಗೂ ನನ್ನಂತೆಯೇ ಚೆಗೆವಾರ ಹುಚ್ಚು. ಕ್ಯೂಬಾ ಪ್ರವಾಸ ಕಥನ ಬರೆಯುತ್ತಾ ನಾನು ಚೆಗೆವಾರ ಎನ್ನುವುದೇ ಒಂದು ಗುಂಗೀ ಹುಳು ಎಂದು ಬಣ್ಣಿಸಿದ್ದೆ. ಚೆ ಎನ್ನುವುದೊಂದು ಹುಚ್ಚು. ಚೆ ಎನ್ನುವುದು ಹುಚ್ಚೇ ಆದಲ್ಲಿ ಜಗತ್ತು ಹುಚ್ಚರ ಸಂತೆಯಾಗಲಿ, ಆಸ್ಪತ್ರೆ ಇಲ್ಲದಿರಲಿ ಎಂದು ಆಶಿಸಿದ್ದೆ. ಓಂ ತನ್ವಿ ಅವರು ಚೆ ಭಾರತಕ್ಕೆ ಬಂದದ್ದಕ್ಕೆ ಸಾಕ್ಷಿಯಾಗಿದ್ದರು. ಸರಣಿ ಲೇಖನಗಳನ್ನು ಬರೆದರು. ಅಷ್ಟಕ್ಕೇ ಸುಮ್ಮನಾಗಲಿಲ್ಲ. ನೇರ ಕ್ಯೂಬಾಗೆ ಹೊದರು. ಚೆ ಮಗ ಕ್ಯಾಮಿಯೋ ಗೆವಾರನ ಕೈ ಕುಲುಕಿದರು. ಹವಾನಾದಲ್ಲಿ ಚೆ ಇದ್ದ ಮನೆ ಈಗ ಚೆಗೆವಾರ ಅಧ್ಯಯನ ಕೇಂದ್ರವಾಗಿ ಬದಲಾಗಿದೆ. ಅಲ್ಲಿದ್ದ ಕಡತಗಳನ್ನು ತಿರುವು ಹಾಕಿದರು. ಸ್ಪಾನಿಶ್ ನಲ್ಲಿದ್ದ ವರದಿಗಳನ್ನು ಹಿಂದಿಗೆ ಭಾಷಾಂತರ ಮಾಡಿಸಿದರು. ಪ್ರೀತಿಯಿಂದ ಸಿಗಾರ್ ಪಡೆದಿದ್ದ ನೆಹರೂ ಅವರು ಆ ಭೇಟಿಯನ್ನು ಸ್ಮರಣೀಯವಾಗಿಸಲು ‘ಕುಕ್ರಿ’ಯೊಂದನ್ನು ಕೊಟ್ಟಿದ್ದರು. ಅದನ್ನೂ ನೋಡಿ ಬಂದರು.

ಭಾರತಕ್ಕೆ ವಾಪಸಾದ ತನ್ವಿ ಅವರು ಸುಮ್ಮನೆ ಕೂರಲಿಲ್ಲ. ಇನ್ನು ನನ್ನ ಕೆಲಸ ಭಾರತದ ಕಡತಗಳನ್ನು ತಿರುವಿಹಾಕುವುದು ಎಂದು ನಿರ್ಧರಿಸಿದರು. ಭಾರತ ಸರ್ಕಾರದ ಅನೇಕ ಕಚೇರಿಗಳಿಗೆ ಭೇಟಿ ಕೊಟ್ಟರು. ಭಾರತದ ಯಾವುದೇ ಕಡತಗಳಲ್ಲಿಯೂ ‘ಚೆ’ ಎನ್ನುವ ಹೆಸರೇ ಇಲ್ಲ. ಅವರು ಕಮಾಂಡೆಂಟ್ ಅರ್ನೆಸ್ಟೊ ಗೆವಾರ ಮಾತ್ರ.ಅರ್ಜೆಂಟೀನಾದ ಚೆ ಕ್ರಾಂತಿಗೆ ಸಾಥ್ ನೀಡಿದ್ದು ಕ್ಯೂಬಾಗೆ. ಆತ ಭಾರತಕ್ಕೆ ಬಂದಿಳಿದಾಗ ಚೆ ಯಾರು ಎನ್ನುವ ಗೊಂದಲ. ಯಾವ ದೇಶದ ನಾಗರಿಕ ಎಂದು. ಫಿಡೆಲ್ ಹೇಳಿದ್ದರು- ಚೆ ಕ್ಯೂಬಾದ ಸಹಜ ನಾಗರಿಕ ಎಂದು. ಕ್ರಾಂತಿ ಜರುಗಿ ಇನ್ನೂ ಆಗತಾನೆ ಫಿಡೆಲ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿತ್ತು. ಆಗ ಚೆ ಯಾವ ಹುದ್ದೆಯನ್ನೂ ಹೊಂದಿರಲಿಲ್ಲ. ಹಾಗಾಗಿಯೇ ಭಾರತಕ್ಕೆ ಮತ್ತೂ ಗೊಂದಲ. ಇವರನ್ನು ಏನೆಂದು ಗುರುತಿಸುವುದು ಅಂತ. ಕೊನೆಗೆ ಕ್ಯೂಬಾದ ನಾಯಕ ಅಂತ ಮಾತ್ರ ನಮೂದಿಸಿ ಕೈ ತೊಳೆದುಕೊಂಡಿತು.

ಚೆಗೆವಾರ ಭಾರತಕ್ಕೆ ಬಂದಾಗ ಉಳಿದುಕೊಂಡಿದ್ದು ಆಗ ತಾನೇ ಹೊಸದಾಗಿ ನಿರ್ಮಿಸಲಾಗಿದ್ದ ದೆಹಲಿಯ ಅಶೋಕಾ ಹೋಟೆಲ್ ನಲ್ಲಿ. ಆಕಾಶವಾಣಿಯ ಕೆ ಪಿ ಭಾನುಮತಿ ಅವರು ಅಲ್ಲಿಯೇ ಚೆಗೆವಾರನನ್ನು ಸಂದರ್ಶಿಸಿದ್ದರು. ಓಂ ತನ್ವಿ ಅವರ ಮನೆಯ ಕದವನ್ನೂ ತಟ್ಟಿದರು ಭಾನುಮತಿ ‘ಮಿಲಿಟರಿ ಧಿರಿಸಿನಲ್ಲಿದ್ದ ಸಂತ’ನ ಬಗೆಗಿನ ನೆನಪುಗಳ ಮಾಲೆ ಹೆಣೆದರು. ನಂತರ ತನ್ವಿ ಹಿಂದುಸ್ತಾನ್ ಟೈಮ್ಸ್ ಕಚೇರಿಗೆ ಭೇಟಿ ಕೊತ್ತರು. ಚೆ ಭಾರತ ಭೇಟಿಯ ಬಗ್ಗೆ ಇದ್ದ ವರದಿಗಳನ್ನೆಲ್ಲಾ ಸಂಗ್ರಹಿಸಿದರು. ಸರ್ಕಾರದ ಫೋಟೋ ಡಿವಿಷನ್ ನಲ್ಲಿದ್ದ ಫೋಟೋಗಳನ್ನು ಸಂಗ್ರಹಿಸಿದರು. ಚೆ ಭೇಟಿ ನೀಡಿದ ಕೊಲ್ಕೋತ್ತಕ್ಕೂ ಹೋಗಿ ಬಂದರು. ೧೯೬೨ ರಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ ಲಂಡನ್ ನ ‘ ದಿ ಅಬ್ಸರ್ವರ್’ ಪತ್ರಿಕೆಯಲ್ಲಿದ್ದಾಗ ಹವಾನಾದಲ್ಲಿ ಚೆಗೆವಾರನ ಎದುರು ಕೂತು ರೇಖಾಚಿತ್ರ ಬಿಡಿಸಿದ್ದರು. ಆ ರೇಖಾಚಿತ್ರವನ್ನೂ ತನ್ವಿ ಸಂಗ್ರಹಿಸಿದರು. ಅಲ್ಲೊಂದು ವಿಶೇಷವಿತ್ತು. ಅಬು ಬರೆದ ಚಿತ್ರದ ಶರ್ಟ್ ನ ಕಾಲರ್ ಮೇಲೆ ಚೆಗೆವಾರ ಪ್ರೀತಿಯಿಂದ ‘ಚೆ’ ಎಂದು ಸಹಿ ಮಾಡಿದ್ದ.

ಭಾರತಕ್ಕೆ ಕ್ಯೂಬಾ ಬಗ್ಗೆ ಇದ್ದ ಪ್ರೀತಿ ಅಪಾರ, ಇದು ಆ ಫಿಡೆಲ್ ಕ್ಯಾಸ್ತ್ರೋಗೂ ಗೊತ್ತಿತ್ತು. ‘ಭಾರತ ತನ್ನ ಕಡುಕಷ್ಟ ಕಾಲದ ಸಂಗಾತಿ’ ಎಂದು. ಹಾಗಾಗಿಯೇ ಕ್ಯೂಬಾ ಅಮೆರಿಕಾವನ್ನು ಹಿಮ್ಮೆಟ್ಟಿಸಿ, ಮಣಿಸಿ ಸ್ವಾತಂತ್ರ್ಯ ಗಳಿಸಿಕೊಂಡ ೬ ತಿಂಗಳಿಗೇ ಚೆಗೆವಾರನನ್ನು ಭಾರತದತ್ತ ಮುಖ ಮಾಡುವಂತೆ ಮಾಡಿದ್ದರು.

ಚೆಗೆವಾರ ಎಂದರೆ ಚೆಗೆವಾರನೇ. ನಿನಗೆ ಅಸ್ತಮಾ ಇದೆ ಇನ್‌ಹೇಲರ್ ತೆಗೆದುಕೊಂಡು ಹೋಗಲು ಮರೆಯಬೇಡ ಎಂದು ಹೆಂಡತಿ ತಾಕೀತು ಮಾಡಿದಾಗ ಅತ್ಯಂತ ನಿಷ್ಥನಾಗಿ ಇನ್‌ಹೇಲರ್ ಮರೆತು ಕವಿತೆಯ ಸಂಕಲನಗಳನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ದಾತ, ಭಾರತಕ್ಕೆ ಬಂದಾಗಲೂ ಹಾಹಾಗೇ ಮಾಡಿದ್ದ. ನೆಹರೂ ಅವರ ‘ಡಿಸ್ಕವರಿ ಆಫ್ ಇಂಡಿಯಾ’ವನ್ನು ಓದಿ ಅವರೊಂದಿಗೆ ಊಟಕ್ಕೆ ಕುಳಿತಾಗ ಊಟ ಮಾಡುವುದನ್ನೂ ಮರೆತು ಅದರ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದ.

ನೆಹರೂ, ಕೃಷ್ಣ ಮೆನನ್ ಭೇಟಿ ಮಾಡಿದ ಚೆಗೆವಾರನಿಗೆ ಅಷ್ಟು ಮಾತ್ರವೇ ಗುರಿ ಆಗಿರಲಿಲ್ಲ. ಆತ ಹೊಲಗಳಲ್ಲಿ ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಕಬ್ಬು ಕತ್ತರಿಸಿದವನು. ಶಾಲೆಗಳಲ್ಲಿ ಮಕ್ಕಳು ಓದಲೆಂದು ಚಿಮಣಿ ದೀಪ ಹೊತ್ತಿಸಿದವನು. ಹಾಗಾಗಿಯೇ ಭಾರತದಲ್ಲೂ ಆತ ಮಾಡಿದ್ದು ಅದನ್ನೇ. ತನ್ನ ಆರು ಜನರ ನಿಯೋಗವನ್ನು ಹೊರಡಿಸಿಕೊಂಡು ಆತ ದೆಹಲಿಯ ಸನಿಹದಲ್ಲೇ ಇದ್ದ ಪಿಲಾನ್ ನ ಶಾಲೆ, ಹೊಲಗಳತ್ತ ನಡೆದ. ಶಾಲೆಯ ಪರಿಸ್ಥಿತಿ ಆತನನ್ನು ಕಂಗೆಡಿಸಿಹಾಕಿತು. ರೈತರು ಚೆಯನ್ನು ಕಂಡವರೇ ಹಾರ ಹಿಡಿದು ಬಂದರು. ಆದರೆ ಚೆ ಮನಸ್ಸು ಹಣ್ಣಾಗಿ ಹೋಗಿತ್ತು. ಆತನ ಕಣ್ಣೆದುರಿಗೆ ಕಂಡ ರೈತರ ಬಡತನ, ಕೈಗಾರಿಕೆಯ ಮಾಲೀಕರ ಶ್ರೀಮಂತಿಕೆ ಕುಗ್ದಿಸಿಹಾಕಿತ್ತು. ‘ಕೆಲವೇ ಮಂದಿಯ ಕೈಯಲ್ಲಿ ಎಷ್ಟೊಂದು, ಹಲವರ ಕೈನಲ್ಲಿ ಏನೂ ಇಲ್ಲ’ ಎಂದು ಬರೆದ.

ಕೊಲ್ಕೊತ್ತದ ಬೀದಿಗಳಲ್ಲಿ ಪಕ್ಕಾ ಪಡ್ಡೆ ಹುಡುಗನಂತೆ ಕ್ಯಾಮೆರಾ ಹಿಡಿದು ಬೀದಿ ಬೀದಿಗಳ ಫೋಟೋ ತೆಗೆಯುತ್ತಾ ಹೋದ. ನೆಹರೂ ಕೊಟ್ಟ ಕುಕ್ರಿಯ ಮೇಲಿದ್ದ ಕೆತ್ತನೆ ನೋಡಿ ಮಗುವಿನಂತೆ ಕಣ್ಣರಳಿಸಿದ. ಸಕ್ಕರೆಯ ನಾಡಿನಿಂದ ಬಂದವನು ಹಲವರ ಎದೆಯಲ್ಲಿ ಸಿಹಿ ಉಳಿಸಿ ಹೋದ. ಯಾಕೋ ತುಂಬಾ ನೆನಪಾಗುತ್ತಿದೆ. ಅವತ್ತು ಹವಾನಾದ ಕಾರ್ಮಿಕ ಕಾಲೋನಿಯಲ್ಲಿ ಗೆಳೆಯ ಸಿದ್ಧನಗೌಡ ಪಾಟೀಲ್ ತಮ್ಮ ಕಂಚು ಕಂಠವನ್ನು ಸರಿಮಾಡಿಕೊಂಡು ನಿಂತಿದ್ದರು. ಚೆಗೆವಾರನನ್ನು ನನ್ನಂತೆಯೇ ಇನ್ನಿಲ್ಲದಂತೆ ಪ್ರೀತಿಸಿದ ಜೀವ ಅದು. ‘ಭೂಮಿ ಮೇಲೆ ಸೂರ್ಯ ಚಂದ್ರ ಇರುವವರೆಗೂ ನಿನ್ನ ಹೆಸರು ಅಜರಾಮರ ಚೆಗೆವಾರ, ಚೆಗೆವಾರ’ ಎಂದು ಹಾಡುತ್ತಿದ್ದರು.

ಚೆಗೆವಾರ ಭಾರತಕ್ಕೆ ಬಂದದ್ದು ಜುಲೈ 1 ರಂದು 1959. ಆರು ದಿನಗಳ ಕಾಲ ಇದ್ದು ಹೋದ ಆ ‘ಚೆ ‘ಹೆಜ್ಜೆಗಳನ್ನು ಹುಡುಕಲು ನಾನು ಇದನ್ನು ಬರೆಯಲು ಕುಳಿತೆ..

‍ಲೇಖಕರು avadhi

June 14, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Gangadhar Kolgi

    ಚೆ ಗೆವಾರ್ ಬಗ್ಗೆ ಇನ್ನಷ್ಟು ಸಿಕ್ಕಿತು ಥಾಂಕ್ಸ, ನಾನೂ ಅವನ ಮತ್ತು ಕ್ಯಾಸ್ಟೋ ಅಭಿಮಾನಿಯೆ.

    ಪ್ರತಿಕ್ರಿಯೆ
  2. nutana doshetty

    ಚೆ ನೆನಪನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದೀರಿ.
    ಇಂದು ನಾವಿರುವ ಜಗತ್ತು ಚೆ ನ ನೆನಪನ್ನೂ ಸಹ ಅಳಿಸಿ ಹಾಕುವ ಹುನ್ನಾರ ನಡೆಸಿದಂತಿದೆ. ‘ ಕೆಲವರ ಬಳಿ ಎಲ್ಲವೂ, ಎಲ್ಲರ ಬಳಿ ಕೆಲವೂ’ ಇಲ್ಲದ ಸ್ಥಿತಿ ಮುಂದುವರೆಯುವುದು ಈ ಹೊತ್ತಿನ ಸತ್ಯ

    ಪ್ರತಿಕ್ರಿಯೆ
  3. Anagha LH

    ಅವರ ಬಗ್ಗೆ ಅನುವಾದಿತ ಕೃತಿಯೊಂದನ್ನು ಓದುತ್ತಿದ್ದೆ ಅದೇ ಮೋಟಾರ್ ಸೈಕಲ್ ಡೈರಿ..ಅದರ ಜೊತೆಗೆ ನಿಮ್ಮ ಲೇಖನವು ಪುಷ್ಟಿ ನೀಡಿತು..ಧನ್ಯವಾದಗಳು..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: