ಆರ್ ಎಸ್ ಕೆ ಸರ್..  

ನಾ ದಿವಾಕರ  

 

“ಆರ್ ಎಸ್ ಕೆ ಇನ್ನಿಲ್ಲ” ಫೇಸ್‍ಬುಕ್‍ನಲ್ಲಿ ನನ್ನ ಆತ್ಮೀಯ ಬಾಲ್ಯದ ಗೆಳೆಯ ಮತ್ತು ಕಾಲೇಜು ಸಹಪಾಠಿ ಪರಮೇಶ್ ಈ ಸುದ್ದಿಯನ್ನು ಪ್ರಕಟಿಸಿದ್ದನ್ನು ಕಂಡು ಮನಸ್ಸು ಎರಡು ಕ್ಷಣ ಸ್ತಬ್ಧವಾಗಿತ್ತು.

ನಿಜ, ಸಾವು ಸಹಜ ಪ್ರಕ್ರಿಯೆ. ಶಾಶ್ವತವಾದಷ್ಟೇ ಅನಿಶ್ಚಿತ. ಅವರು ಸಾಯಬಾರದಿತ್ತು ಎಂಬ ಕ್ಲೀಷೆ ಮನದಲ್ಲಿ ಮೂಡಲಿಲ್ಲ. ಅಯ್ಯೋ ಎನಿಸಿತಾದರೂ ಅಯ್ಯೋ ಪಾಪ ಎನಿಸಲಿಲ್ಲ. ಏಕೆಂದರೆ ಅವರ ಸಾರ್ಥಕ ಜೀವನ ಹಾಗಿತ್ತು. ಒಬ್ಬ ವ್ಯಕ್ತಿಯಾಗಿ ಹಲವು ವಿಭಿನ್ನ ಬಗೆಗಳಲ್ಲಿ ಅವರನ್ನು ನೋಡಿದವರು ಇರಬಹುದು. ಆದರೆ ನನ್ನ ಪಾಲಿಗೆ ಅವರು ಒಬ್ಬ ಇತಿಹಾಸದ ಪ್ರಾಧ್ಯಾಪಕ. ಅಷ್ಟೇ ಉತ್ತಮ ವಾಗ್ಮಿ ಮತ್ತು ಅಂತಃಕರಣ ಇದ್ದ ವ್ಯಕ್ತಿ. ಸಹಮಾನವರ ಬಗ್ಗೆ ಕಾಳಜಿ ಇದ್ದ ಒಬ್ಬ ವ್ಯಕ್ತಿ.

ಅಮೆರಿಕದ ಇತಿಹಾಸಕಾರ ಎರಿಕ್ ಹಾಬ್ಸ್‍ಬಾಮ್ ಅವರ “ಇge oಜಿ ಖevoಟuಣioಟಿ” ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಸಂದರ್ಭದಲ್ಲಿ ಅವರನ್ನು ಅಕ್ಷರಶಃ ನೆನಪಿಸಿಕೊಂಡು ಬರೆದಿದ್ದೆ. ಕಾರಣಾಂತರಗಳಿಂದ ಅವರಿಗೆ ಕೃತಿಯನ್ನು ತಲುಪಿಸಲಾಗಲಿಲ್ಲ.

1978ರಲ್ಲಿ ದ್ವಿತೀಯ ಪಿಯುಸಿ ಮುಗಿದ ನಂತರ ನಮಗೆ ಅತ್ಯಂತ ಅಭಿಮಾನಪೂರ್ವಕವಾಗಿ ವಿದಾಯ ಹೇಳಿದ್ದ ನಮ್ಮೆಲ್ಲರ ನೆಚ್ಚಿನ ಆರ್‍ಎಸ್‍ಕೆ, ಅಂದರೆ ಆರ್ ಎಸ್ ಕೃಷ್ಣಯ್ಯಶೆಟ್ಟಿ, ಇದೇ ಜೂನ್ 6ರಂದು ಲೋಕಕ್ಕೇ ವಿದಾಯ ಹೇಳಿದ್ದಾರೆ. ನೆನಪಿನ ತುಣುಕುಗಳು ಅಂತರಂಗದ ಕಿರಣಗಳ ಮೂಲಕ 40 ವರ್ಷ ಹಿಂದಕ್ಕೆ ಜಾರುತ್ತಿವೆ.

1977, ಪ್ರಥಮ ಪಿಯುಸಿ ಓದುತ್ತಿದ್ದ ಸಂದರ್ಭ. ಇತಿಹಾಸದ ಪ್ರಾಧ್ಯಾಪಕರಿಗೆ ವರ್ಗಾವಣೆಯಾಗಿತ್ತು. ಹೊಸ ಲೆಕ್ಚರರ್ ಬರುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದೆವು. ಒಂದು ದಿನ ಒಬ್ಬ ಧಡೂತಿ ವ್ಯಕ್ತಿ ಶಾಲಾ ಕೊಠಡಿಗೆ ಪ್ರವೇಶಿದರು. ಆರು ಅಡಿ ಎತ್ತರ. ಆಜಾನು ಬಾಹು ವ್ಯಕ್ತಿ. ಕಪ್ಪು ಕನ್ನಡಕ. ಬೆಲ್ ಬಾಟಂ ಪ್ಯಾಂಟ್ (ಅಂದಿನ ಫ್ಯಾಷನ್). ಹಿಪ್ಪಿ ಕೂದಲು. ಎರಡು ಇಂಚು ಅಗಲದ ಬೆಲ್ಟ್ ಸೊಂಟವನ್ನು ಅಲಂಕರಿಸಿತ್ತು.

ಬೆರಳಿಗೆ ಸಿಕ್ಕಿಸಿದ ಕೀ ಚೈನನ್ನು ಗಿರಗಿರನೆ ತಿರುಗಿಸುತ್ತಾ ಪ್ರವೇಶಿಸಿದಾಗ ನಮಗೆ ಅಚ್ಚರಿ. ಶಿಕ್ಷಕರೊಬ್ಬರನ್ನು ಆಧುನಿಕ ಧಿರಿಸಿನಲ್ಲಿ ಕಂಡಿದ್ದು ಅದೇ ಮೊದಲು. ಇವರೇನು ಲೆಕ್ಷರ್ ಮಾಡಲು ಬಂದವರೋ ಪರಿವೀಕ್ಷಕರೋ ಎಂಬ ಅನುಮಾನ. ಎಲ್ಲರಲ್ಲೂ ಗುಸುಗುಸು ಆರಂಭವಾಗಿತ್ತು. ಅವರು ಬಳಸಿದ ಮೊದಲ ಪದ “ ಸೈಲೆನ್ಸ್ !”. ಎಲ್ಲರೂ ತೆಪ್ಪಗಾದೆವು. ನಂತರ ತಮ್ಮನ್ನು ತಾವೇ ಪರಿಚಯಿಸಿಕೊಂಡರು. ನಾನು ಇತಿಹಾಸ ಭೋಧಿಸಲು ಬಂದಿದ್ದೇನೆ. ಇಂದಿನಿಂದಲೇ ತರಗತಿ ಆರಂಭ ಎಂದು ಕೆಲವೇ ನಿಮಿಷಗಳಲ್ಲಿ ತಮ್ಮ ಭೋಧನೆ ಆರಂಭಿಸಿದ್ದರು.

ಕೈಯ್ಯಲ್ಲಿ ಒಂದು ಪುಸ್ತಕವೂ ಇಲ್ಲ. ಹಾಳೆಯೂ ಇಲ್ಲ. ಜೇಬಿನಿಂದ ಏನಾದರೂ ತೆಗೆಯುತ್ತಾರೆ ಎಂದು ನೋಡುತ್ತಲೇ ಇದ್ದ ನಮಗೆ ನಿರಾಸೆಯಾಯಿತು. ಕಪ್ಪು ಹಲಗೆಯ ಮೇಲೆ ಒಂದು ಅಕ್ಷರವನ್ನೂ ಬರೆಯಲಿಲ್ಲ. ಒಂದು ಗಂಟೆಯ ಕಾಲ ನಿರರ್ಗಳವಾಗಿ ಲೆಕ್ಷರ್ ಮಾಡಿ ಹೊರ ನಡೆಯುವ ಮುನ್ನ ಒಂದು ಮಾತು ಹೇಳಿದರು “ ನಾನು ನೋಟ್ಸ್ ಬರೆಸುವುದಿಲ್ಲ, ನಾನು ಲೆಕ್ಚರ್ ಮಾಡುತ್ತಿರುವಂತೆಯೇ ನೀವೇ ಟಿಪ್ಪಣಿ ಮಾಡಿಕೊಂಡು ಮನೆಗೆ ಹೋಗಿ ನೋಟ್ಸ್ ತಯಾರು ಮಾಡಿ ತರಬೇಕು ”. ಇದು ನಮಗೆ ಅನಿರೀಕ್ಷಿತ ಮಾತ್ರವಲ್ಲ ಹೊಸತೂ ಆಗಿತ್ತು.

ಪ್ರಾಧ್ಯಾಪಕರಾಗಿ ಬಂದಿದ್ದ ಆರ್‍ಎಸ್‍ಕೆ ನಮ್ಮೆಲ್ಲರೊಡನೆ ಪಾಠ ಪ್ರವಚನಗಳೊಡನೆ ನಮ್ಮೊಡನೆ ಬೆರೆತು ಹೋಗಿದ್ದರು. ಮೊದಲ ದಿನ ಕೀ ಚೈನ್ ತಿರುಗಿಸುತ್ತಾ ಎಲ್ಲರಲ್ಲೂ ಭೀತಿ ಮೂಡಿಸಿದ ವ್ಯಕ್ತಿ ಇವರೇನಾ ಎಂದೆನಿಸುವಷ್ಟು ಮಟ್ಟಿಗೆ ನಮ್ಮ ಒಡನಾಟ ಬೆಳೆದಿತ್ತು. ಪಾಠದ ಸಮಯದಲ್ಲಿ ಶಿಕ್ಷಕ, ಹೊರಗೆ ಸ್ನೇಹಿತ ಮತ್ತು ಪಾಠದ ನಡುವೆ ಮಾರ್ಗದರ್ಶಕರಾಗಿ, ಹಾಸ್ಯದ ಹೊನಲಿನಲ್ಲಿ ಎಲ್ಲರನ್ನೂ ನಗಿಸುತ್ತಾ ನಮ್ಮ ವ್ಯಕ್ತಿಗತ ನೋವುಗಳನ್ನೂ ಮರೆಯುವಂತೆ ಮಾಡುತ್ತಿದ್ದರು ಆರ್‍ಎಸ್‍ಕೆ.

ನನ್ನ ಕಾಲೇಜು ದಿನಗಳ ಮುಗಿದು ನೌಕರಿ ಗಳಿಸಿದ ನಂತರ ಒಮ್ಮೆ ಅವರನ್ನು ಮನೆಯಲ್ಲಿ ಭೇಟಿಯಾಗಿದ್ದ ಸಂದರ್ಭದಲ್ಲಿ “ಮೊದಲ ದಿನ ನಾನು ಕ್ಲಾಸಿಗೆ ಬಂದಾಗ ನಿನಗೇನನ್ನಿಸಿತ್ತೋ ” ಎಂದು ಕೇಳಿದ್ದರು. “ ಲೆಕ್ಚರರ್ ಎಂದು ಮಾತ್ರ ಎನಿಸಿರಲಿಲ್ಲ ಸಾರ್ ” ಎಂದು ಹೇಳಿದಾಗ ನಕ್ಕು ಬೆನ್ನು ತಟ್ಟಿದ್ದರು. ಅವರು ಇತಿಹಾಸವನ್ನು ಪಾಠ ಮಾಡುತ್ತಿದ್ದರೆ ಇವರು ಯಾವ ಪುಸ್ತಕ ರೆಫರ್ ಮಾಡುತ್ತಾರೆ ಎಂದು ಅಚ್ಚರಿಯಾಗುತ್ತಿತ್ತು.

ನಾನು ಕಾಲೇಜು ಪಠ್ಯ ಮಾತ್ರವೇ ಅಲ್ಲದೆ ಮಜುಂದಾರ್ ಅವರ ಇತಿಹಾಸ ಕೃತಿಯನ್ನು ಅಭ್ಯಸಿಸಿ ನೋಟ್ಸ್ ತಯಾರು ಮಾಡುತ್ತಿದ್ದೆ. ಅವರು ಅದನ್ನು ಮೆಚ್ಚಿಕೊಳ್ಳುತ್ತಿದ್ದರು. ಹೆಮ್ಮೆಯ ವಿಚಾರ ಎಂದರೆ ನಾನು ಪಿಯುಸಿ ಮುಗಿಸಿದ ನಂತರ ನನ್ನ ನೋಟ್ಸ್ ಅವರಿಗೇ ನೀಡಿದ್ದೆ, ಅವರದೇ ಕೋರಿಕೆಯ ಮೇಲೆ.

ಪಾಠ, ಪ್ರವಚನದ ನಡುವೆ ಅವರು ನೀಡುತ್ತಿದ್ದ ಮಾರ್ಗದರ್ಶನ, ಜೀವನದ ವಿವಿಧ ಮಜಲುಗಳ ಪರಿಚಯ ಮತ್ತು ನಿತ್ಯ ಜೀವನದ ಕೆಲವು ಘಟನೆಗಳ ಪರಿಚಯ ಇವೆಲ್ಲವೂ ನಮಗೆ ಇಂದಿಗೂ ಎಲ್ಲೋ ಒಂದು ಕಡೆ ನೆನಪಾಗುತ್ತವೆ. ಸ್ವತಃ ಶ್ರೀಮಂತರಾಗಿದ್ದು, ಆಧುನಿಕತೆಯನ್ನು ಅಳವಡಿಸಿಕೊಂಡಿದ್ದರೂ ಅವರಲ್ಲಿದ್ದ ಅಂತಃಕರಣ ನಿಜಕ್ಕೂ ಮೆಚ್ಚುವಂತಹುದಾಗಿತ್ತು.

ನಮ್ಮ ಕಾಲೇಜಿನಲ್ಲಿ ಗ್ರಂಥಾಲಯದ ಅವ್ಯವಸ್ಥೆ ನೋಡಿದ ಕೂಡಲೇ ಆರ್‍ಎಸ್‍ಕೆ ಅದರ ಪುನರುಜ್ಜೀವನಕ್ಕೆ ಮುಂದಾಗಿದ್ದರು. ಎಲ್ಲ ಪಠ್ಯ ವಿಷಯಗಳ ಹೊಸ ಪುಸ್ತಕಗಳನ್ನು ಖರೀದಿಸಲು ಪ್ರಾಂಶುಪಾಲರ ಹತ್ತಿರ ಮಾತನಾಡಿ ಒಪ್ಪಿಸಿದ್ದರು. ಗ್ರಂಥಾಲಯದಲ್ಲಿ ಪುಸ್ತಕಗಳನ್ನು ವಿಷಯಾಧಾರಿತವಾಗಿ ಜೋಡಿಸಲು ನನಗೇ ಜವಾಬ್ದಾರಿ ನೀಡಿದ್ದರು. ಪುಸ್ತಕ ಪಡೆಯುವ ಮತ್ತು ಹಿಂದಿರುಗಿಸುವ ಪದ್ಧತಿಯನ್ನು ಜಾರಿಗೊಳಿಸಿ ಅದಕ್ಕೂ ನನ್ನನ್ನೇ ಉಸ್ತುವಾರಿಯನ್ನಾಗಿ ಮಾಡಿದ್ದರು.

ಈ ಕೆಲಸದಿಂದ ನಾನು ಕೆಲವೊಮ್ಮೆ ಇತರ ಲೆಕ್ಚರರ್‍ಗಳ ಬೈಗುಳ ಎದುರಿಸಿದ್ದೂ ಉಂಟು. ಆದರೆ ಗ್ರಂಥಾಲಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದ ಹಲವಾರು ವಿದ್ಯಾರ್ಥಿಗಳಿಗೆ ನೆರವಾಗಿದ್ದಂತೂ ಹೌದು. ಇದು ಅವರು ಕೈಗೊಂಡ ಕ್ರಾಂತಿಕಾರಿ ಹೆಜ್ಜೆ. ಶ್ಲಾಘನಾರ್ಹ.

ಪಿಯುಸಿ ಮುಗಿಯುವ ವೇಳೆಗೆ ನನ್ನನ್ನು ಕರೆದು ಪುಸ್ತಕಗಳ ಲೆಕ್ಕ ಕೇಳಿದರು. ಹಲವು ಪುಸ್ತಕಗಳು ವಾಪಸ್ ಬಂದಿರಲಿಲ್ಲ. ಅವುಗಳ ಮೊತ್ತ ಹೆಚ್ಚೇ ಆಗಿತ್ತು. “ ಪರವಾಗಿಲ್ಲ ಬಿಡೋ ನಾನು ವೆಚ್ಚ ಭರಿಸುತ್ತೇನೆ ” ಎಂದು ನನ್ನ ಬೆನ್ನು ತಟ್ಟಿ ಕಳುಹಿಸಿದ್ದರು. ಅವರಲ್ಲಿ ಒಂದು ರೀತಿಯ ಸ್ನೇಹಪೂರ್ವಕ ಔದಾರ್ಯ ಕಾಣಬಹುದಿತ್ತು. ಮತ್ತೊಬ್ಬರನ್ನು ಹೀಗಳೆಯುವುದನ್ನು ಸಹಿಸುತ್ತಿರಲಿಲ್ಲ. ವಿದ್ಯಾರ್ಥಿನಿಯರಿಗೆ ಅವಮಾನ ಮಾಡುವ ಮಾತುಗಳನ್ನು ಸಹಿಸುತ್ತಿರಲಿಲ್ಲ. ಬಡ ವಿದ್ಯಾರ್ಥಿಗಳ ಅಗತ್ಯತೆಗಳಿಗೆ ಸ್ಪಂದಿಸುತ್ತಿದ್ದರು.

ನಾನು ಟೈಪ್ ರೈಟಿಂಗ್ ಮಾಡಬೇಕೆಂದು ನನ್ನ ಹಂಬಲ ವ್ಯಕ್ತಪಡಿಸಿದಾಗ ತಿಂಗಳಿಗೆ ಹತ್ತು ರೂ ಶುಲ್ಕ ಭರಿಸಲೂ ಶಕ್ತಿ ಇಲ್ಲವೆಂದೂ ಹೇಳಿದ್ದೆ. ಕೂಡಲೇ ನನ್ನ ಕೈಗೆ ಹತ್ತು ರೂ ಕೊಟ್ಟು ಮೊದಲು ಸೇರಿಕೋ ಎಂದು ಹೇಳಿದ್ದರು. ಅವರ ಕೃಪೆಯಿಂದಲೇ ಟೈಪ್‍ರೈಟಿಂಗ್ ಕೋರ್ಸ್ ಮುಗಿಸಿದೆ. “ ನನಗೆ ಮರೆತುಹೋಗುತ್ತೆ ಕಣೋ ಪ್ರತಿ ತಿಂಗಳೂ ನೀನೇ ಕೇಳಿ ದುಡ್ಡು ಇಸ್ಕೋ ” ಎಂದೂ ಹೇಳಿದ್ದರು. ಹಾಗೆಯೇ ಮಾಡಿದ್ದೆ. ನನ್ನ ಟೈಪಿಂಗ್ ವೇಗ ಅತಿ ಹೆಚ್ಚು ಎಂದು ಇಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದರ ಶ್ರೇಯ ನನ್ನ ಮೇಷ್ಟ್ರಿಗೆ ಸಲ್ಲಬೇಕು. ನನ್ನಂತೆಯೇ ಇತರ ಅನೇಕ ನನ್ನ ಸಹಪಾಠಿಗಳಿಗೆ ಆರ್‍ಎಸ್‍ಕೆ ಸಹಾಯ ಮಾಡಿದ್ದರು. ಕಾಲೇಜು ಮುಗಿಸಿ ನೌಕರಿ ಗಳಿಸುವವರೆಗೂ ನೆರವು ನೀಡಿದ್ದರು.

ನಾನು ಬಿ ಕಾಂ ಪೂರೈಸಿದ ನಂತರ ಎಮ್ ಕಾಂ ಮಾಡುವಂತೆ ಪ್ರೋತ್ಸಾಹಿಸಿದ್ದರು. ಬೆಂಗಳೂರಿನ ಬಡಗನಾಡು ಹಾಸ್ಟೆಲಿನಲ್ಲಿ ಅವರ ಪ್ರಭಾವ ಬಳಸುವ ಮೂಲಕ ಉಚಿತ ವಸತಿ ವ್ಯವಸ್ಥೆಯನ್ನೂ ಮಾಡಿದ್ದರು. ಎರಡು ವರ್ಷಗಳ ಶುಲ್ಕವನ್ನೂ ಭರಿಸುವುದಾಗಿ ಹೇಳಿದ್ದರು. ಆದರೆ ನನ್ನ ಕೌಟುಂಬಿಕ ಸಮಸ್ಯೆಗಳೇ ನನ್ನ ಮುನ್ನಡೆಗೆ ತಡೆಗೋಡೆಯಾಗಿತ್ತು. ಅವರ ನಿರೀಕ್ಷೆ ಮತ್ತು ಆಕಾಂಕ್ಷೆಯನ್ನು ನಾನು ಪೂರೈಸಲಾಗಲಿಲ್ಲ.

ಹತ್ತು ವರ್ಷಗಳ ಹಿಂದೆ ಅವರನ್ನು ಭೇಟಿಯಾದ ಸಂದರ್ಭದಲ್ಲೂ “ನಿನ್ನೊಳಗಿದ್ದ ಸಾಮರ್ಥ್ಯವನ್ನು ನೀನು ಬಳಸಿಕೊಳ್ಳಲಿಲ್ಲವಲ್ಲೋ, ಹೋಗಲಿ ಬಿಡು ಒಬ್ಬ ಲೇಖಕನಾಗಿದ್ದೀಯ ಅದೇ ಸಂತೋಷ ” ಎಂದು ಸಮಾಧಾನ ಹೇಳಿದ್ದರು. ನನ್ನ ಕೆಲವು ಪುಸ್ತಕಗಳನ್ನೂ ಅವರಿಗೆ ನೀಡಿದ್ದೆ.

ಮತ್ತೊಂದು ಘಟನೆಯನ್ನು ಇಲ್ಲಿ ನೆನೆಯಲೇಬೇಕು. ಕೆಜಿಎಫ್ ಶಾಖೆಯಲ್ಲಿ ನಾನು ಕೆಲಸ ಮಾಡುತ್ತಿದ್ದಾಗ. ಅದೇ ಊರಿನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಆರ್‍ಎಸ್‍ಕೆ ಒಮ್ಮೆ ಕೂಡಲೇ ಭೇಟಿಯಾಗುವಂತೆ ಹೇಳಿ ಕಳುಹಿಸಿದ್ದರು. ಕೂಡಲೇ ಹೋದೆ. “ದಿವಾಕರ, ಅಂಬೇಡ್ಕರ್ ಜಯಂತಿಗೆ ಭಾಷಣ ಮಾಡುವುದಿದೆ, ನೀನು ಅಂಬೇಡ್ಕರ್ ಕುರಿತು ಓದಿದ್ದೀಯ ನನಗೆ ಸಹಾಯ ಮಾಡು ” ಎಂದು ಕೇಳಿದಾಗ ನನಗೆ ಅಚ್ಚರಿಯಾಗಿತ್ತು. ಹೆಮ್ಮೆಯೂ ಎನಿಸಿತ್ತು. ಸರ್ ನೀವು ನನಗೆ ಪಾಠ ಮಾಡಿದ ಮೇಷ್ಟ್ರು ನಿಮಗೆ ನಾನೇನು ಹೇಳಲು ಸಾಧ್ಯ ಎಂದಾಗ “ವಿದ್ಯೆ ಮತ್ತು ಜ್ಞಾನಕ್ಕೆ ಅಂತಸ್ತು ಇಲ್ಲವೋ ದಡ್ಡ ” ಎಂದು ಹೇಳಿ ನನ್ನಲ್ಲಿ ಅವರ ಬಗ್ಗೆ ಇದ್ದ ಗೌರವವನ್ನು ಹೆಚ್ಚುವಂತೆ ಮಾಡಿದ್ದರು.

ಅಬ್ಬಾ ! 40 ವರ್ಷಗಳ ಹಿಂದೆ ಪಾಠ ಮಾಡಿದ ಮೇಷ್ಟ್ರು ಅಗಲಿದರೆ ಇಷ್ಟೊಂದು ನೆನಪುಗಳು ಕಾಡುತ್ತಿವೆಯಲ್ಲಾ. ಇನ್ನೂ ಹೇಳುವುದಿದೆ ಸರ್. ಮುಂದೊಮ್ಮೆ ನೋಡೋಣ. ಸದ್ಯಕ್ಕೆ ನನ್ನ ವಿನಮ್ರ ಪೂರ್ವಕ ಶ್ರದ್ಧಾಂಜಲಿ ಮತ್ತು ನಮನಗಳು. ನಿಮ್ಮ ಜೀವನದ ಸಾರ್ಥಕತೆ ನಿಮ್ಮ ವಿದ್ಯಾರ್ಥಿಗಳಲ್ಲಿ ಕಾಣಲು ಬಯಸಿದ್ದ ನಿಮಗೆ ನಾವು ದ್ರೋಹ ಬಗೆದಿಲ್ಲ. ನಿಮ್ಮ ಎಲ್ಲ ವಿದ್ಯಾರ್ಥಿಗಳ ಪರವಾಗಿ ಮತ್ತೊಮ್ಮೆ ನಿಮಗೆ ಮಿಡಿವ ಕಂಬನಿಗಳ ಹೃದಯಪೂರ್ವಕ ನಮನಗಳು ಆರ್‍ಎಸ್‍ಕೆ ಸರ್.

‍ಲೇಖಕರು avadhi

June 15, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Malati mudakavi

    ಲೇಖನ ಅತ್ಯಂತ ಹೃದಯಸ್ಪರ್ಶಿ. ಕೆಲವರು ಹಾಗೆಯೇ..‌ ಸದ್ದಿಲ್ಲದೆ ಎದೆಯಾಳದಲ್ಲಿ ತಮ್ಮ ನೆನಪನ್ನು ಉಳಿಸಿಹೋಗಿಬಿಡುತ್ತಾರೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: