ಮುಚ್ಚಿಟ್ಟುಕೊಂಡಿರುವೆ ಸೆರಗ ತುದಿಯಲ್ಲಿ..

ಗೀತಾ ಹೆಗ್ಡೆ, ಕಲ್ಮನೆ 

ನನ್ನೆಲ್ಲಾ ಕವಿತೆಗಳನು ಗಾಳಿಗೆ ಹಾರಾಡಲು ಬಿಟ್ಟು
ಅದರಂದವ ಕೆನ್ನೆಗೆ ಕೈ ಹಚ್ಚಿ ಕುಳಿತು ನೋಡುವಾಸೆ.

ಮನಕ್ಯಾಕೊ ದಿಗಿಲು ಕಳೆದು ಹೋದರೆ?
ಮುಚ್ಚಿಟ್ಟುಕೊಂಡಿರುವೆ
ಸೆರಗ ತುದಿ ಗಂಟು ಹೊಡೆದು
ಸಿಕ್ಕಿಸಿಕೊಂಡಾಗ ಅದು ನುಣುಚದಿರಲೆಂದು
ಜೋಪಾನವಾಗಿ ಒಂದೊಂದೇ ಕವನ
ಗುಲಾಲು ತುಂಬಿದ ಪರಿಮಳದ ಗಂಧವ ಪೂಸಿ
ಗಮ್ಮೆಂದು ಆಗಾಗ ಆಘ್ರಾಣಿಸುತ್ತ
“ಮುಗ್ಧೆ ನಾನು ನೀ ಪೋಗದಿರೆಂದು” ಲಲ್ಲೆ ಗರೆವ
ಪುಟ್ಟ ಗುಬ್ಬಚ್ಚಿಯ ಬಾಲೆ
ನನ್ನ ಮುದ್ದು ಕವನಗಳು.

ಒಂದಿನಿತೂ ಆಯ ತಪ್ಪಿ ಬೀಳದಂತೆ
ಎಲ್ಲವನ್ನೂ ಒಟ್ಟಾಗಿ ಗುಂಪಿನಲ್ಲಿ ಪೇರಿಸಿ
ಇಷ್ಟಗಲ ಸೆರಗ ಹಾಸಿ ಪ್ರೀತಿಯಿಂದ
ಮೆಲ್ಲಗೆ ಮುತ್ತು ಕೊಟ್ಟು
ಒಪ್ಪವಾಗಿ ಮಡಿಲಲಿ ಅಡಗಿಸಿಕೊಂಡಿರುವೆ.

ವರ್ತಮಾನದ ತಲ್ಲಣಗಳು
ಭೂತಕಾಲದ ವಾಸ್ತವಗಳು
ಭವಿಷ್ಯತ್ ಕಾಲದ ಆಗುಹೋಗುಗಳ
ದೊಡ್ಡ ವರದಿಗಳೇ ಇವೆ ಅವುಗಳಲ್ಲಿ
ಒಮ್ಮೊಮ್ಮೆ ಒಳಗೊಳಗೇ ಬಿಕ್ಕುತ್ತವೆ ಮೆಲ್ಲಗೆ
“ಯಾಕ್ರೋ ಅಳ್ತೀರಾ? ನಾನಿಲ್ಲವೇ ನಿಮ್ಮೊಂದಿಗೆ ?”
ಅಂತ ಸಾಂತ್ವನ ಹೇಳುತ್ತೇನೆ ಸುಮ್ಮನಿರೆಂದು.

ಆದರೆ ಕೆಲವೊಮ್ಮೆ ನಾನೂ ಮೌನದಟ್ಟಿಯಲ್ಲಿ
ಜೋರಾಗಿ ಅತ್ತುಬಿಡುತ್ತೇನೆ
ಯಾರಲ್ಲೂ ಹೇಳಿಕೊಳ್ಳಲಾಗದೆ ಕೈಚೆಲ್ಲಿ
ಅನಾಥ ಪ್ರಜ್ಞೆ ಕಾಡುತ್ತದೆ
ದಿಕ್ಕಿಲ್ಲದ ಪರದೇಶಿಗಳಂತೆ
ಅಂಡಲೆಯಬಹುದೇ?
ನಶಿಸಿಹೋಗಬಹುದೇ?
ನನ್ನ ತದನಂತರದಲ್ಲಿ!

ಹುಟ್ಟಿಸಿದ ಮೇಲೆ ನೆಲೆ ಕಾಣಿಸುವುದು ನನ ಧರ್ಮ
ಗೊತ್ತು ನನಗೆ ಎಷ್ಟು ಶ್ರಮ ಪಡುತ್ತೇನೆ
ನಿಮ್ಮ ಅಸ್ತಿತ್ವ ಠಿಕಾಯಿಸಲು!
ಆದರೂ ಸೋತು ಹೋಗುವುದ ಕಂಡು
ಅತೀವ ಸಂಕಟದಲ್ಲಿ ಮರುಗುತ್ತೇನೆ.

ಆಗೆಲ್ಲ ದೊಡ್ಡ ತಪ್ಪು ಮಾಡಿದೆನೆಂಬ
ಆತಂಕ,ದುಃಖ,ಹತಾಷೆ,ಕೋಪ
ಸೋಲೇ ಶಾಪದಂತೆನಿಸಿ
ನಿಮ್ಮನ್ನು ಅತಂತ್ರ ಮಾಡಿ
ಎಷ್ಟು ದೊಡ್ಡ ಪಾಪದ ಸುಳಿಯಲ್ಲಿ ಸಿಲುಕುತ್ತೇನೆ
ಎಂಬ ಭಾವ ಮನ ಕುಟುಕಿದಾಗಲೆಲ್ಲ
ಕವನಾ ಮತ್ತೆ ನಿನ್ನ ಹುಟ್ಟಿಸುವ ಪ್ರಯತ್ನ ಮಾಡದೆ
ನಿಮ್ಮ ಹಾರಾಡಿಸುವ ಆಸೆ ಬಿಟ್ಟು
ಉಕ್ಕಿ ಬರುವ ಅಳುವಿಗೆ ದಿಂಬ ಆಸರೆ ಕೊಡುತ್ತ
ರಾತ್ರಿಯ ಜಾಗರಣೆಗೆ ಅಣಿಯಾಗುತ್ತೇನೆ
ಅಣಿಯಾಗುತ್ತಲೇ ಇದ್ದೇನೆ
ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಂತೆ!

‍ಲೇಖಕರು avadhi

June 15, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: