ಅದು ಸವಿಯಲೇಬೇಕಾದ ‘ಕ್ಯೂಬಾ’

ಸುಧಾ ಆಡುಕಳ 

ಅದು ಎರಡನೆಯ ಸಹಯಾನ ಸಾಹಿತ್ಯೋತ್ಸವವಿರಬೇಕು. ‘ಮಾಧ್ಯಮ ಮತ್ತು ಹೊಸ ತಲೆಮಾರು’ ವಿಷಯದ ಬಗ್ಗೆ ಗೋಷ್ಠಿಯಿತ್ತು. ಅದರ ಅತಿಥಿಯಾಗಿ ಬರಬೇಕಾದವರೊಬ್ಬರ ಹೆಸರನ್ನು ಆಯೋಜಕರು ಪದೇ ಪದೇ ಹೇಳುತ್ತಿದ್ದರು. ಜಿ. ಎನ್. ಮೋಹನ್ ಎಂಬ ಹೆಸರನ್ನು ಆಗಲೇ ಕೇಳಿದ್ದು ನಾನು. ಸಾಹಿತ್ಯ ಲೋಕಕ್ಕೆ ಆಗತಾನೇ ತೆರಕೊಳ್ಳುತ್ತಿದ್ದ ನಾನು ಯಾರು ಜಿ. ಎನ್. ಅಂದ್ರೆ? ಎಂದು ಕೇಳಿದೆ. ಆಗ ಸ್ನೇಹಿತರು ಅಯ್ಯೋ… ಜಿ. ಎನ್. ಗೊತ್ತಿಲ್ವಾ? ‘ನನ್ನೊಳಗಿನ ಹಾಡು ಕ್ಯೂಬಾ’ ಎಂಬ ಪುಸ್ತಕ ಬರೆದವರು. ಅದನ್ನು ಉಪ್ಪಿನಕಾಯಿಯಂತೆ ಚಪ್ಪರಿಸಿಕೊಂಡು ಓದಿದ್ದೇವೆ ನಾವೆಲ್ಲ ಎಂದರು.

ಅನಿವಾರ್ಯ ಕಾರಣಗಳಿಂದ ಅವರಂದು ಹಾಜರಿರಲಿಲ್ಲವಾದರೂ ಉಪ್ಪಿನಕಾಯಿ ಮನೆ ಸೇರಿತು. ಕರೋನಾ ಕಳೆದ ಕೂಡಲೇ ಮೊದಲು ತರಿಸಬೇಕಾದ ಪುಸ್ತಕ ಯಾದಿಯಲ್ಲಿದ್ದ ಈ ಪುಸ್ತಕ ಪುಸ್ತಕಮಥನ ಕ್ರಿಯೆಯಲ್ಲಿ ಮೊನ್ನೆ ಅಮೃತದಂತೆ ಮೇಲೆದ್ದು ಬಂದು ಬೆರಗು ಮೂಡಿಸಿತು. ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತ ಖುಶಿ.

ಕ್ಯೂಬಾ ಅಮೇರಿಕಾದ ಮಗ್ಗುಲಲ್ಲಿ ಮಲಗಿರುವ ಪುಟ್ಟ ದೇಶ. ತನ್ನ ಮಗ್ಗುಲ ಮುಳ್ಳು ಇದು ಎಂದು ಅಮೇರಿಕಾ ವಿಶ್ವಕ್ಕೆ ಒಪ್ಪಿಸಬೇಕೆಂದು ಬಲೆ ಹೆಣೆದಾಗೆಲ್ಲಾ ಬಲೆಯಾಚೆಗೆ ಜಿಗಿಯುವ ಮಾಯಾ ಜಿಂಕೆ ಕ್ಯೂಬಾ. ಕ್ಯಾಸ್ಟ್ರೋ, ಚೆಗುವಾರ ಮೊದಲಾದವರ ಕ್ರಾಂತಿಯ ಗುರುತುಗಳನ್ನು ತನ್ನೆದೆಯೊಳಗೆ ಅಡಗಿಸಿಕೊಂಡ ಕ್ಯೂಬಾ ಯಾರ ದರ್ಪಕ್ಕೂ ಬಗ್ಗದ ಹಠಮಾರಿ ಮಗು. ಇಂಥದೊಂದು ದೇಶದಲ್ಲಿ ನಡೆದ ‘ಉನ್ ಫೆಸ್ಟಿವಲ್’ನಲ್ಲಿ ಭಾಗವಹಿಸಿದ ಸಿಹಿ, ಒಗರು ಅನುಭವಗಳನ್ನು ಲೇಖಕರು ಪುಸ್ತಕದಲ್ಲಿ ಹಿಡಿದಿಡುತ್ತಾರೆ.

ವಿಶ್ವದ ಸಕ್ಕರೆಯ ಬಟ್ಟಲು ಕ್ಯೂಬಾ. ಹಾಗೆಂದು ಇಲ್ಲಿಯವರ ಬದುಕಿನಲ್ಲಿ ಸಿಹಿಯ ಕುರುಹುಗಳನ್ನೇ ಹುಡುಕುತ್ತ ಹೋದರೆ ಬೇಸ್ತು ಬೀಳುವುದು ಖಚಿತ. ಇಲ್ಲಿ ಹಾಲಿಲ್ಲ, ಬ್ರೆಡ್ ಇಲ್ಲ, ಸೋಪ್ ಇಲ್ಲ, ಐಷಾರಾಮಿ ವೈಭೋಗಗಳಿಲ್ಲ…ಇಲ್ಲಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಯಾಕೆಂದರೆ ಇವುಗಳೆಲ್ಲದನ್ನು ಆಮದು ಮಾಡಿಕೊಳ್ಳದಂತೆ ಅಮೇರಿಕಾ ದಿಗ್ಬಂಧನ ವಿಧಿಸಿದೆ. ಆದರೆ ಇಲ್ಲಿ ಸ್ವಾಭಿಮಾನವಿದೆ, ಸ್ವಾತಂತ್ರ್ಯವಿದೆ, ಕನಸುಗಳಿವೆ, ಗುರಿಗಳಿವೆ….

ಎಲ್ಲಕ್ಕಿಂತ ಹೆಚ್ಚಾಗಿ ದೇಶದ ತುಂಬೆಲ್ಲಾ ಶಾಲೆಗಳಿವೆ ಮತ್ತು ಮನೆ, ಮನೆಗೆ ಬಂದು ಆರೋಗ್ಯ ವಿಚಾರಿಸುವ ವೈದ್ಯರಿದ್ದಾರೆ. ಇಂದು ಕರೋನಾ ಕಾಲದಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಈ ಪುಟ್ಟ ದೇಶದಿಂದ ವೈದ್ಯಕೀಯ ನೆರವನ್ನು ಪಡಕೊಂಡಿವೆ. ಒಂದೇ ವರ್ಷದಲ್ಲಿ ಸಂಪೂರ್ಣ ಸಾಕ್ಷರತೆ ಸಾಧಿಸುವ ಛಲ ಇಲ್ಲಿಯ ಯುವಕರಿಗಿದ್ದುದೇ ಅದಕ್ಕೆ ಕಾರಣ. ಇದನ್ನು ‘ಒಂದು ದೀಪ, ನೂರು ಪುಸ್ತಕ..’ ಎನ್ನುತ್ತಾರೆ ಲೇಖಕರು.

 

ಕ್ಯೂಬಾ ದೇಶದ ದಾರುಣವಾದ ಚರಿತ್ರೆ, ಸ್ವಾತಂತ್ಯ್ರಕ್ಕಾಗಿ ನಡೆದ ಹೋರಾಟ, ಸ್ವಾತಂತ್ರ್ಯೋತ್ತರದ ಹೋರಾಟ, ಪ್ರಭುತ್ವವನ್ನು ಎದುರುಹಾಕಿಕೊಂಡದ್ದಕ್ಕಾಗಿ ಅದು ಎದುರಿಸಬೇಕಾದ ದೌರ್ಜನ್ಯ, ಅದನ್ನು ಮೀರಿ ಬೆಳೆದ ಬಗೆ ಎಲ್ಲವನ್ನೂ ಕಾವ್ಯದ ಹರಿವಿನ ಸಹಜ ಭಾಷೆಯಲ್ಲಿ ಇಲ್ಲಿ ವಿವರಿಸಿರುವುದರಿಂದ ಓದು ಸುಖವಾಗಿ ದಕ್ಕುತ್ತದೆ.

“ಮೋಡ ಇದೆ ಎಂದ ಮಾತ್ರಕ್ಕೆ ಆಕಾಶದಲ್ಲಿ ಸೂರ್ಯನಿಲ್ಲ ಎಂದು ಅರ್ಥವೇನು? ಮೋಡ ಹನಿಯೊಡೆದು ನೆಲಕ್ಕುದುರಿದರೆ ಅಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸೂರ್ಯನಿದ್ದಾನೆ ” ಎಂಬ ಕ್ಯಾಸ್ಟ್ರೋ ಮಾತು ಹೋರಾಟಗಾರರಿಗೆ ಅನುದಿನದ ಸ್ಪೂರ್ತಿಯಾಗಬಲ್ಲುದು.

ಶಿಕ್ಷಣ ಮತ್ತು ಆರೋಗ್ಯದ ಅಭಿವೃದ್ಧಿ ಆಳುವವರ ಆದ್ಯತೆಯಾದರೆ ಏನಾಗಬಹುದೆಂಬುದಕ್ಕೆ ಕ್ಯೂಬಾ ಅತ್ಯುತ್ತಮ ನಿದರ್ಶನವಾಗಿದೆ. ಲೇಖಕರು ಹೇಳುತ್ತಾರೆ,
ಅಲ್ಲಿ ಅಕ್ಷರಗಳಲ್ಲಿ ಹಾಡು ಹೊಮ್ಮುತ್ತದೆ
ಅಲ್ಲಿ ಅಕ್ಷರಗಳಲ್ಲಿ ಬೆಳಕು…

ಪುಸ್ತಕ ಓದಿ ಬದಿಗಿಟ್ಟ ಪುಳಕದಲ್ಲಿ ಮಕ್ಕಳೊಡನೆ ಕೇಳಿದೆ, “ಎಷ್ಟು ಚಂದ ಅಲ್ವಾ ಇಂಥದೊಂದು ಆಡಳಿತ? ಈಗಲೂ ಹೀಗೇ ಇರಬಹುದಾ ಕ್ಯೂಬಾ?”

“ಬರಹದಷ್ಟು ಬದುಕು ಚಂದವಿರುವುದಿಲ್ಲ ಅಮ್ಮಾ , ಎಲ್ಲದಕ್ಕೂ ಅದರದೇ ಆದ ಮಿತಿಗಳಿರುತ್ತವೆ. ಪ್ರಜಾಪ್ರಭುತ್ವದಂತಹ ಚಂದದ ಪರಿಕಲ್ಪನೆ ವಿಶ್ವದಲ್ಲಿ ಯಾವ ಚಹರೆ ಪಡೆಯುತ್ತಿದೆಯೆಂದು ನೀನೇ ನೋಡ್ತಿರುವೆಯಲ್ಲ. ಎಲ್ಲವೂ ಅಷ್ಟೆ. ಜನರು ಎಷ್ಟು ಜವಾಬ್ದಾರಿಯುತರು ಎನ್ನುವುದರ ಮೇಲೆ ವ್ಯವಸ್ಥೆಯ ಯಶಸ್ಸು ನಿರ್ಧಾರಿತವಾಗುತ್ತದೆ” ಎಂದು ನನ್ನನ್ನು ಕನಸ ಲೋಕದಿಂದ ವಾಸ್ತವಕ್ಕೆ ತಂದರು ಮಕ್ಕಳು.

ಆದರೂ ನನ್ನ ಮನಸ್ಸೇಕೋ
ಗ್ವಂತನಮೇರ
ಗ್ವಜಿರ ಗ್ವಂತನಮೇರ
ಅಂತ ಕುಣಿಯುತ್ತಲೇ ಇತ್ತು

ಪುಸ್ತಕ ಕೊಳ್ಳಲು- ಇಲ್ಲಿ ಕ್ಲಿಕ್ಕಿಸಿ 

‍ಲೇಖಕರು avadhi

May 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ಸುಧಾ, ನನ್ನೊಳಗಿನ ಹಾಡು ಕ್ಯೂಬಾವನ್ನು ನಮ್ಮೆಲ್ಲರ ಹಾಡಾಗಿಸಿದ ಕೃತಿಯನ್ನು ಬಲು ಅಪ್ಯಾಯಮಾನವಾಗಿ ಪರಿಚಯಿಸಿದ್ದೀರಿ.ಬರಹಕ್ಕಿಳಿಯದೆ ಮನದಲ್ಲೇ ಉಳಿದ ನನ್ನ ಮೆಚ್ಚುನುಡಿಗಳು ನಿಮ್ಮಿಂದ ಹೊರಬಂದು ತುಂಬಾ ಸಂತೋಷವಾಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: