ವಲಸೆ ಬಂದವರು..

ಜಿ ಪಿ ಬಸವರಾಜು
ಎಷ್ಟು ದೂರದ ಪಯಣ ನಮ್ಮದು
ಎಲ್ಲಿಂದಲೋ ಹೊರಟು ಎಲ್ಲಿಗೋ
ಬಂದದ್ದು, ಮುಗಿಯಲಾಗದ ಕತೆ
ಬರುವಾಗ ನಮ್ಮ ನೆತ್ತಿಯ ಮೇಲೆ
ಹೆಚ್ಚಿರಲಿಲ್ಲ ಹೊರೆ, ನಾವು ನಡೆ-
ಯುವವರು, ಮಕ್ಕಳು ಹೆಗಲ ಮೇಲೆ
ಹೊರೆಯ ಜೊತೆಯಲ್ಲಿ ಅವರೇನು
ಭಾರವಲ್ಲ, ನಡೆವ ನಮ್ಮ ಕಾಲುಗಳಿಗೆ
ದೂರ ಹತ್ತಿರದ ಮಾತಿಲ್ಲ, ಮಳೆ, ಗಾಳಿ
ಗುಡುಗು ಸಿಡಿಲುಗಳು ಲೆಕ್ಕವಲ್ಲ;
 

ಬರುವಾಗ ನಮ್ಮ ನೆತ್ತಿಯ ಮೇಲೆ
ನಮ್ಮ ಮನೆಯಿತ್ತು, ನಮ್ಮ ಊರಿತ್ತು
ಪಾಳುಬಿದ್ದ ಭೂಮಿಯಿತ್ತು, ಚಿಗುರಲಾರದೆ,
ಒಣಗಲಾರದೆ, ತತ್ತರಿಸುತ್ತಿದ್ದ ಗಿಡಮರಗಳಿದ್ದವು,
ನಮ್ಮ ನೆನಪುಗಳ ಹೊರೆಭಾರವೇ ನಮ್ಮ
ನೆತ್ತಿಯ ಮೇಲಿತ್ತು; ಒಂದು ಕಾಲಕ್ಕೆ ನಗುತ್ತಿದ್ದ
ಹೊಳೆಗಳು, ಕೆರೆಗಳು, ತೆರೆತೆರೆಯಲ್ಲಿ ಕಾಲೂರಿ
ಕೊಕ್ಕುಗಳಲ್ಲಿ ಮೀನು ಹೆಕ್ಕುವ ಕೊಕ್ಕರೆಗಳು, ಇನ್ನೂ
ಹೇಳಬೇಕೆಂದರೆ ಊರ ಸಕಲ ಜೀವ ಸಂಕುಲವೆಲ್ಲ
ಇತ್ತು; ಮೇವಿನ ಊರುಗಳ ಹುಡುಕಿ ದನಕರುಗಳು
ಹೋಗಿದ್ದ ದಾರಿಗಳೂ ನಮ್ಮ ಹೆಗಲಮೇಲೆ ಕುಳಿತಿದ್ದವು
ಊರ ಬುಡ್ಡೆಯ ಕಲ್ಲು, ಮಾರಿಯ ಗುಡಿ, ಊರ ಹೊರಗಿನ
ಹನುಮಪ್ಪನ ಗುಡಿ, ಅಲ್ಲಿಯೇ ಬತ್ತಿ ಗುರುತನ್ನು ಮಾತ್ರ
ಉಳಿಸಿಕೊಂಡಿರುವ ಕಾಲುವೆ, ಹೂವಿಲ್ಲದ ಕಾಲುವೆಯ ದಂಡೆ,
ಮುಖ ಒಣಗಿಸಿಕೊಂಡಿದ್ದ ಮಾವಿನ ಮರದ ಖಾಲಿ ತೋಪುಗಳು
ನಮ್ಮ ದಾರಿಯ ಬುತ್ತಿಗಂಟಿನಲ್ಲಿಯೇ ಉಳಿದುಕೊಂಡಿದ್ದವು.
 
ನಿಮ್ಮೂರಿಗೆ ನಾವು ಬಂದಾಗ ನಮ್ಮನ್ನು ನೀವು ನೋಡಿದ
ಕಣ್ಣುಗಳಲ್ಲಿ ವಿಶ್ವಾಸದ ಬೆಳಕಿರಲಿಲ್ಲ, ಅನುಮಾನಗಳ
ಕಪ್ಪಾನಕಪ್ಪು ಕತ್ತಲಿತ್ತು, ನೀವಾಡಿದ ಮಾತುಗಳಲ್ಲಿ
ನೀರಿನ ಪಸೆಯೇ ಇರಲಿಲ್ಲ, ನಿಮ್ಮ ಕೆಲಸಗಳ ಗುಡ್ಡವೇನೋ
ಎತ್ತರೆತ್ತರಕ್ಕೆ ಬೆಳೆದು ನಿಂತಿತ್ತು; ಅದರಾಚೆ ನಾವು-ಈಚೆ ನೀವು
ಒಬ್ಬರ ಮುಖ ಒಬ್ಬರಿಗೆ ಕಾಣಿಸದೆ ನಿಮ್ಮ ದನಿಯನ್ನು ಮಾತ್ರ
ನಾವು ಕೇಳಿದೆವು; ನಿಮ್ಮೂರ ಈ ಅಂಚಿನಲ್ಲಿಯೇ ಉಳಿದೆವು ನಾವು
ನೆತ್ತಿಯ ಮೇಲೊಂದು ಸೂರು ನೆರಳಿಗೆ, ಇಳಿಸಿದೆವು ನಮ್ಮ
ಗಂಟು-ಮೂಟೆ, ಹೊರಲಾರದೆ ಹೊತ್ತು ತಂದ ಎಲ್ಲ ವಸ್ತುಗಳಿಗೆ
ನೆನಪುಗಳಿಗೆ ನಮ್ಮ ಜೊತೆಯಲ್ಲೇ ಅಂಗೈ ಅಗಲ ಜಾಗಕೊಟ್ಟೆವು
 
ಬೆಳಗಿನ ತಂಗಾಳಿ ನಮ್ಮ ಜೊತೆಗಿತ್ತು, ನಡುನೆತ್ತಿಯ ಸೂರ್ಯನೂ
ನಮ್ಮನ್ನು ತೊರೆಯಲಿಲ್ಲ, ರಾತ್ರಿಯ ಚಂದ್ರ ನಮ್ಮ ಮೈ ಸವರಿ
ಸಮಾಧಾನ ಹೇಳುತ್ತಿದ್ದ, ನೂರಾರು ಚುಕ್ಕೆಗಳಲ್ಲಿ ನಮ್ಮ ಹಿರಿಯರು
ಕಂಡು ಮಾತುಕತೆ ನಡೆಯುತ್ತಿತ್ತು, ಊರ ಮಾರಮ್ಮನೂ ಆಗಾಗ
ಸ್ವಪ್ನಗಳಲ್ಲಿ ಬಂದು ಹೋಗುತ್ತಿದ್ದಳು, ಹನುಮಪ್ಪನಂತೂ ನಮ್ಮ
ಸಂಗಡವೇ ಇದ್ದ ಹರಿಯುವ ಬೆವರ ಜೊತೆಯಲ್ಲಿ ಹಗಲು ರಾತ್ರಿಗಳ ಮರೆತು;
 
ಗುಳೆಬಂದರೂ ನಾವು ಭಿಕಾರಿಗಳಾಗಿರಲಿಲ್ಲ, ಅನಾಥರಾಗಿಯೂ
ಇರಲಿಲ್ಲ, ನಮ್ಮ ಸಕಲ ಪರಿವಾರ, ನಮ್ಮೂರು, ನಮ್ಮ ಜನ
ನಮ್ಮೆಲ್ಲ ಸಂಪತ್ತು, ನಮ್ಮ ಜಗತ್ತು, ನಮ್ಮ  ಜೊತೆಯಲ್ಲಿಯೇ ಇತ್ತು;
 
ನಾವು ಬೇರಿಳಿಸಲು ನೊಡಿದೆವು, ನಮ್ಮ ಮಕ್ಕಳು ಜೋಕಾಲಿ
ಜೀಕಿದವು; ನಮ್ಮಾಸೆಗಳೂ ಈ ಮಣ್ಣಲ್ಲೇ ಚಿಗಿತವು; ಆಗ
ನೀವು ನಮ್ಮನ್ನು ಹೊರದಬ್ಬಿದಿರಿ, ನಿಮ್ಮ ಗುಡ್ಡ ಕರಗಿತ್ತು
ನಿಮ್ಮ ಬಂಗಲೆಗಳು ತಲೆ ಎತ್ತಿ ಮುಗಿಲ ಮುಟ್ಟಿದ್ದವು, ನಿಮ್ಮ
ರಸ್ತೆಗಳು, ಕಾರುಗಳು, ಬಸ್ಸು, ಸ್ಕೂಟರು, ಆಟೋಗಳು, ರೈಲು,
ನೀವು ಎತ್ತೆಸೆದ ವಸ್ತುಗಳು ಬಂದು ನಮಗೆ ಡಿಕ್ಕಿ ಹೊಡೆದವು
ಆ ಭರಾಟೆಯಲ್ಲಿ ನಾವು ಬದುಕಿ ಉಳಿದದ್ದೇ ಹೆಚ್ಚು
 
ಮತ್ತೆ ನಾವು ಕಟ್ಟಿದೆವು ಗಂಟು-ಮೂಟೆ, ಎಲ್ಲ ಮೊದಲಿನ
ಹಾಗೇ  ಹೊರೆ, ನಮ್ಮ ಹೆಗಲುಗಳ ಮೇಲೆ, ನಮ್ಮೂರ ದಾರಿ
ಹಿಡಿದೆವು-ನಮಗೆ ಗೊತ್ತಿದ್ದುದು ಅದೊಂದೇ ದಾರಿ ಅದೊಂದೇ

‍ಲೇಖಕರು avadhi

May 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: