ರಂಗ ಪ್ರೀತಿ ಹೆಚ್ಚಾಗದಿದ್ದರೆ ಕೇಳಿ..

ಇಂದು ‘ಬಹುರೂಪಿ’ ಪ್ರಕಟಿಸಿರುವ ವಿಶಿಷ್ಟ ಕೃತಿ ‘ರಂಗ ಕೈರಳಿ’ಯ ಇ- ಬುಕ್ ಬಿಡುಗಡೆಯಾಗುತ್ತಿದೆ.

‘ಮೈಲ್ಯಾಂಗ್ ಬುಕ್ಸ್’ ಈ ಇ ಬುಕ್ ಅನ್ನು ಹೊರತಂದಿದೆ.

ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಇಂದು ಬಿಡುಗಡೆಯಾಗುತ್ತಿರುವ ಕೃತಿಗೆ ಬರೆದ ಒಂದಿಷ್ಟು ಮಾತು ಇಲ್ಲಿದೆ

– ಜಿ ಎನ್ ಮೋಹನ್

ನನ್ನ ಪ್ರವಾಸ ಕಥನ ‘ನನ್ನೊಳಗಿನ ಹಾಡು ಕ್ಯೂಬಾ’ಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಅದನ್ನು ಸ್ವೀಕರಿಸಲು ಮಂಗಳೂರಿನಿಂದ ಹಾವೇರಿಗೆ ಹೋಗುವ ನಡುವೆ ಸಿಕ್ಕವರು ಕಿರಣ್ ಭಟ್. ಆ ವೇಳೆಗೆ ನನ್ನ ಆತ್ಮೀಯರಾಗಿದ್ದ ವಿಠ್ಠಲ ಭಂಡಾರಿ ಹಾಗೂ ಪುಸ್ತಕ ಪ್ರೀತಿಯನ್ನು ಹಂಚುತ್ತಿದ್ದ ಸಿ ಆರ್ ಶಾನಭಾಗ್ ಅವರ ಮೂಲಕ ಬೆಸೆದುಕೊಂಡವರು ಕಿರಣ್ ಹಾಗೂ ಶ್ರೀಪಾದ ಭಟ್. ಹೊನ್ನಾವರ, ಶಿರಸಿ ಕೇಂದ್ರವಾಗಿಟ್ಟುಕೊಂಡು ರಾಜ್ಯದ ಓದಿನ ರೀತಿಯನ್ನು, ಓದಬೇಕಾದದ್ದು ಏನು ಎನ್ನುವುದನ್ನು, ರಂಗ ಪ್ರೀತಿ ಹಂಚುವುದನ್ನು, ಭಿನ್ನವಾಗಿ ನಾಟಕ ಕಟ್ಟುವುದನ್ನು, ರಂಗಭೂಮಿಯ ಮೂಲಕ ಸಮಾಜ ಬದಲಾವಣೆ ಮಾಡುವುದು ಹೇಗೆ ಎಂಬುದನ್ನು ಕಟ್ಟಿ ಕೊಡುತ್ತಿದ್ದದ್ದು ಈ ತಂಡ.

ಕಿರಣ್ ಭಟ್ ಬಿ ಎಸ್ ಎನ್ ಎಲ್ ನಲ್ಲಿ ಅಧಿಕಾರಿ. ಅಧೋ ರಾತ್ರಿಯಲ್ಲಿ, ಸುರಿಯುತ್ತಿರುವ ‘ಧೋ’ ಮಳೆಯಲ್ಲಿ, ಸುಡು ಬಿಸಿಲಿನ ನಡುವೆ ಕತ್ತರಿಸಿ ಹೋಗಿದ್ದ ಓ ಎಫ್ ಸಿ ಕೇಬಲ್ ಗಳು, ತುಂಡಾದ ವೈರ್ ಗಳ ಲೋಕದಲ್ಲಿ ಮುಳುಗಿ ಹೋಗುತ್ತಿದ್ದ ಈ ವ್ಯಕ್ತಿ ತಾನು ಅದಲ್ಲವೇ ಅಲ್ಲವೇನೋ ಎಂಬಂತೆ ಮಕ್ಕಳ ಮಧ್ಯೆ ಮಗುವಾಗಿ ಕುಳಿತುಬಿಡುತ್ತಿದ್ದರು. ಅವರ ಜೊತೆ ಹಾಡುತ್ತಾ, ಕೇಕೆ ಹಾಕಿ ನಗುತ್ತಾ, ಚಪ್ಪಾಳೆ ತಟ್ಟುತ್ತಾ, ರಂಗ ಹೆಜ್ಜೆಗಳನ್ನು ಕಲಿಸುತ್ತಿದ್ದರು.

ಕಿರಣ್ ಭಟ್ ಹುಬ್ಬುಗಂಟಿಕ್ಕಿದ್ದನ್ನು ನಾನು ನೋಡಿಯೇ ಇಲ್ಲ. ಬಹುಷಃ ಯಾರೂ.. ಅಂತಹ ಲವಲವಿಕೆಯ, ಹುಮ್ಮಸ್ಸಿನ ಕಿರಣ್ ಹಾಗೂ ನನ್ನ ಸಂಪರ್ಕ ಮುಂದುವರಿದದ್ದು ಫೇಸ್ ಬುಕ್ ನಲ್ಲಿಯೇ. ಅವರ ಆಟ, ತಿರುಗಾಟ ಎಲ್ಲವೂ ಗೊತ್ತಾಗುತ್ತಿದ್ದದ್ದು ಈ ಫೇಸ್ ಬುಕ್ ನಿಂದಲೇ. ಹೀಗಿರುವಾಗ ಇದ್ದಕ್ಕಿದ್ದಂತೆ ಉಮೇದು ಬಂದ ಕಿರಣ್ ತಾವು ಕೇರಳದಲ್ಲಿದ್ದಾಗ ನೋಡಿದ ನಾಟಕಗಳ ಬಗ್ಗೆ ಮೇಲಿಂದ ಮೇಲೆ ಫೇಸ್ ಬುಕ್ ನಲ್ಲಿ ಒಂದಿಷ್ಟು ಬರೆಯತೊಡಗಿದರು.

ಅವರು ಬೆರಗುಗಣ್ಣಿಂದ ನೋಡಿದ ನಾಟಕಗಳ ಬಗ್ಗೆ ಅವರು ಬರೆದ ಒಂದೆರಡು ಸಾಲು ಹಾಗೂ ಪ್ರಕಟಿಸುತ್ತಿದ್ದ ಸಾಕಷ್ಟು ಫೋಟೋಗಳು ನೋಡಿದಾಗ ಅರೆ! ರಂಗಭೂಮಿಯಲ್ಲಿ ಹೀಗೆಲ್ಲಾ ಪ್ರಯೋಗ ಮಾಡಲು ಸಾಧ್ಯವೇ? ರಂಗಭೂಮಿಯ ಹುಚ್ಚನ್ನು ಹೀಗೆಲ್ಲಾ ಅಂಟಿಸಿಕೊಳ್ಳಲು ಸಾಧ್ಯವೇ? ಎನಿಸುತ್ತಿತ್ತು. ಕೇರಳಕ್ಕೆ ತನ್ನದೇ ಆದ ಖದರ್ ಇದೆ. ರಾಜಕೀಯದಲ್ಲೂ.. ರಂಗಭೂಮಿಯಲ್ಲೂ.. ಅವರು ಬರೆದದ್ದನ್ನು ಓದಿ ಬೆರಗಾಗುತ್ತಾ ಹೋದ ನಾನು ಒಂದು ದಿನ ನೇರ ಅವರನ್ನು ಎದುರು ನಿಲೆಹಾಕಿಕೊಂಡವನೇ ‘ನೀವು ಯಾಕೆ ಈ ಎಲ್ಲಾ ಪ್ರಯೋಗಗಳ ಬಗ್ಗೆ ‘ಅವಧಿ’ಗೆ (avadhimag.com) ಅಂಕಣ ಬರೆಯಬಾರದು’ ಎಂದೆ. ಅವರು ಗಾಬರಿ ಬಿದ್ದ ರೀತಿ ನೀವು ನೋಡಬೇಕಿತ್ತು. ಟೆಲಿಫೋನ್ ಬಗ್ಗೆ ಕಂಪ್ಲೇಟ್ ಹೇಳಿ ಇಲ್ಲಾ, ಮಕ್ಕಳ ಮಧ್ಯೆ ಕುಣಿ ಎನ್ನಿ ಆದರೆ ಬರೆಯಿರಿ ಎಂದು ಹೇಳಲೇಬೇಡಿ ಎಂದು ರಚ್ಚೆ ಹಿಡಿದರು.

ಥೇಟ್ ಮಕ್ಕಳನ್ನು ರಮಿಸಿದಂತೆಯೇ ಇವರನ್ನೂ ರಮಿಸಿ ಒಪ್ಪಿಸಬೇಕಾಯಿತು. ಇದನ್ನು ನಿಮ್ಮ ಪ್ರವಾಸ ಕಥನದಂತೆಯೇ ಬರೆಯುತ್ತಾ ಹೋಗಿ ಎಂದೆ. ಅವರ ಮಹಾಬರವಣಿಗೆ ತಿದ್ದುವ ಕೆಲಸ ನನಗೆ ಬೀಳುತ್ತಲ್ಲಾ ಎನ್ನುವ ಆತಂಕವಂತೂ ಇತ್ತು. ಆದರೆ ಕಿರಣ್ ತಮ್ಮ ಎಂದಿನ ಹಾಸ್ಯ ಮಿಶ್ರಿತ ಮತ್ತು ಆಳ ನೋಟದ ಮೂಲಕ ಕಟ್ಟಿಕೊಟ್ಟ ಬರಹಗಳು ಈಗ ನಿಮ್ಮ ಮುಂದಿದೆ. ಅವಧಿಯಲ್ಲಿ ಅಂಕಣ ಮುಗಿದಾಗ ಪುಸ್ತಕ ಮಾಡೋಣ ಎಂದೆ. ಇನ್ನೊಮ್ಮೆ ಗಾಬರಿ ಬಿದ್ದ ಕಿರಣ್ ಭಟ್ ‘ಇದು ನನ್ನ ಮೊದಲ ಹಾಗೂ ಕೊನೆಯ ಪುಸ್ತಕ’ ಎನ್ನುವ ಕಂಡಿಷನ್ ನೊಂದಿಗೆ ಪುಸ್ತಕವಾಗಲು ಸಮ್ಮತಿಸಿದ್ದಾರೆ.

‘ಇದೆಲ್ಲಾ ನಾಟಕ..’ ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ಈ ಕೃತಿಯನ್ನು ನಿಮ್ಮ ಮುಂದಿಟ್ಟಿದ್ದೇವೆ. ಈ ಪುಸ್ತಕ ಓದಿದ ಮೇಲೆ ನಿಮ್ಮ ರಂಗ ಪ್ರೀತಿ ಒಂದು ಹಿಡಿ ಹೆಚ್ಚಾಗದಿದ್ದರೆ ಕೇಳಿ..

 

‍ಲೇಖಕರು avadhi

March 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಪುಸ್ತಕಕ್ಕೆ ಒಳ್ಳೆಯ ಪ್ರವೇಶ ಕೊಟ್ಟಿದ್ದೀರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: