ಚೀನಿಯರ ನಾಡಿಗೆ ಕಾಸರಗೋಡು ಪ್ರವೇಶವಾಯ್ತು..

“ನೀವು ಕೇರಳದವ್ರು. ಕೇರಳದ ನೀರು ಕುಡಿದೇ ನೀವೆಲ್ಲ ಇಷ್ಟೊಂದು ಜೋರು ಆಗಿರೋದು”.  ಅಮ್ಮನ ಕ್ರಿಯೇಟಿವ್ ಬೈಗುಳಗಳಲ್ಲಿ ಇದೂ ಒಂದು. “ಕೇರಳ” ಅನ್ನುವ ಪದ ಅಮ್ಮನ ಬಾಯಿಂದ ಹೊರಬಿತ್ತೆಂದರೆ, ಅದು ಅಪ್ಪನಿಗೂ ಸೇರಿ ಮಂಗಳಾರತಿ ಎಂದೇ ಅರ್ಥ. ಯಾಕೆಂದ್ರೆ ಅಪ್ಪ ಹುಟ್ಟಿದ್ದು ಕೊಡಗಿನ ಭಾಗಮಂಡಲದಲ್ಲಿ. ಆದರೆ ಬೆಳೆದಿದ್ದು ಕಾಸರಗೋಡಿನ ಉಪ್ಪಳದ ಸಮೀಪದ ಕುಬಣೂರಿನಲ್ಲಿ. ಹಾಗಾಗಿ ಬೈಗುಳಗಳಲ್ಲಿ ಅಪ್ಪ – ಮಗಳಿಗೆ “ಕೇರಳ” ಪದ ಸಾಮಾನ್ಯ. ಹೇಗೋ ಮನವೊಲಿಸಿದಲ್ಲಿ ಅಮ್ಮನ ಕೋಪ ಕೊಂಚ ಸಮಯದಲ್ಲೇ ಶಾಂತವಾಗುತ್ತಿತ್ತು. ಅದು ಕೇರಳದ ಪ್ರಕೃತಿ ಸೌಂದರ್ಯದ ಹಾಗೆ.

ಕೂತಲ್ಲೇ ಈ ಫ್ಲ್ಯಾಶ್ ಬ್ಯಾಕ್ ಗೆ ಕಾರಣವಾಗಿದ್ದು, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ. ಅದು ಸಿಂಗಾಪುರದಲ್ಲಿ. ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ. ಚಿತ್ರ ಹಳೆಯ ಕಡತಕ್ಕೆ ಸೇರಿದ ಮೇಲೆ ಯಾವುದಾದರೂ ವೆಬ್‌ಸೈಟ್ ನಲ್ಲಿ ಬಂದಾಗ ಡೌನ್‌ಲೋಡ್ ಮಾಡಿ ನೋಡಿದರಾಯಿತು ಅಂದುಕೊಳ್ಳುತ್ತಿದ್ದೆ. ಆದರೆ ಇಷ್ಟು ಬೇಗ ಚೀನಿಯರ ನಾಡಿಗೆ ಕಾಸರಗೋಡು ಪ್ರವೇಶವಾಗುತ್ತೆ ಎಂಬ ಆಲೋಚನೆಯೂ ಇರಲಿಲ್ಲ.

ಶಾಪಿಂಗ್ ಗೆ ಆದ್ರೂ ಬೇರೆ ರಾಜ್ಯದಿಂದ ಬಂದಿರುವ ಗೆಳತಿಯರನ್ನು ಕರಿಯಬಹುದು. ಆದರೆ ಕನ್ನಡ ಸಿನಿಮಾಕ್ಕೆ ಪ್ರತ್ಯೇಕವಾಗಿ ಕನ್ನಡದವರನ್ನು ಮಾತ್ರ ವಿಚಾರಿಸಬೇಕು. ಆದರೆ ಹೆಚ್ಚಿನ ಫ್ರೆಂಡ್ಸ್ ಆ ದಿನ ಒಂದಲ್ಲಾ ಒಂದು ಕಾರಣದಿಂದ ಬಿಜ಼ೀ ಆಗಿದ್ದರು. ಆನ್‌ಲೈನ್ ಬುಕಿಂಗ್ ಕೂಡ ಹೌಸ್ ಫುಲ್ ಅನ್ನುವ ಸಂದೇಶ ಬೇರೆ ತೋರಿಸುತ್ತಾ ಇತ್ತು. ಸಿಂಗಾಪುರದಲ್ಲಿ ಕನ್ನಡ ಸಿನಿಮಾಗಳಿಗೆ ಇಷ್ಟೊಂದು ಡಿಮ್ಯಾಂಡ್ ಇದಿಯಾ ಅನ್ನಿಸಿತ್ತು. ಕಡೆ ಪಕ್ಷ ಸಿಂಗಾಪುರದಲ್ಲಿರುವ ಕನ್ನಡಿಗರನ್ನು ಆದ್ರೂ ನೋಡಬೇಕು ಅನ್ನುವ ಹಠದಲ್ಲಿ ಸಿನಿಮಾಕ್ಕೆ ಹೋಗೋ ನಿಲುವು ಗಟ್ಟಿ ಮಾಡಿಕೊಂಡೆ.

ತಮಾಷೆ ಅಂದ್ರೆ, ಇದಕ್ಕೂ ಮೊದಲು ನಾನು ಹಾಗೂ ಜಪಾನಿನಲ್ಲಿರುವ ನನ್ನ ಗೆಳತಿ ಸೇರಿ ಒಂದು ಒಪ್ಪಂದ ಮಾಡಿಕೊಂಡಿದ್ದೆವು. ಯಾರ ದೇಶಕ್ಕೆ ಈ ಮೂವಿ ಮೊದಲು ಬರುತ್ತೆ ಅಲ್ಲಿ ಹೋಗಿ ಸಿನಿಮಾ ನೋಡ್ತಾ ಪಾಪ್‌ಕಾರ್ನ್ ತಿನ್ನುತ್ತಾ ಹಂಗೆ ವಾಪಸ್, ವಿಮಾನ ಹತ್ತಿ ಬಿಡೋದು ಅಂತ. ಸಿಂಗಾಪುರಕ್ಕೆ ಬಂದ ೫ ವರ್ಷಗಳಲ್ಲಿ ಥೀಯೆಟೇರ್ ಗೆ ಹೋಗಿ ನೋಡಿದ ಮೊದಲ ಕನ್ನಡ ಸಿನಿಮಾ ಇದು.

ಈ ಸಿನಿಮಾದ ಮೇಲೆ ಅದೇನೋ ಸೆಳೆತ. ಎಷ್ಟಾದ್ರೂ ನಾವು ಇದ್ದ ಊರು ಕಾಸರಗೋಡು. ಮಲಯಾಳಿ ಉಚ್ಚಾರಣೆ ರೀತಿಯ ಕನ್ನಡ ಭಾಷೆಗಳು, ಅಲ್ಲಿನ ಜನರು, ಯಕ್ಷಗಾನ, ಹುಲಿ ವೇಷ ಹೀಗೆ ಹೈಟೆಕ್ ಸಿಟಿಯಲ್ಲಿ ಕೂತು ದೊಡ್ಡ ಪರದೆಯಲ್ಲಾದ್ರೂ ಒಮ್ಮೆ ನಮ್ಮ ಊರನ್ನು ನೋಡಬೇಕು ಅನ್ನಿಸಿತು. ಜೊತೆಗೆ ಈ ಸಿನಿಮಾದ ಹಾಡುಗಳು ಇಷ್ಟವಾಗಿದ್ದವು.

ಕೊನೆಗೂ ಥಿಯೇಟರ್ ಗೆ ಕಾಲಿಟ್ಟ ನಮಗೆ ಅಚ್ಚರಿಯೇ ಕಾದಿತ್ತು. ಜನವೇ ಜನ. ಇಂಗ್ಲೀಷ್ ಸಿನಿಮಾ ಹೋದಾಗ ಎಲ್ಲಾ ಪಂಗಡದ ಮುಖಗಳು ಕಾಣೋದು ಸಾಮಾನ್ಯ. ಆದರೆ ಇಲ್ಲಿ ಎಲ್ಲರೂ ಕನ್ನಡಿಗರು. ಕೆಲ ಮಕ್ಕಳು ಬಿಟ್ರೆ ಬಹುತೇಕರು ಕನ್ನಡನೇ ಮಾತಾಡ್ತಿದ್ರು. ಅಂದ ಹಾಗೆ ಭಾಷೆಯ ವಿಚಾರದಲ್ಲಿ ನಾವು ತುಂಬಾ ಮಡಿವಂತರು. ಕನ್ನಡದವರು ಅನ್ನೋದೇ ತೋರಿಸಿಕೊಳ್ಳೋದಿಲ್ಲ. ಅದೇನೋ ಮುಜುಗರವೋ, ಅವಮಾನವೋ. ಆದರೆ ಇಲ್ಲಿರುವ ಭಾರತದ ಇತರೇ ಭಾಷಿಕರಿಗೆ ಮಾತೃಭಾಷೆಯೇ ಜೀವಾಳ. ಅದೇನು ಒಗ್ಗಟ್ಟು ಅಂತೀರಾ. ಭಾಷೆಯ ವಿಚಾರದಲ್ಲಿ ಮಾತ್ರ ಕನ್ನಡಿಗರ ಮನಸ್ಸು ತುಂಬಾ ಹಿಂದೆ ಇದೆ ಅನಿಸೋದು.

ಥಿಯೇಟರ್ ಗೆ ಬಂದ ಕನ್ನಡಿಗರನ್ನು ನೋಡಿ  ಸಿಂಗಾಪುರದಲ್ಲಿ ಇಷ್ಟೊಂದು ಕನ್ನಡಿಗರು ಇದ್ದಾರಾ ಅಂದುಕೊಂಡೆ. ಕನ್ನಡ ಸಂಘದ ಬಗ್ಗೆ ತಿಳಿದಿದ್ದೆ. ಸದಸ್ಯತ್ವವನ್ನು ಪಡೆದಿದ್ದೆ. ಆದರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು ಒಂದೋ ಎರಡೋ ಅಷ್ಟೇ. ಹಾಗಾಗಿ ಇಲ್ಲಿ ಸೇರಿದ್ದ ಕನ್ನಡಿಗರನ್ನು ನೋಡಿ ಖುಷಿಯೂ ಆಯಿತು. ಜೊತೆಗೆ ಕುತೂಹಲ ಕೂಡ. ಸಿನಿಮಾ ಪ್ರಾರಂಭ ಆಗುತ್ತಿದ್ದಂತೆ  ಥಿಯೇಟರ್ ತುಂಬಾ ಕನ್ನಡಮಯವಾಗಿತ್ತು.

ಕನ್ನಡ ಸಂಘ ಸಿಂಗಾಪುರ ಹಾಗೂ ಸ್ಯಾಂಡಲ್‌ವುಡ್ ಟಾಕೀಸ್  ಸಿಂಗಾಪುರ ದೇಶಕ್ಕೆ ಈ ಸಿನಿಮಾ ತಲುಪಿಸುವಂತೆ ಮಾಡಿದ ರೂವಾರಿಗಳು. ಹಾಗೆ ನೊಡಿದರೆ ಇಲ್ಲೂ ಅನೇಕ ರು ಇದ್ದಾರೆ. ಕನ್ನಡ ಸಿನಿಮಾಗಳನ್ನು ನೋಡುವ ಭಾಗ್ಯವನ್ನು ಕಲ್ಪಿಸುವಂತೆ  ಮಾಡುವವರು. ಅದರಲ್ಲಿ ಸ್ಯಾಂಡಲ್‌ವುಡ್ ಸಿನಿ ಎಂಟರ್‌ಟೇನ್‌ಮೆಂಟ್  ಕೂಡ ಒಂದು. ಅಮೃತದಾರೆ ಸಿನಿಮಾ ವನ್ನು ಪ್ರಪ್ರಥಮ ಬಾರಿಗೆ ಸಿಂಗಾಪುರದಲ್ಲಿ ಪ್ರದರ್ಶನ ವನ್ನು ನೀಡಿ ತನ್ನ ಕಾರ್ಯವನ್ನು ಆರಂಭಿಸಿತು. ಕನ್ನಡ ಸಂಘದಂತೆ ಇದು ಕೂಡ ಕನ್ನಡಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.  ಕಳೆದ ೧೫ ವರ್ಷಗಳಿಂದ ೪೦ಕ್ಕೂ ಅಧಿಕ ಸಿನಿಮಾಗಳ ರಸದೌತಣವನ್ನು ನೀಡಿದೆ. ಈ ಮೂಲಕ ಸಿಂಗಾ ಪುರ- ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಆಗ್ನೇಯ ಏಷ್ಯಾದ ರಾಷ್ಟ್ರವಾದ ಸಿಂಗಾಪುರದಲ್ಲಿ ಭಾರತೀಯ ಚಿತ್ರಗಳ ಪ್ರದರ್ಶನಕ್ಕೆ ಕೆಲವೇ ರಂಗಮಂದಿರಗಳನ್ನು ಪ್ರತ್ಯೇಕವಾಗಿ ಮೀಸಲಿರಿಸಲಾಗಿದೆ. ರೆಕ್ಸ್ ಸಿನಿಮಾಸ್, ಕಾರ್ನಿವಲ್ ಸಿನಿಮಾಸ್ ಗಳಲ್ಲಿ ಭಾರತೀಯ ಚಲನಚಿತ್ರ ಪ್ರದರ್ಶನಗಳು ಹೆಚ್ಚಾಗಿ ನಡೆಯುತ್ತವೆ.

ಇತರೆ ಭಾಷೆಯ ಸಿನಿಮಾಗಳು ವಿದೇಶಿಗಳಲ್ಲಿ ಅದರಲ್ಲೂ ಸಿಂಗಾಪುರದಲ್ಲಿ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಅನ್ನುವ ಕುತೂಹಲಕ್ಕೆ ಈ ಮಾಹಿತಿ ನಿಮಗಾಗಿ. ಮೊದಲನೆಯ ಹಂತವಾಗಿ ಚಿತ್ರ ವಿತರಕ ಅಥವಾ ವೀಡಿಯೊ ಕಂಪೆನಿ ಚಲನಚಿತ್ರಗಳನ್ನು ವರ್ಗೀಕರಣಕ್ಕಾಗಿ ಬೋರ್ಡ್ ಆಫ್ ಫಿಲ್ಮ್  ಸೆನ್ಸಾರ್ ಗೆ ಸಲ್ಲಿಸುತ್ತದೆ. ಬಳಿಕ ಈ ಬಿಎಫ್ ಸಿ ಸಿನೆಮಾದ ವಿಷಯವನ್ನು ಮೌಲೀಕರಿಸುತ್ತಾ ವರ್ಗೀಕರಿಸುತ್ತದೆ. ವಿವಾದಾತ್ಮಕ ಶೀರ್ಷಿಕೆಗಳಿಗೆ ಈ ಬೋರ್ಡ್, ಫಿಲ್ಮ್ಸ್ ಕನ್ಸಲ್ಟೇಟಿವ್ ಪ್ಯಾನಲ್ {ಎಫ್ ಸಿ ಪಿ} ಯ ಜೊತೆ ವಿಚಾರಿಸುತ್ತದೆ. ಅಲ್ಲದೆ, ವರ್ಗೀಕರಣ ನಿರ್ಧಾರ ಮಾಡುವ ಮೊದಲು ಹೆಚ್ಚಿನ ಪ್ರತಿಕ್ರಿಯೆಗಳನ್ನು ಸಂಗ್ರಹಿಸುತ್ತದೆ. ಬಳಿಕ ಇದು, ಚಲನಚಿತ್ರ / ವೀಡಿಯೋ ರೇಟಿಂಗ್ ಬಗ್ಗೆ ವಿತರಕರು ಅಥವಾ ವೀಡಿಯೊ ಕಂಪೆನಿಗಳಿಗಳಿಗೆ ಮಾಹಿತಿಯನ್ನು ನೀಡುತ್ತದೆ. ಈ ರೇಟಿಂಗ್ ಅನ್ನು ಫಿಲ್ಮ್ ವಿತರಕರು ಸ್ವೀಕರಿಸಲುಬಹುದು ಅಥವಾ ಒಂದು ವೇಳೆ ಕಡಿಮೆ ರೇಟಿಂಗ್ ಗಳಿಸಿದ್ದಲ್ಲಿ ಸಿನಿಮಾ ಕಥೆಗೆ ಚ್ಯುತಿ ಬಾರದ ರೀತಿಯಲ್ಲಿ ಗುಣಮಟ್ಟ ಸುಧಾರಿಸುವ ಎಡಿಟಿಂಗ್ ಗೂ ಅವಕಾಶಗಳು ಇರುತ್ತವೆ.

ಇಲ್ಲಿನ ಇನ್ಫಾಕಾಮ್ ಮೀಡಿಯಾ ಡೆವೆಲಪ್‌ಮೆಂಟ್ ಅಥಾರಿಟಿ  { ಐಎಂಡಿಎ }  ಪ್ರತಿ ವರ್ಷ 13,000 ಕ್ಕಿಂತ ಹೆಚ್ಚು ಚಲನಚಿತ್ರಗಳನ್ನು ಮತ್ತು ವೀಡಿಯೊಗಳನ್ನು ವರ್ಗೀಕರಿಸುತ್ತದೆ. ಕೆಲವು ವರ್ಗಗಳ ವೀಡಿಯೊಗಳನ್ನು ಹೊರತುಪಡಿಸಿ, ಸಿಂಗಾಪುರದಲ್ಲಿ ವಿತರಿಸಲ್ಪಟ್ಟ ಮತ್ತು ಪ್ರದರ್ಶಿಸಿದ ಎಲ್ಲಾ ಚಲನಚಿತ್ರಗಳು ಮತ್ತು ವೀಡಿಯೊಗಳು ಫಿಲ್ಮ್ಸ್ ಆಕ್ಟ್ ಅಡಿಯಲ್ಲಿ ವರ್ಗೀಕರಣ ಮತ್ತು ಪ್ರಮಾಣಪತ್ರ ಪಡೆದಿರುತ್ತದೆ. ಜೊತೆಗೆ ಇಂತಹ ಕೆಲಸಗಳನ್ನು ಮಾಡುವ ವಿತರಕರು ಕೂಡ ಸರ್ಕಾರದಿಂದ ಪರವಾನಿಗೆ ಪತ್ರವನ್ನು ಹೊಂದಿರಬೇಕು.

ಮತ್ತೆ ಥಿಯೇಟರ್ ನೊಳಗೆ ಮನಸು ಹೊಕ್ಕಾಗ ಅದಾಗಲೇ ಸಿನಿಮಾ ಆರಂಭವಾಗಿತ್ತು. ಈ ಸಿನೆಮಾವನ್ನು ಪ್ರತಿಯೊಬ್ಬರು ಎಂಜಾಯ್ ಮಾಡಿದ್ದಾರೆ ಅನ್ನೋದಕ್ಕೆ ಆಗಾಗ ಕೇಳುತ್ತಿದ್ದ  ಚಪ್ಪಾಳೆಗಳು, ಸೀಟಿಗಳು, ನಗೆ ಹಬ್ಬದಂತಿದ್ದ ವಾತಾವರಣ ಸಾಕ್ಷಿಯಾಗಿತ್ತು.

ಕನ್ನಡವೇ ಬಾರದ ಗಂಡ ಹಾಗೂ ಮಗಳನ್ನು ಕರೆದುಕೊಂಡು ಹೋಗಿ ಸಿನೆಮಾ ನೋಡಿದ್ದು ನನ್ನ ಪಾಲಿಗಂತೂ ನಿಜಕ್ಕೂ ಬ್ರೇಕಿಂಗ್ ನ್ಯೂಸ್..! ಸಿನೆಮಾ ಅರ್ಥ ಆಗೋಕೆ ಪತಿರಾಯರು ಸಬ್ ಟೈಟಲ್ ಮೊರೆ ಹೋದರೆ, ಚಿಕ್ಕದು, ಎಲ್ಲರೂ ನಕ್ಕಿದರು ಹೇಳ್ಕೊಂಡು ಅದು ನಗ್ತಾ ಎಂಜಾಯ್ ಮಾಡಿ ತು. ಇಬ್ಬರಲ್ಲೂ ಸಿನಿಮಾ ಎಷ್ಟು ಅರ್ಥ ಆಯಿತು ಎಂದು ಕೇಳುವ ಪ್ರಯತ್ನಕ್ಕೆ ಮಾತ್ರ ಹೋಗಿಲ್ಲ. ಏನೇ ಆಗ್ಲಿ ಕೊನೆಯದಾಗಿ…

ಪ್ರವೀಣ…. ಥ್ಯಾಂಕ್ಸ್.. !!!

‍ಲೇಖಕರು avadhi

September 25, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: