ಈ ಮೇಲ್ ಐಡಿಯೂ ಇಲ್ಲದೆ ಇನ್ಫೋಸಿಸ್ ಗೆ ಹೋಗಿದ್ದೆ!

“Always present in the college, but not in the class ” ಎಂಬುದು ಡಿಗ್ರಿ ಕಾಲೇಜ್ ಗಳಲ್ಲಿ ತರಗತಿಗಳ ಸಮಯ ಮುಗಿದ ಮೇಲೂ ಕ್ಯಾಂಪಸ್ ನಲ್ಲೇ ಸುತ್ತಾಡುವ ವಿದ್ಯಾರ್ಥಿಗಳ ಧ್ಯೇಯ ವಾಕ್ಯ. ಇತ್ತೀಚಿನ ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳು ಬಂದಮೇಲೆ ಪದವಿ ತರಗತಿಗಳಲ್ಲೂ ಕಟ್ಟುನಿಟ್ಟಿನ ಹಾಜರಾತಿ ಬಂದಿದೆ ಅಷ್ಟೇ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಓದುತ್ತಿರುವಾಗ ನಾನು ಸ್ವತಃ ಈ ಧ್ಯೇಯ ವಾಕ್ಯವನ್ನು ಜಾರಿಯಲ್ಲಿಟ್ಟಿದ್ದೆ. ಇಂಗ್ಲಿಷ್ ಸಾಹಿತ್ಯದ ತರಗತಿಗಳು ಮಾತ್ರ ಮೊದಲ ಪೀರಿಯಡ್ ಇರುತ್ತಿದ್ದುದರಿಂದ ಅವುಗಳನ್ನು ತುಂಬಾ ಸೀರಿಯಸ್ ಆಗಿ ಅಟೆಂಡ್ ಮಾಡಿ ನಂತರ ಹಾಗೂ ಹೀಗೂ ಲೈಬ್ರರಿ, ಕ್ಯಾಂಟೀನ್, ಪಾರ್ಕ್ ಮತ್ತು ಚಾಟ್ ಸೆಂಟರ್ ಗಳ ಬಳಿಯಲ್ಲೇ ಕಳೆಯುತ್ತಿದ್ದವು. ಸಿನಿಮಾ, ನಾಟಕ , ಎನ್ ಎಸ್ ಎಸ್ ,ಎನ್ ಸಿ ಸಿ, ಸಕ್ಸಸ್ ಆಗದ ಟ್ರಿಪ್ ಪ್ಲಾನ್ ಗಳು ಬಗ್ಗೆ ನೆವೆರ್ ಎಂಡಿಂಗ್ ಇಲ್ಲದ ಚರ್ಚೆಗಳನ್ನು ಮಾಡುವ ಸಲುವಾಗಿ ಅಂತ ಸಮಯ ವಿನಿಯೋಗವಾಗುತ್ತಿತ್ತು.

ಹೀಗಾಗಿ ತರಗತಿಗಳ ಸಮಯ ಮೀರಿದಮೇಲೂ ನಾವು ಕ್ಯಾಂಪಸ್ ನಲ್ಲಿರುತ್ತಿದ್ದುದರಲ್ಲಿ ವಿಶೇಷವೇನಿರಲಿಲ್ಲ. ಆದರೆ ಹಾಗೆ ಇರುತ್ತಿದ್ದುದು ಕೇವಲ ಕಾಲಹರಣಕ್ಕಾದರೂ ಅದೊಂದು ದಿನ ಹಾಗೆ ಇದ್ದುದು ವೈಯುಕ್ತಿಕವಾಗಿ ನನಗೆ ಬಹಳ ದೊಡ್ಡ ಟರ್ನಿಂಗ್ ಪಾಯಿಂಟ್ (ಒಳಿತಿಗೋ ಕೆಡುಕಿಗೋ ಎಂಬುದು ಇನ್ನೂ ಅರ್ಥವಾಗಿಲ್ಲ) ಆಗುತ್ತದೆಂದು ಯಾವತ್ತೂ ಅನ್ನಿಸಿರಲಿಲ್ಲ. ಮಧ್ಯಾಹ್ನ ೩.೩೦ ರ ಸಮಯ. ಬಹುತೇಕ ವಿದ್ಯಾರ್ಥಿಗಳು ಕ್ಯಾಂಪಸ್ ಬಿಟ್ಟಾಗಿತ್ತು. ನಾನು ಮತ್ತು ಪ್ರಶಾಂತ್ ಸುಮ್ಮನೆ ತಿರುಗಾಡುತ್ತಿದ್ದೆವು. ಅಷ್ಟರಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಯಾಗಿದ್ದ ಡಾ. ಕುಂದನ್ ಬಸವರಾಜ್ ಅವರು ‘ಮಾವಲಿಯನ್ನು ಹುಡುಕಿಕೊಂಡು ಬನ್ನಿ’ ಎಂದು ಕೆಲವರಿಗೆ ಹೇಳಿದ್ದರಿಂದ ನನಗೆ ಸ್ನೇಹಿತರು ಬಂದು ಆ ವಿಷಯ ತಿಳಿಸಿದರು. ಯಥಾ ಪ್ರಕಾರ ನಾನವರ ಬಳಿ ಹೋದೆ . ಅಲ್ಲೊಬ್ಬ ಬೆಳ್ಳಗೆ ,ತೆಳ್ಳಗೆ ಚೀನಿಯವರಂತೆ ಕಾಣುವ ವ್ಯಕ್ತಿ ಪ್ರಾಂಶುಪಾಲರ ಕ್ಯಾಬೀನ್ ನಲ್ಲಿದ್ದ.

“ಇವರು ರಿಚರ್ಡ್ ವೆನ್ ‌. ಇನ್ ಫೋಸಿಸ್ ನಿಂದ ಬಂದಿದಾರೆ. ಕ್ಯಾಂಪಸ್ ಅಂಬಾಸಿಡರ್ ಪ್ರೋಗ್ರಾಮ್ ಗೆ ಅಂತ ಒಬ್ಬರನ್ನ ಸೆಲೆಕ್ಟ್ ಮಾಡೋಕೆ. ಕಾಮರ್ಸ್, ಸೈನ್ಸ್ ಲ್ಲೂ ಕೆಲವರನ್ನ ಬರೋಕ್ ಹೇಳಿದೀನಿ. ಇವರು ನಿಮ್ಮನ್ನು ಇಂಟರ್ ವ್ಯೂ ಮಾಡಿ ಒಬ್ಬರನ್ನು ಸೆಲೆಕ್ಟ್ ಮಾಡ್ತಾರೆ ” ಎಂದು ಕುಂದನ್ ಬಸವರಾಜ್ ಹೇಳಿದರು. ಸೆಂಟ್ರಲ್ ಲೈಬ್ರರಿಯಲ್ಲಿ ಆ ವಾರವಷ್ಟೇ ‘ಸುಧಾ’ ಪತ್ರಿಕೆಯಲ್ಲಿ ಬೆಂಗಳೂರಿನಲ್ಲಿ ತಲೆಯೆತ್ತಿರುವ ಬಿಪಿಓ ಕಂಪೆನಿಗಳ ಬಗ್ಗೆ ದೀರ್ಘ ಲೇಖನ ಓದಿದ್ದ ನನಗೆ, ಅಲ್ಲಿನ ಗ್ಲಾಸ್ ಬಿಲ್ಡಿಂಗ್‌ ಗಳು , ವಾರಕ್ಕೆ ಐದು ದಿನದ ಕೆಲಸ, ಡೋರ್ ಪಿಕಪ್ ಅಂಡ್ ಡ್ರಾಪ್, ಐದಂಕಿ ಸಂಬಳ, ಟ್ರಾನ್ಸಿಷನ್ ಟ್ರಿಪ್ ಮುಂತಾದ ಲಕ್ಸುರಿಗಳ ಬಗ್ಗೆ ಒಂದು ರೀತಿಯ ವ್ಯಾಮೋಹ ಹುಟ್ಟಿತ್ತು. ಅಂತ ಸಂದರ್ಭದಲ್ಲಿ ಬಂದ ಇಂತದ್ದೊಂದು ಅವಕಾಶ, ಆಸೆಯನ್ನು ಕ್ಷಣಾರ್ಧದಲ್ಲಿ ಚಿಗುರಿಸಿಬಿಟ್ಟಿತ್ತು.

ಆನಂತರ ಅಲ್ಲೇ ಪ್ರಿನ್ಸಿಪಲ್ ರೂಂ ನಲ್ಲೇ ಎಲ್ಲರನ್ನೂ ಕೂರಿಸಿ ರಿಚರ್ಡ್ ಪಟಪಟ ಇಂಗ್ಲಿಷ್ ನಲ್ಲಿ ಮಾತಾಡತೊಡಗಿದ. ಇಂಗ್ಲಿಷ್ ಮೇಜರ್ ವಿದ್ಯಾರ್ಥಿಯಾಗಿದ್ದ ನನಗೆ ಒಂದೇ ಒಂದು ಪರಿಪೂರ್ಣ ವಾಕ್ಯವನ್ನು ಇಂಗ್ಲಿಷ್ ನಲ್ಲಿ ಹೇಳಲು ಬರುತ್ತಿರಲಿಲ್ಲ. ಆದರೆ ಬೇರೆಯವರು ಮಾತಾಡಿದ್ದು ಚೆನ್ನಾಗಿಯೇ ಅರ್ಥವಾಗುತ್ತಿತ್ತು. ಯಾವುದೋ ಟಾಪಿಕ್ ಕೊಟ್ಟು ಗ್ರೂಪ್ ಡಿಸ್ಕಷನ್ ಮಾಡಿ ಅಂದ . ಕಾಲೇಜಿನ ಚರ್ಚಾಸ್ಪರ್ಧೆಗಳಲ್ಲಿ ನಾನು ಯಾವಾಗಲೂ ಭಾಗವಹಿಸುತ್ತಿದ್ದರಿಂದ ಸೈನ್ಸ್ ನ ಯಾವ ವಿದ್ಯಾರ್ಥಿಗಳು ಅಲ್ಲಿ ಇರದ ಕಾರಣ ನಾನೇ ಹೆಚ್ಚು ಇಂಗ್ಲಿಷ್ ಗೊತ್ತಿದ್ದವನು ಎಂಬ ಅಹಂನಿಂದ ನನ್ನದೇ ಹರಕು ಮುರುಕು ಇಂಗ್ಲಿಷ್ ನಲ್ಲಿ ಏನೇನೋ ಹೇಳಿದೆ. ಇತರರ್ಯಾರು ಏನೂ ಮಾತೇ ಆಡದ ಕಾರಣಕ್ಕೋ ಅಥವಾ ಕುಂದನ್ ಬಸವರಾಜ್ ಸರ್ ನನ್ನ ಬಗ್ಗೆ ಈಗಾಗಲೇ ಕೊಟ್ಟಿದ್ದ ಬಿಲ್ಡಪ್ ಗೋ ರಿಚರ್ಡ್‌ ನನ್ನನ್ನೇ ಅಂಬಾಸಿಡರ್ ಎಂದು ಸೆಲೆಕ್ಟ್ ಮಾಡಿದ. ವಾಸ್ತವ ಏನೆಂದರೆ ‘I was best among the rest.’

ಐರಾವತ ಬಸ್ಸಿಗೆ ಬುಕ್ ಮಾಡಿದ್ದ ಟಿಕೆಟ್ ಮತ್ತು ಸೆಲೆಕ್ಷನ್ ಆರ್ಡರ್ ಕೈಗಿತ್ತ ರಿಚರ್ಡ್, ‘ಶಿವಮೊಗ್ಗದಿಂದ ನ್ಯಾಷನಲ್ ಕಾಲೇಜಿನಲ್ಲಿ ಜಾಸ್ಮಿನ್ ಎಂಬ ಹುಡುಗಿಯೂ ಸೆಲೆಕ್ಟ್ ಆಗಿದ್ದಾಳೆ. ನೀವಿಬ್ಬರೂ ಮುಂದಿನವಾರ ಬೆಂಗಳೂರಿನ ಇನ್ ಫೋಸಿಸ್ ಕ್ಯಾಂಪಸ್ ಗೆ ಬರಬೇಕು. ಅಲ್ಲಿ ಒಂದು ತಿಂಗಳು Campus Ambassador Program ನಲ್ಲಿ ಭಾಗವಹಿಸಬೇಕು. ನೀವು ಮೆಜೆಸ್ಟಿಕ್ ನಲ್ಲಿ ಬಸ್ ಇಳಿದು ನನಗೆ ಫೋನ್ ಮಾಡಿ . ನಾನು ಕ್ಯಾಬ್ ಡ್ರೈವರ್ ನಂಬರ್ ಕೊಡ್ತೀನಿ. ಅವರು ನಿಮ್ಮಿಬ್ಬರನ್ನು ಪಿಕ್ ಮಾಡಿ ಕ್ಯಾಂಪಸ್ ಗೆ ಕರ್ಕೋಂಡ್ ಬರ್ತಾರೆ ‘ ಎಂಬರ್ಥ ಬರುವ ವಾಕ್ಯಗಳನ್ನು ತನ್ನದೇ ಶೈಲಿಯ ಇಂಗ್ಲಿಷ್ ನಲ್ಲಿ ರಿಚರ್ಡ್ ಒಂದೇ ಫ್ಲೋನಲ್ಲಿ ಹೇಳಿ, ‘ಸೀ ಯು ಅಟ್ ಇನ್ಫಿ ‘ ಎನ್ನುತ್ತಾ ಶೇಕ್ ಹ್ಯಾಂಡ್ ಮಾಡಿ ಹೊರಟು ಹೋದ.

ನನಗೋ ಇದು ಏನು ಪ್ರೋಗ್ರಾಂ ಎಂದೇ ಅರ್ಥವಾಗಲಿಲ್ಲ . ಒಂದು ಅಪಾಯಂಟ್ಮೆಂಟ್ ಲೆಟರ್ ಬೇರೆ ಕೊಟ್ಟು ಹೋಗಿದ್ದರಿಂದ ನನಗೆ ಇನ್ಫೋಸಿಸ್ ನಲ್ಲಿ ಕೆಲಸವೇ ಸಿಕ್ಕಿತೇನೋ ಅನ್ನುವಷ್ಟು ಖುಷಿಯಲ್ಲಿದ್ದೆ. ಎಲ್ಲರೂ ನನ್ನನ್ನು ಹಾಗೆಯೇ ಅಭಿನಂದಿಸಿದರು. ನಾನು ಊರಿಗೆ ಕಾಲ್ ಮಾಡಿ ಅದೇ ರೀತಿ ಹೇಳಿದೆ. ಆಗತಾನೆ‌ ಅಂಬೆಗಾಲಿಡುತ್ತಿದ್ದ ನಮ್ಮ ಪ್ರೀತಿಗೆ ಇದೊಂದು‌‌ ದೊಡ್ಡ ಸಹಾಯ ಎಂದೇ ಭಾವಿಸಿದೆ. ಪ್ರೇಮ ಕೂಡ ಖುಷಿ‌ಪಟ್ಟಳು. ತಥ್ ಎಂದು ಹುಟ್ಟುವ ಸನ್ನಿವೇಶಗಳು ಇಂಥದ್ದೇ ಅರ್ಥ ಹುಟ್ಟಿಸುತ್ತವೆ ಎನ್ನಲಾಗದು ನೋಡಿ. ಆಮೇಲೆ ನಾನು ಜಾಸ್ಮಿನ್ ಳ ನ್ನು ಸಂಪರ್ಕಿಸಿದಾಗ ಅವಳೇನು ಈ ಸೆಲೆಕ್ಷನ್ ಬಗ್ಗೆ ಅಷ್ಟಾಗಿ ಥ್ರಿಲ್ ಆಗಿದ್ದಂತೆ ಕಂಡುಬರಲಿಲ್ಲ. ಆದರೂ ‘ Experience the corporate while still in college ‘ಎಂಬ ಅಡಿಬರಹವಿದ್ದ ಆ ಪ್ರೋಗ್ರಾಂ ನಮ್ಮಂಥ ಸೆಕೆಂಡ್ ಲೈನ್ ಸಿಟಿ ಯಲ್ಲಿದ್ದವರನ್ನು ಅಟ್ರಾಕ್ಟ್ ಮಾಡುತ್ತಿದ್ದರಿಂದ ಅವಳೇನು ಅದಕ್ಕೆ ಅಪವಾದವಾಗಿರಲಲ್ಲ.

ಮುಂದಿನ ವಾರ ನಿಗದಿತ ದಿನದಂದು ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟು ,ಯಾರೋ ಮಾಡಿಸಿಕೊಟ್ಟ ಟಿಕೇಟ್ ಕೈಯಲ್ಲಿದ್ದಾಗ ಇದು ನಮ್ಮದೇ ಸೀಟು ಎಂದು ಖಾತರಿಯಾದಮೇಲೆ ಸಮಾಧಾನವಾಯ್ತು. ಬೆಳಿಗ್ಗೆ ಮೆಜೆಸ್ಟಿಕ್ ತಲುಪುತ್ತಿದ್ದಂತೆ ರಿಚರ್ಡ್ ಗೆ ಕಾಲ್ ಮಾಡಿದ ತಕ್ಷಣ ಪಿಕ್ ಮಾಡಲು ಡ್ರೈವರ್ ಬಂದ. ಎಷ್ಟು ಕರಾರುವಕ್ಕಾಗಿ ಎಲ್ಲ ನಡೆಯುತ್ತಿದೆಯಲ್ಲ ಎಂಬ ಆಶ್ಚರ್ಯ ನನಗಾಯಿತು. ಇಂಥಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕರೆ ಹೇಗಿದ್ದೀತು ? ಸಿಕ್ಕರೆ ಏನು ಸಿಕ್ಕೇ‌ ಸಿಗುತ್ತದೆ ಎಂಬ ದೃಢತೆಯಿಂದ ಯೋಚಿಸುತ್ತಿರುವಾಗಲೇ ಎಲೆಕ್ಟ್ರಾನಿಕ್ಸ್ ಸಿಟಿಯ ಕ್ಯಾಂಪಸ್ ತಲುಪಿದ್ದೆವು. ಕ್ಯಾಬ್ ನವನು ನಮ್ಮನ್ನು ಡ್ರಾಪ್ ಮಾಡಿದಾಗಲೇ ಗೊತ್ತಾಗಿದ್ದು ಅಲ್ಲಿ ನಮಗಿಂತ ಮುಂಚೆ ಏನಿಲ್ಲವೆಂದರೂ ನೂರು ಜನ ಸಾಲಿನಲ್ಲಿ ನಿಂತು ಸೆಕ್ಯುರಿಟಿ ಚೆಕಪ್ ಮಾಡಿಸಿಕೊಳ್ಳುತ್ತಾ ತಮ್ಮ ಡೀಟೇಲ್ಸ್ ವೆರಿಫಿಕೇಶನ್ ಮಾಡಿಸಿಕೊಂಡು ತಮಗೆ ಅಲಾಟ್ ಆಗಿದ್ದ ಡಾರ್ಮಿಟರಿ ರೂಂ ನಂಬರನ್ನು ತಿಳಿದುಕೊಂಡು ಹೋಗುತ್ತಿದ್ದರೆಂಬುದು. ಬೆಳಗಿನ ಜಾವ ೫.೩೦ಕ್ಕೆ ಇಷ್ಟೆಲ್ಲ ಕೆಲಸ ಒಂದು ಆಫೀಸಿನಲ್ಲಿ ನಡೀತದಾ ಎಂಬುದು ತಿಳಿದು ದಂಗಾದೆ. ಈ ರಿಚರ್ಡ್ ಬೇರೆ ಅಲ್ಲೆಲ್ಲೂ ಕಾಣುತ್ತಿರಲಿಲ್ಲ. ನನ್ನ ಮತ್ತು ಜಾಸ್ಮಿನ್ ಹೆಸರು ಅಲ್ಲಿರದಿದ್ದರೆ ಏನು ಮಾಡುವುದು ಎಂಬ ಭಯ. ನನ್ನ ಭಯ ಅನವಶ್ಯಕವಾಗಿತ್ತು. ಎಲ್ಲವೂ ಸುಸೂತ್ರವಾಗಿ ನಡೆಯಿತು.

ನನ್ನ ಭಯಕ್ಕೆ ನಿಜವಾದ ವೇದಿಕೆ ಸಿದ್ಧವಾಗಿದ್ದು ಮರುದಿನ . ಇಂಡಕ್ಷನ್ ಗೆಂದು ಈ ಪ್ರೋಗ್ರಾಂ ಗೆ ಬಂದವರನ್ನೆಲ್ಲ- ಅವರ ಪ್ರಕಾರ ನಾವೆಲ್ಲ ನಮ್ಮ ನಮ್ಮ ಪ್ರತಿಷ್ಠಿತ ನಗರಗಳ , ಪ್ರಖ್ಯಾತ ಕಾಲೇಜುಗಳಿಂದ ಆಯ್ಕೆಯಾದ ಅಂಬಾಸಿಡರ್ ಗಳಾಗಿದ್ದೆವು- ದೊಡ್ಡ ಆಡಿಟೋರಿಯಂ ನಲ್ಲಿ ನಮ್ಮನ್ನೆಲ್ಲ ಕೂರಿಸಿದರು. ಆ ಕ್ಯಾಂಪಸ್ ನೋಡಿಯೇ ಹೌಹಾರಿದ್ದ ನಾನು ಅಲ್ಲಿನವರು ಮಾತನಾಡುತ್ತಿದ್ದ ಇಂಗ್ಲಿಷ್ ಗಂತೂ ಹೆದರಿಹೋಗಿದ್ದೆ. ನನಗೆ ಅಷ್ಟಾಗಿ ಇಂಗ್ಲಿಷ್ ಬಾರದು ಎಂಬ ಕಾರಣಕ್ಕೋ‌ ಏನೋ ಜಾಸ್ಮಿನ್ ಕೂಡ ನನ್ನ ಜೊತೆ ಆಡಿಟೋರಿಯಂ ನಲ್ಲಿ ಕೂರಲಿಲ್ಲ. ನಾನು ಕೊನೆಯ ಸಾಲಿನಲ್ಲಿ‌ ಹೋಗಿ ಕೂತೆ. ಒಬ್ಬನೇ ಅಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಹುಬ್ಬಳ್ಳಿಯ ಕಾಲೇಜಿನಿಂದ ಬಂದಿದ್ದ ಗೈಬು ಷಾ ಎಂಬಾತ ನನ್ನ ಪಕ್ಕ ಕೂತು ‘ Are you from Karnataka ?’ ಎಂದ. ಇದುವರೆಗೂ ಇಂತಹ ಪ್ರಶ್ನೆ ನನಗೆಂದೂ ಎದುರಾಗಿರದ ಕಾರಣ ತಕ್ಷಣ ಗಾಬರಿಯಾದೆ‌. ಆಮೇಲೆ ಇಲ್ಲಿ ಇಡೀ ಭಾರತದ ರಾಜ್ಯಗಳಿಂದ ಬಂದಿರುವ 123 ಅಂಬಾಸಿಡರ್ ಗಳಿರುವುದರಿಂದ ಈ ರೀತಿಯ ಪ್ರಶ್ನೆ ಅನಿವಾರ್ಯವೇನೋ‌ ಎಂದು ಸಮಾಧಾನ ಮಾಡಿಕೊಂಡೆ.

ಆದರೆ ಈಗ ಈ ಪ್ರಶ್ನೆ ಸರ್ವೇಸಾಮಾನ್ಯ ವಾಗಿದ್ದರೂ ನನಗೇನೂ ಅನ್ನಿಸುವುದಿಲ್ಲ. ಯಾರೋ ಒಬ್ಬ ಎಚ್ ಆರ್ ವಿಂಗ್ ನ ಸೀನಿಯರ್ ಮ್ಯಾನೇಜರ್ ನಮ್ಮನ್ನು ಅಲ್ಲಿ ಕರೆಸಿರುವುದು , ಭಾರತದಲ್ಲಿ ಹೊಸದಾಗಿ ಬೆಳೆಯುತ್ತಿರುವ BPO ಉದ್ಯಮದ ಬಗ್ಗೆ , ಅದು ಸೃಷ್ಟಿಸುವ ಬೃಹತ್ ಸಂಖ್ಯೆಯ ಉದ್ಯೋಗವಕಾಶಗಳ ಬಗ್ಗೆ ,ಅಲ್ಲಿರುವ Growth Prospective ಗಳ ಬಗ್ಗೆ PPT ಬಳಸಿ ಸವಿಸ್ತಾರವಾಗಿ ವಿವರಿಸದರು( ನನಗೆ ಎಷ್ಟರ ಮಟ್ಟಿಗೆ ಅರ್ಥವಾಗಿತ್ತು ಆ ಹೈಫೈ ಇಂಗ್ಲಿಷ್ ಎಂಬುದನ್ನು ಮತ್ತೆ ಹೇಳಲಾರೆ. ಅದರ ಜೊತೆ ಆತ ಹೇಳಿದ ಪ್ರಕಾರ ನಮ್ಮನ್ನು ಅಲ್ಲಿ ಮುಂದಿನ ಒಂದು ತಿಂಗಳ ಕಾಲ ಊಟ-ತಿಂಡಿ ಕೊಟ್ಟು, ಎಲ್ಲ ಕಂಫರ್ಟ್ ಗಳನ್ನು ಕೊಟ್ಟು ಕ್ಯಾಂಪಸ್ ನಲ್ಲಿಟ್ಟುಕೊಳ್ಳುತ್ತಾರೆ. ಆ ನಡುವೆ ಮೈಸೂರಿನ ಕ್ಯಾಂಪಸ್ ಗೂ ಕರೆದೊಯ್ದು ಅಲ್ಲಿ ಒಂದು ವಾರ ಟ್ರೈನಿಂಗ್ ಕೊಡಿಸುತ್ತಾರೆ. ಜಗತ್ತಿನ ಎಲ್ಲಾ MNC ಗಳ ಬಗ್ಗೆ ಒಂದು ಸ್ಪಷ್ಟ ಮಾಹಿತಿ ನೀಡುತ್ತಾ , ನಾವು ವಾಪಾಸ್ ನಮ್ಮ ನಮ್ಮ ನಗರಗಳಿಗೆ ಹೋಗಿ Infosys BPO Ltd ಮತ್ತು General ಆಗಿ ಈ ಇಂಡಸ್ಟ್ರಿಯ ಬಗ್ಗೆ Awareness( ಅವರು ಈ ಪದವನ್ನು Canvass ಪದದ ಬದಲಾಗಿ ಬಳಸುತ್ತಿದ್ದರು ಎಂದು ನನಗೀಗ ಅನ್ನಿಸುತ್ತದೆ) ಮೂಡಿಸಬೇಕು . ಅದಾದ ಮೇಲೆ ಅವರು ನಮ್ಮ ಊರುಗಳಿಗೆ ಬಂದು ದೊಡ್ಡ ಕ್ಯಾಂಪಸ್ ಇಂಟರ್ ವ್ಯೂ ನಡೆಸುತ್ತಾರೆ ಮತ್ತು ಅದರಿಂದ ಸಾವಿರಾರು ಪದವೀಧರರಿಗೆ ಉದ್ಯೋಗ ಸಿಗುವಂತೆ ಮಾಡುತ್ತದೆ. ಕೇವಲ ವೃತ್ತಿಪರ ಕೋರ್ಸುಗಳಿಗಲ್ಲದೆ ಇಂತಹ Generic Degree ಗಳಿಗೂ ಕ್ಯಾಂಪಸ್ ಸೆಲೆಕ್ಷನ್ ಸೃಷ್ಟಿ ಮಾಡುತ್ತಿರುವುದು ಇನ್ ಫೋಸಿಸ್ ನ ಹೆಗ್ಗಳಿಕೆಯೆಂಬುದು ಅವರೆಲ್ಲರ ಮಾತುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಷೇಕ್ಸ್‌ಪಿಯರ್, ಜಾನ್ ಡನ್, ಸಾಮ್ಯುಯೆಲ್ ಬೆಕೆಟ್ ,ಚೆಕಾಫ್ ನಂಥವರನ್ನು ಅಭ್ಯಾಸ ಮಾಡುತ್ತಿದ್ದ ನನಗೂ ಇದಕ್ಕೂ ಏನಾದರೂ ಸಂಬಂಧ ಇದೆಯಾ ಎಂದು ಯೋಚಿಸುತ್ತಿದೆ. ಆಗ ಶುರುವಾಯಿತು‌ ನೋಡಿ ಒಬ್ಬೊಬ್ಬರಾಗಿ ತಮ್ಮ ಊರಿನ ಬಗ್ಗೆ, ಕಾಲೇಜಿನ ಬಗ್ಗೆ , ತಮ್ಮ ಜಿಲ್ಲೆಯ ವಿಶೇಷತೆಯ ಬಗ್ಗೆ ಹೇಳಿಕೊಂಡು ತಮ್ಮ ಪರಿಚಯ ಮಾಡಿಕೊಳ್ಳುವ ಕಾರ್ಯಕ್ರಮ. ನಾನು ಕೊನೇ ಸಾಲಿನಲ್ಲಿ ಕೂತಿದ್ದು ತುಂಬಾ ಉಪಯುಕ್ತವಾಯಿತು. ಅಲ್ಲಿದ್ದವರೆಲ್ಲ ಬಹುತೇಕ ಇಂಗ್ಲಿಷ್ ಮೀಡಿಯಂ ನವರಾಗಿದ್ದು ಸಲೀಸಾಗಿ ಮಾತನಾಡುತ್ತಿದ್ದರೆ,ನನಗೆ ನನ್ನ ಕಾಲೇಜು ,ಶಿವಮೊಗ್ಗ, ಜೋಗ್ ಫಾಲ್ಸ್ , ಕುವೆಂಪು, ಅನಂತಮೂರ್ತಿ, ಲಂಕೇಶ್- ಇವನ್ನೆಲ್ಲ ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕೆಂಬ ಆಸೆಯೇನೋ ಇತ್ತು ಆದರೆ ಅಷ್ಟೊಂದು ಮಾಹಿತಿಯನ್ನು ತಡವರಿಸದೆ ಇಂಗ್ಲಿಷ್ ನಲ್ಲಿ ಹೇಳಬೇಕಲ್ಲ ಎಂದು ನೆನೆದಾಗ ಭಯವಾಗಿ , ನನ್ನ ಮತ್ತು ಕಾಲೇಜಿನ ಹೆಸರು ಹೇಳಿ ,My place is near to Jog Falls ಎಂಬ ಕೊನೇ‌ಸಾಲು ಹೇಳಿ ಕೂತೆ. ಕೆಲವರು Awesome ಎಮ್ನುತ್ತಾ ಚಪ್ಪಾಳೆ ತಟ್ಟಿದ್ದು ಕೇಳಿತು. ಯಾವುದೆಲ್ಲ ನಮ್ಮದಾಗುತ್ತದೆ ಎಂದು ತಿಳಿಯುವುದೇ ಅಂಥ ಸಂದರ್ಭಗಳಲ್ಲಿ ಅಲ್ಲವೆ ? ಅವತ್ತಿಗೆ ಆಸಮ್ ಎಂಬುದು ನನ್ನ ಶಬ್ದಕೋಶವನ್ನು ಮೊದಲ ಸರಿ ಪ್ರವೇಶಿಸಿತ್ತು.

ಬೆಳಿಗ್ಗೆ ಗಡಿಬಿಡಿಯಲ್ಲಿ ನನ್ನ ರೂಮ್ ಮೇಟ್ ಯಾರು ? ಏನು ? ಎತ್ತ ? ಎಂಬುದನ್ನೆಲ್ಲ ತಿಳಿದುಕೊಳ್ಳಲಾಗಿರಲಿಲ್ಲ. ಆ ಸಂಜೆ ರೂಂ ಗೆ ಬಂದಾಗ ತನಯ್ ಟವಲ್ ಉಟ್ಕೊಂಡು ಮಕಾಡೆ ಮಲ್ಗಿದ್ದ. ಅವನದ್ದು ಕೋಲ್ಕತ್ತ. ಇದು ನನಗೆ ಮತ್ತೊಂದು ಶಿಕ್ಷೆ . ನನಗೆ ಹಿಂದಿಯೂ ಮಾತಾಡುವಷ್ಟು ಬರುತ್ತಿರಲಿಲ್ಲ . ಹಾಗಾಗಿ ಇಂಗ್ಲಿಷ್ ನಲ್ಲಿಯೇ ಮಾತಾಡುವುದು ಅನಿವಾರ್ಯವಾಗಿತ್ತು. ಮೊದಮೊದಲು ಭಯವೇ ಆಗುತ್ತಿತ್ತು. ಒಂದು ತಿಂಗಳು ಕಳೆಯುವಷ್ಟರಲ್ಲಿ ಒಂದು ಕಾಮನ್ ಡೊಮೆಸ್ಟಿಕ್ ಲಾಂಗ್ವೇಜ್ ನಮ್ಮಿಬ್ಬರಲ್ಲಿ ಹುಟ್ಟಿಕೊಂಡಿತ್ತು ಬಿಡಿ.
ನಾನು ಆಗಾಗ ಊರಿಗೆ ಮತ್ತು ಪ್ರೇಮಗೆ ಫೋನ್ ಮಾಡಿ ಇಲ್ಲೆಲ್ಲ ಬರೀ ಇಂಗ್ಲಿಷ್ ಅಂತ ಹೇಳಿ ಸ್ಕೋಪ್ ತೆಗೆದುಕೊಳ್ಳುತ್ತಿದ್ದೆ‌ . ಆದರೆ ನಮಗೆ ಕೊಟ್ಟ ಚಟುವಟಿಕೆಗಳನ್ನು ಮಾಡವಾಗೆಲ್ಲ ನಾನು ಕೀಳರಿಮೆಯಿಂದ ಹಿಂಜರಿಯುತ್ತಿದ್ದುದು ಕೇವಲ ಭಾಷೆಯ ಕಾರಣಕ್ಕೆ. ಮೂರು ವರ್ಷಗಳ ಇಂಗ್ಲಿಷ್ ಸಾಹಿತ್ಯದ ಓದು ನಮ್ಮನ್ನೇಕೆ ಭಾಷೆಯಲ್ಲಿ ಪರಿಣಿತರನ್ನಾಗಿ ಮಾಡಲಿಲ್ಲ ಅಥವಾ ಮಾಡುತ್ತಿಲ್ಲ ಎಂಬ ಪ್ರಶ್ನೆ ನನ್ನನ್ನು ಆ ದಿನಗಳಲ್ಲಿ ಬಹುವಾಗಿ ಕಾಡಿತ್ತು.

ಹೇಗೋ ಇಂತಹ ದುಸ್ಸಾಹಸಗಳಿಂದಲೇ ಒಂದು ತಿಂಗಳು ಕಳೆದದ್ದು ತಿಳಿಯಲಿಲ್ಲ. ಕೊನೆಯ ದಿನ ನಾವು ಮಾಡಬೇಕಾದ ಫಾಲೋ ಅಪ್ ಬಗ್ಗೆ ಮಾಹಿತಿ ನೀಡಿದ ನಂತರ ನಮ್ಮ ನಮ್ಮ ಕೋಆರ್ಡಿನೇಟರ್ ಬಳಿ ಈ ಮೇಲ್ ಐಡಿ ಕೊಟ್ಟು ಹೋಗಬೇಕಿತ್ತು. ಅದಕ್ಕೆ ಅವರು ಒಂದು PPT ಗೆ ಬೇಕಾದ ಎಲ್ಲ ದಾಖಲೆಗಳನ್ನು ಕಳುಹಿಸುವವರಿದ್ದರು. ರಿಚರ್ಡ್ ಬಂದು ಈ ಮೇಲ್ ಐಡಿ ಕೇಳಿದ. ನಾನು ಮೀನಾಕ್ಷಿ ಭವನದ ಮೇಲಿದ್ದ ಕಂಪ್ಯೂಟರ್ ಸೆಂಟರ್ ಗೆ ಸೇರಿದ್ದೇನೋ ನಿಜ. ಆದರೆ ಅವನು 500ರೂಪಾಯಿ ಕೇಳಿದ ಕಾರಣಕ್ಕೆ ಎರಡೇ ದಿನಕ್ಕೆ ಬಿಟ್ಟಿದ್ದೂ ಅಷ್ಟೇ ನಿಜ. ಹಾಗಾಗಿ ಕಂಪ್ಯೂಟರ್ , ಈ ಮೇಲ್ ಇವುಗಳಲ್ಲಿ ನನಗೆ ಏನೂ ತಿಳಿದಿರಲಿಲ್ಲ. ‘I don’t have e mail id Richard. I will create new one and send it to you’ ಎನ್ನುವಷ್ಟು ಮಟ್ಟಕ್ಕೆ ಒಂದು ತಿಂಗಳಲ್ಲಿ ನನ್ನ ಇಂಗ್ಲಿಷ್ ಬಂದಿತ್ತು . ಈ ಮೇಲ್ ಐಡಿಯೂ ಇಲ್ಲದ ಈ ದುರಾತ್ಮನನ್ನು ಅದ್ಹೇಗೆ ಕ್ಯಾಂಪಸ್ ಅಂಬಾಸಿಡರ್ ಆಗಿ ಸೆಲೆಕ್ಟ್ ಮಾಡಿಬಿಟ್ನಲ್ಲ ಎಂಬಂತೆ ಒಂದು ಲುಕ್ಕು ಕೊಟ್ಟ ರಿಚರ್ಡ್ ,’ OK, you have my cell number no? Text me your mail id ‘ಎಂದು ಹೇಳಿ ಬೀಳ್ಕೊಟ್ಟ. ವಾಪಾಸ್ ಶಿವಮೊಗ್ಗ ಬರುವಾಗ ಅವರೇನು ನಮಗೆ ಟಿಕೆಟ್ ಬುಕ್ ಮಾಡಿರಲಿಲ್ಲ. ಜಾಸ್ಮಿನ್ ಕೂಡ ನನ್ನೊಡನೆ ಬರಲಿಲ್ಲ . ಒಂದೇ ಊರಿಂದ ಹೋದವರು ಪರಸ್ಥಳದಲ್ಲಿ ತಂತಮ್ಮ ಆದ್ಯತೆಯ ಮೇರೆಗೆ ಅಪರಿಚಿತರಂತಾಗಿಬಿಡುತ್ತಾರಲ್ಲವೆ ?

ಶಿವಮೊಗ್ಗಕ್ಕೆ ಬಂದವನು ಮಾಡಿದ ಮೊದಲ ಕೆಲಸ ಎಂದರೆ ಗೆಳೆಯ ಕೀರ್ತಿ ಶಂಕರಘಟ್ಟ ( ಈಗಿವನು ಕಿರಿಕ್ ಕೀರ್ತಿ ಎಂದೇ ಫೇಮಸ್) ನನ್ನು ಕರೆದುಕೊಂಡು ಹೋಗಿ ,ಗೋಪಿ ಸರ್ಕಲ್ ಬಳಿಯ ಸೈಬರ್ ಸೆಂಟರ್ ನಲ್ಲಿ ನನಗೊಂದು ಈ ಮೇಲ್ ಐಡಿ ಕ್ರಿಯೇಟ್ ಮಾಡಿಕೊಡು ಎಂದು ದುಂಬಾಲು ಬಿದ್ದೆ. ಅವನು ಆಗಲೇ ಇದರಲ್ಲೆಲ್ಲ ಎಕ್ಸಪರ್ಟ್ ಆಗಿದ್ದ. ಹಾಗೆ ಅವನು 2006 ರಲ್ಲಿ ಕ್ರಿಯೇಟ್ ಮಾಡಿಕೊಟ್ಟ [email protected] ಈ ಮೇಲ್ ಐಡಿಯೇ ನನ್ನ ಪರ್ಮನೆಂಟ್ ಈ ಮೇಲ್ ಐಡಿಯಾಯ್ತು. ಭಾರತದಾದ್ಯಂತ ಬಂದಿದ್ದ ನೂರಿಪ್ಪತ್ಮೂರು ಅಂಬಾಸಿಡರ್ ಗಳಲ್ಲಿ ಈ ಮೇಲ್ ಐಡಿಯೂ ಇಲ್ಲದೆ ಆ ಕ್ಯಾಂಪಸ್ ಗೆ ಹೋಗಿದ್ದ ಬೆರಳೆಣಿಕೆಯ ಗಾಂಪರ ಗುಂಪಿಗೆಲ್ಲ ಪ್ರಾಯಶಃ ನಾನೇ ಟೀಮ್ ಲೀಡರ್ ಆಗಿದ್ದೆನೇನೋ. ಇದಾದ ಮೇಲೆ ನಮ್ಮ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ ನಡೆದಾಗ ಸುಮಾರು ೬೫೦ ಕ್ಕೂ ಹೆಚ್ಚು ಜನಕ್ಕೆ ಕೆಲಸ ಸಿಕ್ಕಿತ್ತು. ಅದಕ್ಕೆಲ್ಲ ನಾನು ಅಂಬಾಸಿಡರ್ ಆಗಿದ್ದೇ ಕಾರಣ ಎಂದುಕೊಳ್ಳುವಷ್ಟು ಹುಂಭ ನಾನಲ್ಲ.

ತದನಂತರ ನಾನೂ ಇನ್ ಫೋಸಿಸ್ ನಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲಿನ ಮೂರು ವರ್ಷಗಳ ಅನುಭವ ಮತ್ತೊಂದು ರೀತಿಯದ್ದು. ಆಗ ಆದ ಕಲ್ಚರಲ್ ಶಾಕ್ ಗಳ ಬಗ್ಗೆ ಮತ್ತೆ ಯಾವಾಗಲಾದರೂ ಬರೆದೇನು. ಸದ್ಯಕ್ಕೆ ಇಷ್ಟುಬ ಸಾಕು.

* * * * * * * * * *

ಕೆಲದಿನಗಳ ಹಿಂದೆ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈ ಓವರ್ ಮೇಲೆ ಗಾಡಿ ಓಡಿಸುತ್ತಾ , ಬಲಕ್ಕೆ ತಿರುಗಿದೆ . ನಾನು ಕೆಲಸ ಮಾಡುತ್ತಿದ್ದ ಬಿಲ್ಡಿಂಗ್ ನಂಬರ್ ೨೮ ಮತ್ತು ಟೈಟಾನಿಕ್ ಬಿಲ್ಡಿಂಗ್ ( ಪಾರ್ಕ್ ಫೈವ್ ಎಂದೂ ಕರೆಯಲಾಗುವ) ಕಣ್ಣಿಗೆ ಬಿದ್ದವು . ಅವತ್ತಿಂದ ಈ ನೆನಪುಗಳೆಲ್ಲ ಒತ್ತರಿಸಿ ಬಂದವು. ಬರೆದುಕೊಂಡಿದ್ದೇನೆ. You can simply reject it .

‍ಲೇಖಕರು avadhi

September 25, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. ಮಮತ

    ಆ ದಿನಗಳ ಅದೇ ಮುಗ್ಧತೆ ಬರಹದಲ್ಲಿ ರಾಚುತ್ತದೆ . ಅದೇ ಅಮಾಯಕ ದಿನಗಳು
    ಸೇಮ್ ಪಿಂಚ್.. ( ಅಮಾಯಕತೆ, ಮುಗ್ಧತೆಗೆ )
    ತುಂಬಾ ಚನ್ನಾಗಿದೆ

    ಪ್ರತಿಕ್ರಿಯೆ
  2. vasu

    ಚೆನ್ನಾಗಿ ಬರೆದಿದ್ದೀರಿ.ನಮಗೆ ಯಾವ ಜಾಗ ಸರಿಹೊಂದತ್ತೋ ನಮ್ಮನ್ನು ಯಾವುದು ಆವರಿಸಿಕೊಳ್ಳುತ್ತದೋ ಅದೊಂದು ನಿಜಕ್ಕೂ ನಿಗೂಢವೇ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: