ಚೀನಾ ಮುಂದೆ..ಮುಂದೆ..

ಇಂಗ್ಲಿಷ್ ಅರಿಯದೆ ಚೀನೀಯರು ಇಂದು ವಿಶ್ವ ಮಾನ್ಯರು

ಡಾ. ಇಂದಿರಾ ಹೆಗ್ಗಡೆ

ಭಾಷೆ ಸಂವಹನ -ಮಾಧ್ಯಮ ಆದರು ಕೂಡಾ ಭಾಷೆಗಿಂತ ಮುಖ್ಯವಾದುದು ಮಾನವನಲ್ಲಿಯ ಕ್ರಿಯಾಶೀಲತೆ ಮತ್ತು ಸವಾಲನ್ನು ಸ್ವೀಕರಿಸುವ ಗುಣ. ಆಸ್ಟ್ರೇಲಿಯಾ, ನ್ಯೂಯಾರ್ಕ್ ಮತ್ತು ಕೆನಡಾ ನಗರಗಳಲ್ಲಿ ದುಡಿಯುವ ಚೀನೀಯರನ್ನು ಕಂಡು ನನಗನಿಸಿದ್ದ ಭಾವನೆ ಇದು.

ಭಾರತದಲ್ಲಿ ಇಂಗ್ಲಿಷ್ ಭಾಷೆಗೆ ಬಹಳ ಆದ್ಯತೆ ನೀಡಲಾಗುತ್ತದೆ. ಇಂಗ್ಲಿಷ್ ಮಾತನಾಡದವರನ್ನು ಕೀಳರಿಮೆಗೆ ತಳ್ಳುವಷ್ಟು ಇಂಗ್ಲಿಷ್ ಭಾಷೆ ಭಾರತೀಯರ ಮೇಲೆ ಪ್ರಭಾವ ಬೀರಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದಲಾಗದವರಿಗೆ ಭವಿಷ್ಯ ಇಲ್ಲ ಎಂಬಂತಹ ಸ್ಥಿತಿ ಇಂದು ನಿರ್ಮಾಣ  ಆಗಿದೆ. ಆದ್ದರಿಂದ ಕಸ ಮುಸುರೆ ತಿಕ್ಕುವ ನಗರದ ಮಹಿಳೆಯರು ತಮ್ಮ ದುಡಿಮೆಯನ್ನು ಮಕ್ಕಳ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ವ್ಯಯಿಸುತ್ತಾರೆ. ಕರ್ನಾಟಕದ ಒಳನಾಡಿನ ಹಳ್ಳಿಗಳವರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಬೇಡಿಕೆ ಏರುಮುಖವಾಗಿದೆ. ಕನ್ನಡ ಮಾಧ್ಯಮದ ಶಾಲೆಗಳಿಗೆ ಬೇಡಿಕೆ ಇಲ್ಲವಾಗಿದೆ. ಪರಿಣಾಮವಾಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ವ್ಯಾಪಾರಿಕೇಂದ್ರಗಳಾಗಿವೆ. ಇಂಗ್ಲಿಷ್ ಭಾಷೆ ಹಣಮಾಡುವ ಭಾಷೆ ಎಂಬ  ಭ್ರಮೆ ಜನರಲ್ಲಿ ಮೂಡುವಂತಾಗಿದೆ.

ಹೀಗೆ ಮಾನವನ ಅಭಿವೃದ್ಧಿ ಇಂಗ್ಲಿಷ್ ಭಾಷೆಯಿಂದ ಮಾತ್ರ ಸಾಧ್ಯ ಎಂಬ ಭಾವನೆ ಸಾರ್ವತ್ರಿಕವಾಗಿದೆ.  ಅದರಲ್ಲೂ ಕರ್ನಾಟಕದಲ್ಲಿ ಬಹಳವಾಗಿ ಇಂಗ್ಲಿಷ್ ಭಾಷೆ ಕಲಿಯದಿದ್ದರೆ ಮಕ್ಕಳಿಗೆ ಭವಿಷ್ಯವೇ ಇಲ್ಲ ಎಂಬ ಬೊಬ್ಬೆ  ಕೇಳುತ್ತಿದೆ. ಆದರೆ ಇಂಗ್ಲಿಷ್ ಭಾರದ ಚೀನೀಯರು  ಇಂದು ಹೊಂದಿದ  ಅಭಿವೃದ್ಧಿ ಕಂಡು ಅಮೆರಿಕ ಮೊದಲ್ಗೊಂಡು ವಿಶ್ವವೇ ಬೆರಗು ಪಡುತ್ತಿದೆ. ಇಂಗ್ಲಿಷ್ ಅರಿಯದ ಚೀನೀಯರು ಇಂತಹ ಅಭಿವೃದ್ಧಿಯನ್ನು ಹೇಗೆ ಸಾಧಿಸಿದರು?

ಅಮೆರಿಕದಾಲ್ಲಿ ನ್ಯೂಯಾರ್ಕ್ ಟೈಮ್ ವೃತ್ತದಲ್ಲಿ,  ಕೆನಡಾದ ಟೊರೆಂಟೋದಲ್ಲಿ, ಆಫ್ರಿಕಾದಲ್ಲಿ ಬ್ರೆಜಿಲ್ ನಲ್ಲಿ-ಹೀಗೆ ವಿಶ್ವದ ಪ್ರುಮುಖ ನಗರಗಳಲ್ಲಿ ಬರೇ ಚೀನೀ ಭಾಷೆ ಒಂದನ್ನು ಅರಿತಿರುವ ಚೀನಿಯರು ಹೇಗೆ ವ್ಯಾಪಾರ ಮಾಡುತ್ತಾರೆ? ತಮ್ಮಲ್ಲಿರುವ ಅಪಾರ ಮಾನವ ಸಂಪನ್ಮೂಲವನ್ನು ಯೋಜನಾ ಬದ್ಧವಾಗಿ ಕ್ರೋಢೀಕರಿಸಿ ಉತ್ಪಾದನೆಯಲ್ಲಿ ಮಂಚೂಣಿಯಲ್ಲಿ ತೊಡಗಿಸಿಕೊಂಡ ಚೀನಾ ಇಂದು ಭಾರತಕ್ಕೆ ಅಗ್ಗದ ಸಾಮಾನು ಉತ್ಪಾದಿಸಿ ಅಗ್ಗದ ಬೆಲೆಗ ರಫ್ತು ಮಾಡಿದರೆ, ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾ ಮುಂತಾದ ರಾಷ್ಟ್ರಗಳಿಗೆ ಉತ್ಕೃಷ್ಟವಾದ ಬೆಲೆಬಾಳುವ ಸಾಮಾನುಗಳನ್ನು ಉತ್ಪಾದಿಸಿ ರಫ್ತು ಮಾಡುತ್ತದೆ. ಭಾರತದ ಹಳ್ಳಿಯ ಪುಟ್ಟ ಬೀಡಿ ಅಂಗಡಿಗಳಲ್ಲೂ ಅಗ್ಗದ ಚೈನಾ ಸರಕುಗಳು ಇಂದು ಲಭ್ಯವಾಗಿವೆ.

ಇವತ್ತಿಗೂ 99% ಚೀನೀಯರು ಇಂಗ್ಲಿಷ್ ಮಾತನಾಡುವುದಿಲ್ಲ. ಮೇಲೆ ತಿಳಿಸಿದ ರಾಷ್ಟ್ರಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೂ ಇಂಗ್ಲಿಷ್ ಬರುವುದಿಲ್ಲ. ಆದರೂ ಇವರು ಹೋದಲ್ಲೆಲ್ಲ ಯಶಸ್ವೀ ಉದ್ಯಮಶೀಲರಾಗಿದ್ದಾರೆ. ಚೈನಾ ಸಾಧಿಸುವ ಸಾಧನೆಯನ್ನು ಕಂಡು ವಿಶ್ವ ಬೆರಗು ಪಡುತ್ತಿದೆ.

ಅಮೆರಿಕಾ, ಕೆನಡಾ, ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಯುರೋಪ್ ದೇಶಗಳಲ್ಲಿ ಚೈನಾ ಸರಕುಗಳು ಉಳಿದೆಲ್ಲಾ ರಾಷ್ಟ್ರಗಳ ಸರಕುಗಳನ್ನು ಹಿಂದಿಕ್ಕಿ ಮಾರುಕಟ್ಟೆಯನ್ನು ಕಬಳಿಸುತ್ತವೆ. ಅಮೆರಿಕ ಕೆಡಾದಲ್ಲಿ ತಮ್ಮ real estate ಉದ್ಯಮವನ್ನು  ಶೀಘ್ರ ಗತಿಯಲ್ಲಿ ಬೆಳೆಸಿ ಅಮೆರಿಕದ ಬಹು ಮಹಡಿ ಕಟ್ಟಡಗಳನ್ನೇ ಖರೀದಿಸುತ್ತಿದ್ದಾರೆ. ಇಂಗ್ಲಿಷ್ ಭಾಷೆ ಅರಿಯದ ಅವರಲ್ಲಿ ಇಷ್ಟೊಂದು ಆತ್ಮ ವಿಶ್ವಾಸ ಬೆಳೆಸಿದ ವಿಶ್ವವಿದ್ಯಾಲಯಗಳು ಯಾವುವು?

2008ರ ಅಮೆರಿಕದ ಕಮ್ಯುನಿಟಿ ಸರ್ವೆಯ ಪ್ರಕಾರ ನ್ಯೂಯಾರ್ಕ್  ನಗರದಲ್ಲಿ 6,59,596 ಚೀನೀಯರು ನೆಲೆಸಿದ್ದಾರೆ. ಏಷ್ಯಾದ ಹೊರಗಿರುವ ಅತ್ಯಂತ ಹೆಚ್ಚಿನ ಜನಸಂಖ್ಯೆ ಇಲ್ಲಿಯೇ ಇದ್ದಾರೆ. ಇವರು ನೆಲೆಸಿರುವ ಭಾಗಗಳಲ್ಲಿ ಇಂಗ್ಲಿಷ್ ಭಾಷೆ ಆಡುವವರ ಸಂಖ್ಯೆ 20%. ಕಾರಣ ಚೀನೀಯರು ಇಂಗ್ಲಿಷ್ ಭಾಷೆ ಆಡುವುದಿಲ್ಲ.

ಚೀನಾದ ಬೇರೆ ಬೇರೆ ಕಡೆಯಿಂದ ಅಮೆರಿಕಕ್ಕೆ ಹೋಗಿ ಅಮೆರಿಕದ ಬೇರೆ ಬೇರೆ ಸ್ಥಳಗಳಲ್ಲಿ ನೆಲೆನಿಂತ ಬಹು ಸಂಖ್ಯಾತ ಚೀನೀಯರು ಹೆಚ್ಚಾಗಿ ವ್ಯಾಪಾರದಲ್ಲಿ ತೊಡಗಿದ್ದಾರೆ..

ಇಂಗ್ಲಿಷ್ ನ ನೆರವಿಲ್ಲದೆ ಅನ್ಯಭಾಷೆ ಬಾರದ ಜನರ ಜೊತೆ ಇವರು ಹೇಗೆ ವ್ಯಾಪಾರ ಮಾಡುತ್ತಾರೆ?

ನೀವು ಅಮೆರಿಕದ ನ್ಯೂಯಾರ್ಕ್ ನಗರದಲ್ಲಾಗಲೀ, ಕೆನಡಾದ ಟೊರೆಂಟೋ ನಗರದಲ್ಲಾಲೀ, ಚೀನೀಯರ ಅಂಗಡಿಗೋ ಹೊಟೆಲಿಗೋ ಹೋದರೆ ಅವರು ನಿಮ್ಮಲ್ಲಿ ಮಾತನಾಡುವುದಿಲ್ಲ. ಅಲ್ಲಿ ಸಾಮಾನುಗಳಿವೆ. ಅದರ ಬೆಲೆಯೂ ಅದರೊಂದಿಗೆ ನಮೂದಿಸಲಾಗಿದೆ. ನಿಮಗೆ ಬೇಕಾದುದನ್ನು ಕೊಳ್ಳಿ, ಹಣ ತೆತ್ತು ಜಾಗ ಖಾಲಿ ಮಾಡಿ ಎಂಬಂತೆ ಯಾವುದೇ ಮಾತುಕತೆ ಆಡಲು ಆಸ್ಪದ ಇಲ್ಲದ ವ್ಯಾಪಾರ ಅವರದ್ದು.

ನಾನು ಮೊದಲ ಬಾರಿಗೆ ಚೀನೀಯರ ಸಂಪರ್ಕಕ್ಕೆ ಬಂದಿದ್ದು ಭಾರತ ಸರಕಾರ ರೈಲ್ವೇ ಇಲಾಖೆ ಹೊರಡಿಸುವ ಬುದ್ಧ ಪರಿನಿರ್ವಾಣ ಯಾತ್ರಾ ಪ್ರವಾಸದಲ್ಲಿ. 10-3-2012ರ ಬುದ್ಧ ಪರಿನಿರ್ವಾಣ  ಎಕ್ಸ್ ಪ್ರೆಸ್ ನಲ್ಲಿ ಪ್ರವಾಸ ಹೊರಟಿದ್ದೆವು. ನಮಗೆ ದುಬಾರಿ ಅನಿಸಿದ್ದರೂ ವಿದೇಶಿಯರಿಗೆ ಅದು ಅಗ್ಗದ ಪ್ರವಾಸ. ಸುಮಾರು 4 ಬಸ್ಸು ಚೀನೀಯರು ಇದ್ದರು ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಚೀನೀ ಭಾಷೆ ಬಲ್ಲ ಗೈಡ್ ಅವರಿಗೆ ನಿಯೋಜಿತನಾಗಿದ್ದ. ಹೀಗಾಗಿ ಪ್ರವಾಸ ಕಾಲದಲ್ಲಿ ಅವರಿಗೆ ಭಾಷೆಯ ತೊಡಕು ಆಗಲಿಲ್ಲ.

ನಮ್ಮ ಬಸ್ಸಿನಲ್ಲಿ ಚೈನೇತರರ ಸಂಖ್ಯೆ ಬಹಳ ಕಡಿಮೆ ಇದ್ದುದರಿಂದ ಕೆಲವು ಚೀನೀಯರು ನಮ್ಮ ಬಸ್ಸಿನಲ್ಲಿಯೂ ಇದ್ದರು. ಮತ್ತೆ ಕೆಲವರಿಗೆ ಅರ್ಧಂಬರ್ಧ  ಇಂಗ್ಲಿಷ್ ಭಾಷೆ ಬರುತ್ತಿತ್ತು. ಮತ್ತೆ ನಾಲ್ಕು ಮಂದಿ ಭಾರತೀಯರು, ಮೂವರು ಸಿಂಹಳೀಯರು, ಇಬ್ಬರು ಕೆನಡಾದವರು, ಉಳಿದವರೆಲ್ಲ ಚೀನೀಯರು. ಇವರು ನಮ್ಮ ಜೊತೆ ಬಹಳ ಉತ್ಸಾಹದಿಂದ ಬೆರೆತರು. ಆದರೆ ಹೋದಲ್ಲೆಲ್ಲ ಚೀನೀಯರ ಊಟಕ್ಕೆ ಪ್ರಥಮ ಆದ್ಯತೆ ನೀಡಲಾಗಿತ್ತು. ಆಗ ನಮ್ಮ ಬಸ್ಸಿನಲ್ಲಿದ್ದ ಅಮೆರಿಕದ ಹುಡುಗಿಯರು ಪ್ರತಿಭಟಿಸಿದ್ದರು. ಮುಖ್ಯವಾಗಿ ಬುದ್ಧ ಟೂರ್ ಚೀನೀ ಯಾತ್ರಿಕರಿಗಾಗಿ. ರೈಲ್ವೇ ಇಲಾಖೆ ಸರಿಯಾದ ಕ್ರಮವನ್ನೇ ತೆಗೆದುಕೊಂಡಿದೆ.

ಜೂನ್ 20 2013ರಂದು ಅಮೆರಿಕ ತಲುಪಿದ ನಾವು ನಾವು 27-6-2013- ಚೈನಾ ಕಂಪೆನಿ ನಡೆಸುವ ಟೇಕ್ ಟೂರ್ ಮೂಲಕ 4 ದಿನದ ಕೆನಡಾ ಪ್ರವಾಸಕ್ಕೆ ಹೋದೆವು. 4 ಬಸ್ಸುಗಳಲ್ಲಿ ಜನ ಇದ್ದರೂ ಚೈನೇತರರ ಸಂಖ್ಯೆ 10-15 ಇರಬಹುದು. ನಮ್ಮ ಬಸ್ಸಿನಲ್ಲಿ 9 ಮಂದಿ ಭಾರತದಿಂದ ಬಂದ ಪ್ರವಾಸಿಗರಿದ್ದರು. ಇಬ್ಬರು ಭಾರತ ಮೂಲದ ಸಿಂಗಾಪುರದವರಿದ್ದರು. ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಎರಡು ಸ್ಥಳಗಳನ್ನು ಸೂಚಿಸಿದ್ದರು. ಒಂದು ನ್ಯೂಯಾರ್ಕ್ ನಗರದ ಚೈನಾ ಟೌನ್. ಮತ್ತೊಂದು ನ್ಯೂಜೆರ್ಸಿಯ ಎಡಿಸನ್. ಈ  ಎರಡೂ ಸ್ಥಳಗಳು ಚೀನಿಯರ ಪ್ರದೇಶ. ಚೀನೀ ಭಾಷೆಯ ನಾಮಫಲಕಗಳು,  ಚೈನಾ ಟೌನ್ ನಲ್ಲಿರುವ ನಾಮಫಲಕಗಳಲ್ಲಿ ಚೈನೀ ಭಾಷೆಗೆ ಮೊದಲ ಆದ್ಯತೆ. ಇಂಗ್ಲಿಷ್ ಗೆ ಎರಡನೆಯ ಆಧ್ಯತೆ. ವಿವರಣೆಗಳೆಲ್ಲ ಚೀನೀ ಭಾಷೆಯಲ್ಲಿ ಮಾತ್ರ.

ಗ್ರಾಹಕರಾಗಿ ಇತರರು ಇರಬಹುದು. ಗ್ರಾಹಕರಲ್ಲಿ ಕೂಡಾ ಚೀನೀಯರೇ ಹೆಚ್ಚು. ರಸ್ತೆಯಲ್ಲಿ ಓಡಾಡುವವರಲ್ಲಿ ಹೆಚ್ಚಿನವರು ಚೈನೀಯರು.

ಈ ಪ್ರವಾಸದಲ್ಲಿ ಇಂಗ್ಲಿಷ್ ಮತ್ತು ಚೀನೀ ಭಾಷೆಯಲ್ಲಿ ವಿವರಣೆ ಇತ್ತು. ಆದರೆ ಹೋದಲ್ಲೆಲ್ಲ ಚೈನೀ ಉಪಹಾರ ಗೃಹದಲ್ಲಿ ಊಟ. ಆದರೆ ಇವರ ಪ್ರವಾಸ ವ್ಯವಸ್ಥೆ ಚೆನ್ನಾಗಿದೆ.

ಹೀಗಾಗಿ ಯುರೋಪಿಗೆ ಹೋದರೆ ಇದರ ಸದುಪಯೋಗ ಪಡೆಯಬಹುದು ಎಂದು ಅಲ್ಲಿಯ ವ್ಯವಸ್ಥೆ ಬಗ್ಗೆ ಕೇಳಿದೆವು. ಅದಕ್ಕೆ ಅವರ ಹೇಳಿದ್ದು ಹೀಗೆ:  ನಾವು ಚೀನಾ ಭಾಷೆ ಬಾರದ ವಿದೇಶಿಯರನ್ನು ಲಂಡನ್ ಪ್ರವಾಸದಲ್ಲಿ ನಮ್ಮೊಂದಿಗೆ ಸೇರಿಸುವುದಿಲ್ಲ. ಅಲ್ಲಿ  ಚೀನೀ ಭಾಷೆಯಲ್ಲಿ ಮಾತ್ರ ವಿವರಣೆ ಕೊಡುವುದು ಎಂದರು.

2001ರಲ್ಲಿ ಭಾರತದಲ್ಲಿ 2 ವಿಶ್ವವಿದ್ಯಾಲಯಗಳು ವಿಶ್ವ ಮಾನ್ಯತೆ ಪಡೆದಿದ್ದುವು. ಅದುವರೆಗೂ ಚೀನಾದಲ್ಲಿ ವಿಶ್ವ ಮಾನ್ಯತೆ ಪಡೆದ  ಒಂದೂ ವಿಶ್ವವಿದ್ಯಾಲಯ  ಇರಲಿಲ್ಲ.ಈಗ ಚೈನಾದಲ್ಲಿ 32 ವಿಶ್ವವಿದ್ಯಾಲಯಗಳು ವಿಶ್ವ ಮಾನ್ಯತೆ  ಪಡೆದಿವೆ. ಭಾರತದಲ್ಲಿ ಎರಡಿದ್ದುದು ಒಂದಾಗಿದೆ. ಚೀನೀಯರು ಇಂಗ್ಲಿಷ್ ಬಾಷೆ ಕಲಿಯದೆ, ತಮ್ಮ ಮಾತೃ ಭಾಷೆಯಲ್ಲಿ ಕಲಿತು ವಿಶ್ವ ಮಾನ್ಯರಾಗುತ್ತಿದ್ದಾರೆ. ಭಾರತೀಯರು ಇಂಗ್ಲಿಷ್ ಭಾಷೆ ಕಲಿಯುತ್ತಾರೆ. ಮಾತೃ ಭಾಷೆ ಮರೆಯುತ್ತಾರೆ. ಆದರೆ ಜಾಗತಿಕವಾಗಿ ಇವರ ಸಾಧನೆ ಚೀನೀಯರ ಮಟ್ಟದಲ್ಲಿ ಇಳಿಮುಖರಾಗುತ್ತಿದ್ದಾರೆ.

ಚೀನಿಯರಿಗೆ ಭಾಷೆ ಸಂವಹನಕ್ಕೆ ಕೂಡಾ ಬೇಕಾಗಿಲ್ಲ . ಅವರಿಗೆ ಹಣಗಳಿಕೆಯ ಯಂತ್ರವೂ ಇಂಗ್ಲಿಷ್ ಅಲ್ಲ. ಭಾಷೆ ಜ್ಞಾನ ಗಳಿಕೆಯ ಯಂತ್ರ ಅಲ್ಲ, ಅಭಿವೃದ್ಧಿಯ ತಂತ್ರವನ್ನು ಇಂಗ್ಲಿಷ್ ಭಾಷೆ ಒದಗಿಸುವುದಿಲ್ಲ. ಈ ಎಲ್ಲಾ ಗಳಿಕೆಗಳು  ಮಾತೃಭಾಷೆಯ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ನಂಬಿದವರು. ಚೀನೀಯರು. ಮಾತೃ ಭಾಷೆಯ ಶಿಕ್ಷಣ ಮೂಲಕ ಮಾನವನ ಕ್ರಿಯಾಶೀಲತೆ ಮತ್ತು ಬೌದ್ಧಿಕ ಪರಿಣತಿ ವಿಕಸನಗೊಳ್ಳಲು ಮಾತೃ ಭಾಷೆ ಪೂರಕ ವಾತಾವರಣವನ್ನು ನಿರ್ಮಿಸುತ್ತದೆ.  ಅನ್ಯ ಭಾಷೆ ಮಗುವಿನ ಆತ್ಮ ವಿಶ್ವಾಸವನ್ನು, ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ. ವೃದ್ಧಿಸುವುದಿಲ್ಲ.

ಚೀನೀಯರು ಸಂವಹನವನ್ನು ಭಾಷೆ ಇಲ್ಲದೆ ಕೂಡಾ ಮಾಡ ಬಲ್ಲರು :

ಉದಾಹರಣೆಗೆ : 28-6-2013ರಂದು ಕೆನಡಾದ ಚೈನಾ ನಗರದಲ್ಲಿ ನಮ್ಮ ಬಸ್ಸು ನಿಂತಿತ್ತು. ಬಸ್ಸು ಬಳಿಯ ಒಂದು ಅಂಗಡಿಯಲ್ಲಿ  ಆಕರ್ಷಕವಾಗಿ ಕಂಡ ಸಣ್ಣ ಪುಟ್ಟ ವಸ್ತುಗಳನ್ನು ಕೊಳ್ಳಲು ನಾವು ಇಳಿದೆವು  ಅಂಗಡಿಯಲ್ಲಿದ್ದ ಕೆಲವು ಅಪರೂಪದ  ಸಣ್ಣ ಪುಟ್ಟ ಸರಕುಗಳ್ನು ತೋರಿಸಿ “ಇದರ ಉಪಯೋಗ ಏನು?” ಕೇಳಿದರೆ ಅಂಗೈಯನ್ನು ಮೇಲೆ ಕೆಳಗೆ ಮಾಡಿದಳು. ಆಯಿತು ನಮಗೆ ಅವಳು ಸಂವಹನ ಅರ್ಥವಾಯಿತು. ‘ಅವಳಿಗೂ ಅದರ ಉಪಯೋಗ ಗೊತ್ತಿಲ್ಲ’

ಇನ್ನೊಂದು ಸರಕಿನಲ್ಲಿ ಬೆಲೆ ನಮೂದಿಸಿರಲಿಲ್ಲ ಅದರ ಬೆಲೆ ಕೇಳಿದೆ. ಅದರ ಬೆಲೆ ಸೂಚಿಸಿರಬೇಕು ಎಂದು ನಟನೆಯ ಮೂಲಕ ತಿಳಿಸಿದಳು. ಅಲ್ಲಿ ನಮೂದಿಸಿಲ್ಲ ಎಂದೆ. ಆಕೆ ಎದ್ದು ಬಂದು ಮತ್ತೊಂದು ಅಂತಹುದೇ ಹುಡುಕಿ ತೆಗೆದು ಅದರ ಬೆಲೆ ನೋಡಿ ನಮ್ಮ ಕೈಯಲ್ಲಿದ್ದ ವಸ್ತುವಿನ ಬೆಲೆಯೂ ಅದೆ ಎಂಬಂತೆ ನಮ್ಮನ್ನು ನೋಡಿದಳು. ತುಟಿ ಬಿಚ್ಚದೆ ಸಂವಹನ ಮಾಡಲು ಸಾಧ್ಯ. ಆಗ ಕೇಳಿದೆ ಇಂಗ್ಲಿಷ್ ಭಾಷೆ ಗೊತ್ತಿಲ್ಲವೆ? ‘ನೋ’ ಎಂದಳು ಸುಲಭದಲ್ಲಿ.

ಆಕೆ ಕೆನಡಾದ ಟೊರೆಂಟೋ ನಗರದಲ್ಲಿ ವ್ಯಾಪಾರದ ಮಳಿಗೆ ಇಟ್ಟು ವ್ಯಾಪಾರ ಮಾಡುತ್ತಿದ್ದಾಳೆ. ಅವಳು ಅಂಗಡಿಯಲ್ಲಿ ಕುಳಿತು ಗ್ರಾಹಕರಿಂದ ಹಣ ಪಡೆಯುತ್ತಿದ್ದಾಳೆ. ಅಂಗಡಿ ತುಂಬಾ ಸಾಮಾನು ಇದೆ. ಆದರೆ ಚೈನೀ ಭಾಷೆ ಬಿಟ್ಟು ಬೇರೆ ಯಾವುದೇ ಭಾಷೆ ಆಕೆಗೆ ಬಾರದು. ಇಂಗ್ಲಿಷ್ ಗೊತ್ತಿಲ್ಲ ಎನ್ನುವ ಕೀಳರಿಮೆ ಅವಳಲ್ಲಿ ಇಲ್ಲ. ಬದಲಿಗೆ ಅವಳಲ್ಲಿ ಆತ್ಮ ವಿಶ್ವಾಸ ಇತ್ತು. ಅಂತಃಶಕ್ತಿ ಇತ್ತು

ಮನುಷ್ಯನಲ್ಲಿ ಆತ್ಮ ವಿಶ್ವಾಸ, ಕ್ರಿಯಾಶೀಲತೆ, ದುಡಿಮೆಯ ಛಲ ಇದ್ದರೆ ಭಾಷೆ ತೊಡಕನ್ನು ಉಂಟು ಮಾಡುವುದಿಲ್ಲ.

ಆಸ್ಟ್ರೇಲಿಯಾದಲ್ಲಿ ಚೈನೀಯರ ಬ್ಯಾಂಕ್ ಇದೆಯಂತೆ. ಅಲ್ಲಿ ಇಂಗ್ಲಿಷ್ ಬರುವ ಇಬ್ಬರು ಅಧಿಕಾರಿಗಳು ಮಾತ್ರ ಇದ್ದಾರೆ ಎನ್ನುತ್ತಾನೆ ಆಸ್ಟ್ರೇಲಿಯಾ ನಿವಾಸಿ  ಮಗ ಶರತ್. ಚೈನೀ ಭಾಷೆ ಬಾರದ ಇಂಗ್ಲಿಷರಿಗೆ ದುಬಾ಼ಷಿಗಳಾಗಿ ಇವರು ಕೆಲಸ ಮಾಡುತ್ತಾರೆ. ಚೈನದಲ್ಲಾಗಲೀ ಬೇರೆಡೆಯಲ್ಲಾಗಲೀ, ಇಂಗ್ಲಿಷ್ ಭಾಷೆ ಬಲ್ಲವರನ್ನು ಅವರು ಕೆಲಸಕ್ಕೆ ನೇಮಿಸುತ್ತಾರೆ. ಚೀನೀಯರು ವಿಶ್ವದ ಯಾವುದೇ ಮೂಲೆಗೆ ಹೋದರೂ ಒಂದೆ ಕಡೆಯಲ್ಲಿ ತಮ್ಮ ವಾಸವನ್ನು ಆರಿಸುತ್ತಾರೆ. ಹೀಗಾಗಿ ಅವರು ಚೀನೀ ಭಾಷೆಯಲ್ಲಿ ಮಾತ್ರ ವ್ಯವಹರಿಸಲು ಸಾಧ್ಯವಾಗುತ್ತದೆ.

ಬೆಂಗಳೂರು ನಗರದಲ್ಲಿಯೂ ಇರುವ ಹೆಚ್ಚಿನ ಚೀನೀಯರಿಗೆ ಇಂಗ್ಲಿಷ್ ಭಾಷೆ ತಿಳಿದಿಲ್ಲ. ಆದರೂ ಅವರು ಯಾವ ಕೀಳರಿಮೆಯೂ ಇಲ್ಲದೆ ಆತ್ಮ ವಿಶ್ವಾಸದಿಂದ ಬದುಕುತ್ತಿದ್ದಾರೆ.

ಇಂಗ್ಲಿಷ್ ಬಾರದ ಚೀನೀಯರು ಇಂದು ವಿಶ್ವ ಮಾನ್ಯರು. ಚೀನಾ ಅಭಿವೃದ್ದಿಯಲ್ಲಿ ಮೇಲ್ಪುಖ ಚಲನೆಯಲ್ಲಿದೆ.  ಇತಿಹಾಸ ಪೂರ್ವದಲ್ಲಿ ವಿಶ್ವ ಮಾನ್ಯರಾಗಿ ಇದ್ದ ಭಾರತೀಯರು ಇಂಗ್ಲಿಷ್ ¨ ಭಾಷೆ ಕಲಿತರೂ ಚೀನಾವನ್ನು ಮೀರಿ ಬೆಳೆಯಲಾಗುತ್ತಿಲ್ಲ.

ಯಾಕೆಂದರೆ ಚೀನೀಯರ ದೇಶ ಪ್ರೇಮ ಮೇರು ರೂಪದ್ದು!

(ಈ ಮೇಲಿನ ಬರಹವನ್ನು ನಾನು ಬರೆದುದು ವಿದೇಶ ಪ್ರವಾಸ ಮತ್ತು ಭಾರತ ಪ್ರವಾಸದಲ್ಲಿ ಚೀನೀಯರ ಜೊತೆ ದೊರೆತ ಸಂಪರ್ಕದಿಂದ.  

ಕೊರೋನಾದ ಈ ದುರಿತ ಕಾಲದಲ್ಲಿ ಚೀನಾ ದೇಶ, ಜನರ ಬಾಯಿಯಲ್ಲಿ ನಲಿದಾಡುತ್ತಿದೆ.

ಆದರೆ ಚೀನಿಯರ ತಾಕತ್ತು ಏನು? ಭಾಷೆ ಬಾರದೆ ವಿಶ್ವವನ್ನು ಆಕ್ರಮಿಸಿರುವ ಈ ಚೀನೀಯರನ್ನು ಕೊರೋನಾ ಸೋಂಕು ನೆಲ ಕಚ್ಚಿಸಬಹುದೆ?

ಖಂಡಿತಾ ಮತ್ತೆ ಎದ್ದು ನಿಲ್ಲುತ್ತದೆ ಚೀನಾ. ಯಾವುದೇ ಜಾತಿ, ಮತ ಧರ್ಮದಿಂದ ನಲುಗದ, ತನ್ನ ಎಲ್ಲ ಪ್ರಜೆಗಳನ್ನು ಒಂದೇ ಮತಾತೀತ ಮಡಿಲಲ್ಲಿಟ್ಟು ರಕ್ಷಿಸುವ ಚೀನಾದ ಒಗ್ಗಟ್ಟನ್ನು ಯಾರೂ ಮುರಿಯಲಾಗದು! ಅವರಿಗೆ ದೇಶ ಮುಖ್ಯ!)

 

 

 

‍ಲೇಖಕರು avadhi

May 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kumar Vantamure

    ಚೀನಾ ಜನರ ಮಾತ್ರ ಭಾಷೆ ಪೇಮ, ಭಾರತಿಯವರ ಇಂಗ್ಲಿಷ್ ವ್ಯಾಮೋಹ ಇಂದು ಯಾವ ಮಟ್ಟದಲ್ಲಿದೆ ಎಂಬುದನ್ನು ಚೆನ್ನಾಗಿ ವಿಮರ್ಶಿಸಿ ಹೇಳಿದ ತಮಗೆ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: