ಚಿಕ್ಕಮ್ಮ ಮನೆಗೆ ಬಂದಿದ್ದರು, ಎಲ್ಲಾ ನೆನಪಾದವು

amaradeep p s

ಪಿ ಎಸ್ ಅಮರದೀಪ್ 

ನಾನಾಗ ಮೂರು ವರ್ಷದವನಿರಬೇಕು. ಇರೋ ಬಾಡಿಗೆ ಮನೆಯಲ್ಲೇ ನಮಗಿಂತ ಕಷ್ಟವಿದ್ದ ಕಳ್ಳರು ಅವ್ವನ ರೇಷಿಮೆ ಸೀರೆ, ಹಂಡೆ, ಕೈಗೆ ಸಿಕ್ಕ ಸಾಮಾನುಗಳನ್ನು ಕದ್ದೊಯ್ದಿದ್ದರು.

ಆಗಾದರೂ ಈಗಿನಂತೆ ಬಾಗಿಲು ಭದ್ರ ಮಾಡಿ ಎರಡೆರಡು ಸಾರಿ ಲಾಕ್ ಬಿದ್ದಿದ್ದನ್ನು ಚೆಕ್ ಮಾಡಿ, ಗ್ರಿಲ್ ಎಳೆದು ಅದಕ್ಕೊಂದು ಕೀ ಜಡಿದು, ಸ್ವಲ್ಪ ದೂರ ಹೋದ ನಂತರವೂ ಬೀಗ ಹಾಕಿದ್ದೇವೋ ಇಲ್ಲವೋ ಎಂದು ತಿರುಗಾ ಬಂದು ಜಗ್ಗಿ ನೋಡಿ ಹೊರುಡುತ್ತಿದ್ದ ಕಾಲವಲ್ಲ.   “ಬಾಗ್ಲಾ ಮುಂದ್ ಮಾಡಿರ್ತೀನಿ, ಯಾರಾದ್ರೂ ಬಂದ್ರೆ ಇಲ್ಲೇ ಮಗನ್ನಾ ಸಾಲಿಯಿಂದ ಕರ್ಕಂಬರಾಕ್ ಹೋಗ್ಯಾಳಂತ ಹೇಳಿ ಒಳಾಗ ಕುಂದ್ರುಸ್ರಿ” ಅಂದು ಪಕ್ಕದ ಮನೆಯವರಿಗೆ ಹೇಳಿ ಹೊರಬಹುದಾಗಿದ್ದ ನಂಬಿಕೆ ಕಾಲವದು.

IMG_nagarathnammaಅಂಥಾದ್ರಲ್ಲಿ ಅದೊಮ್ಮೆ ಅವ್ವನ ಮೊದಲ ತಂಗಿ ನಾಗರತ್ನಮ್ಮ ಅಥವಾ ಯೂನಿವರ್ಸಿಟಿ ವೈಸ್ ಚಾನ್ಸಲರ್ ಇದ್ದಂತೆಯೇ ಇದ್ದ ಕೊಟ್ರಬಸವ್ವಜ್ಜಿ ಊರಿಗೆ ಬಂದಾಗ, ತವರಿಗೆ ನನ್ನನ್ನು ಅಕ್ಕನನ್ನು ಕರೆದುಕೊಂಡು ಹೋಗಿದ್ದಾಳೆ.  ಅಲ್ಲಿ ಚಿಕ್ಕಮ್ಮ ನಾಗರತ್ನಮ್ಮ ಹತ್ತು ಬೈ ಹನ್ನೆರಡರ ಹೆಂಚಿನ ಮನೆಯ ಪಡಸಾಲೆಯಲ್ಲೇ ಹಿಂಡು ಹುಡುಗರಿಗೆ ಮನೆಪಾಠ ಹೇಳುತ್ತಿದ್ದಳು. ಅಷ್ಟೂ ಹುಡುಗರು ನೀಡಿದ ತಿಂಗಳ ಫೀ ಒಟ್ಟುಗೂಡಿಸಿದರೆ ಇಪ್ಪತ್ತು ರೂಪಾಯಿಯೂ ದಾಟುತ್ತಿರಲ್ಲಿಲ್ಲ.  ಮೊದಲೇ ಸರ್ಕಾರಿ ಶಾಲೆಯ ಮಕ್ಕಳು ಗಲಾಟೆ ಪ್ರಾಕ್ಟಿಕಲ್ಲು,   ಪಾಠ ಬಾಸುಂಡೆ.  ಅಜ್ಜಿಯ ಮನೆಗೆ ಅದೇ ತಾನೆ ಹೊಸದಾಗಿ ಬಂದ ವಿದ್ದ್ಯುದ್ದೀಪದ ಸಂಪರ್ಕ, ಹೀಗೆ ನಡೆದಿತ್ತು.  ನಿಜವಾದ ಸಂಗತಿಯೆಂದರೆ, ಚಿಕ್ಕಮ್ಮನ  ಮನೆಪಾಠ ಹೇಳಿಸಿಕೊಂಡವರಲ್ಲಿ ಇಂದು ಹಲವರು ಮುಖ್ಯ ಶಿಕ್ಷಕರು,  ಸಹ ಶಿಕ್ಷಕರಾಗಿದ್ದಾರೆ. ಒಳ್ಳೆಯ ಮಾರ್ವಾಡಿ ವ್ಯಾಪಾರಸ್ಥರಿದ್ದಾರೆ.

ನಾನು ಅಡುಗೆ ಮನೆಯಲ್ಲೋ ಜಾಗ ಸಾಲದಾಗಿ ಅಂಗಳದಲ್ಲೋ ಒಬ್ಬನೇ ಕೂಡುತ್ತಿದ್ದೆ ಗುಮ್ಮನಂತೆ, ಊದಿಕೊಂಡು ಸಗಣಿ ನೆಲ ಕೆರೆಯುತ್ತಾ. ಬೆತ್ತ ಮುರಿಯುವಂತೆ ಜಡಿದರೂ ಎಲ್ಡರ ಮಗ್ಗಿ, ಕಾಗುಣಿತ, ಹೇಳಲು ಬಾರದೇ ಕಲ್ಲು ಬಂಡೆಯಂತೆ ಕೂಡುತ್ತಿದ್ದ ಹುಡುಗರಿದ್ದರೆ, ಹೊರಗಡೆಯಿಂದಲೇ ಅಥವಾ ಅಡುಗೆ ಮನೆಯಿಂದಲೇ ನಾನು ಸರಾಗವಾಗಿ ಒಪ್ಪಿಸುತ್ತಿದ್ದೆನಂತೆ.  ಇದನ್ನು ಕಂಡ ಚಿಕ್ಕಮ್ಮ  ಅಜ್ಜಿಗೆ, ಅವ್ವ, ಅಪ್ಪನಿಗೆ ಹೇಳಿ ಒಪ್ಪಿಸಿದ ನಂತರ ಅಜ್ಜಿಯ ಮನೆಯಲ್ಲೇ ನಾನು ಅಕ್ಕ ಉಳಿಯಲು, ಮನೆ ಹಿಂದಿದ್ದ ಸರ್ಕಾರಿ ಶಾಲೆಗೆ ಸೇರಲು ಅನುವಾಯಿತು.

ಅಜ್ಜಿ ಮನೆಯಲ್ಲಿ ಮಾಮ ನನ್ನ ಹತ್ತರವರೆಗಿನ ಓದು, ನಂತರದ ಡಿಪ್ಲೋಮಾ ಓದು, ನೌಕರಿ ಬರುವವರೆಗೆ ನನ್ನ ಸಾಕಿದರು. ತನ್ನದೇ ಕಛೇರಿಯಲ್ಲಿ ಕೂಡಿಸಿ ಕೆಲಸದ ಬಗೆ  ತೋರಿಸಿದರು. ನಾನು ಈವರೆಗಿನ ನೌಕರಿ, ಜೀವನಕ್ಕೆ ದಾರಿಯಾದಂತಹ ಚಿಕ್ಕಮ್ಮ, ಮಾಮ, ಅಜ್ಜಿ ಇವರೆಲ್ಲರ ಶ್ರಮ, ಪ್ರೀತಿಗೆ ಯಾವುದೂ ಸಮವಲ್ಲ. ನಾನೇನೇ ಮರಳಿ ಮಾಡುವೆನಂದರೂ ಆಗುವುದಿಲ್ಲ. ಮನುಷ್ಯನ ಗುಣ ಹೀಗೇ ಇದ್ದರೆ ಚೆನ್ನಾಗೇನೋ.  ತಾನು ತನ್ನ ಇತಿಮಿತಿಯಲ್ಲಿ ಒಬ್ಬರಿಗೆ ಚೂರು ಸಹಾಯ ಮಾಡಿದರೂ ಸರಿಯೇ, ಮುಂದೊಂದು ದಿನ  ಆ ಒಬ್ಬ ಇನ್ನೊಬ್ಬನಿಗೆ ಇನ್ಯಾವುದೋ ರೀತಿಯಲ್ಲಿ ಸಹಾಯವಾಗುವುದೊಂದೇ ತಾನು ಪಡೆದ ಸಹಾಯಕ್ಕೆ ತೀರಿಸುವ ಋಣ. ಸಹಾಯಸ್ತ  ನೀಡಿದವರಿಗೆ ಒದಗುವುದು ಒಂದು ರೀತಿಯದ್ದಾದರೆ, ಅವರಂತೆಯೇ ಇನ್ಯಾರಿಗಾದರೂ ನಮ್ಮ ನಡುವೆಯೇ ಸರಿ, ಸಹಾಯವಾದರೆ ಅದೂ ಸೂಕ್ತವೇ.  ಬಹುಶ: ಚಿಕ್ಕಮ್ಮ ನನ್ನನ್ನು ಅಜ್ಜಿಯ ಮನೆಯಲ್ಲಿ ಉಳಿಯುವಂತೆ ಮಾಡದಿದ್ದರೆ, ಮುಂದೆ ಮಾಮ ನನ್ನನ್ನು ಓದಿಸದಿದ್ದರೆ ನಾನೇನಾಗಿರುತ್ತಿದ್ದೇ? ಎಂದು ಬಹಳಷ್ಟು ಸಾರಿ ಪ್ರಶ್ನೆಯಾಗಿದ್ದೇನೆ.

ಈ ಮಧ್ಯೆ ಚಿಕ್ಕಮ್ಮ ಬಹಳ ವರ್ಷಗಳ ಮುಂಚೆಯೇ ಆಕೆ ಟಿ.ಸಿ.ಎಚ್. ಮಾಡಿದ್ದಳು. ಜೊತೆಗೆ ತಾನು ದುಡಿಯಬೇಕೆನ್ನುವ ಆಸೆ.   ಊರಿನ ಖಾಸಗಿ ಶಾಲೆಯೊಂದರಲ್ಲಿ ಟೀಚರ್ ಆಗಿ ಕೆಲಸಕ್ಕೆ ಸೇರಿದಳು. ಅದಕ್ಕೂ ಮುನ್ನ ಆಕೆಯ ಮದುವೆಯಾಗಿತ್ತು.   ಆ ಶಾಲೆ ಮುಂದೊಂದು ದಿನ ಸರ್ಕಾರಿ ಅನುದಾನಿತ ಶಾಲೆಯಾಯಿತು.  ಈಗ ಆಕೆ ಜೊತೆ ಕೆಲಸ ಮಾಡುತ್ತಿದ್ದವರೆಲ್ಲಾ ಆ ಶಾಲೆಯಲ್ಲಿ ಖಾಯಂಗೊಂಡು ಸ್ಥಿತಿವಂತರಾಗಿ ಬದುಕುತ್ತಿದ್ದಾರೆ.  ಈಕೆಯದೇ ದುರಾದೃಷ್ಟ . ಮಧ್ಯೆ ಗಂಡನ ಮನೆಗೆ ಹೋಗುವ ಪ್ರಸಂಗಕ್ಕೆ ಇದ್ದ ಕೆಲಸವನ್ನೂ ಬಿಟ್ಟು ಹೊರಡಬೇಕಾಯಿತು. ಮುಂದೆ ಸರ್ಕಾರಿ ನೌಕರಿಗಿದ್ದ ವಯೋಮಿತಿಯೂ ದಾಟಿ ಜೀವನೋಪಾಯಕ್ಕೆ ಸಿಕ್ಕ ಕೆಲಸವನ್ನೇ ಮಾಡುವಂತಾಯಿತು.

fence1ಆದರೆ, ಸಂಸಾರ ಅಂದಮೇಲೆ ಜಂಜಡಗಳಿದ್ದದ್ದೇ ಅಲ್ವಾ?  ಮುಂದೆ ಆಕೆಗೆ ಇಬ್ಬರು ಗಂಡು ಮಕ್ಕಳಾದವು. ಗಂಡನ ಮನೆಯಿಂದ ಬಿಟ್ಟು ತಾನೇ ಇಬ್ಬರು ಮಕ್ಕಳನ್ನು ಕರೆದುಕೊಂಡು ಒಂದು ಚಿಕ್ಕ ಹಳ್ಳಿಯಲ್ಲಿ ಸಣ್ಣ ಮನೆಯಲ್ಲಿ ಬದುಕ ಹತ್ತಿದಳು.  ಆಗತಾನೇ ಶುರುವಾಗಿದ್ದ ಮಧ್ಯಾಹ್ನದ ಬಿಸಿಯೂಟದ ಅಡುಗೆ ಸಹಾಯಕಿಯಾಗಿ ಕೆಲಸಕ್ಕೆ ಸೇರಿಕೊಂಡಳು. ಮಕ್ಕಳು ಸಹ ಶಿಸ್ತಿನಲ್ಲೇ ಸರ್ಕಾರಿ ಶಾಲೆಯಲ್ಲೇ ಓದುತ್ತಿದ್ದವು.  ಮಕ್ಕಳು ಇಷ್ಟಿಷ್ಟೇ ಬೆಳೆದಂತೆಲ್ಲಾ ರಜೆಯಲ್ಲಿ ಮನೆಗೆ ಕಟ್ಟಿಗೆ, ಸೌದೆ, ತರುವುದು,  ಈಕೆಗೆ ಸಹಾಯ ಮಾಡುವುದು ಮಾಡುತ್ತಿದ್ದರು.  ಆ ಹಳ್ಳಿಗೆ ರಾತ್ರಿ ತಂಗುವ ಬಸ್ ತೊಳೆದು ಕೊಟ್ಟ ದುಡ್ಡನ್ನು, ಹೊಲದ ಕೂಲಿ ಕೆಲಸ ಮಾಡಿ ಬಂದ ಹಣವನ್ನು  ಓದಿಗೆ ವಿನಿಯೋಗಿಸಿದರು.

ಗಾರೆ ಕೆಲಸ, ಊರ ಜನರ ಸಹಾಯಕ್ಕೆ ನೆರವಾಗಿ, ಅವರು ನೀಡಿದ ಪುಡಿಗಾಸನ್ನೇ ತಂದು ಅಮ್ಮನ ಕೈಗೆ ಕೊಟ್ಟು ಫೀಸು, ಪುಸ್ತಕ, ಬಟ್ಟೆಗೆ ಹೊಂದಿಸುತ್ತಿದ್ದರು. ಶಾಲೆಯ ರಜೆಯ ದಿನಗಳಲ್ಲಿ ಊರೂರು ಗುಳೇ ಹೊರಟು ಕಾಮಗಾರಿ ಕೆಲಸ ಮಾಡುವ ಹಳ್ಳಿ ಜನರೊಂದಿಗೆ ಹೋಗಿ ಸಾವಿರಾರು ರುಪಾಯಿಗಳನ್ನು ಉಳಿಸಿ ತಂದು ಅಮ್ಮನ ಕೈಗಿಡುತ್ತಿದ್ದ ಮಕ್ಕಳು.  ಈಕೆಗೆ ಸರ್ಕಾರದಿಂದ ಐದು ನೂರು ರೂಪಾಯಿಯ ಸಂಬಳ. ಹೇಗೋ ತಾಯಿ ಮಕ್ಕಳು ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಚಿಕ್ಕಪ್ಪ ತೀರಿದ.

ನಡುವೆ ಆಕೆ ತವರಿಗೆ ಆರು ತಿಂಗಳಿಗೋ ವರ್ಷಕ್ಕೋ ಮಕ್ಕಳನ್ನು ಕಟ್ಟಿಕೊಂಡು ಬಂದಾಗಲೆಲ್ಲಾ ಮತ್ತು ತಿಂಗಳಿಗಿಷ್ಟು ಅಂತ ಮಾಮ ಹಣದ ನೆರವು ನೀಡುತ್ತಿದ್ದ.  ಮುಂದೆ ಮಕ್ಕಳು ಓದಿ ಡಿಗ್ರಿ, ಡಿಪ್ಲೋಮಾ ಓದುವ ಹಂತ ತಲುಪಿದಾಗ ಮಾಮ, ನಾನು ಹತ್ತಿರದವರೆಲ್ಲಾ ಚೂರು ನೆರವಾದೆವು. ಆ ಹುಡುಗರೂ ಸಹ ಸರ್ತಿಗೊಮ್ಮೆ ಎಪ್ಪತ್ತೈದು, ಎಂಭತ್ತು ಶೇಕಡಾ ಅಂಕ ತೆಗೆದು ತಂದಿಡುತ್ತಿದ್ದವು.  ಆ ಸಣ್ಣ ಹಳ್ಳಿಯಲ್ಲಿ ಈ ಹುಡುಗರು ಮತ್ತು ಚಿಕ್ಕಮ್ಮನನ್ನು ತೋರಿಸಿ ಇತರ ಮಕ್ಕಳಿಗೆ ಮಾದರಿಯೆನ್ನುವಂತೆ ತೋರಿಸುತ್ತಿದ್ದರಂತೆ. ಊರ ಹಿರಿಯರಿಗೂ ಈ ಹುಡುಗರನ್ನು ಕಂಡರೆ ಅಷ್ಟು ಪ್ರೀತಿ, ಪ್ರೋತ್ಸಾಹ.   ಓದು ಮುಗಿಯುತ್ತಿದ್ದಂತೆಯೇ ಹುಡುಗರು ತಾವೇ ಸ್ವತ: ಓದಿಗೆ ತಕ್ಕ ನೌಕರಿಯ ಹುಡುಕಾಟ ನಡೆಸಿ ಅಲ್ಲಿ ಇಲ್ಲಿ ನೌಕರಿ ಮಾಡಿದರು.  ಹೀಗೆ ಸರ್ಕಾರಿ ಜಾಹಿರಾತು ನೋಡಿ ಅರ್ಜಿ ಸಲ್ಲಿಸಿ ಕಾದರು. ನೋಡ ನೋಡುತ್ತಿದ್ದಂತೆಯೇ ದೊಡ್ಡವನಿಗೆ ಬೆಂಗಳೂರು ನಗರದ ಪೋಲಿಸ್ ಇಲಾಖೆಯಲ್ಲಿ ಪೋಲಿಸ್ ಹುದ್ದೆಗೆ ನೇಮಕವಾದ.  ಸಣ್ಣವನಿಗೆ ಮೆಸ್ಕಾಂ ನಲ್ಲಿ ಚಿಕ್ಕದೊಂದು ನೌಕರಿಗೆ ಕರೆ ಬಂದು ಆಗಲೇ ಸೇವೆಯಲ್ಲಿದ್ದಾನೆ.

ನಿನ್ನೆ ಮೊನ್ನೆ ಚಿಕ್ಕಮ್ಮ  ಮತ್ತವರ ಮಕ್ಕಳು ಓದಿ ಏನೋ ಕಷ್ಟಪಟ್ಟು ದುಡಿದು, ನೂರಿನ್ನೂರು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರೆನ್ನುವುದು ಈಗ ಬರೀ ಹೆಜ್ಜೆ ಗುರುತು ಮಾತ್ರ. ಆದರೆ, ಒಬ್ಬಂಟಿಯಾಗಿ ಗೊತ್ತಿಲ್ಲದ ಹಳ್ಳಿಯೊಂದಕ್ಕೆ ಹೋಗಿ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಜೀವನ ಮಾಡುವುದು, ಮಕ್ಕಳನ್ನು ಸರ್ಕಾರಿ ಸೌಲಭ್ಯದಲ್ಲೇ ಸಿಗುವ ಶಿಕ್ಷಣ ಕೊಡಿಸಿ, ತಾನೂ ಕಷ್ಟಪಟ್ಟು, ಮಕ್ಕಳಿಗೂ ಜೀವನ ಪಾಠ ಕಲಿಸಿ ತಾವು ತಮ್ಮ  ಇಪ್ಪತ್ತರ ಆಸುಪಾಸಿನಲ್ಲೇ ಸರ್ಕಾರಿ ನೌಕರಿ ಕಂಡುಕೊಂಡು ದುಡಿಯುವಂತೆ ಮಾದರಿಯಾದ ಚಿಕ್ಕಮ್ಮ ಯಾವ ಅವಾರ್ಡ್ ತೆಗೆದುಕೊಂಡಿದ್ದರೂ ಸರಿಯೇ ಅಂಥ ಶಿಕ್ಷಕನಿಗಿಂತಲೂ ನಾಲ್ಕು ಮೆಟ್ಟಿಲು ಮೇಲೆ ನಿಲ್ಲುವಂಥ ಸ್ಥಾನವಿದೆ.

ಇದಕ್ಕಿಂತಲೂ ಮಿಗಿಲಾದ ಒಂದು ಸಂಗತಿಯನ್ನು ಹೇಳಲೇಬೇಕು.  ನಮ್ಮ ಸರ್ಕಾರಿ ನೌಕರಿಯಲ್ಲಿರುವವರೂ ಸೇರಿದಂತೆ ಸುಮಾರು ಜನ, ಮನೆಯಲ್ಲಿ ಟೀವಿ, ಫ್ರಿಡ್ಜ್, ಏಸಿ, ಬೈಕು, ಕಾರು, ಸ್ವಂತ ಮನೆ ಇದ್ದಂಥವರೇ ಬಿಪಿಎಲ್ ಕಾರ್ಡ್ ಇಟ್ಟುಕೊಂಡು ಸರ್ಕಾರದಿಂದ ಸಿಗುವ ಸೌಲಭ್ಯಗಳಿಗೆ ಜೊಲ್ಲು ಸುರಿಸಿಕೊಂಡು ಕ್ಯೂ ನಿಲ್ಲುತ್ತಿರುವ ಇಂದಿನ ದಿನದಲ್ಲಿ ನನ್ನ ಚಿಕ್ಕಮ್ಮ ತನ್ನ ಮಕ್ಕಳಿಗೆ ನೌಕರಿ ಸಿಗುವ ಮುಂಚೆ ತನ್ನ ಹೆಸರಿಗಿದ್ದ ಅಂತ್ಯೋದಯ ಪಡಿತರ ಚೀಟಿಯನ್ನು ಎಪಿಎಲ್ ಕಾರ್ಡನ್ನಾಗಿ ಪರಿವರ್ತಿಸಿಕೊಡಲು ಅರ್ಜಿ ಕೊಟ್ಟಿದ್ದಾಳೆ.  “ಸಾಕಪ್ಪ ದೀಪಣ್ಣಾ,  ಮಕ್ಳು ದುಡ್ಯಾಕತ್ತಾವ, ತಿಂಗ್ಳಾ ಪಗಾರ ತಂದು ಕೈಗಿಡ್ತಾವ, ನಂದೂ ಪಗಾರ ಈಗ ಎರಡು ಸಾವ್ರಾ,  ಟೀವಿ, ಸ್ಟೋವ್, ಮೊಬೈಲು ಎಲ್ಲಾ ಅದಾವು.  ಮತ್ಯಾಕಪಾ, ಅಂತ್ಯೋದಯ, ಬಿಪಿಎಲ್ ಕಾರ್ಡು?”  ಅನ್ನುತ್ತಾಳೆಂದರೆ ಆಕೆಯನ್ನು ಮಾದರಿ ಎನ್ನದೇ ಇನ್ನೇನನ್ನಬೇಕು ನೀವೇ ಹೇಳಿ.

ಈಕೆಯೂ ನನಗೆ ಅವ್ವಾನೇ.. ಜೊತೆಗೆ ಮಾದರಿ ತಾಯಿಯೆಂದರೆ ಅತಿಶಯೋಕ್ತಿಯಾಗಲಾರದು.  ಕೊಟ್ರಬಸವ್ವಜ್ಜಿ, ಅವ್ವ, ಚಿಕ್ಕಮ್ಮ, ಇಂಥ ಅವ್ವನವರ ನಡುವೆ ಇವರೆಲ್ಲರ ಜೊತೆ ಮಾಮನದೂ ತಾಯಿಯಂಥದೇ ದೊಡ್ಡ ಮತ್ತು ತಾಳ್ಮೆ ಗುಣ.  ಬಹುಶ: ಆತನ ಸಹಾಯಹಸ್ತ ಚಾಚುವ ಗುಣಕ್ಕೆ ಅವರಷ್ಟೇ ತೂಕವಿದೆ..   ಈಗ ಅಜ್ಜಿಯಿಲ್ಲ, ಇರುವ ಅವ್ವ, ಚಿಕ್ಕಮ್ಮ, ಮಾಮನವರೊಂದಿಗೆ ನಾನು ಹೆಚ್ಚು ಮಾತು, ಸಮಯ, ಹಂಚಿಕೊಳ್ಳದಿರಬಹುದು.   ಆದರೆ ಋಣದ ಭಾರವಂತೂ ನಾನು ಕೆಳಗಿಳಿಸಲಾರೆ.  ನಿನ್ನೆ ಚಿಕ್ಕಮ್ಮ ಮನೆಗೆ ಬಂದಿದ್ದರು,  ಎಲ್ಲಾ ನೆನಪಾದವು.

ಅಂದಹಾಗೆ ನನ್ನ ಚಿಕ್ಕಮ್ಮನ ಹೆಸರು ನಾಗರತ್ನಮ್ಮ, ಮಕ್ಕಳು ಶಿವಯೋಗಿ, ಬಸವರಾಜು

‍ಲೇಖಕರು Admin

May 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: