ಅಮ್ಮ ಥೇಟ್ ಬನದ ಕರಡಿಯೇ ಸರಿ..

ನನ್ನದೊಂದು ಹಿಡಿ ನುಡಿಮಣ್ಣು !

chandrakantha vaddu

ಚಂದ್ರಕಾಂತ ವಡ್ಡು

ನಾನು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದ ಅಮ್ಮನ ಬಳಿಗೆ ಧಾವಿಸಿ ಬಂದಾಗ ಆಕೆ ಕಣ್ಣು ತೆರೆದಿದ್ದಳು; ಉಸಿರು ನಿಂತಿತ್ತು! ಹಾಸಿಗೆ ಪಕ್ಕದಲ್ಲಿ ಒಬ್ಬನೇ ದಂಗಾಗಿ ನಿಂತಿದ್ದ ನನಗೆ ಜೋರು ಅಳು ಬರಲಿಲ್ಲ. ಆ ಕ್ಷಣ ದುಃಖ ರಕ್ತವಾಗಿ ನನ್ನ ಮೈತುಂಬ ಹರಿದಾಡುತ್ತಿತ್ತು. ಏನು ಮಾಡಬೇಕೆಂದು ತೋಚದ ಅಸಹಾಯಕ ಸ್ಥಿತಿ. ಆಕೆಯ ತಣ್ಣನೆಯ ಅಂಗೈಯಲ್ಲಿ ನನ್ನ ಕೈಯಿಟ್ಟು ಅದುಮಿದೆ. ಹಣೆಯ ಮೇಲೆ ಕೈಯಾಡಿಸಿದೆ. ಹಸ್ತವನ್ನು ಹಣೆಮೇಲಿಂದ ಕೆಳಗೆ ಸರಿಸಿ ಸಾವಕಾಶವಾಗಿ ರೆಪ್ಪೆ ಸವರಿದೆ. ಕಣ್ಣು ಮುಚ್ಚಿದಳು ! ಅವಳ ಗದ್ದ ಮುಟ್ಟಿದಾಗ ತುಸುವೇ ತೆರೆದಿದ್ದ ತುಟಿಗಳು ಒಂದಾದವು. ಅಷ್ಟು ವರ್ಷಗಳ ಕಾಲ ನನ್ನನ್ನು ಕ್ಷಣ ಬಿಡದೇ ಕಾಯ್ದ ಕಣ್ಣುಗಳನ್ನು, ಬದುಕಿನುದ್ದಕ್ಕೂ ನನ್ನ ನಡೆನುಡಿ ನಿರ್ದೇಶಿಸಿದ ಬಾಯಿಯನ್ನು ಸ್ವತಃ ನಾನೇ ಮುಚ್ಚಿದ ವಿಲಕ್ಷಣ ಕ್ಷಣವದು.

ammana nenapu book2ಸಾಯುವ ಕೆಲವೇ ಗಂಟೆಗಳ ಮುಂಚೆ ಅಮ್ಮನನ್ನು ಭೇಟಿಯಾಗಿದ್ದೆ. ಆಧುನಿಕ ಆಸ್ಪತ್ರೆಯ ಹವಾನಿಯಂತ್ರಿತ ವಾತಾವರಣ, ಯಂತ್ರೋಪಕರಣ, ವೈದ್ಯರ ದಾದಿಯರ ಅವಸರದ ಓಡಾಟ ಅಮ್ಮನನ್ನು ಕಂಗೆಡಿಸಿದಂತೆ ಕಂಡಿತು. ಆಮ್ಲಜನಕದ ಮಾಸ್ಕ್ ಒಳಗಿನಿಂದಲೇ ಮೆದುವಾಗಿ, ‘ಮನೆಗೆ ಹೋಗೋಣ’ ಎಂದಳು. ‘ಇನ್ನೆರಡು ದಿನ ಆಸ್ಪತ್ರೆಯವರು ಹೇಳಿದಂತೆ ಕೇಳಿ ಸಹಕರಿಸು, ಆರಾಮಾಗಿ ಮನೆಗೆ ಹೋಗೋಣ’ ಎಂದು ಸಮಾಧಾನಪಡಿಸಿದೆ. ಇದು ನನ್ನ ಮತ್ತು ಅಮ್ಮನ ನಡುವಿನ ಕೊನೆಯ ಸಂಭಾಷಣೆ.

ಅಮ್ಮನಿಗೆ ಸಾಯುವಂತಹ ಗಂಭೀರ ಕಾಯಿಲೆಯೇನೂ ಇರಲಿಲ್ಲ. ವಯೋಸಹಜ ಆರೋಗ್ಯ ಸಮಸ್ಯೆಗಳಿದ್ದವಷ್ಟೇ. ಆದರೆ ಪ್ರತಿಷ್ಠಿತ ಕಾಪರ್ೋರೇಟ್ ಆಸ್ಪತ್ರೆಯ ‘ಕಳಪೆ ಸೇವೆ – ಅಧಿಕ ಆದಾಯ’ ಸಿದ್ಧಾಂತ ಅಮ್ಮನನ್ನು ಅಪಹರಿಸಿಬಿಟ್ಟಿತು. ತನ್ನ ಮಗ ಬುದ್ಧಿವಂತ ಎಂದು ಅತಿಯಾಗಿ ನಂಬಿದ್ದ ದಡ್ಡಿ ನನ್ನಮ್ಮ. ಹಾಗಾಗಿ ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆ ಹೆಸರಿನ ಸಾವಿನಮನೆಗೆ ಕರೆದೊಯ್ದ ನನ್ನ ಮೂರ್ಖತನ ಅವಳ ಗಮನಕ್ಕೆ ಬರಲೇಯಿಲ್ಲ!

ಅಮ್ಮನ ಹುಟ್ಟೂರು ಹಾವೇರಿ ಜಿಲ್ಲೆಯ ಕರಜಗಿ ಗ್ರಾಮ. ಅವಳ ಅಪ್ಪ ಮುರಿಗೆಪ್ಪ ಕುಲಕರ್ಣಿ; ಕೃಷಿಕ ವೃತ್ತಿ, ಕುಸ್ತಿ ಪ್ರವೃತ್ತಿ. ಅವಳ ತಾಯಿ ನೀಲಮ್ಮ; ಸಾಕ್ಷಾತ್ ಲಂಕೇಶರ ಅವ್ವ ಕವನದ ಮೂರ್ತರೂಪ. ನನ್ನ ಅಮ್ಮ ಸರ್ವಮಂಗಳಮ್ಮ (ತವರಿನ ಹೆಸರು ಪಾರ್ವತವ್ವ) ಐವರು ತಮ್ಮಂದಿರು, ಓರ್ವ ತಂಗಿಗೆ ಹಿರಿಯಕ್ಕ. ಕರಜಗಿಯ ಈ ಮಗಳು ತನ್ನ ಹದಿನಾರನೇ ವಯಸ್ಸಿಗೇ ಮದುವೆಯಾಗಿ ದೂರದ ಬಳ್ಳಾರಿ ಜಿಲ್ಲೆಯ ವಡ್ಡು ಗ್ರಾಮದ ಸೊಸೆಯಾದಳು. ವರದಾನದಿಯಿಂದ ನಾರೀಹಳ್ಳದ ದಂಡೆಗೆ ಆಕೆಯ ಪಯಣ. ಕರಜಗಿಯ ಜೋಳದ ರೊಟ್ಟಿ, ಹಿಟ್ಟಿನಪಲ್ಯ, ಹಕ್ಕರಕಿಸೊಪ್ಪು, ಖಾರಬೇಳೆ ಸಾರು, ಗೋಧಿಹುಗ್ಗಿ, ಕಾರಹುಣ್ಣಿಮೆಯ ಎತ್ತಿನಬಂಡಿ ಓಟದ ಜಾಗೆಯಲ್ಲಿ ವಡ್ಡು ಗ್ರಾಮದ ಅನ್ನ ಗಟ್ಟಿಪಲ್ಯ, ಮಂಡಾಳು ವಗ್ಗರಣೆ, ಹಿಟ್ಟಚ್ಚಿದ ಮೆಣಸಿನಕಾಯಿ, ಅಲಸಂಧಿ ವಡೆ, ಹಳ್ಳದರಾಯನ ತೇರು. ಕಡುಗಪ್ಪು ಎರೆಭೂಮಿ, ಹದಮಳೆ, ಹತ್ತಿ ಹಸಿಮೆಣಸಿನಕಾಯಿ, ಅಕ್ಕಡಿಕಾಳು ಪ್ರದೇಶದಿಂದ ಕೆಂಪು ಒಣಭೂಮಿ, ಉಳ್ಳಾಗಡ್ಡಿ, ಸಜ್ಜೆ, ನವಣೆ, ಹುಣಸೆ ನೆಲದೆಡೆಗೆ ಅಮ್ಮನ ವಲಸೆ.

ನನ್ನ ತಾತ ಸುವ್ವಿ ಪೊರಯ್ಯಗೆ ಮೂವರು ಮಡದಿಯರು. ಮೊದಲ ಹೆಂಡತಿಯ ಒಬ್ಬನೇ ಮಗ ನನ್ನ ಅಪ್ಪ ಪಂಪಾಪತಿ; ಖಂಡಿತವಾದಿ, ಶ್ರಮಜೀವಿ, ಕೋಪಿಷ್ಟ. ಇಬ್ಬರು ಅತ್ತೆಯರು, ನಾಲ್ವರು ಮೈದುನರು, ಓರ್ವ ನಾದಿನಿಯರಿದ್ದ ತುಂಬು ರೈತಕುಟುಂಬದ ರಥಕ್ಕೆ ಗಾಲಿಯಾದಳು ಅಮ್ಮ. ಅಪ್ಪ ಹೃದಯಾಘಾತದಿಂದ ನಿಧನರಾದಾಗ ಅಮ್ಮನಿಗೆ ನಲವತ್ತೆರಡು ವರ್ಷ. ಆರು ವರ್ಷದ ನಾನು ಮತ್ತು ಎಂಟು ವರ್ಷದ ನನ್ನಕ್ಕ ಇಬ್ಬರನ್ನು ಹೆಗಲಿಗೇರಿಸಿಕೊಂಡ ನಂತರ ಬದುಕಿನ ಕವಲುಗಳನ್ನು ಹಾಯ್ದು ಗುರಿ ತಲುಪಿದ ಅಮ್ಮ ಥೇಟ್ ಬನದ ಕರಡಿಯೇ ಸರಿ.

ತಾನು ಹಾದಿಯುದ್ದಕ್ಕೂ ಅನುಭವಿಸಿದ ಕಷ್ಟಕಾರ್ಪಣ್ಯಗಳೆಲ್ಲಾ ಭಗವಂತನ ಪರೀಕ್ಷೆಯ ಪರಿಯೆಂದು ಖಚಿತವಾಗಿ ನಂಬಿದ್ದಳು ಅಮ್ಮ. ಸ್ವತಃ ಅನುಭವಿಸಿದ, ತನ್ನದೇ ಬದುಕಿನ ಸಂಕಟದ ಘಟನೆಗಳನ್ನು ತೋಡಿಕೊಳ್ಳುವಾಗಲೂ ತಾನು ಭಾಗಿಯೇ ಅಲ್ಲ, ಕೇವಲ ಸಾಕ್ಷಿ ಎಂಬಂತೆ ನಿರ್ಲಿಪ್ತವಾಗಿ ನಿರೂಪಿಸುತ್ತಿದ್ದಳು. ಕೆಡಕು ಬಗೆದವರ ಕುರಿತು ಕೂಡಾ ಕೋಪದ, ದೂರಿನ ದನಿಯಲ್ಲಿ ಮಾತನಾಡದೇ ನಿರ್ಭಾವುಕಳಾಗಿ ನಡೆದ ಪ್ರಸಂಗಗಳನ್ನಷ್ಟೇ ಬಿಚ್ಚಿಡುತ್ತಿದ್ದಳು.

ನನ್ನಲ್ಲಿ ಇಂದಿಗೂ ಸೋಜಿಗ ಹುಟ್ಟಿಸುವ ಅಮ್ಮನ ಬಹುದೊಡ್ಡ ಗುಣವೆಂದರೆ ಆಕೆಯ ಹೊಂದಾಣಿಕೆ ಪ್ರವೃತ್ತಿ; ಬದಲಾದ ಪರಿಸರ, ಪರಿಸ್ಥಿತಿಗೆ ತಕ್ಕಂತೆ ಸಹಜವಾಗಿ ಹೊಂದಿಕೊಳ್ಳುವ ಸ್ವಭಾವ. ನಾನು ಸಣ್ಣವನಿದ್ದಾಗ ಸ್ವಾಮಿಗಳನ್ನು ಕರೆದು ನನ್ನ ಕೈಯಲ್ಲಿ ಅಪ್ಪನ ತಿಥಿಪೂಜೆ ಮಾಡಿಸುತ್ತಿದ್ದಳು. ನನ್ನ ಬುದ್ಧಿ ಬಲಿತಂತೆ ನಾನು ಆ ಪದ್ಧತಿ ನಿರಾಕರಿಸಿ ಅಂದು ಉಪವಾಸ ಮಾಡುವ ಮೂಲಕ ಅಗಲಿದ ಅಪ್ಪನಿಗೆ ಗೌರವ ಸಲ್ಲಿಸಲು ಪ್ರಾರಂಭಿಸಿದೆ; ಅಮ್ಮ ಹೆಮ್ಮೆಪಟ್ಟಳು. vaddu momಸೋದರತ್ತೆ ಮನೆಯಲ್ಲಿ ನನ್ನ ಸಂಬಂಧಿಕರ ಜೊತೆಗೆ ಅಯ್ಯಾಚಾರ ಮಾಡಿಸಿದಾಗ ನನ್ನ ಕೊರಳಿಗೆ ಹಾಕಿದ್ದ ಲಿಂಗುವನ್ನು ಕೆಲದಿನಗಳಲ್ಲೇ ತೆಗೆದುಕೊಟ್ಟೆ; ಅಮ್ಮ ತಕರಾರು ತೆಗೆಯಲಿಲ್ಲ. ನಾನು ಸಾಂಪ್ರದಾಯಿಕ ಮದುವೆಗಳಿಗೆ, ಗುಡಿಗುಂಡಾರಗಳಿಗೆ ಹೋಗುವುದನ್ನು ನಿಲ್ಲಿಸಿದೆ; ನನಗೆ ಬಲವಂತ ಮಾಡಲಿಲ್ಲ. ಆಕೆ ಹೇಗೆ ನನ್ನ ನಿರಾಕರಣೆಗಳಿಗೆ ಅಡ್ಡಿಬರಲಿಲ್ಲವೋ ಹಾಗೆಯೇ ನಾನೂ ಅಮ್ಮನ ನಂಬಿಕೆಗಳಿಗೆ ಧಕ್ಕೆ ತರಲಿಲ್ಲ. ಆಕೆ ಅಪೇಕ್ಷೆಪಟ್ಟ ದೇವಸ್ಥಾನಕ್ಕೆ ಕರೆದೊಯ್ಯುವುದನ್ನು ನಾನು ಕರ್ತವ್ಯದಂತೆ ಪಾಲಿಸಿದೆ. ಅಲ್ಲಿಗೆ ಹೋದಮೇಲೆ ಅಮ್ಮ ದೇವಸ್ಥಾನದ ಒಳಗೆ ಪೂಜೆಯಲ್ಲಿ ನಿರತಳು, ನನಗೆ ಹೊರಗೆ ಚಪ್ಪಲಿ ಕಾಯುವ ಕಾಯಕ.

ಹಬ್ಬದ ದಿನಗಳಲ್ಲಿ ಮನೆಯಲ್ಲಿ ಪೂಜೆಯ ಇಲಾಖೆ ಅಮ್ಮನದಾದರೆ ಹಬ್ಬದಡಿಗೆಯನ್ನು ಖಾಲಿ ಮಾಡುವ ಹೊಣೆ ನನ್ನದು. ಈ ಹೊಣೆಯನ್ನು ನಿರ್ವಹಿಸುವಲ್ಲಿ ನನ್ನ ಗೆಳೆಯರು ನನಗೆ ಸದಾ ಸಹಕರಿಸುತ್ತಿದ್ದರು! ಅಮ್ಮನಿಗೆ ನನ್ನ ಗೆಳೆಯರ ಮೇಲೆ ನನಗಿಂತ ಒಂದು ಗುಲಗಂಜಿ ತೂಕ ಹೆಚ್ಚೇ ಮಮತೆ. ಅವರ ಸೌಖ್ಯದ ಬಗ್ಗೆ ಸದಾ ವಿಚಾರಿಸುತ್ತಿದ್ದಳು. ನನ್ನ ಬಹುಕಾಲದ ಗೆಳೆಯರು ಒತ್ತಟ್ಟಿಗಿರಲಿ, ಇತ್ತೀಚೆಗೆ ಸಂಪರ್ಕಕ್ಕೆ ಬಂದ ಹೊಸ ಮಿತ್ರರನ್ನೂ ಅಮ್ಮ ತನ್ನ ಸರಳ ಅಂತಃಕರಣದಲ್ಲಿ ಮೀಯಿಸುತ್ತಿದ್ದಳು. ಮೊದಲ ಭೇಟಿಯಲ್ಲೇ ಗೆಳೆಯರ ಹೆಂಡತಿ, ಮಕ್ಕಳು, ಕುಟುಂಬದ ವಿವರಗಳನ್ನೆಲ್ಲಾ ಕೂಲಂಕಷ ವಿಚಾರಿಸಿ ಮಾಹಿತಿ ಕಲೆಹಾಕುತ್ತಿದ್ದಳು. ನಂತರ ಅವರು ಎಷ್ಟು ವರ್ಷಗಳ ತರುವಾಯ ಭೇಟಿಯಾದರೂ ಅಮ್ಮ ಅವರ ಕುಟುಂಬದ ಕುಶಲೋಪರಿ ಪರಿಶೀಲಿಸಲು ಮರೆಯುತ್ತಿರಲಿಲ್ಲ. ಆದರೆ ಅಪ್ಪಟ ಸಂಪ್ರದಾಯಶರಣೆಯಾದ ಅಮ್ಮ ನನ್ನ ಸ್ನೇಹಿತರ ಜಾತಿಯನ್ನೆಂದೂ ಗುರುತಿಸುತ್ತಿರಲಿಲ್ಲ.

ನಾನು ‘ಸಂಯುಕ್ತ ಕರ್ನಟಕ’ ಪತ್ರಿಕೆಯಲ್ಲಿ ನೌಕರಿ ಸೇರಿ ಹುಬ್ಬಳ್ಳಿಗೆ ಹೋದಾಗ ನಮ್ಮ ಬಳ್ಳಾರಿ ಮನೆಯಲ್ಲಿ ಅಮ್ಮ ಒಬ್ಬಂಟಿಯಾಗಿದ್ದಳು. ಆಗ ಅವಳ ದೇಖರೇಕಿ ನೋಡಿಕೊಂಡದ್ದು ನನ್ನ ಗೆಳೆಯರಾದ ಹನುಮಂತ, ಅಂಜಿನಿ, ನರಸಿಂಹರೆಡ್ಡಿ, ಗುರುಸ್ವಾಮಿ, ನಾಗಭೂಷಣ. ನನ್ನ ಆಪ್ತಮಿತ್ರರಾದ ಚಂದ್ರಮೌಳಿ, ಕೊಟ್ರಯ್ಯ ಅಕಾಲಿಕವಾಗಿ ನಿಧನರಾದಾಗ ಅಮ್ಮ ಪಟ್ಟ ದುಃಖದ ತೀವ್ರತೆಯ ಚಿತ್ರಣ ಇನ್ನೂ ನನ್ನ ಕಣ್ಣ ಮುಂದಿದೆ. ಒಮ್ಮೆ ತಮ್ಮ ಸಂಪರ್ಕಕ್ಕೆ ಬಂದ ಯಾರನ್ನೇ ಆಗಲಿ ಅಮ್ಮ ಹಚ್ಚಿಕೊಳ್ಳುತ್ತಿದ್ದ ಪರಿಯಿದು.

ಅಪ್ಪನ ನಿಧನಾನಂತರ ವಡ್ಡು ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ನಾನು ಹಾವೇರಿಯಲ್ಲಿ ಮುನ್ಸಿಪಲ್ ಹೈಸ್ಕೂಲು ಸೇರಿದೆ. ಕೆಲಕಾಲ ಸೋದರಮಾವನ ಮನೆಯಲ್ಲಿದ್ದೆ. ನಂತರ ಅಮ್ಮನೂ ಅಲ್ಲಿಗೆ ಬಂದು ಕಾನಡೆ ಕಾಕಾ ಎಂಬುವರ ಬಾಡಿಗೆ ಮನೆಯಲ್ಲಿ ಇರತೊಡಗಿದೆವು. ಅಲ್ಲಿ ಕನಿಷ್ಟ ಸೌಲಭ್ಯಗಳಲ್ಲಿ ಮಕ್ಕಳ ಬದುಕು ಕಟ್ಟುವ ಕಾರ್ಯದಲ್ಲಿ ಅಮ್ಮ ನಿರತಳಾಗಿದ್ದಳು. ಬತ್ತಿ ಸ್ಟೋವಿನಲ್ಲಿಯೇ ರುಚಿರುಚಿಯಾದ ಅಡುಗೆ ತಯಾರಿಸುತ್ತಿದ್ದಳು. ಅವು ಕಷ್ಟದ ದಿನಗಳು. ಆಗಲೂ ಅಮ್ಮ ತುಪ್ಪದಲ್ಲಿ ಜಿಲೇಬಿ ಕರಿದು ಕುದುರೆ ಮೇಲೆ ಮೆರವಣಿಗೆ ಮಾಡಿದ ತನ್ನ ಮದುವೆ ವೈಭವ ನೆನೆದು ಸಂಭ್ರಮಿಸುತ್ತಿದ್ದಳು. ಈ ಅವಧಿಯಲ್ಲಿ ನನ್ನ ಅಕ್ಕನ ಮದುವೆಯಾಯ್ತು. ನನ್ನ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆಂದು ನಾನು ಅಮ್ಮ ಬಳ್ಳಾರಿ ಸೇರಿದೆವು. ಆಗ ನಮ್ಮ ಹಾವೇರಿ ಮನೆಯ ಎಲ್ಲಾ ಸಾಮಾನುಗಳನ್ನು ಕರಜಗಿಯ ತೆಂಬದಮನಿ ಕರಿಬಸಪ್ಪ ಎಂಬ ಹಿತೈಷಿಗಳು ಕೆಂಪುಬಸ್ಸಿನಲ್ಲೇ ಬಳ್ಳಾರಿಗೆ ಸಾಗಿಸಿಕೊಟ್ಟರು. ಕೇವಲ ಎರಡು ಸೈಕಲ್ ರಿಕ್ಷಾದಲ್ಲಿ ಮನೆಸಾಮಾನುಗಳು ಬಸ್ ನಿಲ್ದಾಣದಿಂದ ಮನೆ ತಲುಪಿದವು.

ಒಮ್ಮೆ ಬಳ್ಳಾರಿ ಮನೆಯಲ್ಲಿ ಅದ್ಹೇಗೋ ಹಾವೊಂದು ಸೇರಿಕೊಂಡಿತ್ತು. ಕೈಗೆ ಸಿಗದಂತೆ ಸರಸರ ಹರಿದಾಡಿ ಮನೆಯಲ್ಲೇ ಅಡಗಿಕೊಂಡಿತು. ರಾತ್ರಿ ತನಕ ಹುಡುಕಾಡಿದರೂ ಸಿಗಲಿಲ್ಲ. ಅಂದು ರಾತ್ರಿ ಅಮ್ಮ ತಾನು ನಿತ್ಯ ಮಲಗುತ್ತಿದ್ದ ಮಂಚದ ಮೇಲೆ ನನ್ನನ್ನು ಮಲಗಿಸಿ ತಾನು ನೆಲದಮೇಲೆ ಹಾಸಿಕೊಂಡು ಮಲಗಿದಳು. ಹಾವಿನಿಂದ ಮಗನನ್ನು ರಕ್ಷಿಸಿ ತಾನು ರಿಸ್ಕ್ ತೆಗೆದುಕೊಂಡ ವ್ಯಕ್ತಿಗೆ, ‘ಅಮ್ಮಾ… ಎಂದರೆ ಅಷ್ಟೇ ಸಾಕೇ, ಬೇರೇ ಹೆಸರೂ ಬೇಕೇ….?’

ನಾನು ಹುಬ್ಬಳ್ಳಿಯಲ್ಲಿರುವಾಗ ಮದುವೆಯಾದೆ. ಸಾಹಿತಿಗಳಾದ ಚಂದ್ರಶೇಖರ ಪಾಟೀಲ, ರವಿ ಬೆಳಗೆರೆ, ಚೆನ್ನವೀರ ಕಣವಿ ದಂಪತಿ ನೇತೃತ್ವದಲ್ಲಿ ನಾನು ಸರಳ ಅಸಂಪ್ರದಾಯಿಕ ಮದುವೆಯಾದಾಗ ಅಮ್ಮ ಚಕಾರವೆತ್ತದೆ ಹೆಮ್ಮೆ ಪಟ್ಟಳು. ಹೊಸ ಕಾರು ಕೊಂಡಾಗ ಪೂಜೆ ಮಾಡಲು ಒತ್ತಾಯಿಸಲಿಲ್ಲ. ತಾನು ಮಾತ್ರ ಪ್ರತೀ ಸಾರಿ ಕಾರು ಹತ್ತುವಾಗ ಕೈಮುಗಿದು ಒಳಗೆ ಕಾಲಿಡುತ್ತಿದ್ದಳು. ಬೆಂಗಳೂರಿನಲ್ಲಿ ನಾನು ಕಟ್ಟಿಸಿದ ಹೊಸಮನೆ ಪ್ರವೇಶವನ್ನು ಧಾಮರ್ಿಕ ಸಂಪ್ರದಾಯವಿಲ್ಲದೇ ನಡೆಸಲು ನಿರ್ಧರಿಸಿದಾಗ ಪ್ರತಿಭಟಿಸಲಿಲ್ಲ. ಅಂದು ಕಟ್ಟಡ ಕಾರ್ಮಿಕ ಪೀರಸಾಬ್ ರಿಬ್ಬನ್ ಕತ್ತರಿಸಿ ಮನೆ ಉದ್ಘಾಟಿಸಿದ್ದನ್ನು ಸಂತೋಷದಿಂದ ಸ್ವೀಕರಿಸಿದಳು. ಬಾಲ್ಯದಲ್ಲಿ ನನ್ನ ಸಿಟ್ಟು, ಹಠಮಾರಿತನ ಸಹಿಸಿಕೊಂಡಂತೆಯೇ ದೊಡ್ಡವನಾದಂತೆ ನನ್ನ ಸಂಪ್ರದಾಯ ಮುರಿಯುವ ನಡೆಯನ್ನು ಅರಗಿಸಿಕೊಂಡಳು, ಹರ್ಷಿಸಿದಳು.

ನಾವು ಬೆಂಗಳೂರಿನಲ್ಲಿ ವಿವಿಧ ಕಾರಣಗಳಿಗಾಗಿ ಒಟ್ಟು ಆರು ಬಾಡಿಗೆ ಮನೆಗಳನ್ನು ಬದಲಿಸಿದೆವು. ಬಾಡಿಗೆ ಮನೆ ಮಾಲೀಕರು ಹಾಗೂ ಅಕ್ಕಪಕ್ಕದವರ ಜೊತೆಗಿನ ಅಮ್ಮನ ಸಂಬಂಧ ಗಾಢವಾಗಿ ಬೆಸೆದುಕೊಂಡಿರುತ್ತಿತ್ತು. ಮನೆಯ ಅಡಿಗೆ, ಸುಖ, ದುಃಖ, ಸಮಸ್ಯೆಗಳು ಲೀಲಾಜಾಲವಾಗಿ ಪರಸ್ಪರ ವಿನಿಮಯಗೊಳ್ಳುತ್ತಿದ್ದವು. ನಾವು ಬಾಡಿಗೆಗೆ ಇದ್ದ ಬಹುಪಾಲು ಮನೆಮಾಲೀಕರು ಅಮ್ಮನ ಕಕ್ಕುಲಾತಿ ಸ್ನೇಹಪರತೆಯ ದೆಸೆಯಿಂದಾಗಿ ಇಂದಿಗೂ ನಮ್ಮ ಕುಟುಂಬ ಸ್ನೇಹಿತರಾಗಿ ಮುಂದುವರೆದಿದ್ದಾರೆ. ತಮಿಳು ಸಂಪ್ರದಾಯದ ರಂಗನಾಥನ್, ಜಯಮಣಿ ಅವರ ಕುಟುಂಬದೊಂದಿಗೆ ಮನುಷ್ಯ ಸಂಬಂಧ ಬೆಸೆಯಲು ಅಮ್ಮನಿಗೆ ಭಾಷೆ ಅಡ್ಡಬರಲಿಲ್ಲ. ಅಮ್ಮ ಸತ್ತಾಗ ಈ ಕುಟುಂಬ ಅನುಭವಿಸಿದ ಸಂಕಟ ವ್ಯಾವಹಾರಿಕ ತಕ್ಕಡಿಯಲ್ಲಿ ತೂಗಿ ಅಳೆಯುವಂತಹದಲ್ಲ. ನಾವು ಈಗಿರುವ ಮನೆಮಾಲಿಕರಾದ ಭಾನುಮತಿ ಅವರ ಅಚ್ಚುಕಟ್ಟುತನದ ಬಗ್ಗೆ ಅಮ್ಮನಿಗೆ ಅತೀವ ಮೆಚ್ಚುಗೆ. ಅವರು ಕೂಡ ತಾವು ಸಿದ್ಧಪಡಿಸಿದ ಹೊಸರುಚಿಯನ್ನು ಮೊದಲು ತೋರಿಸುತ್ತಿದ್ದುದು ಅಮ್ಮನಿಗೇ.

ಹಾಗೆಯೇ ನಾವಿದ್ದ ಇನ್ನೊಂದು ಮನೆಯ ಮಾಲೀಕರಾದ ಅಚ್ಯುತ ಮತ್ತು ಅವರ ಮಗಳು ಅಪರ್ಣಾ ಅವರಿಗೆ ಅಮ್ಮ ಅಂದರೆ ಅಚ್ಚುಮೆಚ್ಚು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಈ ಇಂಜಿನಿಯರುಗಳನ್ನು ಮೂರನೇ ತರಗತಿ ಮುಗಿಸದ ನನ್ನಮ್ಮನ ಜೊತೆ ಬೆಸೆದ ಮಾನವಿಯತೆ ನಿಜಕ್ಕೂ ದೊಡ್ಡದು. ಈಗ ಮೈಸೂರಿನಲ್ಲಿ ನಾವಿರುವ ಮನೆ ಪಕ್ಕದ ಸ್ವಾಗತ್ ಮತ್ತು ಗೌರು ದಂಪತಿ ಕೊಡಗಿನವರು. ಅವರು ಅಮ್ಮನೊಂದಿಗೆ ಹರಟಲೆಂದೇ ನಮ್ಮ ಮನೆಗೆ ಬಂದು ಕುಳಿತುಕೊಳ್ಳುತ್ತಿದ್ದರು. ಅವರಿಗೆ ಒಂದೆರಡು ದಿನ ಮಾತಾಡದಿದ್ದರೆ ಪರಸ್ಪರ ಸಮಾಧಾನವಾಗುತ್ತಿರಲಿಲ್ಲ. ನಮ್ಮ ಮನೆ ಮಾಲಿಕರ ದೊಡ್ಡಮ್ಮ ಹೆಗ್ಗಡದೇವನಕೋಟೆ ಕಾಡಿನಂಚಿನವರು. ಆಗಾಗ ಮೈಸೂರಿಗೆ ಬಂದಾಗ ಅಮ್ಮನೊಂದಿಗೆ ಮಾತಿಗಿಳಿಯುತ್ತಿದ್ದರು. ಅವರು ತರುತ್ತಿದ್ದ ವೈನಾಡು ಪ್ರದೇಶದ ಲವಂಗವೆಂದರೆ ಅಮ್ಮನಿಗೆ ಬಹಳ ಇಷ್ಟ. ಅಮ್ಮ ತೀರಿದ ನಂತರ ಅವರು ಮನೆಗೆ ಬಂದು ಗೋಳಾಡಿದ ದೃಶ್ಯ ನನ್ನನ್ನು ಮೂಕವಿಸ್ಮಿತನನ್ನಾಗಿಸಿತು.

ಮೊದಲಿನಿಂದಲೂ ಅಮ್ಮನಿಗೆ ಪುಸ್ತಕ ಪತ್ರಿಕೆ ಓದುವ ಹವ್ಯಾಸವಿತ್ತು. ತನ್ನ ರೂಮಿನ ಕಿಟಕಿ ಬಳಿ ಧಾರಾಳ ಬೆಳಕು ಬರುವ ಜಾಗೆಯಲ್ಲಿ ಕುಳಿತು ದಿನಪತ್ರಿಕೆ ಓದುತ್ತಿದ್ದಳು. ಇತ್ತೀಚೆಗೆ ವೃದ್ಧಾಪ್ಯ ಕಾರಣದಿಂದ ಅಮ್ಮನ ಕಣ್ಣಿನ ನರ ಹಾನಿಯಾಗಿ ಕ್ರಮೇಣ ದೃಷ್ಟಿ ಕ್ಷೀಣಿಸತೊಡಗಿತು. ಇದರ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಾಗ ಪ್ರತೀ ಸಾರಿ ಅಮ್ಮ ವೈದ್ಯರ ಬಳಿ, ‘ಡಾಕ್ಟರೇ, ಸಣ್ಣ ಅಕ್ಷರ ಕಾಣುತ್ತಿಲ್ಲ ನೋಡ್ರಿ…’ ಎಂದು ದೂರುತ್ತಿದ್ದಳು. ಹೇಗಾದರೂ ಮಾಡಿ ಉಳಿದ ದೃಷ್ಟಿಯನ್ನು ಕಾಪಾಡುವ ಸಾಧ್ಯತೆ ಬಗೆಗೆ ಚಿಂತಿಸುತ್ತಿದ್ದ ವೈದ್ಯರಿಗೆ ಅಮ್ಮನ ಬೇಡಿಕೆ, ಓದುವ ತವಕ ಅಚ್ಚರಿಗೊಳಿಸುತ್ತಿತ್ತು. ಡಾ.ವಸುಂಧರಾ ಭೂಪತಿಯವರ ಅತ್ಯಂತ ಹಿರಿಯ ಅಭಿಮಾನಿ ನನ್ನಮ್ಮ. ಆರೋಗ್ಯ ಕುರಿತ ಅವರ ಲೇಖನ, ಪುಸ್ತಕ ಓದುವುದರಲ್ಲಿ, ದೂರದರ್ಶನದಲ್ಲಿ ಅವರ ಕಾರ್ಯಕ್ರಮ ವೀಕ್ಷಿಸುವುದರಲ್ಲಿ ಅಮ್ಮನಿಗೆ ವಿಶೇಷ ಆಸಕ್ತಿ. ಪತ್ರಕರ್ತಮಿತ್ರ ರವೀಂದ್ರಭಟ್ಟ ಅವರ ಮಡದಿ ದೀಪಾ ಅವರು ಅಮ್ಮನಲ್ಲಿದ್ದ ‘ವಿವೇಕ’ ವನ್ನು ಸದಾ ಕೊಂಡಾಡುತ್ತಾರೆ.

ಕರಜಗಿಯ ಬಾಲ್ಯ ಗೆಳತಿ ಸಾವಂತ್ರವ್ವ, ವಡ್ಡು ಗ್ರಾಮದ ಸಮವಯಸ್ಸಿನ ಕಾತ್ಯಾಯಿನಮ್ಮ, ಸಿಂಗಾಡಿ ವೀರಮ್ಮ, ಆಳುಮಕ್ಕಳಾದ ಅಳ್ಳಕ್ಕ ಗಂಗವ್ವ, ಧಾರವಾಡದ ಸಂಬಂಧಿ ಸರ್ವಕ್ಕ ಕಕ್ಕಿ, ಬೆಂಗಳೂರಿನ ಮನೆಗೆಲಸದ ಅಜ್ಜಿ, ಮೈಸೂರಿನ ಗೆಳೆಯ ಚಿನ್ನಸ್ವಾಮಿ ಮಗಳು ಪುಟಾಣಿ ಮಾನ್ಯ…. ಹೀಗೆ ಊರು ಅಂತಸ್ತು ವಯಸ್ಸಿನ ಭೇದವಿಲ್ಲದೇ ಅಮ್ಮನ ಆಪ್ತವಲಯ ವ್ಯಾಪಿಸುತ್ತಿತ್ತು. ನಾನಾಗಿಯೇ ಮುಂದೆಬಿದ್ದು ಮಾತನಾಡಿಸದೆ ದೂರ ಸರಿಯುವ ಊಡಕ ಸ್ವಭಾವ ನನ್ನದಾದರೆ ಅಮ್ಮನದು ಇದಕ್ಕೆ ತದ್ವಿರುದ್ಧವಾದ ಎಲ್ಲರನ್ನೂ ಸೆಳೆಯುವ ವ್ಯಕ್ತಿತ್ವ. ಬಾಲ್ಯದಲ್ಲಿ ಅಮ್ಮನ ಅಡುಗೆಯೊಂದಿಗೆ ವಾತ್ಸಲ್ಯ ಉಂಡ ಜಗಣ್ಣ, ಮಹಮ್ಮದ್, ಮಾಯಪ್ಪ ಇಂದಿಗೂ ಕೃತಜ್ಞತೆಯಿಂದ ನೆನೆಯುತ್ತಾರೆ.

ಮಲೆನಾಡು ಸಾಗರದಿಂದ ಬಂದ ಸೊಸೆ ಲತಾರಾಣಿ ಮತ್ತು ಅಮ್ಮನ ಸಂಬಂಧವಂತೂ ಅರ್ಥ, ತರ್ಕ, ಆಧ್ಯಾತ್ಮ, ವೈಚಾರಿಕತೆ ಮೀರಿದ್ದು. ಅವರಿಬ್ಬರ ಅನ್ಯೋನ್ಯತೆ ಅಸೂಹೆ ಹುಟ್ಟಿಸುವಷ್ಟು ಗಾಢ. ಅಮ್ಮ ತಾನು ನಡೆದುಬಂದ ಸುದೀರ್ಘ ಹಾದಿಯ ಪ್ರತಿ ವಿವರವನ್ನು ಅವಳೆದುರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾಳೆ. ನನಗೂ ಗೊತ್ತಿಲ್ಲದ ಅಮ್ಮನ ಅದೆಷ್ಟೋ ರಹಸ್ಯಗಳು, ವಿಷ ಘಳಿಗೆಗಳು, ಇಸವಿಗಳು, ತ್ಯಾಗಗಳು, ಸ್ವಾರ್ಥಗಳು ನನ್ನ ಹೆಂಡತಿಯ ಸಂಗ್ರಹದಲ್ಲಿ ಭದ್ರವಾಗಿವೆ. ಹಾಗೆ ನೋಡಿದರೆ ಅಮ್ಮನನ್ನು ಕುರಿತ ಈ ಲೇಖನ ಬರೆಯಲು ನನಗಿಂತ ಅವಳೇ ಸೂಕ್ತ. ಸರಳವಾಗಿ ಹೇಳುವುದಾದರೆ ಅವರಿಬ್ಬರು ಅತ್ತೆಸೊಸೆಗಿಂತ ಹೆಚ್ಚಾಗಿ ತಾಯಿಮಗಳಂತಿದ್ದರು. ಅವರು ಅಂತರಂಗದ ಗೆಳತಿಯರೂ ಹೌದು.

ಅಮ್ಮ ಮತ್ತು ನನ್ನ ಸಂಬಂಧ ಎಂದೂ ವಾಚ್ಯವಾಗಿರಲಿಲ್ಲ. ಪರಸ್ಪರ ಮುಖಾಮುಖಿ ಚರ್ಚಿಸಿದ್ದು, ವಿಚಾರವಿನಿಮಯ ಮಾಡಿಕೊಂಡಿದ್ದು, ಕೂತು ಹರಟಿದ್ದು ಇಲ್ಲವೇ ಇಲ್ಲ. ನಮ್ಮಿಬ್ಬರ ನಡುವೆ ಮಾತಿನ ಹಂಗು ಮೀರಿದ ಸಂವಹನ ಸಾಧ್ಯವಿತ್ತು. ಅಪ್ಪ ಅಗಲಿದ ನಂತರ ಆಕೆಯೊಂದಿಗಿನ ನನ್ನ ನಲವತ್ತಾರು ವರ್ಷಗಳು ಹೀಗೆಯೇ ಕಳೆದವು. ಈ ಸಂಬಂಧ ಎಷ್ಟು ಸೂಕ್ಷ್ಮವಾಗಿತ್ತೆಂದರೆ ಉಣ್ಣುವಾಗ ನನ್ನ ಮುಖದ ಮೇಲಿನ ಗೆರೆಗಳಿಂದಲೇ ಅಮ್ಮ ತಾನು ಮಾಡಿದ ಅಡುಗೆ ನನಗೆ ಇಷ್ಟವಾಯಿತೋ ಇಲ್ಲವೋ ಗ್ರಹಿಸಿಬಿಡುತ್ತಿದ್ದಳು. ನಾನು ಬಾಯಿಬಿಟ್ಟು ಹೇಳದಿದ್ದರೂ ನನ್ನ ದೈನಂದಿನ ಚಟುವಟಿಕೆಗಳ ಪೂರ್ಣ ಜಾಡು ಆಕೆಗಿರುತ್ತಿತ್ತು. ಮನೆಯಲ್ಲಿನ ನನ್ನ ನಡುವಳಿಕೆಗಳ ಮೇಲೆಯೇ ಹೊರಗೆ ನಡೆದಿರಬಹುದಾದ ಹಿತಾಹಿತ ಘಟನೆಗಳನ್ನು ಊಹಿಸಿಬಿಡುತ್ತಿದ್ದಳು. ನನಗೆ ಸಿಟ್ಟು ಯಾವಾಗ ಬರುತ್ತದೆ, ನಾನು ಯಾವಾಗ ಯಾರೊಂದಿಗೆ ಹೇಗೆ ವರ್ತಿಸುತ್ತೇನೆ, ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂಬ ಬಗ್ಗೆ ನನಗಿಂತಲೂ ಆಕೆಗೆ ಹೆಚ್ಚು ಖಚಿತ ಅರಿವಿರುತ್ತಿತ್ತು.

ಬದುಕನ್ನು ರೂಪಿಸುವುದು, ಕಟ್ಟುವುದು, ಬಾಳುವುದು, ಅನುಭವಿಸುವುದು ಮುಂತಾಗಿ ಗುರುತಿಸುತ್ತಾರೆ. ಆದರೆ ಈ ಯಾವ ಪದಗಳೂ ತಾಯಿಗೆ ಯಥಾರ್ಥ ಅನ್ವಯಿಸುವುದಿಲ್ಲ. ಬದುಕು ತೇಯ್ದ ತಾಯಿ ಎಂದರೆ ಅವಳ ತ್ಯಾಗದ ಒಂದಂಶ ಹಿಡಿದಂತಾದೀತು. ನನ್ನ ಅಮ್ಮನ ಬದುಕೂ ಅಷ್ಟೇ; ಆಕೆ ತನ್ನವರಿಗಾಗಿ ಸುವಾಸನೆ ಸೂಸುತ್ತಾ ಸವೆದ ಶ್ರೀಗಂಧದ ಕೊರಡು. ಇಂದು ನನ್ನ ಪಾಲಿಗೆ ಅಮ್ಮ ಅಂದರೆ ಅಂತ್ಯವಿಲ್ಲದ ದುಃಖ, ಮರೆಯಾಗದ ಮುಖ, ಮರೆಯಲಾಗದ ಅಂಕ.

ಅಮ್ಮ ತಮ್ಮ 88ನೇ ವಯಸ್ಸಿನಲ್ಲಿ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದಾಗ ನನಗೊಂದು ಸಂದೇಶ ಬಂತು: ‘ನಿಮ್ಮ ತಾಯಿ ನಿಧನರಾದದ್ದು ತಿಳಿದು ಅತೀವ ದುಃಖವಾಯ್ತು. ಅಪಾರ ಅಂತಃಕರಣದ ಆಕೆ ಎಲ್ಲರಿಗೂ ಒಳಿತು ಬಯಸುತ್ತಿದ್ದರು. ಅಂತಹ ಉದಾತ್ತ ಜೀವದ ಅಗಲಿಕೆ ನಮ್ಮನ್ನು ಸದಾ ಕಾಡುತ್ತದೆ.’ ಹೀಗೆ ಸಂತಾಪ ಸೂಚಿಸಿದವರು ನನ್ನ ತಾಯಿಯ ತವರೂರಿನ ನಮ್ಮ ಕುಟುಂಬ ವೈದ್ಯರಾದ ಡಾ.ಎಸ್.ವಿ.ಹೊರಡಿ.

ಇತ್ತೀಚೆಗೆ ಕುಟುಂಬ ವೈದ್ಯರ ಸೇವೆ ಮರೆಯಾಗುತ್ತಿದೆ. ಕುಟುಂಬದ ಒಬ್ಬ ಸದಸ್ಯರಂತೆಯೇ ಆಪ್ತವಾಗಿರುತ್ತಿದ್ದ ಕುಟುಂಬ ವೈದ್ಯರು ಮನುಷ್ಯ ಸಂಬಂಧದ ತೀರ್ವತೆಗೆ ಮಾದರಿಯಾಗಿದ್ದರು. ಅವರ ಒಂದು ಭೇಟಿ, ಉಪಸ್ಥಿತಿ ಸದಸ್ಯರ ನೆಮ್ಮದಿಗೆ, ಭರವಸೆಗೆ ಕಾರಣವಾಗುತ್ತಿತ್ತು. ಇಂದಿನ ಯಾಂತ್ರಿಕ ಚಿಕಿತ್ಸಾ ಪದ್ಧತಿಯಲ್ಲಿ ಇಂತಹ ಮಾನವೀಯ ಅಂಶವನ್ನು ಬೆಸೆಯಲು ಏಕೆ ಸಾಧ್ಯವಿಲ್ಲ ?

‍ಲೇಖಕರು Admin

May 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಮಂಜುಳಾ.ಎನ್.ಡಿ.

    ಆಪ್ತ ಬರಹ.ವ್ಯಕ್ತಿತ್ವದ ಹಿರಿಮೆಗೆ ಕಲಿಕೆಯ ಹಂಗಿಲ್ಲ

    ಪ್ರತಿಕ್ರಿಯೆ
  2. ಆದಿವಾಲ ಗಂಗಮ್ಮ

    ಎರಡು ಸೈಕಲ್ ರಿಕ್ಷಾದಲ್ಲಿ ಸಾಗಿಸಬಹುದಾದ ಸಮಾನು ಸರಂಜಾಮುಗಳಲ್ಲಿ ಸರಳವಾಗಿ ಸಂಸಾರ ಸಾಗಿಸುವ ಚಂದ್ರಕಾಂತ ವಡ್ಡುರವರ ತಾಯಿಯ ಜಾಣ್ಮೆ ಮತ್ತುಸರಳತೆ, ಎಲ್ಲರಲ್ಲೂ ಹೊಂದಾಣಿಕೆ,ಆತ್ಮೀಯತೆ, ಸ್ನೇಹಪರತೆ,ಉದಾತ್ತತೆ,ನಿರ್ಭಾವುಕತೆ ಒಂದೇ ಎರಡೇ ಆ ತಾಯಿಯ ಬೆಲೆ ಕಟ್ಟಲಾಗದ ಗುಣಗಳು.ನಿಮ್ಮಿಬ್ಬರ ಮಾತಿನ ಹಂಗು ಮೀರಿದ ಸಂವಹನ ಆ ಕರುಳಿನ ಸಂವಹನ ಅವರ್ಚನೀಯ,ನೀವು ಧನ್ಯರು ವಡ್ಡುರವರೆ.ನೀವು ಸಹ ಆಕೆಯನ್ನು ಚೆನ್ನಾಗಿ ಅರ್ಥದಿದ್ದೀರಿ ಎಂತಲೇ ಇಷ್ಟು ಅರ್ಥವತ್ತಾಗಿ ಅವರ ಬಗ್ಗೆ ಬರೆಯಲು ಸಾಧ್ಯವಾಯಿತು. ನಿಮ್ಮನ್ನು ಪಡೆದ ಆತಾಯಿ ಕೂಡ ಧನ್ಯಳೇ.
    ಆದರೆ, ನಮ್ಮಮ್ಮ ದಡ್ಡಿ ಚಿಕಿತ್ಸೆ ನೆಪದಲ್ಲಿ ಸಾವಿನ ಮನೆಗೆ ಕರೆದೊಯ್ದ ನನ್ನ ಮೂರ್ಖತನವನ್ನು ಆಕೆ ತಿಳಿಯಲಿಲ್ಲ ಎಂದು ನೀವು ಏಕೆ ತಿಳಿದಿದ್ದೀರೋ ಗೊತ್ತಾಗುತ್ತಿಲ್ಲ. ಅದು ಮೂರ್ಖತನವಲ್ಲ ತಾಯಿಯನ್ನು ಬದುಕಿಸಿಕೊಳ್ಳುವ ಕಕ್ಕುಲತೆಯಂದು ನನ್ನ ಭಾವನೆ. ತಾಯಿ ಎಂಬ ಬೆಲೆ ಕಟ್ಟಲಾಗದ ಆನಘ್ಯರತ್ನವನ್ನು ಪರಿಚಯಿಸಿದಿದ್ದೀರಿ, ಹೃದಯ ತುಂಬಿಸಿದಿದ್ದೀರಿ ನಿಮಗೆ ಮತ್ತು ನಿಮ್ಮ ತಾಯಿ ದೇವತೆಗೆ ನೂರು ನಮನಗಳು

    ಪ್ರತಿಕ್ರಿಯೆ
    • chandrakanta vaddu

      ನೀವು ನನ್ನ ಲೇಖನ ಗ್ರಹಿಸಿದ ರೀತಿಗೆ, ಸೂಕ್ಷ್ಮಮತಿಗೆ ತಲೆಬಾಗುವೆ .

      ಪ್ರತಿಕ್ರಿಯೆ
  3. ಟಿ.ಕೆ.ಗಂಗಾಧರ ಪತ್ತಾರ

    ಮನ ಕಲಕುವ ಹೃದಯ ಕೆದಕುವ ಸೂಕ್ಷ್ಮ ಸಂವೇದನೆಯ ಪರಮಾಪ್ತ ಬರಹ. ಮಿತ್ರ ಚಂದ್ರಕಾಂತ ವಡ್ಡುರವರ ಬರವಣಿಗೆಯ ವೈಖರಿಯೇ ಹಾಗೆ. ಮೃದು-ಮಧುರ ಶಿಲ್ಪವನ್ನು ಕಡೆದ ಹಾಗೆ. ಅಮ್ಮನನ್ನು ಇದಕ್ಕಿಂತ ಚೆನ್ನಾಗಿ ಅರ್ಥೈಸುವುದು ಸಾಧ್ಯವಿಲ್ಲವೆಂಬಂತಹ ನೈಜ ಚಿತ್ರಣ. “ತಾಯಿ” ಎನ್ನುವ “ವ್ಯಕ್ತಿ”ಯೇ ಹಾಗೆ. ಏನಂದೆ ನಾನು: “ವ್ಯಕ್ತಿ”ಯೆಂದೆನೇ? ಬರೀ ವ್ಯಕ್ತಿಯಲ್ಲ ಸ್ವಾಮಿ, ಸರಿಸಾಟಿಯಿಲ್ಲದ ಲೋಕೈಕ ವಿಶ್ವಮಾತಾ “ಶಕ್ತಿ”, ಚಿರಂತನ ಸಂಜೀವಿನಿ-“ಶಕ್ತಿ”. ನಮ್ಮ ಜಾನಪದ ಗರತಿಯರೇ ಎದೆ ತುಂಬಿ ಹಾಡಿದ್ದಾರಲ್ಲ

    “ಸಾವಿರ ಮಂದ್ಯಾಗ/ತಾಯಿನ್ಯಾರು ಹೋಲ್ಯಾರು/
    ಸಾವಿರ ಕೊಳ್ಳಿ ಒಲಿಯಾಗ
    ಸಾವಿರ ಕೊಳ್ಳಿ ಒಲಿಯಾಗ/-ಉರಿದರೂ
    ಜ್ಯೋತಿ ನಿನ್ಯಾರು ಹೋಲ್ಯಾರು//”

    “ಕಾಶೀಗೆ ಹೋಗುದಕ/ ಏಸೊಂದು ಹರದಾರಿ/
    ತಾಸೊತ್ತೀನ ದಾರಿ ತವರೂರು
    ತಾಸೊತ್ತೀನ ದಾರಿ ತವರೂರು/-ಮನಿಯಾಗ
    ಕಾಶಿ ಕುಂತಾಳ ಹಡದವ್ವ//”

    ತ್ಯಾಗಮಯಿ-ಪ್ರೇಮಮಯಿ-ಕರುಣಾಮಯಿ-ಸಹನಾಮಯಿ-ಮಹಾತಾಯಿಯ ಸತ್ಪುತ್ರ-ಸನ್ಮಿತ್ರ- ವಡ್ಡುರವರಿಗೆ ವಂದನೆಗಳು

    ಪ್ರತಿಕ್ರಿಯೆ
    • chandrakanta vaddu

      ನಿಮ್ಮ ಪ್ರತಿಕ್ರಿಯೆ ನನ್ನಲ್ಲಿ ಸಾರ್ಥಕ ಭಾವ ಮೂಡಿಸಿದೆ. ಧನ್ಯವಾದಗಳು

      ಪ್ರತಿಕ್ರಿಯೆ
  4. ವೀರಭದ್ರಗೌಡ. ಎನ್ ಬಳ್ಳಾರಿ

    ಸರ್…
    ನಿಮ್ಮ ಅಮ್ಮನ ಕುರಿತು ಓದುವಾಗ ವಿದ್ಯುತ್ ಇಲ್ಲದ ಅಂದಿನ ನಡವಿ ಗ್ರಾಮದಲ್ಲಿ ನೀನು ಓದಬೇಕೆಂದು. ನಾಲ್ಕನೇ ತರಗತಿ ವರೆಗೆ ಓದಿಸಿ . ಅವರ ಸಹೋದರರ ಸಹಾಯದಿಂದ ಹೈಸ್ಕೂಲ್ ಓದಿಸಿ. ಅಂಗೂ ಹಿಂಗೂ ಪದವಿ ಮುಗಿಸಿದ ನಾನು. ಸ್ನಾತೋತ್ತರ ಪದವಿ ಮಾಡಲು ಹಣ ಇಲ್ಲದೆ
    ಮನೆಯಲ್ಲಿ ಕೂತ ನನಗೆ ತನ್ನ ಒಡವೆ ಮಾರಿ ಓದಿಸಿದ ನನ್ನ ತಾಯಿಯ ಸದೇಚ್ಛೆ ಅರ್ಥವಾಗುತ್ತಿದೆ. ಅಮ್ಮನ ಬಗ್ಗೆ ಎಷ್ಟೇ ಬರೆದರೂ ಸಾಲದು ನಿಮ್ಮ ಶಬ್ದ ಭಂಡಾರದಲ್ಲಿ ಓದಿದ್ದು ಅತೀವ ಸಂತಸ ತಂದಿತು

    ಪ್ರತಿಕ್ರಿಯೆ
  5. K S Chandrashekar

    ಇಂದು ನನ್ನ ಪಾಲಿಗೆ ” ಅಮ್ಮ ಎಂದರೆ ಅಂತ್ಯವಿಲ್ಲದ ದುಃಖ, ಮರೆಯಲಾರದ ಮುಖ, ಮರೆಯಲಾಗದ ಅಂಕ,
    ಎಂತಹ ಹೃನ್ಮನ ಕಲಕುವ ಭಾವ.ತಾಯಿಯಂದರೆ ಸಾಕು ಭಾವ ಭಿತ್ತಿ ತುಂಬಿಬರುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: