‘ನೋಡಿದ್ರಾ, ಮಗಳು ಬಂದಿದಾಳೆ..’ ಎನ್ನುತ್ತಾ

ಮೆದು ಹತ್ತಿಸೀರೆಯ ಮೃದು ಸ್ಪರ್ಶ

vasumati udupa

ವಸುಮತಿ ಉಡುಪ

ಕಾಲದ ಓಟದ ವೇಗ ಯಾವತ್ತಿಗಿಂತಾ ಹೆಚ್ಚು ಗಮನಕ್ಕೆ ಬರುವುದು ಹುಟ್ಟು, ಸಾವುಗಳಂತಹಾ ಸಂಚಲನದ ಸಂದರ್ಭಗಳಲ್ಲಿ. ಇವತ್ತು ನಾಳೆಯಾಗಿ, ನಾಳೆ ನಾಡಿದ್ದಾಗಿ, ಕ್ಷಣ ವಿರಮಿಸದೆ ದಿನಗಳು ಉರುಳುರುಳಿ ಹೋಗುತ್ತಿರುತ್ತವೆ. ಅಮ್ಮ ಸತ್ತು ಇವತ್ತಿಗೆ ಒಂದು ತಿಂಗಳು. ಉಳಿದವರ ಆಯುಷ್ಯದಲ್ಲೂ ಅಷ್ಟೇ ಕಡಿತವಾಗಿದ್ದು ಗೊತ್ತೇ ಆಗದ ಮಾಯೆ. ತೊಡೆ ಮೇಲ್ಭಾಗದ ಜಾಯಿಂಟಿನ ಎಲುಬು ಲಡ್ಡಾಗಿ ಮುರಿದು ಆಪರೇಷನ್ ಆಗಿ ಸ್ಟೀಲ್ ರಾಡ್ ಅಳವಡಿಸಿಕೊಂಡು ನರ್ಸಿಂಗ್ ಹೋಮಿನ ಮಂಚದ ಮೇಲೆ ಮಲಗಿದ್ದ ದಿನಗಣನೆಯ ಆ ಹನ್ನೆರಡು ದಿನಗಳು ಅಮ್ಮ ಅದೆಷ್ಟು ಲವಲವಿಕೆಯಿಂದಿದ್ದಳು ಅಂದರೆ ಸಾವು ಬೆನ್ನ ಹಿಂದೆ ಬಂದು ಹೊಂಚು ಹಾಕಿ ನಿಂತಿತ್ತು ಎನ್ನುವುದನ್ನು ಇವತ್ತಿಗೂ ಜೀರ್ಣಿಸಿಕೊಳ್ಳಲಾಗದೆ ‘ಅಮ್ಮ ಇನ್ನಿಲ್ಲ’ ಅನ್ನುವುದು ಸುಳ್ಳೇ ಎನ್ನುವ ಕನವರಿಕೆ.

ammana nenapu book2‘ಇತ್ತೀಚಿನ ವರ್ಷಗಳಲ್ಲಿ ಅಮ್ಮ ಅಷ್ಟು ಖುಷಿಯಾಗಿದ್ದಿದ್ದು ಆಸ್ಪತ್ರೆಯಲ್ಲಿ ಕಳೆದ ದಿನಗಳಲ್ಲೇ’ ಎನ್ನುವುದು ಮಕ್ಕಳೆಲ್ಲರ ಒಮ್ಮತದ ಅಭಿಪ್ರಾಯ. ಬೇರೆಬೇರೆ ಊರುಗಳಲ್ಲಿ ನೆಲೆಯಾಗಿದ್ದ ಮಕ್ಕಳೆಲ್ಲಾ ನೋಡಿ ಹೋಗಲು ಬರುತ್ತಿದ್ದಿದ್ದು ಅಮ್ಮನಿಗೆ ವಿಪರೀತದ ಸಂಭ್ರಮ, ಖುಷಿ. ಇರುವುದು ಆಸ್ಪತ್ರೆಯ ಮಂಚದ ಮೇಲೆ ಎನ್ನುವುದು ಮರೆತು ಹೋಗಿ, ಅಥವಾ ಜ್ಞಾಪಕದಲ್ಲಿದ್ದೂ ಕ್ಯಾಂಟೀನಿನಿಂದ ಕಾಫಿ, ತಿಂಡಿ ತರಿಸಿ ತಿನ್ನಿಸುವ ಅವಸರ, ಕಾಳಜಿ. ಮಕ್ಕಳಿಗೆ ಹೊಟ್ಟೆಬಿರಿಯ ಥರಥರದ ತಿಂಡಿ ಮಾಡಿಕೊಡುತ್ತಾ, ಕಟ್ಟಿಕೊಡುತ್ತಾ, ಅದರಲ್ಲೇ ಜೀವನದ ಸಾರ್ಥಕತೆ ಅನುಭವಿಸಿದವಳು ನನ್ನಮ್ಮ.

ತೌರೂರು ಅಂದರೆ ಡಬ್ಬಗಟ್ಟಲೆ ಮಾಡಿಟ್ಟಿರುತ್ತಿದ್ದ ಕುರುಕಲು ತಿಂಡಿ, ಡ್ರಮ್ಮುಗಟ್ಟಲೆ ಹಲಸಿನ ಹಪ್ಪಳ. ತನ್ನ ಕೈಲಾಗುವವರೆಗೆ ಅಮ್ಮ ಈ ಕೈಂಕರ್ಯ ತಪ್ಪಿಸಲಿಲ್ಲ. ಅಮ್ಮನಿಗೆ ಎರಡು ಕೆಲಸಗಳ ಕುರಿತು ಅನಾಸಕ್ತಿ ಇದ್ದಿದ್ದು ಚೋದ್ಯ ಅನಿಸುತ್ತದೆ. ಅಪರೂಪದ ತಿಂಡಿ ಕರಿಯಲು ಕಲೆಸಿದ ಹಿಟ್ಟಿಗೆ ‘ಉಪ್ಪು ಸಾಕಾಗಿದೆಯಾ?’ ಎಂದು ನೋಡುವುದಕ್ಕೆ ಮಕ್ಕಳ ರಸನೇಂದ್ರಿಯವೇ ಸಾಕ್ಷಿ ಹೇಳಬೇಕು. ಮಕ್ಕಳಿಗೆ ಹಂಚಿ ಡಬ್ಬ ತುಂಬಿಸಿಟ್ಟ ಮೇಲೂ ತಿಂಡಿಯ ರುಚಿ ನೋಡಲು ಅವಳಿಗೆ ಬೇಜಾರು.

ಗಂಟೆಗಟ್ಟಲೆ ಒಲೆ ಶಾಖದ ಬಳಿ ಕೂತು ಬೆಂದವಳಿಗೆ ಯಾವ ಅಪರೂಪದ ತಿನಿಸೂ ನಾಲಿಗೆಗೆ ಸೋಕಿಸಬೇಕೆನಿಸುತ್ತಿರಲಿಲ್ಲ. ‘ತಿನ್ನೋಣ ಅನ್ನಿಸೋದು ನಾಳೆಗೆ’ ಅನ್ನುತ್ತಿರುತ್ತಿದ್ದಳು ಅಮ್ಮ. ಆ ನಾಳೆ ತಿನ್ನುತ್ತಿದ್ದಳೋ, ಇಲ್ಲವೋ ಅವಳಿಗೇ ಗೊತ್ತು. ಅಮ್ಮನಿಗೆ ರಗಳೆ ಎನಿಸುತ್ತಿದ್ದ ಮತ್ತೊಂದು ಕೆಲಸ ಅವಳೇ ಹೆಚ್ಚಿ, ತುರಿದು, ಅರೆದು ಮಾಡಿದ ಅಡುಗೆಗೆ ಒಗ್ಗರಣೆ ಕೊಡುವುದು. ‘ಆದ ಕೆಲಸಕ್ಕೆ ಅತ್ತೆಮ್ಮ ಬಂದ ಹಾಗೆ’ ಕಬ್ಬಿಣದ ಸೌಟನ್ನು ಕೆಂಡದ ಮೇಲಿಟ್ಟು ಒಗ್ಗರಣೆ ಚಟಪಟಗುಟ್ಟಿಸಿ ಮೇಲೋಗರದ ಪಾತ್ರೆಗೆ ಅದ್ದಿ ಚುಂಯ್ಗುಟ್ಟಿಸುವ ಕೆಲಸ ಯಾರಾದರೊಬ್ಬ ಹೆಣ್ಣುಮಗಳ ಪಾಲಿಗೆ ಬೀಳುತ್ತಿತ್ತು.

ಪ್ರತಿ ವರ್ಷ ಗೌರಿ ಹಬ್ಬದ ಹಿಂದಿನ ದಿನ ತೌರಿಗೆ ಹಾಜರಿ ಹಾಕಿ, ಬಸ್ಸಿಳಿದು ಒಂದೂವರೆ ಮೈಲಿ ನಡೆದು ಹೋಗುವ ಸಂದರ್ಭದಲ್ಲಿ ನಮಗಾಗಿ ಕಾಯುತ್ತಿರುವ ತಿಂಡಿಯ ನೆನಪಿನಿಂದ ಬಾಯಲ್ಲಿ ನೀರು. ಉಷ್ಣ ಎಂದು ಕೆಸುವಿನ ಪತ್ರೊಡೆಯ ಮೇಲೆ ಲಿಂಬೆ ಗಾತ್ರದ ಬೆಣ್ಣೆ. ಸ್ಪಂಜಿನಂತಹಾ ಸಿಹಿಸಿಹಿ ಮಜ್ಜಿಗೆಕಡುಬಿನ ಮೇಲೆ ಹೆರೆ ತುಪ್ಪ. ಮರುದಿನ ಹಬ್ಬದ ಕೆಲಸ ಕೈ ತುಂಬಾ ಇರುವುದರಿಂದ ಹಿಂದಿನ ಸಂಜೆಯೇ ಮಕ್ಕಳು, ಮೊಮ್ಮಕ್ಕಳಿಗೆ ತಲೆಗೆ ಹರಳೆಣ್ಣೆ ತಟ್ಟಿ ಎರೆಯುವ ಉಮೇದಿನಲ್ಲಿರುತ್ತಿದ್ದ ಅಮ್ಮ ಹರಳೆಣ್ಣೆ ಗಿಂಡಿ ಹಿಡಿದು ಎದುರು ಬಂದು ನಿಂತಾಗ ತಾಕಿದರೂ ತಾಕದಂತಾ ಮೆದು ಹತ್ತಿಸೀರೆಯ ಮೃದು ಸ್ಪರ್ಶ ಆಗ ವಿಶೇಷ ಅನ್ನಿಸದಿದ್ದರೂ ಈಗ ನೆನೆದರೆ ಮನಸ್ಸು ಆದ್ರ್ರ. ವಯಸ್ಸು ಮಾಗಿ ಅಮ್ಮನ ಕಾರ್ಯಕ್ಷೇತ್ರ ಮನೆಯೊಳಗೆ ನಿಧಾನವಾಗಿ ಓಡಾಡುವಷ್ಟಕ್ಕೆ ಸೀಮಿತವಾದರೂ, ಗೌರಿಹಬ್ಬಕ್ಕೆ ಪ್ರತಿವರ್ಷ ಹೆಮ್ಮಕ್ಕಳು ತೌರಿಗೆ ಹೋಗುವುದು ನಿಂತರೂ, ಅಮ್ಮ ಹೆಣ್ಣುಮಕ್ಕಳ ಮನೆಗೆ ತಿಂಗಳುಗಟ್ಟಲೆ ಮುಂಚೆ ಹಬ್ಬದ ಬಾಗಿನ ತಲುಪಿಸುವುದನ್ನು ವ್ರತದಂತೆ ನಡೆಸಿಕೊಂಡು ಬಂದಳು.

ಬಿಡುವಿನ ವೇಳೆಯಲ್ಲಿ ಮೇಜಿನ ಮೇಲೊಂದು ಪೇಪರ್ ಹಾಸಿಕೊಂಡು ಹತ್ತಿ ಎಳೆ ಹೊಸೆದು ಗೆಜ್ವಸ್ತ್ರ ಮಾಡುತ್ತಿದ್ದ ಅಮ್ಮ ಈ ಕಲೆಯಲ್ಲಿ ಅದೆಷ್ಟು ಪರಿಣತಿ ಸಾಧಿಸಿದ್ದಳು ಅಂದರೆ ಬಣ್ಣಬಣ್ಣದ ಸಂತದ ತಗಡು ಕತ್ತರಿಸಿ, ಅಂಟಿಸಿ, ಮಾಡಿದ ಥರಥರದ ಹತ್ತಿಹಾರಗಳನ್ನು ಗೌರಿಪೂಜೆಯ ದಿನ ದೇವರಿಗೆ ಏರಿಸಿದ ಮೇಲೂ ಮರುದಿನ ನಿಮರ್ಾಲ್ಯದ ಜೊತೆ ಬಿಸಾಕಲು ಕೈ ಬರದೆ ಆ ಹಾರಗಳು ಬಾಗಿಲ ತೋರಣವಾಗಿ, ದೇವರ ಫೋಟೋಗಳಿಗೆ ಅಲಂಕಾರವಾಗಿ, ಧೂಳು ಹಿಡಿದು ಬಣ್ಣ ಮಾಸುವವರೆಗೆ ತಿಂಗಳುಗಟ್ಟಲೆ ರಾರಾಜಿಸುತ್ತಿದ್ದುವು. ಮನೆಗೆ ಬಂದ ಸೂಕ್ಷ್ಮ ನಿರೀಕ್ಷಣೆಯ ಹೆಂಗಸರ ಗಮನಕ್ಕೆ ಈ ಗೆಜ್ಜೆಸ್ತ್ರಗಳು ಕಂಡು ಬಂದು ಅದನ್ನು ತಯಾರಿಸಿದವರ ಕುರಿತು ವಿಚಾರಣೆ. ‘ನಮ್ಮಮ್ಮ..’ ಅನ್ನುವಾಗ ಅಭಿಮಾನ, ಹೆಮ್ಮೆ.

ತನ್ನ ಜೀವನವನ್ನೆಲ್ಲಾ ಹಳ್ಳಿಯಲ್ಲೇ ಕಳೆದವಳಾದರೂ ಅಮ್ಮ ಹೊರಪ್ರಪಂಚದ ಆಗುಹೋಗುಗಳ ಕುರಿತು ಬಹಳಷ್ಟು ತಿಳಿವಳಿಕೆ ಹೊಂದಿದ್ದರೆ ಅದಕ್ಕೆ ಕಾರಣ ರೇಡಿಯೋ. ದೊಡ್ಡ ಹಳ್ಳಿಮನೆಯ ಯಾವ ಮೂಲೆಯಲ್ಲಿದ್ದರೂ ಕಿವಿದೆರೆಗೆ ತಾಕುವಂತೆ ಕೇಳಿಸುತ್ತಿದ್ದ ಎಂ.ಎಸ್.ಸುಬ್ಬಲಕ್ಷ್ಮಿಯವರ ಸುಪ್ರಭಾತ ಬಾಲ್ಯದ ನೆನಪು. ‘ಪ್ರದೇಶ ಸಮಾಚಾರ’ ಯಾವತ್ತೂ ಕೇಳಿಸಿಕೊಳ್ಳುತ್ತಿದ್ದಳು ಅಮ್ಮ. ಅವಳ ಕೋಣೆಯಲ್ಲಿ ಸಂಗಾತಿಯಾಗಿ ರೇಡಿಯೋ ಇದ್ದೇ ಇರುತ್ತಿತ್ತು ಮತ್ತು ದೂರದರ್ಶನದ ವಿಜೃಂಭಣೆಯ ಈ ಕಾಲದಲ್ಲೂ ಅದು ಸಾಬೀತಾಗಿ ಕೆಲಸ ಮಾಡುತ್ತಿತ್ತು. ಅಮ್ಮನ ಒಂಟಿತನ ಕಳೆಯುತ್ತಿತ್ತು. ಪಕ್ಕಾ ವಾಸ್ತವವಾದಿ ನನ್ನಮ್ಮ. ಅರ್ಧಶತಕದ ಸಂಗಾತಿ ಅಪ್ಪನನ್ನು ಕಳೆದುಕೊಂಡಾಗಲೂ ದೃಢತೆ ಉಳಿಸಿಕೊಂಡಿದ್ದವಳು. ಅದನ್ನೇ ನೆನೆದು ಕೊರಗುತ್ತಾ ಕೂರದೆ ಸಾವಿನ ಅನಿವಾರ್ಯತೆಯನ್ನು ಸ್ಥಿರಮನಸ್ಸಿನಿಂದ ಸ್ವೀಕರಿಸಿದವಳು. ಊರಿಗೆ ಹೋದಾಗ ಗೋಡೆಗೆ ತೂಗು ಬಿದ್ದ ಅಪ್ಪನ ಫೋಟೋ ನೋಡುತ್ತಾ, ‘ನೋಡಿದ್ರಾ, ಮಗಳು ಬಂದಿದಾಳೆ..’ ಎನ್ನುತ್ತಾ ಅಪ್ಪನನ್ನು ನೆನೆಸಿಕೊಂಡು ಅವನಿಲ್ಲದೆಯೂ ಅವನ ಸಾನ್ನಿಧ್ಯ ಅನುಭವಿಸುತ್ತಿದ್ದವಳು.

ಅವಳಷ್ಟು ಮನೆಗೆಲಸ ಮಾಡುತ್ತಿದ್ದ ಮತ್ತೊಬ್ಬ ಹೆಂಗಸನ್ನು ನಾನು ಕಂಡಿಲ್ಲ ಅಂದರೆ ಉತ್ಪ್ರೇಕ್ಷೆಯಲ್ಲ. ಅಡಿಕೆಕೊಯ್ಲಿನ ಕಾಲದಲ್ಲಿ ಆ ಯಮಚಳಿಯಲ್ಲೂ ಬೆಳಿಗ್ಗೆ ನಾಲ್ಕು ಘಂಟೆಗೆಲ್ಲಾ ಎದ್ದು ಅಡಿಕೆಒಲೆಯ ಬೆಂಕಿ ಒಟ್ಟುವುದರಿಂದ ಆರಂಭವಾಗುತ್ತಿದ್ದ ದಿನಚರಿ ಚಕ್ರದಂತೆ ನಿರಂತರವಾಗಿ ಸುತ್ತುತ್ತಾ ಸಂಜೆ ಅಡಿಕೆಸುಲಿತಕ್ಕೆ ಬಂದ ಆಳುಗಳಿಗೆ ಕಾಫಿ, ತಿಂಡಿ ಒದಗಿಸಿ, ರಾತ್ರಿಯ ಊಟ ಮುಗಿಸಿ ಹಾಸಿಗೆ ಕಾಣುವಾಗ ಹತ್ತೋ, ಹನ್ನೊಂದೋ. ಹಳ್ಳಿಮನೆ, ಕೃಷಿಕ ಕುಟುಂಬ ಅಂದರೆ ಬೆನ್ನುಕೋಲು ಮುರಿಯುವಷ್ಟು ಕೆಲಸ, ಕೆಲಸ. ಕೊಟ್ಟಿಗೆಗೆ ಹೋಗಿ ಹಾಲು ಕರೆದುಕೊಂಡು ಬರುವುದರಿಂದ ತೊಡಗಿ ಮನೆಮಕ್ಕಳ ಚಾಕರಿಯವರೆಗೆ ಅಮ್ಮನ ದುಡಿಮೆಗೆ ಕೊನೆಯಿರಲಿಲ್ಲ. ಹೀಗಿದ್ದೂ ಆ ಕಾಲದಲ್ಲಿ ರೇಡಿಯೋದಲ್ಲಿ ಕೇಳಿಸಿಕೊಳ್ಳುತ್ತಿದ್ದ ಹೊಸರುಚಿ ಮಾಡಿ ಮಕ್ಕಳಿಗೆ ತಿನಿಸುವ ಸಡಗರ. ಗೆಜ್ಜೆವಸ್ತ್ರದ ಹೊಸ ನಮೂನಿ ಕಲಿಯುವ ಉತ್ಸಾಹ.

ಹಬ್ಬಹರಿದಿನ ಅಂದರೆ ಅಮ್ಮನಿಗೆ ನಾಲ್ಕು ಕೈಯಿ. ನರಕಚತುರ್ದಶಿಯ ಎರೆದುಕೊಳ್ಳುವ ಹಬ್ಬದ ದಿನ ಬೆಳಗಾಗುವುದರಲ್ಲಿ ಮನೆ ತುಂಬಾ ಇದ್ದ ಮಕ್ಕಳ ಅಭ್ಯಂಜನ ಮುಗಿದು ಹೋಗಿರುತ್ತಿತ್ತು ಅಂದರೆ ಅಮ್ಮ ಅದೆಷ್ಟು ಹೊತ್ತಿಗೆ ಏಳುತ್ತಿದ್ದಳೋ ಪರಮಾತ್ಮ ಬಲ್ಲ. ರಾತ್ರಿಯಿಂದಲೇ ಒಲೆಯೊಳಗೆ ಕುಂಟೆ ಉರಿಯುತ್ತಿರುತ್ತಿತ್ತು. ಹಿಂಡ್ಳಚ್ಚಿಬಳ್ಳಿ ಸುತ್ತಿಕೊಂಡ ಹಂಡೆಯ ನೀರು ಕೊತಕೊತ ಕುದಿ ಬಿಂದುವಿಗೆ ತಲುಪಿರುತ್ತಿತ್ತು. ಮತ್ತು ಈ ನೀರನ್ನು ಹವಣ ಮಾಡಿಕೊಂಡು, ಮತ್ತಿಸೊಪ್ಪಿನ ಗುಳ, ಸೀಗೇಪುಡಿ ಹಾಕಿ ತಲೆ ತಿಕ್ಕಿ, ಎಲ್ಲರಿಗೂ ಸ್ವತಃ ಎರೆಯದಿದ್ದರೆ ಅಮ್ಮನಿಗೆ ಸಮಾಧಾನ ಸಿಗುತ್ತಿರಲಿಲ್ಲ.

ನನ್ನಮ್ಮನ ಕುರಿತು ಮತ್ತೊಂದು ಭಾವಪೂರ್ಣ ನೆನಪಿದೆ. ಫ್ರಿಜ್ಜು ಗಿಜ್ಜು ಇರದ ಕಾಲದಲ್ಲಿ ಏಳನೇ ತಿಂಗಳಿಗೆ ಹುಟ್ಟಿದ್ದ ನನ್ನ ಮಗಳನ್ನು ಅಮ್ಮ ಸಾಕಿದ ಪರಿ ಹೇಗಿತ್ತೆಂದರೆ ಎದೆ ಹಾಲು ಚೀಪಿ ಕುಡಿಯಲು ಶಕ್ತಿ ಇಲ್ಲದ ಮಗುವಿಗೆ ಹಿಂದಿನ ದಿನದ ಹಾಲು ಕುಡಿಸದೆ ಬೆಳಿಗ್ಗೆ ಮೂರಕ್ಕೋ, ನಾಲ್ಕಕ್ಕೋ ಎದ್ದು ಕೊಟ್ಟಿಗೆಯಿಂದ ಹಾಲು ಕರೆದುಕೊಂಡು ಬಂದು ಕಾಸಿ ಹದ ಮಾಡಿ ಕುಡಿಸುತ್ತಿದ್ದಿದ್ದು, ತೊಟ್ಟಿಲಿನಲ್ಲಿ ಮಗುವಿನ ಅಕ್ಕಪಕ್ಕ ಶಾಖಕ್ಕೆ ಇಟ್ಟ ಬಿಸಿನೀರ ಬಾಟಲಿಗಳು ಶಾಖ ಕಳೆದುಕೊಳ್ಳುತ್ತಿದ್ದಂತೆ ಮತ್ತೆ ಬಿಸಿನೀರು ತುಂಬಿಸಿಡುತ್ತಿದ್ದ ತತ್ಪರತೆ. ಬೇಕಾಬಿಟ್ಟಿ ಕೆಲಸ ಅವಳ ಡಿಕ್ಷನರಿಯಲ್ಲಿರಲಿಲ್ಲ. ಎಲ್ಲಾ ಕೆಲಸಗಳೂ ಅಚ್ಚುಕಟ್ಟು, ಮನಃಪೂರ್ವಕ. ಚಕ್ಕುಲಿ ಕರಿಯುವಂತಾ ಸಾಧಾರಣ ಕೆಲಸಕ್ಕೆ ಕೂಡಾ ಅವಳ ಕೈಯಲ್ಲಿ ಕಲಾತ್ಮಕತೆ. ಗುಂಡಗೆ ಇಂತಿಷ್ಟೇ ಲೆಕ್ಕದ ಸುರುಳಿ ಸುತ್ತಿ ಚೂರೂ ಓರೆಕೋರೆಯಾಗದಂತೆ ಹಿಟ್ಟು ಒತ್ತುವ ನಾಜೂಕು. ಅಮ್ಮ ಅಡುಗೆಗೆ ತರಕಾರಿ ಹೆಚ್ಚಿದರೆ ಹೋಳುಗಳು ಒಂದೇ ಅಳತೆ. ಸೊಪ್ಪು ಹೆಚ್ಚಿದರೆ ಒಂದೇ ಹದ. ದೊಡ್ಡ ಅರೆಯುವ ಕಲ್ಲಿನೆದುರು ಕೂತು ಗಂಟೆಗಟ್ಟಲೆ ಅರೆಯುವ ದೋಸೆಹಿಟ್ಟಿಗೆ ತೇಯ್ದ ಗಂಧದ ನಯ. ಹಿತ್ತಿಲಲ್ಲಿ ತರಕಾರಿ ಬೆಳೆಯುವುದರಲ್ಲೂ ಒಂದು ಕ್ರಮ.

ಅಮ್ಮನ ಕೋಣೆಯಲ್ಲಿ ಅವಳ ಸಕಲೈಶ್ವರ್ಯವನ್ನು ತುಂಬಿಟ್ಟುಕೊಂಡಿದ್ದ ಬೀಗ ಹಾಕಲು ಬರುವ ಒಂದು ಮರದ ಪೆಠಾರಿ ಇತ್ತು. ಇದೆ. ಚಿನ್ನಬಣ್ಣಗಳು ಅಪ್ಪನ ಸುಪದರ್ಿನಲ್ಲಿ ಕಬ್ಬಿಣದ ಟ್ರೆಜರಿಯಲ್ಲಿರುತ್ತಿದ್ದರೂ ತನ್ನ ವಿಶೇಷದ ಬಟ್ಟೆಬರೆ ತುಂಬಿದ ಪೆಠಾರಿಯನ್ನು ಅಮ್ಮ ಜೋಪಾನವಾಗಿಟ್ಟುಕೊಂಡಿದ್ದಳು. ಅಪರೂಪಕ್ಕೆ ಅವಳು ಅದನ್ನು ತೆಗೆದರೆ ರೇಷ್ಮೆಸೀರೆಗಳ ನಡುವೆ ಇಟ್ಟಿರುತ್ತಿದ್ದ ಗಂಧದ ಪುಟ್ಟಪುಟ್ಟ ಸ್ಯಾಚೆಗಳ ಘಮಘಮ. ಯಾವುದೋ ಸೀರೆಯ ಪದರಿನಲ್ಲಿ ಐದರ, ಹತ್ತರ ನೋಟುಗಳಿದ್ದರೆ ಅದೊಂದು ನಿಧಿ. ಹೆಂಗಸರ ಕೈಗೆ ದುಡ್ಡು ಕೊಡುವ ಪದ್ಧತಿ ಇರಲಿಲ್ಲ. ಇಷ್ಟಕ್ಕೂ ಯಾಕೆ ಬೇಕು ದುಡ್ಡು? ಗೌರಿಹಬ್ಬದ ಹೊತ್ತಿಗೆ ಮನೆ ಬಾಗಿಲಿಗೆ ಬರುವ ಬಳೆಗಾರನಿಂದ ಬಳೆ ಇಡಿಸಿಕೊಂಡಾಗಲೂ ಅಪ್ಪ ಜನಿವಾರದಲ್ಲಿರುತ್ತಿದ್ದ ಬೀಗದಕೈಯಿಂದ ಟ್ರೆಜರಿ ತೆಗೆದು ದುಡ್ಡು ಎಣಿಸಿ ಕೊಡುತ್ತಿದ್ದ. ಹೆಣ್ಮಕ್ಕಳ ಮದುವೆಯಾಗಿ, ಗಂಡುಮಕ್ಕಳು ನೌಕರಿಗೆ ಸೇರಿ, ಮನೆಗೆ ಬಂದಾಗ ಅಮ್ಮನ ಕೈಗೆ ಒಂದಿಷ್ಟು ದುಡ್ಡು ಕೊಡುವುದು ಅಂದರೆ ಅವಳ ಮೇಲಿನ ಪ್ರೀತಿಯನ್ನು ತೋರ್ಪಡಿಸಿಕೊಳ್ಳುವ ಒಂದು ಕ್ರಮ ಅನ್ನುವಂತಾಯ್ತು. ಅವರು ಕೊಟ್ಟಿದ್ದನ್ನು ಇವರಿಗೆ, ಇವರು ಕೊಟ್ಟಿದ್ದನ್ನು ಅವರಿಗೆ ಹಂಚಿ, ವಿವಿಧ ಕ್ಷೇತ್ರಗಳ ದೇವರಿಗೆ ಮಕ್ಕಳ ಹೆಸರಲ್ಲಿ ಪೂಜೆ ಮಾಡಿಸಲು ಅವರೇ ಕೊಟ್ಟ ದುಡ್ಡನ್ನು ಮೀಸಲಿಟ್ಟು, ಕೈ ತೊಳೆದುಕೊಳ್ಳುತ್ತಿದ್ದಳು ಅಮ್ಮ. ಸ್ವಂತಕ್ಕೆ ಅವಳಿಗೆ ಯಾವ ಬೇಕುಗಳೂ ಇರಲಿಲ್ಲ.

ಸದಾ ತನ್ನ ತಲೆದಸಿಯಲ್ಲಿಟ್ಟುಕೊಂಡಿರುತ್ತಿದ್ದ ಅಲಾರ್ಮ್ ಗಡಿಯಾರದ ಎಚ್ಚರಿಸುವ ಸದ್ದಿನೊಂದಿಗೆ ಅಮ್ಮನ ದಿನದ ಆರಂಭ. ಮುಖ ತೊಳೆದು ದೇವರಕೋಣೆಯಲ್ಲಿ ದೀಪ ಬೆಳಗಿಸುವುದರೊಡನೆ ಬಾಕಿ ಕೆಲಸಗಳಿಗೆ ಚಾಲನೆ. ‘ಸರ್ರ್..ಬರ್ರ್..’ ಎಂದು ಅಡಿಗೆಮನೆಯಲ್ಲಿ ಮಜ್ಜಿಗೆ ಕಡೆಯುತ್ತಿದ್ದ ಸದ್ದು ಬೆಳಗಿನ ಜಾವದ ಸವಿನಿದ್ದೆಗೆ ಜೋಗುಳವಾಗಿ ಕನಸಿನ ಲೋಕದಲ್ಲೆಂಬಂತೆ ಕಿವಿದುಂಬುತ್ತಿತ್ತು. ಮನೆಮಂದಿ ಬೆಳಿಗ್ಗೆ ಏಳುವ ಹೊತ್ತಿಗೆ ಒಲೆಬುಡದಲ್ಲಿ ಬಿಸಿಕಾಫಿಯ ತಪ್ಪಲೆ ಸಿದ್ಧ. ಹೇಗೆ ಹೇಳುವುದು, ಎಷ್ಟು ಹೇಳುವುದು, ಹೇಳಿದಷ್ಟೂ ಬಿಚ್ಚಿಕೊಳ್ಳುತ್ತದೆ ನೆನಪಿನ ಲಹರಿ. ಅಕ್ಕತಮ್ಮ, ಅಣ್ಣತಂಗಿಯರಲ್ಲಿ ಜಗಳ ಶುರುವಾಗಿ ವಿಕೋಪಕ್ಕೇರಿದಾಗ ಒಲೆ ಹಚ್ಚಲು ಸಿಗಿದಿಟ್ಟಿರುತ್ತಿದ್ದ ಅಡಿಕೆಹಾಳೆಯೊಂದಿಗೆ ಪ್ರತ್ಯಕ್ಷಳಾಗುತ್ತಿದ್ದ ಅಮ್ಮನನ್ನು ಕಂಡರೆ ಚೂರೂ ಲೆಕ್ಕಕ್ಕಿಡದೆ ನಗೆಚಾಟಿಕೆಯಂತೆ ಸ್ವೀಕರಿಸುತ್ತಿದ್ದ ಮಕ್ಕಳು ಬೆಳೆದು ದೊಡ್ಡವರಾಗಿ ತಂತಮ್ಮ ಅದೃಷ್ಟಕ್ಕೆ ತಕ್ಕ ಬದುಕು ತಮ್ಮದಾಗಿಸಿಕೊಂಡರು. ಸಿಟ್ಟು ಏರಿದಾಗ ಅಮ್ಮ ಬೈಯುತ್ತಿದ್ದ ‘ರಾವು ಬಿಡಿಸ್ತೀನಿ, ಜಕಣಿ ಬಿಡಿಸ್ತೀನಿ’ ಅನ್ನುವಂತಾ ಬೈಗುಳ, ಗುಡುಮ್ಮನೆ ಬೆನ್ನಿಗೆ ಗುದ್ದುತ್ತಿದ್ದ ಗುದ್ದು, ಮಕ್ಕಳೆಲ್ಲಾ ಒಟ್ಟಿಗೆ ಸೇರಿದಾಗ ಕುಶಾಲಿನಿಂದ ಪ್ರಸ್ತಾಪವಾಗಿ ಕಾಲವನ್ನು ಹಿನ್ನಡೆಸುತ್ತಿತ್ತು, ಅಮ್ಮನ ಸಮಕ್ಷಮದಲ್ಲಿ.

ಆಪರೇಷನ್ಗೆ ಕರೆದೊಯ್ದಾಗ ‘ಇನ್ನೊಂದು ಕಾಲಿನ ಮೂಳೆ ಲಡ್ಡಾಗಿದ್ದರೆ ಅದನ್ನೂ ಆಪರೇಷನ್ ಮಾಡ್ಬಿಡಿ’ ಅಂದಿದ್ದಳಂತೆ ಅಮ್ಮ. ಆಪರೇಷನ್ ಮಾಡಿ ತೆಗೆದ ಎಲುಬಿನ ತುಣುಕನ್ನು ಕಾಯ್ದಿಟ್ಟು ತೋರಿಸಬೇಕೆಂದು ಡಾಕ್ಟರೊಡನೆ ಕೇಳಿಕೊಂಡಿದ್ದಳಂತೆ. ನೋಡಲು ಬಂದ ಮಕ್ಕಳಿಗೆಲ್ಲಾ ಅರ್ಧಕ್ಕೆ ಕತ್ತರಿಸಿದ ಚೆಂಡಿನಂತಿದ್ದ ಅದನ್ನು ತೋರಿಸುವುದೆಂದರೆ ಅವಳಿಗೆ ಹುರುಪು. ‘ಇವಳು ಹಿರಿಮಗಳು’, ‘ಇವನು ಮಗ’, ಎಂದು ಪ್ರತಿಯೊಬ್ಬರನ್ನೂ ಅದೊಂಥರದ ಅಭಿಮಾನದ ದನಿಯಿಂದ ಅವಳ ದೇಖರೇಖಿ ನೋಡುತ್ತಿದ್ದ ನರ್ಸ್ ಗಳಿಗೆ ಪರಿಚಯಿಸಿಕೊಡುತ್ತಿದ್ದಳು ಅಮ್ಮ. ಬೀಳ್ಕೊಡುಗೆ ಹೊತ್ತಿನಲ್ಲಿ ‘ಎಲ್ಲಾ ಸುಖವಾಗಿರಿ..’ ಎನ್ನುತ್ತಾ ಬಲಗೈ ಆಡಿಸಿದವಳು, ತಲೆಭಾಗದಲ್ಲಿದ್ದ ಬಾಗಿಲಿನ ಕಡೆ ಮಲಗಿದಲ್ಲಿಂದಲೇ ಕುತ್ತಿಗೆ ಮುರಿದುಕೊಂಡು ನೋಡುತ್ತಾ ಕಣ್ತುಂಬಿಕೊಂಡವಳು, ಶಾಶ್ವತವಾಗಿ ಅಗಲಿ ಹೋಗುತ್ತಾಳೆಂಬ ಕಿಂಚಿತ್ ಸುಳಿವೂ ಅವತ್ತು ದಕ್ಕಿರಲಿಲ್ಲ.

ಪರಾವಲಂಬನೆ ತತ್ಕಾಲಕ್ಕೆ ಸೀಮಿತವೆಂದು ಅವಳ ಗಟ್ಟಿ ನಂಬುಗೆ. ಮುಂಚಿನಂತೆ ಹಗೂರಕ್ಕೆ ಮನೆಯೊಳಗೆ ಓಡಾಡಬಲ್ಲೆನೆಂಬ ಧೈರ್ಯ. ತನಗೆ ಬೇಕಾದವರನ್ನೆಲ್ಲಾ ಫೋನ್ ಮಾಡಿಸಿ ಕರೆಸಿಕೊಂಡಳು. ಕರೆಸಿಕೊಂಡವರು, ಸುದ್ದಿ ತಿಳಿದವರು, ಬಂದು ಮಾತಾಡಿಸಿಕೊಂಡು ಹೋಗುವುದೇ ಅವಳಿಗೆ ಖುಷಿ. ಅವಳಿಗೆ ಅಗತ್ಯವಿದ್ದ ರಕ್ತ ಪೂರೈಕೆ, ವಿಟಮಿನ್ಗಳ ಸೇವನೆ, ಹಣ್ಣಿನ ರಸಗಳ ಆರೈಕೆಯಿಂದ ಅಮ್ಮ ಮನೆಯಲ್ಲಿದ್ದಿದ್ದಕ್ಕಿಂತಾ ಕಳೆಕಳೆಯಾಗಿ ಕಾಣುತ್ತಾ ಮಕ್ಕಳನ್ನು ಭ್ರಮೆಯಲ್ಲಿಟ್ಟುಬಿಟ್ಟಳು. ಅಮ್ಮ ಚೇತರಿಸಿಕೊಳ್ಳುತ್ತಾಳೆ ಎಂದು ನಂಬಿಸಿಬಿಟ್ಟಳು. ಬಹುಶಃ ಅವಳೂ ಹಾಗೇ ಅಂದುಕೊಂಡಿದ್ದಳು.
*
ಡಿಸ್ಛಾಜರ್್ ಆಗಿ ಮನೆಗೆ ಬಂದ ಮೇಲೆ ಅಮ್ಮನಿಗೆ ಆಯುಷ್ಯ ಉಳಿದಿದ್ದು ಬರೀ ನಾಲ್ಕು ದಿನ. ಮರಣಸಂಕಟ ಶುರುವಾಗಿದ್ದು ಅವಳ ಅರಿವಿಗೆ ದಕ್ಕಿದೆ. ‘ಎಲ್ಲರೂ ಬೇಗಬೇಗ ಊಟ ಮುಗಿಸಿ’ ಅಂದಿದ್ದಾಳೆ. ಮನೆಯಲ್ಲಿದ್ದವರೆಲ್ಲರ ಕೈಯಿಂದ ತೀರ್ಥದ ನೀರು ಗುಟುಕರಿಸಿದ್ದಾಳೆ. ತನ್ನ ಮೆಚ್ಚಿನ ಮೊಮ್ಮಗನ ತೋಳಲ್ಲಿ ಋಣ ಕಡಿದುಕೊಂಡಿದ್ದಾಳೆ, ಇಳಿಮಧ್ಯಾಹ್ನದ ಹೊತ್ತಿನಲ್ಲಿ.
*
ಪರವೂರಲ್ಲಿರುವ ಮಕ್ಕಳು ಮನೆಗೆ ಫೋನ್ ಮಾಡಿದರೆ ಅಪ್ಪನೊಡನೆ ಲೋಕಾರೂಢಿಯ ಎರಡು ಮಾತು, ಅಮ್ಮನೊಡನೆ ಎಲ್ಲಾ ಪುರಾಣ ಬಿಚ್ಚಿಕೊಳ್ಳುತ್ತದೆ ಅನ್ನುವುದು ಬಹುತೇಕ ಅಪ್ಪಂದಿರ ಅಳಲು, ಅನುಭವ. ನಾಲಿಗೆಯನ್ನು ಬುದ್ಧಿಯ ಹತೋಟಿಯಲ್ಲಿಟ್ಟುಕೊಳ್ಳಬೇಕಾದ ಅಗತ್ಯ ಇಲ್ಲದೆ ಏನೆಲ್ಲಾ ಕಷ್ಟಸುಖ, ನೋವುನಲಿವು ಹಂಚಿಕೊಳ್ಳಬಹುದಾದ ಸದರ ಅಮ್ಮನೊಡನೆ ಮಾತ್ರವಾ? ಹೆಚ್ಚಿನವರ ಪಾಲಿಗೆ ಹೌದೇನೋ ಅನಿಸುತ್ತದೆ.

 

‍ಲೇಖಕರು Admin

May 10, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಸಂತೋಷ ತಾಮ್ರಪರ್ಣಿ

    ತುಂಬಾ ಚೆನ್ನಾಗಿ ಬರೆದಿದ್ದೀರ. ‘ಉಪ್ಪು ಸರಿಯಾಗಿದೆಯಾ?’ ಅಂತ ಹೇಳಲು ಬಹುಶಃ ಎಲ್ಲ ಅಮ್ಮಂದಿರಿಗೂ ಮಕ್ಕಳ ಅಭಿಪ್ರಾಯವೇ ಬೇಕು ಅನ್ನಿಸುತ್ತದೆ!

    ಪ್ರತಿಕ್ರಿಯೆ
  2. Anonymous

    ಮಲೆನಾಡಿನ ಚಿತ್ರಣದ ಜೊತೆ ಮೂಡಿಬಂದ ಅಮ್ಮನ ನೆನಪು ನನ್ನ ತೌರನ್ನೂ ನೆನಪಿಸಿತು. ಬರಹ ಸುಂದರವಾಗಿದೆ ಮೇಡಮ್…..
    ಎಸ್.ಪಿ.ವಿಜಯಲಕ್ಶ್ಮಿ

    ಪ್ರತಿಕ್ರಿಯೆ
  3. Sha

    ‘ಇತ್ತೀಚಿನ ವರ್ಷಗಳಲ್ಲಿ ಅಮ್ಮ ಅಷ್ಟು ಖುಷಿಯಾಗಿದ್ದಿದ್ದು ಆಸ್ಪತ್ರೆಯಲ್ಲಿ ಕಳೆದ ದಿನಗಳಲ್ಲೇ’
    unke dekhe se jo aa jaatee hai munh par raunaq
    woh samajhte hain ke beemaar ka haal achcha hai

    ಪ್ರತಿಕ್ರಿಯೆ
  4. Sha

    ‘ಇತ್ತೀಚಿನ ವರ್ಷಗಳಲ್ಲಿ ಅಮ್ಮ ಅಷ್ಟು ಖುಷಿಯಾಗಿದ್ದಿದ್ದು ಆಸ್ಪತ್ರೆಯಲ್ಲಿ ಕಳೆದ ದಿನಗಳಲ್ಲೇ’
    unke dekhe se jo aa jaatee hai munh par raunaq
    woh samajhte hain ke beemaar ka haal achcha hai

    Looking at my flushed face on their arrival…
    They think that the condition of this deseased soul it fine..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: