ಚಪ್ಪಲಿಯೊಳಗೊಂದು ಬೆಚ್ಚನೆ ನೆನಪು

sridevi udupa

ಶ್ರೀದೇವಿ ಉಡುಪ

ನನ್ನೊಳಗೆ ಕೂಡ ಅಂತಹ ನೆನಪೊಂದು ಬೆಚ್ಚಗೆ ಅಡಗಿ ಕೂತಿದೆ. ಅದೊಂದು ಎಪ್ಪತ್ತರ ದಶಕದ ಮೊದಲಾರ್ಧದ ಕಾಲ. ಆಗಿನ್ನು ಚಪ್ಪಲಿ ಎಂಬುದು ಐಷಾರಾಮಿ ವಸ್ತುಗಳ ಪಟ್ಟಿಯಿಂದ ಹೊರ ಬಂದಿರಲಿಲ್ಲ. ಹಳ್ಳಿ ಮಕ್ಕಳಿಗಂತೂ ಕಾಡುತ್ತಿದ್ದ ಕನಸು .

ಆಗಿನ್ನು ರಾಯಚೂರು ಜಿಲ್ಲೆಗೆ ಸೇರಿದ್ದ ಹಳ್ಳಿಯಿಂದ ಉಡುಪಿ ಮುಟ್ಟಲು ಹೆಚ್ಚು ಕಡಿಮೆ ಎರಡು ದಿನಗಳು ಬೇಕಾಗುತಿತ್ತು. ಅಂತಹ ಒಂದು ಬೇಸಿಗೆ ರಜೆಯಲ್ಲಿ ಉಡುಪಿ ಬಳಿಯಲಿದ್ದ ಅಜ್ಜನ ಮನೆಗೆ ಹೊರಟಿದ್ದೆವು . ಮಧ್ಯದ ಶಿವಮೊಗ್ಗ ಮುಟ್ಟಿದಾಗ ರಾತ್ರಿಯಾಗುತ್ತಾ ಬಂದಿತ್ತು. ಆದರೂ ನನ್ನ ಮತ್ತು ಅಕ್ಕನ ಬರಿ‌ ಕಾಲುಗಳನ್ನು ನೋಡಿ ಅಪ್ಪನಿಗೆ ಕರಳು ಚುರ್ ಎಂದಿರಬೇಕು. ನಾವು ಕೇಳದೆಯೂ ಹತ್ತಿರದಲ್ಲಿದ್ದ ಚಪ್ಪಲಿ ಅಂಗಡಿಗೆ ಕರೆದೊಯ್ಯೊದ್ದು ನಮ್ಮಿಬ್ಬರಿಗೂ ಕೆಂಪು ಬಣ್ಣದ ಚಪ್ಪಲಿ ಗಳನ್ನು ಕೊಡಿಸಿದರು. ನಮಗೋ ನಿಧಿ ಸಿಕ್ಕಷ್ಟು ಖುಷಿ. ಜೊತೆಗೆ ಚಪ್ಪಲಿ ಹಾಕಿಕೊಟ್ಟಿದ್ದ ರಟ್ಟಿನ ಡಬ್ಬದಲ್ಲಿ ಹಾವು ಏಣಿ ಆಟದ ಪಟ ಮುದ್ರಿಸಲಾಗಿತ್ತು. ಆಡಲು ಪ್ಲಾಸ್ಟಿಕ್ ಬಿಲ್ಲೆಗಳು ,ಪಗಡೆಗಳು ಬೇರೆ ಫ್ರೀ. ನನಗೂ ಅಕ್ಕನಿಗೂ ಸ್ವರ್ಗವೇ ಕೈಗೆ ಸಿಕ್ಕಷ್ಟು ಸಂತೋಷ.

locked chappalಆದರೆ ಆ ಸಂತೋಷ, ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ರಾತ್ರಿ ಕೊನೆಯ ಬಸ್ಸಿನಲ್ಲಿಯಾದರೂ ಸೀಟು ಸಿಗಬಹುದೆಂದು ಬಸ್ಟ್ಯಾಂಡಿನಲ್ಲಿಯೇ ಕಾಯ್ತಾ ಕುಳಿತೆವು. ಸ್ವಲ್ಪ ಹೊತ್ತು ಕಳೆಯುವುಷ್ಟರಲ್ಲಿ ನಮಗೆ ತೀರದ ದೇಹಬಾಧೆ .ಸರಿ ಅಲ್ಲೇ ಸ್ವಲ್ಪ ಹಿಂದುಗಡೆಯಿದ್ದ ಸರಕಾರಿ ಬಸ್ಟ್ಯಾಂಡಿನತ್ತ ಹೊರಟೆವು. ಜೊತೆಗೆ ಹೊಸ ಚಪ್ಪಲಿಗಳಲ್ಲಿ ನಡೆಯುವ ಸಂಭ್ರಮ. ಅಮ್ಮ ಬ್ಯಾಗುಗಳ ಬಳಿ ಇಟ್ಟುಹೋಗಲು ಹೇಳಿದರೂ ಕೇಳದೆ ಅಕ್ಕ ನಾನು ಹೊರಟೆವು. ದಾರಿ ಉದ್ದಕ್ಕೂ ಚಪ್ಪಲಿಗಳನ್ನು ಊರಿಂದ ವಾಪಾಸ್ಸಾದ ಮೇಲೆ ಗೆಳತಿಯರಿಗೆ ತೋರಿಸಿ ಜಂಭ ಪಡುವ ಬಗ್ಗೆಯೇ ಮಾತು. ಸರಿ, ಬಂದ ಕಾರ್ಯ ಮುಗಿಸಿ ಅಲ್ಲಿಯೇ ಇದ್ದ ಕೊಳಾಯಿ ನೀರಲ್ಲಿ ಕಾಲು ತೊಳೆಯಲೆಂದು ಚಪ್ಪಲಿ ತೆಗೆದು ಇಟ್ಟೆವು. ನೀರು ತಾಗಿದರೆ ಹಾಳಾಗುತ್ತೆ ಅಂತ . ತಿರುಗಿ ಹೊರಟಾಗಲೂ ನಗು, ಮಾತು. ಚಪ್ಪಲಿಗಳನ್ನು ಮಾತ್ರ ಮತ್ತೆ ಹಾಕಿ ಕೊಳ್ಳಲು ನೆನಪಿಲ್ಲ .

ತಿರುಗಿ ಬಂದಾಗ ಅಮ್ಮ ಚಪ್ಪಲಿಗಳೆಲ್ಲಿ ಅಂದಾಗ ನೋಡಿಕೊಂಡರೆ ನನ್ನ ಕಾಲುಗಳಲ್ಲಿ ನಗುವ ಚಪ್ಪಲಿಗಳು ಅಕ್ಕನ ಕಾಲುಗಳಲ್ಲಿ ಇಲ್ಲ. ಕೂಡಲೇ ತಿರುಗಿ ಓಡಿದೆವು. ಆದರೆ ಅವು ಪರರ ಪಾಲಾಗಿದ್ದವು. ಆಗ ಅಕ್ಕನ ನಿರಾಸೆ, ದು:ಖ ತುಂಬಿಕೊಂಡ ಅಕ್ಕನ ಮುಖ ನನಗಿಂದಿಗೂ ನೆನಪಿದೆ. ಅಮ್ಮ ಬಯ್ದಳಾದರೂ, ಅಪ್ಪ ಮಾತ್ರ ರಾತ್ರಿಯಾದ್ದರಿಂದ ಮತ್ತೊಂದು ತೆಗೆದು ಕೊಡಲಾಗದ ಅಸಹಾಯಕತೆಯಿಂದಲೊ ಏನೋ ಕಷ್ಟಪಟ್ಟುಗಳಿಸಿದ ದುಡ್ಡು ವ್ಯರ್ಥವಾದದನ್ನೂ ಲೆಕ್ಕಿಸದೆ ಅಕ್ಕನನ್ನು ಹತ್ತಿರಕ್ಕೆಳೆದುಕೊಂಡು ತಲೆಸವರಿದರು. ಆ ಗಳಿಗೆಗೆ ಮಗಳಿಗೆ ಚಪ್ಪಲಿ ಇಲ್ಲವಾದ ಸಂಕಟವೇ ಅವರಿಗೆ ಹೆಚ್ಚು ನೋವು ಮಾಡಿತ್ತು.

ಆದರೆ ನಂತರದಲ್ಲಿ ಅಕ್ಕ ನನ್ನ ಚಪ್ಪಲಿಗಳಲ್ಲಿ ತನ್ನ ಪಾದಗಳನ್ನು ತೂರಿಸುತ್ತಾ ಇವೂ ಕೂಡ ನಂಗೆ ಸರಿ ಆಗುತ್ತೆ ಅಂದು, ನಂಗೂ ಹಾಕಿ ಕೊಳ್ಳಲು ಕೊಡ್ತೀಯಾ..? ಅಂತ ಕೇಳಿದಳು ಮತ್ತೆ ಅವುಗಳನ್ನು ಅವಳೇ ಹೆಚ್ಚಿಗೆ ಉಪಯೋಗಿಸಿದಳು ಕೂಡ.

ಅಕ್ಕ ಈಗ ಇಲ್ಲ. ಆದರೆ ಪ್ರತಿ ಸಲ ಹೊಸ ಚಪ್ಪಲಿ ತೆಗೆದುಕೊಳ್ಳುವಾಗೊಮ್ಮೆ ಆ ಘಟನೆ ನೆಪಾಗುತ್ತೆ. ಅಪ್ಪನ ಅಗಾಧ ಪ್ರೀತಿಯೂ ಮನ ಬೆಚ್ಚಗಾಗಿಸುತ್ತೆ.

‍ಲೇಖಕರು Admin

June 17, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. pradeep

    tried submitting one article in “Submit Post”, but I am not able to copy content there? where I can send?

    Regards,
    Pradeep

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: