-ಸಂಕೇತ್ ಗುರುದತ್
ಕನ್ನಡದ ನೆಲದಲ್ಲಿ ಪಶ್ಚಿಮ ಬಂಗಾಳದ ಕಲಾವಿದರಾದ ಸುನಿಲ್ ಬರ್ಮನ್, ಉಷಾರಂಜನ್ ಮಂಡಲ್ ಮತ್ತು ಗೋಪಾಲ್ ಚಂದ್ರ ನಾಸ್ಕರ್, ಅವರು ತಮ್ಮ ನೆಲದ ಸಂಸ್ಕೃತಿಯನ್ನು ತಮ್ಮದೇ ಶೈಲಿಯಲ್ಲಿ ಕಲಾಕೃತಿಗಳ ಮೂಲಕ ಪ್ರತಿಬಿಂಬಿಸಿದ್ದಾರೆ.
ಈ ವೈವಿಧ್ಯಮಯ ಕಲಾಕೃತಿಗಳನ್ನು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಪ್ರದರ್ಶಿಸಿದ್ದಾರೆ.
ನಾಡಿನ ಹಿರಿಯ ಕಲಾವಿದರೂ ಹಾಗೂ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆದ ಚಿ ಸು ಕೃಷ್ಣಶೆಟ್ಟಿ ಅವರು ಉದ್ಘಾಟಿಸಿದ್ದಾರೆ.
ಹಿರಿಯ ಕಲಾವಿದರೂ ಹಾಗೂ ಚಿತ್ರಕಲಾ ಪರಿಷತ್ತಿನ ಮಾಜಿ ಪ್ರಾಂಶುಪಾಲರೂ ಆದ ಬಾಬು ಜತ್ತಕರ್ ಹಾಗೂ ಖ್ಯಾತ ಕಲಾವಿದರಾದ ಬಸವರಾಜಾಚಾರ್ ಕೆ ಆರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆಗೆ ಸಹಕಾರ ನೀಡಿದರು.

ದೊಡ್ಡ ಗಾತ್ರದ ಚಿತ್ರಗಳಲ್ಲೂ ಚುಕ್ಕಿಚಿತ್ರಗಳ ಶೈಲಿ ಬಳಸಿದ ಸಂಯೋಜನೆಗಳು, ರಾಧಾಕೃಷ್ಣರ ಶೃಂಗಾರ ಭರಿತ ಭಂಗಿಗಳು, ಹಳ್ಳಿಯ ಹಲವು ಮಜಲುಗಳನ್ನು ತೆಳುವರ್ಣದೊಂದಿಗೆ ರೇಖಾಲಾಲಿತ್ಯ ಮೇಳೈಸಿದ ಗ್ರಾಮೀಣ ಬದುಕು, ಕಲ್ಪನಾ ಲೋಕಕ್ಕೆ ಒಯ್ಯುವ ಪ್ರಖರ ವರ್ಣದ ಬಲಯುತ ಧೃಢ ರೇಖೆಗಳಿಂದಾವೃತವಾದ ಸಂಯೋಜನಾ ಚಿತ್ರಗಳು ಹೀಗೆ ನೋಡುಗನ ಮನದಾಳಕ್ಕೆ ಹೋಗಿ ಚಿಂತನೆಗೆ ಹಚ್ಚುವ ಚಿತ್ರಗಳು ಇಲ್ಲಿವೆ.
ಕಲಾವಿದರ ಪರಿಚಯ:
ಸುನಿಲ್ ಬರ್ಮನ್
ಪಶ್ಚಿಮ ಬಂಗಾಳದ ವೃತ್ತಿಪರ ಕಲಾವಿದರು. ಪ್ರಕೃತಿಯ ಪ್ರಶಾಂತ ಸೌಂದರ್ಯ ಮತ್ತು ಗ್ರಾಮೀಣ ಜೀವನದ ಸರಳತೆಯನ್ನು ಪ್ರತಿಬಿಂಬಿಸುತ್ತಾರೆ. ಹಚ್ಚ ಹಸಿರಿನ ಭೂದೃಶ್ಯಗಳು ನೈಸರ್ಗಿಕ ಲಯವನ್ನೂ ಸಾಂಪ್ರದಾಯಿಕತೆಯ ಸಂಸ್ಕೃತಿಯನ್ನೂ ಇವರ ಕಲಾಕೃತಿಗಳಲ್ಲಿ ಕಾಣಬಹುದು. ಯಾವುದೇ ಔಪಚಾರಿಕ ತರಬೇತಿಯಿಲ್ಲದೆ, ಕಲಾವಿದನಾಗಿ ರೂಪುಗೊಂಡಿದ್ದಾರೆ. ಇವರ ವರ್ಣಚಿತ್ರಗಳು ಶಾಂತಿಯುತ ಸಹಬಾಳ್ವೆಗೆ ಸಂಕೇತವಾಗಿವೆ.
ಉಷಾರಂಜನ್ ಮಂಡಲ
ಪಶ್ಚಿಮ ಬಂಗಾಳದ ಉಷಾ ರಂಜನ್ ಮಂಡಲ್ ಅವರು ಸ್ವಯಂ-ಕಲಿತ ಕಲಾವಿದರು. ಇವರ ಕೃತಿಗಳಲ್ಲಿ ಪ್ರಕೃತಿ ಮತ್ತು ಜೀವನದ ಲಯವಿದೆ. ಸಂಕೀರ್ಣವಾದ ಚುಕ್ಕೆ-ಚಿತ್ರಕಲೆ ತಂತ್ರಕ್ಕೆ ಹೆಸರಾಗಿದ್ದಾರೆ. ಇವರ ಖ್ಯಾತ ಸರಣಿ “ಲವ್ ವಿತ್ ನೇಚರ್” ಪರಿಸರ ಸಾಮರಸ್ಯ ಮತ್ತು ವನ್ಯಜೀವಿ ಸಂರಕ್ಷಣೆಗೊಂದು ಭಾವಗೀತಾ ಕೃತಿಯಾಗಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿದ್ದು ದೇಶ-ವಿದೇಶಗಳಲ್ಲಿ ಪ್ರದರ್ಶನಗಳು ನಡೆದಿವೆ.
ಗೋಪಾಲ್ ಚಂದ್ರ ನಸ್ಕರ್
ಪಶ್ಚಿಮ ಬಂಗಾಳದ ಈ ಕಲಾವಿದರು ಭಾವನೆ, ಸೌಂದರ್ಯವನ್ನು ತಮ್ಮ ಕ್ಯಾನ್ವಾಸ್ ಮೇಲೆ ಪ್ರಕಾಶಮಾನವಾಗಿ ವ್ಯಕ್ತಪಡಿಸುತ್ತಾರೆ. ಕೋಲ್ಕತ್ತಾದಲ್ಲಿ ಕಲೆಯಲ್ಲಿ ಮಾಸ್ಟರ್ ಮಾಡಿದ್ದಾರೆ. ಇವರ ಸಂಯೋಜನೆಗಳು ಅನುಗ್ರಹ, ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ಮೃದುತ್ವದಿಂದ ತುಂಬಿದ್ದು ಸ್ತೋತ್ರವನ್ನು ಹೆಣೆದಂತಿರುತ್ತವೆ. ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿದ್ದು ದೇಶ-ವಿದೇಶಗಳಲ್ಲಿ ಇವರ ಕಲಾ ಪ್ರದರ್ಶನಗಳು ನಡೆದಿವೆ.
ಈ ಪ್ರದರ್ಶನವು ಇದೇ ನವೆಂಬರ್ 8 ರವರೆಗೆ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ.






0 Comments