ಚಂಪಾ ಇನ್ನು ಸಿಗುವುದಿಲ್ಲ…

ಜೋಗಿ

2017 ಧಾರವಾಡ ಸಾಹಿತ್ಯ ಸಂಭ್ರಮ. ನಿಸಾರ್ ಅಹಮದ್ ಉದ್ಘಾಟನೆ.

ಅವರು ಮಾತಾಡುತ್ತಾ ಹೇಳಿದ್ದು:

ನಾನು ಸಭೆಯೊಳಗೆ ಬರ್ತಿದ್ದ ಹಾಗೆ ಚಂಪಾ ಸಿಕ್ಕಿದ. ಮೇಲೆ ಹೋಗು ಅಂತ. ನೀನು ಯಾವಾಗ ಹೋಗ್ತೀಯ ಅಂತ ಕೇಳಿದೆ. ನಿಮ್ಮನ್ನೆಲ್ಲ ಕಳಿಸಿಯೇ ನಾನು ಹೋಗೋದು ಅಂದ.

ಇದು ಚಂಪಾ ತಮಾಷೆಗೆ ಸಾಕ್ಷಿ. ಒಂದೇ ಮಾತಲ್ಲಿ ಥಟ್ ಅಂತ ಹೇಳಿಬಿಡುವ ಪ್ರತ್ಯುತ್ಪನ್ನ ಮತಿ. ಚಂಪಾ ಅಂದರೆ ನಮಗೆಲ್ಲ ಶುಂಠಿ ಪೆಪ್ಪರಮಿಂಟು.

ಚಂಪಾ ಅಂದರೆ ಎಷ್ಟು ಹೊತ್ತು ಬೇಕಿದ್ದರೂ ಜಗಿಯಬಹುದಾದ ಚ್ಯೂಯಿಂಗ್ ಗಮ್ ಕವಿತೆ ಕೊಟ್ಟವರಲ್ಲ. ಅವರು ಕೈಗಿಟ್ಟದ್ದು ಬೆಂಕಿಕೆಂಡ. ಪ್ರೀತಿಯಿಲ್ಲದೇ ಏನನ್ನೂ ಮಾಡಲಾರೆ, ದ್ವೇಷವನ್ನು ಕೂಡ’ ಎಂದು ಘೋಷಿಸಿಕೊಂಡವರು ಚಂಪಾ. ‘ವ್ಯಂಗ್ಯ ವಿಲ್ಲದೇ ಏನನ್ನೂ ಬರೆಯಲಾರೆ, ನನ್ನ ಹೆಸರನ್ನು ಕೂಡಾ’ ಎಂಬುದು ಅಘೋಷಿತ ಸೂತ್ರ. ಅನುಮಾನವಿದ್ದವರು ಅವರ ಈ ಸಾಲುಗಳನ್ನು ನೋಡಬಹುದು:

ಕನ್ನಡ ಕಾವ್ಯದ ಭೂತ ಭವಿಷ್ಯವ
ಬಣ್ಣಿಸಿ ಹೇಳೋ ಗಾಂಪಾ
ನಮ್ಮ ಆದಿಕವಿ ಪಂಪ, ಗುರುವೇ
ನಮ್ಮ ಅಂತ್ಯಕವಿ ಚಂಪಾ.

ಪ್ರಜ್ವಲಿಸುವ ಶಲಾಕೆಯಂತೆ ಎಪ್ಪತ್ತರ ದಶಕದಲ್ಲಿ ಧಗಧಗಿಸುತ್ತಿದ್ದ ಚಂಪಾ, ಬೆಂಗಳೂರಿನತ್ತ ಕಣ್ಣು ನೆಟ್ಟು ಕೂತ ಸಾಹಿತ್ಯಾಸಕ್ತರ ಕಣ್ಣು ಒಂದರೆಕ್ಷಣವಾದರೂ ಉತ್ತರ ಕರ್ನಾಟಕದ ಕಡೆ ಹಾಯುವಂತೆ ಮಾಡಿದವರು. ಸಂಕ್ರಮಣ ಪತ್ರಿಕೆಯ ಮೂಲಕ, ಅವರ ನಾಟಕಗಳ ಮೂಲಕ, ಕಪಾಳಕ್ಕೆ ಹೊಡೆದ ಹಾಗೆ ಬೆಪ್ಪಾಗಿಸುವ ವ್ಯಂಗ್ಯದ ಮೂಲಕ, ಯಾರನ್ನು ಕೂಡ ಗೇಲಿ ಮಾಡಬಹುದು ಜಗಳ ಆಡಿದವರ ಜೊತೆ ರಾಜಿಯೂ ಸಾಧ್ಯ ಎಂದು ತೋರಿಸಿಕೊಡುವ ಮೂಲಕ ಚಂಪಾ ನಮ್ಮೊಳಗೆ ಬೆಳೆಯುತ್ತಾ ಹೋದರು. ಅವರ ವ್ಯಕ್ತಿತ್ವಕ್ಕೆ ಅದು ಹೇಗೋ ಏನೋ ವ್ಯಕ್ತಿಯನ್ನು ಮೀರಿದ ಒಂದು ಪ್ರಭಾವಳಿ ಅಂಟಿಕೊಂಡುಬಿಟ್ಟಿತು.

ಚಂದ್ರಶೇಖರ ಪಾಟೀಲ ಅಂದರೆ ಆಗ ನಮಗೆ ಕೇವಲ ಕವಿಯಲ್ಲ, ನಾಟಕಕಾರ ಅಲ್ಲ, ಸಂಪಾದಕ ಅಲ್ಲ, ವಿದೂಷಕ ಅಲ್ಲ, ವಿಮರ್ಶಕ ಅಲ್ಲ; ನಮ್ಮ ಯೌವನಕ್ಕೆ, ತುಡಿತಕ್ಕೆ, ಹುಚ್ಚಾಟಕ್ಕೆ, ತೀವ್ರತೆಗೆ, ಹೊಣೆಗೇಡಿತನಕ್ಕೆ ರೂಪಕ. ನಮ್ಮ ಕಾಲದ ತರುಣರಿಗೆಲ್ಲ ಅವರು ಬರೆದ ಹಾಗೆ ಬರೆಯಬೇಕು ಅನ್ನುವುದಕ್ಕಿಂತ ಅವರ ಹಾಗೆ ಗುಡುಗುತ್ತಿರಬೇಕು ಎನ್ನುವ ಆಶೆ, ಒಂಚೂರು ಕಷ್ಟಪಟ್ಟರೆ ಅವರ ಹಾಗೆ ಬರೆಯಬಹುದು ಎಂಬ ಹುಂಬ ಆತ್ಮವಿಶ್ವಾಸ.

ಚಂಪಾ ನಮ್ಮನ್ನು ಆಕರ್ಷಿಸಿದ್ದು, ತಲುಪಿದ್ದು ಪ್ರತಿಭಾವಂತ ಕವಿಯಾಗಿಯೋ ನಾಟಕಕಾರನಾಗಿಯೋ ಅಲ್ಲ. ಪ್ರಖಂಡ ವಾಗ್ಮಿಯಾಗಿ. ಅವರ ನಾಟಕಗಳಲ್ಲೂ ಮೌನ ಅಪರೂಪ. ಒಂದೋ ಎರಡೋ ನಾಟಕದ ಕೊನೆಗೆ ಬ್ರಾಕೆಟ್ಟಿನೊಳಗೆ ಮೌನವಿರುತ್ತದೆ. ಉಳಿದಂತೆ ಅವರೂ ಅವರ ಪಾತ್ರಗಳೂ ಭಯಂಕರ ವಾಚಾಳಿಗಳೇ.

ಅನ್ನಿಸಿದ್ದನ್ನು ಮಾತಾಡಿಬಿಡಬೇಕು. ಹಾಗೆ ಬಾಯ್ತುಂಬ ಮಾತಾಡುತ್ತಾ ಹೋದರೇ ಒಂದೆರಡು ಅರ್ಥಪೂರ್ಣ ಸಾಲುಗಳೂ ಹೊರಬಂದಾವು. ಅಥವಾ ಹೊರಬಂದ ಸಾಲುಗಳಲ್ಲಿ ಒಂದಷ್ಟು ಅರ್ಥಪೂರ್ಣ ಸಾಲುಗಳು ಕಂಡಾವು ಎಂಬ ಕಡುನಂಬಿಕೆಯಲ್ಲಿ ಚಂಪಾ ಮಾತಾಡುತ್ತಾ ಬರೆಯುತ್ತಾ ಹೋದಂತೆ ನಮಗೆ ಅನ್ನಿಸುತ್ತದೆ. ಅವರ ಒಳಗುದಿಯೇನಿತ್ತೋ, ಸಿಟ್ಟೇನಿತ್ತೋ, ಆತಂಕಗಳು ಏನಿದ್ದವೋ ಯಾರಿಗೆ ಗೊತ್ತು.
ಅವರ ವ್ಯಂಗ್ಯದ ಒಳಸುಳಿಗೆ ಸಿಗದೇ, ಸುಮ್ಮನೆ ಅವರ ಕವಿತೆಗಳನ್ನು ಓದಿದರೆ ಅತ್ಯುತ್ತಮ ರಚನೆಗಳೂ ಎದುರಾಗುತ್ತವೆ. ಅವರ ಆರಂಭದ ರಚನೆಗಳಿವು. ಅಲ್ಲಿ ನಮಗೆ ಕಾಣುವುದು ರೋಮ್ಯಾಂಟಿಕ್ ಕಾವ್ಯದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಚಂಪಾ.

ತಮ್ಮದು ಚಂಪೂ ಕಾವ್ಯ ಅಲ್ಲ ಎಂದು ಸಾಬೀತು ಪಡಿಸಲೆಂದೇ ಬರೆದಂಥ ಸಾಲುಗಳು :
ಸಂಜೆ, ಸೂರ್ಯಪಾನದ ಹೂವು ಗೋಣು ಚೆಲ್ಲುವ ಮುನ್ನ.
ಮುಗಿಲಲ್ಲಿ ಎಲ್ಲೋ ಹಕ್ಕಿ ಲಗಾಟ ಹೊಡೆದಾಗ
ಗೋಡೆಯಾಚೆಗಿನ ಸ್ವಂತದ ಹಾಳು ಹಂಪೆ ನೆನಪಾಗಿ
ಮೈತುಂಬ ತುಂಗಭದ್ರೆಯ ಸೆಳವು ಹೆಚ್ಚುತ್ತದೆ.

ಬರೆವಣಿಗೆಯ ವಿಚಾರದಲ್ಲಿ ಚಂಪಾ ಯಾವತ್ತೂ ಮಹತ್ವಾಕಾಂಕ್ಷಿ ಆಗಿರಲಿಲ್ಲ ಎನ್ನಿಸುತ್ತದೆ. ಅವರು ಕಾದಂಬರಿ ಬರೆಯಲಿಲ್ಲ. ಮಹಾಕಾವ್ಯ ಬರೆಯುವುದಕ್ಕೆ ಹೋಗ ಲಿಲ್ಲ. ಅವರ ಸಮಕಾಲೀನ ನಾಟಕಕಾರರ ಹಾಗೆ, ಪುರಾಣದಿಂದಲೋ ಇತಿಹಾಸ ದಿಂದಲೋ ವಸ್ತುವೊಂದನ್ನು ಆಯ್ದುಕೊಂಡು ಅದನ್ನು ವರ್ತಮಾನಕ್ಕೆ ತಂದಿಟ್ಟು ಸಂಕೀರ್ಣವೆನ್ನಿಸುವ ನಾಟಕ ಬರೆಯಲಿಲ್ಲ. ತಮಗೆ ತೋಚಿದ್ದನ್ನು ತೋಚಿದ ಹಾಗೆ ಬರೆದುಕೊಂಡು ಬಂದ ಚಂಪಾ, ನಂತರದ ದಿನಗಳಲ್ಲಿ ತಾನು ಇಂಥದ್ದೇ ಪಂಥಕ್ಕೆ ಸೇರಿದವನು ಎಂದು, ಎಂದೂ ತೋರಿಸಿಕೊಳ್ಳುವ ಪ್ರಯತ್ನ ಕೂಡ ಮಾಡಲಿಲ್ಲ. ಅವರ ಅತ್ಯುತ್ತಮ ಚಿಂತನೆಗಳು ‘ಸಂಕ್ರಮಣ’ದ ಸಂಪಾದಕೀಯಗಳಾದವು. ಅಲ್ಲಿ ಚಂಪಾ ವಿಶ್ವರೂಪ ತೋರಿದರು. ಕುಟುಕುತ್ತಾ, ಮೆಚ್ಚುತ್ತಾ, ಮಿಡಿಯುತ್ತಾ, ಪ್ರೀತಿಸುತ್ತಾ, ಜಗಳ ಆಡುತ್ತಾ ತನ್ನದೇ ಒಂದು ಜಗತ್ತನ್ನು ಸೃಷ್ಟಿಸಿಕೊಂಡರು.

ಲಂಕೇಶರಿಗೆ ಸಂವಾದಿಯಾಗಿ ನೆಲೆಯೂರುವುದಕ್ಕೆ ಚಂಪಾ ಯತ್ನಿಸುತ್ತಿದ್ದಾರಾ ಎಂಬ ಅನುಮಾನ ಹುಟ್ಟುವಂತೆ ಬರೆಯುತ್ತಿದ್ದವರು ಚಂಪಾ. ಲಂಕೇಶ್ ಪತ್ರಿಕೆ ಆರಂಭವಾದಾಗ ಅಲ್ಲಿ ಚಂಪಾ ಹಾಜರ್. ಲಂಕೇಶರನ್ನು ಮೀರಿಸುವಂಥ ವ್ಯಂಗ್ಯವಿತ್ತು. ಲಂಕೇಶರ ವ್ಯಂಗ್ಯ ಸಂಬಂಧಗಳಿಗೆ ಸೀಮಿತವಾದರೆ, ಚಂಪಾ ತನ್ನ ಕಾಲದೇಶಗಳನ್ನು ವಾರೆಗಣ್ಣಲ್ಲಿ ನೋಡತೊಡಗಿದರು.

ಅವರಿಗೊಂದು ತುಂಬ ಸ್ಪಷ್ಟವಾದ ರಾಜಕೀಯ ಒಳನೋಟವಿತ್ತು. ಆದರೆ ಅವರು ಮಿಂಚುತ್ತಿದ್ದದ್ದು ಇಂಥ ಸಾಲುಗಳಲ್ಲಿ :
‘ಕಣವಿ ಕಾವ್ಯದ ವಸ್ತು ವೈವಿಧ್ಯ ಅಪಾರ ಮತ್ತು ಅನಂತ. ವಿಶ್ವದ ಸಕಲ ಜೀವರಾಶಿಗಳೂ ಅವರ ಕವಿ ಹೃದಯದಲ್ಲಿ ಗೌರವದ ಸ್ಥಾನ ಪಡೆದಿವೆ. ನಮ್ಮ ವಿಶೇಷ ಗಮನ ಸೆಳೆಯುವುದು ಅವರು ಚಿತ್ರಿಸುವ ಕ್ರಿಮಿ-ಕೀಟಗಳ ಪ್ರಪಂಚ. ಅದರಿಂದಾಗಿಯೇ ಕೆಲವರು ಅವರನ್ನು ವಿನೋದದಿಂದ ‘ಕನ್ನಡದ ಕೀಟ್ಸ್’ ಎಂದು ಕರೆಯುತ್ತಾರೆ. ಕಣವಿ ಕಾವ್ಯದಲ್ಲಿ ‘ಹೈಟ್ಸೇ’ ಇಲ್ಲವಲ್ಲ ಅಂತ ಯಾರೋ ಕೇಳಿದಾಗ ಬೇಂದ್ರೆಯವರು ‘ಕಣಿವೆಯಲ್ಲಿ ಹೈಟ್ಸೇ?’ ಅಂತ ಜೋಕು ಮಾಡಿದ್ದರಂತೆ. ಲಂಕೇಶರು ಅವರನ್ನು ತರಕಾರಿ ಕವಿ ಅಂತ ಛೇಡಿಸಿದ್ದರು.’

‘ಗುರ್ತಿನವರು’ ನಾಟಕದಲ್ಲಿ ಗಂಡ ಹೇಳುತ್ತಾನೆ : ಭಾಳ ಬೆರಕಿ ಅದೀಯ ನೀನು. ನನಗಂತೂ ಮನಸಿನ ಪ್ರಶ್ನ ಮಾತಾಗಿ ಹೊರಗೆ ಬರೋ ತನಕ ಅದೇನೈತಿ ಅನ್ನೋದು ಗೊತ್ತೇ ಆಗೋದಿಲ್ಲ ನೋಡು. ಚಂಪಾ ಶಕ್ತಿಯೂ ಅದೇ, ಉಡಾಫೆಯೂ ಅದೇ. ಅವರಿಗೂ ಮನಸ್ಸಿನ ಪ್ರಶ್ನೆ ಮಾತಾಗಿ ಹೊರಗೆ ಬರುವ ತನಕ ಎಲ್ಲವೂ ನಿಗೂಢ. ಹಾಗೆ ಮಾತಾಗಿ ಬಂದದ್ದು ಕವಿತೆ ಆಗುತ್ತದೋ, ಹೇಳಿಕೆ ಆಗುತ್ತದೋ, ಬರೀ ತಮಾಷೆ ಆಗುತ್ತದೋ ಅವರಿಗೆ ಮುಖ್ಯವಲ್ಲ. ಈ ಎರಡು ಉದಾಹರಣೆಗಳು ಮೇಲಿನ ಮಾತಿಗೆ ಸಾಕ್ಷಿಯಾಗುತ್ತವೆ:

‘ಜಾಣ ಬಾಬಾಗಳಿಗೆ ಹುಚ್ಚಗೌಡರ ಬೆನ್ನು ಸಿಕ್ಕು
ಧರ್ಮೋದ್ಧಾರದ ಸವಾರಿ ಮುನ್ನಡೆದಿದೆ
ಅಸ್ಪೃಶ್ಯ ದೇವರಿಗೆ ಹರಿಜನರ ದರ್ಶನವಾಗಿ
ಅವರ ಉದ್ಧಾರವೂ ಆಗುತ್ತಿದೆ.’
ಪರಸ್ತ್ರೀಯನ್ನು ಹಾಗೆಲ್ಲ
ನೋಡಬಾರದು ಮಿಸ್ಟರ್
ನೀವು ಪರಸ್ತ್ರೀ ಅಂತ ನಾನು
ತಿಳದೇ ಇಲ್ಲ ಸಿಸ್ಟರ್.

ಮೊದಲನೆಯದರಲ್ಲಿ ಬರುವ ವ್ಯಂಗ್ಯ ಗಮನಿಸಿ. ‘ಅಸ್ಪೃಶ್ಯ ದೇವರಿಗೆ ಹರಿಜನರ ದರ್ಶನ ಆಗಿ’ ಎನ್ನುವುದು ಗಾಂಧೀ ಸ್ಮರಣೆಯ ಸಾಲು. ಅದು ಅತ್ಯುತ್ತಮ ರಾಜಕೀಯ ವಿಡಂಬನೆಯೂ ಹೌದು. ಆದರೆ ಎರಡನೆಯ ತಮಾಷೆ ಕವಿತೆಯಲ್ಲಿ ‘ಸಿಸ್ಟರ್’ ಎಂಬುದು ಕೇವಲ ಪ್ರಾಸಕ್ಕಾಗಿ ಬಂದಿದೆ. ಹೀಗಾಗಿ ಅದರ ತಮಾಷೆ ಕೂಡ ಫಲಿಸುವುದಿಲ್ಲ. ಅದನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಅನ್ನುವುದೂ ಸರಿಯೇ. ಆದರೆ ಮಾತು ಅವರನ್ನೂ ಮೀರಿದ ಮಾತಾಗುವುದಕ್ಕೆ ಇದು ಸಾಕ್ಷಿ.

ಚಂದ್ರಶೇಖರ ಪಾಟೀಲರು ಗಾಢವಾಗಿ ಯೋಚಿಸಿ ಬರೆದಾಗ ಅತ್ಯುತ್ತಮ ಚಿಂತನೆಗಳನ್ನು ನೀಡುತ್ತಾರೆ : ‘ನವೋದಯ’ ಕಾಲ ಸೂಚಕ, ‘ನವ್ಯ’ ಶೈಲಿ ಮತ್ತು ದೃಷ್ಟಿಕೋನಗಳನ್ನು, ಪ್ರಗತಿಶೀಲ ಮತ್ತು ಬಂಡಾಯ ಮನೋಧರ್ಮಗಳನ್ನು, ದಲಿತ ಲೇಖಕನ ಸಾಮಾಜಿಕ ಹಿನ್ನೆಲೆಯನ್ನು ತೋರುತ್ತವೆ ಎಂದು ಅವರು ಸಾಹಿತ್ಯ ಪ್ರಕಾರಗಳ ವೈಶಿಷ್ಟ್ಯಗಳನ್ನು ಸೂಚಿಸುತ್ತಾರೆ. ನಾನು ಬರೆಯುವ ಪ್ರತಿಯೊಂದು ಶಬ್ದವೂ- ಕಾವ್ಯ, ನಾಟಕ, ಕಾಲಂ ಯಾವುದೇ ಆಗಿರಲಿ- ಅದು ನನಗೆ ಸಹಜ ಮತ್ತು ಅನಿವಾರ್ಯ ಎನ್ನುತ್ತಾರೆ.

ಚಂಪಾರಿಗೆ ಎಂಬತ್ತಾಗಿ ಆರು ತಿಂಗಳಾಯಿತು ಎಂದಾಗ ನಮಗೆಲ್ಲ ಅಚ್ಚರಿ. ನಮ್ಮ ಎದುರು ಓಡಾಡಿಕೊಂಡಿರುವ ಕ್ರಿಯಾಶೀಲ ಮನುಷ್ಯನಿಗೆ ವಯಸ್ಸಾಯಿತು ಎಂದು ನಮಗೆ ಅನ್ನಿಸುವುದೇ ಇಲ್ಲ. ಚಂಪಾ ಕೂಡ ವಯಸ್ಸಾದವರ ಹಾಗೆ ಯಾವತ್ತೂ ನಡೆದು ಕೊಳ್ಳಲಿಲ್ಲ. ನೀತಿ ಪಾಠ ಹೇಳುವುದಕ್ಕೋ, ಘನಗಾಂಭೀರ್ಯದಿಂದ ಬೀಗುವುದಕ್ಕೋ, ಹಿರಿತನದ ಹಿರಿಮೆಯಿಂದ ಕಿರಿಯರ ತಲೆ ಮೊಟಕುವುದಕ್ಕೋ ಅವರಿಗೆ ಬರುವುದಿಲ್ಲ. ಆಗೊಂದು ಈಗೊಂದು ಮಾತಿನ ಚಾಟಿ ಬೀಸಿದರೂ ಅದರಲ್ಲಿ ಅವರ ಪ್ರೀತಿ ಕಾಣಿಸುತ್ತದೆ. ಬೈಯುವುದು ಕೂಡ ಅವರಿಗೆ ಸಹಜ ಮತ್ತು ಅನಿವಾರ್ಯ ಎನ್ನಿಸಿದ್ದರಿಂದ ಅವರ ವ್ಯಂಗ್ಯವೂ ತನ್ನ ಮೊನಚು ಕಳಕೊಂಡಿದೆ. ‘ನೀನು ಭ್ರಷ್ಟ’ ಎಂದು ಅವರು ಯಾರಿಗಾದರೂ ಹೇಳಿದರೆ ಅದೊಂದು ಜೋಕ್ ಎಂಬಂತೆ ಕೇಳಿಸಿಕೊಂಡವರು ನಕ್ಕು ಸುಮ್ಮನಾಗುತ್ತಾರೆ.

ಚಂಪಾ ಅವರನ್ನು ಈ ಕಾಲದ ಹುಡುಗರು ಓದುತ್ತಾರಾ? ಅವರ ಬರಹಗಳಿಗಾಗಿ ಕಾಯುತ್ತಾರಾ? ಅವರಿಗೆ ಶಿಷ್ಯವರ್ಗ ಇದೆಯಾ? ಎಂಬಿತ್ಯಾದಿ ಪ್ರಶ್ನೆಗಳು ಎದುರಾಗಿ ನಮ್ಮ ಬಳಗದ ಕೆಲವರನ್ನು ಕೇಳಿದೆ. ‘ಕುಂಟಾ ಕುಂಟಾ ಕುರವತ್ತಿ’, ‘ಗುರ್ತಿನವರು’, ‘ಟಿಂಗರ ಬುಡ್ಡಣ್ಣ’ ಎಂದು ಎರಡು ಮೂರು ಹೆಸರು ನೆನಪಿಸಿಕೊಂಡರು. ಅವರ ಬಗ್ಗೆ ಓದಿಕೊಂಡವರು ಅಸಂಗತ ನಾಟಕ ಬರೆದಿದ್ದಾರೆ ಅಂದರು. ಸಂಕ್ರಮಣ ಕ್ಷೀಣಿಸಿದೆ ಎಂದು ಅನೇಕರು ಬೇಜಾರು ಮಾಡಿಕೊಂಡರು. ‘ಸಾಹಿತಿಗಳ ವಿಳಾಸಗಳು’ ಪುಸ್ತಕಕ್ಕೆ ಹಣ ಕಳುಹಿಸಿದ್ದೆ, ನನ್ನ ಹೆಸರೇ ಬಂದಿಲ್ಲ ಎಂದರು.

ಚಂಪಾ ಕುರಿತು ಯೋಚಿಸಿದಾಗೆಲ್ಲ ನನಗೆ ನೆನಪಾಗುವುದು ಚಂದ್ರಶೇಖರ ಕಂಬಾರರ ‘ಆ ಮರ ಈ ಮರ’ ಕವಿತೆ. ಹಳ್ಳದ ದಂಡೆಯ ಮೇಲೊಂದು ಮರ, ಹಳ್ಳದಲ್ಲೊಂದು ಮರ ಎಂದು ಶುರುವಾಗುವ ಈ ಕವಿತೆ ಹೀಗೆ ಮುಂದುವರಿಯುತ್ತದೆ:

ನೀನೊಂದು ಮರ ಹತ್ತಿದರೆ
ಇನ್ನೊಂದರಲ್ಲಿ ಇಳಿಯುತ್ತಿ.
ತಲೆಮೇಲಾಗಿ ಹತ್ತುತ್ತೀಯ
ತಲೆಕಳಗಾಗಿ ಇಳಿಯುತ್ತೀಯ.

ಈ ಕತೆಯ ದುರಂತ ದೋಷ ಯಾವುದೆಂದರೆ ನಿಜವಾದ ಮರ ಮತ್ತು ನೀರಿನ ಮರ ಇವೆರಡೂ ಒಂದಾದ ಸ್ಥಳ ಮಾಯವಾಗಿರೋದು.
ಚಂಪಾ ಹತ್ತುತ್ತಲೇ ಇಳಿಯುತ್ತಿದ್ದರು, ಇಳಿಯುತ್ತಲೇ ಹತ್ತುತ್ತಿದ್ದರು. ನಮಗೆ ಇವತ್ತಿಗೂ ನಿಗೂಢವಾಗಿ ಕಾಣಿಸುವುದು ಅವರ ಶಾಲ್ಮಲೆ ಮಾತ್ರ.
ಚಂಪಾ ಇನ್ನು ಸಿಗುವುದಿಲ್ಲ.

‍ಲೇಖಕರು Admin

January 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: