ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಿಕಾ ಹೆಗಡೆ ಕವಿತೆ- ಅವಳೊಂದು ಸಮುದ್ರ…

ಚಂದ್ರಿಕಾ ಹೆಗಡೆ

ಎದೆಯ ತುಂಬಾ ಉಕ್ಕೇರುವ ಆಸೆಯ ಅಲೆಗಳು
ಪ್ರತಿಸಲ ನಿರಾಶೆಯ ದಡಕ್ಕೆ ಬಡಿದು
ಬಲ ಕಳೆದುಕೊಂಡು
ನಿಸ್ಸಹಾಯಕವಾಗಿ ಹಿಂದಿರುಗುವಾಗಲೂ
ಬಿಡದೆ
ಮತ್ತೆ ಮತ್ತೆ ಅಲೆಗಳನ್ನು ಉಕ್ಕಿಸುತ್ತಲೇ ಇರುತ್ತದೆ
ಸಮುದ್ರ ಅವಳ ಹಾಗೇ

ಭಾರಗಳನ್ನೆಲ್ಲಾ ತನ್ನೊಳಗೆ ಮುಳುಗಿಸಿಕೊಂಡು
ಹಗುರಗಳನು ಮೇಲೆ ತೇಲಿಸಿ
ಅಲೆಯಲೆಯಾಗಿ
ನಗುನಗುತ್ತಿರುತ್ತದೆ
ಸಮುದ್ರ ಅವಳ ಹಾಗೇ

ಅದರಾಳ ಅಗಲಗಳ
ಯಾರೂ ಸುಲಭದಲಿ ಅಳೆಯಲಾಗುವುದಿಲ್ಲ
ತಳಕ್ಕಿಳಿಯದೇ
ಮುತ್ತು ಹವಳಗಳು ನಿಲುಕುವುದಿಲ್ಲ
ತನ್ನೊಡಲಲಿ ಹುದುಗಿರುವುದೇನೆಂದು
ಎಂದೂ ಸುಳಿವು ಬಿಟ್ಟುಕೊಡುವುದಿಲ್ಲ
ಸಮುದ್ರ ಅವಳ ಹಾಗೇ

ಎಲ್ಲೋ ಹುಣ್ಣಿಮೆ ಅಮಾವಾಸ್ಯೆಗಳ ಹೊರತು
ಉಬ್ಬರವಿಳಿತಗಳಿಲ್ಲದೇ
ಶಾಂತವಾಗಿಯೇ ಇರುತ್ತದೆ
ಸಮುದ್ರ ಅವಳ ಹಾಗೇ

ತನ್ನ ದಡಗಳನ್ನೆಂದೂ ಮೀರುವುದಿಲ್ಲ ಅದು
ತೀರಾ ಅದರೊಳಗೊಂದು
ತಾಳಲಾರದ ಕಂಪನವೆದ್ದು
ಸ್ಫೋಟ ಸಂಭವಿಸುವ ತನಕ…
ಒಮ್ಮೆ ಸ್ಫೋಟಿಸಿದರೆ
ಏಳುವ ಸುನಾಮಿಗೆ ಯಾವ ದಡವೂ ತಡೆಯುವುದಿಲ್ಲ
ಸಮುದ್ರ ಅವಳ ಹಾಗೇ…

‍ಲೇಖಕರು avadhi

21 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading