ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಕೌಂಚಿಟ್ಟ ಬುಟ್ಟಿಯಲಿ ಕಡಿಮೆಯಾದ ಕೋಳಿಗಳು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

7


ತಾತನನ್ನು ಮಣ್ಣಿನಲ್ಲಿಟ್ಟ ಮೇಲೆ ಮನೆಯಲ್ಲಿ ಅಂಥಾ ವ್ಯತ್ಯಾಸ ಆಗದಿದ್ದರೂ ಅಜ್ಜಿ ಮೆತ್ತಗಾದಳು. ಮೆತ್ತಗೆ ಎಂದರೆ ಅಮ್ಮನನ್ನು ಏನೂ ಬೈಯ್ಯುತ್ತಿರಲಿಲ್ಲ. ಸೊಂಟದಲ್ಲಿ ಎಲಡಿಕೆ ಚೀಲವಿದ್ದರೂ ಕಟ್ಟೆಯ ಮೇಲೆ ಬಹಳ ಹೊತ್ತು ಕೂಡುತ್ತಿರಲಿಲ್ಲ. ಗತ್ತು ಗೈರತ್ತುಗಳನ್ನು ಮಡಚಿಟ್ಟುಬಿಟ್ಟಿದ್ದಳು. ಅವಳನ್ನು ಬಹುಶಃ ತಾತನಿಲ್ಲದ ಶೂನ್ಯ ಕಾಡಿದ್ದಿರಲೇಬೇಕು. ಆದರೆ ಅಪ್ಪಿ ತಪ್ಪಿ ಕೂಡಾ ತಾತನ ನೆನಪು ಮಾಡಿಕೊಂಡು ಗೋಳಾಡಿದ್ದನ್ನು ನಾನು ನೋಡಲೇ ಇಲ್ಲ- ಅದೆಂಥಾ ವಿಲ್ ಪವರ್ ಅವಳದ್ದು?!- ಕಡೇ ಪಕ್ಷ ಊರವರು ಬಂದು ಸಂತ್ವಾನ ಹೇಳುವಾಗಲೂ ಕೂಡಾ. ಇನ್ನು ಅಪ್ಪ ಕೆಲಸಕ್ಕಾಗಿ ಊರ ಮೇಲೆ ಹೋದರೆ, ಮನೆಗೆ ಗಂಡು ದಿಕ್ಕು ಹರೀಶ, ಗಿರೀಶರೇ. ತಾತ ಬದುಕಿದ್ದಾಗ ಏನನ್ನು ನಿಭಾಯಿಸುತ್ತಿದ್ದ ಎನ್ನುವುದು ಅವನ ಅನುಪಸ್ಥಿತಿಯಲ್ಲಿ ಗೊತ್ತಾಗುತ್ತಿತ್ತು. ತಾತ ಮನೆಯ ಎಲ್ಲವೂ ಆಗಿದ್ದ, ಎಲ್ಲಕ್ಕಿಂತ ಹೆಚ್ಚಾಗಿ ಧೈರ್ಯವಾಗಿದ್ದ. ಇದ್ದಾನೆ ಎನ್ನುವ ಭಾವವನ್ನೇ ನಾವು ಕಳಕೊಂಡಿದ್ದು.

ಇದ್ದಕ್ಕಿದ್ದ ಹಾಗೆ ಒಂದು ದಿನ ತನ್ನ ಸ್ಕೂಟರ್ ಅನ್ನು ಹತ್ತಿ ಮನೆಯಿಂದ ಹೊರಟ ಅಪ್ಪ ಮತ್ತೆ ವಾಪಾಸು ಮನೆಗೆ ಬರಲಿಲ್ಲ. ಎಲ್ಲಿ ಹೋಗಿರಬಹುದು ಎಂದು ಎಲ್ಲಾ ಕಡೆ ಹುಡುಕಿಸಿದ ನಮಗೆ ಅಪ್ಪನ ಸುಳಿವೇ ಸಿಗಲಿಲ್ಲ. ಅಜ್ಜಿ ಇನ್ನಷ್ಟು ಕುಸಿದಳು. ಅವಳು ಯಾರನ್ನೂ ಬೈಯ್ಯುತ್ತಿರಲಿಲ್ಲ. ಗಟ್ಟಿತನವನ್ನು ಬಿಟ್ಟುಕೊಡದ ಅವಳು ನೆನಪಾದಾಗ ಸುಮ್ಮನೆ ಎಲಡಿಕೆಯನ್ನು ಕುಟ್ಟುತ್ತಾ ಕುಳಿತುಬಿಡುತ್ತಿದ್ದಳು. ಅವಳಿಗೆ ಬಹುಶಃ ಬೇಸರವಾಗಿದ್ದಿರಬಹುದು ಎಂದು ನಾವೆಂದುಕೊಳ್ಳುತ್ತಿದ್ದೆವು. ಅಮ್ಮನೊಂದಿಗೆ ಆಡುತ್ತಿದ್ದುದ್ದು ‘ಮಕ್ಕಳಿಗೆ ಏನು ಮಾಡಿಕೊಟ್ಟೆ’ ಎನ್ನುವುದು ಮಾತ್ರ ಆಗಿತ್ತು. ಅಮ್ಮ ಕೆಲವೊಮ್ಮೆ ರಂಪ ಮಾಡುತ್ತಾ ಎಲ್ಲಕ್ಕೂ ಕಾರಣ ನನ್ನ ವಿಧಿ ಎಂದೂ ಗೋಳುಗರೆಯುತ್ತಿದ್ದಳು. ಕಿವಿಮೇಲೆ ಬಿದ್ದಾಗ ಅಜ್ಜಿ ಮಕ್ಕಳೆದುರು ಮಗನನ್ನು ಬೈಯ್ಯದಿರುವಂತೆ ತಾಕೀತು ಮಾಡುತ್ತಿದ್ದಳು. ‘ಗೊತ್ತಾಗಲಿ ಬಿಡಿ ಅವರಪ್ಪ ಏನು ಮಾಡಿದ್ದಾರೆ ಅಂತ. ಅವರೂ ಸಣ್ಣವರೇನಲ್ಲವಲ್ಲ’ ಎಂದು ಅಜ್ಜಿಯ ಮೇಲೆ ರೇಗುತ್ತಿದ್ದಳು. ಅಜ್ಜಿ ಜಾಸ್ತಿ ಮಾತು ಬೆಳೆಸದೆ ಸುಮ್ಮನಾಗಿಬಿಡುತ್ತಿದ್ದಳು.

ಅಪ್ಪ ಏನಾದ ಎನ್ನುವ ಆತಂಕಕ್ಕೆ ಸಿಕ್ಕ ನಮಗೆ ಜನ ಒಂದೊ೦ದು ಕಥೆಯನ್ನು ಹೇಳಿದರು. ತುಂಬಾ ಆತಂಕ ಸೃಷ್ಟಿಸಿದ್ದು ಒಂದು ಕತೆ ಚರ್ಮದ ವ್ಯಾಪಾರಕ್ಕೆ ಹೋಗುತ್ತಿದ್ದವನಿಗೆ ಯಾವುದೋ ಮುಸಲ್ಮಾನರ ಹೆಣ್ಣಲ್ಲಿ ಪ್ರೀತಿಯಾಯಿತಂತೆ. ಆಕೆಯ ಜೊತೆ ಮದುವೆ ಮಾಡಿಕೊಂಡು ಬೆಂಗಳೂರು ಪಟ್ಟಣದಲ್ಲಿ ಎಲ್ಲೋ ಮನೆಮಾಡಿಕೊಂಡು ಇದ್ದಾನೆ ಎಂದಿದ್ದು. ಅಮ್ಮ ಅತ್ತಳು. ಅಜ್ಜಿ ‘ಹೇಳಿದರೆ ನಂಬುವ ಕತೆ ಹೇಳಬೇಕು. ಈಗ ನನ್ನ ಮಗನ ವಯಸ್ಸು ಐವತ್ತು. ಈಗ ಎಂಥಾ ಪ್ರೀತಿ? ಮದುವೆ ಮಗಳ ಮದುವೆ ಮಾಡಿದ್ದಾನೆ. ಅಜ್ಜನಾಗುವ ವಯಸ್ಸಿನಲ್ಲಿ ಮತ್ತೊಂದು ಮದುವೆಯಾಗಿ ಏನು ಮಾಡಿಯಾನು ಅವನು?’ ಎಂದಿದ್ದಳು. ಸತ್ಯ ಯಾರಿಗೆ ಗೊತ್ತು? ಹೇಳಬೇಕಾದವ ಅಪ್ಪ. ಅವನನ್ನು ಹುಡುಕಿಸಲು ಸಾಧ್ಯವಾದ ಕಡೆಯೆಲ್ಲಾ ಓಡಾಡಿಯಾಯಿತು. ಅಪ್ಪನಾಗಲೀ ಅವನ ಸ್ಕೂಟರಿನ ಸುಳಿವಾಗಲೀ ಸಿಗಲಿಲ್ಲ. ಅಮ್ಮ ಸುಸ್ತಾದವಳಂತೆ ‘ತೊಗಲಿಗೆ ಆಸೆ ಬಿದ್ದವರು’ ಎಂದು ವಿಷಾದದಲ್ಲಿ ಹೇಳಿದ್ದಳು. ಹಾಗೆಂದರೆ ಏನು ಎಂದು ನನಗೆ ಅರ್ಥವಾಗಲೇ ಇಲ್ಲ. ನನ್ನ ಯೋಚನೆಯಲ್ಲಿ ಅಪ್ಪನದ್ದು ಚರ್ಮದ ವ್ಯಾಪಾರ ಎಂದು ಹೇಳುತ್ತಿದ್ದಾಳೆ ಎಂದುಕೊ೦ಡಿದ್ದೆ.

ಜೀವನ ನಡೆಯಬೇಕಲ್ಲಾ? ಹರೀಶ, ಗಿರೀಶರು ಓದು ಬಿಟ್ಟು ಕೆಲಸ ಮಾಡಲು ತೊಡಗಿದರು. ಗಿರೀಶ ಅಪ್ಪನ ಕೆಲಸವನ್ನೇ ಮುಂದುವರಿಸಿದ. ಅಮ್ಮ ಮನೆಗೆ ದಿನಾ ಬರಲೇಬೇಕು ಎಂದು ತಾಕೀತು ಮಾಡಿದ್ದಳು. ಹರೀಶ ಆಡು, ದನಗಳ ದಲ್ಲಾಳಿಯಾದ. ವ್ಯಾಪಾರ ಮಾಡಿ ಇಷ್ಟು ಅಂತ ಕಮೀಷನ್ ಕೊಟ್ಟರೆ ಅದರಿಂದ ಜೀವನ ನಡೆಯುವ ಹಾಗೇ ಆಯಿತು. ದಿನ ಕಳೆದ ಹಾಗೆಲ್ಲಾ ಅದರಲ್ಲಿ ಅವನು ಎಷ್ಟು ಪಳಗಿಬಿಟ್ಟ ಎಂದರೆ ಅವನು ಹೇಳಿದ ರೇಟು ಪಕ್ಕಾ ಇರುತ್ತೆ ಎಂದು ಜನ ಭಾವಿಸತೊಡಗಿದರು. ಬೆಳಗಾದರೆ ಯಾರು ಯಾರೋ ಬಂದು ಅವನನ್ನು ಕರೆದೊಯ್ಯತೊಡಗಿದ್ದರು. ಅವನು ಮನೆಗೆ ಬರುವುದು ಅಪರೂಪವೇ ಆಗಿಹೋಯಿತು. ನಾನು ಆಡು, ಮೇಕೆಗಳನ್ನು ಮೇಯಿಸತೊಡಗಿದೆ. ನನ್ನ ಕಣ್ತಪ್ಪಿ ಅವು ದೂರ ಹೋಗಿಬಿಡುತ್ತಿದ್ದವು. ಬರ್ಕ ಕುರ್ಕ, ದೊಡ್ದ ನಾಯಿ ಹೀಗೆ ಆಡುಗಳನ್ನು ಎಳೆದೊಯ್ದುಬಿಡುತ್ತಿದ್ದವು. ಹುಡುಕಿ ಸುಸ್ತಾದ ನಾನು ಅಳುತ್ತಾ ಮನೆಗೆ ವಾಪಾಸಾಗುತ್ತಿದ್ದೆ. ಅಜ್ಜಿ ಕೌಂಚಿ ಹಾಕಿದ್ದ ಬುಟ್ಟಿಯಲ್ಲಿ ಕಡಿಮೆಯಾಗುತ್ತಿದ್ದ ಕೋಳಿಗಳ ಲೆಕ್ಕ ಇಡತೊಡಗಿದಳು. ನಮ್ಮ ಮನೆಗೆ ಇಷ್ಟು ಬೇಗ ಕಷ್ಟ ಬರುತ್ತೆ ಎಂದು ಅಂದುಕೊಳ್ಳಲಿಲ್ಲ. ಗಿರೀಶ ತುಂಬಾ ಸಣ್ಣ ವಯಸ್ಸಿಗೆ ಕುಡಿಯುವುದನ್ನ ಕಲಿತ, ಸಹವಾಸ ದೋಷ. ಚಿಕ್ಕ ವಯಸ್ಸಿಗೇ ಅಷ್ಟು ಹಣವನ್ನು ನೋಡಿ ತಾಳಿಕೊಳ್ಳಲಾಗಲಿಲ್ಲ. ಅಮ್ಮ ಅತ್ತಳು ಅಜ್ಜಿ ಗೋಗರೆದಳು, ನಾನು ಬೇಡಿಕೊಂಡೆ. ಮೊದ ಮೊದಲು ಹಣವನ್ನು ತಂದುಕೊಡುತ್ತಿದ್ದ ಗಿರೀಶ ಆಮೇಲಾಮೇಲೆ ಕುಡಿದು ಮೈಮೇಲೆ ಎಚ್ಚರ ಇಲ್ಲದಂತಾದಾಗ ಜೊತೆಯಲ್ಲಿರುವವರು ಹಣವನ್ನು ಲಪಟಾಯಿಸತೊಡಗಿದರು. ಮನೆ ನಿಭಾಯಿಸುವುದು ಕಷ್ಟ ಅನ್ನಿಸತೊಡಗಿತು. ದಾರಿ ಕಾಣದೆ ಹರೀಶ ಗೌಡರ ಹತ್ತಿರ ಸಾಲ ಮಾಡಿದ. ಬಡ್ಡಿ ವಸೂಲಿಗೆ ಮನೆಯ ಬಾಗಿಲಿಗೆ ಅವರ ಜನ ತಡಕಾಡ ತೊಡಗಿದರು. ಕೂತು ತಿನ್ನುವವರು ನಾಕು ಜನ. ದುಡಿವವರು ಮಾತ್ರ ಒಬ್ಬರೇ ಎಂದರೆ ಹೇಗಾಗುತ್ತೆ. ಹೆಂಗಿದ್ದ ಮನೆ ಹೆಂಗಾಯಿತು ಎಂದು ಅಮ್ಮ ರೋಧಿಸತೊಡಗಿದಳು.

ಈಗ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯ ಆಗಿತ್ತು. ಶಾಲೆಯಲ್ಲಿದ್ದಾಗ ಎಲ್ಲರೂ ನನ್ನ ಹಾಡು ಕೇಳಿ ನಿನ್ನ ಕಂಠದಲ್ಲಿ ಗಂಧರ್ವರು ಕುಳಿತಿರಬೇಕು ಎನ್ನುತ್ತಿದ್ದರು. ಸೋಬಾನೆ ಪದಗಳನ್ನು ಜನಪದ ಹಾಡುಗಳನ್ನು ಕೇಳುಕೇಳುತ್ತಿದ್ದಂತೆ ಕಲಿಯುತ್ತಿದ್ದೆ. ಊರಲ್ಲೆಲ್ಲಾ ಏನಾದರೂ ಮದುವೆ ಪ್ರಸ್ತ, ನೀರು ಹಾಕಿಕೊಂಡರೆ, ಶ್ರೀಮಂತ, ಮೈನೆರೆತರೆ ಎಲ್ಲಕ್ಕೂ ದೊಡ್ಡವರ ಜೊತೆ ನಾನೂ ಕೂತು ಹಾಡುವುದನ್ನು ಅಭ್ಯಾಸ ಮಾಡಿಕೊಂಡೆ. ಹಾಡುವಾಗಲೆಲ್ಲಾ ನನ್ನ ಮನಸ್ಸಿಗೆ ಏನೇನೋ ಅನ್ನಿಸುತ್ತಿತ್ತು. ಹಾಡಿನ ಮಧ್ಯದಲ್ಲಿ ನನ್ನ ಮನಸ್ಸಿಗೆ ತೋಚಿದ ಸಾಲುಗಳನ್ನೂ ಸೇರಿಸಿಬಿಡುತ್ತಿದ್ದೆ. ಹಿರಿಯರಿಗೆ ಅದು ಗೊತ್ತಾಗಿ ತುಟಿಯ ತುದಿಯಲ್ಲಿ ನಗು ಅರಳುತ್ತಿತ್ತು, ಹೊಸಬರಿಗೆ ಗೊತ್ತೇ ಆಗುತ್ತಿರಲಿಲ್ಲ. ‘ಇಷ್ಟು ಸಣ್ಣ ವಯಸ್ಸಿಗೇ ಎಷ್ಟು ಹಾಡುಗಳನ್ನ ಹಾಡುತ್ತೀಯಲ್ಲಾ’ ಎಂದು ಎಲ್ಲ ಅಚ್ಚರಿ ವ್ಯಕ್ತಪಡಿಸಿದರು. ದಿನೇ ದಿನೆ ಅರಳುತ್ತಿದ್ದ ನನ್ನ ಮೈ ಮನಸ್ಸುಗಳು ವಯಸ್ಸಿನ ಕಾರಣಕ್ಕೂ ನನ್ನ ಕಂಠದ ಕಾರಣಕ್ಕೂ ನೋಡಿದವರ ಗಮನ ಸೆಳೆಯುತ್ತಿದ್ದೆ. ಮೊದಮೊದಲು ನಮ್ಮ ಕಷ್ಟಕ್ಕೆ ಮರುಗಿ ಅಕ್ಕ ಗಂಡನ ಮನೆಯಿಂದ ಅದೂ ಇದು ತಂದುಕೊಡುತ್ತಿದ್ದಳು, ಯಾರು ಎಷ್ಟು ದಿನ ಹೊಟ್ಟೆ ತುಂಬಿಸುತ್ತಾರೆ. ಇದು ಒಂದೆರಡು ದಿನಗಳದ್ದಲ್ಲವಲ್ಲ. ಜೊತೆಗೆ ತನ್ನ ಸಂಸಾರವನ್ನೂ ನೋಡಬೇಕಲ್ಲಾ? ಬರಬರತ್ತಾ ತವರಿನ ಮೇಲೆ ಆಸಕ್ತಿಯನ್ನೇ ಕಳಕೊಂಡಳು. ಅವಳಿಗೇನು ಚೆನ್ನಾಗೇ ಇದ್ದಾಳೆ ನಮ್ಮನ್ನ ನೋಡುವವರಿಲ್ಲದಾಯಿತು ಎಂದು ಅಮ್ಮ ಕೊರಗಿದರೆ, ಅಜ್ಜಿ, ‘ಅವಳಾದರೂ ಚೆನ್ನಾಗಿದ್ದಾಳಲ್ಲ ಅಷ್ಟು ಸಾಕು’ ಎನ್ನುತ್ತಿದ್ದಳು. ವರ್ಷಗಳು ಉರುಳುವಾಗ ಹೆಚ್ಚೂ ಕಡಿಮೆ ಎಲ್ಲರೂ ಅಕ್ಕನನ್ನು ಮರೆತೇಬಿಟ್ಟೆವು.

ಅದೊಂದು ಮಧ್ಯಾಹ್ನ, ನಾನು ಆಡು ಕುರಿಗಳನ್ನು ಹಿತ್ತಲಲ್ಲಿ ನೀರು ಕುಡಿಸಿ ನೆರಳಿಗೆ ಕಟ್ಟಿಹಾಕಿ ಅವುಗಳಿಗೆ ಸೊಪ್ಪು ಕಡಿದು ಹಾಕಿದ್ದೆ. ಅಜ್ಜಿ ಕೆಮ್ಮು ತಡಿಲಾರದೆ, ‘ಸ್ವಲ್ಪ ಬಿಸಿನೀರು ಕೊಡು’ ಎಂದು ಕೇಳಿದಳು. ನಾನು ಸಣ್ಣ ಸಣ್ಣ ಪುರಲೆಗಳನ್ನು ಒಲೆಗೆ ಹಾಕಿದೆ. ಬೆಳಗ್ಗಿನಿಂದಲೂ ಒಂದೇ ಸಮನೆ ಉರಿಯುತ್ತಿದ್ದ ಒಲೆ ಸ್ವಲ್ಪ ಪುರಲೆಗಳನ್ನು ಹಾಕಿದ ತಕ್ಷಣ ಧಗ್ಗೆಂದು ಹೊತ್ತಿಕೊಂಡಿತು. ಒಲೆ ಮೇಲೆ ನೀರಿಟ್ಟು ಮರಳುವುದನ್ನೇ ಕಾಯುತ್ತಾ ಕುಳಿತಿದ್ದ ನನಗೆ ಹೊರಗೆ ಯಾರೋ ಕೂಗಿದ್ದು ಕೇಳಿತು. ಯಾರು ಎಂದು ಹೊರಗೆ ಬಂದೆ. ಮನೆಯ ಬಾಗಿಲಿಗೆ ನಿಂತಿದ್ದ ಆ ಇಬ್ಬರನ್ನು ನೋಡಿದ ತಕ್ಷಣ ಗೊತ್ತಾಯಿತು ಅವರು ಗೌಡ್ರ ಕಡೆಯವರೆಂದು. ಅವರು ಯಾರ ಮನೆಗೂ ಹೇಗೆ ಬೇಕಾದರೂ ಯಾವ ಹೊತ್ತಿನಲ್ಲೂ ಹೋಗಬಲ್ಲವರೆಂದು ಪಕ್ಕದ ಮನೆಯ ಮಾತಂಗಿ ಒಮ್ಮೆ ನನಗೆ ಹೇಳಿದ್ದಳು. ಅವರನ್ನು ನೋಡಿ ಊರಿಗೆ ಊರೇ ಹೆದರುತ್ತಿದ್ದರು. ನನಗೂ ಅವರನ್ನು ಹಾಗೇ ನಮ್ಮ ಮನೆಯ ಬಾಗಿಲಲ್ಲಿ ನೋಡಿ ಗಾಬರಿಯಾಯಿತು. ಎರಡು ಹೆಜ್ಜೆ ಅಯಾಚಿತವಾಗಿ ಹಿಂದಿಟ್ಟೆ. ನನ್ನನ್ನು ಪಕ್ಕಕ್ಕೆ ತಳ್ಳುತ್ತಾ ಒಳಗೆ ಬಂದ ಅವರು ‘ಎಲ್ಲಮ್ಮಾ ನಿಮ್ಮಣ್ಣ ಇಲ್ವಾ?’ ಎಂದು ಗಡಸು ಧ್ವನಿಯಲ್ಲಿ ಕೇಳಿದಾಗ, ಅಜ್ಜಿ ಕೆಮ್ಮುತ್ತಲೇ, ಯಾರದು?’ ಎಂದಿದ್ದಳು. ‘ಸಾಲ ತೆಗೆದುಕೊಳ್ಳುವಾಗ ನಾವ್ಯಾರು ಅಂತ ಚೆನ್ನಾಗಿ ಗೊತ್ತಿರುತ್ತೆ. ಕೊಡುವಾಗ ಮಾತ್ರ ಯಾಕೆ ಗೊತ್ತಿರಲ್ಲವೋ?’ ಎಂದ ಅವರನ್ನು ನೋಡುತ್ತಾ ಅಜ್ಜಿ ನನ್ನ ಮೊಮ್ಮಗ ಹೊರಗೆ ಹೋಗಿದ್ದಾನೆ. ಬಂದ ತಕ್ಷಣ ಕಳಿಸ್ತೀನಿ’ ಎಂದಿದ್ದಳು. ‘ಇದ್ದಾಗ ಎಲ್ಲಾ ಶೋಕಿ ಮಾಡುವವರೇ. ಇಲ್ಲದೇ ಇದ್ದಾಗ ಬಂಡವಾಳ ಇದು’ ಎಂದು ಬೈದು ಹೊರಟರು. ಅಮ್ಮ ಅಳುತ್ತಾ ಕೂತಿದ್ದಳು. ಅಜ್ಜಿ ತೋಚದೆ ಓಡಾಡಿದಳು.

ಹರೀಶ ಬಂದ ತಕ್ಷಣ ಅಜ್ಜಿನೋಡು ಆ ದುಷ್ಟರು ಮನೆ ವರೆಗೂ ಬರುವ ಹಾಗೆ ಮಾಡಿಕೊಳ್ಳಬೇಡ. ಬೆಳೆದ ಮಗಳಿದ್ದಾಳೆ. ಸುಮ್ಮನೆ ಇಲ್ಲದ ತೊಂದರೆ ಎಂದಿದ್ದಳು. ಹರೀಶ ಎಲ್ಲಿ ಹೊಂದಿಸಿದನೋ ಏನೋ ಸಾಲದ ಕಂತು ಕಟ್ಟಿ ಬಂದಿದ್ದ. ಗಿರೀಶ ಮಾತ್ರ ತನಗೂ ಇದಕ್ಕೂ ಸಂಬAಧ ಇಲ್ಲ ಎನ್ನುವ ಹಾಗೆ ಮತ್ತಲ್ಲಿ ವಾಲಾಡಿದ್ದ.

ಅಂದು ರಾತ್ರಿ ಹೊಟ್ಟೆಯ ತಳಮಳ ತಡಿಲಿಕ್ಕಾಗದೆ ಬೈಲಿಗೆ ತಾಕಾಡಿದ್ದೆ. ಅಮ್ಮನಿಗೂ, ಅಜ್ಜಿಗೂ ಆತಂಕ- ಏನಾಯ್ತು ಎಂದು ಕೇಳಿದರೂ ನಾನು ಮಾತಾಡಲಿಲ್ಲ. ಅಮ್ಮನಿಗೆ ನನ್ನ ಸ್ಥಿತಿ, ಬಟ್ಟೆಯನ್ನು ನೋಡಿ ಗೊತ್ತಾಗಿಬಿಟ್ಟಿತ್ತು. ನಾನು ದಿಕ್ಕು ತೋಚದೆ ಕುಳಿತಿದ್ದೆ. ಅಜ್ಜಿ ಅಮ್ಮ ಈ ವಿಷಯ ಹೊರಜಗತ್ತಿಗೆ ಗೊತ್ತಾಗಬಾರದು ಎಂದು ಬಾಯಿ ಮುಚ್ಚಿಕೊಂಡೇ ಇದ್ದುಬಿಟ್ಟಿದ್ದರು. ನನ್ನ ಆರೈಕೆ ಮಾಡಲೂ ಮನೆಯಲ್ಲಿ ಏನೂ ಇರಲಿಲ್ಲ. ಅಜ್ಜಿ ಕದ್ದು ಮುಚ್ಚಿ ತೆಂಗಿನ ಮರದಿಂದ ಬಿದ್ದ ಕಾಯನ್ನು ತಂದು ಬೆಲ್ಲದ ಜೊತೆ ಕೊಟ್ಟಿದ್ದಳು. ಹುಚ್ಚಮ್ಮ ಮಾಯಮ್ಮ ಕಾಪಾಡು ಎಂದು ಕೆನ್ನೆಗೆ ಸ್ವಲ್ಪವೇ ಅರಿಸಿನ ಹಚ್ಚಿ ನೀರು ಹಾಕಿದ್ದಳು. ಅಷ್ಟು ಸಂಕಟದ ನಡುವೆಯೂ ನನ್ನ ಮೊಮ್ಮಗಳದ್ದು ಗೌರಿಯ ಕಳೆ ಎಂದು ನೆಟಿಕೆ ತೆಗೆದಿದ್ದಳು.

ದಿನ ಕಳೆದ ಹಾಗೆ ನಾನು ದೊಡ್ಡವಳ ಹಾಗೆ ಎಲ್ಲ ಕೆಲಸಗಳನ್ನೂ ಮಾಡತೊಡಗಿದೆ. ಹೊರಗೆ ಓಡಾಡಿದೆ. ನೀರು ತಂದೆ ಬಟ್ಟೆ ಒಗೆದೆ. ಮನೆಯ ಜವಾಬ್ದಾರಿ ತೆಗೆದುಕೊಂಡು ಎಲ್ಲವನ್ನೂ ನಿಭಾಯಿಸಿದೆ. ಅಮ್ಮಾ ತವರಿಂದ ಏನಾದರೂ ತರುವೆ ಎಂದಾಗ ಬೇಡ ಎಂದು ಅಜ್ಜಿ ಅವಳನ್ನ ತಡೆದಿದ್ದಳು. ‘ಯಾವತ್ತೋ ಅಂದ ಮಾತಿಗೆ ಇವತ್ತು ಹೀಗೆ ಸಾಧಿಸುವುದಾ?’ ಎಂದಾಗ, ಇಲ್ಲಮ್ಮ ಗೊತ್ತಿಲ್ಲದೆ ಅವತ್ತು ಮಾಡಿದ ತಪ್ಪಿಗೆ ಇವತ್ತು ಪಶ್ಚಾತ್ತಾಪ ಪಡ್ತಾ ಇದೀನಿ. ಇನ್ನು ಯಾರ ಹಂಗೂ ಬೇಡ’ ಎಂದಿದ್ದಳು. ಅಮ್ಮಾ ಎಷ್ಟೋ ರಾತ್ರಿಗಳು ಅಮ್ಮ ನನ್ನನ್ನು ತನ್ನ ತೊಡೆಮೇಲೆ ಮಲಗಿಸಿಕೊಂಡು ಕೂತೇ ನಿದ್ದೆ ಮಾಡುತ್ತಿದ್ದಳು. ಬೆಳಗಿನಿಂದ ಆಡು ಕುರಿ ಅಂತೆಲ್ಲಾ ಓಡಾಡಿದ ನನಗೆ ಎಚ್ಚರವೂ ಇರುತ್ತಿರಲಿಲ್ಲ. ಅಮ್ಮ ಯಾಕೆ ನನ್ನ ತಲೆಕೆಳಗಿಟ್ಟು ನೀನೂ ಮಲಗಬಾರದೇ’ ಎಂದಿದ್ದಕ್ಕೆ, ‘ನನ್ನ ಕಷ್ಟಕ್ಕೆ ಮರುಗುವವಳು ನೀನೊಬ್ಬಳೇ. ನಿನಗೆ ಕಷ್ಟ ಆಗಬಾರದು’ ಎಂದಿದ್ದಳು. ಈಗ ನನಗೆ ಹತ್ತಿರ ನಲವತ್ತೈದು ಈಗಲೂ ಇದ್ದಕ್ಕಿದ್ದ ಹಾಗೆ ಅವಳ ತೊಡೆ ಮೇಲೆ ಮಲಗಬೇಕೆನ್ನಿಸುತ್ತದೆ. ಹಾಗೆನ್ನಿಸುವಾಗಲೆಲ್ಲಾ ಕಣ್ಣು ಮುಚ್ಚುತ್ತೇನೆ- ಅಮ್ಮನ ತೊಡೆಯ ಮೇಲೆ ಮಲಗಿದ ಹಾಗೆ ಕಲ್ಪಿಸಿಕೊಂಡು. ಹಣೆಯ ಮೇಲೆ ಅಮ್ಮನ ಮೃದು ಬೆರಳು ಆಡಿದಂತೆನ್ನಿಸಿ ಹಾಯೆನ್ನಿಸಿತು. ಹೀಗೇ ಈ ಜಗತ್ತು, ಸಹಾ, ರಮೇಶ, ಕಡೆಗೆ ದಿಶಾಳನ್ನೂ ಮರೆತುಬಿಡಬೇಕು, ಮತ್ತೆ ನನ್ನ ಬಾಲ್ಯಕ್ಕೆ ಹೋಗಿಬಿಡಬೇಕು. ಅಲ್ಲಿ ಎಷ್ಟೇ ಕಷ್ಟ ಇದ್ದರೂ ನನ್ನ ಪೊರೆಯುವ ಕೈಗಳಿದ್ದವು. ಅವಕ್ಕೆ ವಾತ್ಸಲ್ಯವಿತ್ತು. ಅದು ಮಧುರವಾಗಿತ್ತು. ಹಾಗನ್ನಿಸಿದ್ದೇ ತಡ ನಿದ್ದೆ ನಿಧಾನವಾಗಿ ಕಣ್ಣ ಆಳಕ್ಕೆ ಇಳಿದು ಭಾರವಾಗುತ್ತಾ, ಆಡುತ್ತಿದ್ದ ರೆಪ್ಪೆಗಳನ್ನು ಮುಚ್ಚಿಬಿಟ್ಟಿತು. ದಿಶಾಳ ಜೋರಾದ ಮಾತುಗಳು ಕಿವಿಗೆ ಬೀಳಲಿಲ್ಲ ಅಂದಿದ್ರೆ ಸುಖವೊಂದು ನನ್ನ ಜೊತೆ ಇನ್ನಷ್ಟು ಹೊತ್ತು ಪಯಣ ಸುತ್ತಿತ್ತೋ ಏನೋ?!

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: