ಗೋಳೂರ ನಾರಾಯಣಸ್ವಾಮಿ ಕವಿತೆ – ಕನ್ನಡವೆಂದರೆ‌…

ಗೋಳೂರ ನಾರಾಯಣಸ್ವಾಮಿ

ಕನ್ನಡವೆಂದರೆ,
ಕೋಗಿಲೆ, ಮೈನಾ, ಮಲೆನಾಡು-
ದಂಡಕಾರಣ್ಯ.
ಮಳೆಹಕ್ಕಿ ಹಾಡಿದಾಗ ಹೊಮ್ಮುವ ಹೊಲದ ಘಮಲು!
ಸ್ವಾಭಿಮಾನದ ಸಂಕೇತ-
ಬಂಡಾಯದ ಹೆಗ್ಗುರುತು!

ಕನ್ನಡವೆಂದರೆ,
ರಾಗಿ, ಜೋಳ, ಭತ್ತ, ಸಜ್ಜೆ-
ನವಣೆಯ ಕಣಜ: ನನ್ನ್ಹಟ್ಟಿ ಕಡಸು!

ಜುಂಜಯ್ಯ, ಮಾದಯ್ಯ, ಮಂಟೇದ-ಸರಗೂರಯ್ಯನ ಕಾವ್ಯ ಗುಡಿ.
ಕೇಳಪ್ಪ ಈವಾಗಲೀಗ,
ಕನ್ನಡವೆಂದರೆ ಹೆಗ್ಗವಾಡಿಪುರದ ಗೋವಿಂದರಾಜುವಿನ ಆಡುನುಡಿ!
ಕನ್ನಡವೆಂದರೆ,
ಹೊನ್ನೆ, ನೇರಳೆ, ಮಾವು-
ಆಲ, ಶ್ರೀಗಂಧ: ಈಚಲು!
ನದಿ-ಸಾಗರ, ಮೋಳೆ-
ಕೆರೆಗಳ ಮದಗ; ಧುಮ್ಮಿಕ್ಕುವ ಜಲಪಾತದ ಸೊಗಸು!

ಇಟ್ಟಿಗೆ ಹೊರುವವರ, ತುಳಸಿ ಕಟ್ಟುವವರ, ಬಲೆಬೀಸಿ ಮೀನು ಹಿಡಿಯುವವರ ಕಡಲ ಕಿನಾರೆ:
ತಡರಾತ್ರಿ ಬೀದಿ ಬದಿಯಲ್ಲಿ ನಡುಗುತ್ತ ಬಿದ್ದಿರುವ ನಿರ್ಗತಿಕರ ಊರೆ!

ಕನ್ನಡವೆಂದರೆ,
ಬೇಲಿಯ ಮೇಲಿನ ಮಾಗಿದ ತೊಂಡೆಹಣ್ಣು;
ಬಿಳಿಗಿರಿ ಬನದ ಕುಸುಮಾಲೆಯಂತಹ ಹೆಣ್ಣು!
ಯುಗಾದಿ ಹೊನ್ನೇರು;
ಮಾರ-ಮಾರಿಯರ ತವರೂರು!

ಕನ್ನಡವೆಂದರೆ,
ಯಲ್ಲಮ್ಮ, ಚಂದ್ರಮ್ಮ, ಹುಲಿಗೆಮ್ಮ: ಬ್ಯಾಟಿ ಸುಂಕ್ಲಮ್ಮ!
ಭೂತಾರಾಧನೆ, ಸಿದ್ದಯ್ಯ-ನಂಜಯ್ಯ, ಮೈಲಾರಲಿಂಗಯ್ಯನ ಜಾತ್ರೆ;
ಶರಣರ, ದಾಸರ, ಸನ್ಯಾಸಿ ಭಿಕ್ಷುಕರ ಯಾತ್ರೆ!

ಕನ್ನಡವೆಂದರೆ,
ಮಲ್ಲಿಗೆ ಮೊಗ್ಗು- ಕಾಫಿ ಹೂವು;
ಕಪನಿ-ಕಾವೇರಿಯ ಸುಗ್ಗಿಯ ಹಿಗ್ಗು!
ಕವಿಗಳ ಮಾಗಿದ-
ಮಾಗಿಯ ಮನಸ್ಸು!

ಕನ್ನಡವೆಂದರೆ,
ನನ್ನ ಹುಟ್ಟೂರು.
ಮಬ್ಬು ಜಾರಿದ ಕಣಿವೆಯಲ್ಲಿ
ಜೀವನಗೀತೆ ಬರೆದು ಹೊಲಕ್ಕೆಲ್ಲ-
ಹೊನ್ನು ಚೆಲ್ಲಿದ ಪರಮಶಿವಯ್ಯನ ಕಾವ್ಯದೂರು!

ಕನ್ನಡವೆಂದರೆ,
ಕರಗ-ಕಡಲೇಕಾಯಿ ಪರಿಶೆ-
ಸೀಗೆ ಹುಣ್ಣಿಮೆಯ ಭೂಮ್ತಾಯಿ!
ಅಡೈ ಬಾ ಕೂಸು-
ಒಂದ್ಚೂರ್ ತಿನ್ಕ.
ಹೊಟ್ಟ ಹಸ್ಗಂಡು ಇರಬಾರದು; ಅನ್ನುವ ಜನಪದ ಗರತಿಯ ಕೂಗು:
“ಕರುನಾಡಿಗರಲ್ಲಿ ಮೈದೂರಿದ ಶಾಂತಿರಸ!”

‍ಲೇಖಕರು Admin

November 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: