ಸುರಪುರದ ಕನ್ನಡ ಸಾಹಿತ್ಯ ಸಂಘ – ಕನ್ನಡ ಕಟ್ಟಿದ ಹಿರಿಮೆ..

ಶ್ರೀನಿವಾಸ ಜಾಲವಾದಿ

೧೯೪೨ ರಲ್ಲಿ ಸುರಪುರದ ಕನ್ನಡ ಸಾಹಿತ್ಯ ಸಂಘವು ಪ್ರಾರಂಭಗೊಂಡಿತು. ಇಲ್ಲಿಯ ಆರಾಧ್ಯ ದೈವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಇದು ಪ್ರಾರಂಭವಾದದ್ದು ಕೂಡ ಕನ್ನಡದ ಒಂದು ಅಸ್ಮಿತೆಯೇ ಸರಿ. ಕನ್ನಡದ ಪ್ರಮುಖ ವಿದ್ವಾಂಸರಾಗಿದ್ದ ಬಿ.ಕೃಷ್ಣಮಾಚಾರ್ಯರು ಇದರ ಬಗ್ಗೆ ಕೂಲಂಕುಷವಾಗಿ ಬರೆದಿದ್ದಾರೆ. ಸುರಪುರ ರಂಗಪೇಟೆಯ ಎಲ್ಲ ಹಿರಿಯರು ಸೇರಿ ಕಟ್ಟಿದ ಈ ಸಂಘವು ಕರ್ನಾಟಕದ ಅತ್ಯಂತ ಹಳೆಯ ಎರಡನೇ ಸಂಘವಾಗಿದೆ. ಅಷ್ಟಾವಧಾನಿ ನರಸಿಂಹಶಾಸ್ತ್ರೀ, ಅವಧೂತ ಶಾಸ್ತ್ರೀ, ಪಂಚಾoಗ ಕತೃ ಶೇಷಶಾಸ್ತ್ರಿ ಹೆಬ್ಬಾಳ, ದೀಕ್ಷಾಚಾರ್ ನ್ಯಾಯವಾದಿ, ತುಳಜಾರಾಮ, ದೌಲತರಾವ ಮಾಸ್ಟರ್, ಪ್ರಭು ರಾವ, ಚೆನ್ನವೀರಯ್ಯ ತಹಶೀಲದಾರ, ಡಾ.ಜಿ ಸುಬ್ಬಯ್ಯ, ಪೆರುಮಾಳ ಗುಂಡಾಚಾರ್ಯ, ಮೊದಲಾದವರ ಸಾರಥ್ಯವಿತ್ತು.೧೯೪೩ ರಲ್ಲಿ ರಂಗಪೇಟೆ ಕನ್ನಡ ಸಾಹಿತ್ಯ ಸಂಘವು ಪ್ರಾರಂಭಗೊಂಡಿತು. ಇದೂ ಕೂಡ ಎಲ್ಲ ಸಾಹಿತಿಗಳ ಪಾದಧೂಳಿಯಿಂದ ತನ್ನದೇ ಆದ ಪಾವಿತ್ರ‍್ಯತೆಯನ್ನು ಹೊಂದಿದೆ. ದಿ. ಬುದ್ಧಿವಂತ ಶೆಟ್ಟರು ಹಾಗೂ ಇತರ ಅನೇಕ ಮಹನಿಯರು ಈ ಸಂಘಕ್ಕಾಗಿ ಅಹಿರ್ನಿಷಿ ದುಡಿದರು.

ಸುರಪುರದ ಕನ್ನಡ ಸಾಹಿತ್ಯ ಸಂಘವು ಕೂಡ ಆಗ ಎಲ್ಲ ಉರ್ದುಮಯವಾಗಿದ್ದ ಸಂದರ್ಭದಲ್ಲಿ ಉದಯಿಸಿತು.ಯಾಕೆಂದರೆ ಆಗ ಹೈದ್ರಾಬಾದ್ ನಿಜಾಂನ ಆಡಳಿತ ಮತ್ತು ಆಂಗ್ಲರ ಅಧಿಪತ್ಯದ ಮಧ್ಯೆ ನಲುಗಿದಂಥ ಸಂದರ್ಭ. ಕರ್ನಾಟಕದ ಈ ಸಂಘಗಳು ಸ್ವಾತಂತ್ಯ ಹೋರಾಟವನ್ನು ರೂಪಿಸಿದವು. ಇವು ಸ್ವಾತಂತ್ರ‍್ಯ ಹೋರಾಟಗಾರರಿಗೆ ಆಶ್ರಯ ತಾಣವಾಗಿದ್ದವು. ಎಲ್ಲ ಜಾತಿ ಜನಾಂಗಗಳವರ ಕೊಡುಗೆ ಸುರಪುರ ಕನ್ನಡ ಸಾಹಿತ್ಯ ಸಂಘಕ್ಕೆ ಇದೆ. ಇದಕ್ಕೆ ಸುರಪುರ ಸಂಸ್ಥಾನದ ರಾಜರ ಅಭಯ ಹಸ್ತ ಕೂಡಾ ಇತ್ತು. ಸುರಪುರದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ರೂಪುರೇಷೆ ಪಡೆದ ಸಂಘವು, ಇಲ್ಲಿಯ ಪರಾಂಕುಶ ಮಠದಲ್ಲಿ ತನ್ನ ಎರಡನೇ ಸಭೆ ನಡೆಸಿತು. ಇಲ್ಲಿಯ ಪಾಂಡುರoಗ ದೇವಸ್ಥಾನದ ಬಳಿ ಇರುವ ಮನೆಯಲ್ಲಿ ತನ್ನ ಕಾರ್ಯ ಪ್ರಾರಂಭಿಸಿತು. ಇದಕ್ಕೆ ಮುಖ್ಯವಾಗಿ ಕನ್ನಡದ ಶ್ರೇಷ್ಟ ಸಾಹಿತಿಗಳಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ ಹಾಗೂ ತರಾಸು ಅವರು ಮುನ್ನುಡಿ ಬರೆದರು. ಅವರ ಹಾಗೂ ಇತರ ಸಾಹಿತಿಗಳ ಮಾರ್ಗದರ್ಶನ ಸಂಘಕ್ಕೆ ಲಭಿಸಿದ್ದು ಸುದೈವವೇ ಸರಿ. ಆಗ ಸುರಪುರದ.

ಕನ್ನಡ ಸಾಹಿತ್ಯ ಸಂಘಕ್ಕೆ ೧೯೬೦ ರಲ್ಲಿ ಒಂದು ರೂಪುರೇಷೆ ಸಿಕ್ಕಿತು. ಆಗ ಈಗಿನ ಬಸ್ ನಿಲ್ದಾಣದ ಪಕ್ಕದ ಸ್ಥಳ ಸಂಘಕ್ಕೆ ದೊರೆತು, ಅಲ್ಲಿನ ಕಟ್ಟಡವನ್ನು ಆಗಿನ ಮುಖ್ಯಮಂತ್ರಿಗಳಾಗಿದ್ದ ಬಿ.ಡಿ.ಜತ್ತಿಯವರು ಉದ್ಘಾಟನೆ ನೆರವೇರಿಸಿದರು. ಸಂಘದಲ್ಲಿ ವಾಚನಾಲಯ ಪ್ರಾರಂಭಿಸಲಾಯಿತು. ಸಂಘದಲ್ಲಿ ಜೈಮಿನಿ ಭಾರತ, ಕುಮಾರವ್ಯಾಸನ ಗದುಗಿನ ಭಾರತ, ರಾಮಾಯಣದ ಪರಾಮರ್ಶೆಯನ್ನು ಕವಿಗಳು ಮಾಡುತ್ತಿದ್ದರು. ಗಮಕಿಗಳು ಭಾರತವನ್ನು ವಾಚಿಸುತ್ತಿದ್ದರು. ಅದೊಂದು ಅಪರೂಪದ ರಸಗಳಿಗೆ, ಅಪರೂಪದ ಕವಿ ಸಮಯ ಎಂದು ಹಿರಿಯರು ಈಗಲೂ ನೆನೆಸುತ್ತಾರೆ. ಅದು ಕವಿಗಳಿಗೆ ಕವನ ಬರೆಯಲು, ವಾಚಿಸಲು ವೇದಿಕೆ ಕಲ್ಪಿಸಿಕೊಟ್ಟಿತು. ಕನ್ನಡ ಸಾಹಿತ್ಯ ಪರಿಷತ್ತಿನ ಕಾವ ಜಾಣ…. ಪರೀಕ್ಷೆಗಳನ್ನು ನಡೆಸುತ್ತಿದ್ದರು. ಇದರಿಂದ ಎಷ್ಟೋ ಜನರಿಗೆ ಶಿಕ್ಷಕ ವೃತ್ತಿ ಸಿಗಲು ಸಾಧ್ಯವಾಯಿತು. ಇಲ್ಲಿ ಅನೇಕರಿಗೆ ಕನ್ನಡ ಅನ್ನವನ್ನೂ ದೊರಕಿಸಿಕೊಟ್ಟಿತು. ಭಾಷಾಭಿಮಾನ ಬೆಳೆಯಲು ಅವಕಾಶ ಮಾಡಿಕೊಟ್ಟಿತು. ಆಂಗ್ಲರ ವಿರುದ್ಧ, ನಿಜಾಂನ ವಿರುದ್ಧ ಹೋರಾಡಿ ಎರಡು ಸ್ವಾತಂತ್ರ‍್ಯ ಪಡೆಯಲು ಕೂಡ ‘ಕಸಾಸಂ’ವು ಅನೇಕರಿಗೆ ಪ್ರೇರಣೆ ನೀಡಿತು. ಜನರು ಸಾಕ್ಷರರಾಗಲು ಕೂಡ ಸಂಘವು ಒಂದು ರೀತಿಯಿಂದ ಕಾರಣವೆಂದರೂ ಕೂಡ ತಪ್ಪಿಲ್ಲ. ಆಗಿನಿಂದಲೂ ದಸರಾ ಸಂದರ್ಭದಲ್ಲಿ ೯ ದಿನಗಳವರೆಗೆ ಸುರಪುರದಲ್ಲಿ ನಾಡಹಬ್ಬದ ಕಾರ್ಯಕ್ರಮಗಳು ನಡೆದು, ಇದರಿಂದ ಅನೇಕ ಪ್ರತಿಭೆಗಳು ಬೆಳಕು ಕಾಣಲು ಸಾಧ್ಯವಾಯಿತು.

೧೯೬೦ ರಲ್ಲಿಯೇ ಕಸಾಸಂ ನೋಂದಣಿಯಾಯಿತು. ಹಿರಿಯರಾಗಿದ್ದ ನಾಗಣ್ಣ ವಕೀಲರು ಅಧ್ಯಕ್ಷರಾಗಿ ಸಂಘವನ್ನು ಉತ್ತಮ ರೀತಿಯಿಂದ ಮುನ್ನಡೆಸಿದರು. ಅವರ ಅಂತ್ಯ ಕಾಲದಲ್ಲಿ ಜೆ.ಅಗಸ್ಟಿನ್ ವಕೀಲರು ಹಾಗೂ ಸಗರನಾಡಿನ ಬೇಂದ್ರೆ ಎಂದೇ ಖ್ಯಾತರಾಗಿದ್ದ ಸುಪ್ರಸಿದ್ಧ ಕವಿ ಎ.ಕೃಷ್ಣ ಅವರನ್ನು ಕರೆದು, ಸಂಘದ ಜವಾಬ್ದಾರಿಯನ್ನು ವಹಿಸಿದರು. ನಂತರ ಶಿಕ್ಷಕರಾಗಿದ್ದ ಮಲ್ಲಪ್ಪ ಬಸೆಟ್ಟಿ ಅಧ್ಯಕ್ಷರಾದರು, ಎ.ಕೃಷ್ಣ ಸುರಪುರ ಉಪಾಧ್ಯಕ್ಷರಾಗಿ, ಶಿವಶರಣಪ್ಪ ಶಾಬಾದಿ ಕೋಶಾಧ್ಯಕ್ಷರಾದರು, ಆಗಸ್ಟಿನ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಬಸವರಾಜಪ್ಪ ಪಾಟೀಲ ವಕೀಲರು, ರಾಜಾ ಹೇಮರಾಜ ರತ್ನಗಿರಿ, ಮಾಣಿಕರಾವ ಗುಡುಗುಂಟಿ, ಪಾಂಡುರoಗ ಚಿನ್ನಾಕಾರ, ನಾಗಲಿಂಗಪ್ಪ ಶಹಪುರಕರ, ರಾಘವೆಂದ್ರಾಚಾರ್ ಬೂದುರ, ನರಸಿಂಹಾಚಾರ್ ಡಬೀರ ಹಾಗೂ ಇನ್ನೂ ಅನೇಕರು ಕನ್ನಡ ಸಾಹಿತ್ಯ ಸಂಘಕ್ಕೆ ತುಂಬ ಕೆಲಸ ಮಾಡಿದ್ದಾರೆ.

‘ಕಸಾಸಂ’ ಮಾಡಿದ ಮುಖ್ಯ ಕೆಲಸವೆಂದರೆ, ೧೯೮೫ ರಲ್ಲಿ ‘ಸಗರನಾಡ ದರ್ಶನ’ ಎಂಬ ಶ್ರೇಷ್ಠ ಸಾಹಿತ್ತಿಕ ಗ್ರಂಥವನ್ನು ಆಗ ಶಾಸಕರಾಗಿದ್ದ ರಾಜಾ ಮದನಗೋಪಾಲ ನಾಯಕರ ನೇತೃತ್ವದಲ್ಲಿ ಪ್ರಕಟಿಸಿದರು. ಆಗ ಎರಡು ದಿನಗಳ ಕಾಲ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾಹಿತ್ಯೋತ್ಸವ ಮಾಡಿ,ಇದನ್ನು ಡಾ. ಹಾ ಮಾ ನಾಯಕರು ಬಿಡುಗಡೆಗೊಳಿಸಿದರು. ಮೊಟ್ಟ ಮೊದಲ ಬಾರಿ ಇಡೀ ಸಗರನಾಡಿನ ಸಾಹಿತ್ಯ, ಸುಪ್ರಸಿದ್ಧ ಗರುಡಾದ್ರಿ ಕಲೆ, ಸಂಗೀತ, ಎಲ್ಲರಿಗೂ ಪರಿಚಯವಾಯಿತು. ಇದೊಂದು ಐತಿಹಾಸಿಕ ದಾಖಲೆ. ಈ ‘ಸಗರನಾಡ ‘ದರ್ಶನ ‘ಪುಸ್ತಕದ ಮೇಲೆ ಅನೇಕ ಎಂ.ಫಿಲ್ ಗಳು, ಪಿ.ಎಚ್ ಡಿ ಗಳು ಆದವು. ಈ ಪುಸ್ತಕದ ಬಗ್ಗೆಯೇ ಇಲ್ಲಿಯವರೆಗೆ ನೂರಾರು ಲೇಖನಗಳು ಪ್ರಕಟವಾಗಿವೆ. ಈ ಸಂದಭ೯ದಲ್ಲಿ ‘ಕಸಾಸಂ’ದ ಇನ್ನೊಂದು ಅಂಗ ಸಂಸ್ಥೆಯಾಗಿ ‘ಮಹಾಕವಿ ಲಕ್ಷ್ಮೀಶ ವಾಚನ ಸಂಘ’ ಸ್ಥಾಪಿಸಿ ಅದರ ಮೂಲಕ ೬೦ ಪುಸ್ತಕಗಳನ್ನು ಪ್ರಕಟಿಸಲಾಯಿತು. ಇದಕ್ಕಾಗಿ ಅನೇಕ ದಾನಿಗಳು ಸಹಾಯ ಹಸ್ತ ಚಾಚಿದರು. ಜಗತ್ತಿನ ಪ್ರಸಿದ್ಧ ಕವಿ ರಂಗಪೇಟೆಯ ಮಂಜೂರ ಅಹ್ಮದ್ ತನಹಾ ತಿಮ್ಮಾಪುರಿ ಅವರು ಸಂಪಾದಿಸಿದ ಡಾ.ಅಂಬೇಡ್ಕರ್ ಅವರ ಕುರಿತು ದೇಶದ ವಿವಿಧ ಲೇಖಕರು ಬರೆದ ಉರ್ದು ಕವಿತೆಗಳನ್ನು ಪ್ರಕಟಿಸಲಾಯಿತು. ಇದರಲ್ಲಿ ಹಿಂದಿಯಲ್ಲಿ ಕೂಡ ಉರ್ದು ಕವಿತೆಗಳ ಲಿಪಿ ಅಳವಡಿಸಿದ್ದು, ಇದು ಓದುಗರಿಗೆ ಓದಲು ಅನುಕೂಲವಾಗುತ್ತದೆ. ಇದನ್ನು ಸುರಪುರದ ಆರಾಧನಾ ಭವನದಲ್ಲಿ ಏರ್ಪಡಿಸಲಾಗಿತ್ತು. ಆಗ ರಾಜಾ ಮದನಗೋಪಾಲ ನಾಯಕರು ಸಚಿವರಾಗಿದ್ದರು. ಇದು ಡಾ.ಅಂಬೇಡ್ಕರ್ ಬಗ್ಗೆ ಉರ್ದುವಿನಲ್ಲಿ ಬಂದ ದೇಶದ ಮೊಟ್ಟ ಮೊದಲ ಅಂಥಾಲಾಜಿ!

ಇದು ‘ಕಸಾಸಂ’ನ, ಸುರಪುರದ ಭಾವೈಕ್ಯತೆಗೆ ಮಾದರಿ. ಬಹುಶಃ ಈ ರೀತಿಯಾಗಿ ಎಲ್ಲಿಯೂ ನಡೆದಿಲ್ಲ. ಇದು ಸುರಪುರದ ವಿಶೇಷತೆ. ಎಲ್ಲ ಕಡೆಗೆ ಕೋಮು ಗಲಭೆಗಳು ಆದಾಗಲೂ ಇಲ್ಲಿ ಶಾಂತಿ ನೆಲೆಸಿತ್ತು. ಇದು ಕೂಡ ‘ಕಸಾಸಂ’ ಕೊಡುಗೆ.

ಮುಂದೆ ರಾಜಾ ಮದನಗೋಪಾಲ ನಾಯಕರು ಸಂಘದ ಅಧ್ಯಕ್ಷರಾದರು. ಅವರ ಅವಧಿ ಕನ್ನಡ ಸಾಹಿತ್ಯ ಸಂಘದ ಸುವರ್ಣ ಯುಗ ಎಂದರೆ ತಪ್ಪಾಗಲಿಕ್ಕಿಲ್ಲ. ಅವರಿಗೆ ಸಾಹಿತ್ಯ, ಸಂಗೀತ, ಕಲೆ, ನಾಟಕ, ಸಾಸ್ಕೃತಿ ಪರಂಪರೆಗಳಲ್ಲಿ ವಿಶೇಷ ಆಸಕ್ತಿ ಇತ್ತು.ಅವರು ಅಧ್ಯಕ್ಷರಾದ ನಂತರ ಜೆ.ಅಗಸ್ಟಿನ್, ಬಸವರಾಜ ಜಮದ್ರಖಾನಿ ಅವರೊಡಗೂಡಿ ಸಂಘದ ಜಾಗದಲ್ಲಿ ಕಟ್ಟಡ ನಿರ್ಮಿಸಿದರು.ಕೆಳಗಡೆ ಅಂಗಡಿಗಳನ್ನು ಮಾಡಿ ಬಾಡಿಗೆಗೆ ಕೊಟ್ಟರು. ಇದರಿಂದ ಸಂಘಕ್ಕೆ ನಿರಂತರ ಆದಾಯ ಬರುವಂತೆ ಮಾಡಿದರು.ಮೇಲ್ಗಡೆ ಸಭಾಭವನ, ಕಛೇರಿ ಕೋಣೆ ನಿರ್ಮಿಸಿದರು. ಆಗ ಮೇಲ್ಭಾಗದ ಕೆಲಸ ಇನ್ನೂ ಉಳಿದಿತ್ತು. ಅದನ್ನು ಈಗಿನ ಅಧ್ಯಕ್ಷರಾದ ಬಸವರಾಜ ಜಮದ್ರ ಖಾನಿ ಹಾಗೂ ಅಗಸ್ಸಿನ್ ವಕೀಲರು ಕೂಡಿ ಪೂರ್ಣಗೊಳಿಸಿ ಅದಕೊಂದು ಅಂತಿಮ ರೂಪ ನೀಡಿದರು.

ಸಗರನಾಡಿನ ಸಾಂಸ್ಕೃತಿಕ ರಾಯಭಾರಿಯಂದೇ ಪ್ರಸಿದ್ಧರಾಗಿದ್ದ ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕರು, ಸುರಪುರದಲ್ಲಿ ಗರುಡಾದ್ರಿ ಕಲಾ ಮಂದಿರವನ್ನು ನಿರ್ಮಿಸಿದರು. ಶಿಲ್ಪಕಲಾ ಶಿಬಿರ, ಚಿತ್ರಕಲಾ ಶಿಬಿರ, ಐತಿಹಾಸಿಕ ಜಿಲ್ಲಾ ಸಾಹಿತ್ಯ ಸಮ್ಮೇಳನ ……. ಹೀಗೆ ಎಲ್ಲ ಕಾರ್ಯಗಳನ್ನು ಮಾಡಿ, ಆಕಸ್ಮಿಕವಾಗಿ ೨೭ ಜುಲೈ ೨೦೧೯ ರಂದು ಅಗಲಿದರು. ಇಲ್ಲಿಯ ಸಾಂಸ್ಕೃತಿಕ ಲೋಕ ಬರಡಾಯಿತು. ಕವಿ ಎ.ಕೃಷ್ಣ ಅವರು ಕೂಡ ಅಗಲಿದ್ದು ಕಾವ್ಯಲೋಕ ಸೂತಕ ಅನುಭವಿಸಿತು. ಈಗ ಇವರದೇ ಕಾರ್ಯವನ್ನು ಕಸಾಸಂ ಮುಂದುವರೆಸಿಕೊoಡು ಹೋಗುತ್ತಿದ್ದು, ಪುಸ್ತಕ ಪ್ರಕಟಣೆ, ವಿಚಾರ ಸಂಕೀರಣ, ಕಾವ್ಯ,ಕಥಾ,ಗಜಲ್ ಕಮ್ಮಟಗಳು, ಅಶಕ್ತ ಕಲಾವಿದರಿಗೆ, ಸಾಹಿತಿಗಳಿಗೆ ಸಹಾಯ ಹಸ್ತ ಚಾಚಿದೆ. ಈಗ ಬಸವರಾಜ ಜಮದ್ರಖಾನಿ, ಜೆ.ಅಗಸ್ಟಿನ್, ಜಯಲಲಿತಾ ಪಾಟೀಲ,ಶ್ರೀನಿವಾಸ ಜಾಲವಾದಿ, ಪ್ರಕಾಶ ಚಂದ ಜೈನ್, ಕೇದಾರನಾಥ ಶಾಸ್ತ್ರಿ, ರಾಜಶೇಖರ ದೇಸಾಯಿ, ನಬೀಲಾಲ ಮಕಾನದಾರ, ಎ.ಕಮಲಾಕರ ಮೊದಲಾದವರು ಸಂಘವನ್ನು ಮುನ್ನಡೆಸಿಕೊಂಡು ಹೊರಟಿದ್ದಾರೆ. ಈಗ ‘ಕಸಾಂಸ’ ಕ್ಕೆ ೮೦ ರ ಸಂಭ್ರಮ. ಸಹಸ್ರ ಚಂದ್ರಮಾನೋತ್ಸವದ ಕಾರ್ಯಕ್ರಮ ಈ ಇಡೀ ವರ್ಷ ನಡೆಯುತ್ತವೆ.

ಕನ್ನಡ ಸಾಹಿತ್ಯ ಸಂಘದ ಸಂಭ್ರಮದ ತೇರು
ಹೊರಟಿದೆ ಕಲೆಗಳ ಸಾಲು ದೀಪಗಳೊಡಗೂಡಿ
ಹರಡಲಿ ಎಲ್ಲೆಡೆ ದೇವಪುರ ಲಕ್ಷ್ಮೀಶನ ಕನ್ನಡದ ಕಂಪು
ಭಾವೈಕ್ಯತೆಯ ಸಂಗಮದ ವೇಣುಲೋಲನ ನಾದದಿಂ!

‍ಲೇಖಕರು Admin

November 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: