ಗೋಪಾಲ ವಾಜಪೇಯಿ ಕಾಲಂ: ಅಲ್ಲಿ ಬಂದರು ಬೇಂದ್ರೆ..

gopal wajapeyiಗೋಪಾಲ ವಾಜಪೇಯಿ

ಹೀಗೆ ಶುರುವಾದ ‘ವಿದ್ಯಾಯಾನ’ದ ಮೊದಲ ವರ್ಷ ನನ್ನ ಪಾಲಿಗೆ ಹೊಸ ಲೋಕವನ್ನೇ ತೆರೆದಿಟ್ಟಂಥದು ಎಂಬುದನ್ನಂತೂ ಮರೆಯುವ ಹಾಗಿಲ್ಲ. ಆ ಲೋಕಕ್ಕೆ ದಾರಿಯಾದದ್ದು ಈ  ಶಿವಾಜಿ ಬೀದಿಯೇ.

ಅಬ್ಬಬ್ಬಾ ಅಂದರೆ ಹದಿನೈದು ಅಡಿ ಅಗಲದ ಆ ಸಣ್ಣ ಬೀದಿ ಸಾಹಿತ್ಯ ಕ್ಷೇತ್ರದ ಮಟ್ಟಿಗೆ ತುಂಬಾ ‘ಎತ್ತರ’ದ್ದು. ಬೀದಿಯ ಆರಂಭ ಬಿಂದುವಿಗೆ ಹಿನ್ನೆಲೆಯಾಗಿ ಕಂಗೊಳಿಸುತ್ತಿದ್ದದ್ದು ಸಂಸ್ಕೃತ ಪಾಠಶಾಲೆಯ ಐದಂತಸ್ತಿನ ಪ್ರಾಚೀನ ಕಟ್ಟಡ. ಅದನ್ನು ಬೆನ್ನಿಗಿಟ್ಟುಕೊಂಡು ಹಾಗೇ ಮುಂದುವರಿದರೆ ಬಲಕ್ಕೆ ಒಂದೆರಡು ಮನೆಗಳ ಸಾಲು. ಅವುಗಳಲ್ಲಿ ಕೊನೆಯ ಮನೆಯಲ್ಲಿ ಆಗ ಇದ್ದವರು ಕನ್ನಡದ ಖ್ಯಾತ ಕವಿ, ಅನುವಾದಕ, ಉರ್ದು-ಕನ್ನಡ ಭಾಷಾ ಪಂಡಿತ ಡಾ. ಪಂಚಾಕ್ಷರಿ ಹಿರೇಮಠರು. ಅವರ ಸೋದರ ಅಳಿಯ ಸ್ವಾಮೀ ಮುಂದೆ ನನ್ನ ಗೆಳೆಯನಾದ. (ಪಂಚಾಕ್ಷರಿ ಹಿರೇಮಠರಿಗೆ ನಾನು ಇಂದಿಗೂ ‘ಪ್ರೀತಿಯ’ ಗೋಪಾಲ. ಇವತ್ತಿಗೂ ಸಿಕ್ಕರೆ ಸ್ವಾಮಿಯ ವಿಚಾರ ಪ್ರಸ್ತಾಪಿಸದೆ ಇರುವುದಿಲ್ಲ ಆ ಹಿರಿಜೀವ.)

Ben.ಅವರ ಮನೆಯೆದುರಿನ ಮಹಡಿಯಲ್ಲಿ ವಾಸಿಸಿದ್ದವರು ಕಾರ್ಮಿಕ ಹಕ್ಕುಗಳ ಹೆಸರಾಂತ ಹೋರಾಟಗಾರ ಕವಿ ಕೆ.ಎಸ್. ಶರ್ಮಾ. ಆಗ ವಿದ್ಯಾರಣ್ಯ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದ ಶರ್ಮಾಜೀ ಬಿಡುವಿದ್ದಾಗ ಮಕ್ಕಳೊಂದಿಗೆ ಚಿನ್ನಿ-ದಾಂಡು ಆಡುತ್ತಿದ್ದರು. ಅವರ ಸಹೋದ್ಯೋಗಿ ಆಗಿದ್ದವರು ಡಾ. ವಾಮನ ಬೇಂದ್ರೆ. ಅವರಿಬ್ಬರೂ (ಶರ್ಮಾ ಮತ್ತು ವಾಮನ ಬೇಂದ್ರೆ) ಹೀರೋ ಸೈಕಲ್ಲನ್ನೇರಿ ಹೀರೋಗಳಂತೆ ಹೊರಟರೆ ನಾವು ‘ಹೋ’ ಎಂದು ಅವರ ಬೆನ್ನತ್ತುತ್ತಿದ್ದೆವು. (ಆ ಕಾಲಕ್ಕೆ ಆಫೀಸು-ಗೀಫೀಸುಗಳಿಗೆ ನಡೆದುಕೊಂಡೇ  ಹೋಗುವ ರೂಢಿ. ಅದಕ್ಕೇ ಅವರು ಅಷ್ಟು ಗಟ್ಟಿಯಾಗಿರುತ್ತಿದ್ದರು. ಸೈಕಲ್ ಕೊಳ್ಳುವುದೆಂದರೆ ದೊಡ್ಡ ಸಾಹಸದ ಕೆಲಸ ಆಗ. ಕೊಂಡವರಿಗೆ ಅದನ್ನು ದಿನವೂ ಲಕ ಲಕ ಹೊಳೆಯುವಂತೆ ಇಟ್ಟುಕೊಳ್ಳುವುದೇ ಒಂದು ಶೋಕಿ.)

ಅಲ್ಲಿಂದ ಹಾಗೆಯೇ ಮುಂದೆ ಸಾಗಿದರೆ ಎಡಕ್ಕೆ ‘ಸಮಾಜ ಪುಸ್ತಕಾಲಯ’ ಹಾಗೂ ‘ಪ್ರತಿಭಾ ಗ್ರಂಥ ಮಾಲೆ’ ಎಂಬ ಫಲಕಗಳನ್ನು ಹೊತ್ತು ನಿಂತ ಒಂದಂತಸ್ತಿನ ಕಟ್ಟಡ. ಕನ್ನಡ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಅದ್ವಿತೀಯ ಸ್ಥಾನವನ್ನು ಗಳಿಸಿಕೊಂಡದ್ದು ‘ಸಮಾಜ ಪುಸ್ತಕಾಲಯ.’ ಅದರ ಸ್ಥಾಪಕ ಬಾಲಚಂದ್ರ ಘಾಣೇಕರರದು ಅನನ್ಯ ರೀತಿಯ ಕನ್ನಡ ಸೇವೆ.  ಕರ್ನಾಟಕ ಏಕೀಕರಣ ಮತ್ತು ಭಾರತ ಸ್ವಾತಂತ್ರ್ಯಕ್ಕಾಗಿ ಬಾಲಚಂದ್ರ ಘಾಣೇಕರರು ಪಟ್ಟ ಶ್ರಮ, ಅನುಭವಿಸಿದ ಕಷ್ಟ-ನಷ್ಟಗಳದೇ ಒಂದು ಪ್ರತ್ಯೇಕ ಅಧ್ಯಾಯವಾಗುತ್ತದೆ. ಅವರು ಬಿಳಿಯರ ವಿರುದ್ಧ ಭೂಗತರಾಗಿ ಕೆಲಸ ಮಾಡಿದವರು. 1964 ರ ಹೊತ್ತಿಗಾಗಲೇ ಅವರ ಮಗ ಮನೋಹರ ಘಾಣೇಕರರು ತಂದೆಯ ಪ್ರಕಾಶನ ಕಾರ್ಯವನ್ನು ಕಾಲಕ್ಕೆ ತಕ್ಕಂಥ ಸುಧಾರಣೆಗಳೊಂದಿಗೆ ಮುನ್ನಡೆಸತೊಡಗಿದ್ದರು.

ನಾನಾಗ ಹನ್ನೆರಡರ ಬಾಲಕ. ಆಗೀಗ ಆಡುತ್ತಾಡುತ್ತಾ ಅವರ ಅಂಗಡಿಗೆ ಹೋಗುತ್ತಿದ್ದೆ. ಅದೊಮ್ಮೆ ಮನೋಹರರು ರಬ್ಬರಿನಂಥ ಒಂದು ವಸ್ತುವಿನ ಮೇಲೆ ಏನೇನೋ ರೇಖೆಗಳನ್ನು ಮೂಡಿಸಿ, ಆಮೇಲೆ ಅದನ್ನು ವಿಶೇಷ ಬ್ಲೇಡಿನಿಂದ ಕೆತ್ತಿ ತೆಗೆಯುತ್ತ ಕೂತಿದ್ದರು. ”ಅದು ಏನು?” ಎಂದು ಕೇಳಿದರೆ, ”ನೀನs ಹೇಳು ನೋಡೂಣು,” ಎಂದು ಅದನ್ನು ನನ್ನೆದುರು ಹಿಡಿದರು… ”ಗುಡ್ಡ, ಗಿಡ, ಗುಡಿ…” ಅಂದೆ. ‘ಶಬಾಶ್’ ಎಂದರು. (ಮುಂದೆ 1983 ರ ಸುಮಾರಿಗೆ ಹೆಗ್ಗೋಡಿನಲ್ಲಿ ರಂಗ ನಿರ್ದೇಶಕ ಇಕ್ಬಾಲ್ ಅಹ್ಮದ್ ಇಂಥದೇ ಕೆತ್ತನೆ ಮಾಡುತ್ತಿದ್ದಾಗ ಅದು ‘ಲಿನೋಲಿಯಂ ಬ್ಲಾಕ್ ‘ -ಪಡಿಯಚ್ಚು- ಎಂದು ತಿಳಿಯಿತು. ಅಕ್ಷರ ಪ್ರಕಾಶನ ಹೊರ ತಂದ ನನ್ನ ‘ದೊಡ್ಡಪ್ಪ’ ನಾಟಕದ ಮುಖಪುಟವೂ ಸೇರಿದಂತೆ ಅದರ ಅನೇಕ ಪುಸ್ತಕಗಳ ಮುಖಪುಟಗಳ ಪಡಿಯಚ್ಚನ್ನು ಹೀಗೇ ರೂಪಿಸಿದ್ದು.)

ಅದೊಂದು ಸಂಜೆ ಐದು-ಐದೂವರೆ ವೇಳೆಗೆ ‘ಸಮಾಜ ಪುಸ್ತಕಾಲಯ’ದ ಆ ಕಾರ್ಯಾಲಯದಲ್ಲಿ ಬಾಲಚಂದ್ರ ಘಾಣೇಕರರ ಎದುರು ಒಬ್ಬ ವೃದ್ಧರು ಜೋರು ಜೋರು ದನಿಯಲ್ಲಿ ಮಾತಾಡುತ್ತ, ನಗುತ್ತ ಕೂತಿದ್ದರು.  ಅವು ಬಲು ಚಮತ್ಕಾರಿಕ ಮಾತುಗಳು.

cycle sirsi1ಕೆಟ್ಟ ಕುತೂಹಲಿ ನಾನು. ಅವರು ಯಾರು ಎಂಬುದನ್ನು ತಿಳಿದುಕೊಂಡ ಹೊರತು ಅಲ್ಲಿಂದ ಸರಿಯಬಾರದು ಎಂದು ನಿರ್ಧರಿಸಿ ಅಲ್ಲಿಯೇ ಠಳಾಯಿಸುತ್ತಲಿದ್ದೆ. ಒಂದು ಹಂತದಲ್ಲಿ ಬಾಲಚಂದ್ರ ಘಾಣೇಕರರು, ”ಆತು ಬೇಂದ್ರೆ ಮಾಸ್ತರs… ಹಂಗs ಮಾಡೂಣು… ಅದಕ್ಕೇನಂತs?”… ಎಂದಾಗ ನನ್ನ ಕಿವಿಗಳು ನಿಮಿರಿದವು. ಜತೆಗೇ ಒಂದು ಸಣ್ಣ ಡೌಟು : ಅವರು ದ.ರಾ. ಬೇಂದ್ರೆಯವರಾ? ಅಂತ… ಅಷ್ಟೊತ್ತಿಗಾಗಲೇ ನಮಗೆ ಅವರ ‘ಪಾತರಗಿತ್ತಿ ಪಕ್ಕ…’ ಕವಿತೆ ಪಾಠದಲ್ಲಿ ಬಂದಿತ್ತು.
ಅಲ್ಲಿಂದ ಗೆಳೆಯರ ಕೂಡ ಆಡಲು ಹೋದವ ಆ ವಿಷಯ ಮರೆತೇ ಬಿಟ್ಟಿದ್ದೆ. ಆದರೆ, ಸಂಜೆಯ ಹೊತ್ತಿಗೆ ಮನೆಗೆ ಬಂದರೆ ಮತ್ತದೇ ನಗು ಅದೇ ಆ ದನಿ… ಅಜ್ಜಿಯ ಮನೆಯ ಮೇಲಿನ ಮನೆಯಿಂದ ಕೇಳಿಸುತ್ತಿತ್ತು.

ನಾನು ಅಜ್ಜಿಯೆದುರು ನನ್ನ ಅನುಮಾನವನ್ನು ಇಟ್ಟೆ. ”ಹೌದು… ಅವರs ಬೇಂದ್ರೆಯವರು… ಮ್ಯಾಲಿನವ್ರು ಅವರ ಸಮಂಧಿಕ್ರು…” ಅಂದಳು.

ರಿಸ್ಬೂಡ್ ಚಾಳಿನಲ್ಲಿ ಒಟ್ಟು ಒಂಬತ್ತು ಮನೆಗಳು. ಕೆಳಗೆ ನಾಲ್ಕು, ಮೊದಲ ಅಂತಸ್ತಿನಲ್ಲಿ ಐದು… ಎದುರು ಬದುರು ಮನೆಗಳು. ನಟ್ಟ ನಡುವೆ ಕಲ್ಲು ಹಾಸಿನ ಅಂಗಳ. ಮೇಲಿನ ಮನೆಗಳಿಗೆ ಹೋಗಲು ಎರಡು ಕಡೆಯಿಂದ ಕಟ್ಟಿಗೆಯ ಮೆಟ್ಟಿಲುಗಳು.

ನಮ್ಮ ಅಜ್ಜಿಯ ಮನೆಯ ಮೇಲಿನ ಮನೆಯಲ್ಲಿ ಇದ್ದವರು ಜೋಶಿ ಅಂತ. ಚಿತ್ಪಾವನರು. ದಂಪತಿ ಇಬ್ಬರೇ ಇದ್ದದ್ದು. ಆತ ಪಿ.ಡಬ್ಲು.ಡಿ.ಯಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಗೃಹಸ್ಥ. ಆಕೆ ಮನೆಯಲ್ಲೇ ಇರುತ್ತಿದ್ದ ಹಿರಿಯ ಗೃಹಿಣಿ. ಆಕೆಯ ಹೆಸರು ಕಮಲಾ ಮಾವಶೀ ಅಂತ.  ಅಸಲಿಗೆ ದ.ರಾ. ಬೇಂದ್ರೆಯವರ ಹೆಂಡತಿಯ ತಂಗಿ ಈ ಕಮಲಾ ಮಾವಶೀ. ಹೀಗಾಗಿ ಸಮಾಜ ಪುಸ್ತಕಾಲಯದಲ್ಲಿ ಕೆಲಸವಿದ್ದರೆ ರಿಸ್ಬೂಡ್ ಚಾಳಿಗೆ ಬೇಂದ್ರೆಯವರ ಭೆಟ್ಟಿ ನಿಶ್ಚಿತವೆ. ಬೇಂದ್ರೆಯವರಿಗೆ ಜನ ಬೇಕು. ಮಾತು ಬೇಕು. ರಿಸ್ಬೂಡ್ ಚಾಳಿಗೆ ಅವರು ಬಂದರೆ ಒಂದೆರಡಾದರೂ ಮನೆಗಳವರನ್ನು ಮಾತಾಡಿಸಿಯೆ ಮುಂದೆ ಹೋಗುತ್ತಿದ್ದದ್ದು.  ರಿಸ್ಬೂಡ್ ಕುಟುಂಬದವರು ಮರಾಠಿ ಭಾಷಿಕರು. ಕನ್ನಡವನ್ನೂ ಅಷ್ಟೇ ಚೆನ್ನಾಗಿ ಮಾತಾಡುತ್ತಿದ್ದರು. ಹೀಗಾಗಿ ಬೇಂದ್ರೆಯವರು ಅವರೊಂದಿಗೆ ಮಾತಾಡುವಾಗ ಎರಡೂ ಭಾಷೆಗಳು ಬಂದು ಹೋಗುತ್ತಿದ್ದವು. ಅವರ ಮಾತು ನಿಂತು ‘ನೋಡುವ’ ಹಾಗಿರುತ್ತಿತ್ತಷ್ಟೇ ಅಲ್ಲ, ಕೂತು ‘ಕೇಳುವಂತೆ’ಯೂ ಇರುತ್ತಿತ್ತು.
ಹಾಲಗೇರಿಯ ದಂಡೆಗುಂಟ ಕೂತಿರುತ್ತಿದ್ದ ಬಾಗವಾನರ ಬಳಿ ಬೇಂದ್ರೆ ಚೌಕಾಶಿ ಮಾಡುವಾಗ ನೋಡುವ ಹಾಗಿರುತ್ತಿತ್ತು.

ನನಗೆ ಬೇಂದ್ರೆಯವರನ್ನು ಹತ್ತಿರದಿಂದ ನೋಡಬೇಕು, ಅವರೊಂದಿಗೆ ಒಮ್ಮೆಯಾದರೂ ಮಾತಾಡಬೇಕು ಎಂಬ ಆಶೆ ಹೆಚ್ಚುತ್ತಲೇ ಹೋಯಿತು…

ಉಳಿದದ್ದು ಮುಂದಿನ ಕಂತಿನಲ್ಲಿ…

‍ಲೇಖಕರು avadhi

January 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: