-ಮಂಜುಳ ಡಿ
ಡ್ರೈವರ್ ಜೋರಾಗಿ ಹಾಕಿದ ಬ್ರೇಕ್ ಗೆ ಕೀರ್ ಶಬ್ದದೊಂದಿಗೆ ಬಸ್ ಊರ ಹೊರಗಿನ ರಸ್ತೆ ಬದಿಯ ಟೀ ಅಂಗಡಿಯ ಮುಂದೆ ನಿಂತಿತು. ಪ್ರಯಾಣದ ದಣಿವು ಕರಗಿಸುವ ದಾರಿಯಾಗಿ ಒಳ್ಳೇ ಟೀ ಮಾಡಲು ಅಂಗಡಿಯವನಿಗೆ ಹೇಳಿ ಆಲ್ಲಿಯ ವಿಶೇಷವಾದ ಒಣ ಬ್ರೆಡ್, ಇತರೆ ಸ್ನಾಕ್ಸ್ ಒಳಗಿಸುತ್ತಾ ಹಿಂದೆ ನೋಡಿದ ಸ್ಥಳದ ಬಗ್ಗೆ ತಲೆಗೊಂದರಂತೆ ಕಾಮೆಂಟ್ ಮಾಡುತ್ತಾ ಕೂತೆವು. ಪಕ್ಕದಲ್ಲೇ ಇದ್ದ ಮಸೀದಿಯಿಂದ ಅಲ್ಲಾ- ಹೋ ಅಕ್ಬರ್ ಅಲ್ಲಾ ಆಲಾಪ ಶುರುವಾಯಿತು. ಹಿಂದೂಗಳ ಭಜನೆ- ಮುಸ್ಲಿಮರ ಅಲ್ಲಾಹೋ ಕೂಗು- ಕ್ರಿಶ್ಚಿಯನ್ ರ- ಅಲ್ಲೆಲೂಯಾ ಮೂಲತಃ ಎಲ್ಲಾ ಒಂದೇ ಎನ್ನಿಸಿಬಿಡುತ್ತವೆ. ದೈವವನ್ನ ಕೂಗುವ ನೆನೆಪಿಸಿಕೊಳ್ಳುವ ವಿವಿಧ ಪರಿಭಾಷೆಗಳು. ದ್ವಂದ್ವ-ದಿಗಿಲುಗಳಲ್ಲಿ ಹರಿದು ನಿಂತ ಮನುಷ್ಯನ ಆಲೋಚನೆಗಳನ್ನು ಹಾಡುತ್ತಿರುವಷ್ಟು ಹೊತ್ತು ಏಕತಾನತೆಯಲ್ಲಿ ಕರಗಿಸಿ ಶುದ್ದಗೊಳಿಸುವಂತೆ.
ಆ ಕೂಗು ಮುಗಿಯುವ ಹೊತ್ತಿಗೆ ಎದುರು ಬೆಂಚಿಗೆ ಸುಮಾರು ಐವತ್ತು ವಯಸಿನ ಮುಸಲ್ಮಾನನೊಬ್ಬ ಬಂದು ಕೂತ. ಆಳಕ್ಕಿಳಿದ ನೋವೊಂದು ಅತೀಯಾಗಿ ಅವವನ್ನು ಬಾದಿಸುತ್ತಿರುವವನಂತೆ ಕಂಡ. ಟೀ ಬ್ರೆಡ್ ಪಡೆದು ಯಾತನಾಪೂರ್ವಕವಾಗಿ ತಿಂದು ಮುಂದೇನು ಎನ್ನುವಂತೆ ಯೋಚಿಸುತ್ತಾ ಕಣ್ಮುಚ್ಚಿ ಬೆಂಚ್ ಹಿಂದಿನ ಗೋಡೆಗೊರಗಿದ. ಸುತ್ತಲಿದ್ದವರ ಹರಟೆಯಿಂದ ಹೊರಬಂದು ಅವನನ್ನೇ ಗಮನಿಸುತ್ತಾ ಕೂತೆ. ಮೆಲ್ಲಗೆ ಎದ್ದ ವನೇ ಭಾರವಾದ ಕಾಲುಗಳನ್ನು ಎಳೆಯುತ್ತಾ ಎದುರಿದ್ದ ಮಸೀದಿಯ ಒಳಗೆ ಹೋದ. ಅವನು ಹೋದ ಕಡೆಯೇ ದಿಟ್ಟಿಸುತ್ತಾ ಕೂತೆ. ಎಲ್ಲರೂ ಟೀ ಒಟ್ಟಿಗೆ , ಆರಂಭವಾಗಿರುವ ಇರಾನ್ ವಿರುದ್ದ ಅಮೇರೀಕಾ-ಇಸ್ರೇಲ್ ಯುದ್ದದ ಬಗ್ಗೆ ಜೋರು ಚರ್ಚೆ ಆರಂಭಿಸಿದ್ದರು. ಅದ್ಯಾಕೋ ಯಾರಿಗೂ ಮತ್ತೆ ಗಾಡಿ ಏರಲು ಮನಸಿಲ್ಲ ಅಲ್ಲೇ ಸುತ್ತಾ ಮುತ್ತಾ ಎಲ್ಲಾದರೂ ಉಳಿಯುವಂತೆ ಟ್ರಾವೆಲ್ಸ್ ನ ಟೂರ್ ಮ್ಯಾನೇಜರ್ ಗೆ ತಾಕೀತು ಮಾಡುತ್ತಿದ್ದರು.
ಇಪ್ಪತ್ತು ನಿಮಿಷ ಕಳೆದಿರಬೇಕು ಮಸೀದಿ ಒಳಗೆ ಹೋದ ಆ ಐವತ್ತರ ವಯಸಿನವ, ಹೊರಬಂದವ ಮತ್ತೆ ಟೀ ಅಂಗಡಿಗೆ ಬಂದ. ಅವನ ಚೆಹರೆ ತುಸು ನಿರಾಳತೆ ಸಾರುತ್ತಿತ್ತು . ಅಂಗಡಿಯವನೊಂದಿಗೆ ಒಂದೆರೆಡು ಹರಟಿ ಮತ್ತೆ ಟೀ ಒಣ ಬ್ರೆಡ್ ಪಡೆದು ಕೂತವ ಹಗುರಾಗಿದ್ದವನಂತೆ ಕಂಡ. ಮೊದಲಿದ್ದ ಹಿಂಸೆ – ಯಾತನೆಯನ್ನು ಮಸೀದಿಯ ಒಳಗಿದ್ದ ಗೋಡೆಗೆ ಒಪ್ಪಿಸಿದನಾ ಅರಿವಾಗಲಿಲ್ಲ. ಆ ಗಳಿಗೆ ಮೂಡಿದ ಪ್ರಶ್ನೆ ಗೋಡೆಗಳು ಮಾತಾಡುತ್ತವಾ!
ಒಳ ಹೋಗಿ ಬಂದ ಆತ ಇಷ್ಟು ಹಗುರಾದದ್ದು ಹೇಗೆ?
ಕಲ್ಲು ಮಣ್ಣಿನಲ್ಲಿ ಕಟ್ಟಿದ ಆ ಮಿರಹಬ್ ಗೆ (ಪ್ರಾರ್ಥನಾ ಗೋಡೆಗೆ) ಕೇಳಿಸುವುದಾ?
ಗೋಡೆಗಳು ಮಾತಾಡುತ್ತಾವಾ? ಬರೀ ಮಾತು-ಗಲಾಟೆ- ಹೊಡೆದಾಟ -ದೊಂಬಿ ಇವೆಲ್ಲಕ್ಕಿಂತ ಹೆಚ್ಚೇ ಮಾತಾಡುತ್ತವೆ ಗೋಡೆಗಳು. ದೊಡ್ಡ ನೋವು-ಹಿಂಸೆ – ಯಾತನೆಗಳನ್ನೇ ಹಿಡಿದು ನಿಂತಿರುತ್ತವೆ.
ಶತಮಾನಗಳಿಂದ ಹೆಗ್ಗಳಿಕೆ ಹೊತ್ತು ಬಾಳಿ ಬದುಕಿದ ಮನೆಯಲ್ಲಿ ಅಣ್ಣ- ತಮ್ಮಂದಿರ ಬಡಿದಾಟಗಳಿಂದ ಹುಟ್ಟುವ ಗೋಡೆ ಒಂದು ದೊಡ್ಡ ಕುಟುಂಬದ ಇತಿಹಾಸ ಹೊಸಕಿ ಹಾಕುತ್ತದೆ. ಮೂಲ ಆಂದ್ರಪ್ರದೇಶವನ್ನು ಒಡೆದು ಎರಡು ರಾಜ್ಯಗಳಾಗಿಸಿದಾಗ
ಅಖಂಡ ತೆಲುಗು ಭೂಮಿಯ ಕೋಟ್ಯಾಂತರ ಮನಸುಗಳು ಚೂರಾಗಿ ಚೀರಿಟ್ಟಿದ್ದವು. 17 ಆಗಸ್ಟ್ 1947 ರಂದು ಎಳೆದ ರಾಡ್‌ಕ್ಲಿಫ್ ರೇಖೆಯೊಂದಿಗೆ ಸಹಸ್ರ ಶತಮಾನಗಳ ಇತಿಹಾಸದ ಅಖಂಡ ಭಾರತ ಒಡೆದು ಪಾಕಿಸ್ತಾನದ ಹುಟ್ಟಿಗೆ ಕಾರಣವಾಯಿತು. ಶತಮಾನಗಳಿಂದ ಕಂಡುಂಡ ಸಂಸ್ಕೃತಿ – ನೆಲದಿಂದ ಬೇರು ಕಿತ್ತು ಹೊರಟವರ ನೋವುಗಳಿಗೆ ಯಾವ ಭಾಷ್ಯ ಒದಗಿಸಲು ಸಾದ್ಯವಿತ್ತು.
ಆಳವಾಗಿ ಬೆಸೆದ ಮನಸುಗಳ ನಡುವೆ ಮೂಡುವ ಗೋಡೆಗಳು ಬೇರು ಆಳಕ್ಕಿಳಿದ ಬಂಧಗಳನ್ನೇ ಬುಡ ಸಹಿತ ಕಿತ್ತು ಹಾಕಬಲ್ಲವು.
ಹಾಗೇ ಯುದ್ದಗಳ ನಂತರ ಜಗತ್ತಿನಲ್ಲಿ ನಿರ್ಮಾಣವಾದ ಗೋಡೆಗಳ ಹಿಂದಿರುವ ಕತೆಗಳು ಅದ್ಭುತ ಆಮಿಷವಾಗಿ ಸೆಳೆಯುವಂಥವು. ಈ ಗೋಡೆಗಳ ಹಿಂದೆ ಸಹಸ್ರಾರು ಕಾದಂಬರಿಗಾಗುವಷ್ಟು ಕಥಾವಸ್ತು ಹೂತುಕೊಂಡಿವೆ. ಗೋಡೆಗಳ ಕುರಿತು ಅರಿಯುತ್ತಾ ಹೋದಂತೆ ರಕ್ತ-ಸಿಕ್ತ ಚರಿತ್ರೆ ಬರೆದುಕೊಂಡ ಗೋಡೆಗಳ ಸೆಳೆವಿನಿಂದ ಹೊರಬರಲು ಹಲವು ದಿನಗಳಾದರೂ ಸಾಕಾಗಲಿಲ್ಲ.
ಪ್ರಾರ್ಥನಾ ಗೋಡೆ-ವೆಸ್ಟ್ರನ್ ವಾಲ್.
ನೋಡಲೇಬೇಕು ಎಂದು ನಾನು ಪಟ್ಟಿಮಾಡಿಕೊಂಡಿರುವ ಸ್ಥಳಗಳಲ್ಲಿ ವೆಸ್ಟ್ರನ್ ವಾಲ್ ಕೂಡ ಒಂದು. ಇಸ್ರೇಲ್ ನ ರಾಜಧಾನಿ ಜೆರುಸೆಲಂನ ಈ ಗೋಡೆಯ ಹಿಂದೆ ಸಹಸ್ರ ಕಾದಂಬರಿಗಳಿಗಾಗುವಷ್ಡು ರೋಚಕ ಇತಿಹಾಸವಿದೆ. ಜೆರುಸೆಲಂ ಇಸ್ಲಾಂ-ಯಹೂದಿ ಮತ್ತು ಕೈಸ್ತರು, ಈ ಮೂರು ಮತಗಳಿಗೆ ಅತ್ಯಂತ ಪರಮ ಪವಿತ್ರವಾದ ಸ್ಥಳ. ಇಲ್ಲಿ ಯಹೂದಿಗಳ ಎರಡು ಪುರಾತನ ದೇವಾಲಯಗಳಿದ್ದವು. ಬ್ಯಾಬಿಲೋನಿಯನ್ನರ ದಾಳಿಯಿಂದ ಒಂದು ದೇವಾಲಯ ಧ್ವಂಸವಾದದ್ದನ್ನು ಮತ್ತೆ ನಿರ್ಮಿಸಲಾಗಿತ್ತು . ಆದರೆ ಪುನಃ ರೋಮನ್ನರ ದಾಳಿಯಿಂದ ಧ್ವಂಸಗೊಂಡು ದೊಡ್ಡ ಗೋಡೆ ಮಾತ್ರ ಉಳಿಯಿತು. ಯಹೂದಿಯರು ಅನುಭವಿಸಿದ ದಾಳಿ-ದೌರ್ಜನ್ಯ-ದಬ್ಬಾಳಿಕೆಯ ಕುರುಹಾಗಿ ಉಳಿದಿದೆ.
ಯಹೂದಿಯರ ಮೊದಲ ದೊರೆಗಳಾದ ಡೇವಿಡ್ ಮತ್ತು ಸಲೋಮನ್ನ ಆಳಿದ ಸ್ಥಳ ಇಸ್ರೇಲ್. ಪ್ಯಾಲೇಸ್ಥಾನ್ ನ ರಾಜಧಾನಿ ಆಗಲೂ ಜೆರೋಸೆಲಂ ಆಗಿತ್ತು. ಇದೇ ಜೆರೊಸೆಲಂ ಅನ್ನು ಮುಸ್ಲಿಮರು ಮೆಕ್ಕಾ -ಮದೀನಾ ನಂತರದ ಪವಿತ್ರ ಸ್ಥಳವೆಂದು ಭಾವಿಸುತ್ತಾರೆ. ಪ್ರವಾದಿ ಮೊಹಮದ್ ಸ್ವರ್ಗಾರೋಹಣವಾದ ಸ್ಥಳ ಎಂಬುದು ನಂಬಿಕೆ. ಏಸುವನ್ನು ಶಿಲುಬೆಗೆ ಏರಿಸಿದ ಮಹಾನಿರ್ವಾಣ ಸ್ಥಳವೂ ಇದೇ ಆಗಿರುವುದರಿಂದ ಕ್ರೈಸ್ತರಿಗೂ ಇದು ಅತ್ಯಂತ ಪವಿತ್ರ ಸ್ಥಳ.
ಯಹೂದಿಯರ ದೊರೆ ಡೇವಿಡ ಮತ್ತು ಸಲೋಮನ್ನರ ಕಾಲದಿಂದಲೂ ಜರೋಸೆಲಂ ಇಸ್ರೇಲಿನ ರಾಜಧಾನಿಯಾಗಿತ್ತು. ತದನಂತರದ ಆಕ್ರಮಣಗಳಿಂದ ಯಹೂದಿಗಳು ಗುಳೆ ಹೊರಟರು. ಅರಬ್ಬರು ಇಲ್ಲಿ ಬಂದು ನೆಲೆಯೂರಿದರು. ಕ್ರಮೇಣ ಬೆಬಿಲೋನಿಯನ್ನರು, ರೋಮನ್ನರು, ಬ್ರಿಟೀಷರು ಈ ದೇಶವನ್ನಾಳಿದರು..1948 ರ ಹೊತ್ತಿಗೆ ಯುರೋಪಿನ ನಾನಾ ಭಾಗಗಳಿಂದ ಜನಾಂಗೀಯ ಹತ್ಯೆಯಿಂದ ರೋಸಿ ತಮ್ಮದೇ ತಾಯ್ನೆಲಕ್ಕೆ ಲಕ್ಷಾಂತರ ಯಹೂದಿಗಳು ಹಿಂದಿರುಗಿದರು. ಇವರಿಗಿಂತ ಎರಡರಷ್ಟು ಸಂಖ್ಯೆಯಲ್ಲಿದ್ದ ಅರಬ್ಬರಿಗೂ – ಯಹೂದಿಯರಿಗೂ ಆರಂಭಗೊಂಡ ತಿಕ್ಕಾಟಕ್ಕೆ ಬ್ರಿಟಿಷ್ ಈ ದೇಶ ಬಿಡುವ ಮುನ್ನ ಡೇವಿಡ್ ನ ಈ ನೆಲವನ್ನು ಪೂರ್ವ- ಪಶ್ಚಿಮ ಜೆರೊಸೆಲಂ ಎಂದು ಇಬ್ಬಾಗವಾಗಿಸಿ ಅರಬ್ಬೀ ಮತ್ತು ಯಹೂದಿಯರಿಗೆ ಹಂಚಿತು.
ಇಸ್ರೇಲ್ ಇದಕ್ಕೆ ಒಪ್ಪಿದರೂ ಒಪ್ಪದ ಅರಬಬ್ಬರಿಂದಾಗಿ ಇವರಿಬ್ಬರ ಮಧ್ಯೆ ಸಾಗಿದ್ದ ಮುಸುಕಿನ ಗುದ್ದಾಟ 1967 ರ
ಜೂನ್ 5 ರಿಂದ 10 ರ ವರೆಗಿನ ಜಗತ್ಪ್ರಸಿದ್ಧ ಆರು ದಿನಗಳ ಯುದ್ಧಕ್ಕೆ ನಾಂದಿಯಾಯಿತು. ಈ ಯುದ್ಧದಲ್ಲಿ ಇಸ್ರೇಲ್ ಪೂರ್ವ ಜೆರೋಸೆಲಂ ಮತ್ತು ವೆಸ್ಟ್ ಬ್ಯಾಂಕ್, ಗ್ಯಾಜಾ ಸ್ಟ್ರಿಪ್ , ಸೂಯೆಜ್ ಕಾಲುವೆವರೆಗಿನ ಮುಖ್ಯ ಭೂಮಿ ವಶಪಡಿಸಿಕೊಂಡಿತು.
ಅಂದಿನಿಂದ ಇಂದಿನವರೆಗೂ ಯಾವುದೇ ಘೋಷಿತ ಯುದ್ದ ಜರುಗದಿದ್ದರೂ, ಶೀತಲ ಸಮರ ಯಾವ ಮಟ್ಟಿಗೆ ಮುಂದುವರೆದಿದೆ ಎಂದರೆ, ಎರಡೂ ಸಮುದಾಯದವರೂ ಎಲ್ಲಿಯೂ ಬೆರೆಯುವುದಿಲ್ಲ. ಅಗ್ರಮಾನ್ಯ ಒಲಂಪಿಕ್ಸ್ ನಂಥ ಕ್ರೀಡಾಕೂಟದ ಅತೀ ಮುಖ್ಯ ಘಟ್ಟದಲ್ಲಿಯೂ ಒಂದು ಸಮೂದಾಯ ಇನ್ನುಂದು ಸಮುದಾಯ ಎದುರಿಸಬೇಕಾಗಿ ಬಂದರೆ , ಅಂಥಹ ಸುತ್ತಿನಿಂದ ಹೊರಬರುತ್ತಾರೆ. ಉದಾಹರಣೆಗೆ 2008 ರ ಬೀಜಿಂಗ್ ಒಲಂಪಿಕ್ಸ್ ನಲ್ಲಿ ಇಸ್ರೇಲ್ ನ ಈಜುಗಾರ್ತಿ ಸ್ಪರ್ಧೆಗಿಳಿದ ಈಜುಕೊಳದಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಎಂದು ಇರಾನಿನ ಈಜುಪಟು ಹಿಂದೆ ಸರಿದಿದ್ದಳು!
ಆದರೆ ಜಗತ್ತಿನ ಯಾವುದೇ ಗಣ್ಯರು ಜೆರೊಸೆಲಂಗೆ ಹೋದರೂ ನೀಡಿದರೂ ಮೊದಲು ಭೇಟಿ ನೀಡುವುದೇ ಈ ಪ್ರಾರ್ಥನಾ- ಗೋಡೆಗೆ. ಇಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರವೇ ಮುಂದಿನ ಕಾರ್ಯ. ಇಲ್ಲಿ ಪ್ರಾರ್ಥನೆ ಸಲ್ಲಿಸಲೆಂದೇ ರಬ್ಬಿಗಳಿರುತ್ತಾರೆ. ಚೀಟಿಯಲ್ಲಿ ಬರೆದು ಗೋಡೆಯ ಬಿರುಕುಗಳ ಮಧ್ಯೆ ಸಿಕ್ಕಿಸಲಾಗುತ್ತದೆ . ಇಂಥ ಪ್ರಾರ್ಥನಾ ಚೀಟಿಗಳನ್ನು ವರ್ಷಕ್ಕೆರಡು ಬಾರಿಯಂತೆ ಕೈ ಆಥವಾ ಕೋಲುಗಳಿಂದ ಹೊರತೆಗೆದು ಬಂಡಲ್ ಮಾಡಿ ಆಲೀವ್ ಕಾಡಿನಲ್ಲಿ ಹೂಳಲಾಗುತ್ತದೆ. ಈ ಪ್ರಾರ್ಥನಾ ಚೀಟಿಗಳನ್ನು ಯಾರೂ ಓದುವುದಿಲ್ಲ ಯಾಕೆಂದರೆ ಅವು ನೇರವಾಗಿ ಭಗವಂತನಿಗೆ ಸಲ್ಲಿಸಿದಂತವಾಗಿರುತ್ತವೆ. ಯಹೂದಿಗಳ ಪ್ರಕಾರ ಕಿಂಗ್ ಸಲೋಮನ್ ಮೊದಲ ದೇವಾಲಯ ಕಟ್ಟಿಸಿ ದೇವರಿಗ ಒಪ್ಪಿಸಿದಾಗ ದೇವರು ಅಲ್ಲಿ ನೆಲೆಸುತ್ತೇನೆ ಎಂದು ರಾಜನಿಗೆ ಸೂಚನೆ ನೀಡಿದ್ದ ಎಂಬ ಪ್ರತೀತಿಯಿದೆ. ಈಗಲೂ ಪ್ರತೀ ವರ್ಷ ಹಲವು ಲಕ್ಷ ಜನ ಭೇಟಿ ನೀಡುವ ಮೂರು ಮತಗಳು ಕೂಡುವ ಪವಿತ್ರ ನೆಲವಿದು. ಈ ಸ್ಥಳ ಅತ್ಯಂತ ಹಳೆಯ ನಗರವಾಗಿದ್ದು ಅನೇಕ ನಿಗೂಢತೆ ಘನ ಚರಿತ್ರೆ ಹೂತುಕೊಂಡಿದೆ. ಈ ಸ್ಥಳದ ಹಕ್ಕಿನ ಬಗ್ಗೆ ಮೂರು ಮತಗಳ ಶೀತಲ ಸಮರ ಮಾತ್ರ ಹಾಗೇ ಮುಂದುವರೆದಿದೆ. ಈ ವೆಸ್ಟ್ರನ್ ವಾಲ್ ನ ರಬ್ಬೀ ಸ್ಯಾಮುಯೆಲ್ ರಾಬಿನ್ ವಿಲ್ಟ್ ಮಾತ್ರ ಮೂರು ಸಮದಾಯಗಳ ಏಕತೆಗೆ- ಶಾಂತಿ- ಸಹಬಾಳ್ವೆ ಗೆ ಪ್ರಾರ್ಥನೆ ಸಲ್ಲಿಸುತ್ತಲೇ ಇದ್ದಾರೆ.
ಎಲ್ಲರೂ ಏಳಿ ಎಂಬ ಟೂರು ಮ್ಯಾನೇಜರನ ಕೂಗು ವೆಸ್ಟ್ರನ್ ವಾಲ್ ನಿಂದ ಇಹಕ್ಕೆ ಇಳಿಸಿತು. ಬಹುಶಃ ಉಳಿಯುವ ಸ್ಥಳ ನಿರ್ಧಾರವಾದಂತಿತ್ತು. ತುಸು ನಿರಾಳವಾಗಿದ್ದ ಗೋಡೆಗೆ ಪ್ರಾರ್ಥನೆ ಸಲ್ಲಿಸಿ ಬಂದ ಆತನನ್ನು ಮತ್ತೊಮ್ಮೆ ನೋಡಿ ಬಸ್ ಹತ್ತಿದೆ. ಮಲ್ಟಿ ಆಕ್ಸಲ್ ಬಸ್ ನ ಎಸಿಗೆ ತುಸು ತಂಪೆನಿಸಿತು. ಬಸ್ ನ mp3 ಯಲ್ಲಿ ಲತಾಮಗೇಶ್ಕರ್ ಸುಶ್ರಾವ್ಯವಾಗಿ ಹಾಡುತ್ತಲೇ ಇದ್ದಳು..
ಈಶ್ವರ್ ಯಾ ಅಲ್ಲಾ,
ಯೇ ಪುಕಾರ್ ಸುನಲೇ
ಈಶ್ವರ್ ಏ ಅಲ್ಲಾ ಏ ಧಾತಾ..






0 Comments