ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ..

ಸುರೇಶ್ ಕಂಜರ್ಪಣೆ

‘೮೦ರ ದಶಕದ ಉತ್ತರಾರ್ಧ. ಕೊಂಗಾಡಿಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಧಿಚಿಂತನ ಶಿಬಿರವನ್ನು ಗೆಳೆಯ ಎಂ.ಜಿ. ಚಂದ್ರಶೇಖರಯ್ಯ ಏರ್ಪಡಿಸಿದ್ದರು. ಹಳ್ಳಿಯೊಂದರಲ್ಲಿ ವಾಸ. ಬೆಂಗಳೂರಿನ ಗಾಂಧಿವಾದಿ ಚೇತನಗಳು ಸತ್ಯವೃತ, ಕೆ.ಎಸ್.‌ ನಾರಾಯಣ ಸ್ವಾಮಿ ಮತ್ತು ದೊರೆಸ್ವಾಮಿಯವರು. ಈ ಶಿಬಿರದ ಮೇಷ್ಟ್ರುಗಳು. ಅದರೊಂದಿಗೆ ಶುರುವಾದ ಗಾಂಧಿ ಓದು ಕ್ರಮೇಣ ಉದ್ಯೋಗದ ಬಗ್ಗೆ ಉದಾಸೀನ ಹುಟ್ಟಿಸಿತ್ತು. ಆಗ ಮೇಲುಕೋಟೆಯ ಸಂತೋಷನ ಪರಿಚಯ ಅವನ ಮೂಲಕ ‘ದಾದಾ ಸುರೇಂದ್ರ ಕೌಲಗಿಯವರ ಪರಿಚಯ ಆಗಿ ನಾನು ಕೆಲಸ ಬಿಟ್ಟು ಜನಪದ ಸೇವಾ ಟ್ರಸ್ಟ್‌ ಸೇರಿದೆ.

ಮೊದಲು ಕಾಣಿಸಿದ ತ್ರಿಮೂರ್ತಿಯವರ ಜೊತೆ ದಾದಾ ಕೂಡಾ ಸೇರಿಕೊಂಡರು. ಹೊಸ ತಲೆಮಾರಿನೊಂದಿಗೆ ನಿತ್ಯ ಸಂವಾದದ ಒಲುಮೆ, ಉತ್ಸಾಹ ಈ ನಾಲ್ವರಿಗೂ ಇತ್ತು. ದಾದಾ ಸರ್ವೋದಯ ಸಂಘದ ಅಧ್ಯಕ್ಷರಾದ ಮೇಲೆ ಈ ಎಲ್ಲಾ ಹಿರಿಯರೂ ಆಗಾಗ್ಗೆ ಮೇಲುಕೋಟೆಯಲ್ಲಿ ನಿಯಮಿತ ಸಭೆಗೆ ಹಾಜರಾಗುತ್ತಿದ್ದರು. ಇವರೊಳಗಿನ ಮಾತುಕತೆ, ಮತ್ತು ಇವರು ನಮ್ಮಂಥಾ ಯುವ ತಲೆಮಾರಿನ ಜೊತೆ ಸಂವಾದದ ಉತ್ಸಾಹ ತೋರಿಸುತ್ತಿದ್ದುದೇ ಒಂದು ರೋಮಾಂಚನದ ಸಂಗತಿ.

ಸತ್ಯವೃತ ಈ ಹಿರಿಯರ ಪೈಕಿ probably most intellectual ಧಾಟಿಯ ಸಂವಾದ ನಡೆಸುತ್ತಿದ್ದವರು. ಕೊಂಚ ಕುಳ್ಳು, ನೆಹರೂ ರೀತಿಯ ನಗು. ಮಾತು ಮತ್ತು ಬರೆವಣಿಗೆ ಎರಡರಲ್ಲೂ ಸತ್ಯವೃತ ಅವರ ತಾರ್ಕಿಕ ಖಾಚಿತ್ಯ, ಅದ್ಭುತ.

ಕೆ.ಎಸ್.‌ ನಾರಾಯಣ ಸ್ವಾಮಿಯವರು ಇಷ್ಟು ಮಾತಿನ ಸರದಾರರಲ್ಲ. ಕೊಂಚ ಕಡಿಮೆ ಮಾತು. ಅಗತ್ಯವಿದ್ದಾಗ ಸ್ಪಷ್ಠತೆ ಕೊಡುವ ಸ್ವಭಾವದವರು. ಅವರು ಬರೆದಿದ್ದೇ ಹೆಚ್ಚು. ‘ದಾದಾ’ ನಿತ್ಯದ ಒಡನಾಟಕ್ಕೆ ಸಿಗುತ್ತಿದ್ದ ಕಾರಣ ಅವರ ಓಘ ಬೇರೆ. ಸೈದ್ಧಾಂತಿಕವಾಗಿ ಇವರಿಗೆಲ್ಲಾ ಸಿಗುತ್ತಿದ್ದುದು ಸಮಾಜವಾದಿ ಆಶಯಗಳಿಗೆ ತೆರೆದುಕೊಂಡಿದ್ದ ನನ್ನ ತಲೆಮಾರಿನ ಯುವಕರೇ. ಹೇಗಾದರೂ ಗಾಂಧೀ ಮಾರ್ಗಕ್ಕೆ ಮತಾಂತರಗೊಳಿಸಬೇಕು ಎಂಬ ಸಾತ್ವಿಕ ಹೆಣಗಾಟ ಸದಾ ‘ದಾದಾ’ ಅವರಲ್ಲಿತ್ತು. ಮಧ್ಯೆ ಅವರಿಗೆ ಮುಗ್ಧ ಪ್ರಶ್ನೆಗಳು ಏಳುತ್ತಿದ್ದವು.

ದೊರೆಸ್ವಾಮಿ ಈ ವಾದ, ಸಂವಾದ ಆಲಿಸಿ ‘ಅದು..’ ಎಂದು ಶುರು ಮಾಡಿ ಅದಕ್ಕೊಂದು ತಾರ್ಕಿಕ ಅಂತ್ಯ ಹೇಳುವರು. ಅವರ ಎತ್ತರ, ಕಣ್ಣಿನ ದೃಷ್ಟಿ ಎಲ್ಲವೂ ಅವರಿಗೊಂದು ಆಲಿಸುವ ವ್ಯಕ್ತಿತ್ವ ನೀಡಿತ್ತು. ಈ ನಾಲ್ವರೂ ಅದೆಷ್ಟು ಚೈತನ್ಯಭರತರಾಗಿ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತಿದ್ದರೆಂದರೆ ಗಾಂಧಿವಾದ ಗೊಡ್ಡು ಸಿದ್ದಾಂತ ಎಂದು ಹೇಳುವುದು ಸಾಧ್ಯವೇ ಇರಲಿಲ್ಲ.

ಒಬ್ಬೊಬ್ಬರೇ ಕಾಲದ ಕರೆಗೆ ಓಗೊಟ್ಟು ಅವರ ಉಸಿರನ್ನು ನಮ್ಮಲ್ಲಿ ಬೆರೆಸಿ ಹೋದರು. ಈಗ ದೊರೆಸ್ವಾಮಿಯವರು. ಮೊನ್ನೆ ಬಹುಗುಣ. ದೊರೆಸ್ವಾಮಿಯವರು ಏಕಾಏಕಿ ಗೌರಿ, ನೂರ್‌ ಸಹಿತ ಹೊಸ ತಲೆಮಾರಿನ ಹೋರಾಟಗಾರರೊಂದಿಗೆ ಬೆರೆತು ಮುಂಚೂಣಿಯಲ್ಲಿ ನಿಂತಿದ್ದು ನಮ್ಮ ಕಾಲದ ಅಪೂರ್ವ ಸಂಗತಿ. ಕೊನೆಯ ಕೊಂಡಿ ಅವರು.

ನನ್ನಂಥವನಿಗೆ ಈ ಹಿರಿಯರೆಲ್ಲಾ ಕೆಡದಂತೆ ಕಾಪಿಟ್ಟ ಲೇಪನಗಳು. ಋಜು ಜೀವನ, ಆಸೆಗಳು ಬಿಡಿ ಅಗತ್ಯಗಳನ್ನೇ ಕನಿಷ್ಠಕ್ಕಿಳಿಸಿಕೊಂಡ ಸಹಜ ಜೀವಿಗಳು. ಈ ದೇಶದ ಆದರ್ಶಗಳೆಂದು ನಾವು ಹೆಸರಿಸಬಹುದಾದ ಮನುಷ್ಯ ಪ್ರೀತಿ, ಸಮಾನತೆಯ ಪ್ರೀತಿ, ಸ್ವಾತಂತ್ರ್ಯದ ಪ್ರೀತಿ, ಸರ್ವರಿಗೂ ಸಮಪಾಲು ಎಂಬ ಧ್ಯೇಯ ಇವುಗಳನ್ನು ನಮ್ಮ ತಲೆಮಾರಿಗೆ ದಾಟಿಸಿದ ಹಿರಿಯರು. ನಮ್ಮೊಂದಿಗೆ ಕೊನೆ ಉಸಿರಿನ ವರೆಗೆ ಪಾಲ್ಗೊಂಡವರು.
ಯಾರೊಂದಿಗಿನ ಒಡನಾಟ ಅದರ ನೆನಪುಗಳು ನಮ್ಮ ಬದುಕಿಗೆ ಅರ್ಥ ನೀಡಿದೆ ಎಂಬುದಷ್ಟೇ ಕೊನೆಗೆ ಮುಖ್ಯವಾಗುವುದು.

ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ
ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ

‍ಲೇಖಕರು Avadhi

May 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. km vasundhara

    ಹಿರಿಯರ ಬಗೆಗಿನ ಅರ್ಥಪೂರ್ಣವಾದ ವ್ಯಾಖ್ಯಾನ… ನುಡಿ ನಮನ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: