ಆ ಮರ ನೆನಪಿಗೆ ಬರುತ್ತಿತ್ತು..

ಸವಿತಾ ನಾಗಭೂಷಣ

ಹಿರಿಯರಾದ ದೊರೆಸ್ವಾಮಿ ಅವರನ್ನು ಹಲವು ಸಲ ಕಂಡಿದ್ದೇನೆ. ಒಂದೆರಡು ಬಾರಿ ನಮ್ಮ ಮನೆಯಲ್ಲಿ ಉಳಿದುಕೊಂಡಿದ್ದರು ಸಹ.

ಅಷ್ಷು ವಯಸ್ಸಾಗಿದ್ದರೂ ಗಟ್ಟಿಮುಟ್ಟಾಗಿದ್ದ , ಕನ್ನಡಕ ಬಳಸದೇ ಓದು ಬರಹ ಮಾಡುತ್ತಿದ್ದ ಅವರನ್ನು ಕಂಡರೆ ಸೋಜಿಗ. ರುಚಿಗಾರರು. ಬೆಳಿಗ್ಗೆ ಏನಮ್ಮ ತಿಂಡಿ ಎಂದು ರಾತ್ರಿಯೇ ಕೇಳುತ್ತಿದ್ದರು. ನಿಮಗೇನು ಇಷ್ಟ? ಅದನ್ನೇ ಮಾಡುವೆ ಎನ್ನುತ್ತಿದ್ದೆ.

ನಾಗಭೂಷಣ ಮತ್ತು ಅವರು ಸರಿರಾತ್ರಿಯ ತನಕ ಮಾತನಾಡುತ್ತಾ ಕೊನೆಗೆ ಜಗಳದ ಹಂತಕ್ಕೆ ಬಂದಾಗ ಮಧ್ಯೆ ಪ್ರವೇಶಿಸಿ, ಬಿಟ್ಟುಬಿಡಿ ಸರ್ ಎಂದರೂ ಬಿಡಲೊಲ್ಲರು!. ನಾಗಭೂಷಣ ಅವರ ‘ಗಾಂಧಿ ಕಥನ’ ಪುಸ್ತಕ ಲೋಕಾರ್ಪಣೆ ಸಂದರ್ಭದಲ್ಲಿ ಮೂರು ವರುಷದ ಹಿಂದೆ ಮಾತನಾಡಿದ್ದೇ ಕಡೇ ಮಾತು!

ರಹಮತ್ ತರೀಕೆರೆ

ಕಡಲ ತಡಿಗೆ ಹೋದಾಗಲೆಲ್ಲ ಕುಮುಟಾದಲ್ಲಿದ್ದ ಕವಿ ಬಿ.ಎ. ಸನದಿಯವರನ್ನು ಹೋಗಿ ಕಾಣುತ್ತಿದ್ದೆ. ಮುಂಬೈನಿಂದ ಬಂದ ಅವರು ತೋಟದಂತಿರುವ ವಿಶಾಲ ಜಾಗದಲ್ಲಿ ಹಳೆಯ ಮನೆಯನ್ನು ಖರೀದಿಸಿ ವಾಸವಾಗಿದ್ದರು. ತಮಗೆ ಬೇಕಾದಂತೆ ಮನೆಯಲ್ಲಿ ಕೆಲವು ಮಾರ್ಪಾಡು ಮಾಡಿಕೊಂಡರು. ಆದರೆ ಮನೆಯೆದುರಿನ ತುಳಸಿಕಟ್ಟೆ ಮತ್ತು ಮಾವಿನಮರವನ್ನು ಮಾತ್ರ ಹಾಗೆ ಉಳಿಸಿಕೊಂಡಿದ್ದರು. ಅದುವೋ ನೂರು ವರ್ಷ ಬಾಳಿದ ಹಳೆಯ ಬೃಹದಾಕಾರ ಮರ.

ಎಷ್ಟೊ ಕಡಲಗಾಳಿಯನ್ನೂ ಮುಸಲಧಾರಾ ಮಳೆಯನ್ನೂ ಕರಾವಳಿಯ ಗರಮಿಯನ್ನೂ ಎದುರಿಸಿ ದಿಟ್ಟವಾಗಿ ನಿಂತಿತ್ತು. ಅಗಸಕ್ಕೆ ಚಾಚಿದ ತೋಳುಗಳಂತಿದ್ದ ಅದರ ತುದಿ ಟೊಂಗೆಗಳು ಒಣಗುತ್ತಿದ್ದವು. ಆದರೆ ಹಸಿರಿದ್ದ ಕೊಂಬೆಗಳಲ್ಲಿ ಸಮೃದ್ಧವಾಗಿ ಫಲ ಬಿಡುತ್ತಿತ್ತು. ಫಲವನ್ನು ಮರಹತ್ತಿ ಕೀಳುವುದು ಸಾಧ್ಯವಿರಲಿಲ್ಲ. ಅವೇ ಮಾಗಿ ತೊಟ್ಟುಕಳಚಿ ಉದುರಿದಾಗ ಹೆಕ್ಕಿಕೊಳ್ಳಬೇಕಿತ್ತು.

ಸಿಹಿಯಾದ ಸುವಾಸನೆಯ ಬಾದಾಮಿ ಹಣ್ಣು. ದೊರೆಸ್ವಾಮಿಯವರನ್ನು ನೋಡಿದಾಗೆಲ್ಲ ಆ ಮರ ನೆನಪಿಗೆ ಬರುತ್ತಿತ್ತು. ವ್ಯತ್ಯಾಸವಿಷ್ಟೇ. ದೊರೆಸ್ವಾಮಿ ಅವರಿಂದ ಅನುಭವ ಚಿಂತನೆ ಪ್ರತಿರೋಧಗಳ ಹಣ್ಣನ್ನು ಪಡೆಯಲು, ಮರವೇರುವ ಕಷ್ಟ ಪಡಬೇಕಿರಲಿಲ್ಲ. ಚಿಕ್ಕಮಕ್ಕಳೂ ಕೈಚಾಚಿ ಕಿತ್ತುಕೊಳ್ಳುವಂತೆ ಅದು ತನ್ನ ಕೊಂಬೆಯನ್ನು ನೆಲಕ್ಕೆ ಬಾಗಿಸಬಲ್ಲದಾಗಿತ್ತು.

ಶಶೀಧರ್‌ ಭಾರಿಘಾಟ್

ಹೆಚ್. ಎಸ್.ದೊರೆಸ್ವಾಮಿ ಅವರು ನಮ್ಮ ಶಾಲೆಯ ( ಕೋಟೆ ಪ್ರೌಢಶಾಲೆ) ಹಿರಿಯ ವಿದ್ಯಾರ್ಥಿ. ಕೋಟೆ ಪ್ರೌಢಶಾಲೆಯ ಶತಮಾನೋತ್ಸವದ ಸಂದರ್ಭ ದಲ್ಲಿ (2೦೦5)ಮೊದಲ ಬಾರಿಗೆ ಶ್ರೀಯುತರನ್ನು ಭೇಟಿಮಾಡುವ ಸದವಕಾಶ ದೊರೆಯಿತು. ಆಗಿನಿಂದ ನಮ್ಮ ಶಾಲೆಯ ಹಲವಾರು ಕಾರ್ಯಕ್ರಮಗಳಿಗೆ ಬಂದರು. ಶಾಲೆಯ ಬಗ್ಗೆ ಅಪಾರ ಪ್ರೀತಿ, ಅಭಿಮಾನ.‌ ಮುಂದೆ ಹಲವು ಸಂದರ್ಭಗಳಲ್ಲಿ ಅವರನ್ನು ಭೇಟಿಮಾಡುವ ಅವಕಾಶ ಇರುತ್ತಿತ್ತು. ಅವರ ಜನ್ನದಿನದಂದು ಪ್ರತಿವರ್ಷ ಅವರ ನಿವಾಸಕ್ಕೆ ಹೋಗುವ ಪರಿಪಾಠ ಮೊದಲಾಯಿತು.

ಕರ್ನಾಟಕ ಏಕೀಕರಣ ಕುರಿತಂತೆ ಒಂದು ಸಾಕ್ಷ್ಯ ಚಿತ್ರಕ್ಕಾಗಿ ಅವರನ್ನು ಸಂದರ್ಶಿಸುವ ಸಂದರ್ಭದಲ್ಲಿ ಅವರ ಸ್ವಾತಂತ್ರ್ಯ ಹೋರಾಟದ ಅನುಭವ, ಪತ್ರಕರ್ತರಾಗಿ ಅವರ ಅನುಭವ, ಅವರಲ್ಲಿನ ಅಪಾರ ನೆನಪಿನ ಶಕ್ತಿ ಪರಿಚಯವಾಯಿತು. ನಿರಂತರ ಹೋರಾಟ, ಅವಿರತವಾಗಿ ಕರ್ನಾಟಕದ ಉದ್ದಗಲಕ್ಕೂ ಸಂಚರಿಸುತ್ತಾ ಎಲ್ಲರಲ್ಲೂ ಸ್ಪೂರ್ತಿ ತುಂಬುತ್ತಿದ್ದ ಅವರ ಚಲನಶೀಲ ಸ್ವಭಾವ ಎಲ್ಲರಿಗೂ ಮಾದರಿ. ಗೌರಿಲಂಕೇಶ್, ಪ್ರೊ.ಕಲಬುರ್ಗಿಯವರ ಹತ್ಯೆ ಖಂಡಿಸಿ ನಿರಂತರ ಹೋರಾಟ, ರೈತ ಕಾರ್ಮಿಕರ ಹೋರಾಟ, ಆಳುವ ಸರ್ಕಾರಗಳ ಭ್ರಷ್ಟಾಚಾರದ ವಿರುದ್ಧದ ಹೋರಾಟಗಳಲ್ಲಿ ವಯಸ್ಸು, ಆಯಾಸ, ಅನಾರೋಗ್ಯಗಳನ್ನು ಲಕ್ಕಿಸದೆ ಯುವಕರನ್ನು ನಾಚಿಸುವಂತೆ ಪಾಲ್ಗೊಳ್ಳುತ್ತಿದ್ದ ಪರಿ ಅವರಿಗಿದ್ದ ಸಾಮಾಜಿಕ ಬದ್ಧತೆ ಹಾಗು ದೇಶದ ಬಗ್ಗೆ ಇದ್ದ ಅಪಾರ ಪ್ರೀತಿಯನ್ನು ತೋರುತ್ತದೆ.

ತೀರ ಇತ್ತೀಚಿನವರೆಗು ನ್ಯಾಯಪಥ ವಾರಪತ್ರಿಕೆ ಗೆ ಲೇಖನಗಳನ್ನು ಬರೆಯುತ್ತಿದ್ದ ಅವರ ಲೇಖನಿ ಇಂದಿನಿಂದ ತನ್ನ ಕ್ರಿಯೆಯನ್ನು ನಿಲ್ಲಿಸುತ್ತಿದೆ. ಕರ್ನಾಟಕದ ಜನಪರ ಹೋರಾಟದ ಮುಂದಿನ ದಿನಗಳಲ್ಲಿ ಅವರ ಗೈರುಹಾಜರಿ ಎಲ್ಲರನ್ನೂ ಕಾಡಲಿದೆ.ಹೋಗಿ ಬನ್ನಿ ಸಾರ್, ನಿಮ್ಮ ಚೈತನ್ಯ ಇಂದಿನವರಿಗೆ ಮಾರ್ಗದರ್ಶನ ನೀಡಲಿ. ಗೌರವಪೂರ್ವಕ ಸಂತಾಪಗಳು ಹಾಗು ಭಾರವಾದ ಹೃದಯದ ವಿದಾಯ, ಶ್ರದ್ಧಾಂಜಲಿ ನಿಮಗೆ.

ಅನಭಿಷಿಕ್ತ ದೊರೆ

ಕೆ ರಾಜಕುಮಾರ್

103ರ ಹಿರಿಯ ಚೇತನ. ಉಸಿರಿರುವವರೆಗೂ ಎಲ್ಲ ಜನಾಂದೋಲನಗಳ ಮುಂಚೂಣಿಯಲ್ಲಿ ಇರುತ್ತಿದ್ದರು. ನೇತಾರ ಎಂಬುದಕ್ಕೆ ನಿರ್ವಚನದಂತಿದ್ದರು. ತಾವು ಭಾಗವಾಗಿರುವ ಸಾಮಾಜಿಕ, ರಾಜಕೀಯ ವ್ಯವಸ್ಥೆಯನ್ನು ಇಡಿಯಾಗಿ ಶುದ್ಧೀಕರಿಸಬೇಕೆಂದು ಹಟ ತೊಟ್ಟವರು. ಅಹಮಿಕೆ ಇರಲಿಲ್ಲ. ನಾನತ್ವದಿಂದ ಬೀಗಿ, ಇತರರನ್ನು ಎಂದೂ ಕೀಳಾಗಿ ನಡೆಸಿಕೊಂಡವರಲ್ಲ. ಅವರು ಗಾಂಧೀವಾದಿ. ಆದರೆ ಗಾಂಧೀವ್ಯಾಧಿ ಎಂಬುದು ಅವರಿಗೆ ಸೋಕಿರಲಿಲ್ಲ! ಏಕೆಂದರೆ ಅವರು ಇತರರಂತೆ ಪ್ರಚಾರಪ್ರಿಯರಾಗಿರಲಿಲ್ಲ. ಅವರ ಮೂಲಕ ಪ್ರಚಾರ ಪಡೆಯಲು ಮಾಧ್ಯಮಗಳೇ ಹಿಂದೆ ಬೀಳುತ್ತಿದ್ದವು‌.

ಸಾಮಾನ್ಯವಾಗಿ ತೀರಾ ಹಿರಿಯ ವಯಸ್ಕರು ಅಗಲಿದಾಗ, ವಯಸ್ಸಾಗಿತ್ತು; ಪರವಾಗಿಲ್ಲ ಅಂತ ಅನಿಸುತ್ತದೆ. ಆದರೆ ದೊರೆಯಂತಿದ್ದ ಎಚ್.ಎಸ್. ದೊರೆಸ್ವಾಮಿ ಅವರು ಶತಾಯುಷಿಯಾಗಿದ್ದರೂ, ಅವರಂತಹ ಪ್ರೇರಕ ಶಕ್ತಿ ನಮ್ಮ ನಡುವೆ ಇನ್ನೂ ಇರಬೇಕಿತ್ತು; ನಮ್ಮನ್ನು ಮುನ್ನಡೆಸಬೇಕಿತ್ತು, ಅಗಲಬಾರದಿತ್ತು ಎಂದೆನಿಸುತ್ತಿದೆ. ಅವರು ಸೋಗಲಾಡಿಯಲ್ಲ; ಆಷಾಢಭೂತಿ ಆಗಿರಲಿಲ್ಲ. ಅವರು ಸರಳತೆ, ಸಜ್ಜನಿಕೆಗಳ ರಸಸಂಗಮ. ದೊರೆತನದಿಂದ ಬೀಗಿದ್ದೇ ಇಲ್ಲ. ಎಚ್.ಎಸ್. ದೊರೆಸ್ವಾಮಿ ಕರ್ನಾಟಕದ ಅನಭಿಷಿಕ್ತ ದೊರೆ. ಅವರೊಂದಿಗಿನ ಒಡನಾಟ ಹೃದಯಂಗಮ. ಒಳ್ಳೆಯ ಬರೆಹಗಾರ. ಪ್ರಾಮಾಣಿಕ ಪ್ರಕಾಶಕರಾಗಿದ್ದರು. ಇಡೀ ಬದುಕು ಖುಲ್ಲಂ ಖುಲ್ಲಾ; ಪಾರದರ್ಶಕ.

ಅವರ ಭೌತಿಕ ಎತ್ತರವನ್ನು ಎಲ್ಲರೂ ಬಲ್ಲರು. ಬೌದ್ಧಿಕವಾಗಿಯೂ ಅಷ್ಟೇ ಎತ್ತರದಲ್ಲಿದ್ದವರು. ಅವರ ಮಾತಿಗೂ, ಕೃತಿಗೂ ಎಂದೂ ಅಂತರವಿರಲಿಲ್ಲ. ಅವರದು ಆದರ್ಶದ ಶುಷ್ಕ ಬೋಧನೆಯಲ್ಲ. ಅದನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಮೆರೆದವರು. ವಾನಪ್ರಸ್ಥಾಶ್ರಮ, ಸನ್ಯಾಸಾಶ್ರಮ ಯಾವುದರ ಕುರಿತೂ ಯೋಚಿಸಿದವರಲ್ಲ. ನಾಡಿಯ ಕಡೆಯ ಬಡಿತವಿರುವವರೆಗೆ, ನಂಬಿದ ಧ್ಯೇಯ, ತತ್ತ್ವ, ಸಿದ್ಧಾಂತಗಳಿಗೆ ಬದ್ಧರಾಗಿದ್ದವರು. ನೂರು ದಾಟಿದ ಅನಂತರವೂ, ಆಲಸ್ಯವನ್ನು ಹತ್ತಿರಕ್ಕೆ ಬಿಟ್ಟುಕೊಂಡವರಲ್ಲ. ಅದರೊಂದಿಗೆ ಶಾಶ್ವತವಾಗಿ ಟೂ ಬಿಟ್ಟು ಕ್ರಿಯಾಶೀಲತೆಯ ಕೈಹಿಡಿದು ಬಿರಬಿರನೆ ಹೆಜ್ಜೆ ಹಾಕಿದವರು. ಕರೆದ ಚಳವಳಿಗಳಿಗೆ ಹೋಗಿ ಹಾಜರಿ ಹಾಕುತ್ತಿದ್ದರು. ಅವರು ತಾವೇ ಬದಲಾವಣೆಯ ಗಾಳಿಯಾಗಿ ಬೀಸುತ್ತಿದ್ದರು!

ಅವರದು ಎಂದೋ ಗತಿಸಿಹೋದ ಸ್ವಾತಂತ್ರ್ಯ ಹೋರಾಟದ ಕೇರಾಫ಼್ ವಿಳಾಸವಲ್ಲ. ನೆಲ, ಜಲ, ನುಡಿ, ಗಡಿ, ಪರಿಸರ, ಅಕ್ರಮ ಭೂ ಆಕ್ರಮಣ ವಿರೋಧಿಸಿ ಹೂಡುತ್ತಿದ್ದ ಆಂದೋಲನಗಳ ನೇತೃತ್ವ. ವರ್ತಮಾನದ ಪ್ರತಿ ಜ್ವಲಂತ ವಿಷಯಕ್ಕೂ ತುಡಿವ ಮನಸ್ಸು. ಆ ಹೋರಾಟಗಳು ತಾರ್ಕಿಕ ಅಂತ್ಯ ಕಾಣುವವರೆಗೆ ವಿರಮಿಸುತ್ತಿರಲಿಲ್ಲ.

ಮಂಡೂರನ್ನು ಕಸಮುಕ್ತವಾಗಿಸಿದ ಕೀರ್ತಿ ಅವರಿಗೇ ಸಲ್ಲುತ್ತದೆ. ಅವರು ಹೋರಾಟಕ್ಕೆ ನಿಂತರೆ ಚಂಡೆ ಮದ್ದಳೆ ಒಟ್ಟಿಗೆ ಬಾರಿಸಿದಂತೆ. ರಾಜಿ, ಕಬೂಲ್ ಇಲ್ಲವೇ ಇಲ್ಲ. ಇವರು ಚಳವಳಿಗಳಿಗೆ ಹೀಗೆ ಬಂದು ಕ್ಯಾಮೆರಾಗಳಿಗೆ ಮುಖತೋರಿ, ಬೇರೇನೋ ಕೆಲಸವಿದೆ ಎಂದು ಹಾಗೆ ಹೊರಡುವ ಪೈಕಿಯವರಲ್ಲ. ಚಳವಳಿಯೇ ಅವರ ಪೂರ್ಣಾವಧಿ ಕಾರ್ಯ. ಅವರು ಬದುಕನ್ನು ಸಾರ್ವಜನಿಕ ಸೇವೆಗೆ ಇಡಿಯಾಗಿ ಮುಡುಪಿಟ್ಟ ಬಗೆ ಹೀಗೆ. ವೈಚಾರಿಕ, ಪ್ರಗತಿಪರ ಆಲೋಚನೆ, ಚಿಂತನೆಗಳ ಪ್ರಖರ ಪ್ರತಿಪಾದಕ. ಅವರು ನುಡಿದರೆ, ವ್ಯವಸ್ಥೆ ನಡುಗುತ್ತಿತ್ತು. ಸೈದ್ಧಾಂತಿಕವಾಗಿ ಅತ್ಯಂತ ಖಚಿತ ನಿಲುವು ಅವರದಾಗಿರುತ್ತಿತ್ತು.

ನಮ್ಮ ಕಾಲದಲ್ಲಿ ಹೀಗಿರಲಿಲ್ಲ, ಕಾಲ ಕೆಟ್ಟು ಹೋಯಿತು ಎಂದು ಹಲುಬಿದವರಲ್ಲ‌. ವರ್ತಮಾನವನ್ನೂ ತಮ್ಮದೇ ಕಾಲ ಎಂದು ನಂಬಿದ್ದವರು! ಅವರು ಈ ನೆಲದ ಮರೆಯ ನಿಧಿಯಾಗಿದ್ದವರು. ದೊರೆತನ, ಸ್ವಾಮಿತ್ವ ಇವೆರಡರಿಂದ ದೂರವಿದ್ದರೂ, ಅವೆರಡನ್ನೂ ಒಳಗೊಂಡ ದೊರೆಸ್ವಾಮಿಯಾಗಿ ಎಲ್ಲರ ಎದೆಗಳಲ್ಲಿ ವಿರಾಜಮಾನರಾಗಿದ್ದರು.

ರಾಜ್ಯದ ಸಾಕ್ಷಿಪ್ರಜ್ಞೆ

ಕಳೆದ ಬಾರಿ ಕರೋನಾ ಲಾಕ್ ಡೌನ್ ನಡುವೆಯು ನಮ್ಮ ರಾಜ್ಯದ ಸಾಕ್ಷಿಪ್ರಜ್ಞೆಯಾಗಿರುವ ಶತಾಯಷಿ ಶ್ರೀ ಎಚ್.ಎಸ್ ದೊರೆಸ್ವಾಮಿ ಅವರನ್ನು‌ ಸಿಐಟಿಯು ರಾಜ್ಯ ಸಮಿತಿ ಪರವಾಗಿ ಅವರನ್ನು ಮನೆಯಲ್ಲಿ ಭೇಟಿ ಮಾಡಿ ಗೌರವಿಸಲಾಗಿತ್ತು.

ಅಂದು ದೊರೆ ಸ್ವಾಮಿಯವರು ಸುದೀರ್ಘವಾಗಿ ಕರ್ನಾಟಕದಲ್ಲಿ ಕಮ್ಯೂನಿಸ್ಟ್‌ ಪಕ್ಷದ ನಾಯಕತ್ವದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಬಳಿಕ ನಡೆಸಲಾದ ವಿದ್ಯಾರ್ಥಿಗಳ ಹೋರಾಟ,‌ ರೈತ ಕಾರ್ಮಿಕ ಚಳವಳಿಗಳು, ಮೈಸೂರು ಚಲೋ ಹೋರಾಟ, ಗೋವಾ ವಿಮೋಚನಾ ಚಳವಳಿ ಹಾಗೂ ನರಗುಂದ ರೈತ ಚಳವಳಿ ಮತ್ತು ಬೆಂಗಳೂರಿನ ಮೈಕೋ ಮತ್ತು‌ಸಾರ್ವಜನಿಕ ಉದ್ಯಮಗಳ ನೌಕರರು ನಡೆಸಿದ ಧೀರೋದಾತ್ತ ಹೋರಾಟಗಳು ಮತ್ತು ಅದಕ್ಕೆ ನಾಯಕತ್ವ ವಹಿಸಿದ್ದ ಹಲವು ನಾಯಕರುಗಳ ಕುರಿತಾಗಿ ಸುದೀರ್ಘವಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು.

ಇಂತಹ ಧೀಮಂತ ಮುಂದಾಳು ನಮ್ಮ ಕಾಲಘಟ್ಟದಲ್ಲಿ ಒಂದು ಸ್ಪೂರ್ತಿಯ ಸಂಕೇತವಾಗಿದ್ದರು ಮತ್ತು ನಮ್ಮೊಂದಿಗೆ ಇದ್ದರು ಎನ್ನುವುದೇ ಒಂದು ಹೆಮ್ಮೆಯ ಸಂಗತಿ.

ಸಿಐಟಿಯು ಮಾತ್ರವಲ್ಲ ನಾಡಿನುದ್ದಕ್ಕೂ ನಡೆದ ನೂರಾರು ಜನಪರ ಹೋರಾಟಗಳಿಗೆ ಪ್ರತ್ಯಕ್ಷವಾದ ಭಾಗವಹಿಸಿ ಜನತೆಯನ್ನು ಎಚ್ಚರಿಸುವ ಕೆಲಸವನ್ನು ತಮ್ಮ ಕೊನೆಯ ದಿನಗಳ ವರೆಗೂ ಅವರು ಮಾಡುತ್ತಾ ಆಳುವವರನ್ನು ಎಲ್ಲ‌ರೀತಿಯಿಂದಲೂ ಬಟಾಬಯಲು ಮಾಡುತ್ತಿದ್ದರು. ಇಂತಹ ಮೇರು ವ್ಯಕ್ತಿತ್ವವೂ ಈ ದುರಿತ ಕಾಲದಲ್ಲಿ ನಮ್ಮಿಂದ ‌ದೂರವಾಗಿದ್ದು ರಾಜ್ಯದ ಜನಚಳವಳಿಗಾದ ಅಪಾರ ‌ನಷ್ಟವಾಗಿದೆ
ಸಿಐಟಿಯು ರಾಜದಯತ ಸಮಿತಿ ಪರವಾಗಿ ಭಾವಪೂರ್ಣ ನಮನಗಳು.

‍ಲೇಖಕರು Avadhi

May 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: