ಗುಂಡುರಾವ್ ದೇಸಾಯಿ
ಹತ್ತನೆ ತರಗತಿಯ ಮಕ್ಕಳ ಮನಸ್ಥಿತಿಯ ಅಧ್ಯಯನದಲ್ಲಿ ತೊಡಗಿದ್ದೆ. ನಾಲ್ಕೈದು ವರ್ಷಗಳಿಂದ ನಾನು ಬಡ್ತಿ ಹೊಂದಿ ಹೋದ ಶಾಲೆಯಲ್ಲಿ ಶಿಕ್ಷಕರ ಕೊರೆತೆಯಿಂದ ಮಕ್ಕಳು ಬೋಧನೆಗೆ ಸರಿಯಾಗಿ ಸಿಕ್ಕದ ಸ್ಥಿತಿಯಲ್ಲಿದ್ದರು. ಹಿರಿಯ ಶಿಕ್ಷಕರು ಮೊದಲೆ ತಿಳಿಸಿದ್ದರು. ನನಗೆ ಪ್ರಯೋಗಗಳು ಮಾಡುವುದೆಂದರೆ ಖುಷಿ. ಪ್ರಾಥಮಿಕ ಹಂತದಲ್ಲಿ ವಿಶೇಷ ಮಕ್ಕಳ ಮೇಲೆ ಇಂತಹ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೆ. ಆದರೆ ಪ್ರೌಢಶಾಲೆಯಲ್ಲೂ ಯಶಸ್ವಿಯಾಗಬಹುದು ಎನ್ನುವುದು ನನ್ನ ಗ್ರಹಿಕೆಯಾಗಿತ್ತು. ಲಾಕಡೌನ್ ಅವಧಿಯಲ್ಲಿ ಮಕ್ಕಳು ಅಕ್ಷರ ಪ್ರಪಂಚದಿಂದ ದೂರವಾಗಿದ್ದರು..ಅದರಲ್ಲಿ ಹತ್ತನೆಯ ತರಗತಿ ಮಕ್ಕಳು..! ಕೇಳಬೇಕೆ..? ತರಗತಿಯ ಶಿಕ್ಷಕ ಜವಬ್ದಾರಿ ಬೇರೆ ನೀಡಿದ್ದರು.
ಕಾಲೇಜಿನ ಮೆಟ್ಟಿಲು ಹತ್ತುವ ಸನ್ನಾಹದಲ್ಲಿರುವ ಮಕ್ಕಳದು ಕಲ್ಪನಾ ಪ್ರಪಂಚ… ಅದರಲ್ಲಿ ಹತ್ತಾರು ಮಕ್ಕಳಿಗೆ ಮನೆಭೇಟಿ ಮಾಡಿ ಕೌನ್ಸಿಲಿಂಗ್ ಮಾಡಿ ಉತ್ತಮ ಅನ್ನೊ ಸ್ಥಿತಿಗೆ ತಂದೆ. ಆದರ ಒಬ್ಬವ ನಾಗ ಎನ್ನುವನನ್ನು ಮಾತ್ರ ನನ್ನಿಂದ ಏನು ಮಾಡಲಾಗಲಿಲ್ಲ. ಎಷ್ಟು ಕೌನ್ಸಿಲಿಂಗ್ ಮಾಡಿದರೂ ಉಪಯೋಗವಾಗಲಿಲ್ಲ.. ಅವನದೆ ದೊಡ್ಡ ಸಮಸ್ಯೆಯಾಗಿತ್ತು. ಮುಖ್ಯಗುರುಗಳು ‘ಈ ವರ್ಷ ಎಲ್ಲಾ ಮಕ್ಕಳು ಪರೀಕ್ಷೆ ಕೂಡೊ ಹಾಗೆ ಮಾಡಬೇಕು ಮತ್ತು ಸೆಂಟ್ ಪರ್ಸೆಂಟ್ ಫಲಿತಾಂಶ ಕೊಡಬೇಕು’ ಎಂದು ಬೇರೆ ಕಟ್ಟಪ್ಪಣೆ ಮಾಡಿದ್ರು.
ಒಂದು ಬಾರಿ ತರಗತಿಯಲ್ಲಿ ಶಿಕ್ಷಣದ ಮಹತ್ವ ತಿಳಿಸಿಕೊಡುತ್ತಾ ಎಲ್ಲರನ್ನೂ ಮಾತಾಡಿಸುವಂತೆ ಶಾಲೆಗೆ ಬಂದಿದ್ದ ನಾಗನನ್ನು ಮಾತಾಡಿಸಿದೆ. ಹತ್ತನೆ ತರಗತಿಗೆ ಬರೋವಷ್ಟರಲ್ಲಿ ಲೋಕಜ್ಞಾನವನ್ನು ತಿಳಿದುಕೊಂಡಿದ್ದವ.. ಟ್ರ್ಯಾಕ್ಟರ್ ಓಡಿಸುವದರಲ್ಲಿ, ಮಡಿಕೆ ಕುಂಟಿ ಹೊಡೆಯುವುದರಲ್ಲಿ ಎಕ್ಸಪರ್ಟ ಆಗಿದ್ದ.. ಉತ್ತೋದು ಬಿತ್ತೋದು ಕಲಿತುಕೊಂಡಿದ್ದ.. ಅವನಿಗೆ ಬರದ ವಿದ್ಯೆಗಳೆ ಉಳಿಕೊಂಡಿರಲಿಲ್ಲ ಓದೋದನ್ನು ಬಿಟ್ಟು..! ಅಂಗಡಿ ಬೇರೆ ಅವರಪ್ಪ ಇಟ್ಟುಕೊಂಡಿದ್ದ.. ನಾನು ʻಯಾಕೋ ಸರಿಯಾಗಿ ಶಾಲೆಗೆ ಬರುತ್ತಿಲ್ಲ ಹೀಗಾದರೆ ಹೇಗೆ?’ ಎಂದು ಕೇಳಿದೆ.

ಹಿಂದು ಮುಂದು ನೋಡದೆ ನನಗ ‘ಓದಾಕ ಮನಸ್ಸಿಲ್ಲ ಸರ್ ?’ ಅನ್ನೋದೆ
ನನಗೂ ಒಮ್ಮೆಲೆ ಹೀಗೆ ಎಲ್ಲ ಮಕ್ಕಳ ಎದುರು ಉತ್ತರ ಕೊಟ್ಟಾಗ ಮುಜುಗರ ಆಯ್ತು.. ಸಿಟ್ಟು ಬಂದಿದ್ದರೂ ತಡೆದುಕೊಂಡು ‘ಅಲ್ಲೋ ಹೀಗಂದ್ರ ಹ್ಯಾಗೆ..ವಿದ್ಯೆ ಇಲ್ಲದೆ ಬದುಕೋದು ಬಹಳ ಕಷ್ಟಪ’ ಎಂದೆ.
‘ನಮ್ಮಪ್ಪ ಅಮ್ಮ ಬದಕಾಕಕತಾರಲ್ಲ ಸರ್’
‘ಉತ್ತಮವಾದ ಭವಿಷ್ಯಕ್ಕೆ ಓದು ಅನಿವಾರ್ಯ ತಮ್ಮಾ’
‘ಹಾಗೇನಿಲ್ಲ ಸರ್ ನಮ್ಮಪ್ಪ ಓದ್ಯಾನೇನ್ರಿ. ಓದೋದು ಇತ್ತೀಚಿಗೆ ಬಂದಿದ್ದು ಓದಲಾರದವರು ಓದಿದವರಗಿಂತ ಅರಾಮ ಇದ್ದಾರ’
ಅವನ ಮಾತಿಗೆ ಬೆರಗಾದೆ ‘ಈಗ ನಿನಗ ತಿಳಿಯಲ್ಲಪ…ಹುಚ್ಚು ಮನಸ್ಸು..ಒಳ್ಳೆಯದರ ಬಗ್ಗೆ ಯೋಚಸಲ್ಲ…ಹಾಂಗೆಲ್ಲ ಮಾತನಾಡಬಾರದೊ?’
‘ಸರ್….ನನಗ ಎಲ್ಲಾ ತಿಳಿತಾದರಿ.. ಬದುಕು ಏನು ಅಂತ ಅರ್ಥ ಮಾಡಿಕೊಂಡಿನಿ.. ಟ್ರಾಕ್ಟರಿ ಹೊಡಿಯೋಕ ಬರತ್ರಿ. ಹೊಲದ ಬದುಕು ಮಾಡೋದ್ರಗ ಪರಫೆಕ್ಟ ಇದ್ದಿನ್ರಿ.. ನನಗ ಬದುಕಾಕ ದಾರಿ ಗೊತ್ತದರಿ’
‘ಅದು ಸರಿ ನಿನಗ ಲೈಸೆನ್ಸ ಬೇಕಾದ್ರ ಎಸ್.ಎಸ್.ಎಲ್ ಸಿ ರ ಪಾಸಾಗಬೇಕಲ್ಲಪ್ಪ?’
‘ಎಸ್.ಎಸ್.ಎಲ್.ಸಿ ಆಗಬೇಕಂತೇನು ಇಲ್ರಿ… ಏಳನೆ ಕ್ಲಾಸು ಪಾಸಾಗಿದ್ರು ಸಾಕು..ಶಾಲಿ ಹೋಗಲಾರದವರು ಲೈಸನಸ್ ತೆಗೆಸಿಕೊಂಡಿದ್ದನ್ನೂ ನೋಡಿನ್ರಿ’ ಪುಂಖಾನುಪುಂಖವಾಗಿ ಉತ್ತರಿಸುತ್ತಿದ್ದ ಅವನ ಮಾತುಗಳಿಗೆ ಬೆರಗಾಗಿ ಸುಧಾರಿಸಿಕೊಂಡು ‘ಇರಲಿ ಬಿಡು.. ಕಾಲ ಹಿಂಗ ಇರಲ್ಲ..ಮುಂದೆ ನೀನು ರಾಜಕೀಯದಾಗ ಹೋಗಬಹುದು.. ನೀನು ಯಾವುದೊ ಪಂಚಾಯತಿ ಮೆಂಬರ್, ಅದೃಷ್ಟ ಇದ್ರೆ ಪಂಚಾಯತಿ ಅಧ್ಯಕ್ಷ ಆಗಬಹುದು. ಆಗ ಓದಾಕ ಗೊತ್ತಾಗದಿದ್ರ ಸರಿ ಇರುತ್ತೇನೊ..?’
‘ನಾನು ರಾಜಕೀಯದಾಗ ಹೋಗಲ್ರಿ’
‘ಯಾಕೋ …?’
‘ನಮ್ಮ ಕುಟುಂಬದಾಗ ಯಾರೂ ರಾಜಕೀಯದಾಗ ಇಲ್ರಿ’
‘ಅಂದ್ರೆ…?’
‘ನಾವು ಕಿಂಗ್ ಮೇಕರ್ ರಿ ಹಾಗಾಗಿ… ನಾವು ಎಷ್ಟೊತ್ತು ಇದ್ರೂ ದುಡಿದೆ ತಿಂತಿನ್ರಿ’
‘ಅಯ್ಯೊ …..! ಇದು ಎಂತಹ ವಿಚಿತ್ರ ಕೇಸಪಾ?’ ಅನಿಸ್ತು.. ಮುಂದುವರೆದು ಕೊನೆಗೆ ‘ಅಲ್ಲಪ ಈಗ ಲಗ್ನ ಮಾಡಿಕೊಬೇಕಾದ್ರೂ ಓದು ಕೇಳತಾರ.. ಅದಕ್ಕಾದ್ರೂ ಓದಬೇಕಲ್ಲ ?’ ಎಂದು ದೊಡ್ಡ ಶಾಕ್ ಕೊಟ್ಟೆ.. ಎಲ್ಲ ಮಕ್ಕಳು ಮುಸಿ ಮುಸಿ ನಕ್ಕರು.
‘ಅದರದ್ದು ಚಿಂತಿ ಇಲ್ಲ ಸರ್.. ನನ್ನದು ಸಣ್ಣ ವಯಸ್ಸಿನ್ಯಾಗ ಫಿಕ್ಸ ಆಗಿಬಿಟ್ಟದರಿ..’ ಅಂತ ಅನ್ನಬೇಕೆ!
ಸಾಮ ಬೇಧ ದಾನೋಪಾಯಗಳೆಲ್ಲ ಮಂಡಿಯೂರಿ ಕುಳಿತವು.. ದೊಡ್ಡಮಗು ದಂಡಪ್ರಯೋಗ ಸಾಧು ಅಲ್ಲಲ. ನಾನು ಸುಸ್ತಾದೆ
ಮುಖ್ಯಗುರುಗಳಿಗೂ ತಿಳಿಸಿದೆ ‘ಹೌದುರಿ ಇಲ್ಲಿಯ ಮಕ್ಕಳೆ ಹಾಗೆ ವಿಚಿತ್ರ ಮನಸ್ಥಿತಿಯವರು’ ಎಂದ್ರು. ‘ಆದರೆ ನೀವು ಪ್ರಯತ್ನ ಬಿಡಬಾರದು’ ಎನ್ನುವ ಎಚ್ಚರಿಕೆನೂ ಕೊಟ್ಟರು. ನನಗೆ ತಲಿಯಾಗ ಕೊರೆಯಕಾ ಹತ್ತಿತು.. ಸರಣಿ ಪರೀಕ್ಷೆ ನಡೆದಿದ್ದವು.. ನಾಗ ಪರೀಕ್ಷಾ ಮಾತ್ರ ತಪ್ಪಸ್ತಿರಲಿಲ್ಲ. ಅವತ್ತು ಬಂದ..

ನಾನು ಸಹಜವಾಗಿ ಮೊನ್ನೆ ಹಾಗೆಲ್ಲ ಹೇಳಿದಿ ಇವತ್ತು ಪರೀಕ್ಷೆಗೆ ಬಂದೆಲ್ಲೋ ಎಂದೆ.. ‘ಹೋಗಂದ್ರ ಹೋಗಿ ಬೀಡ್ತೀನಿ ಸರ್’ ಎಂದ
ಅಲ್ಲಮಪ್ರಭುಗಳು ಹೇಳಿದ ಮಾತುಗಳು ನೆನಪಾದವು.. ಕಲಿಕಾಲವಲ್ಲವೆ…? ‘ಬೇಡಪ್ಪ ಮಗನೆ ಬಂದಿದ್ದೀಯಾ ಪರೀಕ್ಷಾ ಬರೆದೆ ಹೋಗು’ ಎಂದು ಸಮಾಧಾನಿಸಿದೆ. ಅವತ್ತೆ ಕೊನೆ ತಿರುಗಿ ಶಾಲೆ ಕಡೆ ಹಾಯಲಿಲ್ಲ. ನನಗೆ ಹಾಗೆ ಕೇಳಬಾರದಿತ್ತು ಎನ್ನುವ ಸಂಕೋಚ ಕಾಡತೊಡಗಿತು. ಏನೆಲ್ಲ ಪ್ರಯತ್ನಗಳಾದರೂ ನಾಗ ತಲೆಹಾಕಲಿಲ್ಲ. ಅವನ ಕೇಸ್ ಸ್ಟಡಿ ಮಾಡಿದೆ. ಮನೆಯಿಂದ ಉತ್ತಮ ಸ್ಥಿತಿಯಲ್ಲಿದ್ದವರು.. ತಾಯಿ ದೊಡ್ಡ ಮಗ ಅಂತ ಅಚ್ಚಾ ಮಾಡಿ ಬೆಳೆಸಿದ್ದಳು. ಕಲಿಯಲಿಕ್ರ ಕಲಿಲಿಲ್ಲ ಅವನಿಗೆ ನೋವು ಮಾಡಬಾದು ಅನ್ನೊ ಮನಸ್ಥಿತಿ. ಅಪ್ಪಗೆ ಮಗ ಓದಲಿ ಅಂತ ಆಸೆ…ಆದರೆ ಮನೆಯಲ್ಲಿ ಅವನ ಆಟ ನಡಿತಿರಲಿಲ್ಲ. ಅಷ್ಟರೊಳಗ ನನಗೂ ಒಂದು ಸಣ್ಣ ಸುಳಿವು ಅವರಪ್ಪನೆ ಕೊಟ್ಟ..
ಒಂದು ದಿನ ಊರಲ್ಲಿ ಹೇಳಿಕೆ ನಡೆಯುತ್ತಿದ್ದ ಸ್ಥಳಕ್ಕೆ ಹೋದೆ. ಬಹಳಷ್ಟು ಊರಿನ ಪರೂರಿನ ಎಲ್ಲ ಜನ ಸೇರಿದ್ದರು. ಮೇಷ್ಟ್ರು ಬಂದಾರಂದ್ರ ಸ್ವಲ್ಪ ವಿಶೇಷ ಗೌರವ ಇರುತ್ತಲ್ಲ… ನನ್ನ ಕರುಕೊಂಡು ಹೋದ್ರು ಊರಿನ ಪರಿಚಯದ ಮಂದಿ.
‘ಪಾಪ ಸಣ್ಣ ವಯಸ್ಸಿಗೆ ಮಾಷ್ಟ್ರಗೆ ಏನು ಆಗ್ಯಾದೊ?’ ‘ಏನು ಕಾಡಕತಾದೊ…?’ ‘ಏನ್ ನೌಕರಿ ಇದ್ರೇನು ಸಮಸ್ಯೆಗಳು ಎಲ್ಲರಿಗೂ ಇದ್ದಿದ್ದವಾ?’ ಅನ್ನುವಂತಹ ಗುಸುಗುಸು ಮಾತುಗಳು ಕಿವಿಗೆ ಬೀಳುತ್ತಿದ್ದವು.
ಅಮ್ಮಾ ‘ಸರ್ ಬಂದಾರ ….. ಅವರ ಸಮಸ್ಯೆ ಬಗೆಹರಿಸಿ ಕಳಿಸಿ ಬಿಡೋಣ’ ಎಂದ ಸಹಾಯಕ ಗದ್ಗಿ ಹಾಕಿ ಕುಳಿತಿದ್ದ ತಾಯಿಗೆ. ‘ಹ್ಞುಂ.. ಹ್ಷೂಂ…ಹಾಂ…ಹಾಂ…’ ಎಂದು ಮೈಯಲ್ಲಿ ದೇವರು ಬಂದಹಾಗೆ ಆವಾಹಿಸಿಕೊಂಡು. ‘ಹೇಳಿ ಹೇಳಿ… ಏನು ನಿಮ್ಮ ಸಮಸ್ಯೆ ಆ ಮಾರೆಮ್ಮ ಎಲ್ಲಾ ನಿಮ್ಮ ಸಮಸ್ಯೆಗೆ ಪರಿಹಾರ ಕೊಡತಾಳ’ ಎಂದಳು ಪೀಠದಲ್ಲಿ ಕುಳಿತಿದ್ದ ತಾಯಿ.
ಎಲ್ಲರ ಕುತೂಹಲ ನನ್ನ ಕಡೆಗೆ. ಮಾಸ್ತರ ಸಮಸ್ಯೆ ತಿಳಿದುಕೊಳ್ಳಬೇಕೆನ್ನುವುದು. ನಿಶ್ಯಬ್ಧ. ‘ಅಮ್ಮ ನನ್ನ ಸಮಸ್ಯೆ ಅಲ್ಲ… ಒಂದು ಹುಡುಗ ಸಾಲಿಗೆ ಸರಿಯಾಗಿ ಬರುತ್ತಿಲ್ಲ.. ಈ ವರ್ಷ ೧೦ನೇ ತರಗತಿ ಹೆಡ್ ಮೇಸ್ಟ್ರು ಬೇರೆ ಈ ವರ್ಷ ಸೆಂಟ್ ಪರ್ಸೆಂಟ್ ರಿಜಲ್ಟ್ ಬರಲೆ ಬೇಕು ಅಂತ ಆದೇಶ ಮಾಡ್ಯಾರ..ಇನ್ನೂ ಎರಡು ತಿಂಗಳಿದೆ.. ಕೊನೆ ಹಂತ ಅದ. ಹೇಗಾದರೂ ಮಾಡಿ ಆ ಹುಡುಗನ್ನ ಬರೋ ಹಾಗೆ ಮಾಡಿ ತಾಯಿ ನಿಮಗ ಬೇಕಾದ್ದು ಮಾಡಸ್ತೀನಿ’ ಎಂದೆ

‘ಹೋ… ಹೋ….. ಖುಷಿಯಾತು ಅಮ್ಮಗೆ ನಿಮ್ಮ ಕಾಳಜಿ ನೋಡಿ. ನಿಮ್ಮಿಂದ ಏನು ಬ್ಯಾಡ..ಒಳ್ಳೆಯದಾಗುತ್ತಾ ಆ ಹುಡುಗ ಬರತಾನೆ… ಯಾರು ಹೇಳಿ ಆ ಹುಡುಗ ಎಲ್ಲಿದ್ದಾನೆ’ ಎಂದ್ಲು
‘ಅಮ್ಮ ಆ ಹುಡುಗ ನಿಮ್ಮ ಮಗನೆ… ನಿಮ್ಮ ಮನೆಯಲ್ಲೆ ಇರುತ್ತಾನೆ…’ ಎಂದೋಡನೆ ಅಮ್ಮಗ ದಿಕ್ಕ ತೋಚಲಿಲ್ಲ… ಬಂದೋರೆಲ್ಲ ಗುಸುಗುಸು ಮಾತಾಡಕತಿದ್ರು… ಒಂದು ಕಣ್ಣಿನಿಂದ ನೋಡಿದ ಆ ತಾಯಿ ನನ್ನ ಮರ್ಯಾದೆಗೆ ಪೆಟ್ಟು ಅಂತ ನಿಚ್ಛಳಾಗಿ ‘ಮೇಷ್ಟ್ರೆ ಚಿಂತಿ ಮಾಡಬೇಡಿ… ಅಮ್ಮನ ಅಪ್ಪಣೆ ಆಗ್ಯಾದ ಅವನಿಗೆ ಗುರು ಎಂಟನೆ ಸ್ಥಾನದಾಗ ಇದ್ದು ಕಾಡತಿದ್ದ… ನಾಳೆನ ಮಂಗಳ ಪ್ರವೇಶ ಆಗತಾದ ಅವನ ಜಾತಕದಾಗ. ನಾಡಿದ್ದು ಅವ ಶಾಲಿಗೆ ಬರತಾನ.. ನೀವು ಅನಕೊಂಡಂಗ ಆಗುತ್ತ ನಡ್ರಿ’ ಅಂದ್ಲು.
‘ಅಮ್ಮ ನನಗೂ ಒತ್ತಡ ಅದ… ನಾಗ ಬರಲಿಕ್ರ ಮತ್ತೆ ಬರಾವ’ ಅಂದೆ… ‘ಅಮ್ಮಂದು ಒಂದೆ ಮಾತು..ಮುಗಿತು.. ನಿಶ್ಚಿಂತೆಯಿಂದ ನಡೆಯಿರಿ’ ಎಂದ್ಲು.. ಅವತ್ತೆ ಕೊನೆ ಆ ನಾಗ ತಿರುಗಿ ಕ್ಲಾಸನಲ್ಲಿ ಮಾತಾಡಲಿಲ್ಲ, ಪರೀಕ್ಷೆ ಬಿಡಲಿಲ್ಲ… ನಮ್ಮ ಮುಖ್ಯಗುರುಗಳ ಅಸೆಗೂ ಸೋಲಾಗಲಿಲ್ಲ…






0 Comments