ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು.
ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಹಲವು ಕತೆ,ಕವಿತೆಗಳನ್ನು ಬೆಂಗಳೂರಿನ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಪೂರಕ ಪಠ್ಯಗಳಾಗಿ ಬಳಸಿಕೊಂಡಿದೆ.
ಇದೆ ಅವಧಿಯಲ್ಲಿ ಪ್ರಸಾರವಾದ ‘ಸೊಳ್ಳೆ ಫ್ತೆಂಡು ಒಳ್ಳೆ ಫ್ರೆಂಡು’ ಕೃತಿಗೆ ಜಿ.ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ, ಕಲಬುರಗಿ ಯ ಕನ್ನಡ ನಾಡು ಓದುಗರ ಹಾಗೂ ಲೇಖಕರ ಸರಕಾರಿ ಸಂಘದ’ ಉತ್ತಮಕಾದಂಬರಿ ಪ್ರಶಸ್ತಿ ದೊರಕಿದೆ.
ಪೆಣ್ಣತ್ತ ಖುಷಿಗೆ ಕಸಾಪದ ಕುಂಭಾಸ ಹಾಸ್ಯ ಸಾಹಿತ್ಯ ದತ್ತಿ ಗೌರವ, ಚಾರ್ಲಿ ಚಾರ್ಲಿ ವೇರ್ ಆರ್ ಯೂ ಕೃತಿಗೆ ಜನಸಿರಿ ಸಾಹಿತ್ಯ ಪ್ರಶಸ್ತಿ ದೊರಕಿದೆ. ಹಲವು ಪತ್ರಿಕೆಗಳಲ್ಲಿ ಇವರ ಕತೆ, ಕವಿತೆ, ನಾಟಕ, ಪ್ರಬಂಧ, ಹಾಸ್ಯ ಬರೆಹಗಳು ಪ್ರಕಟವಾಗಿವೆ.
ಭಾಗ – 7
ಮರುದಿನ ನನ್ನನ್ನು ನೋಡಿ “ಯಾಕಪ್ಪ ಕಣ್ಣು ಎಲ್ಲ ಕೆಂಪಾಗಿವೆ? ನಿದ್ದೆ ಮಾಡಿಲ್ಲೇನು?” ಎಂದಿತು ಕೈಟ್.
“ನೀನು ಸಿಟ್ಟುಮಾಡಿಕೊಂಡ್ರೆ ನನಗೆ ನಿದ್ದೆ ಹೇಗೆ ಬರಬೇಕು. ಯಾಕೆ? ಏನಾಯ್ತು, ನಾನೇನಾದ್ರೂ ತಪ್ಪು ಮಾತಾಡಿದ್ದೀನಾ?”
“ಮಾತಾಡಿದ್ದು ತಪ್ಪಲ್ಲ, ಈಗ ಯೋಚಿಸುತ್ತಿರೋದು ತಪ್ಪು”
“ಅರ್ಥ ಆಗಲಿಲ್ಲ”
“ಅಂತಹ ವಿಷಯ ತಲೆಯಲ್ಲಿ ಹೊಕ್ಕಂಡಾಗ ಹೇಗಾಗುತ್ತದೆ ಹೇಳು?”
“ಬಿಡಿಸಿ ಹೇಳು”
“ನೀನು ಗೆಳೆಯರನ್ನು ಕ್ಷಮಿಸಿದಿಯಲ್ಲ ಅದು ದೊಡ್ಡ ಗುಣ, ಆದರೆ ಯಾರನ್ನೊ ಇಂಪ್ರೆಸ್ ಮಾಡಬೇಕು ಏನೇನೊ ಮುಂದುವರೆಯಬೇಕು ಎಂದು ಬಯಸಿಯಲ್ಲ ಅದು ನಿನ್ನ ಕೆಟ್ಟ ಗುಣ, ನಿನ್ನ ಪ್ರತಿಭೆ ಹಾಳು ಮಾಡುವ ಗುಣ”
“ನಾನು ನಿನ್ನ ಮಾತು ಒಪ್ಪಲ್ಲ”
“ಈ ಟಿನೇಜಿಗೆ ಇಂತಹ ಒಳ್ಳೆ ವಿಚಾರ ಶಿಕ್ಷಕರೇ ಹೇಳಲಿ, ಅಪ್ಪ ಅಮ್ಮನೇ ಹೇಳಿದ್ರೂ ತಲೆಯಲ್ಲಿ ಹೋಗಲ್ಲ. ಗೆಳೆಯರ ಬಣ್ಣದ, ಹಾಳುಗೆಡಿಸುವ ಮಾತುಗಳು ಮಾತ್ರ ಹೋಗೋದು. ಹುಚ್ಚಕೋಡಿ ಮನಸು ಈ ಟೀನೇಜಿನ ವಯಸ್ಸು”
“ಗುರುಗಳೇ ಆಯ್ತು, ಮನೆಯವರೇ ಆಯಿತು ನಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳಲ್ಲ”
“ಎಕ್ಕುಂಡಿಯವರು ಹೇಳುವುದಿಲ್ಲವೇನು ‘ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ, ವ್ಯಾಮೋಹ ತೊರೆದು ಬಾಳಬೇಕು’ ಎಂದು. ಏ ಗುರು, ನಿಮಗೆ ತಿಳಿ ಹೇಳುವವರೆಲ್ಲಾ ಆ ವಯಸ್ಸು ಮೀರಿ ಬಂದವರು. ನಾವು ನಮ್ಮ ಲೋಕದಲ್ಲಿ ಮುಳುಗಿದರೆ ನಮ್ಮ ಕಾಲ ಮೇಲೆ ನಾವೆ ಕಲ್ಲು ಹಾಕಿಕೊಂಡ ಹಾಗೆ”
“ನೀನು ನನ್ನ ಅರಿತವನೆಂದರೆ ನೀನು ಉಪದೇಶ ಮಾಡುತ್ತಿರುವೆ?”
“ನಿನ್ನ ಗೆಳೆಯರ ಹಾಗೆ ಪಾರ್ಟಿ ತೊಗೊಂಡು ನಿನ್ನಗೆ ಮಂಕುಬೂದಿ ಎರಚಿ ನಿನ್ನ ಓಟಕ್ಕೆ ನಿಲ್ಲುವನಂತೂ ನಾನಲ್ಲ”
“ಆದರೂ. . .”
“ಇರಬೇಕು ಇರದಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ ಎಂದು ಹೆಚ್ ಎಸ್.ವಿ ಅವರು ಹೇಳಲಿಲ್ಲವೇ. ಹಾರ್ಮೋನ್‌ಗಳಲ್ಲಿ ವ್ಯತ್ಯಾಸ, ದೇಹದ ದೈಹಿಕ ಬದಲಾವಣೆಯಾಗುವ ಈ ವಯಸ್ಸಿನಲ್ಲಿ ಇಂದ್ರಿಯಗಳು ಏನೇನೊ ಬಯಸುತ್ತವೆ. ಎಲ್ಲರಲ್ಲೂ ಆಕರ್ಷಿಸಬೇಕು, ವಿಭಿನ್ನವಾಗಿ ಗುರುತಿಸಿಕೊಳ್ಳಬೇಕು, ಇನ್ನೊಬ್ಬರನ್ನು ಪ್ರಭಾವಿಸಬೇಕು ಅನ್ನುವುದು ಕಾಮನ್. ಅದಕ್ಕಾಗಿ ನಿಮ್ಮ ಗೆಟ್‌ಪ್ ಎಲ್ಲಾ ಚೇಂಜ್ ಆಗುತ್ತದೆ. ನಿಮ್ಮ ದೇಹ ಬದಲಾದಂಗೆ ನಿಮ್ಮ ಹೇರ್ ಸ್ಟೈಲ್, ಡ್ರೆಸ್‌ಸ್ಟೈಲ್, ಬಾಡಿ ಲಾಂಗ್ವೇಜ್, ಮಾತು, ನಡುವಳಿಕೆ ಒಂದಾ ಎರಡಾ. ಎಲ್ಲವೂ ಬದಲಾಗುತಾವ. ನೋಟ, ಸ್ಪರ್ಶ, ಮಾತು ಈ ವಯಸ್ಸನ್ನು ಹಾಳು ಮಾಡುವ ಅಂಶಗಳು. ಅದು ನಿನ್ನ ತಪ್ಪಲ್ಲ. ನಿನ್ನ ವಯಸ್ಸಿನಲ್ಲಿರುವ ಎಲ್ಲರ ಭಾವನೆಗಳು. ಅವನ್ನು ಮೀರಿದರೆ ಗೆಲ್ಲಬಹುದು ಜಗವನ್ನೆಲ್ಲ”
“ನಿನ್ನ ಮಾತು ನನಗೆ ಕಿರಿಕಿರಿ ಉಂಟುಮಾಡುತ್ತಿದೆ”
“ಉ೦ಟು ಮಾಡಲೇಬೇಕು. ಒಂದು ತಿಳಿದುಕೊ. ನೀನು ಬಿದ್ದಾಗ ಆಲಿಗೊಂದು ಕಲ್ಲು ಒಗೆಯುವವರೆ ಹೆಚ್ಚು, ನೀನು ಬೆಳೆದಾಗ ಹುಡುಕಿಕೊಂಡು ಬರುವವರು ಬಹಳ. ನೀನು ಈಗ ಇಂದ್ರಿಯ ನಿಗ್ರಹಿಸಿ ಓದಿನ, ಇತರ ಹವ್ಯಾಸ ಬೆನ್ನು ಹತ್ತಿ ನಡೆದರೆ ಇದಕ್ಕಿಂತಲೂ ಹೆಚ್ಚಿನ ಅವಕಾಶಗಳು ಹುಡುಕಿಕೊಂಡು ಹಿಂಬಾಲಿಸುತ್ತವೆ. ಈಗ ಮೈಮರೆತರೆ ಬದುಕಿನಲ್ಲಿ ಯಶಸ್ವಿಯಾಗುವುದು ಬಹಳ ಕಷ್ಟ. ಯಾವ ವಯಸ್ಸಿನಲ್ಲಿ ಏನು ಮಾಡಬೇಕು ಅದನ್ನೆ ಮಾಡಬೇಕು”
“ನಿನ್ನ ಮಾತು ಸರಿ ಕಾಣುತ್ತಿಲ್ಲ” ಎಂದೆ.
“ಆಯ್ತು, ಸರಿಕಾಣುತ್ತಿಲ್ಲ ಎಂದ ಮೇಲೆ ನನ್ನ ಕೆಲಸ ಮುಗಿಯಿತು ನಾ ಇನ್ನು ಬರಲಾ” ಎಂದು ಪಟ ಹಾರಲು ರೆಡಿ ಆಯಿತು.

“ನಿನಗೂ ಸಿಟ್ಟು ಬಂತಾ. ನೀನು ಅಂದಿದ್ದೆಲ್ಲ ಅನಿಸಕೊಂಡ ನನಗೆ ಸಿಟ್ಟು ಬರಬೇಕು”
“ಹೌದಾ, ನಾನು ಇದ್ದಷ್ಟು ತೊಂದರೆ ನಿನಗೆ, ಬರುತ್ತೇನೆ”
“ಪ್ಲೀಜ್, ಇಂತಹ ಸಮಯದಲ್ಲಿ ನನ್ನನು ಕೈ ಬಿಟ್ಟು ಹೋಗಬೇಡ, ನನಗೆ ಒಂದಿಷ್ಟು ಸಹಾಯ ಮಾಡು”
“ಬೆಳತನ ರಾಮಾಯಣ ಕೇಳಿ ಮರುದಿನ ರಾಮಗ ಸೀತೆ ಏನಾಗಬೇಕು ಎಂದು ಕೇಳಿದ ಹಾಗೆ ಆಯಿತು ನಿನ್ನ ಕತೆ. ಇಂತಹುದಕ್ಕೆಲ್ಲಾ ನನ್ನ ಸಹಾಯ ಮಾಡಲ್ಲ”
“ಆಯ್ತು, ನಿನಗೆ ನಾನು ಸೋತಿದ್ದೇನೆ”
“ಗೆಲ್ಲುತ್ತೇನೆ ಎಂದು ಬಂದವರು ಸೋಲುವದಕ್ಕೂ ಸಿದ್ಧರಾಗಬೇಕು ಎಂದು ಬೇಂದ್ರೆಯವರು ಹೇಳಿಲ್ಲನು. ಈ ಸೋಲು ಸೋಲಲ್ಲ, ಬದುಕಿನಲ್ಲಿ ಪ್ರಯತ್ನ ಮಾಡದೆ, ಯಶಸ್ವಿಯಾಗದೆ ಸೊತರೆ ಅದು ಸೋಲು.”
“ಆಯ್ತು, ಆಯ್ತು ಆ ವಿಷಯ ಬಿಟ್ಟು ಬಿಡುತ್ತೇನೆ. ಇಂತಹ ಮನಸ್ಸಿನ ವಿಷಯಗಳು ಯಾರಿಗೂ ಅರ್ಥ ಆಗಲ್ಲ” ಎಂದೆ
“ನಿನ್ನ ವಯಸ್ಸು, ನಿನಗೆ ಪ್ರಮೋಟ್ ಮಾಡುವ ಟಿವಿ, ಮೊಬೈಲು ಅದರಲ್ಲಿಯ ಫಿಲ್ಮ್, ರೀಲ್ಸ್, ವಿಡಿಯೊ. ನಿನ್ನ ಹಾಗೆ ಮಾತಾಡಿಸುತ್ತಿದೆ”
“ನೀನು ಮನುಷ್ಯನಾಗಿದ್ದರೆ ಗೊತ್ತಾಗುತ್ತಿತ್ತು. ಮನುಷ್ಯರ ಆತಂಕ”
“ಹೇ ಗುರು, ದೊಡ್ಡ ಮನುಷ್ಯ ಇದ್ದಿ, ನೀನು ಹಾಳಾಗಿ ಹೋಗು, ಯಾವುದೋ ಫಿಲ್ಮ್ ಬಂದಿತ್ತಲ್ಲ. ಹಾಂ! ಚೆಲುವಿನ ಚಿತಾರ. ಅಲ್ಲಿ ಹಿರೋ ಗಣೇಶ ಹುಚ್ಚ ಆಗಿ ಭಿಕ್ಷೆ ಬೇಡುತ್ತಿರುತ್ತಾನಲ್ಲ ಅವನ ಹಾಗೆ ಆಗು”
“ಅಲ್ಲ . . .”
“ಅಲ್ಲ ಇಲ್ಲ ಬೆಲ್ಲ ಇಲ್ಲ, ಫಿಲ್ಮ್ ಮಾಡಿದವರು ಹಾಳಾಗಿಲ್ಲ, ಅನುಕರಣೆ ಮಾಡುವವರು ಹಾಳಾಗಿರೋದು. ಗಂಡು ಜೀವನದ ಕೊನೆತನಕ ಕೊರಗೊದು, ಹೆಣ್ಣು ಹಾಗಲ್ಲ. ಅವಳಿಗೆ ಬೇಕಾದ ಸೇಫ್ಟಿ ನೋಡಿಕೊಂಡು ಎಲ್ಲವನ್ನು ಮರೆಯುತ್ತಾಳೆ. ಆಯ್ತು ನನ್ನ ಸಮಯ ಮುಗಿಯಿತು, ನಾನು ಹೊರಡುವೆ”
“ಪ್ಲೀಜ್ ಗೆಳೆಯ ಇನ್ನೊಂದು ವಾರ, ಇನ್ನೊಂದು ವಾರ ನನಗೆ ಕಂಪನಿ ಕೊಡು” ಎಂದೆ.
“ತಲೆಯಲ್ಲಿ ಇಂತಹ ವಿಷಯ ಇಟ್ಟುಕೊಳ್ಳಲ್ಲ ಎಂದರೆ ಮಾತ್ರ”
“ಆಯ್ತು, ಪ್ರಾಮಿಜ್” ಎಂದೆ.
“ಆಯ್ತು” ಎಂದಿತು… ನನಗೂ ಅದರ ಮಾತಿಗೆ ಖುಷಿಯಾಗಿ ನನಗೆ ನಿನ್ನ ಬಿಟ್ಟು ಇರಲು ಆಗುತ್ತಿಲ್ಲ, ನಾಳೆಯಿಂದ ನಮ್ಮ ಶಾಲೆಗೆ ಹೋಗೋಣ” ಎಂದೆ.
“ಬೇಡಪ ನಿನಗೂ ನನಗೂ ತೊಂದರೆ” ಎಂದೆ.
“ನಾಳೆ ದಿನ ನನಗೆ ಶಾಲೆಯಲ್ಲಿ ದೊಡ್ಡ ಸನ್ಮಾನ ಇಟ್ಟಿದ್ದಾರೆ, ಅದಕ್ಕೆ. ನನ್ನ ಈ ಬೆಳವಣಿಗೆಗೆ ಕಾರಣ ನೀನು. ನೀನು ನೋಡಬೇಕು. ನೀನು ಇರದಿದ್ದರೆ ಹೇಗೆ?”
“ನನಗೇನು ಅಲ್ಲಿ ಚೇರ್ ಹಾಕಿ ಕೂಡಸ್ತಿಯಾ?” ಎಂದು ನಕ್ಕಿತು.
“ಆಯ್ತು ನೀನು ಕೂಡುವೆ ಎಂದರೆ ವ್ಯವಸ್ಥೆ ಮಾಡುವೆ” ಎಂದೆ.
“ಹಾಗೆ ಮಾಡಿದರೆ, ನಿನ್ನ ಇಮೇಜ್ ಎಲ್ಲ ಠುಸ್ಸು” ಎಂದು ನಕ್ಕು “ಬೇಡ, ಒತ್ತಾಯಿಸಬೇಡ. ನಿನಗೆ ಅರ್ಥ ಆಗೊಲ್ಲ”ಎಂದಿತು,
“ನೀನು ಬರಲ್ಲ ಅಂದ್ರ ನಾನು ಹೋಗಲ್ಲ” ಎಂದು ಮುಖ ಸೊಟ್ಟಗೆ ಮಾಡಿಕೊಂಡೆ.
“ಆಯ್ತು, ನಾನು ಬರುವೆ. ಆದರೆ ನಾನು ಬರುವುದರಿಂದ ನಿನಗೆ ತೊಂದರೆ”
“ಏನೂ ಆಗಲ್ಲ ಬಾ, ಅಷ್ಟೆ” ಎಂದು ಒತ್ತಾಯಿಸಿದೆ.
“ ಆಯ್ತು ನಿನ್ನ ಇಷ್ಟ” ಎಂದಿತು.
। ನಾಳೆಗೆ ।






0 Comments