ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳಿಗೆ ಚಳಿಗಾಲವೆಂದರೆ..

-ಕೆ ಎನ್ ಲಾವಣ್ಯ ಪ್ರಭಾ

ವಾಯುಭಾರ ಕುಸಿತವೋ
ಅಥವಾ ಸೈಕ್ಲೋನ್ ಕಾರಣಕ್ಕೋ
ಹತ್ತಿಯಂತಹ ಬೆಳ್ಮೋಡಗಳೆಲ್ಲಾ
ಮುಖ ಕೆಳಗೆ ಹಾಕಿ
ಸಪ್ಪಗಿನ ಮೋರೆಯಲ್ಲೇ
ಹಗಲಿನ ಬೆಳಕ ಸಂಭ್ರಮವನ್ನೆಲ್ಲಾ
ತಿಂದು ತೇಗಿ ಸೋಮಾರಿ ಕೂತು
ಮಂಕಾಗಿಸಿ ಮೈಮನಸ್ಸು
ಜಡ್ಡು ಹಿಡಿಸಿದ ಕೊರೆವ ಚಳಿಯಲ್ಲೂ
ಹನಿದ ತುಂತುರು ಮಳೆಗೆ
ಮತ್ತಷ್ಟು ರೋಸಿಹೋಗಿ
ಒಳಗೊಳಗೇ ಇರಿಸು ಮುರಿಸಾಗಿ
ಆಗಾಗ ರೇಗಿಕೊಳ್ಳುತ್ತಾ
ಮತ್ತೊಮ್ಮೆ ಮೌನವಾಗುತ್ತಾ
ಎಂಥದ್ದೋ ಕಿರಿಕಿರಿ, ಯಾತನೆ…

ಅವಳಿಗೆ ಚಳಿಗಾಲವೆಂದರೆ
ನಖಶಿಖಾಂತ ಕೋಪ

ಮಾಘಮಾಸದ ಚಳಿಗೆ
ಜೀವ ಹಿಡಿಯಷ್ಟಾದಾಗ
ಹಿಡಿಶಾಪ ಹಾಕುವಳು
ಒಡೆದ ಕೈಕಾಲು, ಪಾದ, ತುಟಿಗೆ
ವ್ಯಾಸಲಿನ್ನೋ ಮಾಯಿಶ್ಚರೈಸರ್ರೋ
ಹಚ್ಚಿ ಗೊಣಗುತ್ತಲೇ
ತಿಳಿಸಾರಿಗೆ ಒಗ್ಗರಣೆ ಹಾಕಿ
ಮೂಗು ಗಂಟಲಿಗೆ ಬಿಸಿ ಆವಿ
ತಾಗಿಸುವಳು
ರಾತ್ರಿಯಿಡೀ ಚಳಿಯನ್ನು
ಯದ್ವಾತದ್ವಾ ಧ್ವೇಷಿಸುತ್ತಲೇ
ಬೆಚ್ಚನೆಯ ರಗ್ಗಿನಲ್ಲಿ
ಮುದುಡಿ ಮಲಗಿ ಚಳಿಯನ್ನು
ಬಹು ದೂರ ಅಟ್ಟುತ್ತಾ
ಅಸ್ಪಷ್ಟ ಕನವರಿಸುವಳು

ಅವಳಿಗೆ ಚಳಿಗಾಲವೆಂದರೆ
ನಖಶಿಖಾಂತ ಕೋಪ

ಬೆಳಗು ಬೈಗಿನ ಚಳಿಗೆ
ಗೆಳೆಯನಂತಹ ಶಾಲನ್ನು
ಮೈತುಂಬಾ ಹೊದ್ದು
ತಣ್ಣಗೆ ಕೊರೆವ ಅಂಗೈ ಬೆರಳುಗಳಲ್ಲಿ
ಹಬೆಯಾಡುವ ಚಹಾ ಬಟ್ಟಲನ್ನು
ಹೊತ್ತುಗೊತ್ತಿಲ್ಲದೆ ಒಬ್ಬಂಟಿ ಕೂತು
ತುಟಿಗೆ ತಾಕಿಸುತ್ತಾ
ಕನಸು ನನಸುಗಳ ನಡುವೆ
ನೆನಪುಗಳ ನವಿಲುಗರಿ ಕೆದರಿ
ಕವಿತೆಯೊಂದು ಧಿಗ್ಗನೆದ್ದು
ಹೊಳೆಯಬಹುದೇನೋ ಎನಿಸಿ
ಕಾಯುತ್ತಾಳೆ
ಕಾಣದ್ದನ್ನು ಧ್ಯಾನಿಸುತ್ತಾ…
ಧ್ವೇಷಿಸುವುದನ್ನೂ ಪ್ರೀತಿಸುತ್ತಾ…

‍ಲೇಖಕರು Admin

22 December, 2025

1 Comment

  1. ಜಯಶ್ರೀನಿವಾಸ ರಾವ್

    ಒಹೋ … ಬ್ಯೂಟಿಫುಲ್ …

    ಕನಸು ನನಸುಗಳ ನಡುವೆ
    ನೆನಪುಗಳ ನವಿಲುಗರಿ ಕೆದರಿ
    ಕವಿತೆಯೊಂದು ಧಿಗ್ಗನೆದ್ದು
    ಹೊಳೆಯಬಹುದೇನೋ ಎನಿಸಿ
    ಕಾಯುತ್ತಾಳೆ …

    ಈ ಕೊನೆಯ ಸಾಲುಗಳು ಕವನವನ್ನು ಎತ್ತಿಸಿಬಿಡುತ್ತದೆ … ನನಗೆ ಇಷ್ಟವಾದ ಮೆಟಾ-ಪೊಯೆಮ್ ಮಾದರಿಯ ಕವನ … lovely poem, Lavanya Madam … ❤️

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading