ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಎದ್ದೆನೋ ಬಿದ್ದೆನೋ ಎಂದು ಓಡ ಹತ್ತಿದರು..

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು.

ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಹಲವು ಕತೆ,ಕವಿತೆಗಳನ್ನು ಬೆಂಗಳೂರಿನ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಪೂರಕ ಪಠ್ಯಗಳಾಗಿ ಬಳಸಿಕೊಂಡಿದೆ.

ಇದೆ ಅವಧಿಯಲ್ಲಿ ಪ್ರಸಾರವಾದ ‘ಸೊಳ್ಳೆ ಫ್ತೆಂಡು ಒಳ್ಳೆ ಫ್ರೆಂಡು’ ಕೃತಿಗೆ ಜಿ.ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ, ಕಲಬುರಗಿ ಯ ಕನ್ನಡ ನಾಡು ಓದುಗರ ಹಾಗೂ ಲೇಖಕರ ಸರಕಾರಿ ಸಂಘದ‌’ ಉತ್ತಮ‌ಕಾದಂಬರಿ ಪ್ರಶಸ್ತಿ ದೊರಕಿದೆ.

ಪೆಣ್ಣತ್ತ ಖುಷಿಗೆ ಕಸಾಪದ ಕುಂಭಾಸ ಹಾಸ್ಯ ಸಾಹಿತ್ಯ ದತ್ತಿ ಗೌರವ, ಚಾರ್ಲಿ ಚಾರ್ಲಿ ವೇರ್ ಆರ್ ಯೂ ಕೃತಿಗೆ ಜನಸಿರಿ ಸಾಹಿತ್ಯ ಪ್ರಶಸ್ತಿ ದೊರಕಿದೆ. ಹಲವು ಪತ್ರಿಕೆಗಳಲ್ಲಿ ಇವರ ಕತೆ, ಕವಿತೆ, ನಾಟಕ, ಪ್ರಬಂಧ, ಹಾಸ್ಯ ಬರೆಹಗಳು ಪ್ರಕಟವಾಗಿವೆ.

ಭಾಗ –೧ ೧

ಬೆಳಿಗ್ಗೆ ಎದ್ದು ಎಲ್ಲಾ ಕಾರ್ಯ ಮಗಿಸಿ, ಎಂದಿನAತೆ ಮಿ.ಕೈಟ್‌ನನ್ನು ಮಾತಾಡಿಸಲು ನಡದೆ.
“ಇವತ್ತು ಶಾಲೆಗೆ ಹೋಗೋಣಾ” ಎಂದೆ
“ಇಲ್ಲಪ್ಪ, ನಾನು ಬರೊಲ್ಲ”
“ಯಾಕೆ ನಿನ್ನೆಯಿಂದ ಡಲ್ ಆಗಿದ್ದೀಯಾ? ಕೆರೆಯಿಂದ ಬಂದ ಮೇಲೆ ಮಾತೆ ಆಡಲಿಲ್ಲ. ಎಷ್ಟು ಮಾತಾಡಿದ್ರೂ ಕಾಟಾಚಾರಕ್ಕೆ ಮಾತನಾಡಿದೆ. ಏನೂ ಯಾವುದಾದರೂ ಫೀಮೇಲ್ ಕೈಟ್ ಹಾರೋದನ್ನು ನೋಡಿದಿಯಾ? ಮೇಲೆ ಲವ್ ಆಯ್ತಾ. ನೀನು ನನ್ನ ಹಾಗೆ ಆದೆಯಾ?” ಎಂದು ಛೇಡಿಸಿದೆ.
ನಕ್ಕು “ಹೋಗೊ ಮಾರಾಯ? ಮನುಷ್ಯರಂಗ ಅಂತ ತಿಳಿದುಕೊಂಡಿಯನು ನಮ್ಮನ್ನ, ನಮ್ಮ ಲೋಕನ ಬ್ಯಾರೆ”
“ಮತ್ಯಾಕೆ ಡಲ್, ನನ್ನ ಸಹವಾಸ ಮಾಡಿ ಮಾಡಿ ನನ್ನ ಜೀನ್ಸ್ ನಿನಗೂ ಪಾಸಾಯ್ತೇನು?” ಎಂದು ನಕ್ಕೆ.

“ಇದ್ರೂ ಇರಬಹುದು” ಎಂದು ಅದು ನಕ್ಕಿತು.
“ಜೀನ್ಸ್, ಜನರೇಶನ್ ಟು ಜನರೇಶನ್ ಪಾಸ ಆಗೊದು, ಡಲ್ ಸೈನ್ಸ್ ಸ್ಟುಡೆಂಟು. ನಮ್ಮ ಕೈಟ್ ಜನರೇಶನ್ ಬೇರೆ” ಎಂದು ಟಾಂಗ್ ಕೊಟ್ಟಿತು.
“ಆಯ್ತು ಸ್ಮಾರ್ಟ ಕೈಟ್ ಸಾಹೇಬರಾ, ನಡಿ ಹೋಗೋಣ ಶಾಲೆಗೆ”
“ಬೇಡ ಅಂತ ಹೇಳಿದೆನಲ್ಲಾ”
“ಇಲ್ಲಪ್ಪ, ನನಗೆ ಶಾಲೆಯಲ್ಲಿ ಸಿಕ್ಕಾಪಟ್ಟೆ ಬೋರ್, ಹೆಣ್ಣುಮಕ್ಕಳನ್ನು ನೋಡಿದ್ರೆ ಎದೆ ಡವಡವ ಅಂತ ಹೊಡೆದುಕೊಳ್ಳುತ್ತದ. ನೀನು ಸಮೀಪ ಇದ್ರ ನನಗೆ ನಿರಾಳ ಅನಿಸುತ್ತೆ”
“ನಿನ್ನಿಷ್ಟ, ಬೇಡ ಅಂದ್ರು ಕೇಳುತ್ತಿಲ್ಲ, ಹೌದು ನನ್ನ ಎಲ್ಲಿ ಬಿಡುತ್ತಿ?”
“ಕಾಣದ ಹಾಗೆ ಇಡುವೆ”
“ಎಲ್ಲೆ ಬೇಕಲ್ಲಿ ಬಿಡಬಾರದು, ನನ್ನ ಸಮಯ ಸರಿಗಿಲ್ಲ ಎಂದು ಹೇಳಿದೆನಲ್ಲ”
“ಆಯ್ತು ಹಾರಿಸುತ್ತಾ ಹೋಗುವೆ, ಅಲ್ಲೆ ಬಂದ ಕೂಡಲೇ ಸಣ್ಣನಾಗು ನನ್ನ ಬ್ಯಾಗನಲ್ಲಿ ಇಟ್ಟುಕೊಳ್ಳುವೆ”
“ಸರಿ ಅಷ್ಟು ಮಾಡು, ಎಲ್ಲಿಯು ಹೊರಗೆ ಇಟ್ಟು ಹೋಗಬೇಡ”
ನಾನು ಪಟವನ್ನು ಹಿಡಿದು ಹಾರಿಸುತ್ತಾ ಹೊರಟೆ, ನಡುವೆ ನಡುವೆ ಅದರ ಜೊತೆ ಯಾರೂ ಇಲ್ಲದ ಕಡೆ ಅಂತದಲ್ಲಿಯೂ ಹಾರುತ್ತಿದೆ. ನಾನು ಮನೆಯಿಂದ ಹೊರ ಹೊರಟ ಕೂಡಲೇ ರಾಕೇಶ, ರಾಮು ಹಾಗೂ ಅವನ ಗ್ಯಾಂಗ್ ಕರೆದುಕೊಂಡು ಬಂದಿದ್ದ, ನನ್ನ ಹಿಂದೆ ಫಾಲೋ ಮಾಡಲಿಕ್ಕೆ.
ನಾನು ಅಂತರದಲ್ಲಿ ಹಾರುವುದನ್ನು ತೋರಿಸಿ “ನೋಡಿದ್ರಾ, ನನ್ನ ಮಾತು ನಂಬಲಿಲ್ಲ, ಈಗಲಾದ್ರೂ ನೋಡ್ರಿ, ಅದು ಸಾಮಾನ್ಯ ಗಾಳಿಪಟವಲ್ಲ, ನನ್ನ ನಿನ್ನೆ ಮೇಲೆ ಕರೆದುಕೊಂಡು ಹೋಗಿ ಹಣ್ಣುಗಾಯಿ ನೀರುಗಾಯಿ ಮಾಡಿತು. ಬಿಡಬಾರದು ಅದನ್ನು, ಚಿಂದಿ ಉಡಾಯಿಸಬೇಕು, ಹರಿದು ಹಾಕಬೇಕು. ಅವನು ಇಷ್ಟು ದಿನ ಉರಿದದ್ದು , ನಿಮ್ಮ ಮರ್ಯಾದೆ ಹಾಳುಮಾಡಿದ್ದು ಅದರಿಂದನ” ಎಂದು ಅವರ ಮನಸ್ಸನ್ನು ಕೆಡಿಸಿದ.

“ನಂಬೋದೆ ಆಗುತ್ತಿಲ್ಲ, ಇಂತಹ ಪಟಗಳು ಇರತಾವನಾ? ಅಥವಾ ನಾನು ಕನಸು ಕಾಣುತ್ತಿದ್ದೇನಾ?” ಎಂದ ರಾಮು.
“ಕನಸು ಅಲ್ಲೋ, ನೋಡು ಅವ ಹತ್ತು ಫಿಟ್ ಹೇಗೆ ಅದರೊಂದಿಗೆ ಮೇಲೆ ಹಾರುತ್ತಿದ್ದಾನೆ” ಎಂದ ರಾಕೇಶ.
“ಇಷ್ಟು ವರ್ಷ ಉಳಿಸಿಕೊಂಡು ಬಂದ ನನ್ನ ಮರ್ಯಾದೆಯನ್ನು ಕವಡೆ ಕಾಸಿನ ಕಿಮ್ಮತ್ತು ಇರದಂತೆ ಮಾಡಿದ ಇವನನ್ನು ಬಿಡಬಾರದು” ಎಂದ ರಾಮು.
“ಅವ ಪಟದಿಂದ ಉರಿತಿದ್ದಾನೆ. ಪಟವನ್ನೆ ಇಲ್ಲ ಮಾಡಿ ಬಿಟ್ರೆ, ಅವನು ಟುಸ್ ಮದ್ದು” ಎಂದ ರಾಕೇಶ.
“ಇಲ್ಲ ಇಲ್ಲ, ಅದನ್ನೆ ನಾವು ಕಿಡ್ನಾಪ್ ಮಾಡಿದ್ರೆ, ಗಾಳಿಪಟನ್ನ ವಶಮಾಡಿಕೊಂಡ್ರೆ” ಎಂದ ರಾಮು.
“ಬೇಡಪ್ಪ, ಅದು ಏನು ಅಂತ ಗೊತ್ತಿಲ್ಲ, ಹಾದಿಗೆ ಹೋಗೊ ದೆವ್ವನ್ನ ಯಾಕ ಮೇಲೆ ಎಳೆದುಕೊಳ್ಳೊದು. ಮೊದಲು ಅದನ್ನು ನಾಶ ಮಾಡೋಣ” ಎಂದ ರಾಕೇಶ.

“ಬೇಡ ಅನಿಸುತ್ತೋ. ಭಯವಾಗುತ್ತದೆ” ಎಂದ ಮಹೇಶ. “ಹೌದೌದು, ನಮಗೂ ಭಯವಾಗತ್ತದೆ” ಎಂದು ಧ್ವನಿಗೂಡಿಸಿದರು ಉಳಿದವರು.
“ಎಂತವರೋ ನೀವು. ನನ್ನ ಜೀವನ್ನ ತೆಗಿತಿದ್ದ ಗಾಳಿಪಟ ಅದು. ಇರಬಾರದು ನೋಡು. ಅದನ್ನು ಹಾಳು ಮಾಡಿದರೆ ನಿಮಗೆ ಪಾರ್ಟಿ” ಎಂದ ರಾಕೇಶ..
“ಆಯ್ತು, ಆಯ್ತು. ನಡಿರಿ ಶಾಲೆಗೆ ಹೋಗೋಣ, ಉಪಾಯ ಮಾಡಿ ಗಾಳಿಪಟವನ್ನು ಕಿತ್ತಿಕೊಳ್ಳೋಣ” ಎಂದ ರಾಮು.
ದೂರದಿಂದ ನಿಂತು ನಾನು ಪಟದೊಂದಿಗೆ ಆಡುತ್ತಾ ಹೋಗುತ್ತಿರುವುದನ್ನು ಗಮನಿಸುತ್ತಾ ಬಂದರು. ರಾಮುವಿಗೆ “ಈ ಪಟದಿಂದ ಅವ ಇಷ್ಟೆಲ್ಲ ಶೈನ್ ಆಗುತ್ತಿದ್ದಾನೆ ಆ ಪಟವನ್ನೆ ಇಲ್ಲದ ಹಾಗೆ ಮಾಡಿಬಿಟ್ಟರೆ? ಮೊದಲು ಆ ಕೆಲಸ ಮಾಡಬೇಕು” ಎಂದು ಆಲೋಚಿಸುತ್ತಾ ನಡೆದ.

ನಾನು ಗಾಳಿಪಟವನ್ನು ಯಾರೂ ನೋಡದ ಹಾಗೆ ಬ್ಯಾಗಿನಲ್ಲಿ ಸೇರಿಸಲು ಟ್ವಾಯಲೆಟ್ ರೂಮಿಗೆ ಹೋದೆ. ಆ ರೂಮಿನತ್ತ ಹೊರಟಿದ್ದ ರಾಮುವಿನ ತಲೆಗೆ ಒಂದು ಬಲವಾದ ಏಟು ಬಿತ್ತು. “ರಾಕೇಶ, ಯಾಕಲೆ ಹೊಡೆದದ್ದು” ಎಂದ ರಾಮು. “ನಾನು ಹೊಡೆದಿಲ್ಲ” ಎಂದ ರಾಕೇಶ. ಅಷ್ಟರಲ್ಲಿ ಅವನಿಗೆ ಒಂದು ಏಟು ಬಿತ್ತು. “ನೀನು ಯಾಕೆ ನನಗೆ ಹೊಡೆದೆ” ಎಂದ. “ನಾನೆಲ್ಲಿ ಹೊಡೆದೆನೊ?” ಎಂದ ರಾಮು. ಇಬ್ಬರೂ ಮಹೇಶನತ್ತ ನೋಡಿದರು. ಅವನು ಇಲ್ಲ ಎಂದ. ಎಲ್ಲರೂ ತಾವು ತಾವೆ ಜಗಳಾಡತೊಡಗಿದರ. ರಾಕೇಶ ‘ಇದೆಲ್ಲಾ ಆ ಗಾಳಿಪಟದ್ದೆ ಕಿತಾಪತಿ’ ಎಂದ ಹೇಳಿದರೂ ನಂಬದ ಸ್ಥಿತಿಯಲ್ಲಿ ಅವರಿರಲಿಲ್ಲ. “ನೋಡೋ ನಮಗೆ ಜಗಳ ಹಚ್ಚಿ ಗಾಳಿಪಟವನ್ನು ಎಲ್ಲೋ ಮಾಯಾ ಮಾಡಿ ಕ್ಲಾಸರೂಮಿಗೆ ಹೊರಟಾನ ನೋಡ್ರೋ” ಎಂದ ರಾಕೇಶ ತೋರಿಸಿದ. “ನಡಿರಿ, ಇವತ್ತು ಅವನನ್ನು ಫಾಲೋ ಮಾಡೋಣ, ಕಣ್ಣಿಡಿ, ಗಾಳಿಪಟವನ್ನು ಹುಡುಕಾಡಿ” ಎಂದು ರಾಮು ಅದೇಶ ಮಾಡಿದ. ಅವನು ಹೋದ ಟ್ವಾಯಲೆಟ್ ರೂಮಿನಲ್ಲಿ, ಅಡ್ಡಾಡಿದ ಕಡೆಗಳಲ್ಲಿ, ಸಂಧಿಯಲ್ಲಿ ಎಷ್ಟು ಹುಡುಕಿದರೂ ಪಟ ಸಿಗಲಿಲ್ಲ.

ಸಂಜೆ ಹೇಗಾದರೂ ಅದನ್ನು ಹಾರಿಸಿಕೊಂಡು ಹೊರಟಿರುತ್ತಾನೆ. ಆಗ ಕಸಿದುಕೊಂಡು ಅವನ ಸೊಕ್ಕು ಇಳಿಸಬೇಕೆಂದು ನಿರ್ಧರಿಸಿದರು.
ನನಗೆ ಗಾಳಿಪಟ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದಕ್ಕಾಗಿ ಏನೋ ಹಿತವಾದ ಅನುಭವ. ಪ್ರತಿದಿನದಂತೆ ಕ್ಲಾಸ ಬೋರ್ ಆಗಲಿಲ್ಲ. ಬೇಕಾದಾಗ ಬ್ಯಾಗಿನೊಳಗೆ ಇಣಿಕಿ ಮಾತನಾಡುತ್ತಿದ್ದೆ. ಅಂದು ಮೀರಾ,ರೀಟಾ ಬಂದಿರಲಿಲ್ಲ. ಹಾಗಾಗಿ ಲಕ್ಷ ಬೇರೆ ಕಡೆ ಹೋಗಲೆ ಇಲ್ಲ. ಆತಂಕವೂ ಆಗಲಿಲ್ಲ. ಕೊನೆಯ ಬೆಲ್ ಹೊಡೆದ ಮೇಲೆ ನೇರವಾಗಿ ಟ್ವಾಯಲೆಟ್ ರೂಮಿನಲ್ಲಿ ಹೋಗಿ ಗಾಳಿಪಟವನ್ನು ಹೊರತೆಗೆದೆ. “ಅಮ್ಮಾ, ಸಾಕಾಗಿತ್ತಪ್ಪ ನಿನ್ನ ಬ್ಯಾಗಿನಲ್ಲಿ ಕುಳಿತು ಕುಳಿತು, ಎಷ್ಟು ಹೊಲಸು, ಎಷ್ಟು ಧೂಳ, ಎಷ್ಟು ಘಾಟಾ, ಜಿಡ್ಡುಜಿಡ್ಡು” ಎಂದು ನಗೆಯಾಡಿತು.

“ಸಾಕುಸಾಕು, ಬ್ಯಾಗಿನ ಒಳಗಿದ್ದ ಚಾಕಲೇಟನ್ನು ತಿಂದಿದ್ದು ಮಾತ್ರ ಹೇಳಬ್ಯಾಡ” ಎಂದು ನಕ್ಕು “ಹೋಗೋಣಾ?” ಎಂದೆ.
“ಹುಷಾರಾಗಿ ಹೋಗು” ಎಂದು ಎಚ್ಚರಿಸಿತು. ಗಾಳಿಪಟ ತೆಗೆದಕೊಂಡು ಹಾರಿಸುತ್ತಾ ಹೊರಟೆ. “ಅಲೇ ಇವನೌನ, ನಾವು ಟ್ವಾಯಲೆಟ್ ಎಲ್ಲ ಹುಡುಕಾಡಿದ್ರೂ ಸಿಗಲಿಲ್ಲ, ಅಂತಹ ಹೊಲಸನ್ಯಾಗ ಎಲ್ಲಿ ಇಟ್ಟು ಹೋಗಿದ್ದ, ಇವ” ಎಂದ ರಾಕೇಶ.
“ಹೇಸಿಗೆಯಲ್ಲಿರೋ ಗಾಳಿಪಟನಾ ಅದು, ಛೀ ನಾನು ಒಲ್ಲೆಪಾ?” ಎಂದ ಮಹೇಶ.

“ಎಲ್ಲೆರ ಇಟ್ಟಿರಲಿ, ನಡೀರಿ ಮೊದಲು, ಬಿಡೋದು ಬ್ಯಾಡ” ಎಂದು ರಾಮು ಹೇಳಿದ. ಇಡಿ ಗ್ಯಾಂಗ್ ನನ್ನ ಹಿಂದೆ ಫಾಲೊ ಮಾಡ ಹತ್ತಿತು. ಅದು ನನಗೆ ಗೊತ್ತಾಗಲಿಲ್ಲ. ನಾನು ಓಣಿಯ ಸಂಧಿಯಲ್ಲಿ ಹೋಗುವಾಗ ಸಡನ್ ಎಲ್ಲರೂ ಅಟ್ಯಾಕ್ ಮಾಡಿದರು. ಅವರು ಗಾಳಿಪಟವನ್ನು ನನ್ನ ಕೈಯಿಂದ ಕಸಿದುಕೊಂಡು ಓಡ ಹೊರಟರು. ನಾನು ಕಸಿದು ಕೊಳ್ಲು ಹೋದಾಗ ಬಲವಾಗಿ ಹೊಡೆದರು. ರಾಕೇಶ ತನ್ನೊಂದಿಗೆ ತಂದಿದ್ದ ದಾರವನ್ನು ಸೂತ್ರಕ್ಕೆ ಕಟ್ಟಿದ. ಜೊತೆಗೆ ಇನ್ನೊಂದು ಎರಡು ದಪ್ಪ ದಾರವನ್ನು ಕೂಡಾ ಕಟ್ಟಿದ. ಅದು ತಪ್ಪಿಸಿಕೊಳ್ಳಬಾರದೂ ಮತ್ತು ಎತ್ತಿಕೊಂಡು ಹಾರಬಾರದು ಎಂದು. ರಾಮು “ಒಂದೆ ಸಾಕು ಎರಡು ಮೂರು ಯಾಕೆ ಕಟ್ಟುತ್ತಿಯಾ?” ಎಂದ.

“ಹಾಂ! ಅಣ್ಣ, ನಿನಗ ಗೊತ್ತಿಲ್ಲಪ್ಪ ಹಾರಿ ಎಲ್ಲೆಲ್ಲೊ ಎಳೆದುಕೊಂಡು ಹೋಗುತ್ತೆ. ನಾನು ಹೇಗೊ ಪಾರಾದೆ. ಅನುಭವಿಸಿದವ ನಾನು. ನನಗೆ ಗೊತ್ತು. ಅವತ್ತು ಇವ ಪಟ ಸ್ಪರ್ಧೆಯಲ್ಲಿ ಹಾರಿಸುವಾಗ ದಾರ ಕಟ್ಟಿದಾಗ ಏರಲು ಮೊದಲು ತೊಂದರೆ ಪಟ್ಟಿತ್ತು. ಅದನ್ನು ನೋಡಿದ್ದೆ. ದಾರಕಟ್ಟಿದ್ದರ ಇದು ಪಿಕ್‌ಪ್ ಬೇಗ ತೆಗೆದುಕೊಳ್ಳಲು ಆಗೋದಿಲ್ಲ ಅನ್ನೊದು ಮಧ್ಯಾಹ್ನ ಫ್ಲಾಶ್ ಆಯ್ತು. ಅದಕ್ಕ ಈ ಐಡಿಯಾ” ಎಂದ ರಾಕೇಶ “ಭಾರಿ ಶ್ಯಾಣೆ ಆಗಿ ನೋಡು” ಎಂದ ರಾಮು.

“ಆಗಲೇಬೇಕಲ್ಲಪ್ಪ, ಇದನ್ನ ನಾಶ ಮಾಡೋತನ ನನಗ ಸಮಾಧಾನ ಇಲ್ಲ”
“ಮೊದಲು ಅವನಿಂದ ದೂರ ಹೋಗೋಣ, ಏನಾದರೂ ಅವನು ಬಂದರ ಗತಿ ಕಾಣಿಸೋಣ, ಓಡರಿ ಬೇಗ” ಎಂದ ರಾಮು ಎಲ್ಲರೂ ಗಾಳಿಪಟ ಹಿಡಿದು ಓಡತೊಡಗಿದರು.
“ರಾಕೇಶ, ರಾಮು, ಮಹೇಶ ಪ್ಲಿಜ್ ಬೆಡ್ರೋ ಕೈಟ್ ಕೊಡ್ರೋ” ಎಂದು ಬೇಡಿಕೊಂಡೆ
“ಈ ಕೈಟ್ ಇಟ್ಟುಕೊಂಡು ಧೀಮಾಕು ಬಡಿತಿದ್ದಿ. ಇವತ್ತು ನೋಡು ಈ ಕೈಟ್ ಗೆ ಗತಿ ಕಾಣಸ್ತೀವಿ” ಎಂದು ಅದನ್ನು ಹಿಡಿದುಕೊಂಡು ಓಡತೊಡಗಿದರು. ಕೈಟ್‌ಗೆ ಮೂಲದ ದಾರದಲ್ಲಿ ಶಕ್ತಿ ಇತ್ತು. ಸೂತ್ರಕ್ಕೆ ಎರಡು ಮೂರು ದಾರ ಕಟ್ಟಿದ್ದರಿಂದ ಅದು ಎಲ್ಲಾ ಶಕ್ತಿಯನ್ನು ಕಳೆದುಕೊಂಡಿತು. ಅದು ಅವರಿಂದ ಪಾರಾಗಲು ಯತ್ನಿಸಿತು. ಸಾಧ್ಯವಾಗಲಿಲ್ಲ. ಅವರು ಎಳೆದಂತೆಲ್ಲೆ ಎಲ್ಲೆಂದರಲ್ಲಿ ಹೋಯಿತು. ಹಾರಿತು, ಲಾಗಾ ಹೊಡೆಯಿತು, ನೆಲಕ್ಕೆ ಬಿದ್ದು ತೆರೆಸಿಕೊಂಡಿತು. ಅದನ್ನು ತಡೆಯಲು ನಾನು ಓಡಿದೆ. ಅವರು ಒಬ್ಬರಿಗೊಬ್ಬರಿಗೂ ಪಾಸ್ ಮಾಡುತ್ತ ಮುಂದೆ ಓಡುತ್ತಿದ್ದರು. ನಾನು ಅವರು ಕೊಟ್ಟ ಏಟಿಗೆ ಸುಧಾರಿಸಿಕೊಂಡು ಶಕ್ತಿ ಹಾಕಿ ಓಡತೊಡಗಿದೆ. ನಾನು ಓಡಿದಂತೆಲ್ಲ ಅವರ ಓಟ ಜೋರಾಗಿತ್ತು. ಎಲ್ಲೆಲ್ಲೊ ಓಡಿ ಹೋಗಿ ಒಂದು ಪಾಳು ಬಿದ್ದ ಒಠಾರದಲ್ಲಿ ಹೋಗಿ ಚಿಲಕ ಹಾಕಿಕೊಂಡರು.

“ಬೆಡ್ರೋ ಪ್ಲಿಜ್ ಪ್ಲಿಜ್ ಬಾಗಿಲು ತರೆಯಿರಿ” ಎಂದು ಕೂಗಿಕೊಂಡೆ ಬಾಗಿಲು ಬಡಿದೆ. ಅವರು ಕೇಳಲಿಲ್ಲ. ಕಂಪೌ೦ಡ್ ಗೋಡೆ ಎತ್ತರವಿತ್ತು ಹತ್ತಲು ನೋಡಿದೆ ಸಾಧ್ಯವಾಗಲಿಲ್ಲ. ನನ್ನ ಕೂಗೂ ಗಾಳಿಪಟಕ್ಕೆ ಕೇಳಿದಂತಿತ್ತು. ಯಾರೊ ಒಬ್ಬ ಇನ್ನೊಂದು ಹಗ್ಗ ಹಿಡಿದಾಗ ಅದಕ್ಕೆ ಶಕ್ತಿ ಬಂದAತಾಗಿ. ಮೇಲೆ ಹಾರಲು ಯತ್ನಿಸಿತು.

ಮೇಲೆ ಹಾರುತ್ತಿದ್ದ ನನ್ನನ್ನು ನೋಡಿ ಖುಷಿಗೊಂಡು “ಬಿಡಿಸೋ. . .” ಎಂದು ಕಣ್ಣಿರು ಹಾಕಿದಂತೆ ಕಂಡಿತು. ಕಂಪೌಡನ ಹೊರಗೆ ಬಿದ್ದ ದಾರಹಿಡಿದು ಕಂಪೌ೦ಡ ಏರಿದೆ. ಗಾಳಿಪಟಕ್ಕೆ ಕಟ್ಟಿದ ದಾರವನ್ನು ಹರಿದು ಬಿಟ್ಟೆ. ನನ್ನ ಮೇಲೆ ಎಲ್ಲರೂ ಎರಗಿ ಹಿಡಿದು ಬಡಿಯತೊಡಗಿದರು. ಕೆಲವರು ಅದರ ಬೆನ್ನು ಹತ್ತಿದರು. ಕಲ್ಲು ತೆಗದುಕೊಂಡು ಹೊಡೆದರು. ಒಬ್ಬವ ಕಲ್ಲು ತೆಗೆದುಕೊಂಡು ಲಗೋರಿ ಆಟದಲ್ಲಿ ಗುರಿ ಇಟ್ಟು ಹೊಡೆಯುವ ಹಾಗೆ ಹೊಡೆದ. ಅದು ಹಾರುತ್ತಿದ್ದ ಗಾಳಿಪಟದ ಮಧ್ಯೆ ತೂರಿಹೋಯಿತು. ಇನ್ನೊಬ್ಬ ಆಟಿಕೆ ಪಿಸ್ತೂಲ್ ಹಿಡಿದು ಚರ‍್ರಿ ಇಟ್ಟು ಹೊಡೆದ ಅದು ಅದರೊಳಗೆ ದಾಟಿಹೋಯಿತು. ಮತ್ತೊಬ್ಬ ಉದ್ದನೆ ಬಿದಿರಿನ ಕಟ್ಟಿಗೆ ತೆಗೆದುಕೊಂಡು ಹೊಡೆದ ಅದು ಪೂರ್ಣ ಹರಿದು ಕೆಳಗೆ ಬಿತ್ತು. ಎಲ್ಲರೂ ಸೇರಿ ಅದನ್ನು ಎಳೆದಾಡಿ ಹರಿದರು. ಅದರಲ್ಲಿಯ ಬಿದಿರನ್ನು ಮುರಿದರು. ಕಾಲಲ್ಲಿ ಹಾಕಿಕೊಂಡು ತುಳಿದರು. ಸೆಗಣಿ ಮೇಲೆ ಹಾಕಿದರು. ಮಣ್ಣು ತೂರಿದರು. ಕೆಲವೆ ಕ್ಷಣದಲ್ಲಿ ನನ್ನಯ ಗಾಳಿಪಟವನ್ನು ನೂಚ್ಚು ನೂರಮಾಡಿದರು. ಹಾಗೆ ಮಾಡಿದಲ್ಲದೆ ನನಗೆ ಒದ್ದು ಒದ್ದು ಮೈತುಂಬ ಗಾಯಮಾಡಿ “ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನ ಸುಮ್ಮನೆ ಬಿಡಲ್ಲ, ಹುಷಾರು. ಪಟದಂತೆ ನಿನ್ನನ್ನೂ . . . ಅಷ್ಟ, ಫೀನಿಶ್! ಹುಷಾರ್!” ಎಂದು ಎಚ್ಚರಿಸಿ ಹೊರ ನಡೆದರು. ನನಗಾದ ಘಾಸಿ ಅಷ್ಟಿಷ್ಟಲ್ಲ. ಎಲ್ಲವೂ ಮುಗಿದು ಹೋಗಿತ್ತು. ನಾನು ಸ್ವಲ್ಪ ಚೇತರಿಸಿಕೊಂಡು ನೋವಿನಲ್ಲೆ ಎದ್ದು ಹರಿದು ಬಿದ್ದಿದ್ದ ಎಲ್ಲಾ ತುಂಡನ್ನು ಅಳುತ್ತಾ ಸೇರಿಸ ತೊಡಗಿದ. “ನೀನು ಹೋಗುತ್ತೇನೆ ಎಂದಾಗ ಕಳಿಸಿಕೊಟ್ಟಿದ್ದರೆ ತೊಂದರೆ ಇರಲಿಲ್ಲ, ನಿನ್ನನ್ನು ಶಾಲೆಗೆ ಕರೆದೊಯ್ದು ನಿನ್ನ ಬದುಕೆ ನಾಶ ಮಾಡಿದಂತೆ ಆಯಿತು. ಸ್ವಾರಿ ದೋಸ್ತ ದಯವಿಟ್ಟು ಕ್ಷಮಿಸು” ಎಂದು ಎಲ್ಲವನ್ನು ನಿಧಾನವಾಗಿ, ಒಂದು ತುಂಡನ್ನು ಬಿಡದಂತೆ ಕಟ್ಟಾದ ರೀತಿಯಲ್ಲಿ ಪುನಃ ಜೋಡಿಸಿ ತೊಡಗಿದೆ. ಐದಾರು ತುಂಡಾಗಿದ್ದ ಬಿದಿರು ಜೋಡಿಸಿದೆ. ದಾರ ಸರಿಪಡಿಸಿದೆ. ಎಲ್ಲವನ್ನೂ ಸೇರಿಸಿ ಕೊನೆಯ ಬಾರಿಗೆ ಗಾಳಿಪಟವನ್ನು ನೋಡಲು ಪ್ರಯತ್ನಿಸಿದೆ. ಸುಂದರವಾದ ರೆಡ್ ಕೈಟ್ ಹರಿದು ಹೊಲಸಾಗಿ ಹೊಳೆಪು ಕಳೆದುಕೊಂಡಿತ್ತು. ಆ ಆಕಾರದಲ್ಲಿ ಜೋಡಿಸಿ ಅಳುತ್ತಾ ಕುಳಿತೆ “ನೀನು ಎಚ್ಚರಿಕೆ ಕೊಟ್ಟೆ. ನಾನು ಉಡಾಫೆ ಮಾಡಿದೆ. ನನ್ನ ಅಲಕ್ಷ ನಿನ್ನ ಈ ಸ್ಥಿತಿಗೆ ಕಾರಣ. ಎಷ್ಟು ಒಳ್ಳೆಯದು ಮಾಡಿದೆ ನೀನು ನನಗೆ. ನಾನು ಮಾತ್ರ ನಿನ್ನನ್ನು ಈ ಸ್ಥಿತಿಗೆ ತಂದೆ. ಕ್ಷಮಿಸು ಕೈಟ್ ಕ್ಷಮಿಸು” ಎಂದು ಅಳುತ್ತಾ ಬಗ್ಗಿದೆ. ನನ್ನ ಕಣ್ಣಿರು ಅದರ ಮೇಲೆ ಬಿದ್ದಿತು. ಒಮ್ಮಿಂದೊಮ್ಮೊಲೆ ಮಿಂಚು ಬಡಿದಂತಾಯಿತು. ಪಟದಿಂದ ಬೆಳಕು ಹಾರಿ ಹೋಯಿತು. ನೋಡುನೋಡುತ್ತಿದ್ದಂತೆ ಮಿ.ಕೈಟ್ ಮೊದಲಿನ ರೂಪ ಪಡೆಯಿತು. ಆಶ್ಚರ್ಯ. “ಮರುಜೀವ ಕೊಟ್ಟ ನಿನಗೆ ನಾನು ಎಂದಿಗೂ ಋಣಿ” ಎಂದಿತು. ಅದು ಮತ್ತೆ ಮೊದಲ ರೂಪ ಪಡೆದುಕೊಂಡಿದ್ದು, ಮಾತಾಡಿದ್ದು ನೋಡಿ ನನಗಾದ ಆನಂದ ಅಷ್ಟಿಷ್ಟಲ್ಲ. “ಮಿ.ಕೈಟ್ ಹೌ ಇಟ್ ಪಾಸಿಬಲ್” ಎಂದೆ. “ಎಸ್, ಎವರಿ ಥಿಂಗ್ ಈಜ್ ಪಾಸಿಬಲ್. ಫಾರ್ ಎನಿ ಪ್ರಾಬ್ಲಮ್ ದೇರ್ ಈಜ್ ಸಲ್ಯೂಶನ್” ಎಂದಿತು.
“ಏನೋ, ನಿನಗೆ ಫಾರೆನ್ ಕೈಟ್ ಆತ್ಮ ನಿನ್ನಲ್ಲಿ ಹೊಕ್ಕಂಡದನು. ಒಮ್ಮಿಂದೊಮ್ಮಲೆ ಈ ಪರಿ ಇಂಗ್ಲಿಷ್ ಮಾತಾಡುತ್ತಿದ್ದಿಯಲ್ಲ” ಎಂದು ನಕ್ಕೆ ನೋವಿನಲ್ಲೂ.
“ಹಾಗೆ ಅಂದುಕೊ, ಬಟ್ ನೀನು ಹಾಗೆ ಹೋಗಿದ್ದರೆ ನನ್ನ ಕೊನೆಯಾಗುತ್ತಿತ್ತು… ನೀನು ಮತ್ತೆ ತಾಳ್ಮೆಯಿಂದ ಚಿಂದಿಯಾಗಿದ್ದ ನನ್ನನ್ನು ಜೋಡಿಸಿದೆ. ಅದರಿಂದ ನಾನು ಈ ರೂಪ ತಾಳಲು ಸಾಧ್ಯವಾಯಿತು…”
“ಆದರೂ. . .”
“ಏನೂ ಚಿಂತಿಸಬೇಡ… ಅವರಿಗೂ ನಿನ್ನ ಮೇಲೆ ದ್ವೇಷವಿತ್ತು ನನ್ನನ್ನು ಹರಿದು ಸಮಾಧಾನವಾಗಿದ್ದಾರೆ. ನನಗೂ ಜೀವಬಂದಿದ್ದಕ್ಕೆ ನಿನಗೂ ಖುಷಿಯಾಗಿದೆ. ಜಗತ್ತು ಹೀಗೆ ಖುಷಿಯಾಗಿರಬೇಕು… ನಡಿ ನಿನ್ನನ್ನು ಮನೆಗೆ ಬಿಟ್ಟು ನಾನು ಮುಂದೆ ಪ್ರಯಾಣ ಬೆಳೆಸುವೆ” ಎಂದಿತು. ನಾನು ನೋವಿನಲ್ಲೂ ನಗುವನ್ನು ತೆಗೆದುಕೊಂಡು “ಸ್ವಾರಿ ಮಿ.ರೆಡ್ ಕೈಟ್”
“ಡೋಂಟ್‌ವರಿ, ಆಗಿದ್ದೆಲ್ಲಾ ಆಗಿದೆ. ಈಗಲಾದರೂ ನಗುತ್ತಾ ಕಳಿಸಿಕೊಡುತ್ತಿಯಾ ತಾನೆ” ಎಂದಿತು.
“ಯಾವ ಜನ್ಮದ ಬಂಧವೋ, ಇಷ್ಟು ದಿನ ನನಗೆ ಬೆಳಕಾಗಿದ್ದಿ, ನಿನ್ನ ಉಪಕಾರ ಮರೆಯಲಾರದ್ದು. ನಾವು ಕೆಟ್ಟವರು. ಹೋಗಿ ಬಾ ಗೆಳೆಯ” ಎಂದೆ.
“ಹಿಡಿ ನನ್ನ ಚುಂಗು”
“ಮತ್ತೆಲ್ಲಿಗೆ?”
“ಮನದ ಮೂಲೆಯಲ್ಲಿ ಏನೇನೋ ಆಸೆ ಇಟ್ಟುಕೊಂಡಿರುವೆಯಲ್ಲ, ಅವನ್ನೆಲ್ಲಾ ಈಡೇರಿಸಿ ನಿನ್ನ ಮನೆಗೆ ಬಿಡುವೆ” ಎಂದು ನಕ್ಕಿತು.
ದಾರ ಹಿಡಿದೆ ಅಷ್ಟೆ. ನನಗೆ ಆಗಿದ್ದ ಗಾಯವೆಲ್ಲ ಮಾಯವಾಯಿತು. ನೋವೆಲ್ಲ ಹಾರಿ ಹೋಯಿತು. ನನ್ನ ಮನದಲ್ಲಿ ಆ ಕ್ಷಣದಲ್ಲಿ ಮೂಡಿದ್ದ ವಿದೇಶ ಪ್ರವಾಸದ ಕನಸನ್ನು ಮಿ.ರೆಡ್ ಕೈಟ್ ಅರಿತುಕೊಂಡು ಅಮೆರಿಕಾ ,ಇಂಗ್ಲೆ೦ಡ್, ಜಪಾನ್,ಚೀನಾ ದೇಶಗಳ ದರ್ಶನ ಮಾಡಿಸಿತು. ಅಮೇಜಾನ್ ಕಾಡು ತೋರಿಸಿತು, ಸಹರಾಮರಭೂಮಿ, ನಯಾಗರ ಜಲಪಾತ, ಜ್ವಾಲಾಮುಖಿ ಪರ್ವತ, ಸಾಗರದ ಆಳ ಎಲ್ಲವನ್ನೂ ಅಚ್ಚರಿಯಂತೆ ನೋಡಿದೆ. ಮನಸ್ಸು ಮನೆ ನೆನೆದಾಗ ಸೀದಾ ಮನೆ ಮುಂದೆ ಇಳಿದೆ. ಅದು ಮೇಲೆರಿತು ನಾನು ಟಾಟಾ ಮಾಡುತ್ತ ನಿಂತೆ. ನನ್ನನ್ನು ಬಡಿದವರು ಮನೆಗೆ ಸುದ್ದಿ ಮುಟ್ಡಿಸಲು ಮನೆಗೆ ಬರುತ್ತಿದ್ದರು. ನನ್ನನ್ನು ನೋಡಿ ಗೆಳೆಯರಿಗಾದ ಗೊಂದಲ, ಗಾಭರಿ ಅಷ್ಟಿಷ್ಟಲ್ಲ. ನಾನು ವಕ್ರವಾಗಿ ಅವರತ್ತ ನೋಡಿದೆ ಅಷ್ಟೆ. ಏಳಲು ಬಾರದಂತಹ ಸ್ಥಿತಿಯಲ್ಲಿದ್ದ ನಾನು ‘ಸೂಪರ್ ಮ್ಯಾನ್’ ತರಹ ಆಗಿದ್ದನ್ನು ನೋಡಿ ಎದ್ದೆನೋ ಬಿದ್ದೆನೋ ಎಂದು ನೋಡಿ ನೋಡಿ ಓಡ ಹತ್ತಿದರು.

। ಮುಕ್ತಾಯ ।

‍ಲೇಖಕರು Admin

26 December, 2025

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading