-ಮಲ್ಲಮ್ಮ ಯಾಟಗಲ್
ಜೋಳಿಗೆಗೆ ಬಿದ್ದ ನಕ್ಷತ್ರಗಳು
ಎಲ್ಲಿಂದಲೋ ಗಾಳಿಗೆ ತೂರಿ ಬರುವ
ನಕ್ಷತ್ರಗಳಿಗೆ ಬಾಯೊಡ್ಡಿದ
ಜೋಳಿಗೆಯೊಳಗೆ ಬಿದ್ದ ಬಾರಕ್ಕೆ
ಅದರುವ ಮೊಣಕಾಲಿನ ಚಿಪ್ಪನ್ನು
ಅಂಗೈಯೊಳಗೆ ಅದಮಿದಷ್ಟು ನೋವೆ ಹೆಚ್ಚು
ಬಾಯೊಡ್ಡಬಾರದೆಂದುಕೊಂಡರು
ಎದೆಯಲ್ಲಿ ಹೆಪ್ಪುಗಟ್ಟಿದ ಕಫ ಮೊಸರಿನಂತೆ
ಕಕ್ಕಿದಷ್ಟು ಕಷ್ಟವೇಯಾದರು
ಎದೆ ಸಪಾಯಕ್ಕಾದರು ಕಕ್ಕಬೇಕು ಎನಿಸಿದರೂ
ಅದು ಹಲ್ಲಿನ ವಸಡಿಗೆ ಅದು ವಿಷಕಾರಿಯೇ..!
ಕಕ್ಕಾಬಿಕ್ಕಿಯಾದ ನಕ್ಷತ್ರಕ್ಕೆ
ಎದೆ ನೋವು ಬ್ಯಾರೆ ಕೇಡು…
ನೆತ್ತಿಗೇರಿದ ನೋವಿಗೆ
ಬುದ್ದನ ಸಾಂತ್ವನವೇ ಇಲ್ಲಿ ಎಲರಿಗೂ ಇದೆ ಮೂಲಾಮು
ಎನ್ನುವುದು ಮರೆತು ಹೋಗಿದೆಯಲ್ಲ ಜಗತ್ತು..
ರಾಯ ಮುಂಜಾನೆದ್ದು ಉದ್ದನೆಯ ಪೊರಕೆ ಹಿಡಿದು
ರಸ್ತೆಯ ಗಟಾರಗಳಿಗೆ ಹೆಪ್ಪಗಟ್ಟಿದ ಹಸಿ ಕಸ ಒಣಕಸ ಗೂಡಿಸಿದಷ್ಟು ಸುಲಭವಲ್ಲ
ಇಲ್ಲಿ ಸಾವಿರಾರು ವರ್ಷದಿಂದ ಮೈಗಂಟ್ಟಿಸಿಕೊಂಡ
ಹೊಲಸನ್ನು ಬಿಡಿಸುವುದು
ಕಂಡದ್ದು ಕಾಣದ್ದು,ಕಾಣದ್ದು ನೋಡಿದೆನೆಂಬಂತೆ
ಆಣತೆ ದೂರದಲ್ಲಿ
ಪೊರಕೆ ಅಡ್ಡಡ್ಡ ಉದ್ದೂದ ಮಲಗಿ ವಿಶ್ರಮಿಸಬೇಕು
ಪೊರಕೆ ಹಿಡಿದ ರಾಯನ ಕೈಗಳು ಮಾತ್ರ
ಬಹುರಾಷ್ಟ್ರೀಯ ಡೇಟಾಲ್ ಬೇಡುತ್ತಿತ್ತು






0 Comments