ಗಿರಿಜಾ ಶಾಸ್ತ್ರಿ ಅಂಕಣ: ಎಲ್ಲೆಡೆ ಹಿಂಸೆ ತಾಂಡವವಾಡುತ್ತಿದೆ.

ಗಿರಿಜಾ ಶಾಸ್ತ್ರಿ 

ಎಲ್ಲೆಡೆ ಹಿಂಸೆ ತಾಂಡವವಾಡುತ್ತಿದೆ. ಇಂದು ನಡೆಯುತ್ತಿರುವ ಹಿಂಸೆಗಳಿಗೆ ಅನೇಕ ಕಾರಣಗಳಿವೆ. ಹಿಂಸೆಯ ಸ್ವರೂಪ ಮತ್ತು ಕಾರಣಗಳನ್ನು ಕುರಿತು ಮಾತನಾಡುವುದು ಎಂದಿಗಿಂತ ಇಂದು ಅಗತ್ಯವಾಗಿದೆ, ಮಾತ್ರವಲ್ಲ ಅನಿವಾರ್ಯವೂ ಆಗಿದೆ.

ಹಿಂಸೆಯೆಂದರೆ ಕೇವಲ ಕಣ್ಣಿಗೆ ಕಾಣುವ ದೈಹಿಕ ಹಿಂಸೆ ಮಾತ್ರವಲ್ಲ. ಅಗೋಚರ  ಹಿಂಸೆಯ ಸ್ವರೂಪ, ಭೌತಿಕ ಹಿಂಸೆಗಿತಲೂ ಅಪಾಯಕಾರಿಯಾದುದು. ಅಲ್ಲದೇ ಭೌತಿಕ ಹಿಂಸೆಗಳ ಬೇರುಗಳು ಇರುವುದೇ  ಅಗೋಚರ ಹಿಂಸೆಯ ಪರಿಕಲ್ಪನೆಯಲ್ಲಿ. ಇವು ಕಣ್ಣಿಗೆ ಕಾಣುವುದಿಲ್ಲ. ಆದರೆ ತಲೆತಲಾಂತರದಿಂದ ಇವು ನಾವು ಸೇವಿಸುವ ಗಾಳಿಯಲ್ಲಿ, ಆಹಾರದಲ್ಲಿ ಉಡುಗೆ, ತೊಡುಗೆ ಒಟ್ಟು ಬದುಕಿನ ರೀತಿಯಲ್ಲಿ  ಬೇರ್ಪಡಿಸಲಾಗದಂತೆ ಬೆರೆತು ಹೋಗಿವೆ. ಡಿ.ಆರ್. ನಾಗರಾಜ್ ಅವರ ಪ್ರಕಾರ ಹಿಂಸೆ ಮಾನವ ಕೇಡಿನ ಅನಿವಾರ್ಯ ರೂಪ ಮಾತ್ರವಲ್ಲ, ಸಮಷ್ಟಿ ವ್ಯಕ್ತಿತ್ವ ನಿರ್ಮಿತಿಯಲ್ಲಿ “ಅದೊಂದು ಮಹಾ ಪೂಜೆ. ಅದೊಂದು ಮಹಾ ಮಾಟ ಒಂದು ಬಗೆಯ ಸಮಷ್ಟಿ ಆತ್ಮದ ಸಾಕ್ಷಾತ್ಕಾರ ಕ್ಕಾಗಿ ನಡೆಸುವ ಮಹಾವಿಧಿ. ಆದರೆ ಅಂತಿಮವಾಗಿ ಯಾವ ಆತ್ಮವೂ ಇರುವುದಿಲ್ಲ. ಇರುವುದೇನಿದ್ದರೂ ರಕ್ತ ಪಿಪಾಸು ಪಿಶಾಚಗಣ ಮಾತ್ರ”

ಹಿಂಸೆಗೆ ಮುಖ್ಯ ವಾಗಿ ನಾಲ್ಕು ಕಾರಣಗಳನ್ನು ಅವರು ಗುರುತಿಸುತ್ತಾರೆ. ಅವುಗಳೆಂದರೆ, ದೈವದ ಕಲ್ಪನೆ, ಭಾಷೆ, ಕುಲ, ಮಣ್ಣಿನ ಮಹಿಮೆ. ಇವು ಕಲಾತ್ಮಕ ಸಾಧನೆಗಳಿಗೆ ಪ್ರೇರಣೆ ನೀಡಿರುವಂತೆ ಊಹಾತೀತ ಹಿಂಸಾಕಾಂಡಗಳಿಗೂ ಕಾರಣವಾಗಿವೆ ಎನ್ನುತ್ತಾರೆ. ಇದರ ಜೊತೆಗೆ ಲಿಂಗವನ್ನೂ ಸೇರಿಸಬಹುದು. ಆದರೆ ಇದರ ಹಿಂಸಾರೂಪ ಇನ್ನೂ ಸಂಕೀರ್ಣವಾದುದು. ಯಾಕೆಂದರೆ ಇದು ಎಲ್ಲಾ ವರ್ಗಗಳಲ್ಲೂ ಹಂಚಿಹೋಗಿರುವುದರಿಂದ ಲೈಂಗಿಕ ಹಿಂಸೆಯ ಸ್ವರೂಪವನ್ನು ಪ್ರತ್ಯೇಕ ವಾಗಿಯೇ ಸಂಬೋಧಿಸಿ ಬೇಕಾಗಿದೆ.

ಮನುಕುಲದ ಚರಿತ್ರೆ ಎಂದರೆ ಯುದ್ಧದ ಚರಿತ್ರೆಯೇ ಆಗಿದೆ.  ಬಲಿಷ್ಠ ರಾಜ್ಯ / ರಾಷ್ಟ್ರವೊಂದು ಅಬಲ ರಾಜ್ಯ/ ರಾಷ್ಟ್ರದ ಮೇಲೆ ದಂಡೆತ್ತಿ ಹೋಗಿ ಸಾವಿರಾರು ಸೈನಿಕರನ್ನು ಸಾಯಿಸಿ, ಅವರ ಮೇಲೆ ಅವಲಂಬಿತವಾದವರನ್ನು ಅನಾಥಗೊಳಿಸಿ, ದೇಶವನ್ನು ಕಬಳಿಸಿಕೊಂಡು, ತನ್ನ ಮೂಗಿನ ನೇರಕ್ಕೆ ಶಾಸನ ಬರೆಸುತ್ತದೆ. ಅದಕ್ಕೆ ತಕ್ಕುದಾದ ಪ್ರಭುತ್ವದ ರೀತಿಯನ್ನು, ಕಲಾ ಮೌಲ್ಯಗಳನ್ನು, ಸೌಂದರ್ಯ ಮೀಮಾಂಸೆಯನ್ನು ರೂಪಿಸುತ್ತದೆ. ಆರ್ಥಿಕ, ಸಾಮಾಜಿಕ ಸಂರಚನೆಯನ್ನು ರಚಿಸುತ್ತದೆ.  ಅವುಗಳೇ ನಿಜವೆಂದು, ಸಹಜವಾದುದೆಂದು ಜನರನ್ನು ನಂಬಿಸುವಲ್ಲಿ ಯಶಸ್ವಿಯಾಗುತ್ತದೆ.

ಲಾಗಾಯ್ತಿನಿಂದ  ಇಂತಹ ಅನೈತಿಕ ಆರ್ಥಿಕ ಮತ್ತು ರಾಜಕೀಯ ಶಕ್ತಿಗಳು ತಮಗೆ ತಾವೇ ಜನರ ಬದುಕಿನ ಮೇಲೆ ಹತೋಟಿಯನ್ನು ಸಾಧಿಸಿ ಕೊನೆಗೆ ಅದನ್ನೇ ಸಹಜವೆನ್ನುವಂತೆ ಒಪ್ಪಿಕೊಳ್ಳುವಂತೆ ಮಾಡಿಬಿಡುತ್ತವೆ. ಇಂತಹ ಅಘೋಷಿತ ಪ್ರಭುತ್ವದ ಯಾಜಮಾನ್ಯ ತೊಡಗಿಸಿಕೊಳ್ಳುವ ಹಿಂಸೆಯ ಸ್ವರೂಪವನ್ನು ವಾಲ್ಟರ್ ಬೆಂಜಮಿನ್ “ಮಿಥಿಕ್ ವೈಲೆನ್ಸ್ ” ಎಂದು ಕರೆಯುತ್ತಾನೆ.  ಅದು ಏಕೆ ಕಾಲಕ್ಕೆ ಹುಸಿಯೂ ಹೌದು, ನಿಜವೂ ಹೌದು. ಅದು ಹುಸಿ ಏಕೆಂದರೆ ಅವುಗಳ ಯಾಜಮಾನ್ಯಕ್ಕೆ ಯಾವ ತಾರ್ಕಿಕ ಆಧಾರವೂ ಇಲ್ಲ. ಆದರೆ ತಮಗೆ ತಾವೇ ಆರೋಪಿಸಿಕೊಂಡ ಯಾಜಮಾನ್ಯದ ಮೂಲಕ ಅದನ್ನು ಸಹಜವೆನ್ನುವಂತೆ, ಅನಿವಾರ್ಯವೆನ್ನುವಂತೆ ಮಾಡಿರುವುದರಿಂದ ಅದು ನಿಜ. ಇವೆರಡರ ನಡುವಿನ ಭ್ರಮೆಗೆ ಸಿಕ್ಕಿದ ಜನಸಾಮಾನ್ಯರು ಅದಕ್ಕೆ ಬದ್ಧರಾಗುವಂತೆ ಮಾಡುವಲ್ಲಿ ಗೆಲುವನ್ನು ಸಾಧಿಸುತ್ತದೆ. ಇಂತಹ ಅನೈತಿಕ ಸ್ವರೂಪದ ಬೀಜಗಳು ಸಂಸ್ಕೃತಿಯನ್ನು ರೂಪಿಸಿರುವುದೇ ಹಿಂಸೆ ಸ್ಫೋಟ ಗೊಳ್ಳಲು ಕಾರಣವಾಗಿದೆ. ಮಾತ್ರವಲ್ಲದೆ ಅವುಗಳ ಸಾತತ್ಯವನ್ನು ಕಾಪಾಡಿಕೊಳ್ಳುವಲ್ಲಿ ಎಚ್ಚರವಹಿಸುತ್ತದೆ.

ಹಿಂಸೆಗೆ ಧಾರ್ಮಿಕ ನಂಬಿಕೆಗಳ ಒತ್ತಾಸೆಯಿದೆ. ವಸುದೈವ ಕುಟುಂಬಕಂ ಎನ್ನುವ ವಿಶ್ವಸನೀಯ  ಅಧ್ಯಾತ್ಮಿಕ ಬಲವಿಲ್ಲ. ಆದ್ದರಿಂದಲೇ ಡಿ.ಆರ್. ನಾಗರಾಜ್ ಅವರು ಅಲ್ಲಿ “ಯಾವ ಆತ್ಮವೂ ಇರುವುದಿಲ್ಲ. ಇರುವುದೇನಿದ್ದರೂ ರಕ್ತ ಪಿಪಾಸು ಪಿಶಾಚಗುಣ ಮಾತ್ರ” ಎನ್ನುತ್ತಾರೆ.

ನನಗೆ ಈ ಕ್ಷಣಕ್ಕೆ ಪು.ತಿ.ನ ಅವರ “ಕೊಳಂದೈ” ಪ್ರಬಂಧ ನೆನಪಾಗುತ್ತಿದೆ. ಪು.ತಿ.ನ ಅವರ ತಂದೆ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇವಾಲಯದ ಅರ್ಚಕರು. ದೇವಸ್ಥಾನಕ್ಕೆ ಮಡಿನೀರನ್ನು ಒದಗಿಸುತ್ತಿದ್ದ ವ್ಯಕ್ತಿಯ ಹೆಸರು  ಕೊಳಂದೈ (ಮಗು). ಒಂದು ದಿನ ಅವನು ಹಂಡೆಯಲ್ಲಿ ನೀರನ್ನು ಹೊತ್ತೊಯ್ಯುತ್ತಿದ್ದಾಗ, ಪು.ತಿ.ನ ಎದುರಾಗುತ್ತಾರೆ, ಆಗ ಗಾರ್ಧಬನಂತೆ ಕಿರುಚುತ್ತಾನೆ. ಏನಾಗಿದೆ ಇವನಿಗೆ ಎಂದು ಪು.ತಿ.ನ ಅವರು ಅಂದುಕೊಳ್ಳುತ್ತಿರುವಾಗ ‘ನಾನೀಗ ಕತ್ತೆಯಾಗಿದ್ದೆ’ ಎನ್ನುತ್ತಾನೆ. ಇನ್ನೊಮ್ಮೆ ಬಾಳೆ ಹಣ್ಣಿನ ಬುಟ್ಟಿಯಿಂದ ಒಂದು ಹಣ್ಣನ್ನು ಎಗರಿಸಿ ‘ನಾನೀಗ ಕೋತಿಯಾಗಿದ್ದೆ’ ಎನ್ನುತ್ತಾನೆ. ಮತ್ತೊಮ್ಮೆ ಮಾವಿನ ಹಣ್ಣಿನ ಬುಟ್ಟಿಯಿಂದ ಒಂದು ಹಣ್ಣನ್ನು ಹಾರಿಸಿ ಆಚಾರ್ಯರು ಕೇಳುವ ಮೊದಲೇ ‘ನಾನೀಗ ಗಿಣಿಯಾಗಿದ್ದೆ’ ಎನ್ನುತ್ತಾನೆ. ಸ್ವಲ್ಪ ಹೊತ್ತಿನ ನಂತರ ಸುಮ್ಮನಿದ್ದ ಅವನನ್ನು ಪು.ತಿ.ನ ‘ಈಗ ನೀನು ಏನಾಗಿದ್ದೀಯಾ?’ ಎಂದು ಕೇಳುತ್ತಾರೆ. ಅದಕ್ಕೆ ಅವನು ‘ನಾನು ಈಗ ಯಾರೂ ಅಲ್ಲ. ಅದೇ ಸುಖ’ ಎನ್ನುತ್ತಾನೆ. ಅವನು ರೂಪ,ರಸ, ಗಂಧಗಳಿಲ್ಲದ ಆತ್ಮದ ಜೊತೆಗೆ ಗುರುತಿಸಿಕೊಂಡವನು. ಬಾಹ್ಯ ಸಂಗತಿಗಳ ಜೊತೆಗೆ ಗುರುತಿಸಿಕೊಳ್ಳುವುದೆಂದರೇನೇ ಹಿಂಸೆಗೆ ಆಹ್ವಾನವಿತ್ತಂತೆ. ಗುರುತಿಸಿಕೊಂಡಕ್ಷಣ ಅದಕ್ಕೆ ಬದ್ಧರಾಗಬೇಕಾದ ಅನಿವಾರ್ಯತೆಯನ್ನು ಹೇರಿಕೊಳ್ಳಬೇಕಾಗುತ್ತದೆ.

ನಿಜವಾಗಿ ಸುಖವೆಂದರೆ ಯಾರೂ ಆಗದಿರುವುದೇ. ಯಾರೂ ಅಗದಿರುವುದೆಂದರೇನೇ ಎಲ್ಲ ಆಗಿರುವುದು. ಹೀಗೆ ಎಲ್ಲಾ ಆಗುವುದರ ಬಗ್ಗೆ ರಾಮಕೃಷ್ಣ ಪರಮಹಂಸರು ಒಂದು ಪ್ರಯೋಗವನ್ನು ಮಾಡುತ್ತಾರೆ. ರಾಮಕೃಷ್ಣ ಪರಮಹಂಸರು ಹುಟ್ಟಿದ್ದು ಹಿಂದೂ ಧರ್ಮದಲ್ಲಿ.  ಆದರೆ ಅವರು ಬದುಕಿದ್ದಷ್ಟು ಕಾಲವೂ ಜಗತ್ತಿನ ಬೇರೆ ಬೇರೆ ಧರ್ಮಗಳ ನಂಬಿಕೆಗಳನ್ನು ಆತ್ಮಸಾತ್ ಮಾಡಿಕೊಳ್ಳುವ ಸಲುವಾಗಿ ಆಯಾ ಧರ್ಮಕ್ಕನುಸಾರವಾಗಿ ಹಲವಾರು ವೇಷಗಳನ್ನು ತೊಟ್ಟು, ಆ ವೇಷದಲ್ಲಿ ಬದುಕಿ ಆಯಾ ನಂಬಿಕೆಗಳನ್ನು ಸಾಕ್ಷಾತ್ಕರಿಸಿಕೊಳ್ಳುವಲ್ಲಿ ಸದಾ ಪ್ರಯೋಗಶೀಲರಾಗಿರುತ್ತಿದ್ದರು. ಉದಾಹರಣೆಗೆ ಕ್ರಿಸ್ತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂದರೆ ಕ್ರೈಸ್ತರಹಾಗೇ ಬದುಕುತ್ತಿದ್ದರು. ಹಾಗೆ ಬದುಕುತ್ತಿದ್ದ ಕಾಲದಲ್ಲಿ ಅವರು ತಮ್ಮ ಆರಾಧ್ಯ ದೈವವಾದ ಕಾಳಿಯನ್ನು ಒಮ್ಮೆಯೂ ತಿರುಗಿ ಕೂಡ ನೋಡುತ್ತಿರಲಿಲ್ಲವಂತೆ. ಆಯಾ ಧರ್ಮದ ನಂಬಿಕೆಗಳನ್ನು ಆತ್ಮಸಾತ್ ಮಾಡಿಕೊಂಡು ವೇಷ ಕಳಚಿದನಂತರವೇ ಹೊರಬರುತ್ತಿದ್ದರಂತೆ- ಹೌದು, ಯಾಕೆಂದರೆ ಒಂದನ್ನು ವಿಸರ್ಜಿಸದೇ ಮತ್ತೊಂದರ ಆವಾಹನೆಯಾಗಲಾರದು. ನಾವು ಏನೂ ಆಗದೇ ಇದ್ದಾಗ ಮಾತ್ರವೇ  ಏನೋ ಆಗಲು ಸಾಧ್ಯ. ಯಾವುದೋ ಅಸ್ಮಿತೆಗೆ ಅಂಟಿಕೊಂಡುಬಿಟ್ಟಾಗ ಅದರ ಜೊತೆಗೆ ಸ್ಥಾವರವಾಗಿಬಿಡುವ ಅಪಾಯವಿರುತ್ತದೆ. ಪರಮಹಂಸರು ಯಾವುದೇ ಒಂದು ಅಸ್ಮಿತೆಗೆ ತಮ್ಮನ್ನು ತಾವು ಕಟ್ಟಿಹಾಕಿಕೊಂಡವರಲ್ಲ. ಆದುದರಿಂದಲೇ ಅವರಿಗೆ ಹಲವು ಆಕೃತಿಗಳ ಮೈಹೊಕ್ಕು ಹಾದು ಹೊರಬರಲು ಸಾಧ್ಯವಾಯಿತು.  ಅವರು ಹೊಸ ಹೊಸ ಆವಾಹನೆ ಮತ್ತು ವಿಸರ್ಜನೆಯ ಆವರ್ತನಗಳಲ್ಲಿ ಅಖಂಡತೆಯನ್ನು ಅನುಭವಿಸಲು ಪ್ರಯತ್ನಿಸುತ್ತಿದ್ದರು. ಹೀಗೆ ಮಾಡುವುದರ ಮೂಲಕವೇ ಅವರಿಗೆ ಆಧುನಿಕ ಯುಗದಲ್ಲಿ ಸರ್ವಧರ್ಮ ಸಮನ್ವಯತೆಯನ್ನು ಸಾರಲು ಸಾಧ್ಯವಾಯಿತು.

ನಾವು ಯಾವುದೇ ಭಾಷೆ, ಕುಲ, ಮಣ್ಣು, ದೇವರ ಜೊತೆಗೆ ನಮ್ಮ ಅಸ್ಮಿತೆಯನ್ನು ಗುರುತಿಸಿಕೊಂಡಾಕ್ಷಣ ಅವುಗಳು ನಮ್ಮನ್ನು ತಮ್ಮ ಕಬಂಧ ಬಾಹುಗಳೊಳಗೆ ಸೆಳೆದುಕೊಂಡು ಕಟ್ಟಿಹಾಕಿಬಿಡುತ್ತವೆ. ಸುಳ್ಳನ್ನೇ ಸುಖವೆಂದು ನಿಜವೆಂದು ನಂಬಿಸಿ ಬಿಡುತ್ತವೆ. ಆಗ ನಮ್ಮದಲ್ಲದ ಇನ್ನೊಂದು ನಮಗೆ ಶತ್ರುವಾಗಿ ಕಾಣುತ್ತದೆ. ಆಗ ಹಿಂಸೆ ಅನಿವಾರ್ಯವಾಗಿ ಬಿಡುತ್ತದೆ.  ‘ಕಳಬೇಡ ಕೊಲಬೇಡ’ ಎಂಬ ವಿಶ್ವಾತ್ಮಕ ಮೌಲ್ಯವನ್ನೂ ಜಾತಿ ಗೋಡೆಯೊಳಗೆ ಬಂಧಿಸಿ ವಿಷ ಕನ್ಯೆಯನ್ನು ಪೋಷಿಸುವಂತೆ ಪೋಷಿಸಿ  ವಿಜಾತಿಯವರನ್ನು ಹಣಿಯಲು ಬಳಾಸಲಾಗುತ್ತದೆ. ವೀರ ಮೌಲ್ಯಗಳ ಮದವೇರಿಸಿ,  ಶತ್ರುವನ್ನು ಕೊಲ್ಲುವುದೇ ಧರ್ಮವೆಂಬ ಸುಳ್ಳನ್ನು ನಿಜವೆಂಬಂತೆ ಇದು ಸಹಜವಾಗಿ ನಂಬಿಸಿ ಬಿಡುತ್ತದೆ.

ವೀರ ಮೌಲ್ಯಗಳ ಮೂಲ ಹಿಂಸಾತ್ಮಕ ವಾದುದೇ. ಆದುದರಿಂದಲೇ ಪೆರುಮಾಳ್ ಮುರುಗನ್ ಅವರು ವೀರತ್ವವನ್ನು ನಿರಾಕರಿಸಿ ತಮ್ಮನ್ನು ತಾವು ಹೇಡಿ ಎಂದು ಗುರುತಿಸಿಕೊಳ್ಳುತ್ತಾರೆ. ಹೇಡಿಯೊಬ್ಬ ಸಂಘಟನೆ ಮಾಡಲಾರ, ಬ್ಯಾನರ್ ಹಿಡಿದು ಒಂದು ಪಕ್ಷದ ವಕಾಲತ್ತು ವಹಿಸಲಾರ, ಹೆಣ್ಣನ್ನು ಕಣ್ಣೆತ್ತಿಯೂ ನೋಡಲಾರೆ. ಅವನಿಂದ ಯಾವ ರೀತಿಯ ಹಿಂದೆಯೂ ಘಟಿಸುವುದಿಲ್ಲ.

ಆದರೆ ಇಂದು ಹಿಂಸೆಯ ವೀರಾವೇಶವೇ ಮೌಲ್ಯವಾಗಿದೆ.

ಗಾಂಧೀಜಿಯವರು ನೀಲಿ ಬೆಳೆಗೆ ಸಬಂಧಿಸಿದಂತೆ ಬ್ರಿಟಿಷರ ಅಭಿಪ್ರಾಯವನ್ನು ವಿರೋಧಿಸಲು ಚಂಪಾರಣ್ಯಕ್ಕೆ ಹೋದಾಗ ಅಲ್ಲಿನ ಬತಖ್ ಮಿಯಾ ಎನ್ನುವ ಬಾಣಸಿಗನಿಗೆ ಏನೇನೋ ಆಮಿಷ ತೋರಿಸಿ ಗಾಂಧೀಜಿ, ರಾಜೇಂದ್ರ ಪ್ರಸಾದ್ ಮತ್ತು ಕೆಲವು ಕಾರ್ಯಕರ್ತರಿಗೆ ವಿಷವಿಕ್ಕುವಂತೆ ಇರ್ವಿನ್ ಎನ್ನುವ ಬ್ರಿಟಿಷ್ ಅಧಿಕಾರಿ ಆಜ್ಣ್ಯೆ ಮಾಡಿದನಂತೆ ಅವನ ಆಜ್ಣ್ಯೆಯನ್ನು ಮಿಯಾ ತಳ್ಳಿ ಹಾಕಿದ ಸುದ್ದಿಯನ್ನು ರಾಜೇಂದ್ರ ಪ್ರಸಾದ್ ಒಂದು ಕಡೆ ಹೇಳಿಕೊಂಡರಂತೆ.

‍ಲೇಖಕರು avadhi

February 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: