ಗಾಂಧಿ ಮೊಮ್ಮಗಳ ಜೊತೆ ಬಿ ವಿ ಭಾರತಿ ಸಂದರ್ಶನ

ಭಾರತಿ ಬಿ ವಿ

ಜೂನ್ 11, 2019 ನನ್ನ ಪಾಲಿಗೆ ಅತ್ಯಂತ ಮಹತ್ವದ ದಿನ… ಅಂದು ನಾನು ಮಹಾತ್ಮಾ ಗಾಂಧಿಯವರ ಮೂರನೆಯ ಮಗನಾದ ರಾಮದಾಸ್ ಅವರ ಹಿರಿಯ ಮಗಳು ಸುಮಿತ್ರಾ ಗಾಂಧಿಯವರನ್ನು ಭೇಟಿಯಾಗಲು ಹೊರಟಿದ್ದೆ! ಮಹಾತ್ಮನ ಬಗ್ಗೆ ಭಾರತೀಯರಾದ ನಮಗೆ ಸಾಕಷ್ಟು ಗೊತ್ತೇ
ಇದೆಯಲ್ಲವೇ? ಹಾಗಾಗಿ ನನಗೆ ಅದಕ್ಕಿಂತ ಬಾಲ್ಯದಲ್ಲಿ ಸಾಕಷ್ಟು ಕಾಲ ಗಾಂಧಿಯವರೊಡನೆ ಒಡನಾಡಿದ ಸುಮಿತ್ರಾ ಗಾಂಧಿಯವರ ‘ಆ ದಿನಗಳ’ ಬಗ್ಗೆ ತಿಳಿಯುವ ಕುತೂಹಲವಿತ್ತು!

ಮೊಮ್ಮಗಳು ಅಂಥ ಜಗಕೆಲ್ಲ ಕಣ್ಣಾದ ಬಾಪುವಿನಂಥ ತಾತನೊಟ್ಟಿಗೆ ಎಷ್ಟು ವರ್ಷ ಬದುಕಿದ್ದಿರಬಹುದು?
ಗಾಂಧಿತಾತ ಮನೆಯಲ್ಲಿ ತಾತನಾಗಿ ಹೇಗಿದ್ದಿರಬಹುದು?
ನಮ್ಮ ತಾತಂದಿರ ಹಾಗೆ?
ಮೊಮ್ಮಕ್ಕಳಿಗೆ ಕತೆ ಹೇಳಿದ್ದಿರಬಹುದಾ?!
ಪೆಪ್ಪರ್‌ಮಿಂಟ್ ತಂದುಕೊಟ್ಟಿರಬಹುದಾ?
ಮಕ್ಕಳು ಅಜ್ಜನ ಕೈಲಿ ಗದ್ದಲ ಮಾಡಿ ಬಯ್ಯಿಸಿಕೊಂಡಿರಬಹುದಾ?
ನಾವು ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋದಂತೆ ಗಾಂಧೀಜಿಯವರ ಮನೆಗೆ ಮೊಮ್ಮಕ್ಕಳು
ಹೋಗುತ್ತಿದ್ದರಾ?
ಹೀಗೆ ಹತ್ತು ಹಲವು ಕುತೂಹಲಗಳು ನನಗೆ.

ಆ ಕುತೂಹಲದ ಜೊತೆಜೊತೆಗೇ ಅಷ್ಟು ದೊಡ್ಡವರನ್ನು ಭೇಟಿಯಾಗುವ ಸಣ್ಣ ಆತಂಕ ಬೇರೆ. ಆ ಆತಂಕದಲ್ಲಿಯೇ ನಾವು ಅವರ ಮನೆ ತಲುಪಿದಾಗ ಮಧ್ಯಾಹ್ನ 3.50 ಆಗಿತ್ತು. ನಮ್ಮ ಭೇಟಿಯ ಸಮಯ ನಿಗದಿ ಆಗಿದ್ದಿದ್ದು ನಾಲ್ಕು ಘಂಟೆಗೆ. ಆದರೆ ಬೆಂಗಳೂರಿನ ಟ್ರಾಫಿಕ್ ದಯೆತೋರಿದ
ಕಾರಣದಿಂದ ನಾವು ಹತ್ತು ನಿಮಿಷ ಮೊದಲೇ ಅವರ ಮನೆ ತಲುಪಿದ್ದೆವು.

ಮನೆಯ ಮುಂದೆ ಅಲ್ಲಿ ಗಾಂಧೀಜಿಯ ಕುಟುಂಬದ ಆಪ್ತ ಸದಸ್ಯರೊಬ್ಬರು ಇದ್ದಾರೆನ್ನುವ ಯಾವ ಕುರುಹೂ ಇರಲಿಲ್ಲ. ಕಾಲಿಂಗ್ ಬೆಲ್ ಮಾಡಿದ ಎರಡೇ ಸೆಕೆಂಡಿಗೆ ಮನೆಯ ಬಾಗಿಲು ತೆರೆಯಿತು. ನಮ್ಮನ್ನು ಸ್ವಾಗತಿಸಿದ ಸುಮಿತ್ರಾ ಗಾಂಧಿಯವರ ಪತಿ ‘ಈಗ ಬರುತ್ತಾರೆ’ ಎಂದವರೇ ನಮ್ಮನ್ನು ಕುಳಿತುಕೊಳ್ಳಲು ಹೇಳಿ ಅಲ್ಲಿಂದ ಮಾಯವಾದರು. ನಾವು ಕಿಟಕಿಯಾಚೆ ಕೈಗೆಟಕುವ ದೂರದಲ್ಲಿ ಕೆಂಪು ಹೂಗಳಿಂದಾವೃತ್ತವಾದ ಗುಲ್ಮೊಹರ್ ಮರವನ್ನು ನೋಡುತ್ತ ಅವರಿಗಾಗಿ ಕಾಯುತ್ತ ಕುಳಿತೆವು.

ನನಗೆ ಗುಲ್ಮೊಹರ್ ಎಂದರೆ ಯಾವತ್ತಿಗೂ ಅತಿ ಪ್ರೀತಿ… ಅದೂ ಅಷ್ಟೊಂದು ಹೂಗಳಿರುವ ಮರ ನಾನು ಇತ್ತೀಚಿನ ದಿನಗಳಲ್ಲಿ ನೋಡಿಯೇ ಇರಲಿಲ್ಲ! ಖುಷಿಯಿಂದ ಒಂದೆರಡು ಫೋಟೋ ತೆಗೆಯುವುದರಲ್ಲಿ ‘ಈ ಗುಲ್‌ಮೊಹರ್ ಮರ ನನ್ನ ಮನೆಯ ಮುಂದೆ ಇರೋದು ಎಂಥ ಪುಣ್ಯವಲ್ಲವಾ?’ ಎಂದು ಮುಖದ ತುಂಬ ನಗುತ್ತ ಬಂದ ಸುಮಿತ್ರಾ ಗಾಂಧಿ ಎಲ್ಲರಿಗೂ ಕೈ ಜೋಡಿಸಿ ನಮಸ್ಕರಿಸಿದರು. ‘ಮಹಾತ್ಮಾ ಗಾಂಧೀಜಿಯ ಮೊಮ್ಮಗಳು!’
ಎಂದು ನಾನು ರೋಮಾಂಚಿತಳಾಗುತ್ತ ‘ನನಗೆ ಕೂಡಾ ಗುಲ್‌ಮೊಹರ್ ತುಂಬ ಇಷ್ಟ. ಅದೂ ಈ ಮರದಲ್ಲಿ ಎಷ್ಟೊಂದು ಹೂವು! ನೋಡಲು ಖುಷಿಯಾಗುತ್ತದೆ’ ಅಂದೆ.

ಅವರು ಎಷ್ಟೋ ವರ್ಷಗಳ ಪರಿಚಯ ಇರುವವರಂತೆ ‘ಈಗಲಾದರೂ ಹೂಗಳ ಜೊತೆ ಎಲೆಗಳಿವೆ. ಮೊದಲು ನೀವು ನೋಡಬೇಕಿತ್ತು,
ಮರದ ತುಂಬ ಬರೀ ಹೂಗಳೇ. ಎಲೆಗಳೇ ಇರಲಿಲ್ಲ! ನನಗೆ ಇಲ್ಲಿ ಕುಳಿತು ಅದನ್ನು ನೋಡುವುದೆಂದರೆ ಯಾವಾಗಲೂ ಖುಷಿ’ ಎಂದು ಹೇಳುತ್ತ ಸೋಫಾದ ಮೇಲೆ ಕುಳಿತು ನನ್ನನ್ನು ಕರೆದು ಪಕ್ಕದಲ್ಲೇ ಕುಳಿತುಕೊಳ್ಳಲು ಹೇಳಿದರು.

ಕುಳಿತವಳು ಅವರನ್ನೇ ನಿರುಕಿಸಿದೆ. 91 ವರ್ಷವೆಂದರೆ ತುಂಬ ಹಣ್ಣಾಗಿರಬಹುದು ಎಂದೆಣಿಸಿದ್ದೆ ನಾನು ಅಲ್ಲಿಗೆ ಬರುವ ಮೊದಲು. ನನ್ನ ಗ್ರಹಿಕೆ ಸಂಪೂರ್ಣ ಸುಳ್ಳಾಗಿತ್ತು! ಮುಖದ ತುಂಬ ಹರಡಿದ್ದ ನಗು, ಬಾಯ್ತುಂಬಾ ಮಾತು, ಸರಳವಾದ ಉಡುಪು, ಸರಳವಾದ ನಡವಳಿಕೆಯ ಸುಮಿತ್ರಾ ಅವರು ತುಂಬ ಚುರುಕಾಗಿದ್ದರು. ಒಂದಿಷ್ಟು ಮೆಲುನಗು, ಪರಿಚಯಗಳಾದೊಡನೆ ನಾನು ಅವರೊಡನೆ ಮಾತನಾಡಲು ಬಂದಿರುವುದಾಗಿ ಹೇಳಿದೆ. ಅವರು ‘ಮಾತನಾಡು. ಏನು ಬೇಕಿದ್ದರೂ ಕೇಳು. ನನಗೆ ಗೊತ್ತಿರುವುದನ್ನೆಲ್ಲ ಹೇಳುತ್ತೇನೆ. ಯಾವುದಕ್ಕೂ ಸಂಕೋಚ ಪಟ್ಟುಕೊಳ್ಳಬೇಡ’ ಎಂದರು. ನನಗೆ ನಿರಾಳವಾದಂತಾಗಿ ‘ನನಗೆ ನಿಮ್ಮ ಮತ್ತು ಬಾಪೂವಿನ ಒಡನಾಟದ ಬಗ್ಗೆ ತಿಳಿಯುವ ಆಸಕ್ತಿ ಇದೆ’ ಅಂದೆ. ಅಷ್ಟು ಹೇಳುತ್ತಲೇ ಅವರು ದೊಡ್ಡದಾಗಿ ನಗುತ್ತ ಮಾತು ಶುರು ಮಾಡಿಯೇಬಿಟ್ಟರು…

‘ಓಹ್ ಹೇಳ್ತೀನಿ! ಬಾಪುವಿಗೆ ನನ್ನನ್ನು ಕಂಡರೆ ತುಂಬ ಇಷ್ಟ. ನಾನು ಸಣ್ಣವಳಿರುವಾಗ ನನಗೆ ಕಣ್ಣಿನ ಸಮಸ್ಯೆ ಇತ್ತು. ಕನ್ನಡಕ ಹಾಕುತ್ತಿದ್ದೆ. ದುರ್ಬಲರಾದ ಮಕ್ಕಳನ್ನು ಕಂಡರೆ ದೊಡ್ಡವರಿಗೆ ವಿಶೇಷ ಪ್ರೀತಿ ಇರುತ್ತದಲ್ಲ, ಹಾಗೆ ಅವರಿಗೂ ನನ್ನ ಮೇಲೆ ಸ್ವಲ್ಪ ಹೆಚ್ಚಿನ ಕಾಳಜಿ ಮತ್ತು ಪ್ರೀತಿ. ನನ್ನ ಬಗ್ಗೆ ತುಂಬ ನಿಗಾ ವಹಿಸುತ್ತಿದ್ದರು. ಕಣ್ಣುಸರಿ ಇಲ್ಲದ್ದರಿಂದ ನನಗೆ ಏನಾದರೂ ತೊಂದರೆಯಾಗಬಹುದು ಅನ್ನುವ ಭಯವಿತ್ತು ಅವರಿಗೆ. ಹಾಗಾಗಿ ಸದಾ ನನ್ನನ್ನು ಅವರ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರು.

ಅವರ ಆಶ್ರಮದಲ್ಲಿ ತುಂಬ ಹಾವು ಮತ್ತು ಚೇಳುಗಳಿದ್ದವು. ನಾವು ಮಲಗುತ್ತಿದ್ದುದು ಹೊರಗಿನ ಜಗುಲಿಯಲ್ಲಿಯೇ. ಆಗೆಲ್ಲ ಅಜ್ಜನಿಗೆ ಮತ್ತು ಅಜ್ಜಿಗೆ ನನ್ನ ಮೇಲೆ ಎಷ್ಟು ಕಾಳಜಿ ಎಂದರೆ ಕಣ್ಣು ಕಾಣಿಸದ ನನ್ನನ್ನು ಅವು ಕಚ್ಚಬಾರದು ಎಂದು ಅವರಿಬ್ಬರೂ ಆ ಪಕ್ಕ, ಈ ಪಕ್ಕ ಮಲಗಿ ನನ್ನನ್ನು ಮಧ್ಯೆ ಮಲಗಿಸಿಕೊಳ್ಳುತ್ತಿದ್ದರು! ಅಪ್ಪಿ ತಪ್ಪಿ ಅವು ಕಚ್ಚಿದರೂ ಅವರನ್ನು ಮೊದಲು ಕಚ್ಚಿ ನಂತರ ನನ್ನನ್ನು ತಲುಪಲಿ ಅನ್ನುವ ರೀತಿ! ನನ್ನನ್ನು ಕಂಡರೆ ಅಷ್ಟೊಂದು ಪ್ರೀತಿ ಅವರಿಗೆ. ಮಧ್ಯಾಹ್ನದ ಹೊತ್ತು ನಾನು ಸ್ವಲ್ಪ ಹೊತ್ತು ಕಡ್ಡಾಯವಾಗಿ ಮಲಗಲೇಬೇಕಿತ್ತು ಕಣ್ಣುಗಳಿಗೆ ವಿಶ್ರಾಂತಿ ಸಿಗಲೆಂದು. ಹೆಚ್ಚು ಓದಲೂ ಬಿಡುತ್ತಿರಲಿಲ್ಲ, ಕಣ್ಣುಗಳಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ! ಹಾಗೆ ಓದಲೇ ಬೇಕೆಂದಿದ್ದರೆ ಬೇರೆ ಯಾರಿಗಾದರೂ ಓದಲು ಹೇಳುತ್ತಿದ್ದರು, ನಾನು ಕೇಳಿಸಿಕೊಂಡರೆ ಸಾಕಿತ್ತು.

ಬಾಪು ಹುಟ್ಟಿದ್ದು ಅಕ್ಟೋಬರ್ 2ನೆಯ ತಾರೀಖಾದರೆ, ನಾನು ಹುಟ್ಟಿದ್ದು ಅಕ್ಟೋಬರ್ 4, ಅಂದರೆ ಬಾಪೂವಿನ 60ನೆಯ ಹುಟ್ಟಿದ ಹಬ್ಬ ಕಳೆದ ಎರಡು ದಿನಕ್ಕೆ ಹುಟ್ಟಿದವಳು ನಾನು. ಬಾಪೂ ಅದಕ್ಕೇ ನನ್ನನ್ನು ಅವರ 60ನೆಯ ಹುಟ್ಟುಹಬ್ಬದ ಉಡುಗೊರೆ ಎಂದು ಕರೆಯುತ್ತಿದ್ದರು. ನನ್ನ ಹುಟ್ಟುಹಬ್ಬದ ದಿನವೇ ಈ ಗಿಫ್ಟ್ ಸಿಗಬೇಕಿತ್ತು, ಆದರೆ ಪೋಸ್ಟ್ ಎರಡು ದಿನ ತಡವಾಯಿತು ಎಂದು ಹೇಳುತ್ತ ನಗುತ್ತಿದ್ದರು’…

ಅವರ ಮಾತು ಸರಾಗವಾಗಿ ಹರಿದಾಗ ನಾನೂ ಟೆನ್ಷನ್ ಕಳೆದು ಆರಾಮವಾಗುತ್ತ ‘ನೀವು ಬೇಸಿಗೆ ರಜೆಯನ್ನು ಅಜ್ಜನ ಮನೆಯಲ್ಲಿ ಕಳೆಯುತ್ತಿದ್ದಿರಾ? ನಿಮ್ಮ ಕಸಿನ್ಸ್ ಎಲ್ಲರೂನಮ್ಮಂತೆಯೇ ಒಟ್ಟಾಗಿ ಸೇರಿ ಆಟವಾಡುತ್ತಿದ್ದಿರಾ?’ ಎಂದೆ ಕುತೂಹಲದಿಂದ. ‘ಬರೀ ಬೇಸಿಗೆ ರಜೆ ಅಂತಲ್ಲ. ನಾನು ಬಾಲ್ಯದ ತುಂಬ ದಿನಗಳನ್ನು ಅವರ ಆಶ್ರಮದಲ್ಲೇ ಕಳೆದೆ. ನಾವಿದ್ದ ನಾಗಪೂರ್‌ನಿಂದ ಅವರ ಸೇವಾಗ್ರಾಮ್‌ಗೆ ಹೆಚ್ಚು ದೂರವಿರಲಿಲ್ಲ. ಹಾಗಾಗಿ ನಾವು ಬೇಸಿಗೆಯವರೆಗೆಲ್ಲ ಕಾಯಬೇಕಿರಲಿಲ್ಲ. ಪ್ರತಿ ಶುಕ್ರವಾರ ಸಂಜೆ ಅಲ್ಲಿಗೆ ಹೊರಟರೆ ಮತ್ತೆ ವಾಪಸ್ ಆಗುತ್ತಿದ್ದುದು ಭಾನುವಾರ ರಾತ್ರಿಯೇ.

ಆದರೆ ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳು ನಮ್ಮ ಹಾಗೆ ಬೇಕೆಂದಾಗ ಅಲ್ಲಿಗೆ ಬರಲಾಗುತ್ತಿರಲಿಲ್ಲ. ಕೆಲವರು ಸೌತ್ ಆಫ್ರಿಕಾದಲ್ಲಿದ್ದರೆ ಮತ್ತೆ ಕೆಲವರು ದೆಹಲಿಯಲ್ಲಿದ್ದರು. ಹಾಗಾಗಿ ಹತ್ತಿರದಲ್ಲಿದ್ದವರು ನಾವು ಮಾತ್ರ ಆಗಿದ್ದರಿಂದ ಪ್ರತಿ ವಾರದ ಕೊನೆಗೂ ಅಲ್ಲಿಗೆ ಹೋಗಿ ಬಿಡುತ್ತಿದ್ದೆವು’ ಎಂದರು. ‘ಅಂದರೆ ಶುಕ್ರವಾರದ ಶಾಲೆ ಮುಗಿಸಿ ಹೊರಡುತ್ತಿದ್ದಿರಾ? ಶನಿವಾರ ಶಾಲೆ ಇರಲಿಲ್ಲವಾ?’ ಎಂದೆ. ‘ಸಣ್ಣ ವಯಸ್ಸಿನಲ್ಲಿ ಯಾವ ಶಾಲೆ ನಮಗೆ! ಮನೆಯಲ್ಲಿ ಕಲಿತದ್ದಷ್ಟೇ. ನಾವು ಶಾಲೆಗೆ ಹೋಗಲು ಶುರು ಮಾಡಿದ್ದೇ ತಡವಾಗಿ.

ಆದರೆ ಶಾಲೆಗೆ ಹೋಗಲು ಶುರು ಮಾಡಿದ ಮೇಲೆ ಶನಿವಾರವೂ ಅರ್ಧದಿನ ಶಾಲೆ ಇರುತ್ತಿತ್ತಾದರೂ ನಾವು ಚಕ್ಕರ್ ಹೊಡೆದು ಸೇವಾಗ್ರಾಮ್‌ಗೆ ಹೊರಟುಬಿಡುತ್ತಿದ್ದೆವು. ಆದರೆ ಈಗಿನಂತೆ ತೀರಾ ಸಣ್ಣವಳಿರುವಾಗ ಶಾಲೆಯ ಮುಖ ನೋಡಿದ್ದೇ ಇಲ್ಲ. ಆದರೆ ಬಾಪು ಆಶ್ರಮಕ್ಕೆ ಯಾರಾದರೂ ಬಂದಿರುತ್ತಿದ್ದರಲ್ಲ ಅವರಿಗೆ ಇವಳಿಗೆ ಸ್ವಲ್ಪ ಲೆಕ್ಕ ಕಲಿಸು, ಇಂಗ್ಲೀಷ್ ಕಲಿಸು ಎಂದು ಹೇಳುತ್ತಿದ್ದರು, ನಾವು ಅದನ್ನು ಸ್ವಲ್ಪ ಕಲಿತದ್ದಷ್ಟೇ’ ಎಂದರು.

ಆಶ್ರಮದಲ್ಲಿಯೇ ಅಜ್ಜನ ಮನೆ ಅಂದಾಗ ನನ್ನಲ್ಲಿ ಮತ್ತಿಷ್ಟು ಪ್ರಶ್ನೆಗಳು ಹುಟ್ಟಿದವು. ‘ಆಶ್ರಮದಲ್ಲಿ ಸರಿಸುಮಾರು ಎಷ್ಟು ಜನ ಇರುತ್ತಿದ್ದರು?’ ಎಂದೆ ಕುತೂಹಲದಿಂದ ‘ಲೆಕ್ಕವೇ ಇಲ್ಲ. ಕಡಿಮೆಯೆಂದರೂ ಮೂವತ್ತು ನಲವತ್ತು ಜನರಂತೂ ಇದ್ದೇ ಇರುತ್ತಿದ್ದೆವು. ಒಮ್ಮೊಮ್ಮೆ ಅದು ನೂರರ ಗಡಿಯನ್ನೂ ದಾಟುತ್ತಿತ್ತು. ಅವರಲ್ಲಿ ಕೆಲವರು ನನ್ನನ್ನು ನೋಡಿಕೊಳ್ಳುತ್ತಿದ್ದರು ಕೂಡಾ’ ಎಂದರು. ಅಬ್ಬಾ! ನೂರು ಜನ! ‘ಮತ್ತೆ ಅಷ್ಟೊಂದು ಜನಕ್ಕೆ ಅಡುಗೆಯೆಲ್ಲ ಯಾರು ಮಾಡುತ್ತಿದ್ದರು?’ ಎಂದೆ. ‘ನಮ್ಮಲ್ಲಿ ಒಬ್ಬರು ಹರಿಜನ ಅಡುಗೆಯವರಿದ್ದರು ಖಂಡುಮಾಮ ಅಂತ. ಅವರೇ ಎಲ್ಲರಿಗೂ ಅಡುಗೆ ಮಾಡುತ್ತಿದ್ದಿದ್ದು. ಅಜ್ಜಿ ಆಗೀಗ ಕೈ ಜೋಡಿಸುತ್ತಿದ್ದರು ಅವರ ಜೊತೆ. ಉಳಿದಂತೆ ಎಲ್ಲವನ್ನೂ ಮಾಮನೇ ಮಾಡುತ್ತಿದ್ದರು. ಏಕಾದಶಿ ದಿನ ಮತ್ತು ಸೋಮವಾರ ಅಜ್ಜಿ ಉಪವಾಸ ಮಾಡುತ್ತಿದ್ದರು. ಅವತ್ತು ಆಲೂ ಸಬ್ಜಿ ತಾವೇ ಮಾಡಿಕೊಳ್ಳುತ್ತಿದ್ದರು… ನನಗೂ ಕೊಡುತ್ತಿದ್ದರು’ ಎಂದರು.

ಮತ್ತೆ ನೆನಪಿಸಿಕೊಂಡವರಂತೆ ‘ನಾನು ಸಂಪೂರ್ಣ ಸಸ್ಯಾಹಾರಿ. ನಾನು ಚಿಕ್ಕವಳಿರುವಾಗ ನನಗೆ ಮಾಂಸಾಹಾರದ ವಾಸನೆ ಇಷ್ಟವಾಗ್ತಿರಲಿಲ್ಲ. ಬಾಪುವಿಗೆ ಅನೇಕ ಮುಸ್ಲಿಂ ಗೆಳೆಯರಿದ್ದರು. ಅವರು ತುಂಬ ಪ್ರೀತಿಯಿಂದ ಊಟಕ್ಕೆ ಕರೆಯುತ್ತಿದ್ದರು. ನಾನು ಹೋಗುವುದನ್ನು ಅವಾಯ್ಡ್ ಮಾಡುತ್ತಿದ್ದೆ. ಬಾಪೂ ನೋಡುವವರೆಗೂ ನೋಡಿ ಒಂದು ದಿನ ಕೇಳಿದರು ಯಾಕೆ ಹೋಗೋದಿಲ್ಲ ಅಂತ. ನಾನು ನನಗೆ ಆ ವಾಸನೆ ಇಷ್ಟ ಆಗಲ್ಲ ಅಂದೆ. ಅದಕ್ಕೆ ಬಾಪೂ ಹಾಗೆಲ್ಲ ಹೇಳಬಾರದು. ಅವರವರ ಆಹಾರ ಅವರವರದ್ದು. ಅದರ ಬಗ್ಗೆ ನಾವು ಮಾತನಾಡಬಾರದು ಅಂತ ತಿಳಿ ಹೇಳಿದ್ದರು. ನಾನು ಚಿಕ್ಕವಳಲ್ಲವಾ ಅದಕ್ಕೇ ನನ್ನದೇ ಸರಿ ಎಂದು ಸಾಧಿಸುವವಳಂತೆ ಅವರು ಮಾಂಸಾಹಾರ ಬಡಿಸಿದ ಸೌಟಿನಲ್ಲೇ ನಮ್ಮ ಊಟಾನೂ ಒಂದೊಂದು ಸಲ ಬಡಿಸಿಬಿಡುತ್ತಾರೆ ಅಂದೆ. ಅದಕ್ಕೆ ಬಾಪು ಸರಿ ಸೌಟು ತಾನೇ ನೀನೇನೂ ಮಾಂಸಾಹಾರ ತಿನ್ನು ಅನ್ನುವುದಿಲ್ಲವಲ್ಲ ಅವರು. ಹಾಗೆಲ್ಲ ಪ್ರೀತಿಯಿಂದ ಕರೆದಾಗ ಮನಸ್ಸು ನೋಯಿಸಬಾರದು ಅಂತೆಲ್ಲ ಬುದ್ದಿ ಹೇಳ್ತಿದ್ದರು. ಬಾಪು ಹೀಗೆ ಬದುಕನ್ನು ತಿದ್ದುವ ಅನೇಕ ಮಾತುಗಳನ್ನು ಹೇಳ್ತಿದ್ದರು’

91 ವರ್ಷ ವಯಸ್ಸಿನ ಸುಮಿತ್ರಾ ಗಾಂಧಿಯವರ ನೆನಪಿನ ಶಕ್ತಿ ಒಂದಿಷ್ಟೂ ಕುಂದಿರಲಿಲ್ಲ. ಎಲ್ಲವೂ ನೆನ್ನೆ ಮೊನ್ನೆ ನಡೆಯಿತೇನೋ ಅನ್ನುವಷ್ಟು ಸ್ಫುಟವಾಗಿ ಹೇಳುತ್ತಿದ್ದರು. ಆ ನೆನಪಿನ ಶಕ್ತಿ ಕಂಡು ನಾನು ಬೆರಗಾದೆ.

ಗಾಂಧಿಯವರು ಹತ್ಯೆಯಾದಾಗ ಸುಮಿತ್ರಾ ಅವರಿಗೆ 20 ವರ್ಷ ವಯಸ್ಸು. ಇದೆಲ್ಲ ಅದಕ್ಕೂ ಎಷ್ಟೋ ವರ್ಷ ಹಿಂದಿನ ನೆನಪುಗಳು! ಹೇಳುವ ಅವರ ಉತ್ಸಾಹ ಕುಗ್ಗಲಿಲ್ಲ ಮತ್ತು ಕೇಳುವ ನನ್ನ ಉತ್ಸಾಹವೂ. ‘ನಿಮಗೆ ಎಲ್ಲವೂ ಎಷ್ಟು ಚೆನ್ನಾಗಿ ನೆನಪಿದೆ! ನೀವು ಓದಿನಲ್ಲಿ ಕೂಡಾ ತುಂಬ ಬುದ್ದಿವಂತೆಯೇ ಆಗಿದ್ದಿರಬೇಕು…’ ನಾನು ಹೇಳುತ್ತಿರುವಾಗಲೇ ‘ಉಹು ಇಲ್ಲ ನಾನು ಓದಿನಲ್ಲಿ ಬುದ್ದಿವಂತೆಯೇನೂ ಆಗಿರಲಿಲ್ಲ. ತುಂಬ ಸಾಧಾರಣ ಮಟ್ಟದ ಬುದ್ಧಿಯಷ್ಟೇ ನನ್ನದು’ ಎಂದರು. ನಾನು ನಕ್ಕು ‘ಓಹ್ ನೀವು IAS ಮಾಡಿದ್ದು ಸುಮ್ಮನಲ್ಲ. ಅದಕ್ಕೆ ಅಸಾಧಾರಣ ಬುದ್ದಿವಂತಿಕೆ ಇರಲೇ ಬೇಕಲ್ಲವೇ’ ಎಂದೆ. ಅವರು ಆ ಮಾತನ್ನು ತೇಲಿಸುವ ರೀತಿ ಅಲ್ಲಿಗೇ ಬಿಟ್ಟು ‘ಅಲ್ಲ ಅಪರೂಪಕ್ಕೆ ಬಂದಿರುವಿರಿ. ನಿಮಗೆ ತಿನ್ನಲು, ಕುಡಿಯಲು ಏನನ್ನೂ ಕೊಡಲಾಗುತ್ತಿಲ್ಲವಲ್ಲ ನನ್ನ ಕೈಲಿ’ ಎಂದರು. ನಾವು ‘ನಾವು ಊಟ ಮುಗಿಸಿಯೇ ಬಂದಿದ್ದೇವೆ. ನಮಗೆ ಅದಕ್ಕಿಂತ ನಿಮ್ಮೊಡನೆ ಮಾತಾಡುವುದೇ ಸಂಭ್ರಮ’ ಎಂದೆವು. ಮತ್ತೆ
ಮಾತು ಮುಂದುವರೆಯಿತು…

‘ನೀವು ಚಿಕ್ಕವರಿರುವಾಗ ಬಾಪು ನಿಮಗೆ ಪೆಪ್ಪರ್‌ಮಿಂಟ್ ತಂದುಕೊಡ್ತಿದ್ರಾ?’ ಎಂದೆ. ‘ಉಹು ನಮಗೆ ಗಿಫ್ಟ್, ಪೆಪ್ಪರ್‌ಮಿಂಟ್ ಅಂತೆಲ್ಲ ಕೊಡುತ್ತಿರಲಿಲ್ಲ. ನಾವು ಆಶ್ರಮದಲ್ಲಿರುವಾಗ ಎಲ್ಲರ ಜೊತೆಯಲ್ಲಿ ಎಲ್ಲರಂತೆ ಇರುತ್ತಿದ್ದೆವಷ್ಟೇ. ನಮಗೆ ಅಂತ ಸ್ಪೆಷಲ್ ಟ್ರೀಟ್‌ಮೆಂಟ್ ಎಲ್ಲ ಏನೂ ಇರುತ್ತಿರಲಿಲ್ಲ. ಎಲ್ಲರ ಊಟವನ್ನೇ ನಾವೂ ತಿನ್ನುತ್ತಿದ್ದೆವು, ಎಲ್ಲರಂತೆ ಇರುತ್ತಿದ್ದೆವು ಅಷ್ಟೇ. ಚಾಕೊಲೇಟ್ ಅಂತದ್ದೆಲ್ಲ ಏನೂ ಕೊಡುವ ಮಾತಿರಲಿಲ್ಲ. ಆ ವಿಷಯದಲ್ಲಿ ಅವರು ನಮ್ಮನ್ನು ಬೆಳೆಸಿದ್ದೇ ಹಾಗೆ. ಅಜ್ಜಿ ಉಪವಾಸದ ದಿನ ಆಲೂ ಸಬ್ಜಿ ಮಾಡುತ್ತಿದ್ದರು ಎಂದೆನಲ್ಲ, ಅದು ಕೊಡುವಾಗಲೇ ಬಾಪು ಹೀಗೆಲ್ಲ ಮಾಡಿ ಮಕ್ಕಳನ್ನು ಕೆಡಿಸಬಾರದು ಎಂದು ಹೇಳುತ್ತಿದ್ದರು. ಆದರೆ ಕಸ್ತೂರಬಾ ಅಜ್ಜಿಗೆ ಬಾಪುವನ್ನು ಕಂಡರೆ ಭಯವೇನೂ ಇರಲಿಲ್ಲ. ನಾವೇನು ಇಲ್ಲಿ ಬೇರೆ ಕೊಟ್ಟು
ಮಕ್ಕಳನ್ನು ಕೆಡಿಸುತ್ತಿದ್ದೇವೆ? ಉಪ್ಪಿಲ್ಲದ ಊಟವನ್ನು ಬಿಟ್ಟರೆ? ಎಂದು ಹೇಳಿ ಅವರನ್ನು ಸುಮ್ಮನಾಗಿಸಿಬಿಡುತ್ತಿದ್ದರು’ ಎಂದರು.

‘ಸರಿ ಆಶ್ರಮದಲ್ಲೇನೋ ಹೀಗೆ ಎಲ್ಲರೊಡನೆ ಒಂದಾಗಿ ಇರಬೇಕೆಂಬುದು ಗಾಂಧೀಜಿಯವರ ನಿಯಮವಾಗಿತ್ತು. ಆದರೆ ಶಾಲೆಯಲ್ಲಿ? ನೀವು ಗಾಂಧೀಜಿಯವರ ಮೊಮ್ಮಗಳು ಎಂದು ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದರಾ? ಅದಕ್ಕೆ ನಿಮ್ಮ ಸಹಪಾಠಿಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು’ ಎಂದೆ ಕುತೂಹಲದಿಂದ. ಅವರು ನನ್ನ ಮಾತು ಕೇಳಿ ತಲೆಯಾಡಿಸಿ ನಗುತ್ತ ‘ನಿಜಕ್ಕೂ ಹೇಳಬೇಕೆಂದರೆ ಆ ವಿಷಯಕ್ಕೆ ಯಾವ ಪ್ರಾಮುಖ್ಯತೆಯನ್ನೂ ಯಾರೂ ನೀಡಲಿಲ್ಲ! ನಾವು ಎಲ್ಲ ಮಕ್ಕಳಂತೆಯೇ ಇದ್ದೆವು. ಮತ್ತೊಂದು ವಿಷಯ ಹೇಳಲಾ… ಬದುಕಿರುವಾಗ ಯಾವ ವ್ಯಕ್ತಿಯೂ ತೀರಾ ಅಷ್ಟೊಂದು ಗ್ರೇಟ್ ಎಂದು ಯಾರಿಗೂ ಅನ್ನಿಸಿರುವುದೇ ಇಲ್ಲವೆನಿಸುತ್ತದೆ! ಹಾಗಾಗಿ ನಾನು ಎಲ್ಲರಲ್ಲಿ ಒಬ್ಬಳಾಗಿದ್ದೆನಷ್ಟೇ’ ಎಂದರು.

ಅಷ್ಟು ಸರಳವಾಗಿ ಎಲ್ಲರೂ ಇರುವುದಿಲ್ಲ. ಸ್ವಲ್ಪ ಅಧಿಕಾರವಿದ್ದರೆ ಅದನ್ನು ಇಡೀ ಸಂಸಾರವೆಲ್ಲ ದುರುಪಯೋಗ ಪಡಿಸಿಕೊಳ್ಳುತ್ತಲೇ ಇರುವುದು ಸಾಮಾನ್ಯ. ಸುಮಿತ್ರಾ ಅವರು ಅದನ್ನು ಅಷ್ಟು ಸುಲಭವಾಗಿ ಹೇಳಿ ಮುಗಿಸಿದಾಗ ನಾನು ಅಷ್ಟು ಸರಳವಾಗಿ ಇದ್ದಿದ್ದರಿಂದಲೇ
ಅವರು ಮಹಾತ್ಮ ಅನ್ನಿಸಿಕೊಂಡಿದ್ದು ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.

ಅಷ್ಟರಲ್ಲಿ ನಮ್ಮನ್ನು ಕರೆದುಕೊಂಡು ಹೋದ ಸುಮಿತ್ರಾ ಗಾಂಧಿಯವರ ಆತ್ಮೀಯರು ಸುಮಿತ್ರಾ ಗಾಂಧಿಯವರ ಬಗ್ಗೆ ಇದ್ದ ಪುಸ್ತಕವೊಂದನ್ನು ತಂದು ಸುಮಿತ್ರಾ ಗಾಂಧಿಯವರ ಕೈಗಿತ್ತು ನನಗೆ ಸಹಿಮಾಡಿಕೊಡಲು ಕೇಳಿಕೊಂಡರು. ಸುಮಿತ್ರಾ ಅವರು ಅತ್ಯಂತ ನಾಜೂಕಾದ ಅಕ್ಷರಗಳಲ್ಲಿ
ಪ್ರೀತಿಯ ಭಾರತಿಗೆ ಎಂದು ಮುದ್ದಾದ ಅಕ್ಷರಗಳಲ್ಲಿ ಬರೆಯುತ್ತ ದಿನಾಂಕ ಸಹಿತವಾಗಿ ಸಹಿ ಹಾಕಿ ನನ್ನ ಕೈಗಿತ್ತರು! ನಾನು ಆ ಅಮೂಲ್ಯ ವಸ್ತುವನ್ನು ಎದೆಗವಚಿಕೊಂಡೆ ನಂಬಲಾರದವಳಂತೆ!

ನಾನು ಅರಸಿ ಬಂದಿದ್ದಕ್ಕಿಂತಲೂ ಹೆಚ್ಚೇ ಸಿಗುತ್ತಿತ್ತು ಇಲ್ಲಿ. ಅಲ್ಲಿಗೆ ಹೋಗುವ ಮೊದಲು ಹತ್ತು ನಿಮಿಷ ಮಾತಾಡಬಹುದೇನೋ ಎಂದುಕೊಂಡಿದ್ದೆ. ಈಗ ನೋಡಿದರೆನಾವು ಬಂದು ಅರ್ಧ ಘಂಟೆಗೂ ಮೀರಿತ್ತು. ಸುಮಿತ್ರಾ ಅವರು ಸ್ವಲ್ಪವೂ ಆಯಾಸವಿಲ್ಲದೇ ತಮ್ಮ ನೆನಪುಗಳನ್ನು ಹರವುತ್ತಲೇ ಹೋದರು…

‘ಬಾಪೂ ನಮ್ಮ ನಡೆ ನುಡಿಗಳನ್ನು ತಿದ್ದುತ್ತಲೇ ಇರುತ್ತಿದ್ದರು. ನಾವು ಹಾಕುವ ಬಟ್ಟೆ ಹೇಗಿರಬೇಕು, ಎಷ್ಟು ಮಾತನಾಡಬೇಕು, ಎಷ್ಟು ಗಟ್ಟಿಯಾಗಿ ಮಾತಾಡಬೇಕು. ದನಿ ಎಷ್ಟು ಮಾತ್ರ ಏರಿಸಬೇಕು… ಹೀಗೆ ಎಲ್ಲದರ ಬಗ್ಗೆ ನಮ್ಮನ್ನು ತಿದ್ದುತ್ತಿದ್ದರು. ಎಲ್ಲರ ಮನೆಯ ತಾತಂದಿರಂತೆ ಬಾಪುಗೆ ಇವುಗಳೆಲ್ಲದರ ಬಗ್ಗೆ ಅತೀವ ಕಾಳಜಿ. ನಾವೆಲ್ಲ ವೆಲ್ ಬಿಹೇವ್ಡ್ ಮಕ್ಕಳಾಗಿರಬೇಕು ಅನ್ನುವುದು ಅವರ ಆಸೆ. ಒಂದು ಸಲ ಏನಾಯಿತೆಂದರೆ ಬಾಪು ಅವರ ಚಪ್ಪಲಿ ತರಲು ಹೇಳಿದರು. ನಾನು ಆರಾಮವಾಗಿ ಅವರ ಚಪ್ಪಲಿ ಕಾಲಿಗೆ ಹಾಕಿಕೊಂಡು ಚಟ್ ಪಟ್ ಅಂತ ನಡೆಯುತ್ತ ಬಂದೆ. ಆಗ ಅವರು ಹಿರಿಯರ ಚಪ್ಪಲಿಯಲ್ಲಿ ನಾವೆಂದೂ ಕಾಲು ತೂರಿಸಬಾರದು ಎಂದು ಬುದ್ದಿವಾದ ಹೇಳಿ ಚಪ್ಪಲಿಯನ್ನು ಮೊದಲಿದ್ದ ಜಾಗದಲ್ಲೇ ಬಿಟ್ಟು, ನಂತರ ಮತ್ತೆ ಕೈಯಲ್ಲಿ ಹಿಡಿದು ತೆಗೆದುಕೊಂಡು ಬಾ ಎಂದಿದ್ದರು.‘

ಕಸ್ತೂರಬಾ? ಅವರು ಕೂಡಾ ಇಷ್ಟೇ ಕಾಳಜಿ ವಹಿಸುತ್ತಿದ್ದರೇ? ಅವರ ಬಗ್ಗೆ ಏನಾದರೂ ಹೇಳಿ’ ಎಂದೆ. ‘ಅಜ್ಜಿ ತುಂಬ ಮೃದು ಮನಸ್ಸಿನವರಾದರೂ ಅಷ್ಟೇ ಖಡಾಖಂಡಿತ ವ್ಯಕ್ತಿಯೂ ಆಗಿದ್ದರು. ಆಗಲೇ ಹೇಳಿದೆನಲ್ಲ ಆಲೂ ಸಬ್ಜಿ ವಿಷಯ, ಅವರಿದ್ದಿದ್ದೇ ಹಾಗೆ. ಅವರು ಜೈಲಿನಲ್ಲಿದ್ದಾಗ ನನಗೆ ಸ್ವತಃ ಖಾದಿ ಸೀರೆಗಳನ್ನು ನೇಯ್ದು ಕಳಿಸುತ್ತಿದ್ದರು. ಅಲ್ಲಿರುವಾಗಲೂ ಅವರಿಗೆ ನಾನು ಋತುಮತಿಯಾಗಿ ಈಗ ಸೀರೆ ಉಡುವಂತಾಗಿರಬಹುದು ಎನ್ನುವುದು
ಗಮನದಲ್ಲಿರುತ್ತಿತ್ತು. ಅವರು ಕೂಡಾ ಬರೀ ಖಾದಿಯನ್ನೇ ತೊಡುತ್ತಿದ್ದುದು. ಬರೀ ಧರಿಸುವ ಬಟ್ಟೆಯಲ್ಲ, ಕಾಲಿಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಕಾಲಿಗೆ ಖಾದಿಯ ಬಟ್ಟೆಯನ್ನು ಬಿಟ್ಟರೆ ಬೇರೆ ಕಟ್ಟುತ್ತಿರಲಿಲ್ಲ’ ಎನ್ನುವಾಗಲೇ ನಾನು ‘ಆ ಸೀರೆಯೇನಾದರೂ ನಿಮ್ಮಲ್ಲಿದೆಯಾ? ಒಂದಾದರೂ?’ ಎಂದೆ ಅಂಗಲಾಚುವ ದನಿಯಲ್ಲಿ.

ಅವ

ರು ದೊಡ್ಡದಾಗಿ ನಗುತ್ತ ‘ಅವೆಲ್ಲ ಹೇಗೆ ಇರಲು ಸಾಧ್ಯ. ಅಜ್ಜಿ ಕಳಿಸಿದ ಕೂಡಲೇ ಉಟ್ಟು ತೊಟ್ಟು ಅವನ್ನೆಲ್ಲ ಚಿಂದಿಯಾಗಿಸಿ ಬಿಟ್ಟೆ’ ಎಂದರು. ‘ಹೋಗಲಿ ಬಾಪೂನ ಯಾವುದಾದರೂ ವಸ್ತುವಾದರೂ ನನಗೆ ತೋರಿಸಿ’ ಎಂದೆ. ‘ಇತ್ತು ಒಂದಿಷ್ಟು ಫೋಟೋಗಳು… ಬಾಪೂ ನೀರು ಕುಡಿಯುತ್ತಿದ್ದ ಲೋಟಾ… ಹೀಗೆ ಏನೇನೋ. ಮನೆಯ ಮಕ್ಕಳೆಲ್ಲ ಬಂದಾಗ ಆ ಫೋಟೋದಲ್ಲಿ ಅಜ್ಜನೊಡನೆ ನಾನಿದ್ದೇನೆ, ಈ ಫೋಟೋದಲ್ಲಿ ಅಜ್ಜನೊಡನೆ ಅವಳಿದ್ದಾಳೆ ಅಂತ ಒಂದೊಂದನ್ನೇ ತೆಗೆದುಕೊಂಡು ಹೋಗುತ್ತೇವೆ ಎಂದರು. ಅಷ್ಟು ಪ್ರೀತಿಯಿಂದ ಕೇಳುವಾಗ ಹೇಗೆ ಇಲ್ಲವೆನ್ನಲಿ? ಅವರಿಗೆಲ್ಲ ಅದನ್ನು ಕೊಟ್ಟುಬಿಟ್ಟೆ. ಹಾಗಾಗಿ ನನ್ನಲ್ಲಿ ಏನೂ ಉಳಿದಿಲ್ಲ ಈಗ’ ಎಂದದ್ದು ಸ್ವಲ್ಪ ನಿರಾಸೆ ಆದಂತೆನಿಸಿತು.

ಆದರೂ ಅಪರೂಪದ ಫೋಟೋ ಏನಾದರೂ ಸಿಗಬಹುದಾ ಎನ್ನುವ ಆಸೆಯಲ್ಲಿ ಮನೆಯನ್ನೊಮ್ಮೆ ಸುತ್ತು ಹಾಕಬಹುದಾ ಎಂದೆ. ‘ಓ ಧಾರಾಳವಾಗಿ’ ಎನ್ನುತ್ತ ನಮ್ಮನ್ನು ಒಳಗೆ ಕರೆದೊಯ್ದರು. ಗೋಡೆಯ ಮೇಲೆ ಅಲ್ಲಲ್ಲಿ ಸುಮಿತ್ರ ಅವರ ಬಾಲ್ಯದ ಚಿತ್ರಗಳು, ಬಾಪು ಜೊತೆಗಿನ ಚಿತ್ರಗಳು, ತಂದೆ
ರಾಮದಾಸ್ ಅವರ ಚಿತ್ರಗಳು, ಸುಮಿತ್ರ ಅವರು ಮಕ್ಕಳ ಜೊತೆಗಿದ್ದ ಫೋಟೋ, ಅವರ ಮೊಮ್ಮಕ್ಕಳ ಫೋಟೋ, ಇಂದಿರಾ ಗಾಂಧಿಯವರ ಜೊತೆಗಿದ್ದ ಫೋಟೋ… ಹೀಗೇ ಸಾಕಷ್ಟಿದ್ದವು. ನಮಗೆಲ್ಲ ಮಕ್ಕಳ ಪರಿಚಯ ಮಾಡಿಕೊಟ್ಟರು. ಅವರ ಲೈಬ್ರರಿ ನೋಡಿದ್ದಾಯಿತು. ಗೋಡೆಯ ಮೇಲೆ ಮೊದಲ ದಿನ
ನೋಡಿದ ಗಾಂಧಿ ಬೆನ್ನು ಹಾಕಿ ನಡೆಯುತ್ತಿರುವ ಫೋಟೊ ತುಂಬ ಅಪರೂಪದ್ದಾಗಿತ್ತು.
ಅದರ ಎದುರು ನಿಂತು ಫೋಟೋ ತೆಗೆಸಿಕೊಂಡೆವು.

ಸುಮಿತ್ರಾ ಅವರು IAS ಅಧಿಕಾರಿಯಾಗಿ ಸಾಕಷ್ಟು ದೊಡ್ಡ ಹುದ್ದೆಗಳನ್ನು ಅಲಂಕರಿಸಿದವರು. ಜೊತೆಗೆ ಬಾಪುವಿನ ಜೊತೆ ಸದಾ ಕಾಲ ಇರುತ್ತ ದೇಶದ ಆಗುಹೋಗುಗಳನ್ನು ಅರಿತಿದ್ದವರು. 1972 ರಿಂದ 78ನೆಯ ಇಸವಿಯವರೆಗೆ ರಾಜ್ಯಸಭಾ ಮೆಂಬರ್ ಕೂಡಾ ಆಗಿದ್ದವರು. ಆದರೆ ಆ ನಂತರ ಅವರು ಅದೆಲ್ಲದರಿಂದ ದೂರವೇ ಉಳಿದುಬಿಟ್ಟಿದ್ದು ನನಗೆ ಆಶ್ಚರ್ಯ ತಂದಿತ್ತು. ‘ಬಾಪುವಿನ ಮೊಮ್ಮಗಳಾಗಿದ್ದು, ರಾಜಕೀಯದಲ್ಲಿ ಸಕ್ರಿಯವಾಗಿರಬೇಕೆಂದು ನಿಮಗೆ ಅನ್ನಿಸಲಿಲ್ಲವೇ? ರಾಜಕೀಯ ನಿಮ್ಮನ್ನು ಆಕರ್ಷಿಸಲಿಲ್ಲವೇ?’ ಎಂದೆ.

ಅವರು ಅಡ್ಡಡ್ಡ ತಲೆಯಾಡಿಸುತ್ತ ‘ನನಗೆ ರಾಜಕೀಯದಲ್ಲಿ ಆಸಕ್ತಿಯೇನೋ ಇತ್ತು. ಆದರೆ ಯಾವತ್ತೂ ಯಾವ ಹುದ್ದೆಯನ್ನೂ ಅಲಂಕರಿಸಬೇಕೆಂದೆಲ್ಲ ಇರಲಿಲ್ಲ. ಒಮ್ಮೆ ಮಾತ್ರ ಇಂದಿರಾ ಗಾಂಧಿ ನನ್ನನ್ನು ಕೇಳದೇ ರಾಜ್ಯ ಸಭಾ ಮೆಂಬರ್ ಮಾಡಿಬಿಟ್ಟರು. ಆನಂತರ ಅಷ್ಟು ಸಾಕು ಅನ್ನಿಸಿತು. ಮತ್ತೆ ಆಗಬೇಕು ಅನ್ನಿಸಲಿಲ್ಲ’ ಎಂದರು.

ಅವರ ಈ ಮಾತುಗಳನ್ನು ಕೇಳುತ್ತಿರುವಾಗಲೇ ಹಿಂದಿನ ವಾರದ ಪೇಪರ್‌ನಲ್ಲಿದ್ದ ಅವರ ಸಂದರ್ಶನ ನೆನಪಾಗಿ ‘ನಮ್ಮ ದೇಶದ ಪ್ರಧಾನಿ ಮೋದಿಯವರು ನಿಮಗೆ ಪರಿಚಿತರು ಎಂದು ಪೇಪರ್‌ನಲ್ಲಿ ಓದಿದೆ. ಹೇಗೆ… ಬಾಲ್ಯದ ಗೆಳೆಯನೇ?’ ಎಂದೆ. ‘ಇಲ್ಲ ಬಾಲ್ಯದ ಪರಿಚಯವೇನಲ್ಲ. ನಾನು ಹಿಮಾಚಲ ಪ್ರದೇಶದಲ್ಲಿ ಇರುವಾಗ ಅವರೂ ಅಲ್ಲಿ ಇದ್ದರು. ಆಗ ಪರಿಚಿತರು ಇಲ್ಲಿ ಗುಜರಾತಿ ಭಾಷೆ ಮಾತನಾಡುವವರಿದ್ದಾರೆ ಪರಿಚಯಿಸುವೆ ಎಂದು ಹೇಳಿನಮ್ಮನ್ನು ಪರಿಚಯಿಸಿದ್ದರು. ಹಾಗೆ ನನಗವರು ಪರಿಚಯವಾದದ್ದು. ನಾನು ಈಗಲೂ ಅವರನ್ನು ಭೇಟಿಯಾದರೆ ಅವರು ಈಗಲೂ ಅದೇ ಸ್ನೇಹದಿಂದ ಮಾತಾಡಿಸುತ್ತಾರೆ ಎಂಬ ನಂಬಿಕೆಯಿದೆ ನನಗೆ’ಎಂದರು ತುಂಬ ಸಹಜವಾಗಿ.

ನನಗೆ ಅಲ್ಲಿಂದ ಮಾತು ಮುಂದುವರೆದರೆ ಹಾಗೆಯೇ ಮತ್ತೆ ಈಗಿನ ರಾಜಕೀಯದ ಬಗ್ಗೆ ಮಾತು ಶುರುವಾಗಿಬಿಡಬಹುದು ಎಂದು ಅಲ್ಲಿಗೇ ನಿಲ್ಲಿಸಿಬಿಟ್ಟೆ. ನನಗೆ ಬಾಪುವಿನ ಮೊಮ್ಮಗಳನ್ನು ಮಾತ್ರ ಭೇಟಿಯಾಗುವುದಿತ್ತು ಎಂದು ಮೊದಲೇ ಹೇಳಿದ್ದೆನಲ್ಲವೇ… ಹಾಗಾಗಿ…

ನಾವು ಮಾತನಾಡುತ್ತಲೇ ‘ನಿಮ್ಮದೊಂದಿಷ್ಟು ಫೋಟೋಗಳು ಬೇಕು’ ಎಂದಾಗ ‘ಓ ಧಾರಾಳವಾಗಿ’ ಎಂದರು. ‘ಇಲ್ಲಲ್ಲ, ಆ ಗುಲ್ಮೊಹರ್ ಮರವೂ ಬರಬೇಕು’ ಎಂದೆವು. ಒಂದಿಷ್ಟೂ ಆಯಾಸ ತೋರಿಸದೇ ಖುಷಿಯಿಂದ ಎದ್ದು ಮುಂದೆ ಬಾಲ್ಕನಿಯ ಬಾಗಿಲನ್ನು ತೆರೆದಿಟ್ಟು ‘ಎಷ್ಟು ಚೆನ್ನಾಗಿದೆ ಅಲ್ಲವೇ ಈ ಜಾಗ?’ ಎಂದರು. ನಾವು ಕೇಳಿದಷ್ಟೂ ಫೋಟೋಗಳನ್ನು ಎಲ್ಲರ ಜೊತೆಯೂ ನಿಂತು ತೆಗೆಸಿಕೊಳ್ಳುತ್ತಲೇ ಇದ್ದರು. ನಾವು ಒಬ್ಬೊಬ್ಬರಾಗಿ ಅವರ ಜೊತೆ ನಿಂತು, ಒಟ್ಟಾಗಿ ಎಲ್ಲರೂ ನಿಂತು ಹೀಗೆ ಎಲ್ಲ ಕಾಂಬಿನೇಷನ್‌ಗಳಲ್ಲಿ ಫೋಟೋಗಳನ್ನು ತೆಗೆಯುತ್ತಾ ಹೋದಾಗ ನಗುತ್ತಲೇ ಕ್ಯಾಮೆರಾ ಎದುರು ನಿಂತರು. ಸಾಕಷ್ಟು ಫೋಟೋಗಳನ್ನು ತೆಗೆದುಕೊಂಡ ನಂತರ ಮನಸ್ಸಿಗೆ ಗೊತ್ತಾಗುತ್ತಿತ್ತು ಇನ್ನು ಹೊರಡುವ ಸಮಯ ಹತ್ತಿರವಾಗುತ್ತಿದೆ ಎಂದು.

ಅಷ್ಟರವರೆಗೆ ಕೇಳಲಾಗದೇ ತಡೆದುಕೊಂಡ ಆ ಪ್ರಶ್ನೆ ಕೇಳಲೇಬೇಕಾದ ಸಮಯ ಎದುರಾಗಿತ್ತು. ಉಗುಳು ನುಂಗುತ್ತಲೇ ‘ಬಾಪು ಇಲ್ಲವಾದ ದಿನ…
ಹೇಗಿತ್ತು ಆ ದಿನ…’ ಎಂದೆ ಮೆಲ್ಲನೆ. ‘ಓಹ್ ಆಗ ನಾನು ಬನಾರಸ್‌ನಲ್ಲಿದ್ದೆ. ಆಗೆಲ್ಲ ಫೋನ್ ಸೌಲಭ್ಯ ಇರಲಿಲ್ಲವಲ್ಲ. ಹಾಗಾಗಿ ಬಾಪು ಇಲ್ಲವಾದದ್ದು ನನಗೆ ಗೊತ್ತಾಗಿದ್ದೂ ರೇಡಿಯೋ ಸುದ್ದಿ ಮೂಲಕವೇ. ಎಷ್ಟು ಆಘಾತಕ್ಕೊಳಗಾಗಿದ್ದೆ ಅಂದರೆ ಹಿಂದುಮುಂದು ಯೋಚಿಸದೇ ಒಬ್ಬಳೇ ದೆಹಲಿಯ ರೈಲು ಹತ್ತಿಬಿಟ್ಟಿದ್ದೆ. ಅವತ್ತು ಎಲ್ಲ ರೈಲುಗಳಲ್ಲೂ ಕಾಲಿಡಲೂ ಆಗದಷ್ಟು ಜನಸಾಗರ. ಎಲ್ಲರೂ ಬಾಪುವಿನ ಸುದ್ದಿ ಕೇಳಿ ದೆಹಲಿಗೆ ಹೊರಟಿದ್ದವರೇ. ಹೇಗೋ
ಮಾಡಿ ದೆಹಲಿ ತಲುಪಿದೆ.

ಸೇತುವೆಯ ಬಳಿ ಅದೆಷ್ಟು ಜನರೆಂದರೆ ರೈಲು ಮುಂದೆ ಚಲಿಸಲಾಗದಂತೆ ನಿಂತುಬಿಟ್ಟಿತು. ನನಗಿನ್ನು ಕಾಯಲು ತಾಳ್ಮೆ ಇರಲಿಲ್ಲ, ಹಾಗಾಗಿ ನಡೆದೇ
ಹೋಗಿ ಬಿಡೋಣವೆಂದು ರೈಲಿನಿಂದ ಇಳಿದುಬಿಟ್ಟೆ. ಆದರೆ ಇಳಿದ ನಂತರ ಆ ಜನಸಾಗರವನ್ನು ದಾಟಿ ಮುಂದೆ ಚಲಿಸುವುದೇ ಪ್ರಯಾಸವಾಗಿ ಬಿಟ್ಟಿತು. ಹೇಗೋ ನೂಕಾಡಿಕೊಂಡು ಬಂದೆ. ಆದರೆ ಗೇಟಿನ ಬಳಿ ಬಂದಾಗ ಅದು ಮುಚ್ಚಲ್ಪಟ್ಟಿತ್ತು. ನನಗೆ ಒಳಗೆ ಹೋಗುವುದು ಹೇಗೆ ಎಂದೇ ಅರ್ಥವಾಗದೇ ನಿಂತಿದ್ದೆ. ನನ್ನನ್ನು ಗುರುತು ಹಿಡಿಯುವವರು ಯಾರೂ ಅಲ್ಲಿರಲಿಲ್ಲ.

ಒದ್ದಾಡುತ್ತ ನಿಂತಿರುವಾಗಲೇ ನನ್ನ ಪುಣ್ಯಕ್ಕೆ ನೆಹರು ಅಲ್ಲಿಗೆ ಬಂದವರು ನನ್ನನ್ನು ಕಂಡು ಆಶ್ಚರ್ಯಚಕಿತರಾಗಿ – ಅರೆ ಸುಮ್ಮಿ! ನೀನಿಲ್ಲಿ! ಎನ್ನುತ್ತ ಜಾಗ ಮಾಡಿ ನನ್ನನ್ನು ಒಳಗೆ ಕರೆದೊಯ್ದಿದ್ದರು. ಬಾಪು ಮತ್ತು ನೆಹರು ಇಬ್ಬರೂ ನನ್ನನ್ನು ಕರೆಯುತ್ತಿದ್ದಿದ್ದು ಸುಮ್ಮಿ ಎಂದೇ. ಆ ನಂತರ ಅಪ್ಪನೇ ಅವರ ಅಂತ್ಯಕ್ರಿಯೆಗಳನ್ನು ಮಾಡಿದರು. ಎಲ್ಲವೂ ಮುಗಿಯಿತು.

ಆದರೆ ಬಾಪು ಹತ್ಯೆಯಾದರೆಂದು ನಂಬುವುದು ಎಷ್ಟೋ ಕಾಲ ಮನಸ್ಸಿಗೆ ಜೀರ್ಣಿಸಿಕೊಳ್ಳಲೇ ಆಗಿರಲಿಲ್ಲ…. ಒಂದು ದಿನ ಎಲ್ಲಿಂದಲೋ ಅವರು ಮತ್ತೆ
ನನ್ನ ಎದುರು ಬಂದು ನಿಲ್ಲುತ್ತಾರೆ ಅಂತಲೇ ಅನ್ನಿಸುತ್ತಿರುತ್ತಿತ್ತು…’ ಸುಮಿತ್ರಾ ಅವರು 1948ರ ಜನವರಿ 30ರ ಆ ಕರಾಳ ದಿನದ ನೆನಪು ಮಾಡಿಕೊಂಡರು. ಆ ಕ್ಷಣದಲ್ಲೂ ಅವರು ಘಟನೆಯ ಬಗ್ಗೆ ಮಾತ್ರ ಮಾತನಾಡಿದರಷ್ಟೇ ಹೊರತು ಯಾರನ್ನೂ ದೂಷಿಸುವ ಮಾತುಗಳನ್ನಾಡಿರಲಿಲ್ಲ…

ನಾವು ಬಂದು ಹತ್ತಿರಹತ್ತಿರ ಒಂದು ಘಂಟೆಯಾಗಿತ್ತು. ಹೊರಡುವ ಸಮಯವಾಗಿತ್ತು. ನಾನು ಶಾಲೆಯಲ್ಲಿರುವಾಗ ಎಲ್ಲಿಯೋ ಓದಿದ್ದ ಒಂದು ಕೋಟ್ ಬರೆದಿಟ್ಟುಕೊಂಡಿದ್ದೆ-
‘ಜಗದ ಕೊಳೆ ಕಳೆಯಲು
ಧರೆಗಿಳಿದ ಸೋಪು
ನೀನು ಬಾಪು’ ಎಂದು.

ಇಂಥ ಬಾಪುವಿನ ಪ್ರೀತಿಯ ಬಗ್ಗೆ ಅವರ ಮೊಮ್ಮಗಳಿಂದ ಇಷ್ಟನ್ನು ಕೇಳಿದ್ದೆ ನಾನು!
ಬದುಕಿನ ದಿನವೊಂದು ಹೀಗೆ ಸಾರ್ಥಕಗೊಂಡಿತ್ತು!
ಹೊರಡುತ್ತೇವೆ ಎಂದಾಗ ನಮ್ಮನ್ನು ಕಳಿಸಿಕೊಡಲು ಜೊತೆಗೇ ಹೊರಟರು.
ನಾವು ‘ಪರವಾಗಿಲ್ಲ. ನೀವು ಇಷ್ಟು ಸಮಯ ಕೊಟ್ಟಿದ್ದು ಖುಷಿಯಾಯಿತು. ಮತ್ತೇಕೆ ತೊಂದರೆ ತೆಗೆದುಕೊಳ್ಳುವಿರಿ’ ಎಂದೆವು.

ನಮ್ಮನ್ನು ಕರೆದೊಯ್ದು ಭೇಟಿ ಮಾಡಿಸಿದ ಅವರ ಆತ್ಮೀಯರು ‘ಇಲ್ಲ, ನೀವು ಏನೇ ಹೇಳಿದರೂ ಅವರು ಬಂದೇ ಬರುತ್ತಾರೆ ಕಳಿಸಿಕೊಡಲು. ಅದು ಅವರ ಅಭ್ಯಾಸ’ ಎಂದರು! ಕೈ ಬೀಸಿ ಹೊರಡುವಾಗ ‘ಇದೆಲ್ಲದರ ಬಗ್ಗೆ ನಿಮ್ಮಿಂದ ಕೇಳುವಂತಾಗಿದ್ದು ನನ್ನ ಭಾಗ್ಯ’ ಅಂದೆ.
ಅವರು ಥಟ್ಟನೆ ‘ಇಲ್ಲ ಬಾಪು ಅನ್ನುವವರು ಇದ್ದರು ಎನ್ನುವುದೇ ನಮ್ಮ ಭಾಗ್ಯ’ ಎಂದರು!

‍ಲೇಖಕರು avadhi

October 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. T S SHRAVANA KUMARI

    ಸಾರ್ಥಕವಾದ ಲೇಖನ. ನಾನೂ ನಿಮ್ಮ ಜೊತೆಗೆ ಇದ್ದಂತೆ ಅನಿಸಿತು.

    ಪ್ರತಿಕ್ರಿಯೆ
  2. ಚಂದ್ರಪ್ರಭ ಕಠಾರಿ

    ಧನ್ಯವಾದಗಳು. ಲೇಖನ ಓದಿ ನಿಮ್ಮೊಂದಿಗೆ ನಾವು ಸುಮಿತ್ರಾ ಗಾಂಧಿಯವರ ಜೊತೆ ಮಾತನಾಡಿದ ಭಾವ ಉಂಟಾಯಿತು. ತಿನ್ನುವ ಆಹಾರದ ಆಯ್ಕೆಯ ಸ್ವಾತಂತ್ರ್ಯದ ಬಗ್ಗೆ ಬಾಪು ಅವರ ಮಾತು ಈಗ ಹೆಚ್ಚು ಪ್ರಸ್ತುತ.

    ಪ್ರತಿಕ್ರಿಯೆ
  3. manjunath.s

    ತುಂಬಾ ಸೊಗಸಾದ ಲೇಖನ ಓದಿ ಸಂತೋಷವಾಯಿತು. ಅದೂ ಮಹಾತ್ಮನ ಹುಟ್ಟುಹಬ್ಬದ ದಿನ ಓದಿದ್ದು ಸಂತಸವನ್ನು ಇಮ್ಮಡಿಗೊಳಿಸಿತು. ಸರಳತೆಯೇ ಅವರೆಲ್ಲರ ಬಂಡವಾಳವಾಗುವಂತೆ ಈ ಮಹಾತ್ಮ ಪ್ರಭಾವ ಬೀರಿರುವುದು ಇನ್ನೂ ಹೆಚ್ಚು ಆಪ್ತವಾಯಿತು.
    ಅಷ್ಟಲ್ಲದೆ ಅವರು ಮಹಾತ್ಮರಾದರೆ !

    ಪ್ರತಿಕ್ರಿಯೆ
  4. Murali Hathwar

    Thank you for this beautifully compiled interview. I appreciate the curious but respectful tone of the queries and the self imposed no-go boundaries. Both of these make this powerful personal story a pleasurable read.

    Murali Hathwar

    ಪ್ರತಿಕ್ರಿಯೆ
  5. Shyamala Madhav

    ಥ್ಯಾಂಕ್ಯೂ ಭಾರತೀ. ಎಲ್ಲವನ್ನೂ ಅಲ್ಲಿ ನಿಮ್ಮ ಜೊತೆಗಿದ್ದು ಕೇಳಿದಂತನಿಸಿತು. ಸಾರ್ಥಕ ಓದು.

    ಪ್ರತಿಕ್ರಿಯೆ
  6. Shyamala Madhav

    ಭಾರತೀ, ಎಷ್ಟೊಂದು ಸಹಜವಾಗಿ ಕಣ್ಣಿಗೆ ಕಟ್ಟಿದಂತಿದೆ, ನೀವು ಸುಮಿತ್ರಾ ಅವರೊಡನಾಡಿದ ಮಾತುಕತೆ! ತುಂಬಾ ಇಷ್ಟವಾಯ್ತು.‌

    ಪ್ರತಿಕ್ರಿಯೆ
  7. Bharathi b v

    ಥ್ಯಾಂಕ್ಸ್ ಶ್ಯಾಮಲಾ ಮೇಡಂ ❤
    ನಿಮ್ಮ ಪ್ರತಿಕ್ರಿಯೆಗೆ ಖುಷಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: