ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಣಪತಿ ಅಗ್ನಿಹೋತ್ರಿ ಕಂಡಂತೆ SUB-PLOTS ಕಲಾಪ್ರದರ್ಶನ…

ಗಣಪತಿ ಅಗ್ನಿಹೋತ್ರಿ

ಬೆಂಗಳೂರಿನಲ್ಲಿರುವ Notional Gallery of Modern Art (NGMA) ಗ್ಯಾಲರಿಯಲ್ಲಿ ನಡೆಯುತ್ತಿರುವ SUB-PLOTS ಸಮೂಹ ಕಲಾಪ್ರದರ್ಶನ ಒಂದಿಷ್ಟು ವಿಭಿನ್ನ ಆಯಾಮಗಳನ್ನು ತೋರ್ಪಡಿಸುವುವಂತಿದೆ. ಮಾಧ್ಯಮ ಬಳಕೆ ಹೊಸತು ಅನಿಸದೇ ಇದ್ದರೂ ಕಲಾವಿದರ ಅಭಿವ್ಯಕ್ತಿ ನೋಡುಗರನ್ನು ಒಂದು ಕುತೂಹಲದ ಘಟ್ಟಕ್ಕೆ ಕೊಂಡೊಯ್ಯುತ್ತವೆ. ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ಭಾಗದ ಕಲಾವಿದರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ಮಂಜುನಾಥ ಕಾಮತ್ ಅವರ ಇತ್ತೀಚಿನ ಡಿಜಿಟಲ್ ತಂತ್ರಗಾರಿಕೆಯ ಕಲಾಕೃತಿಗಳು ಬಹಳ ಕುತೂಹಲ ಕೆರಳಿಸುತ್ತವೆ.

ನೋಡುಗರನ್ನು ಯಾವುದೋ ಕಾಲ್ಪನಿಕ ಅಥವಾ ವಾಸ್ತವಿಕ ಲೋಕಕ್ಕೆ ಕರೆದೊಯ್ಯುತ್ತವೆ. ಕಲಾಕೃತಿಯೊಳಗಿನ ಸಂವಾದಾತ್ಮಕ ಅಂಶಗಳು (interactive content) ನೋಡುಗನ ಅನುಭವದ ಪುಟಗಳನ್ನು ತೆರೆದುಕೊಳ್ಳುವಂತೆ ಮಾಡುತ್ತವೆ. ಹಾಗೇ ಧ್ರುವಿ ಆಚಾರ್ಯ ಅವರ ಕಲಾಕೃತಿಗಳು ವಿಶೇಷವಾದ ಸ್ಪಂದನಾತ್ಮಕ ಅಂಶಗಳನ್ನು ಹೊಂದಿವೆ. ಸ್ತ್ರೀ ಸಂವೇದನೆ ಪ್ರಧಾನವಾಗಿ ಕಾಣಿಸುವಂತವು. ಮಾಧ್ಯಮ ಬಳಕೆ ಹಾಗೂ ಕಲಾಕೃತಿಗಳ ಮೈವಳಿಕೆ ಕುತೂಹಲ ಮೂಡಿಸುತ್ತವೆ. ಪ್ರಕೃತಿ ಜೊತೆಗಿನ ಅವಿನಾಭಾವ ಸಂಬಂಧವನ್ನು ಹಿತ-ಮಿತವಾಗಿ ತೋರಿಸುವ ಪ್ರಯತ್ನ ಆಪ್ತವೆನಿಸಿತು. ಎನ್ ಎಸ್ ಹರ್ಷ ಅವರ ಕಲಾಕೃತಿ ಒಂದಿಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುವಂತಿವೆ.

ಸಾಮಾನ್ಯವಾಗಿ ನಮ್ಮ ಪೂರ್ವಜರೆಂದು ಭಾವಿಸುವ ಕೋತಿಗಳ (Gray langur monkey) ನೈಜ ಶಿಲ್ಪಗಳನ್ನು ಪ್ರತಿಷ್ಠಾಪಿಸಲಾದ ರೀತಿ ವಿಶೇಷವೆನಿಸುತ್ತದೆ. ಶೀರ್ಷಿಕೆಯಂತೆ ಕಲಾಕೃತಿ ತಮಾಷೆಯ ಭಾವವನ್ನೇ ಮೂಡಿಸುವಂತಿದೆ. ಅರ್ಥಗರ್ಭಿತ ಕಲಾಕೃತಿಯಾಗಿ ನೋಡುಗನನ್ನು ಹಿಡಿದು ನಿಲ್ಲಿಸುತ್ತವೆ. 17 ಕಲಾವಿದರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿದ್ದು, ಒಂದಕ್ಕಿಂತ ಒಂದು ಭಿನ್ನವಾಗಿವೆ. ಕೆ.ಜಿ.ಸುಬ್ರಮಣ್ಯನ್ ಅವರ ಕೆಲ ಕಲಾಕೃತಿಗಳೂ ಇರುವುದು ಕಲಾಪ್ರದರ್ಶನದ ಘನತೆ ಹೆಚ್ಚಿಸಿದೆ. ಸ್ನೇಹಿತರೆ, ಈ ಕಲಾಪ್ರದರ್ಶನ ಮಾರ್ಚ್ 19ರ ತನಕ ಇರಲಿದೆ. ಸಾಧ್ಯವಾದರೆ ಬಿಡುವುಮಾಡಿಕೊಂಡು ಹೋಗಿಬನ್ನಿ.

‍ಲೇಖಕರು avadhi

22 February, 2023

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading