ಕೃಷಿ ಸಂತ ಮಿತ್ತಬಾಗಿಲು ದೇವರಾಯ…

ನರೇಂದ್ರ ರೈ ದೇರ್ಲ

“ಪ್ಲಾಸ್ಟಿಕ್ ತೊಟ್ಟೆ, ಕುಂಡಗಳಿಗೆ ಮಣ್ಣು ತುಂಬಿಸಿ ಒಂದೆರಡು ಬೀಜ ಬಿತ್ತಿ ಭತ್ತ ಬೆಳೆಸಿ ತಳಿ ಉಳಿಸುವುದು ಹೆಚ್ಚು ಶ್ರಮದ ಕೆಲಸವೇ. ಆದರೆ ಗದ್ದೆಯಲ್ಲಿ ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿ ಕಾಪಾಡುವುದು ಬಹಳ ಸೂಕ್ಷ್ಮ ಮತ್ತು ಸವಾಲು. ಇವತ್ತಿನ ಸ್ಥಿತಿಯಲ್ಲಿ ನನಗಂತೂ ಇದು ದುಬಾರಿ ಕೆಲಸ. ಇದೆಲ್ಲ ಇನ್ನೆಷ್ಟು ದಿನವೂ?”- ಹೀಗೆನ್ನುವ ಮಿತ್ತಬಾಗಿಲು ದೇವರಾಯರಿಗೆ ಈಗ 78.

ಕಾಲಿಗೆ ಚಪ್ಪಲಿ ಹಾಕದೆ ಕೈಗೆ ವಾಚ್ ಕಟ್ಟದೆ ಇನ್ನೂ ಮೊಬೈಲ್ ಇಟ್ಟುಕೊಳ್ಳದ ಈ ಕೃಷಿಸಂತ ಕಳೆದ 40- 50 ವರ್ಷದಿಂದ ಕಾಪಾಡಿಕೊಂಡು ಬಂದ ಭತ್ತದ ತಳಿಗಳು ಅಂದಾಜು ಸುಮಾರು 300 ಕ್ಕಿಂತಲೂ ಹೆಚ್ಚು. ನಾಲ್ಕೈದು ಎಕರೆ ಬತ್ತದ ಗದ್ದೆಯನ್ನು ತುಂಡು ತುಂಡಾಗಿ ವಿಭಜಿಸಿ ಬತ್ತ ಬಿತ್ತಿ ಬೋರ್ಡು ನೆಟ್ಟು, ಬೆಳೆದಾಗ ಅವುಗಳನ್ನು ಕೊಯ್ದು ಪ್ರತ್ಯೇಕ ಪ್ರತ್ಯೇಕವಾಗಿ ಬೀಜ ಕಾಪಿಟ್ಟು ಅನ್ನದ ಪರಂಪರೆಯನ್ನು ಜತನದಿಂದ ಕಾಪಾಡಿಕೊಂಡು ಬಂದ ದೇವರಾಯರಲ್ಲಿ ಮಾತನಾಡುವುದೆಂದರೆ ಅದಕ್ಕಿಂತ ದೊಡ್ಡ ನೆಲಸುಖ ಬೇರೆಯಿಲ್ಲ.

20 ವರ್ಷದ ಹಿಂದೆ ಕುಗ್ರಾಮ ದಿಡುಪೆಯ ಪಶ್ಚಿಮಗಟ್ಟದ ಕಗ್ಗಾಡಿನ ಒಳಗಡೆ ಹುದುಗಿದ ಈ ಮಿತ್ತಬಾಗಿಲಿಗೆ ನಾಲ್ಕೈದು ಮೈಲು ದೂರ ನಡೆದು ಹೋಗಿ ದಣಿದು ‘ಉದಯವಾಣಿ’ ಗೊಂದು ಲೇಖನ ಮಾಡಿದಿದ್ದೆ. ಇವತ್ತು ಅದೇ ಮಿತ್ತಬಾಗಿಲಿಗೆ ನನ್ನನ್ನು ಸಾಹಸಪಟ್ಟು ಗಾಡಿಯಲ್ಲಿ ಕರೆದೊಯ್ದವರು ಮತ್ತೊಬ್ಬ ಕ್ರಿಯಾಶೀಲ ಸ್ಥಳೀಯ ತರಕಾರಿ ಕೃಷಿಕ ರಾಮಣ್ಣಗೌಡರು. ಹೌದು 2019ರ ಮಳೆ ಕುಸಿತನಂತರ ಈ ಮಿತ್ತಬಾಗಿಲು ತನ್ನ ಸ್ವರೂಪವನ್ನೇ ಬದಲಾಯಿಸಿಕೊಂಡಿದೆ.

ಗುಡ್ಡಜರಿದು ಸೃಷ್ಟಿಯಾದ ಭೀಕರ ಪ್ರವಾಹದಲ್ಲಿ ಆ ಊರಿನ ಚಹರೆ ಬದಲಾಗಿ ಹೋಗಿದೆ. ಆಗ ಅನೇಕ ಜನ ಊರಿನ ಸಂಪರ್ಕವನ್ನೇ ಕಡಿದುಕೊಂಡು ಗಂಜಿಕೇಂದ್ರದಲ್ಲಿ ಉಣ್ಣುತ್ತಿದ್ದಾಗ ತಾನು ಬೆಳೆಸಿದ ಅಕ್ಕಿಯಿಂದ ಆಗ ಸುಖದ ಅನ್ನ ತಿಂದವರು ದೇವರಾಯರು ಮಾತ್ರ!. ಕೂಡಿಟ್ಟ ಹಣ ಇಲ್ಲದಿದ್ದರೂ ಇವತ್ತಿಗೂ ಬಹು ಬಗೆಯ ಭಕ್ತ ಅಕ್ಕಿ ಅನ್ನದ ಸುಖ ಕಂಡವರು ದೇವರಾಯರು. ಈ ಹಿರಿಯ ವಯಸ್ಸಿನಲ್ಲೂ ಅತ್ಯಂತ ಉಮೇದಿನಿಂದ ಅನ್ನದ ಪಾಠ ಮಾಡುವ ರಾಯರೊಂದಿಗೆ ನಾನಿವತ್ತು ಕಳೆದ ಎರಡು -ಮೂರು ಗಂಟೆ ಅವಧಿ ನನ್ನ ಬದುಕಿನ ಅವಿಸ್ಮರಣೀಯ ಸಮಯ.

ದೇವರಾಯರ ಮನೆಯ ಗೋಡೆಯಲ್ಲಿ ಪ್ರಶಸ್ತಿಗಳದ್ದೇ ಪೊರೆ -ಹೊರೆ. “ಇದೊಂದು ಅಧ್ವಾನ ನೋಡಿ ,ಪ್ರಶಸ್ತಿಗೆ ಎಂದು ಕರೆಯುತ್ತಾರೆ. ಒಂದು ತಗಡುಕೊಟ್ಟು ಕಳಿಸುತ್ತಾರೆ. ಇಡೀ ದಿನವೂ ವೇಸ್ಟು. ಗಾಡಿಯೋ ಬಸ್ಸು ಅದರ ಖರ್ಚು ಬೇರೆ. ನಮ್ಮಂತ ಕೃಷಿಕರಿಗೆ ಅಷ್ಟೊಂದು ಸಮಯ ಎಲ್ಲಿದೆ ಹೇಳಿ? ಈ ಪ್ರಶಸ್ತಿಗಳ ಸಹವಾಸವೇ ಅಲ್ಲ”- ಎಂಬುವುದು ಅವರ ಅನುಭವದ ಮಾತು.

ಐದೂವರೆಗೆ ಎದ್ದು ರಾತ್ರಿಯವರೆಗೆ ಕೃಷಿಯನ್ನು ತಪಸ್ಸು ಎಂದು ಅನುಭವಿಸುವ, ದುಡಿಯುವ ರಾಯರಿಗೆ ಈಗ ವಯಸ್ಸಿಗಿಂತಲೂ ತನ್ನ ಭೂಮಿಯಲ್ಲಿ ಕಾಣೆಯಾದ ನೀರಿನದೇ ಚಿಂತೆ. ಭೂಮಿ ಬಿರಿದು ಗುಡ್ಡೆ ಕುಸಿದು ಪ್ರಳಯ ಸೃಷ್ಟಿಯಾದ ಮೇಲೆ ಬೇಸಿಗೆಯ ಹರಿನೀರು ನೀರು ಎಲ್ಲಿಗೆ ಹೋಯಿತು, ಏನಾಯಿತು? ಎಲ್ಲಿ ಇಂಗಿತು ಎಂಬುದೇ ಅವರ ಚಿಂತೆ.

ರಾಯರೀಗ ಅನ್ನದ ಧ್ಯಾನದಲ್ಲಿ ಅಡಿಕೆ ಕೃಷಿಯ ಕಡೆಗೆ ಕನಿಷ್ಠ ಗಮನ ಕೊಟ್ಟಿದ್ದಾರೆ. “ಆರೇಳು ವರ್ಷಗಳ ಹಿಂದೆ ನಾಲ್ಕೈದು ಖಂಡಿ ಅಡಿಕೆ ಆಗುತ್ತಿತ್ತು. ಈಗ ಅದು ಬರೀ 400 ಕೆಜಿಗೆ ಇಳಿದಿದೆ. ಕೊಯ್ಲು ಮಾಡೋದಿಲ್ಲ. ಬರಿ ಮಂಗಗಳೇ ಇಳಿಸಿ ಕೊಡುತ್ತವೆ. ಅಷ್ಟ್ರಮಟ್ಟಿಗೆ ನನ್ನ ವಾಣಿಜ್ಯ ಕೃಷಿ ಮಿತಗೊಂಡಿದೆ. ತೆಂಗಿನ ಕುಬೆ ನೋಡಿ. ಕಾಯಿಗಳೇ ಇಲ್ಲ. ಮಂಗಗಳ ಪಾಲು. ನವಿಲು ಕಾಡುಹಂದಿ ಕಾಡುಕೋಣ ಹೀಗೆ ನನ್ನ ಕೃಷಿಯಲ್ಲಿ ಪಾಲು ಪಡೆಯುವ ಸಾಲು ಸಾಲು ಕಾಡು ಪ್ರಾಣಿಗಳಿಂದ ನಾನಿನ್ನೂ ಇಲ್ಲಿ ಅಸ್ತಿತ್ವ ಉಳಿಸಿಕೊಂಡಿರುವುದು ದೊಡ್ಡ ಸಾಹಸದ ಕಥನ”.

ಹೌದು, ಮಿತ್ತಬಾಗಿಲಿನ ಅಂಗಳದಲ್ಲಿ ನಿಂತು ಯಾವ ಬದಿಗೆ ನೋಡಿದರೂ ಕಾಡುಬೆಟ್ಟಗಳು ಸೆಟೆದು ಭಯ ಹುಟ್ಟಿಸುತ್ತವೆ. ಅದು ಊರ ಅಂಚಿನ ಮನೆ. ಸುತ್ತದಟ್ಟವಾದ ಕಾಡು. ಮಗ ಪರಮೇಶ್ವರರು ಪಕ್ಕದಲ್ಲಿ ಸಹಾಯಕ್ಕೆ ಇದ್ದಾರೆ. ಹೆಂಡತಿ ಮಗಳ ಜೊತೆಗೆ ಭೂಮಿಯೊಂದಿಗೆ ಏಗುತ್ತ ಈಗಲೂ ನೂರಾರು ಬತ್ತದ ತಳಿಗಳನ್ನು ಜತನದಿಂದ ಕಾಫಿ ಟ್ಟುಕೊಂಡು ಮುಂದಿನ ತಲೆಮಾರಿಗೆ ಅನ್ನದ ಭಾಷೆಯನ್ನು ವಿವರಿಸುವ ಈ ಅಜ್ಜನ ಕಥನಕ್ಕೆ ನಮ್ಮ ಎಳೆಯ ಮನಸುಗಳು ಕಿವಿಯಾಗಬೇಕು. ನಗರದ್ದು ಒಂದು ಬದುಕಾ? ಅದೊಂದು ಅಸ್ತಿತ್ವವಾ? ಅದೊಂದು ಜೀವನವಾ? ಎಂದು ಕಳೆದ ಏಳು ದಶಕಗಳಿಂದ ಕಾಡಿನ ಅಂಚಿನಲ್ಲಿ ಊರು ಕಟ್ಟಿಕೊಂಡು ಬದುಕುವ ಈ ಅಜ್ಜನ ಜೀವನ ವೃತ್ತಾಂತ ಹೊಸ ತಲೆಮಾರಿಗೆ ಪಾಠವಾಗಬೇಕು.

‍ಲೇಖಕರು avadhi

February 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: